II ಹರಿ ಓಂ II
ಮಾಘಮಾಸ ಪುರಾಣ
ಋಷಿಗಳು ಹೇಳುತ್ತಾರೆ-
“ಹೇ ಸೂತರೇ, ತಾವು ಎಲ್ಲ ಲೋಕಗಳ ಹಿತಕರ್ತರು, ಕಾರಣ ತಾವು
ಕಾರ್ತಿಕ ಮಾಸದ ವ್ಯಾಖ್ಯಾನವನ್ನು ಭೋಗ ಮತ್ತು ಮೋಕ್ಷಕ್ಕಾಗಿ ನಮ್ಮೆಲ್ಲರಿಗೆ ವರ್ಣಿಸಿರುವಿರಿ.
“ಹೇ ಲೋಮಹರ್ಷಣರೇ! ಈಗ ಮಾಘಮಾಸ ಮಹಾತ್ಮೆಯನ್ನು ನಮಗಾಗಿ
ವಿವರಿಸಿ, ಇದನ್ನು ಕೇಳಿ ಲೋಕಗಳಲ್ಲಿಯ ಉತ್ಕಟ ಸಂದೇಹಗಳೂ ಸಹ ವಿನಾಶವಾಗಬಹುದು.
“ಹೇ ಮಹಾಭಗ! ಮೊಟ್ಟಮೊದಲು ಈ ಲೋಕದಲ್ಲಿ ಮಾಘ
ಮಹಾತ್ಮೆಯನ್ನು ಯಾರು ಪ್ರಕಾಶಿತಗೊಳಿಸಿದರು? ಎಂಬ ಎಲ್ಲ ಇತಿಹಾಸವನ್ನು
ವಿಸ್ತಾರವಾಗಿ ವರ್ಣಿಸಿರಿ”.
ಸೂತರು ಹೇಳುತ್ತಾರೆ –
“ಧನ್ಯರು ಮುನೀಶ್ವರರೇ! ನೀವೆಲ್ಲ ಧನ್ಯರು! ನೀವೆಲ್ಲ ಶ್ರೀಕೃಷ್ಣ ಭಗವಾನನ
ಭಕ್ತಿಯಲ್ಲಿ ತತ್ಪರರಾಗಿರುವಿರಿ. ಆದ ಕಾರಣ ಆನಂದ ಪೂರ್ವಕವಾಗಿ ಭಕ್ತಿಭಾವದಿಂದ ಮತ್ತೆ ಮತ್ತೆ
ಶ್ರೀಕೃಷ್ಣನ ಕಥೆಯನ್ನು ಕೇಳಲು ಬಯಸುತ್ತಿರುವಿರಿ.
“ಈಗ ನಾವು ಪುಣ್ಯವನ್ನು ವೃದ್ಧಿಸುವ
ಮಾಘಮಾಸ ಮಹಾತ್ಮೆಯನ್ನು ಕೇಳೋಣ, ಈ ಮಹಾತ್ಮೆಯು ಅರುಣೋದಯ ಸಮಯದಲ್ಲಿ ಸ್ನಾನ ಮಾಡುವ ವ್ಯಕ್ತಿಗಳ
ಪಾಪನಾಶಕವಾಗಿದೆ”.
ಹೇ ಭಕ್ತರೇ! ಸದಾಕಾಲ ಸಂಸಾರದಲ್ಲಿ
ಮಂಗಳವನ್ನು ಉಂಟುಮಾಡುವ ಮಹಾದೇವನ ಕಮಲದಂತಿರುವ ಚರಣವನ್ನು ಪಾರ್ವತೀದೇವಿಯು ಸ್ಪರ್ಶಿಸಿ
ನಮ್ರತೆಯಿಂದ ಪ್ರಶ್ನೆ ಮಾಡಿದರು.
ಪಾರ್ವತಿ ಕೇಳುತ್ತಾರೆ –
“ಹೇ! ದೇವಾದಿದೇವ! ಮಹಾದೇವನೇ! ತಾವು ತಮ್ಮ ಭಕ್ತರಿಗೆ ಅಭಯವನ್ನು
ನೀಡುತ್ತೀರಿ – ಅದ ಕಾರಣ ಹೇ ಪ್ರಾಣನಾಥ ವಿಶ್ವೇಶ್ವರನೇ ಪ್ರಸನ್ನನಾಗು ಮತ್ತು ನಾನು
ಕೇಳಬೇಕಾಗಿರುವ ಈ ಪ್ರಶ್ನೆಗೆ ಉತ್ತರ ನೀಡಿರಿ. “ಹೇ! ಸರ್ವವ್ಯಾಪಕನೇ ನಾನು ಈಗಾಗಲೇ ತಮ್ಮಿಂದ
ಅದೆಷ್ಟೋ ಪ್ರಕಾರಗಳ ಧಾರ್ಮಿಕ ಕಥೆಗಳನ್ನು ಕೇಳಿರುವೆ. ಆದರೆ ಈಗ ನನಗೆ ಮಾಘಸ್ನಾನದ ಮಹಿಮೆಯನ್ನು
ಕೇಳುವ ಬಯಕೆಯಾಗಿದೆ. ಅದನ್ನು ತಾವು ಈಗ ವರ್ಣಿಸಿರಿ. ಈ ಮೊದಲು ಪ್ರಥಮವಾಗಿ ಇದನ್ನು ಯಾರು
ಅಚರಿಸಿದರು? ಇದರ ವಿಧಿ ವಿಧಾನಗಳೇನು? ಇದರ ದೇವತೆ ಯಾರು? ಎಂಬ ಎಲ್ಲ ವಿಷಯಗಳನ್ನು ವಿಸ್ತಾರವಾಗಿ
ವರ್ಣಿಸಿರಿ. ತಾವು ಹೇಗೂ ಭಕ್ತರ ಮೇಲೆ ಅನುಕಂಪವನ್ನು ತೋರಿಸುವವರಲ್ಲವೇ! ಇದು ಎಲ್ಲ ಭಕ್ತರಿಗೂ ಮಂಗಳವನ್ನು
ನೀಡುವುದಲ್ಲವೇ?”
ಮಹೇಶ್ವರರು ಮಾಘಮಾಸದ ಮಹಾತ್ಮೆಯನ್ನು ಈ ರೀತಿಯಾಗಿ ವಿವರಿಸುತ್ತಾರೆ.....
*****************************************************************************************
ಅಥ ಪದ್ಮಪುರಾಣೇ ಮಾಘಮಾಸ
ಪ್ರಥಮೋಧ್ಯಾಯಃ
ಒಂದನೇ ದಿನದ ಪಾರಾಯಣ
ಶೌನಕಾದಿ ಮುನಿಗಳಿಂದ ಯಜ್ಞಸಂಕಲ್ಪ
ಸಕಲ ಪುರಾಣ ಪುರುಷರಿಗೆ ನಿಲಯವಾದ ನೈಮಿಶಾರಣ್ಯದಲ್ಲಿ ಒಮ್ಮೆ ಶೌನಕಾದಿ ಮಹರ್ಷಿಗಳು ಲೋಕ ಕಲ್ಯಾಣಾರ್ಥವಾಗಿ ಒಂದು ಮಹತ್ಮರವಾದ ಯಜ್ಞವನ್ನು ಮಾಡಲು ಸಂಕಲ್ಪಿಸಿದರು.
ಆ ಮಹಾಯಜ್ಞ ಸಂಪೂರ್ಣವಾಗಲಿಕ್ಕೆ ಒಂದು ಪುಷ್ಕರ ಕಾಲ ಅಂದರೇ, ಸುದೀರ್ಘ ಹನ್ನೆರಡು ವರ್ಷ
ತೆಗೆದುಕೊಳ್ಳುತ್ತದೆ ಎಷ್ಟೇ ಅಡಚಣೆಗಳು ಎದುರಾದರೂ, ಆ ಯಜ್ಞವನ್ನು ಪೂರ್ಣಗೊಳಿಸಬೇಕೆಂದು ಧೃಢ
ನಿರ್ಧಾರದಿಂದ ಶೌನಕಾದಿ ಮಹರ್ಷಿಗಳು ಯಜ್ಞಸ್ಥಳವನ್ನಾಗಿ ನೈಮಿಶಾರಣ್ಯದಲ್ಲಿ ಪ್ರವಹಿಸುವ ಗೋಮತೀ
ನದೀ ತೀರವನ್ನು ಆಯ್ಕೆ ಮಾಡಿಕೊಂಡು ಒಂದು ಶುಭ ಮುಹೂರ್ತದಲ್ಲಿ ಯಜ್ಞವನ್ನು ಪ್ರಾರಂಭಿಸಿದರು.
ಅಂತಹ ಶ್ರೇಷ್ಠ ಉನ್ನತ ಯಜ್ಞವನ್ನು ಕಣ್ತುಂಬ ನೋಡಿ ಕೃತಾರ್ಥರಾಗಬೇಕೆಂಬ ಅಭಿಲಾಷೆಯಿಂದ ಭರತ ಖಂಡದ
ನಾಲ್ಕು ಮೂಲೆಗಳಿಂದಲೂ ತಪೋದನರು ಆಗಮಿಸಿ ಯಜ್ಞಶಾಲೆಯ ಸಮೀಪದಲ್ಲಿ ನಿವಾಸಗಳನ್ನು
ಏರ್ಪಡಿಸಿಕೊಂಡರು.
ಅಲ್ಲಿಗೆ ಆಗಮಿಸಿದ ಮಹರ್ಷಿಗಳಲ್ಲಿ ಬ್ರಹ್ಮತೇಜಸ್ವಿನಿಂದ ವಿರಾಜಿಸುವ ಶತವೃದ್ಧರು,
ವೇದಗಳನ್ನು ಪರಿಪೂರ್ಣವಾಗಿ ತಿಳಿದುಕೊಂಡಿರುವ ವೇದಮೂರ್ತಿಗಳು ಹಾಗು ಸಕಲಶಾಸ್ತ್ರಗಳನ್ನು ಅಧ್ಯಯನ
ಮಾಡಿರುವ ಮಹರ್ಷಿಪುತ್ರರು ಅದೆಷ್ಟೋ ಮಂದಿ ಇದ್ದರು.
ಆ ರೀತಿಯಾಗಿ ಮಹರ್ಷಿಗಳೆಲ್ಲರೂ ತಮ್ಮತಮ್ಮ ಶಿಷ್ಯ ತಂಡಗಳೊಂದಿಗೆ, ಪರಿವಾರದೊಂದಿಗೆ, ಗುಂಪು
ಗುಂಪಾಗಿ ಬಂದು ಯಜ್ಞಸ್ಥಳವನ್ನು ತಲುಪಿದರು. ಆ ಯಾಗವು ಸಕಲಲೋಕಗಳಿಗೆ ಶುಭಕರವಾದದು.
ಪುಣ್ಯಪ್ರದವಾದದ್ದು. ಸತತ ಹನ್ನೆರಡು ವರ್ಷಗಳ ಕಾಲ ನಡೆಯುವ ಮಹಾಯಾಗವಾದ್ದರಿಂದ ಪುರಾಣವೇತ್ತರಾದ
ಸೂತ ಮಹರ್ಷಿಗಳು ಕೂಡ ತಮ್ಮ ಶಿಷ್ಯಸಮೂಹದೊಂದಿಗೆ ಆಗಮಿಸಿ, ಯಜ್ಞಾದಿ ಕಾರ್ಯಕ್ರಮಗಳಲ್ಲಿ
ಪಾಲ್ಕೊಂಡರು.
ದೂರ ಪ್ರದೇಶಗಳಿಂದ ಬಂದ ಋಷಿಗಳು, ಸೂತ ಮಹರ್ಷಿಗಳ ದರ್ಶನ ಭಾಗ್ಯ ದೊರೆತಿದ್ದಕ್ಕೆ ತುಂಬಾ
ಸಂತೋಷಗೊಂಡರು. ಆ ಮಹರ್ಷಿಗಳ ಅಶೀರ್ವಾದದಿಂದ ಯಾಗವು ನಿರ್ವಿಘ್ನದಿಂದ ನಡೆಯುವುದರ ಬಗ್ಗೆ
ಅವರೆಲ್ಲರಿಗೂ ನಂಬಿಕೆ, ವಿಶ್ವಾಸವಿತ್ತು.
ಸೂತ ಮಹರ್ಷಿಗಳು ಸಕಲಶಾಸ್ತ್ರವನ್ನು ಪರಿಪೂರ್ಣವಾಗಿ ಬಲ್ಲ ಮಹಾದ್ರಷ್ಟಾರರು, ವೇದಶಾಸ್ತ್ರ,
ಪುರಾಣ, ಇತಿಹಾಸಾದಿ ಸಮಸ್ತ ವಿಷಯಗಳನ್ನು ಅವರು ಬಲ್ಲವರಾಗಿದ್ದರು, ಅವೆಲ್ಲವೂ ಅವರಿಗೆ ಕರಗತ.
ಬ್ರಹ್ಮ ತೇಜಸ್ಸಿನಿಂದ ಪ್ರಕಾಶಿಸುವ ಅವರ ಮುಖತೇಜಸ್ಸು ಸದಾಕಾಲ ನಗು ಸೂಸುವ ಮುಖಾರವಿಂದ,
ವರ್ಣಿಸಲಾಗದ ಶ್ರೇಷ್ಠ ಬಂಗಾರದಂತೆ ಹೊಳೆಯುವ ಶರೀರ... ಅಂತಹ ಪುಣ್ಯಪುರುಷರಾದ ಸೂತಮಹರ್ಷಿಗಳ
ಆಗಮನಕ್ಕೆ, ಸ್ವಾಗತ ಹೇಳಿ, ಸಾಷ್ಟಾಂಗ ದಂಡ ಪ್ರಣಾಮಗಳನ್ನು ಮಾಡಿ, ಯಜ್ಞ ನಡೆಯುವ ಆ ಹನ್ನೆರಡು
ಸಂವತ್ಸರಗಳಲ್ಲಿ, ಎಷ್ಟೋ ಪುರಾಣ ಕಥೆಗಳನ್ನು ಕೇಳಿ ಕೃತಾರ್ಥರಾಗಬೇಕೆಂಬ ಅಭಿಲಾಷೆಯಿಂದ ಋಷಿ
ಶ್ರೇಷ್ಠರೆಲ್ಲರೂ ಕಾಯುತ್ತಿದ್ದರು.
ಸೂತ ಮಹರ್ಷಿಗಳು ಶೌನಕಾದಿ ಮಹರ್ಷಿಗಳ ಅಭಿಲಾಷೆಯನ್ನು ಗ್ರಹಿಸಿದರು. ಇಂತಹ
ಪುಣ್ಯಕಾರ್ಯಗಳಲ್ಲಿ, ಪುರಾಣ ಪ್ರವಚನಗಳನ್ನು ಶ್ರವಣ ಮಾಡಿ, ಅಶೇಷ ಮುನಿಶ್ರೇಷ್ಠರನ್ನು ತೃಪ್ತಿ
ಪಡಿಸುವುದು ತಮ್ಮ ವಿದ್ಯುಕ್ತ ಧರ್ಮವೆಂದು ಅರಿತು ಅವರ ಮನೋರಥವನ್ನು ಹರ್ಷದಿಂದ ಅನುಮೋದಿಸಿದರು.
ಒಂದು ಶುಭಮುಹೂರ್ತದಲ್ಲಿ ಆಶ್ರಮವಾಸಿಗಳಾದ ಶೌನಕಾದಿ ಮಹರ್ಷಿಗಳೆಲ್ಲರೂ ಸೂತ ಮಹರ್ಷಿಗಳಿಗೆ
ಆರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸಿ, ಉನ್ನತಾಸನದ ಮೇಲೆ ಆಸೀನರನ್ನಾಗಿ ಮಾಡಿ. “ಮುನಿಶ್ರೇಷ್ಠರೇ! ಋಷಿ ತಿಲಕರೇ! ಈ ಹಿಂದೆ ಎಷ್ಟೋ ಪುರಾಣಕಥೆಗಳನ್ನು
ತಾವು ಹೇಳಿದ್ದೀರಿ. ಕೇಳಿ ನಾವೂ ಆನಂದಪಟ್ಟಿದ್ದೇವೆ. ಅನೇಕ ಇತಿಹಾಸಗಳನ್ನು ಅರಿತು ಅದರಲ್ಲಿನ
ಸಾರಸೌರಭವನ್ನು ಗ್ರಹಿಸಿದ್ದೇವೆ. ಸಮಯ ಬಂದಾಗಲೆಲ್ಲ, ಸಕಲ ಶಾಸ್ತ್ರಗಳಲ್ಲಿನ ನೀತಿಕಥೆಗಳನ್ನು
ಹೇಳುತ್ತಲೇ ಬಂದಿರುವಿರಿ. ಆದರೂ, ನಿಮ್ಮಂತಹ ಸಿದ್ಧಪುರುರುಷರು, ಸದಾ ಹದಿನಾಲ್ಕುಲೋಕ ಸಂಚಾರ
ಮಾಡುವ ನೀವು ಆಗಾಗ್ಗೆ ಎಷ್ಟೋ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಿರುವಿರಿ, ಆದ್ದರಿಂದ,
ಕೇಳತಕ್ಕಂಥ ವಿಷಯಗಳು ಏನಾದರೂ ಇದ್ದರೇ ಹೋಮ ವಿರಾಮ ಕಾಲದಲ್ಲಿ ನಮಗೆ ತಿಳಿಸಿರಿ” ಎಂದು ಪ್ರಾರ್ಥಿಸಿದರು.
ಈ ಪ್ರಕಾರವಾಗಿ ಶೌನಕಾದಿ ಮಹರ್ಷಿಗಳು ಕೋರಿದಾಗ, ತಮ್ಮಿಂದ ಹೊಸ ವಿಚಾರ ತಿಳಿದುಕೊಳ್ಳಬೇಕೆಂಬ
ಅವರ ಕುತೂಹಲವನ್ನು ಕಂಡು ಸೂತ ಮಹರ್ಷಿಗಳು – “ಮಹರ್ಷಿ ಶ್ರೇಷ್ಠರೇ! ನಿಮ್ಮ ಮನೋರಥ ನಮಗೆ ಗ್ರಹಿಕೆಯಾಗಿದೆ.
ನೀವು ಕೇಳಬಹುದಾದ ಕಥೆಯನ್ನು ನನಗೆ ತಿಳಿದ ಮಟ್ಟಿಗೆ ಹೇಳಿ ನಿಮ್ಮನ್ನು ಸಂತೃಪ್ತರನ್ನಾಗಿ
ಮಾಡುತ್ತೇನೆ. ಇಂತಹಾ ಮಹಾಕ್ರತು ಸಮಯದಲ್ಲಿ ಪುಣ್ಯಕಥೆಗಳನ್ನು ಹೇಳುವುದರಿಂದ ನಮಗೂ,
ಕೇಳುವುದರಿಂದ ನಿಮಗೂ ಮೋಕ್ಷಪ್ರಾಪ್ತವಾಗುವುದು” ಎಂದು ನುಡಿದರು.
ಸೂತ ಮಹರ್ಷಿಗಳು ಪುರಾಣ ಪ್ರವಚನಕ್ಕೆ ಒಪ್ಪಿದ್ದನ್ನು ನೋಡಿ ಮುನಿ ಶ್ರೇಷ್ಠಗಳೆಲ್ಲರೂ
ಮಹದಾನಂದವನ್ನೇ ಹೊಂದಿದರು.
‘ಧನ್ಯರಾದ’ ವೆಂದು ಸೂತ ಮಹರ್ಷಿಗಳ ಚರಣಕಮಲಗಳನ್ನು
ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಮತ್ತೆ –
“ಪೂಜ್ಯರೇ! ಪದ್ಮಪುರಾಣದಲ್ಲಿ ಅಡಗಿರುವ ಮಾಘಮಾಸದ
ಮಹಿಮೆಯನ್ನು ಪದೇಪದೇ ಕೇಳಬೇಕೆಂಬ ಕುತೂಹಲ ಉಂಟಾಗುತ್ತಿದೆ. ಆ ಮಾಸದಲ್ಲಿ ಆಚರಿಸಬೇಕಾದ
ವಿಧಿ-ವಿಧಾನಗಳನ್ನು ನಮಗೆ ತಿಳಿಸಬೇಕಾಗಿ” ಕೋರಿದರು.
ಆ ರೀತಿಯಾಗಿ ಶೌನಕಾದಿ ಮಹರ್ಷಿಗಳು, ಇತರ ತಪಸ್ಸಿಗಳು ತಮ್ಮ ಕೋರಿಕೆಯನ್ನು ಮುಂದಿಟ್ಟಾಗ ಸೂತ
ಮಹರ್ಷಿಗಳು ಸಂತಸಗೊಂಡರು.
“ಮಹಾಪ್ರಾಜ್ಞರಾದ ಮಹರ್ಷಿಗಳೇ! ನೀವೆಲ್ಲರೂ ಅತಿ ಮುಖ್ಯವಾದ ವಿಷಯವನ್ನೇ
ಕೇಳುತ್ತಿರುವಿರಿ ಸಂತೋಷ. ಇದೀಗ ಮಾಘಮಾಸ ಕೂಡ ಆರಂಭವಾಗುತ್ತಿದೆ. ಇಂತಹ ಸಮಯದಲ್ಲಿ ಮಾಘಪುರಾಣ
ಕೇಳುವುದರಿಂದ ಉಂಟಾಗುವ ಫಲ ಅಷ್ಟಿಷ್ಟಲ್ಲ. ಅದೂ ಅಲ್ಲದೇ, ಈ ಮಹಾಯಜ್ಞ ನಡೆಯುತ್ತಿರುವ
ಸಮಯದಲ್ಲಿ, ಮಾಘ ಮಾಸದ ಮಹಿಮೆಯನ್ನು ನಿಮಗೆ ವಿವರಿಸುವ ಭಾಗ್ಯ ನನಗೆ ಬಂದಿದ್ದು ನಿಜಕ್ಕೂ ನನ್ನ
ಅದೃಷ್ಟವೇ ಸರಿ. ಸಾವಧಾನ ಮನಸ್ಕರಾಗಿ ಕೇಳಿರಿ” ಎಂದುಸೂ ಮಹರ್ಷಿಗಳು
ಹೀಗೆಂದರು.
“ನಾನು ಲೋಮ ಮಹರ್ಷಿಗಳ ಪುತ್ರ, ನನ್ನ
ತಂದೆ ಮಹಾತಪಸ್ವಿ ಪ್ರಾಜ್ಞ, ನಾನು ಅವರಲ್ಲಿ ಸಕಲ ಶಾಸ್ತ್ರಗಳನ್ನು ಅಭ್ಯಾಸ ಮಾಡಿದೆ.. ವಿಷ್ಣು
ಅಂಶಸಂಭೂತರಾದ ವೇದವ್ಯಾಸ ಮಹರ್ಷಿಗಳ ಪ್ರೀತಿಗೆ ಪಾತ್ರನು, ಅವರ ಕೃಪೆಯಿಂದ ನನಗಾದ ಜ್ಞಾನದಿಂದ
ನಿಮ್ಮಂಥವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳಬಲ್ಲ ಶಕ್ತಿ ಸಾಮರ್ಥ್ಯವುಳ್ಳವನಾದೆ. ನಾನು
ತಿಳಿಸಲಿರುವ ನೀತಿ ಭೋದನೆಗಳು ಸಕಲ ಲೋಕಗಳಿಗೆ ಶುಭವನ್ನೇ ಉಂಟುಮಾಡುವವು. ನೀವು ಕೇಳಿದಂತೆ ಹಿಂದೆ
ದಿಲೀಪ ಮಹಾರಾಜನು ಕೇಳಿದಾಗ ಕುಲಗುರುಗಳಾದ ವಶಿಷ್ಠರು ಆತನಿಗೆ ಮಾಘಮಾಸದ ಮಹಿಮೆಯನ್ನು
ವಿವರಿಸಿದರು. ಆ ವಿಷಯವನ್ನೇ ನಾನು ನಿಮಗೆ ವಿವರಿಸಲಿದ್ದೇನೆ”.
ಇತಿ ಪದ್ಮಪುರಾಣೇ ಮಾಘಮಾಸ ಮಾಹಾತ್ಮೇ
ಪ್ರಥಮೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ
ದ್ವಿತೀಯೋಧ್ಯಾಯಃ
ಎರಡನೇ ದಿನದ ಪಾರಾಯಣ
ದಿಲೀಪ ಮಹಾರಾಜರ ಕಥೆ
ದಿಲೀಪ ಮಹಾರಾಜನು ಅನೇಕ ಯಜ್ಞ-ಯಾಗಾದಿಗಳನ್ನು ಮಾಡಿದ ಪುಣ್ಯಾತ್ಯ. ಆತ ತನ್ನ ರಾಜ್ಯದ
ಪ್ರಜೆಗಳನ್ನು ತನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಅವರಿಗೆ ಯಾವ ಚ್ಯುತಿಯೂ ಬರದಂತೆ
ಕಾಪಾಡುತ್ತಿದ್ದ. ಒಂದು ದಿನ ರಾಜನಿಗೆ ಬೇಟೆಗೆ ಹೋಗುವ ಅಭಿಲಾಷೆ ಉಂಟಾಯಿತು. ಮನಸ್ಸಿಗೆ ಕೋರಿಕೆ
ಬಂದ ಮೇಲೆ ನೆರವೇರಿಸಿಕೊಳ್ಳುವುದು ಯಾರಿಗಾದರೂ ಸಹಜವೇ ತಾನೆ! ಈ ಮಾತಿಗೆ ದಿಲೀಪ ಮಹಾರಾಜ ಹೊರತಲ್ಲ,
ಬೇಟೆಗೆ ಹೋಗಲು ನಿಶ್ಚಯಿಸಿದ. ರಾಜನು ಬೇಟೆಗೆ ಬೇಕಾದ ಸಕಲ ವಸ್ತುಗಳು ಸಿದ್ಧಮಾಡಿಕೊಂಡು ಬೇಟೆ
ಉಡುಪುಗಳನ್ನು ಧರಿಸಿ, ಸೈನ್ಯಸಮೇತರಾಗಿ ಹೊರಟ.
ದಿಲೀಪರಾಜ ಬೇಟೆಗೆ ತೆರಳಿದ ಆ ದಟ್ಟ ಅರಣ್ಯ, ಕ್ರೂರಮೃಗಗಳಿಂ ಕೂಡಿತ್ತು. ಕ್ರೂರ ಪ್ರಾಣಿಗಳು
ಹತ್ತಿರದ ಗ್ರಾಮಗಳ ಮೇಲೆರಗಿ ದನ ಕರುಗಳನ್ನು, ಮನುಷ್ಯರನ್ನು ನಾಶಮಾಡಿ ನಾನಾ ಬೀಭತ್ಸವನ್ನುಂಟು
ಮಾಡುತ್ತಿದ್ದವು.
ದಿಲೀಪ ಮಹಾರಾಜ ಅರಣ್ಯದಲ್ಲಿ ಬೀಡುಬಿಟ್ಟು, ಹೊಂಚು ಹಾಕಿ ಕ್ರೂರ ಮೃಗಗಳನ್ನು
ಕೊಲ್ಲುತ್ತಿದ್ದರು, ಹೀಗೆ ಕೆಲವು ದಿನಗಳವರೆಗೆ ಕಾಡಿನಲ್ಲಿದ್ದ ಅನೇಕ ಕ್ರೂರ ಮೃಗಗಳನ್ನು
ಅಂತ್ಯಗೊಳಿಸಿದರು.
ದಿಲೀಪ ಮಹಾರಾಜ ಒಂದು ದಿನ ಮೃಗವೊಂದರ ಮೇಲೆ ಬಿಟ್ಟು ಬಾಣದಿಂದ ತಪ್ಪಿಸಿಕೊಂಡು ಆ ಮೃಗ
ಓಡಿಹೋಯಿತು. ಹಠ ತೋಟ್ಟ ದಿಲೀಪರಾಜ ಅದರ ಬೆನ್ನಟ್ಟಿದ, ಅವರ ಹಿಂದೆ ರಾಜಪರಿವಾರ ವೇಗದಿಂದ
ಹಿಂಬಾಲಿಸುತ್ತಿತ್ತು, ಆ ಮೃಗ ಒಂದು ದಟ್ಟ ಗೊಂಡಾರಣ್ಯವನ್ನು ಪ್ರವೇಶಿಸಿತು. ಅಷ್ಟುಹೊತ್ತಿಗೆ
ದಿಲೀಪರಾಜರು ತುಂಬಾ ಆಯಾಸಗೊಂಡು ಬಾಯಾರಿಕೆಯಿಂದ ನಾಲಿಗೆ ಒಣಗಿತು. ಇಡೀ ಪರಿವಾರ ನೀರಿಗಾಗಿ
ಅರಸುತ್ತಿತ್ತು. ದಿಲೀಪರಾಜನ ಅದೃಷ್ಟಕ್ಕೆ ಅಲ್ಲಿ ಒಂದ ಸರೋವರ ಕಾಣಿಸಿತು. ದಿಲೀಪರಾಜ ಸಂತಸದಿಂದ
ಸರೋರವನ್ನು ಸಮೀಪಿಸಿದ. ಆ ಸರೋವರ ಸಂಖ್ಯಾತ ನೈದಿಲೆಗಳಿಂದ ತುಂಬಿ ತುಂಬಾ ಮನೋಹರವಾಗಿತ್ತು ರಾಜ
ಮತ್ತು ಪರಿವಾರ ಸಂತೃಪ್ತಿಯಿಂದ ನೀರು ಕುಡಿದರು.
ದಡದ ಮೇಲಿರುವ ವಟವೃಕ್ಷದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ, ಬೇಟೆಯಲ್ಲಿ
ಚೆದುರಿ ಓಡಿದ ಹುಲಿಗಳು, ಸಿಂಹಗಳು, ಕಾಡುಹಂದಿಗಳು ಇತ್ಯಾದಿ ಪ್ರಾಣಿಗಳು. ಆ ಸರೋವರದ ಬಳಿಗೆ
ಬಂದವು. ಅವುಗಳನ್ನು ನೋಡಿದ ದಿಲೀಪರಾಜ ಮತ್ತು ಪರಿವಾರ ಅವುಗಳನ್ನು ಕೊಂದು ಹಾಕಿದರು. ಸಂತಸಗೊಂಡ
ದಿಲೀಪರಾಜ, ಅವುಗಳ ಚರ್ಮ ತೆಗಿಸಿ ತೆಗೆದುಕೊಂಡು ತನ್ನ ನಗರಕ್ಕೆ ಹೊರಟರು.
ಹೀಗೆ ತನ್ನ ರಾಜ್ಯದತ್ತ ಹೊರಟಿದ್ದ ಸಮಯದಲ್ಲಿ, ಮಾರ್ಗ ಮಧ್ಯದಲ್ಲಿ ಒಬ್ಬ ವೃದ್ಧ ಬ್ರಾಹ್ಮಣ
ಎದುರಾದ, ಆ ಬ್ರಾಹ್ಮಣ ಬ್ರಹ್ಮ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ. ಆ ವಿಪ್ರೋತ್ತಮನನ್ನು ನೋಡಿದ
ದಿಲೀಪಮಹಾರಾಜ, ಅಂಜಲೀಬದ್ಧನಾಗಿ, ಪ್ರಣಾಮಗೈದು ನಿಂತುಕೊಂಡನು. ಆ ಬ್ರಾಹ್ಮಣನು ಕ್ಷಣಬಿಟ್ಟು
ರಾಜನನ್ನು ಕಂಡು, ಈತನ ಮುಖ ವರ್ಚಸ್ಸನ್ನು ನೋಡಿದರೇ ಗುಣವಂತನಂತೆ ಕಾಣುತ್ತಿದ್ದಾನೆ.ಈತನಿಗೆ
ಏನಾದರೂ ಉಪಕಾರ ಮಾಡುವುದು ಒಳ್ಳೆಯದು, ಎಂದು ಮನಸ್ಸಿನಲ್ಲಿ ಉದ್ದೇಶಿಸಿ. “ಮಹಾರಾಜ! ಶುಭಕರವಾದ ಈ ಮಾಘಮಾಸದಲ್ಲಿ ಸರೋವರ
ಹತ್ತಿರದಲ್ಲಿದ್ದರೂ ಅದರಲ್ಲಿ ಸ್ನಾನ ಮಾಡದೆಯೇ ಮನೆಗೆ ಹೋಗುತ್ತಿರುವಿಯಲ್ಲ ಯಾಕೆ?
ಮಾಘಮಾಸದ ಮಹಿಮೆ ನಿಮಗೆ ತಿಳಿಯದೇ?” ಎಂದು ಪ್ರಶ್ನಿಸಿದ, ಆ
ಮಾತಿಗೆ ದಿಲೀಪರಾಜ ಅಶ್ಚರ್ಯಚಕಿತನಾಗಿ, ಆ ವೃದ್ಧ ಬ್ರಾಹ್ಮಣನ್ನು ನೋಡಿ ‘ವಿಪ್ರೋತ್ತಮಾ!’ ಯಾಕೆ ಹಾಗೆ ಪ್ರಶ್ನಿಸಿದಿರಿ? ಎಂದು ಕೇಳಿದಾಗ “ಪರಮಪಾವನವಾದ ಮಾಘಮಾಸವಲ್ಲವೇ, ಅದುದರಿಂದ
ಅದನ್ನು ನೆನಪಿಸುತ್ತಿದ್ದೇನೆ” ಎಂದ ಬ್ರಾಹ್ಮಣೋತ್ತಮ.
“ಪೂಜ್ಯರೇ! ನನಗೆ ಜ್ಞಾಪಕವಿಲ್ಲ ಅರಮನೆಯಲ್ಲಿದ್ದರೆ
ಪುರೋಹಿತರು ತಿಳಿಸುತ್ತಿದ್ದರು. ನಾನು ಬೇಟೆಯ ಸಲುವಾಗಿ ಬಂದು ಕೆಲವು ದಿನಗಳು ಅಗಿ ಈ ಕಾಡಿನಲ್ಲೇ
ಇರುವುದರಿಂದ ನನಗೆ ಈ ವಿಷಯ ಜ್ಞಾಪಕವಿಲ್ಲ ಆದ್ದರಿಂದ ತಾವು ಕೃಪೆತೋರಿ ಮಾಘ ಮಾಸದ ಮಹಿಮೆಯನ್ನು
ತಿಳಿಸಬೇಕಾಗಿ ಪ್ರರ್ಥಿಸುತ್ತಿದ್ದೇನೆ” ಎಂದು ದಿಲೀಪಮಹಾರಾಜ
ಬೇಡಿಕೊಂಡನು.
“ರಾಜಾ! ಈ ಸರೋವರದಲ್ಲಿ ಸ್ನಾನಮಾಡಿ,
ಪರಿಶುದ್ಧರಾಗಿ ಒಮ್ಮೆ ನಂತರ ಮಾಘಮಾಸದ ಮಹಿಮೆ ಮತ್ತು ವಿಧಾನವನ್ನು ಕುರಿತು ಹೇಳುತ್ತೇನೆ”, ಎಂದು ಬ್ರಾಹ್ಮಣನು ನಡಿದಾಗ, ರಾಜನು
ಸರೋವರಕ್ಕೆ ಹೋಗಿ ಸ್ನಾನಮಾಡಿ ಬಂದನು.
ದಿಲೀಪರಾಜನನ್ನು ಹರಿಸಿದ ಆ ಬ್ರಾಹ್ಮಣ, “ರಾಜಾ! ಸೂರ್ಯ ವಂಶದ ಕುಲಗುರುಗಳಾದ ವಶಿಷ್ಠ
ಮಹರ್ಷಿಗಳು ಆಗಾಗ್ಗೆ ತಮ್ಮಲ್ಲಿಗೆ ಬರುವರಲ್ಲವೇ ಅವರಿಂದ ಮಾಘಮಾಸದ ಮಹಿಮೆಯನ್ನು ಕುರಿತು
ತಿಳಿದುಕೋ, ಆ ಮಹರ್ಷಿಗಳಿಗೆ ತಿಳಿಯದ್ದು ಯಾವುದೂ ಇಲ್ಲ. ನೀನು ಆ ಕೆಲಸ ಮಾಡು”. ಎಂದು ಬ್ರಾಹ್ಮಣನು ತನ್ನ ದಾರಿಯಲ್ಲಿ
ತಾನು ಹೊರಟುಹೋದ.
ತನ್ನ ಪರಿವಾರದೊಂದಿಗೆ ನಗರ ತಲುಪಿದ ದಿಲೀಪಮಹಾರಾಜ ಪದೇ ಪದೇ ವಿಪ್ರೋತ್ತಮನ ಮಾತುಗಳನ್ನು
ನೆನಪು ಮಾಡಿಕೊಳ್ಳುತ್ತಾ ಹೇಗೋ ಆ ರಾತ್ರಿ ಕಳೆದ.
ಮಾರನೇ ದಿನ ಪ್ರಾತಃಕಾಲದಲ್ಲಿಯೇ ಎದ್ದು, ಕಾಲಕೃತ್ಯಗಳನ್ನು ಪೂರೈಸಿಕೊಂಡು ಒಳ್ಳೇ
ಉಡುಪುಗಳನ್ನು ಸಕಲಾಭರಣಗಳನ್ನು ಧರಿಸಿ, ಮಂತ್ರಿ ಸಾಮಂತರುಗಳ ಸಹಿತ ವಸಿಷ್ಠರ ಆಶ್ರಮಕ್ಕೆ
ಹೊರಟರು. ಆ ಸಮಯದಲ್ಲಿ ವಸಿಷ್ಠ ಮಹರ್ಷಿಗಳು ತಪಸ್ಸನ್ನು ಆಚರಿಸುತ್ತಿದ್ದರು, ಶಿಷ್ಯರು ವೇದಪಠನ
ಮಾಡುತ್ತಿದ್ದರು. ಆ ದೃಶ್ಯವನ್ನು ನೋಡಿದ ದಿಲೀಪರಾಜ, ಅವರ ತಪೋಭಂಗ ಮಾಡಲು ಇಚ್ಛಿಸಲಿಲ್ಲ. ಅದು
ಘೋರ ಅಪರಾಧ ಕೂಡ. ಅದಕ್ಕೆ ಕಾದು ಕುಳಿತ, ರಾಜನಿಗೆ ವಶಿಷ್ಠ ಮಹರ್ಷಿಗಳು ಗುರುಸಮಾನರು,
ಕುಲಗುರುಗಳೂ ಸಹ ಆಗಿದ್ದರಿಂದ ಗರುಭಕ್ತಿ ಅವನಲ್ಲಿ ಹೆಚ್ಚಾಗಿಯೇ ಇತ್ತು. ಸ್ವಲ್ಪ ಹೊತ್ತಿಗೆ,
ವಶಿಷ್ಠರು ಧ್ಯಾನದಿಂದ ಹೊರಬಂದರು. ರಾಜನ ಯೋಗಕ್ಷೇಮ ವಿಚಾರಿಸಿದರು. ಉಚಿತಾಸನದ ಮೇಲೆ ಕೂರಿಸಿ,
ಆತನ ಬರುವಿಕೆಗೆ ಕಾರಣವನ್ನು ಕೇಳಿದರು.
ದಿಲೀಪರಾಜ ವಶಿಷ್ಠರನ್ನು ಉದ್ದೇಶಿಸಿ, “ಪೂಜ್ಯರೇ! ತಮ್ಮಿಂದ ಅನೇಕ ರಾಜಧರ್ಮವನ್ನು,
ಪುರಾಣ-ಇತಿಹಾಸಗಳನ್ನು ಕೇಳಿ ಸಂತಸ ಪಟ್ಟಿದ್ದೇನೆ. ಅದರೆ ಮಾಘಮಾಸ ಮಹಿಮೆಯ ವಿಚಾರವು ನನಗೆ
ತಿಳಿಯದು. ಆ ವಿಷಯವನ್ನು ತಿಳಿಯ ಬಯಸಿ ತಮ್ಮಲ್ಲಿಗೆ ಬಂದಿದ್ದೇನೆ. ದಯವಿಟ್ಟು ಪರಮಪಾವನವು,
ಮಂಗಳಪ್ರದವೂ ಆದ ಮಾಘಮಾಸ ಮಹಿಮೆಯನ್ನು ತಿಳಿಸಿ, ನನ್ನನ್ನು ಕೃತಾರ್ಥನನ್ನಾಗಿ ಮಾಡಿ”. ಎಂದು ಕೇಳಿಕೊಂಡರು.
“ಹೌದು ದಿಲೀಪ ಮಹಾರಾಜ! ನೀನು ಕೋರಿದ ಕೋರಿಕೆಯು ಸಮಜಸವಾದುದ್ದೇ,
ಮಾಘಮಾಸದ ಮಹಿಮೆಯನ್ನು, ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅವಶ್ಯಕತೆ ಬಹಳಷ್ಟಿದೆ”.
“ಮಾಘಮಾಸದ ಮಹಿಮೆಯನ್ನು,
ಶ್ರೇಷ್ಠತೆಯನ್ನು ವರ್ಣಿಸುವುದಕ್ಕೆ ನನ್ನಿಂದಲೂ ಸಾಧ್ಯವಿಲ್ಲ, ಬೇರೆ ದಿನಗಳಲ್ಲಿ ಮಾಡುವ
ಯಜ್ಞಯಾಗಾದಿಗಳು ಕೊಡದಷ್ಟು ಫಲ ಕೇವಲ ಮಾಘಮಾಸದಲ್ಲಿ ನದೀ ಸ್ನಾನ ಮಾಡಿದ ಮಾತ್ರಕ್ಕೆ ಉಂಟಾಗುತ್ತದೆ.
ಆದ್ದರಿಂದ ಈ ಮಾಘಮಾಸದಲ್ಲಿ ಮಾಡುವ ನದೀ ಸ್ನಾನದಿಂದ ಮನುಷ್ಯನು ಅತ್ಯಧಿಕ
ಪುಣ್ಯಾತ್ಯನಾಗುತ್ತಾನೆ. ಅಷ್ಟೇ ಅಲ್ಲ, ಈ ಮಾಘಮಾಸವು ಎಲ್ಲಾ ವಿಧದಲ್ಲೂ ಪುಣ್ಯಪ್ರದವಾದುದು”.
“ಅಷ್ಟೇ ಅಲ್ಲ, ಇತರ ಪುಣ್ಯಕಾರ್ಯಗಳಿಂದ
ತಾತ್ತಾಲಿಕವಾಗಿ ಸ್ವರ್ಗಲೋಕ ಪ್ರಾಪ್ತವಾಗುವು, ಅದರ ಮಾಘಮಸ ವ್ರತ ಮಾಡಿ ಗಳಿಸಿದ ಪುಣ್ಯ ಫಲದಿಂದ
ಶಾಶ್ವತ ಸ್ವರ್ಗಲೋಕ ಪ್ರಾಪ್ತವಾಗುತ್ತದೆ. ಇದಕ್ಕಿಂತ
ಮಹತ್ತರವಾದುದ್ದು ಮತ್ತೊಂದಿಲ್ಲ”. ಎಂದರು.
ಅತಿ ಪದ್ಮಪುರಣೇ ಮಾಘಮಾಸ ಮಾಹಾತ್ಮೇ
ದ್ವಿತೀಯೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ತೃತೀಯೋಧ್ಯಾಯಃ
ಮೂರನೇ ದಿನದ ಪಾರಾಯಣ
ವಿಂದ್ಯಪರ್ವತದ ವೃತ್ತಾಂತ
ವಶಿಷ್ಠರು ಹೇಳುತ್ತಾರೆ –
“ರಾಜ! ನಾನು ಹೇಳಲಿರಿವ ವಿಷಯ ತುಂಬಾ
ಪುರಾತನವಾದದ್ದು ಒಂದು ಸಮಯದಲ್ಲಿ ವಿಂಧ್ಯ-ಹಿಮಾಲಯ ಪರ್ವತಗಳ ಮಧ್ಯೆ ಇರುವ ಪ್ರದೇಶದಲ್ಲಿ ಕ್ಷಾಮ
ತಲೆದೋರಿತು. ಕುಡಿಯುವುದಕ್ಕೆ ನೀರಿಲ್ಲದೇ ಸಾಂಕ್ರಾಮಿಕ ರೋಗಗಳೂ ಹರಡಿ ಮನಷ್ಯರು, ಪಶುಗಳು
ಬಹಳವಾಗಿ ನಾಶಗೊಂಡವು”.
“ಆದ್ದರಿಂದ ಆ ಪ್ರದೇಶದಲ್ಲಿ ಯಜ್ಞಯಾಗಾದಿ
ಕಾರ್ಯಾಗಳಾಗಲಿ, ದೇವತಾರ್ಚನೆಯನ್ನಾಗಲೀ
ಮಾಡಲಾರದೆ ಹೋದರು. ಅರಣ್ಯದಲ್ಲಿ ತಪಸ್ಸು ಮಾಡುವ ಮಹರ್ಷಿಗಳು ಸಹಿತ ಆ ಬರದ ಹಾಹಾಕಾರಕ್ಕೆ
ತುತ್ತಾಗಿ ಅಶ್ರಮಗಳನ್ನು ಬಿಟ್ಟುಹೋಗಬೇಕಾಗಿ ಬಂತು. ರೇವಾ ನದಿ ತೀರಗಳಲ್ಲಿ ಫಲವೃಕ್ಷಗಳು, ಧಾನ್ಯ
ಬೆಳೆಯುವ ಭೂಮಿಗಳು ನೀರಿಲ್ಲದೆ ಬರಡಾಗಿ ಹೋದವು. ಕನಿಷ್ಠ ಕುಡಿಯಲೂ ಸಹಾ ನೀರು ಇರಲಿಲ್ಲ. ಆ
ಸಮಯದಲ್ಲಿ ಭೃಗುಮಹರ್ಷಿಗಳು ಆ ಬರದ ಪ್ರದೇಶದಲ್ಲೇ ವಾಸ ಮಾಡುತ್ತಿದ್ದರು. ಮಹಾತಪಸ್ವಿಗಳಾದ
ಭೃಗಮಹರ್ಷಿಗಳು ಕೂಡಾ ಆ ಕ್ಷಾಮವನ್ನು ಸಹಿಸಿಕೊಳ್ಳಲಾರದೆ ಹೋದರು. ಎಷ್ಟೋ ವರ್ಷಗಳಿಂದ ಆ
ವ್ರದೇಶದಲ್ಲಿ ಇದ್ದುದ್ದರಿಂದ, ಅಲ್ಲಿಂದ ಹೋಗುವುದಕ್ಕೆ ಇಷ್ಠ ಇಲ್ಲದಿದ್ದರೂ ವಿಧಿಯಿಲ್ಲದೆ
ಹಿಮಾಲಯ ಪ್ರದೇಶಕ್ಕೆ ವಲಸೆ ಹೋದರು”.
“ಹಿಮಾಲಯ ಪರ್ವತದ ಅನತಿ ದೂರದಲ್ಲಿ
ಪಶ್ಚಿಮ ಭಾಗದಲ್ಲಿ ಒಂದು ಪರ್ವತವಿದೆ. ಈ ಪರ್ವತವು ಬೆಳ್ಳಗೆ ರಜತದಂತೆ ಹೊಳೆಯುತ್ತಿದೆ. ಆ
ಪರ್ವತದ ಮೇಲ್ಭಾಗವು ಹಾಗೂ ಕೆಳಭಾಗವು ಸ್ಫಟಿಕ
ಶಿಲೆಗಳಂತೆ ನೀಲಮಯವಾಗಿದ್ದು ಶರೀರಕ್ಕೆ ಬೆಳ್ಳಗಿರುವ ವಿಭೂತಿಯನ್ನು ಧರಿಸಿದ ನೀಲಕಂಠನಂತೆ.
ಪ್ರತ್ಯಕ್ಷ ಪರಮೇಶ್ವರನಂತೆ ಪ್ರಕಾಶಿಸುತ್ತಿತ್ತು. ಎಷ್ಟೋ ಮಹರ್ಷಿಗಳು, ಸಿದ್ಧರು, ಪ್ರಾಜ್ಞರು ಆ
ಪರ್ವತಕ್ಕೆ ಆಗಮಿಸಿ ಶ್ರೀಮನ್ನಾರಾಯಣನನ್ನು ಅನನ್ಯ ಭಕ್ತಿ-ಭಾವದಿಂದ ಪ್ರಾರ್ಥಿಸುತ್ತಿದ್ದರು,
ತಪಸ್ಸನ್ನಾಚರಿಸುತ್ತಿದ್ದರು. ಅಷ್ಟೇ ಅಲ್ಲದೆ ಆ ಪರ್ವತದ ಬಳಿಗೆ ಯಕ್ಷರು, ಗಂಧರ್ವಾದಿಗಳು ಕೂಡ
ಆಗಮಿಸಿ ಆ ರಮಣೀಯ ಪ್ರಕೃತಿಯಲ್ಲಿ ವಿಹರಿಸುತ್ತಿದ್ದುದಾಗಿ” ವಸಿಷ್ಠ ಮಹರ್ಷಿಗಳು ದಿಲೀಪನಿಗೆ ವಿವರಿಸಿದರು.
ಆಗ ದಿಲೀಪನು ವಸಿಷ್ಠರನ್ನು ಉದ್ದೇಶಿಸಿ – ಬ್ರಹ್ಮಋಷಿಗಳಾದ ವಸಿಷ್ಠ ಮಹರ್ಷಿಗಳೇ! ಆ ವರ್ವತವನ್ನು ಕುರಿತು ಹೇಳಿದ
ಮಾತುಗಳು ನನ್ನನ್ನು ಅಶ್ಚರ್ಯಚಕಿತನನ್ನಾಗಿ ಮಾಡಿದೆ. ಆ ವಿಚಾರವಾಗಿ ಇನ್ನಷ್ಟು ವಿಷಯಗಳನ್ನು
ತಿಳಿಸಬೇಕಾಗಿ ಪ್ರಾರ್ಥಿಸಿದನು. ಪುನಃ ವಸಿಷ್ಠ ಮಹರ್ಷಿಗಳು ದಿಲೀಪನನ್ನು ಕುರಿತು – “ರಾಜಾ! ನಿನ್ನ ಇಷ್ಟದಂತೆಯೇ ವಿವರವಾಗಿ
ಹೇಳುತ್ತೇನೆ. ಸಾವಧನಚಿತ್ತದಿಂದ ಕೇಳುವಂಥಹವನಾಗು”.
“ಆ ಪರ್ವತವು ತುಂಬಾ ವಿಚಿತ್ರವಾದುದು,
ಚಿತ್ರ – ವಿಚಿತ್ರ ಮರಗಳಿಂದ ಪುರಾತನ ವನ್ಯಮೃಗಗಳಿಂದ, ಅನೇಕನೇಕ ವಿಧಗಳಿಂದ ಕೂಡಿದ ಶುಕಪಕ್ಷಿಗಳಿಂದ ಕೂಡಿರುವ ಆ
ಪರ್ವತವು ಮುವ್ವತ್ತು ಯೋಜನೆಗಳ ಉದ್ದದಿಂದ ಕೂಡಿದ್ದು. ಹತ್ತು ಯೋಜನೆಗಳ ಎತ್ತರದಿಂದ
ಕೂಡಿದ್ದುದಾಗಿ ರಮ್ಯ ಮನೋಹರವಾಗಿ ಕಂಗೊಳಿಸುತ್ತಿತ್ತು. ಅಂತಹ ಪರ್ವತದ ಬಳಿಗೆ ಭೃಗ ಮಹರ್ಷಿಗಳು
ಬಂದರು. ಆ ಸುಂದರ ನಯನಾನಂದಕರ ದೃಶ್ಯವನ್ನು ನೋಡಿ ಹರ್ಷಿತರಾದರು. ತಾವು ತಪಸ್ಸು ಮಾಡುವುದಕ್ಕೆ
ಅನುಕೂಲಕರವಾದ ಶ್ರೇಷ್ಠ ತಾಣವೆಂದು ನಿರ್ಣಯಿಸಿದರು. ಅಲ್ಲೇ ಆಶ್ರಮವನ್ನು ನಿರ್ಮಿಸಿಕೊಂಡು
ತಪಸ್ಸನ್ನಾಚರಿಸುತ್ತಿದ್ದರು. ಹೀಗೆ ಕೆಲವು ಕಾಲ ಕಳೆಯಿತು. ಒಂದು ದಿನ ಒಬ್ಬ ಗಂಧರ್ವನು
ಪತ್ನೀಸಮೇತನಾಗಿ ಆ ಪರ್ವತಕ್ಕೆ ಬಂದು ತಪಸ್ಸು ಮಾಡುತ್ತಿದ್ದ ಭೃಗುಮಹರ್ಷಿಗಳನ್ನು ನೋಡಿ
ನಮಸ್ಕರಿಸಿದನು. ಭೃಗು ಮಹರ್ಷಿಗಳು ಅತನ ಬಗ್ಗೆ ಕೇಳಿದಾಗ ಆ ಗಂಧರ್ವ ಯುವಕನು ಗದ್ಗದಿತ
ಧ್ವನಿಯಲ್ಲಿ ತನ್ನ ವೃತ್ತಾಂತವನ್ನು ಹೀಗೆ ತಿಳಿಸಿದನು…”
ಗಂಧರ್ವ ಯುವಕನ ಚರಿತ್ರೆ
“ಓ ಭೃಗುಮಹರ್ಷಿಗಳೇ! ನನ್ನ ಕಷ್ಟವನ್ನು ಏನೆಂದು ಹೇಳಲಿ, ನಾನು ಪೂರ್ವಜನ್ಮದಲ್ಲಿ ಮಾಡಿದ
ಪುಣ್ಯಫಲದಿಂದ ಸ್ವರ್ಗವು ಪ್ರಾಪ್ತವಾದರೂ ನನಗೆ ಹುಲಿಮುಖ ಏರ್ಪಟ್ಟಿತು. ಯಾವ ಕಾರಣದಿಂದ ನನಗೆ
ಹೀಗಾಯಿತೋ ಗೋತ್ತಿಲ್ಲ. ಈಕೆ ನನ್ನ ಪತ್ನಿ, ಮಹಾಸಾಧ್ವಿ ಆದರೆ ನನ್ನ ವಿಕೃತ ರೂಪಕ್ಕೆ ಕಾರಣವೇನೋ
ಋಷಿಶ್ರೇಷ್ಠರಾದ ತಾವು ವಿವರಿಸಿ ತಿಳಿಸಿ ನನ್ನ ಮನೋವ್ಯಾಕುಲವನ್ನು ಹೋಗಲಾಡಿಸಿ” ಎಂದು ಪರಿಪರಿ ವಿಧಗಳಿಂದ
ಪ್ರಾರ್ಥಿಸಿದನು.
ಆ ಗಂಧರ್ವನ ದುರಂತ ಜೀವನ, ಆತನ ದೀನಾಲಾಪನೆ, ಆತನ ವೃತ್ತಾಂತ ಕೇಳಿ ಭೃಗುಮಹರ್ಷಿಗಳ ಹೃದಯ
ಕಲುಕಿತು. ಗಂಧರ್ವನಿಗೆ ಹೇಗಾದರೂ ತನ್ನ ಶಕ್ತ್ಯಾನುಸಾರ ಸಹಾಯ ಮಾಡಬೇಕೆಂದು ನಿಶ್ಚಯಿಸಿ. “ಎಲೈ ಗಂಧರ್ವಕುಮಾರಾ! ನೀನೊಬ್ಬ ಅದೃಷ್ಟಹೀನನು. ಅದೃಷ್ಟ
ಹೀನತೆಯಿಂದಲೇ ನಿನಗೆ ಈ ಕಷ್ಟದೆತೆ ಉಂಟಾಗಿದೆ. ಪಾಪ, ಬಡತನ, ದುರಾದೃಷ್ಟ ಎಂಬ ಈ ಮೂರೂ
ಪ್ರಾಣವನ್ನು ಕುಗ್ಗಿಸುತ್ತವೆ. ಈ ಮೂರನ್ನು ನಿವಾರಿಸಿಕೊಳ್ಳಬೇಕೆಂದರೆ ಮಾಘಮಾಸ ಸ್ನಾನವೇ
ಪರಮೌಷಧ. ಮನುಷ್ಯರೆಲ್ಲರೂ ಜಾತಿ-ಮತ ತಾರತಮ್ಯಗಳಿಲ್ಲದೆ ಆಚರಿಸತಕ್ಕ ಪರಮಪಾವನ ಮಾರ್ಗ ಇದೊಂದೆ.
ಅದ್ದರಿಂದ ನೀನು ನಿನ್ನ ಪತ್ನಿಸಮೇತನಾಗಿ ಈ ಪರ್ವದಿನದಂದು ನದೀ ಸ್ನಾನವನ್ನು ಆಚರಿಸು. ಅಷ್ಟೇ
ಅಲ್ಲದೆ, ಇದು ಮಾಘಮಾಸವಲ್ಲವೇ! ಪ್ರಶಸ್ತವಾದ ದಿನಗಳು
ಕೂಡಿಬಂದಿದೆ. ನಿನ್ನ ಕ್ಷೋಭೆಗಳೆಲ್ಲ ನಿವಾರಣೆಯಾಗಲಿದೆ. ಈ ದೀನದೊಂದಿಗೆ ನಿನ್ನೆಲ್ಲ ಕಷ್ಟಗಳೂ
ಬಿಟ್ಟು ಹೋಗುತ್ತವೆ. ಮನೋ ರಥಗಳು ಈಡೇರುತ್ತವೆ ಹೆದರಬೇಡ ಎಂದು ಹೇಳಿ ಮಾಘಮಾಸ ಸ್ನಾನಫಲವನ್ನು
ಕುರಿತು ವಿವರಿಸಿದರು.
ಆ ಗಂಧರ್ವನು ಭೃಗಮಹರ್ಷಿಗಳ ಉಪದೇಶವನ್ನು ಶ್ರದ್ಧೆಯಿಂದ ಕೇಳಿದ. ಆತನ ಪತ್ನಿ ಕೂಡ ಮಹರ್ಷಿಗಳ
ಮಾತುಗಳನ್ನಾಲಿಸಿ ಆನಂದಿಸಿದಳು. ಭೃಗು ಮಹರ್ಷಿಗಳು ಹೇಳಿದ ಪ್ರಕಾರವಾಗಿಯೇ ಗಂಧರ್ವನು
ಪತ್ನೀಸಮೇತನಾಗಿ ಮಾಘಸ್ನಾನವನ್ನು ಅಚರಿಸಲು, ಆ ಕ್ಷಣವೆ ಆತನಿಗಿದ್ದ ಹುಲಿಮುಖವು ಹೋಗಿ ಮುಖವು
ತೇಜೋಮಯವಾಗಿ ಪ್ರಕಾಶಿಸಿತು. ಆ ಗಂಧರ್ವ ದಂಪತಿಗಳು ಅಮಿತಾನಂದವನ್ನು ಹೊಂದಿದರು. ನಂತರ
ಅವರಿಬ್ಬರೂ ಭೃಗುಮಹರ್ಷಿ ಬಳಿಗೆ ಬಂದು, ಸಾಷ್ಟಾಂಗ ನಮಸ್ಕಾರ ಮಾಡಿದರು. ಭೃಗು ಮಹರ್ಷಿಗಳು
ಅವರನ್ನು ಆಶೀರ್ವದಿಸಿ ಕಳುಹಿಸಿದರು. ಈ ರೀತಿ ಗಂಧರ್ವ ಯುವಕನ ಕಥೆಯನ್ನು ವಸಿಷ್ಠ ಮಹರ್ಷಿಗಳು
ದಿಲೀಪನಿಗೆ ಹೇಳಿ, “ಕೇಳಿದೆಯಾ ರಾಜಾ! ಗಂಧರ್ವ ಕುಮಾರನ ಚರಿತ್ರೆಯನ್ನು,
ಮಾಘಮಾಸದಲ್ಲಿ ಪುಣ್ಯನದಿಯಲ್ಲಿ ಸ್ನಾನ ಮಾಡಿದರೆ ಎಂತಹಾ ಫಲ ಉಂಟಾಗುತ್ತದೆಯೋ” ಊಹಿಸಿಕೊಳುವಂತೆ ಹೇಳಿದರು.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ತೃತೀಯೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಚತುರ್ಥೋಧ್ಯಾಯಃ
ನಾಲ್ಕನೇ ದಿನದ ಪಾರಾಯಣ
ಕೌಸ್ತುಭನ ವೃತ್ತಾಂತ
ಹುಲಿ ಮುಖದ ಗಂಧರ್ವನ ವೃತ್ತಾಂತವನ್ನು ದಿಲೀಪನಿಗೆ ವಿವರಿಸಿದ ನಂತರ ಮಾಘಮಾಸದ ಮಹಿಮೆಯನ್ನು
ಕುರಿತು ವಸಿಷ್ಠ ಮಹರ್ಷಿಗಳು ಪುನಃ ಹೀಗೆ ಹೇಳುತ್ತಾರೆ-
ಪೂರ್ವ ಕಾಲದಲ್ಲಿ ಕುತ್ಸ ಎಂಬ ಹೆಸರಿನ ಬ್ರಾಹ್ಮಣನೊಬ್ಬನಿದ್ದನು. ಆತ ಕರ್ದಮ ಮಹರ್ಷಿಗಳ
ಮಗಳನ್ನು ವೇದ ವಿಹಿತ ವಿಧಾನದಲ್ಲಿ ವಿವಾಹ ಮಾಡಿಕೊಂಡನು. ಕೆಲವು ಕಾಲಾನಂತರ ಆ ದಂಪತಿಗಳಿಗೆ ಒಬ್ಬ
ಮಗ ಜನಿಸಿದನು. ಮಗನಿಗೆ ಐದು ವರ್ಷವಾಗುತ್ತಿದ್ದಂತೆಯೇ ಉಪನಯನ ಮಾಡಿದರು. ಆ ಬಾಲಕನು ದಿನೇದಿನೇ
ಅಭಿವೃದ್ಧಿ ಹೊಂದುತ್ತ ಗುರು-ಹಿರಿಯರ ಬಗ್ಗೆ ಗೌರವಾದರಗಳನ್ನು, ವಿದ್ಯಾಭ್ಯಾಸದ ಬಗ್ಗೆ
ಶ್ರದ್ಧಾಭಕ್ತಿಗಳನ್ನು ತೋರುತ್ತ, ನೀತಿ ನಿಯಮಗಳನ್ನು ಚಾಚೂ ತಪ್ಪದೇ ಅಚರಿಸಿ, ದೈವಕಾರ್ಯಗಳಲ್ಲಿ
ಭಕ್ತಿಯುಳ್ಳವನಾಗಿ ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಾ ಸಕಲ ಶಾಸ್ತ್ರಗಳನ್ನು ವ್ಯಾಸಂಗ ಮಾಡಿದ
ಪರಿಣಿತನೆನಿಸಿಕೊಂಡನು.
ಈ ರೀತಿಯಾಗಿ ಕೆಲವು ಕಾಲ ಕಳೆಯಿತು. ಆ ಬ್ರಾಹ್ಮಣ ಬಾಲಕನಿಗೆ ಯುಕ್ತವಯಸ್ಸು ಬಂದಿತು.
ಆತನಿಗೆ ದೇಶಸಂಚಾರ ಮಾಡಬೇಕೆಂಬ ಆಭಿಲಾಷೆಯುಂಟಾಗಿ ತೀರ್ಥಯಾತ್ರೆಗೆ ಹೊರಟನು. ಅನೇಕ
ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾ ಋಷಿಮುನಿಗಳನ್ನು ಸೇವಿಸುತ್ತಾ ಮಾಘಮಾಸ ಬರುವ ಹೊತ್ತಿಗೆ
ಕಾವೇರಿ ನದೀತೀರವನ್ನು ಬಂದು ತಲುಪಿದನು.
“ನನ್ನ ಪುಣ್ಯಫಲದಿಂದಾಗಿ ಈ ಮಾಘಮಾಸದಲ್ಲಿ
ನನಗೆ ಕಾವೇರಿ ಸ್ನಾನಯೋಗ ಲಭಿಸಿದೆ. ಇದು ನನ್ನ ಭಾಗ್ಯ ಮಾಘಮಾಸವೆಲ್ಲ ಇಲ್ಲಿಯೇ ಇದ್ದು ಹೆಚ್ಚಿನ
ಫಲವನ್ನು ಗಳಿಸಿಕೊಳ್ಳುವೆ” ಎಂದು ಮನಸ್ಸಿನಲ್ಲಿಯೇ
ನಿಶ್ಚಯಿಸಿಕೊಂಡು ಆಶ್ರಮವೊಂದನ್ನು ನಿರ್ಮಿಸಿಕೊಂಡು ನಿತ್ಯ ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಾ
ಭಕ್ತಿಯಿಂದ ಭಗವಂತನ ಸೇವೆ ಮಾಡುತ್ತಾ ಅಲ್ಲಯೇ ಕಾಲ ಕಳೆಯುತ್ತಿದ್ದನು.
ಆ ವಿಧವಾಗಿ ಕಾವೇರಿ ನದೀತಿರದಲ್ಲಿ ಮೂರು ವರ್ಷಗಳಿದ್ದು ಆತ್ಯಂತ ಹೆಚ್ಚಿನ ಪುಣ್ಯಫಲವನ್ನು
ಗಳಿಸಿದನು. ಅನಂತರ ಎಲ್ಲ ಕೋರಿಕೆಗಳನ್ನು ಸಾಧಿಸುವ ಸಲುವಾಗಿ ಘೋರ ತಪಸ್ಸನ್ನು ಆರಂಭಿಸಿದನು.
ಹಾಗೆಯೇ ಕೆಲವು ಕಾಲ ನಿಷ್ಟೆಯಿಂದ, ನಿಶ್ಚಲ ಮನಸ್ಸಿನಿಂದ ತಪಸ್ಸನ್ನು ಮಾಡಿದಾಗ, ಆತನ ದೀಕ್ಷೆಗೆ
ಶ್ರೀಮನ್ನಾರಾಯಣನು ಸಂತಸನಾಗಿ ಪ್ರತ್ಯಕ್ಷಗೊಂಡನು.
ಆ ಬ್ರಾಹ್ಮಣ ಯುವಕನು ಕಣ್ಣುಬಿಟ್ಟು ನೋಡಿದಾಗ ಶಂಖ, ಚಕ್ರ ಗದಾಧಾರಿಯಾಗಿ ಕೋಟಿಸೂರ್ಯ
ಸಾಕಾರಮೂರ್ತಿಯು ಕಾಣಿಸಿತು. ಅಮಿತಾನಂದದಿಂದ ಸಾಷ್ಟಾಂಗ ನಮಸ್ಕಾರ ಮಾಡಿ ಕೈಚೋಡಿಸಿ ಅನೇಕ
ರೀತಿಯಲ್ಲಿ ಸ್ತೋತ್ರ ಮಾಡಿದನು. ಹಾಗೆ ಅನನ್ಯ ಭಕ್ತಿಪ್ರಪತ್ತಿಗಳಿಂದ ಸ್ತೋತ್ರಮಾಡಿದ ಆ
ಬ್ರಾಹ್ಮಣ ಯುವಕನ ಭಕ್ತಿಭಾವಕ್ಕೆ ಮೆಚ್ಚಿದ ಶ್ರೀಹರಿ ಆತನನ್ನು ಆಶೀರ್ವದಿಸಿ.
“ಓ ಪುತ್ರನೇ! ನೀನು ನಿನ್ನ ಭಕ್ತಿಪ್ರಪತ್ತಿ
ಪ್ರಭಾವದಿಂದಲೇ ನನ್ನನ್ನು ಒಲಿಸಿಕೊಂಡೆ, ಅದು ಹೇಗೆಂದರೆ ನೀನು ತಪ್ಪದೇ ಸತತವಾಗಿ ವಿಧಿವತ್ತಾಗಿ ಮಾಘಮಾಸದಲ್ಲಿ ನಾದಿಸ್ನಾನವನ್ನು
ಮಾಡಿ. ತಪಶ್ಮಾಲಿಗಳು ಕೂಡ ಪಡೆದುಕೋಳ್ಳಲಾಗದ ಮಾಘಮಾಸ ಪುಣ್ಯಫಲವನ್ನು ನಿನ್ನದಾಗಿಸಿಕೊಂಡೆ.
ಆದುದರಿಂದಲೇ ನನಗೆ ನಿನ್ನ ಮೇಲೆ ಗಾಢ ಅನುರಾಗ ಉಂಟಾಯಿತು. ವತ್ಸ! ನಿನಗೇನು ಬೇಕು ಕೋರಿಕೋ. ನಿನ್ನ
ಅಭಿಲಾಷೆಯನ್ನು ನೆರವೇರಿಸುತ್ತೇನೆ” ಎಂದು ಹೇಳಿದ ಶ್ರೀ ಹರಿಯ
ಮಾತುಗಳನ್ನು ಕೇಳಿದ ಬ್ರಾಹ್ಮಣ ಕುಮಾರನು ಪರವಶದಿಂದ ಉದ್ಗರಿಸಿದ.
“ಹೇ ಪ್ರಭೋ! ಜಗದ್ರಕ್ಷಕಾ! ಸರ್ವಾಂತರ್ಯಾಮಿ! ಆಪದ್ಭಾಂಧವಾ! ಆನಾಥರಕ್ಷಕಾ! ಲಕ್ಷ್ಮೀವಲ್ಲಭಾ! ನಾರಾಯಣ! ಅಚ್ಯುತಾ! ನಿನ್ನ ದಿವ್ಯದರ್ಶನದಿಂದ ನನ್ನ ಜನ್ಮ
ಸಾರ್ಥಕವಾಯಿತು. ನಿನ್ನನ್ನು ಪ್ರತ್ಯಕ್ಷ ನೋಡಿದ ಮೇಲೆ ಮನಸ್ಸು ಯಾವುದೇ ವಿಧವಾದ ಸುಖದ
ಆಕಾಂಕ್ಷೆಯನ್ನು ಬಯಸುತ್ತಿಲ್ಲ. ನಿನ್ನ ಮುಂದೆ ಎಲ್ಲವೂ ಸಶ್ವರ... ನೀನೇ ಶಾಶ್ವತ ಸುಖ-ಆಯೋಮಯನು.
ಮುಮುಕ್ಷಗಳು ಯಾವ ಮಹಾಭಾಗ್ಯಕ್ಕಾಗಿ ಜೀವನ ಪರ್ಯಂತ ದೀಕ್ಷೆ ಕೊಡುತ್ತಾರೋ, ಕೃಷಿಗೈಯುತ್ತಾರೋ,
ಅಂತಹ ಮಹದ್ಭಾಗ್ಯವು ನನಗೀಗ ಲಭಿಸಿದೆ. ಇನ್ನು ಬೇರೇನು ಕೇಳಲಿ? ನನಗಿನ್ನು ಯಾವುದರ ಅವಶ್ಯಕತೆಯೂ ಇಲ್ಲ
ನನ್ನದೊಂದು ಕೋರಿಕೆ – ನಿನ್ನ ದಿವ್ಯ ದರ್ಶನ ನನಗೆ ಹೇಗೆ ಕಂಡಿತೋ, ಹಾಗೆಯೇ ನಿರಂತರ ಎಲ್ಲಾ
ವೇಳೆಯಲ್ಲಿ ಈ ಸ್ಥಳದಲ್ಲಿಯೇ ಭಕ್ತರಿಗೆ ದರ್ಶನ ಕೊಡುತ್ತಿರಬೇಕೆನ್ನುವುದು” ಎಂದನು. ಆತನ ಕೋರಿಕೆಯನ್ನು ಮೆಚ್ಚಿದ
ಶ್ರೀ ಹರಿಯು, “ಆಗಲಿ ವತ್ಸ! ನಿನ್ನ ಅಭೀಷ್ಠ ನೆರವೇರಲಿ...” ಎಂದು ಆಂದಿನಿಂದ ಅಲ್ಲಿಯೇ ನೆಲೆ
ನಿಂತನು.
ಕೆಲವು ಕಾಲದ ನಂತರ ಯುವಕ ತಾಯಿ ತಂದೆಯನ್ನು ನೋಡುವುದಕ್ಕಾಗಿ ತನ್ನ ಗ್ರಾಮಕ್ಕೆ ತೆರಳಿದನು.
ಬಹಳ ವರ್ಷಗಳ ನಂತರ ಮಗ ಬಂದುದಕ್ಕೆ ವೃದ್ಧ ಮಾತಾಪಿತರು ಬಹು ಸಂತೋಷಗೊಂಡರು.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೆ
ಚತುರ್ಥೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಪಂಚಮೋಧ್ಯಾಯಃ
ಐದನೇ ದಿನದ ಪಾರಾಯಣ
ಮೃಗಶೃಂಗನ ಚರಿತ್ರೆ
ಆ ಬ್ರಾಹ್ಮಣ ಯುವಕನು ಕುತ್ಸಿನ ಮಗನಾದ್ದರಿಂದ ಕೌತ್ಸ
ಎಂದು ಕರೆಯಲ್ಪಡುತ್ತಿದ್ದರೂ ಆತನನ್ನು ಮೃಗಶೃಂಗನೆಂಬ ಹೆಸರಿನಿಂದಲೂ ಕೂಡ ಕರೆಯುತ್ತಿದ್ದರು. ಅದು
ಹೇಗೆಂದರೆ – ಆತ ಕಾವೇರಿ ನದೀತೀರದಲ್ಲಿ ನಿಷ್ಠೆಯಿಂದ ತಪಸ್ಸನ್ನಾಚರಿಸುತ್ತಿದ್ದಾಗ ಆ
ಪ್ರದೇಶದಲ್ಲಿ ಸಂಚರಿಸುವ ಮೃಗಗಳು, ಪ್ರಾಣಿಗಳು ತಮ್ಮ ಒಂದು ಶೃಂಗ (ಕೋಂಬು)ದಿಂದ ಆತನ ಶರೀರವನ್ನು
ಕೆರೆಯುತ್ತಿದ್ದವು. ಹೀಗಾಗಿ ಆತನಿಗೆ ‘ಮೃಗ ಶೃಂಗ’ ನೆಂಬ ಹೆಸರು ಸಾರ್ಥಕವಾಯಿತು.
ಮದುವೆಯಾಗಲಿರುವ ಕನ್ಯೆಯ ಗುಣಗಳು
ಮೃಗಶೃಂಗನಿಗೆ ಯುಕ್ತವಯಸ್ಸಾದ್ದರಿಂದ ಆತನಿಗೆ ವಿವಾಹ
ಮಾಡಬೇಕೆಂದು ಆತನ ತಾಯಿ ತಂದೆಯರು ನಿಶ್ಚಯಿಸಿ. ಈ ಸಂಗತಿಯನ್ನು ಮೃಗಶೃಂಗನಿಗೆ ಹೇಳಿದರು. ಅವರು
ಮಾತುಗಳನ್ನು ಕೇಳಿದ ಮೃಗಶೃಂಗನು ಹೀಂಗೆಂದನು. ಪೂಜ್ಯರಾದ ಮಾತಾಪಿತೃಗಳೇ! ನನ್ನ ವಿವಾಹ ವಿಷಯದ ಬಗ್ಗೆ ನೀವು
ಮಾಡಬೇಕೆಂದುಕೊಂಡಿರುವ ಕಾಯ್ರವನ್ನು ಹೇಳಿದ್ದಿರಿ. ಆದರೂ ನನ್ನ ನನ್ನ ಅಭಿಪ್ರಾಯವನ್ನು ಕೂಡ
ಕೇಳಿರಿ. ಎಲ್ಲ ಆಶ್ರಮಗಳಿಗಿಂತ ಗೃಹಸ್ಥಾಶ್ರಮವು ತ್ತಮವಾದುದೆಂದು ದೈವಜ್ಞರು ಹೇಳುತ್ತಾರೆ. ಆದರೂ
ಎಲ್ಲರೂ ಈ ಸುಖವನ್ನು ಹೊಂದಲಾರರು. ಅದಕ್ಕೆ ಕಾರಣವೇನೆಂದರೆ ಪ್ರತಿ ಪುರುಷನಿಗೂ ಆತನಿಗೆ
ಅನುಕೂಲವತಿಯಾದ ಪತ್ನಿಯು ದೊರೆತಾಗಲೆ ಗೃಹಸ್ಥಾಶ್ರಮದ ಫಲವು ಸಿದ್ಧಿಸುತ್ತದೆ. ಅದಕ್ಕೆ
ಉದಾಹರಣೆಯಾಗಿ ಸ್ತ್ರೀ ಹೇಗಿರಬೇಕೆಂದರೆ.
ಕಾರ್ಯೇಷು ದಾಸಿ – ಕರಣೇಷು ಮಂತ್ರಿ
ಶಯನೇಷು ರಂಭ – ಕ್ಷಮಯಾ ಧರಿತ್ರೀ
ಎಂದು ಹಿರಿಯರು ವರ್ಣಿಸಿದ್ದಾರೆ. ಅಂದರೆ ಮನೆಕೆಲಸಗಳಲ್ಲಿ
ದಾಸಿಯಂತೆಯೂ, ರಾಜಕಾರ್ಯದಲ್ಲಿ ಪತಿಗೆ ಸಹಕಾರಿಯಾಗಿಯೂ,
ದಾಸಿಯಂತೆಯೂ, ರಾಜಕಾರ್ಯದಲ್ಲಿ ಪತಿಗೆ ಸಹಕಾರಿಯಾಗಿಯೂ ಶಯನ ಮಂದಿರದಲ್ಲಿ ರಂಭೆಯಂತೆಯೂ, ಶಾಂತ
ಸ್ವಭಾವದಲ್ಲಿ ಭೂದೇವಿಯಂತೆಯೂ ಸ್ತ್ರೀ ವರ್ತಿಸಬೇಕು.
ಅಷ್ಟೇ ಅಲ್ಲದೇ
ಚತುರ್ವಿಧಗಳಾದ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಮೋಕ್ಷವೇ ಪ್ರಧಾನವಾದುದು.
ಅಂತಹ ಮೋಕ್ಷವನ್ನು ಸಾದಿಸ ಹೊರಟವರಿಗೆ ಉಳಿದ ಮೂರು ಅನವಶ್ಯಕ, ಥರ್ಮವನ್ನು, ಅರ್ಥವನ್ನು
ಮನುಷ್ಯನು ಯಾವ ರೀತಿಯಲ್ಲಿ ಸಾಧಿಸುತ್ತಾನೋ, ಹಾಗೆಯೇ ಕಾಮವನ್ನು ಸಹಿತ ಸಾಧಿಸಬೇಕು.
ಪ್ರತಿ ಮನುಷ್ಯನು
ವಿವಾಹವಾಗುವುದಕ್ಕೆ ಮೊದಲು ತಾನು ಕೈಹಿಡಿಯಲಿರುವ ಕನ್ಯೆಯ ಗುಣಾವಗುಣಗಳ ಬಗ್ಗೆ
ಅರಿತುಕೊಳ್ಳಬೇಕು. ಜೀವನದ ಸುಖದಲ್ಲಿ ಪತ್ನಿ ಮುಖ್ಯವಾದವಳಾದ್ದರಿಂದ ಗುಣವಂತಾದ ಪತ್ನಿಯನ್ನು
ಪಡೆಯುವುದಕ್ಕಿಂತ ಮತ್ತೊಂದು ಭಾಗ್ಯವಿಲ್ಲ.
ಗುಣವತಿಯಾದ
ಪತ್ನಿಯೊಂದಿಗೆ ಸಂಸಾರ ಮಾಡಿದರೆ ಆಸಂಸಾರವು ಸ್ವರ್ಗಸಮಾನವಾಗಿರುವುದೇ ಅಲ್ಲದೇ, ಅಂತಹ ಮನುಷ್ಯನು
ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಸುಲಭದಿಂದ ಸಾಧಿಸಬಲ್ಲ.
ಪತ್ನಿಯ
ಗಯ್ಯಾಳಿಯಾಗಿದ್ದು, ವಿನಯ-ವಿಧೇಯತೆಗಳು ಇಲ್ಲದಿದ್ದರೆ ಆಕೆಯ ಪತಿಯು ನರಕಸದೃಶವಾದ ಕಷ್ಟಗಳನ್ನು
ಅನುಭವಿಸುವುದೇ ಅಲ್ಲದೇ ಪುನಃನರಕಕೂಪಕ್ಕೆ ಹೋಗುತ್ತಾನೆ. ಆದ್ದರಿಂದ ವಿವಾಹ ಮಾಡಿಕೊಳ್ಳುವುದಕ್ಕೆ
ಮುಂಚೆ ಸ್ತ್ರೀಯನ್ನು ಅನೇಕ ವಿಧಗಳಿಂದ ಪರಿಶೀಲಿಸಿ ವಿವಾಹವಾಗಬೇಕು.
ಅದು ಹೇಗೆಂದರೆ,
ಕನ್ಯೆಯ ಆರೋಗ್ಯವಂತಳಾಗಿರಬೇಕು. ಯಾವ ವಿಧವಾದ ರೋಗಗ್ರಸ್ಥಳೂ ಆಗಿರಬಾರದು. ಎಷ್ಟೇ ಅಂದಗಾಯಿಯಾದರೂ
ಒಳ್ಳೆಯ ಮನೆತನದ ಕನ್ಯೆಯಾಗಿರಬೇಕು. ಬಂಧು ಮರ್ಯಾದೆಗಳನ್ನು ಬಲ್ಲವಳಾಗಿ ವಿದ್ಯಾವಂತಳಾಗಿ,
ದೇವಬ್ರಾಹ್ಮಣರನ್ನು ಪೂಜಿಸುಳಾಗಿ, ಅತ್ತೆ-ಮಾವನ ಮಾತನ್ನು ಮೀರದಂತೆ ಇರಬೇಕು.
ಈ ನೀತಿಗಳೆಲ್ಲವೂ
ಮೊದಲು ಅಗಸ್ತ್ಯ ಮಹರ್ಷಿಗಳು ಹೇಳಿದ್ದಾರೆ. ಅದ್ದರಿಂದ ಅಂತಹ ಗುಣವಯಾದ ಕನ್ಯೆಯನ್ನು ಆರಿಸಕೊಳ್ಳಬೇಕು.
ಆದರೂ ಅದು ಹೇಗೆ ಸಾಧ್ಯವಾಗುತದೆ ಎಂದು ಮೃಗಶೃಂಗನುತಾಯಿತಂದೆಯರಲ್ಲಿ ತನ್ನ ಮನಸ್ಸಿನಲ್ಲಿನ
ಸಂಶಯವನ್ನು ವ್ಯಕ್ತಪಡಿಸಿದನು.
ಮಗನ ಮಾತಿಗೆ
ಸಂತಸಗೊಂಡ ತಂದೆ ಹೀಗೆ ಹೇಳುತ್ತಾನೆ – “ಕುಮಾರಾ! ನಿನ್ನ ಮಾತುಗಳು
ನನಗೆ ಬಹಳಷ್ಟು ಸಂತೋಷವ್ನು ಉಂಟುಮಾಡಿದೆ. ವಸ್ಸಿನಲ್ಲಿ ಕಿಯಿಯವಾದರೂ ಒಳ್ಳೆಯ ನೀತಿ ವಾಕ್ಯಗಳನ್ನೇ
ಕಲಿತಿರುವೆ. ನಿನ್ನ ಅಭೀಷ್ಟವನ್ನು ಪರಮದಯಾಳು, ಭಕ್ತವತ್ಸಲನಾದ ಆ ಶ್ರೀಮನ್ನಾರಾಯಣನೇ
ಈಡೇರಿಸುತ್ತಾನೆ. ಭಗವಂತನ ಮೇಲೆ ಈ ಹೊಣೆಗಾರಿಕೆಯನ್ನು ಹಾಕಿಬಿಡು” ಎಂದನು.
ಇತಿ ಪದ್ಮಪುರಾಣೇ
ಮಾಘಮಾಸ ಮಹಾತ್ಮೇ
ಪಂಚಮೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಷಷ್ಠಮೋಧ್ಯಾಯಃ
ಆರನೇ ದಿನದ ಪಾರಾಯಣ
ಸುಶೀಲಳ ಚರಿತ್ರೆ
ಭೋಗಪುರವೆಂಬ ನಗರದಲ್ಲಿ ಸದಾಚಾರವಂತನೂ, ದೈವಭಕ್ತನೂ ಆದ
ಬ್ರಾಹ್ಮಣೋತ್ತಮನೊಬ್ಬ ವಾಸಿಸುತ್ತಿದ್ದನು. ಆತನಿಗೆ ಸುಂದರವಾದ ಮಗಳಿದ್ದಳು. ಆಕೆಯ ಹೆಸರು
ಸುಶೀಲೆ. ಆಕೆಯೂ ಶೀಲವಂತಳೂ, ಬುದ್ಧಿವಂತಳೂ ಆಗಿದ್ದಳು. ಚಿಕ್ಕಂದಿನಿಂದಲೂ ದೈವಭಕ್ತಳಾದ ಈಕೆ
ಯಾವುದಾದರೂ ವ್ರತವನ್ನು ಆಚರಿಸಬೇಕೆಂಬ ಉದ್ದೇಶದಿಂದ ಈಕೆ ಫಠಣೆಯತ್ತ ಸದಾ ತನ್ನ ಜ್ಞಾನವನ್ನು
ನೆಲೆಸಿ, ಕಾಲ ಕಳೆಯುತ್ತಿದ್ದಳು. ಯೌವನದಲ್ಲಿ ಹುಣ್ಣಿಮೆಯ ಚಂದ್ರನನ್ನು ಹೋಲುವ
ಮುಖವುಳ್ಳವಳಾಗಿದ್ದು, ಈಕೆಯ ಒಳ್ಳೆಯತನ ಮತ್ತು ಗುಣದ ಬಗ್ಗೆ ತಿಳಿದ ಮೃಗಶೃಂಗನು ಆಕೆಯನ್ನು
ವಿವಾಹವಾಗಬೇಕೆಂದುಕೊಂಡನು.
ಒಂದು ದಿನ ಸುಶೀಲ ತನ್ನ ಇಬ್ಬರು ಗೆಳತಿಯರೊಂದಿಗೆ
ಕಾವೇರಿ ನದಿ ತೀರದಲ್ಲಿ ಸ್ನಾನ ಮಾಡಲು ಹೊರಟಳು. ಆ ಸಮಯಕ್ಕೆ ಪಕ್ಕದ ಕಾಡಿನಿಂದ ಆನೆಯೊಂದು
ಘೀಳಿಡುತ್ತಾ ಸ್ನಾನ ಮಾಡು ಉದ್ದೇಶದಿಂದ ಬರುತ್ತಿದ್ದ ಆ ಮೂರು ಕನ್ಯೆಯರ ಬಳಿ ಧಾವಿಸಿ ಬಂದಿತು.
ಈ ಅನೀರೀಕ್ಷಿತ ದಾಳಿಯಿಂದ ಹೆದರಿದ ಕನ್ಯೆಯರು
ಓಡತೊಗಿದರು, ಹಾದಿ ಮಧ್ಯದಲ್ಲಿ ಹಳ್ಳವೊಂದರಲ್ಲಿ ಬಿದ್ದು ಆ ಮೂವರು ಪ್ರಾಣ ಬಿಟ್ಟರು. ಈ ವಿಷಯ
ಅವರ ತಂದೆ-ತಾಯಿಗೆ ತಿಳಿದು, ನೋಡಲು ಬರುವ ಹೊತ್ತಿಗೆ
ಮೂವರೂ ಮೃತರಾಗಿದ್ದರು. ಈ ಸುದ್ದಿ ಮೃಗಶೃಂಗನಿಗೂ ತಿಳಿಯಿತು. ಆತನು ಆ ಮೂವರ
ಮೃತದೇಹವನ್ನು ನೋಡಲು ಬಂದನು. ಎಲ್ಲಿಲ್ಲದ ದುಃಖ ಉಂಟಾಯಿತು.
ಅವರನ್ನು ಹೇಗಾದರೂ ಬದುಕಿಸಬೇಕೆಂಬ ಸಂಕಲ್ಪಮಾಡಿ, ಅವರ
ತಂದೆ ತಾಯಿಗಳಿಗೆ ಆ ಕನ್ಯೆಯ ಮೃತದೇಹವನ್ನು ಕಾಯುತ್ತಿರುವಂತೆ ಹೇಳಿ, ತಾನು ಸಮೀಪದಲ್ಲಿರುವ
ಕಾವೇರಿ ನದಿಯಲ್ಲಿ ಮುಳುಗಿ ಧ್ಯಾನಿಸತೆಡಗಿದನು. ಅಷ್ಟರಲ್ಲಿ ಇಡೀ ಅರಣ್ಯವೆಲ್ಲ ಘೀಳಿಡುತ್ತಿದ್ದ
ಅನೆ ನೀರಿನಲ್ಲಿ ಇಳಿದು ತಪಸ್ಸು ಮಾಡುತ್ತಿದ್ದ ಮೃಗಶೃಂಗನ ಬಳಿಗೆ ಬಂದಿತ್ತು. ಅದರೂ ಮೃಗಶೃಂಗನು
ವಿಚಲಿತನಾಗದೆ. ನಿರ್ಭಯವಾಗಿ ಧ್ಯಾನ ಮಾಡುತ್ತಲೇ ಇದ್ದನು. ಆನೆ ಕೂಡ ಮೃಗಶೃಂಗನನ್ನು ಎದುರಿಗೆ
ನಿಂತು ತದೇಕಚಿತ್ತದಿಂದ ನೋಡತೊಡಗಿತು. ಹಾಗೇ ಸ್ವಲ್ಪ ಹೊತ್ತು ನಿಂತು, ಥಟ್ಟನೆ ತನ್ನ
ಸೊಂಡಿಲಿನಿಂದ ಮೃಗಶೃಂಗನನ್ನು ತನ್ನ ಬೆನ್ನ ಮೇಲೆ ಹತ್ತಿಸಿಕೊಂಡಿತು, ಆದರೂ ಬ್ರಾಹಣ ಕುಮಾರನು
ಹೆದರಲಿಲ್ಲ.
ಇವೆಲ್ಲವೂ ಶುಭಸೂಚಕವೆಂದು ಭಾವಿಸಿ ನೀರನ್ನು ಮಂತ್ರಿಸಿ
ಆನೆಯ ಮೇಲೆ ಪ್ರೋಕ್ಷಿಸಿದನು. ಎರಡೂ ಕೈಗಳಿಂದ ಅದರ ಮೈ ತಡವಿದ ತಕ್ಷಣವೇ ಆ ಆನೆ ತನ್ನ ರೂಪವನ್ನು
ಬಿಟ್ಟು, ಒಂದು ದೇವತಾ ರೂಪದಲ್ಲಿ ನಿಂತಿತು. ತನಗೆ ಶಾಪವಿಮೋಚನೆ ಉಂಟುಮಾಡಿದ ಮೃಗಶೃಂಗನಿಗೆ
ನಮಸ್ಕರಿಸಿ, ದೇವಲೋಕಕ್ಕೆ ತೆರಳಿತು.
“ಕೇಳಿದೆಯಾ ದಿಲೀಪ ಮಹಾರಾಜ, ಮಾಘ ಮಾಸದ ನದೀ ಸ್ನಾನದ
ಫಲದಿಂದಲೇ ಆನೆಗೆ ಶಾಪ ವಿಮೋಚನೆಯಾಗಿ ಹೇಗೆ ನಿಜರೂಪ ಬಂದಿತೋ.....! ಉಳಿದ ಮೃತ್ತಾಂತವನ್ನು ಶ್ರದ್ಧೆಯಿಂದ ಕೇಳು”.
ಇತಿ ಪದ್ಮಪುರಾಣೇ
ಮಾಘಮಾಸ ಮಹಾತ್ಮೇ
ಷಷ್ಠಮೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಸಪ್ತಮೋಧ್ಯಾಯಃ
ಏಳನೇ ದಿನದ ಪಾರಾಯಣ
ಮೃಗಶೃಂಗನು ಯಮನನ್ನು ಕುರಿತು ತಪವನ್ನಾಚರಿಸಿದ್ದು
ಆ ರೀತಿಯಾಗಿ ಆನೆಗೆ ಶಾಪವಿಮೋಚನೆಯಾದ ನಂತರ, ಮತ್ತೆ
ಮೃಗಶೃಂಗನು ಕಾವೇರಿ ನದಿಯಲ್ಲಿ ಇಳಿದು, ಅಕಾಲಮೃತ್ಯು ದವಡೆಗೆ ಸಿಲುಕಿದ ಆ ಮೂವರ ಕನ್ಯೆಯರನ್ನು
ಬದುಕಿಸುವ ಸಲುವಾಗಿ ಯಮಧರ್ಮರಾಜನನ್ನು ಕುರಿತು ತಪಸ್ಸು ಮಾಡಲಾರಂಭಿಸಿದನು.
ನಿರ್ಮಲ ಮನಸ್ಸಿನಿಂದ, ತದೇಕ ದೀಕ್ಷೆಯಿಂದ ಯಮನನ್ನು
ಧ್ಯಾನಿಸುತ್ತಿದ್ದಾಗ – ಮೃಗಶೃಂಗನ ಕಠೋರ ದೀಕ್ಷೆಗೆ ಯಮನು ಸಂತಸಗೊಂಡು ಪ್ರತ್ಯಕ್ಷವಾಗಿ – “ಮೃಗಶೃಂಗ! ನಿನ್ನ ಕಠೋರ ತಪಸ್ಸನ್ನೂ ಪರೋಪಕಾರ ಪರಾಯಣತೆಯನ್ನೂ ನಾನು
ಮೆಚ್ಚಿದ್ದೇನೆ. ಇಂಥ ಕಠೋರ ದೀಕ್ಷೆಯಿಂದ ನನ್ನನ್ನು ಕುರಿತು ಯಾರೂ ತಪಸ್ಸು ಮಾಡಿರಲಾರರು, ನಿನಗೇನು ಬೇಕೋ ಕೋರಿಕೋ.... ನಿನ್ನ ಅಭೀಷ್ಟವನ್ನು
ನೆರವೇರಿಸುವೆ” ಎಂದು ಹೇಳಿದನು.
ಆ ಮಾತನ್ನು ಕೇಳಿದ ಮೃಗಶೃಂಗನು ಕಣ್ತೆರೆದು ನೋಡಿದಾಗ
ಯಮನು ತನ್ನ ಎದುರು ನಿಂತಿದ್ದನು. ತಕ್ಷಣ ಕೈಗಳನ್ನು ಜೋಡಿಸಿ, “ಮಹಾನುಭಾವ! ಎಂತಹ ತಪಸ್ಸಿಗಳಿಗೂ ದರ್ಶನ ಕೊಡದ ನೀನು.... ನನ್ನಂಥ
ಸಾಮನ್ಯನಿಗೆ ಸಾಕ್ಷಾತ್ಕಾರಗೊಂಡಿದ್ದು ನನ್ನ ಪೂರ್ವಜನ್ಮದ ಸುಕೃತವಲ್ಲದೆ ಬೇರೇನು ಅಲ್ಲ. ಅಕಾಲ
ಮರಣಕ್ಕೆ ತುತ್ತಾದ ಆ ಮೂವರು ಕನ್ಯೆಯರಿಗೆ ಪುನರ್ಜೀವ ನೀಡಿ ನನ್ನನ್ನು ಕೃತಾರ್ಥನನ್ನಾಗಿ ಮಾಡು” ಎಂದು ಪ್ರಾರ್ಥಿಸಿದನು.
ಮೃಗಶೃಂಗನ ಪರೋಪಕಾರ ಬುದ್ಧಿಗೆ, ದಯಾರ್ದ್ರ ಹೃದಯಕ್ಕೆ
ಯಮನು ಸಂತಸಗೊಂಡು, ಆತನ ಅಪೇಕ್ಷೆಯಂತೆ ಆ ಕನ್ಯೆಯರಿಗೂ ಪ್ರಾಣದಾನ ಮಾಡಲು ಸಂಕಲ್ಪಿಸಿ, “ಮೃಗಶೃಂಗ! ನಿನ್ನ ಭಕ್ತಿಗೆ ಮೆಚ್ಚಿದೆನು. ನಿನ್ನ ಪರೋಪಕಾರ
ಬುದ್ಧಿ ನನ್ನನ್ನು ಮೂಕನನ್ನಾಗಿಸಿದೆ. ನಿನಗೆ ಜಯವಾಗಲಿ” ಎಂದು ಹರಸಿದಾಗ –
“ಮಹಾಪುರುಷ! ನಿನ್ನನ್ನು ಒಲಿಸಿ ಸಂತೋಷಪಡಿಸುವುದು ಸಾಮಾನ್ಯವಾದುದಲ್ಲ.
ನಿನ್ನನ್ನು ಸ್ತುತಿಸಿದವರಿಗೆ, ನಿನ್ನ ಸ್ತೋತ್ರವನ್ನು ಕೇಳಿದವರಿಗೆ ದುರ್ಗುಣಗಳು
ಉಂಟಾಗುವುದಿಲ್ಲ. ಅಂಥವರಿಗೆ ಎಲ್ಲ ವಿಧದಲ್ಲೂ ಶುಭವಾಗುವಂತೆ ಅನುಗ್ರಹಿಸು“ ಎಂದು ಪ್ರಾರ್ಥಿಸಿದಾಗ “ಹಾಗೇ ಆಗಲಿ, ನಿನ್ನ ಕೋರಿಕೆ ಸಫಲವಾಗಲಿ” ಎಂದು ಹರಸಿ, ಯಮಥರ್ಮರಾಯನು ಅಂತರ್ಧಾನನಾದನು.
ಇತಿ ಪದ್ಮಪುರಾಣೇ
ಮಾಘಮಾಸ ಮಹಾತ್ಮೇ
ಸಪ್ತಮೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ನವಮೋಧ್ಯಾಯಃ
ಒಂಬತ್ತನೇ ದಿನದ ಪಾರಾಯಣ
ಪುಷ್ಕರನ ವೃತ್ತಾಂತ
ಈ ರೀತಿಯಾಗಿ ಆ ಮೂವರು ಯುವತಿಯರು ಪುನರ್ಜೀವಿಗಳಾದ
ವೃತ್ತಾಂತವನ್ನು ದಿಲೀಪನಿಗೆ ವಿವರಿಸಿದಾಗ. ದಿಲೀಪ ಮಹಾರಾಜನು ಶದ್ಧೆಯಿಂದ ಕೇಳಿದ ನಂತರ ತನಗೆ
ಉಂಟಾದ ಸಂಶಯವನ್ನು ಗುರುಗಳಾದ ವಸಿಷ್ಠರಲ್ಲಿ ಹೀಗೆ ಕೇಳಿದನು.
“ಪ್ಯೂಜ್ಯರಾದ ಮಹರ್ಷಿಗಳೇ ಈ ಭೂಲೋಕದಿಂದ ಯಮಲೋಕಕ್ಕೆ ಇರುವ ದೂರವೆಷ್ಟು? ಸತ್ತುಹೋದ ಈ ಮೂವರ ಪ್ರಾಣ ಎಷ್ಟು ಕಾಲದಲ್ಲಿ ಅಲ್ಲಿಗೆ
ಹೋಗಿ ಬಂದಿತ್ತು?” ಎಂದು ಪ್ರಶ್ನಿಸಿದನು.
ಅದಕ್ಕೆ ವಸಿಷ್ಠರು “ಮಹಾರಾಜ! ಎಲ್ಲರೂ
ತಿಳಿದುಕೊಳ್ಳಬೇಕಾದ ಪ್ರಶ್ನೆಯನ್ನೇ ಕೇಳಿರುವೆ. ಭಕ್ತಿಮಾರ್ಗಕ್ಕೆ ಮಿಗಿಲಾದುದು ಮತ್ತೊಂದಿಲ್ಲ
ಮರಣಿಸಿದ ಮೂವರು ಕನ್ಯೆಯರು ಪುಣ್ಯವತಿಯರು. ಅವರು ಒಮ್ಮೆ ಮಾಘಮಾಸದಲ್ಲಿ
ಸ್ನಾನವನ್ನಾಚರಿಸಿದ್ದರಿಂದ ಉಂಟಾದ ಪುಣ್ಯಫಲದಿಂದ ಮತ್ತೆ ಪುನರ್ಜೀವಿಗಳಾದರು. ಇದಕ್ಕೊಂದು
ಉದಾಹರಣೆಯನ್ನು ವಿರಿಸುತ್ತೇನೆ”.
“ಒಂದು ಕಾಲದಲ್ಲಿ ಪುಷ್ಕರನೆಂಬ
ಬ್ರಾಹ್ಮಣನು ಈ ಯುವತಿಯರಂತೆ ಯಮಕಿಂಕರರಿರುವ ಪರಲೋಕಕ್ಕೆ ಹೋಗಿ ಮತ್ತೆ ಭೂಲೋಕಕ್ಕೆ ಮರಳಿದನು. ಆ
ವೃತ್ತಾಂತ ಬಹಳ ವಿಚಿತ್ರವಾದುದು”.
“ಪುಷ್ಕರನು ಜ್ಞಾನವಂತ. ಸಕಲ
ಜೀವರಾಶಿಗಳಲ್ಲೂ ದಯೆ ಉಳ್ಳವನು. ಪರೋಪಕಾರ ಮಾಡುವುದನ್ನೇ ತನ್ನ ಮುಖ್ಯ ಗುರಿಯನ್ನಾಗಿ
ಉಳ್ಳವನಾಗಿದ್ದನು. ಆತನು ಪ್ರತಿ ಮಾಘಮಾಸದಲ್ಲೂ ನಿಷ್ಠೆಯಿಂದ ಸ್ನಾನ, ಜಪತಪಾದಿ ಪುಣ್ಯಕಾರ್ಯಗಳನ್ನು ಬಿಡದೆ ಮಾಡುವ ದೀಕ್ಷಾಬದ್ಧವಾಗಿದ್ದನು. ಸದಾ ಭಗವಂತನ
ನಾಮಸಂಕೀರ್ತನೆಗಳನ್ನು ಹಾಡುತ್ತಾ. ಕೊಂಡಾಡುತ್ತಾ ಜಿವನ ಸಾಗಿಸುತ್ತಿದ್ದ ಪರಮಭಕ್ತನು”.
ಒಂದು ದಿನ ಯಮನು ಪುಷ್ಕರ
ಪ್ರಾಣವನ್ನು ತೆಗೆದುಕೊಂಡು ಬರುವಂತೆ ತನ್ನ ಕಿಂಕರರಿಗೆ ಆಜ್ಞಾಪಿಸಿದನು. ಯಮಕಿಂಕರರು ಕೂಡಲೇ
ಹೋಗಿ ಈ ವಿಪ್ರೋತ್ತಮನ ಪ್ರಾಣವನ್ನು ಕೊಂಡೊಯ್ದು ಯಮನ ಮುಂದೆ ನಿಲ್ಲಿಸಿದರು. ಆ ಸಮಯದಲ್ಲಿ ಯಮನು
ಚಿತ್ರಗುಪ್ತನೊಂದಿಗೆ ದೀರ್ಘಾಲೋಚನೆಯಲ್ಲಿ ನಿಮಗ್ನನಾಗಿದ್ದನು.
ಯಮಕಿಂಕರು ಕರೆತಂದ
ಪುಷ್ಕರನ ಕಡೆ ನೋಡಿದಾಗ - ಪುಷ್ಕರನು ಬ್ರಹ್ಮತೇಜಸ್ಸಿನಿಂದ ಕಂಗೊಳಿಸುತ್ತಿದ್ದನು.
ಯಮಧರ್ಮರಾಜನಿಗೆ ಎಂಥದ್ದೋ ಭಯ ಆವರಿಸಿ ದಿಗ್ಭ್ರಮೆಯುಂಟಾಯಿತು. ತಕ್ಷಣ ಪುಷ್ಕರನನ್ನು ತನ್ನ
ಪಕ್ಕದಲ್ಲಿದ್ದ ಆಸನದ ಮೇಲೆ ಕುಳಿತುಕೊಳ್ಳುವಂತೆ ಆಹ್ವಾನಿಸಿದನು.
ಯಮನು ತನ್ನ ಕಿಂಕರರ
ಕಡೆ ಕೋಪದಿಂದ ನೋಡಿ. “ಎಲೈ ಕಿಂಕರರೇ ಪುಷ್ಕರನೆಂಬ
ಹೆಸರುಳ್ಳವನು ಆ ಗ್ರಾಮದಲ್ಲಿಯೇ ಮತ್ತೊಬ್ಬನಿರುವನು. ಅವನನ್ನು ಕರೆದುಕೊಂಡು ಬರದೆ, ಈ ಉತ್ತಮನನ್ನು ಕರೆ ತಂದಿರುವಿರಲ್ಲ.....” ಎಂದು ಗದರಿಸಿದಾಗ, ಆ ಕಿಂಕರರು ಗಡಗಡನೆ ನಡುಗಿಹೋದರು.
ಯಮಧರ್ಮರಾಯನು
ಪುಷ್ಕರನ ಕಡೆಗೆ ನೋಡಿ ನಮಸ್ಕರಿಸಿ, ಆತನಲ್ಲಿ ಕ್ಷಮೆಯಾಚಿಸಿ, ಭೂಲೋಕಕ್ಕೆ ತೆರಳುವಂತೆ ಹೇಳಿದನು.
ನಡೆದ ತಪ್ಪಿಗೆ
ಪುಷ್ಕರನು ಕೂಡ ಆತಂಕವನ್ನು ವ್ಯಕ್ತಪಡಿಸಿ. “ಸರಿ! ಹೇಗೂ ಬಂದಿದ್ದೇನೆ, ಈ ಯಮಲೋಕವನ್ನೂ ಕೂಡ ನೋಡಿ ಹೋಗುತ್ತೇನೆ” ಎಂದಾಗ ಯಮನು ತನ್ನ
ಲೋಕವನ್ನು ನೋಡುವುದಕ್ಕೆ ಪುಷ್ಕರನಿಗೆ ಅನುಮತಿಸಿದನು.
ಪುಷ್ಕರನು ಒಂದೊಂದು
ದಿಕ್ಕಿಗೂ ಹೋಗಿ ಜೀವಿಗಳು ಅವರವರು ಪಡೆದುಕೊಂಡ ಪಾಪಗಳಿಗೆ ಅನುಗುಣವಾಗಿ ಅನೇಕ ವಿಧದ
ಶಿಕ್ಷೆಗಳನ್ನು ಅನುಭ ಪಾಪಿಗಳು
ಅನುಭವಿಸುತ್ತಿದ್ದ ನರಕಯಾತನೆಯನ್ನು ನೋಡಿಬಂದ ಪುಷ್ಕರನು ಮತ್ತಷ್ಟು ಪ್ರಜ್ಞಾನದಿಂದ
ದೇವರನ್ನು ಸ್ಮರಿಸತೊಡಗಿದನು. ಈ ಪ್ರಕಾರವಾಗಿ
ಕೆಲವು ಮಂದಿ ಪುಣ್ಯಾತ್ಮರು ಯಮಲೋಕ ದರ್ಶನವನ್ನು ಮಾಡಿ ಬಂದವರೂ ಇದ್ದಾರೆ. ಇದು ಸತ್ಯ. ವಿಸುತ್ತಿರುವುದನ್ನು
ಕಣ್ಣಾರೆ ಕಂಡನು.
ಆತ ಹೆದರಿ
ಕಂಗಾಲಾಗಿ, ತನ್ನ ಭಯ ಹೋಗಲಾಡಿಸುವುದಕ್ಕಾಗಿ ಜೋರಾಗಿ ಹರಿನಾಮ
ಸ್ಮರಣೆ ಮಾಡತೊಡಗಿದನು. ಹರಿನಾಮ ಸ್ಮರಣೆಯನ್ನು ಕೇಳಿದ ಪಾಪಜೀವಿಗಳು ತಮ್ಮ ತಮ್ಮ ಪಾಪಗಳನ್ನು
ಕಳೆದುಕೊಳ್ಳತೊಡಗಿದರು. ಅವರ ಶಿಕ್ಷೆಗಳನ್ನು ತಡೆಹಿಡಿಯಲಾಯಿತು. ಯಮಲೋಕವನ್ನೆಲ್ಲ ನೋಡಿದ ನಂತರ
ಪುಷ್ಕರನು ಮತ್ತೆ ಭೂಲೋಕಕ್ಕೆ ಬಂದನು.
ತ್ರೇತಾಯುಗದಲ್ಲಿ
ಶ್ರೀರಾಮನು ಅಯೋಧ್ಯೆಯನ್ನು ಅಳುತ್ತಿದ್ದ ಸಂಧರ್ಭದಲ್ಲಿ ಒಬ್ಬ ಬ್ರಾಹ್ಮಣ ಪುತ್ರನು ಮರಣಿಸಿದನು.
ಆ ವಿಷಯ ಕೇಳಿದ ರಾಮಚಂದ್ರನು ಯಮನನ್ನು ಪ್ರಾರ್ಥಿಸಿದಾಗ, ಯಮನು ಆ ಬಾಲಕನನ್ನು
ಮತ್ತೆ ಬದುಕಿಸಿದನು. ಹಾಗೆಯೇ ದ್ವಾಪರಯುಗದಲ್ಲಿ ಶ್ರೀಕೃಷ್ಣನು ತನಗೆ ವಿದ್ಯೆ ಕಲಿಸಿದ ಗುರುಗಳ
ಮಗನು ಮರಣಿಸಿದಾಗ ತನ್ನ ಮಹಿಮೆಯಿಂದ ಮತ್ತೆ ಬದುಕಿಸಿದನು.
ಇತಿ ಪದ್ಮಪುರಾಣೇ
ಮಾಘಮಾಸ ಮಹಾತ್ಮೇ
ನವಮೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ದಶಮೋಧ್ಯಾಯಃ
ಹತ್ತನೇ ದಿನದ ಪಾರಾಯಣ
ಮೃಗಶೃಂಗನ ವಿವಾಹ
ವಸಿಷ್ಠ ಮಹರ್ಷಿಗಳು ಹೀಗೆ ಹೇಳತೊಡಗಿದರು –
“ದಿಲೀಪ ಮಹಾರಾಜ! ಹೂವು ಅರಳಿದ ಕೂಡಲೆ ಪರಿಮಳ ಬೀರುತ್ತದೆ. ಅದಕ್ಕೆ ಯಾರೂ ಕಲಿಸಬೇಕಾದ
ಅಗತ್ಯವಿಲ್ಲ. ಅದು ಪ್ರಕೃತಿ ಸಹಜವಾದುದು”. ಅದೇ ರೀತಿ ಮೃಗಶೃಂಗನು ತನ್ನ ಬಾಲ್ಯ ದೆಶೆಯಿಂದಲೂ ಹರಿನಾಮ
ಸ್ಮರಣೆಯಲ್ಲಿ ಅಸಕ್ತಿ ಉಳ್ಳವನಾಗಿದ್ದನು. ಆತನಿಗೆ ಐದು ವರ್ಷ ತುಂಬಿದ ನಂತರ
ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸಿದರು. ಅಲ್ಲಿ ಸಕಲ ಶಾಸ್ತ್ರಗಳನ್ನು ಅತಿ
ಶ್ರದ್ಧೆಯಿಂದ ಕಲಿಯುತ್ತ ಗುರುಗಳ ಮನ್ನಣೆಯನ್ನು ಪಡೆದು, ಪಾಂಡಿತ್ಯಗಳಿಸಿದನು. ವಿದ್ಯಾಭ್ಯಾಸ
ಪೂರ್ತಿಯಾದ ನಂತರ ತಂದೆ-ತಾಯಿಗಳ ಅಪ್ಪಣೆ ಪಡೆದು ದೇಶಸಂಚಾರದಲ್ಲಿ ಅನೇಕ ಪುಣ್ಯ ತೀರ್ಥಗಳಲ್ಲಿ
ಸ್ನಾನ ಮಾಡಿ ಮಾಘಮಾಸ ಫಲವನ್ನು ಗಳಿಸಿಕೊಂಡಿದ್ದನು.ಮಗನು ದೇಶಸಂಚಾರ ಪೂರೈಸಿ ಹಿಂದಿರುಗಿ ಬಂದ
ನಂತರ ಆತನ ಮಾತಾಪಿತೃಗಳು ತಕ್ಕ ಕನ್ಯೆಯನ್ನು ನೋಡಿ ವಿವಾಹ ಮಾಡಲು ನಿಶ್ಚಯಿಸಿದರು. ಮೃಗಶೃಂಗನು
ಮೆಚ್ಚಿದ ಸುಶೀಲಳನ್ನು ಮಾತ್ರ ಮದುವೆಯಾಗುವುದಾಗಿ ತನ್ನ ಮನೋನಿಶ್ಚಯವನ್ನು ತಂದೆ-ತಾಯಿಗಳಿಗೆ
ತಿಳಿಸಿದಾಗ ಮಗನ ಇಷ್ಟ ಪ್ರಕಾರವೇ ಒಂದು ಒಳ್ಳೆಯ ಶುಭಮುಹೂರ್ತದಲ್ಲಿ ಮೃಗಶೃಂಗನಿಗೂ, ಸುಶೀಲಳಿಗೂ
ಅತಿ ವಿಜೃಂಭಣೆಯಿಂದ ವಿವಾಹಕಾರ್ಯವನ್ನು ನೆರೆವೇರಿಸಿದರು.
ಸುಶೀಲೆಯ ಉಳಿದಿಬ್ಬರು ಗೆಳತಿಯರು ಮೃಗಶೃಂಗನನ್ನು ನೋಡಿ “ಆರ್ಯ! ನಮ್ಮ ಗೆಳತಿಯಾದ ಸುಶೀಲೆಯನ್ನು ವಿವಾಹವಾದಂತೆಯೇ
ನಮ್ಮಿಬ್ಬರನ್ನೂ ಈ ಶುಭಲಗ್ನದಲ್ಲಿಯೇ ವಿವಾಹವಾಗು” ಎಂದು ಕೇಳಿಕೊಂಡರು.
ಮೃಗಶೃಂಗನು ಆಶ್ಚರ್ಯಚಕಿತನಾಗಿ, “ಅದು ಹೇಗೆ ಸಾಧ್ಯ?” ಎಂಬ ಪ್ರಶ್ನಿಸಿದಾಗ – “ಸುಶೀಲಳನ್ನು ವಿವಾಹವಾದಂತೆಯೇ ನಮ್ಮನ್ನೂ ಸಹ ಮದುವೆಯಾಗು” ಎಂದು ಆ ಯುವತಿಯರು ಹಠ ಹಿಡಿದರು, ಅದರೆ, ಪುರುಷನಿಗೆ
ಏಕಪತ್ನಿತ್ವ ಧರ್ಮವೇ ಹೊರತು, ಮೂವರಲ್ಲವಲ್ಲ ಎಂದು ಮೃಗಶೃಂಗನು ಸಂದೇಹಿಸಿದಾಗ –
“ಇಬ್ಬರು-ಮೂವರು ಕನ್ಯೆಯರನ್ನು ವಿವಾಹವಾಗುವುದಕ್ಕೆ ಶಾಸ್ತ್ರಗಳ
ಸಮ್ಮತಿ ಇದೆಯಲ್ಲ. ದಶರಥನಿಗೆ ಮೂವರು ಪತ್ನಿಯರು. ಶ್ರೀಕೃಷ್ಣನಿಗೆ ಅಷ್ಟಪತ್ನಿಯರು.
ಪರಮೇಶ್ವರನಿಗೆ ಗಂಗೆ-ಗೌರಿ ಇಬ್ಬರಿಲ್ಲವೇ... ಅವರಿಗಿಲ್ಲದ ಅಭ್ಯಂತರ ನಿನಗಿದೆಯೇ?” ಎಂದು ಪ್ರಶ್ನಿಸಿ ಯುವತಿಯರು ಆತನನ್ನು ಸುತ್ತುವರೆದರು.
ಮೃಗಶೃಂಗನು ಯಾವುದೇ ಉತ್ತರವನ್ನು ಹೇಳಲಾರದೆ ಹೋದನು.
ಮದವೆಯ ಸಂಭ್ರಮವನ್ನು ನೋಡಲು ಬಂದ ಅನೇಕ ಮುನಿಗಳೂ ಕೂಡ –
“ಮೃಗಶೃಂಗ! ಅಕ್ಷೇಪಿಸಬೇಡ, ಈ ಇಬ್ಬರು ಯುವತಿಯರ ಅಭೀಷ್ಟವನ್ನು ನೆರವೇರಿಸು.
ಅವರು ದುಃಖಪಟ್ಟಲ್ಲಿ ನಿನಗೆ ಶುಭವಾಗುವುದಿಲ್ಲ. ಅದರೂ ಇಂಥ ಘಟನೆಗಳು ಅನೇಕ ನಡೆದಿವೆ” ಎಂದು ಹೇಳಿದರು.
ಹಿರಿಯರೆಲ್ಲರ ಅಭಿಮತದಂತೆ ಮೃಗಶೃಂಗನು ಆ ಇಬ್ಬರು
ಯುವತಿಯರನ್ನು ವಿವಾಹ ಮಾಡಿಕೊಂಡನು.
ಈ ರೀತಿಯಾಗಿ ಮೃಗಶೃಂಗನ ಮೃತ್ತಾಂತವನ್ನು ದಿಲೀಪನಿಗೆ
ವಿವರಿಸಿದಾಗ ಆತ ಮಹರ್ಷಿ! ವಿವಾಹದಲ್ಲಿ ಎಷ್ಟು ವಿಧ? ಅವುಗಳ ವಿವರವನ್ನು ತಿಳಿಸಿ ನನ್ನ ಸಂದೇಹವನ್ನು
ನಿವಾರಿಸಿ” ಎಂದು ಪ್ರಾರ್ಥಿಸಿದನು.
ವಸಿಷ್ಠ ಮಹರ್ಷಿಗಳು – “ರಾಜಾ! ವಿವಾಹದ ವಿಧಗಳೂ, ಅವುಗಳ ವಿವರಗಳನ್ನು ಹೇಳುತ್ತೇನೆ. ಸಾಮಧಾನಚಿತ್ತನಾಗಿ
ಕೇಳು.
1. ಬ್ರಾಹ್ಮಣ ಕನ್ನೆಯನ್ನು ಸುಂದರವಾಗಿ ಅಲಂಕರಿಸಿ, ವರನನ್ನು ಕರೆಸಿ ಮಾಡುವ ವಿವಾಹಕ್ಕೆ “ಬ್ರಾಹ್ಮ್ಯಾ” ಎಂದು ಹೆಸರು.
2. ಯಜ್ಞಾಚರಣೆಯ ಸಲುವಾಗಿ ವಧುವನ್ನು ಕೊಟ್ಟು ಮಾಡುವ ವಿವಾಹಕ್ಕೆ “ದೈವ” ವೆಂದು ಹೆಸರು.
3. ವರನಿಂದ ಎರಡು ಗೋವುಗಳನ್ನು ತೆಗೆದುಕೊಂಡು, ಆತನಿಗೆ ಮದುಮಗಳನ್ನು ಕೊಟ್ಟ ವಿವಾಹಕ್ಕೆ “ಅರ್ಷ” ವೆನ್ನುತ್ತಾರೆ.
4. ಧರ್ಮಕ್ಕಾಗಿ ದಂಪತಿಗಳು ಬದ್ಧರಾಗಿದ್ದು, ಆಶಿರ್ವಾದ ಮಾಡಿದ ವಿವಾಹಕ್ಕೆ “ಪ್ರಾಜಾಪತ್ಯ” ವೆಂದು ಹೆಸರು.
5. ಧನ ಪಡೆದು ವಧುವನ್ನು ಕೊಟ್ಟು ವಿವಾಹ ಮಾಡುವುದಕ್ಕೆ “ಅಸುರ” ವೆಂದು ಹೆಸರು.
6. ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ, ಅವರಾಗಿಯೇ ಮಾಡಿಕೊಳ್ಳುವ ವಿವಾಹಕ್ಕೆ “ಗಾಂಧರ್ವ” ವೆಂದು ಹೆಸರು.
7. ವರನು ಕನ್ಯೆಯನ್ನು ಬಲಾತ್ಕಾರದಿಂದ ವಿವಾಹವಾಗುವುದನ್ನು “ರಾಕ್ಷಸ” ವೆನ್ನುತ್ತಾರೆ.
8. ವಂಚಿಸಿ, ಅಂದರೆ ಮರಳುಮಾತುಗಳಿಂದ ನಂಬಿಸಿ ವಿವಾಹ ಮಾಡಿಕೊಳ್ಳುವುದಕ್ಕೆ “ಪೈಶಾಚಿಕ” ವೆಂದು ಹೆಸರು.
ಈ ಎಂಟು ವಿಧಗಳು
ವಿವಾಹ ಸಂಬಂಧವಾದ ಹೆಸರುಗಳು, ಇನ್ನು ಗೃಹಸ್ಥಾಶ್ರಮ ಧರ್ಮವನ್ನು ವಿವರಿಸುತ್ತೇನೆ ಕೇಳು.
ಗೃಹಸ್ಥಾಶ್ರಮ
ಧರ್ಮಗಳು
ಉತ್ತಮ ವರ್ತನೆಯಿಂದ ಇಹ-ಪರವನ್ನು
ಸಾಧಿಸಬೇಕೆಂದುಕೊಂಡಲ್ಲಿ ಗೃಹಸ್ಥಾಶ್ರಮವೊಂದೇ ಸರಿಯಾದ ಮರ್ಗ.
ಪತಿಪತ್ನಿಯರು ಪರಸ್ಪರ ಅನುಕೂಲಕರವಾಗಿ
ನಡೆದುಕೊಳ್ಳುವುದು ಇರುವುದರಲ್ಲೇ ಸಂತೃಪ್ತಿ ಹೊಂದುವುದು, ದೈವಭಕ್ತಿಯಿಂದ ವರ್ತಿಸುವುದು, ಅತಿಥಿ
ಸತ್ಕಾರವನ್ನು ಮಾಡುವುದು.... ಇತ್ಯಾದಿ ಸದ್ಗುಣಗಳಿಂದ ನಡೆದುಕೊಳ್ಳುವವರೇ
ಸದ್ಗೃಹಸ್ಥರೆನ್ನಲ್ಪಡುತ್ತಾರೆ.
ಪ್ರಾತಃಕಾಲದಲ್ಲಿ ನಿದ್ರೆಯಿಂದೆದ್ದಾಗ ಭಗವಂತನನ್ನು
ಸ್ಮರಿಸುತ್ತ ಏಳುವದು ಕಾಲಕೃತ್ಯಗಳನ್ನು ಪೂರೈಸಿಕೊಂಡು, ಸ್ನಾನ ಮಾಡಿ ನಿಷ್ಠೆಯಿಂದ ಭಗವಂತನ
ಪೂಜೆಯನ್ನು ಮಾಡಬೇಕು. ತನ್ನ ಶಕ್ತ್ಯಾನುಸಾರ ದಾನ-ಧರ್ಮಗಳನ್ನು ಮಾಡಿದಲ್ಲಿ ಉತ್ತಮಫಲ
ಉಂಟಾಗುವುದು. ಆದ್ದರಿಂದ ಪ್ರತಿ ಮನುಷ್ಯನು ಇಹಲೋಕ ಸುಖಗಳನ್ನೇ ಅಲ್ಲದೆ, ಪರಲೋಕವನ್ನು ಕುರಿತು
ಕೂಡಾ ಅಲೋಚಿಸಬೇಕು.
ಪತಿವ್ರತಾ ಲಕ್ಷಣಗಳು
ಪುರುಷನು ತನಗೆ ಸದ್ಗತಿ ಉಂಟಾಗುವ ಸಲುವಾಗಿ ಅನೇಕ
ಶ್ರೇಷ್ಠ ಕಾರ್ಯಗಳನ್ನು ಮಾಡಿದರೂ, ಉತ್ತಮ
ಫಲಗಳನ್ನು ಪಡೆಯಲಾರದೇ ಹೋಗುತ್ತಿದ್ದಾನೆ, ಹಾಗೆಯೇ ಪ್ರತಿ ಸ್ತ್ರೀ ತನ್ನ ಪತಿಯನ್ನು
ದೈವವಾಗಿ ಮನಃಪೂರ್ವಕವಾಗಿ ಆರಾಧಿಸಬೇಕು. ತನ್ನ
ಪತಿಯಲ್ಲಿನ ಒಳ್ಳೆಯ ಗುಣಗಳನ್ನು ಸ್ವೀಕರಿಸಬೇಕೇ ಹೊರೆತು, ಅಂದ, ಆಕಾರಗಳನ್ನು ನೋಡಿ
ಮರುಳಾಗುವುದಲ್ಲ. ಹಾಗೆಯೇ ಪುರುಷರೂ ಸ್ತ್ರೀಯರ ಅಂದವನ್ನು ನೋಡದೆ, ಶೀಲ-ಗುಣಗಳನ್ನು ಗಣನೆಗೆ
ತೆಗೆದುಕೊಂಡು ಪ್ರೀತಿಯಿಂದ ಆದರಿಸಬೇಕು. ಆ ರೀತಿಯಾಗಿ ಸ್ತ್ರೀಪುರಷರಿಬ್ಬರೂ ಅನ್ಯೋನ್ಯ
ಅನುರಾಗಗಳಿಂದ ಕೂಡಿ ಸಂಸಾರ ಮಾಡಿದಲ್ಲಿ ತುಂಬ ಚೆನ್ನಾಗಿರುತ್ತಾದೆ.
ಉತ್ತಮ ಸ್ತ್ರೀಯು ತನ್ನ ಪತಿಯನ್ನು ಯಾವ ರೀತಿ
ಪ್ರೀತಿಯಿಂದ ಸೇವಿಸುತ್ತಾಳೋ, ಆ ರೀತಿಯಾಗಿಯೇ ಅತ್ತೆ-ಮಾವಂದಿರ ಸೇವೆಯನ್ನೂ ಕೂಡ ಅಷ್ಟೇ
ಶ್ರದ್ಧಾ-ಭಕ್ತಿಯಿಂದ ಮಾಡಿದರೆ ಅಂತಹ ಸ್ತ್ರೀಗೆ ಸದ್ಗತಿ ಉಂಟಾಗುತ್ತಾದೆ. ಪತ್ನಿ ತನ್ನ ಪತಿ
ಆಲೋಚನೆಯಲ್ಲಿ ಮಂತ್ರಿಯಂತೆ ಸಲಹೆ ನೀಡಬೇಕು. ಕೆಲಸ ಕಾರ್ಯಗಳಲ್ಲಿ ದಾಸಿಯಂತೆ ನಡೆದು ಕೊಳ್ಳಬೇಕು.
ತಾಯಿ ತನ್ನ ಮಗನಿಗೆ ಎಷ್ಟು ಆಪ್ಯಾಯತೆಯಿಂದ ಅನ್ನ ಇಡುತ್ತಾಳೋ ಆ ರೀತಿಯಾಗಿ ಪತಿಗೆ ಭೋಜನ
ಬಡಿಸಬೇಕು. ಶಯನ ರೂಪದಲ್ಲಿ ಲಕ್ಷ್ಮಿಯನ್ನು ಹೋಲಿರಬೇಕು. ಈ ರೀತಿಯಾಗಿ ಯಾವ ಸ್ತ್ರೀ
ನಡೆದುಕೊಳ್ಳುವಳೋ ಅಕೆಯೇ ಉತ್ತಮ ಸ್ತ್ರೀ ಎಂದು ಪರಿಗಣಿಸಲ್ಪಡುತ್ತಾಳೆ.
ಸ್ತ್ರೀ ಬಹಿಷ್ಠೆಯಾದ ನಾಲ್ಕುದಿನ ಯಾವ ಕೆಲಸವನ್ನೂ
ಮಾಡಬಾರದು. ಹೆಚ್ಚು ಮಾತನಾಡಬಾರದು. ಯಾರನ್ನೂ ಮುಟ್ಟಿಕೊಳ್ಳಬಾರದು. ಆ ನಾಲ್ಕು ದಿನ
ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಾಲ್ಕನೇ ದಿನ ಮುಂಚಿತವಾಗಿ ತಲೆ ಸ್ನಾನ ಮಾಡಿ, ಶುಭ್ರವಸ್ತ್ರ
ಧರಿಸಿ, ಪತಿಯ ಪಾದಗಳಿಗೆ ನಮಸ್ಕರಿಸಿ, ಸೂರ್ಯ ಭಗವಂತನಿಗೆ ನಮಸ್ಕಾರ ಮಾಡಿ ತಮ್ಮ
ಇಷ್ಟದೇವತೆಗಳನ್ನು ಪೂಜಿಸಬೇಕು. ಯಾವುದೇ ಸಮಯದಲ್ಲಾದರೂ ಪತಿ ಸೇವಿಸದೆ ತಾನೂ ಮುಂಚೆ
ಸೇವಿಸಬಾರದು. ಇಂಥ ಲಕ್ಷಣಗಳುಳ್ಳ ಆ ಮೂವರು ಕನ್ಯೆಯರನ್ನು ಮೃಗಶೃಂಗನು ವಿವಾಹ ಮಾಡಿಕೊಂಡು
ಆನಂದದಿಂದ ಗೃಹಸ್ಥಾಶ್ರವನ್ನು ಅಚರಿಸುತ್ತಿದ್ದನು.
ಮೃಕಂಡು ಜನನ
ಉತ್ತಮ ಲಕ್ಷಣಗಳಿರುವ ಸ್ತ್ರೀಯರನ್ನು ವಿವಾಹವಾದೆನೆಂದು
ಮೃಗಶೃಂಗನು ಅನಂದಗೊಂಡನು. ಆ ಮೂವರು ಸ್ತ್ರೀಯರೊಂದಿಗೆ ಸಂಸಾರ ಮಾಡುತ್ತಿದ್ದನು. ಹಾಗೇ
ಸ್ವಲ್ಪಕಾಲ ಕಳೆದ ಬಳಿಕ ಸುಶೀಲಾ ಗರ್ಭ ಧರಿಸಿ ಶುಭಲಗ್ನದಲ್ಲಿ ಪುತ್ರರತ್ನನಿಗೆ ಜನ್ಮ ನೀಡದಳು.
ತನಗಿಂತಲೂ ತನ್ನ ಮಗ ಎಲ್ಲ ವಿದ್ಯೆಗಳಲ್ಲೂ ಪರಿಣಿತನಾಗಬೇಕೆಂಬ ಅಸೆಯುಳ್ಳವನಾಗಿ ಮೃಗಶೃಂಗನು
ಶಿಶುವಿನ ಜಾತಕರ್ತಗಳನ್ನು ನಡೆಸಿ, ಮೃಕಂಡನೆಂದು ನಾಮಕರಣ ಮಾಡಿದನು.
ಮೃಕುಂಡನು ದಿನೇದಿನೇ ಪ್ರವರ್ಧಮಾನನಾಗಿ ತಂದೆ-ತಾಯಿಗಳು
ಬಂಧುಜನರ ಹಾಗೂ ಹಿರಿಯರ ಬಗ್ಗೆ ಭಯ-ಭಕ್ತಿ ಉಳ್ಳವನಾಗಿ ಬೆಳೆಯುತ್ತಿದ್ದರು. ಐದು ವರ್ಷ ತುಂಬಿತು.
ಮೃಗಶೃಂಗನು ಮೃಕುಂಡನಿಗೆ ಉಯನಯನ ಮಾಡಿ, ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸಿದನು.
ಗುರುಕುಲದಲ್ಲಿ ಮೃಕುಂಡನು, ಗುರುಗಳು ಹೇಳಿದ ಸಕಲ
ಶಾಸ್ತ್ರಗಳನ್ನು ಕಲಿಯುತ್ತ, ಸಕಲ ಲಕ್ಷಣಯುತನಾಗಿ ಗುರುಗಳ ಮನ್ನಣೆಯನ್ನು ಮೆಚ್ಚಿಗೆಯನ್ನು
ಪಡೆಯುತ್ತ ಯುಕ್ತವಯಸ್ಸಿಗೆ ಬರುವವರೆಗೂ ವ್ಯಾಸಂಗ ಮಾಡಿ, ಸಕಲ ಶಾಸ್ತ್ರಗಳಲ್ಲೂ ಪಾಂಡಿತ್ಯವನ್ನು
ಗಳಿಸಿದನು. ಮೃಕುಂಡನು ವಿದ್ಯಾಭ್ಯಾಸವನ್ನು ಪೂರೈಸಿಕೊಂಡು ತಂದೆ-ತಾಯಿಯ ಬಳಿಗೆ ಬಂದನು. ಸ್ವಲ್ಪ
ಕಾಲಕ್ಕೆ ಮರುದ್ವತಿ ಎಂಬ ವಧುವಿನೊಂದಿಗೆ ವಿವಾಹ
ನಡೆಯಿತು. ಅಂದಿನಿಂದ ಮೃಕುಂಡನು ಗೃಹಸ್ಥಾಶ್ರಮವನ್ನು ಸ್ವೀಕರಿಸಿದನು.
ಮೃಗಶೃಂಗನ ಮತ್ತಿಬ್ಬರ ಪತ್ನಿಯರಿಗೂ ಕೂಡ ಪುತ್ರರು
ಜನಿಸಿದರಿಂದ ಅವರಿಗೂ ಸಹ ಎಲ್ಲಾ ವಿದ್ಯೆಗಳನ್ನು ಕಲಿಸಿ, ಪ್ರಾಪ್ತವಯಸ್ಕರಾದ ನಂತರ ವಿವಾಹ
ಮಾಡಿದನು. ಎಲ್ಲರೂ ಮಾಘಮಾಸದಲ್ಲಿ ಸ್ನಾನಾದಿಗಳು ಜಪತಪಗಳು, ದಾನ-ಧರ್ಮಗಳನ್ನು ನಿಷ್ಠೆಯಿಂದ
ಮಾಡುವಂತೆ ಪ್ರೋತ್ಸಾಹಿಸುತ್ತಿದ್ದರು.
ತಾನು ಆಚರಿಸಿದ ಮಾಘಮಾಸ ವ್ರತ ಫಲಪ್ರಭಾಮಹಾವದಿಂದಲೇ
ಸಂಸಾರದಲ್ಲಿ ಯಾವುದೇ ತೊಡಕಿಲ್ಲದೇ ಇರುವುದೇ ಅಲ್ಲದೇ, ಮೃಗಶೃಂಗನಿಗೆ ಮೊಮ್ಮಕ್ಕಳೂ ಆದರು. ಆ
ಅನಂದದಲ್ಲಿ ವಂಶವೃಕ್ಷ ಶಾಖೋಪಶಾಖೆಯಾಗುತ್ತಿರುವುದನ್ನು ಕಂಡು ಸಂತೋಷಪಡುತ್ತ ತನಗಿನ್ಯಾವುದೇ
ಆಸೆಯೂ ಇಲ್ಲದೇ ಇದ್ದುದರಿಂದ ಭಗವಂತನ ಸಾನ್ನಿಧ್ಯ ಸೇರಬೇಕೆಂದು ಸಂಕಲ್ಪಿಸಿ ತಪಸ್ಸನ್ನಾಚರಿಸಲೂ
ಕಾಡಿಗೆ ಹೋಗಿ, ತನ್ನ ತಪೋಬಲದಿಂದ ಶ್ರೀಮಹಾವಿಷ್ಣುನನ್ನು ಒಲಿಸಿಕೊಂಡು ನಾರಾಯಣನ ಕೃಪೆಗೆ
ಪಾತ್ರನಾಗಿ ವೈಕಂಠ ಸೇರಿದನು.
“ಕೇಳಿದೆಯಾ ಭೂಪಾಲ! ಮೃಗಶೃಂಗನು ತಾನು
ಆಚರಿಸಿದ ಮಾಘಮಾಸ ವ್ರತಫಲದಿಂದ ಪುತ್ರಪೌತ್ರಾದಿಗಳನ್ನು ಪಡೆದುದೇ ಅಲ್ಲದೇ ಶ್ರೀಮನ್ನಾರಾಯಣನ
ಸಾನ್ನಿಧ್ಯಕ್ಕೆ ಸಕರೀರವಾಗಿ ವೈಕುಂಠಕ್ಕೆ ಹೋದನು.
ಇನ್ನು ಆತನ ಜ್ಯೆಷ್ಠಪುತ್ರನಾದ ಮೃಕಂಡುವಿನ
ವೃತ್ತಾಂತವನ್ನು ಹೇಳುತ್ತೇನೆ ಕೇಳು” ಎಂದು ವಸಿಷ್ಠ
ಮಹರ್ಷಿಗಳು, ದಿಲೀಪ ಮಹಾರಾಜನಿಗೆ ಹೀಗೆ ಹೇಳತೊಡಗಿದರು –
ಮೃಗಶೃಂಗನು ಕಾಡಿಗೆ ಹೊರಟುಹೋದ ಮೇಲೆ ಅಂದಿನಿಂದ
ಜ್ಯೇಷ್ಠಪುತ್ರನಾದ ಮೃಕಂಡುವು ಸಂಸಾರ ಜವಾಬ್ದಾರಿಯನ್ನು ಹೊತ್ತು ಮನೆಯಲ್ಲಿ ಯಾವೇದೇ ಕುಂದುಕೊರತೆ ಇಲ್ಲದಂತೆ ನೋಡಿಕೊಳ್ಳುತ್ತಿದ್ದನು.ಆದರೂ ಅವನಲ್ಲಿ
ಒಂದು ಚಿಂತೆ ಕಾಡುತ್ತಿತ್ತು. ಅದೇನೆಂದರೇ, ತಾನು ವಿವಾಹವಾಗಿ ಬಹಳ ವರ್ಷಗಳೇ ಕಳೆದರೂ
ಸಂತಾನವಾಗದಿರುವುದು. ಅದರಿಂದಾಗಿ ಆತ ಒಳಗೊಳಗೇ ಕೊರಗುತ್ತಿದ್ದನು.
ಆತ ಒಂದು ದಿನ ಹೀಗೆಂದುಕೊಂಡನು –
“ಕಾಶೀ ಪುಣ್ಯಕ್ಷೇತ್ರ, ಸದಾನಿವನ ಪ್ರತ್ಯಕ್ಷನಿಲಯ,
ಅಂತಹ ವಾರಣಾನಿಯನ್ನು ನೋಡಿದ ಮಾತ್ರಕ್ಕೆ ಸಕಲ ಪಾಪಗಳನ್ನೂ ನಿವಾರಣೆಯಾಗುವುದಲ್ಲದೇ, ಮನಸ್ಸಿನ
ಅಭಿಷ್ಣೆಗಳು ಈಡೇರುವುವು. ಅನೇಕ ಜನ ಕಾಶೀ ವಿಶ್ವನಾಥನ ದರ್ಶನ ಮಾಡಿ, ತಮ್ಮೆಲ್ಲ ಕೋರಿಕೆಗಳನ್ನು
ಈಡೇರಿಸಿಕೊಂಡಿರುವರು. ಆದ್ದರಿಂದ ನಾನೂ ಸಹ ಸಂಸಾರಸಮೇತ ಕಾಶಿಗೆ ಹೋಗುತ್ತೇನೆ”. ಎಂದು ಮನ್ನಸ್ಸಿನಲ್ಲಿ ನಿಶ್ಚಯಿಸಿಕೊಂಡು
ಪ್ರಯಾಣಕ್ಕೆ ಸಿದ್ಧತೆಗಳನ್ನು, ಸಿದ್ಧತೆಗಳನ್ನು ಮಾಡಿಕೊಂಡ ಹೊರಟನು.
ಮಾರ್ಗ ಮಧ್ಯದಲ್ಲಿ ಅನೇಕ ಕ್ರೂರಮೃಗ ಹಿಡಿತದಿಂದ ಕ್ರಿಮಿ ಕೀಟಗಳ ಆಪಾಯದಿಂದ, ತೀವ್ರ ಕಷ್ಟಗಳಿಂದ ಪಾರಿಗಿ
ಕುಟುಂಬ ಸಮೇತರಾಗಿ ಕಾಶೀಕ್ಷೇತ್ರವನ್ನು ಸೇರಿದನು.
ಕಾಶಿ ಪಟ್ಟಣಕ್ಕೆ ಸೇರಿಕೊಂಡಂತಿರುವ ಗಂಗಾನದಿಯು ತನ್ನ ವಿಶಾಲ
ಬಾಹುಗಳನ್ನು ಚಾಚಿ ಪ್ರಶಾಂತವಾಗಿ ಹರಿಯುತ್ತಿದೆ. ಮೃಕಂಡನು ಪರಿವಾರ ಸಮೇತನಾಗಿ ಪ್ರಸಿದ್ಧಗೊಂಡ
ಮಣಿಕರ್ಣಿಕ ತಟದಲ್ಲಿ ಕಾಲಕೃತ್ಯ, ಸ್ನಾನಾದಿ ವಿಧಗಳನ್ನು ಪೂರೈಸಿಕೊಂಡು ವಿಶ್ವನಾಥ ಮಂದಿರಕ್ಕೆ
ಹೋದನು.
ಆಲಯದೊಳಗೆ ಪ್ರವೇಶಿಸಿದೊಡನೆ ಮೃಕಂಡುವಿಗೆ ಎಲ್ಲಿಲ್ಲದ ಅನಂದ
ಉಂಟಾಯಿತು. ತನ್ನ ಜನ್ಮ ಸಾರ್ಥಕವಾಯಿತೆಂದು ತಾನು ಕೈಲಾಸದಲ್ಲಿ ಇರುವಂತೆ ಭಾವಿಸಿ,
ವಿಶ್ವೇಶ್ವರನನ್ನು ಭಕ್ತಿ-ಶ್ರದ್ಧೆಯಿಂದ ಪ್ರಾರ್ಥಿಸಿದನು.
ಈ ರೀತಿಯಾಗಿ ಸಕುಟುಂಬನಾಗಿ ಕಾಶೀವಿಶ್ವೇಶ್ನರನ ಧ್ಯಾನ ಮಾಡಿ ಒಂದು
ಲಿಂಗವನ್ನು ಪ್ರತಿಷ್ಠಾಪಿಸಿ ಅದನ್ನು ಮೃಕಂಡೇಶ್ವರ ಮಹಾ ಲಿಂಗವೆಂದು ನಮಕರಣ ಮಾಡಿ, ಅದಕ್ಕೆ
ಎದುರಾಗಿ ತನ್ನ ಪತ್ನಿ ಹೆಸರಿನಲ್ಲಿ ಮತ್ತೊಂದು ಲಿಂಗವನ್ನು ಪ್ರತಿಷ್ಠಾಪಿಸಿದನು. ಆ ರೀತಿಯಾಗಿ
ಒಂದು ವರ್ಷಕಾಲ ವಿಶ್ವೇಶ್ನರನ ಸನ್ನಧಿಯಲ್ಲಿ ಕಳೆಯಲು ನಿರ್ಧರಿಸಿದನು.
ಒಂದು ದಿನ ಮೃಕಂಡುವಿನ ಮೂವರು ಮಾತೆಯರು ವವಿತ್ರ ನದೀ
ಸ್ನಾನವನ್ನಾಚರಿಸಿ ವಿಶ್ವೇಶ್ನರನ್ನು ಪೂಜಿಸುತ್ತಿರುವಾಗ ತಕ್ಷಣ ಪ್ರಜ್ಞೆ ತಪ್ಪಿ ಪ್ರಾಣ
ಬಿಟ್ಟರು. ಮೃಂಕಂಡನು ತುಂಬಾ ದುಃಖಿಸಿದನು ವಿಧಿಯನ್ನು ಯಾರಿಂದ ತಾನೇ ತಪ್ಪಿಸಲು ಸಾಧ್ಯ ಅದರೂ ವಿಶ್ವೇಶ್ವರನ ಧ್ಯಾನ ಮಾಡುತ್ತಲೇ ಪ್ರಾಣ
ಬಿಟ್ಟರು. ಗತಿಸಿದ ಮೂವರು ಮಾತೆಯರಿಗೆ ಮೃಕಂಡನು ಯಥಾವಿಧಿಯಾಗಿ ದಹನ ಸಂಸ್ಕಾರವನ್ನು ಮಾಡಿ, ಮಾತೃ
ಋಣವನ್ನು ತೀರಿಸಿಕೊಂಡನು.
ಮೃಕಂಡನಿಗೆ ಬಹಳ ಕಾಲದವರೆಗೆ ಸಂತಾನವಾಗದೇ ಇದ್ದುದರಿಂದ ಕಾಶಿ
ಕ್ಷೇತ್ರಕ್ಕೆ ಬಂದನಲ್ಲವೆ. ಸಂತಾನಕ್ಕಾಗಿ ಪತ್ನಿ ಸಮೇತನಾಗಿ ವಿಶ್ವನಾಥನನ್ನು ಕುರಿತು ತಪಸ್ಸು
ಮಾಡಿದನು. ಅನೇಕ ದಾನ ಥರ್ಮಗಳನ್ನು ಮಾಡಿದನು. ಆತನ ತಪ್ಪಸ್ಸಿಗೆ ಮೆಚ್ಚಿ ಪಾರ್ವತೀ ಪರಮೇಶ್ವರರು
ಪ್ರತ್ಯಕ್ಷರಾದರು.
ಮೃಕಂಡನಿಗೆ ಮತ್ತು ಆತನ ಸತಿ ಮರುದ್ವತಿಗೆ ಅಮಿತಾನಂದವಾಗಿ
ಪರಮೇಶ್ವರನನ್ನು ಅನೇಕ ವಿಧಗಳಿಂದ ಸ್ತೋತ್ರ ಮಾಡಲು ಪರಮೇಶ್ನರನು –
“ಮಹಾಮುನಿಯೇ! ನಿನ್ನ ಭಕ್ತಿಗೆ ಮೆಚ್ಚಿದೆನು. ನೀನು ಮಾಡಿದ ತಪಸ್ಸು
ನಮಗೆ ಬಹಳ ಪ್ರಿಯವಾಗಿದೆ. ನಿನ್ನ ನಿಷ್ಕಲ್ಮಷ ಭಕ್ತಿಗೆ ಮೆಚ್ಚಿ ನಿನ್ನ ಕೋರಿಕೆಗಳನ್ನು
ಈಡೇರಿಸಲು ಬಂದಿದ್ದೇನೆ. ಅದ್ದರಿಂದ ನಿನ್ನ ಅಭೀಷ್ಟವು ಎನೆಂದು ಹೇಳು” ಎಂದು ಕೇಳಿದನು.
ಆಗ ಮೃಕಂಡನು ನಮಸ್ಕಾರ ಮಾಡಿ – “ಓ ತಂದೆಯೇ! ಮಹಾದೇವಾ! ತಾಯಿ ಅನ್ನಪೂರ್ಣೇ! ಇದೋ ನಿಮಗೆ ನನ್ನ ನಮಸ್ಕಾರಗಳು. ಲೋಕರಕ್ಷಕಾ! ನಿನ್ನ ದಯೆಯಿಂದ ನನಗೆ ಸಕಲ ಲಕ್ಷಣಗಳುಳ್ಳವಳೂ, ಸಂದರಳೂ
ಸುಶೀಲೆಯೂ ಆದ ಪತ್ನಿ ಲಭಿಸಿದ್ದರಿಂದ ನಾನು ನಿಮ್ಮನ್ನು ಧ್ಯಾನಿಸುತ್ತ ಅಕೆಯೊಂದಿಗೆ ಸಂಸಾರ
ಸುಖವನ್ನು ಅನುಭವಿಸುತ್ತಿದ್ದೆನು. ಅದರೆ ಎಷ್ಟೇ ವರ್ಷಗಳಾದರೂ ನಮಗೆ ಸಂತಾನವಾಗದಿದ್ದುದರಿಂದ
ನರಳಿ ಕೃಶವಾಗುತ್ತಿದ್ದೇವೆ. ಸಂತಾನವಿಲ್ಲದೆ ಉತ್ತಮ ಗತಿಗಳಿಲ್ಲವಲ್ಲ... ಅದ್ದರಿಂದ ನಮಗೆ ಪುತ್ರ
ಸಂತಾನವನ್ನು ನೀಡು ಎಂದು ಬೇಡಿಕೊಳ್ಳುತ್ತಿದ್ದೇವೆ” ಎಂದು ಪಾರ್ವತಿ ಪರಮೇಶ್ವರರನ್ನು ಪ್ರಾರ್ಥಿಸಿದನು.
ಮೃಕಂಡನ ದೀನಾಲಾಪನವನ್ನು ಆಲಿಸಿದ ತ್ರಿನೇತ್ರನು, “ಮುನಿಯೋತ್ತಮ! ನಿನ್ನ ಅಭಿಷ್ಟವು ನೆರೆವೇರುತ್ತದೆ. ಅದರೆ
ನಿಯಮವೊಂದಿದೆ. ಅದೇನೆಂದರೆ ನೀನು ಬದುಕಿರುವವರೆಗೂ ವೈಧವ್ಯದಿಂದ ಇರುವ ಮಗಳು ಬೇಕೆ? ಅಥವಾ
ಅಲ್ಪಾಯುಷಿಯಾದ ಪುತ್ರನು ಬೇಕೇ?” ಎಂದು ಪ್ರಶ್ನಿಸಿದನು. ಮೃಕಂಡನಿಗೆ ಅಶ್ಚರ್ಯವಾಯಿತು. ಪರಮೇಶ್ನರನ
ಮಾತಿಗೆ ಚಿಂತೆಗೊಳಗಾಗಬೇಕಾಯಿತು.
ಕ್ಷಣಕಾಲ ತಡೆದು “ಹೇ ಶಶಿಧರ! ನನ್ನನ್ನು ಪರೀಕ್ಷೆ ಮಾಡಲು ಎಣಿಸಿದೆಯಾ? ನನಗೆ ಜ್ಞಾನೋದಯವಾಯಿತು. ಆದಿ-ಅಂತ್ಯಗಳವರೆಗೂ ನಿನ್ನ
ಧ್ಯಾನವನ್ನೇ ಮಾಡುತ್ತ, ನಿನ್ನನ್ನೇ ಸೇವಿಸುತ್ತಿರುವ ನನಗೆ ಏನು ಕೇಳಬೇಕೋ ತೋಚುತ್ತಿಲ್ಲ ಆದರೂ
ನಿರಂತರ ವೈಧವ್ಯದಿಂದ ಕೊರಗಿ-ಕೃಶಿಸುವ ಮಗಳಿಗಿಂತ ಅಲ್ಪಾಯುಷಿಯಾದ ಪುತ್ರನನ್ನೇ ಅನುಗ್ರಹಿಸು” ಎಂದು ಬೇಡಿಕೊಂಡನು.
ಹಾಗೆಯೇ ಆಗಲಿ, “ತಥಾಸ್ತು” ಎಂದು ವರವಿತ್ತು ತ್ರಿಶೂಲಧಾರಿ ಪಾರ್ವತಿ ಸಮೇತನಾಗಿ
ಅಂತರ್ಧಾನನಾದನು.
ಪರಮೇಶ್ನರನ ಅನುಗ್ರಹದಿಂದ ಮೃಕಂಡನ ಪತ್ನಿ ಮರುದ್ವತಿ ಒಂದು
ಶುಭಮುಹೂರ್ತದಲ್ಲಿ ಪುತ್ರನಿಗೆ ಜನ್ಮವಿತ್ತಳು. ಮೃಕಂಡನಿಗೆ ಪುತ್ರ ಸಂತಾನವಾಯಿತೆಂದು ಅನೇಕ ಮಂದಿ
ಋಷಿಶ್ರೇಷ್ಠರೆಲ್ಲರೂ ಶಿಶುವನ್ನು ನೋಡಲು ಬಂದರು. ವ್ಯಾಸ ಮಹರ್ಷಿಗಳು ಕೂಡ ಬಂದು ಆ ಮಗುವಿಗೆ
ಜಾತಕರ್ಮವನ್ನು ನೆರವೇರಿಸಿ ಹೊರಟರು.
“ಓ ದಿಲೀಪ ಮಹಾರಾಜ! ಪರಮಪೂಜ್ಯನೂ, ಋಷಿಶ್ರೇಷ್ಠನೂ ಆದ ಮೃಕಂಡನಿಗೆ
ಪರಮೇಶ್ವರನನ್ನು ಮೆಚ್ಚಿಸಿ ಆತನ ದಯೆಗೆ ಪಾತ್ರರಾಗಿ ಪಡೆದ ಈ ಪುತ್ರನೇ ಪರಮ ಭಾಗವತೋತ್ತಮನಾದ
ಮಾರ್ಕಂಡೇಯನು.”
ಇತಿ ಪದ್ಮಪುರಾಣೇ
ಮಾಘಮಾಸ ಮಹಾತ್ಮೇ
ದಶಮೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಏಕಾದಶೋಧ್ಯಾಯಃ
ಹನ್ನೊಂದನೇ ದಿನದ
ಪಾರಾಯಣ
ಮಾರ್ಕಂಡೇಯ
ವೃತ್ತಾಂತ
ವಸಿಷ್ಠರು
ದಿಲೀಪನಿಗೆ ಮೃಗಶೃಂಗನ ವಿವಾಹ, ಮೃಕಂಡುವಿನ ಜನನ, ಕಾಶೀವಿಶ್ವನಾಥನ ದರ್ಶನ, ವಿಶ್ವನಾಥನ
ವರದಿಂದಾಗಿ ಮಾರ್ಕಂಡೇಯನ ಜನನ ಮುಂತಾದ ವೃತ್ತಾಂತಗಳನ್ನು ವಿವರಿಸಿ, “ಮಹಾರಾಜ! ಈಗ ಮಾರ್ಕಂಡೇಯನ
ಕುರಿತು ವಿವರಿಸುತ್ತೇನೆ ಶ್ರದ್ಧೆಯಿಂದ ಕೇಳುವಂಥವನಾಗು” ಎಂದು ಹೇಳತೊಡಗಿದರು.
ಮಾರ್ಕಂಡೇಯನ
ಆಯಸ್ಸು ಹದಿನಾರು ವರ್ಷಗಳು ಮಾತ್ರವೇ. ದಿನಗಳು ಕಳೆಯುತ್ತಿದ್ದಂತೆ ಮಾತಾಪಿತೃಗಳಿಗೆ ಏನೋ ತಿಳಿಯದ
ಆತಂಕ ಆವರಿಸಿತು.
ಐದು ವರ್ಷಗಳು
ತುಂಬುತ್ತಿದ್ದಂತೆ ಮಗವಿಗೆ ಉಪನಯನಾದಿ ವೈದಿಕ ಕರ್ಮಗಳನ್ನು ಪೂರೈಸಿದರು, ಆರು ವರ್ಷ
ಕಳೆಯುತ್ತಿದ್ದಂತೆಯೇ ಮಾರ್ಕಂಡೇಯನಿಗೆ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದರು. ಗುರುಕುಲದಲ್ಲಿ
ಮಾರ್ಕಂಡೇಯನು ತಂದೆಯಂತೆ ಅಲ್ಪಕಾಲದಲ್ಲಿಯೇ ಸಕಲ ಶಾಸ್ತ್ರ, ವೇದಾಂತ, ಪುರಾಣ, ಇತಿಹಾಸಗಳನ್ನು,
ಸ್ಮೃತಿಗಳನ್ನು ಪಠಿಸಿ ಗುಣವಂತನೆಂದು ಪ್ರಶಂಸೆಗೆ ಪಾತ್ರನಾದನು. ಆದರೂ ಮರುದ್ವತಿ, ಮೃಕಂಡರು
ನಿತ್ಯವೂ ಮಾರ್ಕಂಡೇಯನಿಗೆ – “ಕುಮಾರ! ನೀನು ಸಣ್ಣವಯಸ್ಸಿಗೆ ಸಕಲಶಾಸ್ತ್ರಗಳನ್ನು ಅಭ್ಯಸಿಸಿ,
ನಿನ್ನ ಬುದ್ಧಿ ಕುಶಲತೆಯಿಂದ ಎಲ್ಲರ ಮನ್ನಣೆಯನ್ನೂ ಪಡೆಯುತ್ತಿರುವೆ, ಅದು ನಮಗೂ ಸಂತೋಷಕರ
ವಿಚಾರ, ಆದರೂ ಗುರು-ಹಿರಿಯರು, ಬ್ರಾಹ್ಮಣರ ಮೇಲೆ ಮತ್ತಷ್ಟು ಭಕ್ತಿ-ಭಾವವನ್ನು ತೋರಿಸಿದಲ್ಲಿ,
ಅವರ ಆಶೀರ್ವಾದವು ನಿನಗೆ ಮಂಗಳವನ್ನು ಉಂಟಮಾಡುವುದು. ನಿನ್ನ ಆಯಷ್ಯವೂ ಮೃದ್ಧಿ ಆಗುವುದು” ಎಂದು ಪದೇ ಪದೇ ಹೇಳುತ್ತಿದ್ದರು.
ಹದಿನೈದು ವರ್ಷಗಳು
ಕಳೆದುಹೋದವು. ದಿನೇದಿನೇ ತಂದೆ-ತಾಯಿಗಳ ಕಳವಳ, ಭಯವು ಹೆಚ್ಚಾಗುತ್ತನೇ ಇತ್ತು, ಆದರೂ ಪರಶಿವನ
ವರಪ್ರಸಾದನಾದ ಮಾರ್ಕಂಡೇಯನ ಜನ್ಮದಿನೋತ್ಸವವನ್ನು ಆಚರಿಸಬೇಕೆಂದು ಬಯಸಿ,
ಮಹಾಋಷಿ-ಮುನಿಗಳೆಲ್ಲರನ್ನೂ ಆ ದಿನದಂದು ಆಹ್ವಾನಿಸಿದರು.
ಮುನಿವರ್ಯರು,
ಗುರುಗಳು ಮೊದಲಾದರೆಲ್ಲರನ್ನೂ ಮೃಕಂಡನು ಸತ್ಕರಿಸಿದನು.ಮಾರ್ಕಂಡೇಯನು ಹಿರಿಯರೆಲ್ಲರಿಗೂ
ನಮಸ್ಕರಿಸುತ್ತಾ ವಸಿಷ್ಠರಿಗೂ ನಮಸ್ಕರಿಸಲು ಹೋದಾಗ ಅವರು ತಡೆದರು. ಅವರ ಈ ವರ್ತನೆಯನ್ನು ಕಂಡ
ಎಲ್ಲರೂ ಅಶ್ಚರ್ಯದಿಂದ, “ಮಹಾನುಭಾವ! ನೀವು ಈ ರೀತಿ ತಡೆಯಲು ಕಾರಣವೇನು?” ಎಂದು ಪ್ರಶ್ನಿಸಿದರು.
ಆಗ ವಸಿಷ್ಠರು, “ಈ ಬಾಲಕನು ಕೆಲವು ದಿನಗಳಲ್ಲಿಯೇ ಮರಣಿಸುತ್ತಾನೆ.
ನೀವೆಲ್ಲರೂ ಈತನನ್ನು ದೀರ್ಘಾಯುಷ್ಯವಂತನಾಗೆಂದು ಆಶೀರ್ವದಿಸಿದಿರಲ್ಲವೇ? ಅದು ಹೇಗೆ ಸಾಧ್ಯ?. ಈತನ ಆಯಸ್ಸು
ಹದಿನಾರು ವರ್ಷಗಳಷ್ಟೇ ಅಲ್ಲವೇ? ಈಗ ಹದಿನೈದನೇ
ವರ್ಷದ ಜನ್ಮ ದಿನೋತ್ಸವವನ್ನು ಆಚರಿಸುತ್ತಿದ್ದರೆ
ಪರಮೇಶ್ವರನು ನೀಡಿದ ವರದ ಪ್ರಕಾರ ಈತನು ಇನ್ನೊಂದು ವರ್ಷಕಾಲ ಮಾತ್ರ ಜೀವಿಸಬಲ್ಲ” ಎಂದು ನುಡಿದರು.
ಅಲ್ಲಿಯವರೆಗೂ
ಮಾರ್ಕಂಡೇಯನನ್ನು ಆಶೀರ್ವದಿಸಿದ ಮುನಿಗಳೆಲ್ಲರೂ ಯೋಚನಾಮಗ್ನರಾದರು. “ಚಿರಂಜೀವಿಯಾಗು” ಎಂದು
ಅಶೀರ್ವದಿಸಿದ ಅವರ ವಾಕ್ಕು ಫಲಿಸುವಿಲ್ಲವೆಂದು ಮನದಲ್ಲೇ ಮರುಗಿದರು. “ಇದಕ್ಕೆ ಮಾರ್ಗೋಪಾಯಗಳೇನೂ ಇಲ್ಲವೇ?” ಎಂದು ಅವರು ವಸಿಷ್ಠರನ್ನು ಪ್ರಶ್ನಿಸಿದರು.
ವಸಿಷ್ಠರು
ಸ್ವಲ್ಪಕಾಲ ಆಲೋಚಿಸಿ. “ಮುನಿವರ್ಯರೇ! ನಾವೆಲ್ಲರೂ ಮಾರ್ಕಂಡೇಯನನ್ನು ಕರೆದುಕೊಂಡು
ಬ್ರಹ್ಮದೇವನ ಬಳಿ ಹೋಗೋಣ ಬನ್ನಿ” ಎಂದು ಮಾರ್ಕಂಡೇಯನನ್ನು
ಕರೆದುಕೊಂಡು ಹೋದರು.
ಮುನಿವರ್ಯರ
ಆಗಮನದಿಂದ ಬ್ರಹ್ಮನು ಸಂತೋಷಗೊಂಡನು. ಅವರೊಂದಿಗೆ ಮಾರ್ಕಂಡೇಯನೂ ಕೂಡ ಬ್ರಹ್ಮನಿಗೆ ನಮಸ್ಕರಿಸಲು
ಬ್ರಹ್ಮನು. “ಚಿರಂಜೀವಿಯಾಗಿ ಬಾಳು ಮಗು!” ಎಂದು ಅಶೀರ್ವದಿಸಿದನು. ಆಗ ವಸಿಷ್ಠ ಮಹರ್ಷಿಗಳು
ಮಾರ್ಕಂಡೇಯನ ಜನ್ಮವೃತ್ತಾಂತವನ್ನು ಬ್ರಹ್ಮನಿಗೆ ವಿವರಿಸಿದರು. ಬ್ರಹ್ಮನೂ ಸಹ ನಡೆದು ಹೋದ
ತಪ್ಪಿನ ವಿಚಾರ ಹೊರಗೆಡುಹಿ ಸ್ವಲ್ಪ ತಡವಾಗಿ “ಭಯಪಡಬೇಡ” ಎಂದು ಮಾರ್ಕಂಡೇಯನ ಬಳಿಗೆ ಬಂದು. “ಪರಮೇಶ್ವರನು ಈ ಬಾಲಕನನ್ನು ದೀರ್ಘಾಯುಷ್ಯವಂತನ್ನಾಗಿ
ಮಾಡಲಿ” ಎಂದು ಮನದಲ್ಲೇ ಶಿವನನ್ನು ಧ್ಯಾನಿಸಿದನು. ನಂತರ
ಮುನಿಗಳತ್ತ ನೋಡಿ, “ಓ ಮುನಿಗಳೇ! ನೀವಿನ್ನು ಹೋಗಿಬನ್ನಿ, ಈತನಿಗೆ ಯಾವುದೇ ಅಪಾಯಗಳು ಉಂಟಾಗದು”. ಎಂದು ಹೇಳಿ, “ವತ್ಸ ಮಾರ್ಕಂಡೇಯ! ನೀನು ಕಾಶೀ ಕ್ಷೇತ್ರಕ್ಕೆ ಹೋಗಿ, ಭಕ್ತಿ-ಶ್ರದ್ದೆಯಿಂದ ವಿಶ್ವನಾಥನನ್ನು ಸೇವಿಸು.
ನಿನಗೆ ಯಾವುದೇ ಅಪಾಯ ಉಂಟಾಗದು” ಎಂದು ಧೈರ್ಯವನ್ನು
ತಂಬಿನು.
ಮಾರ್ಕಂಡೇಯನು
ಅಶ್ರಮಕ್ಕೆ ಹಿಂದಿರುಗಿ, ತಂದೆ-ತಾಯಿಗೆ
ನಮಸ್ಕರಿಸಿ “ನಾನು ಕಾಶೀನಾಥನನ್ನು
ಸೇವಿಸಲು ಅನುಮತಿ ನೀಡಿ” ಎಂದು ಕೋರಲು, ಮೃಕಂಡ ಹಾಗೂ
ಆತನ ಪತ್ನಿ ಮಗನ ಅಗಲಿಕೆಗೆ ಬಹಳವಾಗಿ ದುಃಖಿಸಿದರು. ಕಡೆಗೆ ಮಾರ್ಕಡೇಯನ ಸಂಕಲ್ಪವನ್ನು
ಅಲ್ಲವೆನ್ನಲಾಗದೇ, ಮಗನನ್ನು ಬಿಟ್ಟಿರಲಾರದೆ, ಎಲ್ಲರೂ ಕಾಶೀಕ್ಷೇತ್ರಕ್ಕೆ ಹೊರಟರು.
ಮೃಕಂಡನು ಕುಟುಂಬ
ಸಮೇತನಾಗಿ ಕಾಶೀಕ್ಷೇತ್ರಕ್ಕೆ ಹೋಗಿ ವಿಶ್ವೇಶ್ವರನ ಆಲಯದ ಸನ್ನಿದಿಯ ಸಮೀಪದಲ್ಲೊಂದು ಅಶ್ರವನ್ನು
ನಿರ್ಮಿಸಿಕೊಂಡನು. ಮಾರ್ಕಂಡೇಯನು ಶಿವಾರಾಧಕನಾಗಿ ಹಗಲಿರುಳು ಶಿವಲಿಂಗ ಸಾನ್ನಿಧ್ಯದಲ್ಲೇ
ಇರತೊಡಗಿದನು. ಕ್ರಮೇಣ ಆತ ಹದಿನಾರನೇ ವರ್ಷಕ್ಕೆ ಕಾಲಿಟ್ಟನು ಮರಣ ಸಮಯ ಸನ್ನಿಹಿತವಾಯಿತು. ಯಾಮನು
ತನ್ನ ಕಿಂಕರಿಗೆ ಮಾರ್ಕಂಡೇಯನ ಪ್ರಾಣವನ್ನು ತರುವಂತೆ ಹೇಳಿದಾಗ, ಆ ಕಾರ್ಯನಿಮಿತ್ತವಾಗಿ ಅವರು
ಶಿವಸಾನ್ನಿಧ್ಯದಲ್ಲಿ ಮಾರ್ಕಂಡೇಯನ ಬಳಿಗೆ ಬಂದರೂ ಅವರು ಆತನ ಸಮೀಪದಲ್ಲಿ ನಿಲ್ಲಲಾರದೇ ಹೋದರು.
ಕಾಲಪಾಶವನ್ನು ಎಸೆಯುವುದಕ್ಕೆ ಕೈಎತ್ತಲಾಗದೆ ಹೋದರು. ಮಾರ್ಕಂಡೇಯನ ಸುತ್ತಲೂ ಮಹಾಪ್ರಭೆ
ಆವರಿಸಿತು. ಆ ತೇಜಸ್ಸು ಯಮಕಿಂಕರರನ್ನು ಅಗ್ನಿಕಣದಂತೆ ಬಾಧಿಸಿತು. ಆ ಯಾತನೆಯನ್ನು ಸಹಿಸಲಾರದೆ
ಅಲ್ಲಿಂದ ಹಿಂದಿರುಗಿ ಯಮನಲ್ಲಿ ನಡೆದ ವೃತ್ತಾಂತವನ್ನು ವಿವರಿಸಿದಾಗ-
ಯಮಧರ್ಮರಾಜನು
ಆಶ್ಚರ್ಯಪಟ್ಟು. ತಾನೇ ಖುದ್ದಾಗಿ ಮಾರ್ಕಂಡೇಯನ ಬಳಿಗೆ, ಬಂದು ಕಾಲಪಾಶವನ್ನು ಬೀಸಿದನು. ಆಗ
ಮಾರ್ಕಂಡೇಯನು ಕಣ್ಣು ತೆರೆದು ನೋಡುವ ಹೊತ್ತಿಗೆ ಯಮದೇವನು ತನ್ನ ಪ್ರಾಣವನ್ನು ತೆಗೆದುಕೊಂಡು
ಹೋಗಲು ಸಿದ್ಧನಾಗಿರುವುದನ್ನು ಕಂಡು, ಹೆದರಿ, ಶಿವಲಿಂಗವನ್ನು ಅಪ್ಪಿಕೊಂಡು ಧ್ಯಾನಿಸಿದಾಗ ಕೈಲಾಸ
ವಾಸನಾದ ಪಾರ್ವತಿಪತಿ ತನ್ನ ಭಕ್ತನ ಆಕ್ರಂದನವನ್ನು ಕೇಳಿ, ಮಹಾ ರೌದ್ರಾಕಾರದಿಂದ ಶಿವಲಿಂಗವನ್ನು
ಸೀಳಿಕೊಂಡು ಬಂದು ತ್ರಿಶೂಲದಿಂದ ಯಮನನ್ನು ಸಂಹರಿಸಿ ಮಾರ್ಕಂಡೇಯನನ್ನು ರಕ್ಷಿಸಿದನು.
ಯಮನು
ಮರಣಿಸಿದ್ದರಿಂದ ಅಷ್ಟದಿಕ್ಪಾಲಕರು, ಬ್ರಹ್ಮಾದಿದೇವತೆಗಳು ಧಾವಿಸಿ ಬಂದು, ಶಿವನನ್ನು ಅನೇಕ
ವಿಧದಿಂದ ಪ್ರಾರ್ಥಿಸಿದರು. “ಕೋಪವನ್ನು ಶಮನ
ಮಾಡಿಕೋ ಮಹೇಶ! ಯಮ ತನ್ನ ಕರ್ತವ್ಯವನ್ನು
ನೆರವೇರಿಸಿದ್ದಾನೆ. ತಮ್ಮ ಮಾತ್ರವೇ ಆಯುಷ್ಯವಿದ್ದು ಅದನ್ನು ಹರಿಸಲು ಬಂದನು. ಮಾರ್ಕಂಡೇಯನನ್ನು
ಚಿರಂಜೀವಿಯನ್ನಾಗಿ ಮಾಡಿದಿರಿ. ಅದಕ್ಕಾಗಿ ನಾವೆಲ್ಲರೂ ಬಹಳವಾಗಿ ಆನಂದ ಪಡುತ್ತಿದ್ದೇವೆ. ಆದರೆ
ಧರ್ಮಪಾಲನೆ ನಿಮಿತ್ತನಾದ ಯಮನಿಲ್ಲದೆ ಇರುವುದು ಕುಂದೆನಿಸುವುದಿಲ್ಲವೇ ಆದ್ದರಿಂದ ಮತ್ತೆ
ಯಮನನ್ನು ಬದುಕಿಸಿರಿ” ಎಂದು ಬೇಡಿಕೊಂಡರು. ಆಗ
ಈಶ್ವರನು ಯಮನನ್ನು ಬದುಕಿಸಿ. “ಯಮ! ನೀನು ನನ್ನ ಭಕ್ತರ
ಬಳಿಗೆ ಬರಬೇಡ” ಎಂದು ಎಚ್ಚರಿಕೆಯನ್ನು ನೀಡಿ
ಅಂತರ್ಧಾನನಾದನು.
ಪರಶಿವನ ದಯೆಯಿಂದ
ತನ್ನ ಕುಮಾರನು ದೀರ್ಘಾಯುಷ್ಯವಂತನಾದುದಕ್ಕೆ ಮೃಕಂಡನು ಸಂತೋಷಗೊಂಡು. ತಾನು ಆಚರಿಸಿದ ಮಾಘಮಾಸದ
ಪ್ರತಿಫಲವೇ ತನ್ನ ಮಗನನ್ನು ಕಾಪಾಡಿತೆಂದು ನಂಬಿ, ಈ ಮಾಘಮಾಸದ ಪ್ರಭಾವವನ್ನು ಜಗತ್ತಿಗೆಲ್ಲ
ಸಾರುತ್ತಿದ್ದನು.
ಇತಿ ಪದ್ಮಪುರಾಣೇ
ಮಾಘಮಾಸ ಮಹಾತ್ಮೇ
ಏಕಾದಶೋಧ್ಯಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ದ್ವಾದಶೋಧ್ಯಾಯಃ
ಹನ್ನೆರಡನೇ ದಿನದ
ಪಾರಾಯಣ
ಪುಣ್ಯ
ಕ್ಷೇತ್ರಗಳಲ್ಲಿ ನದೀಸ್ನಾನ
ಈ ವಿಧವಾಗಿ ಅನೇಕ
ಪುಣ್ಯಪುರುಷರ ವೃತ್ತಾಂತಗಳನ್ನು ಮಾಘಸ್ನಾನದ ಹಿರಿಮೆಯನ್ನು ದಿಲೀಪ ಮಹಾರಾಜನಿಗೆ ವಿವರಿಸಿದಾಗ
ಆರಾಜನು – “ಪೂಜ್ಯರೇ! ನಿಮ್ಮ ಕೃಪೆಯಿಂದ
ಅನೇಕ ವೃತ್ತಾಂತಗಳನ್ನು ತಿಳಿದುಕೊಂಡು ಕೃತಾರ್ಥನಾದೆ. ಆದರೆ ಮತ್ತೊಂದು ಸಂಶಯ ನನಗೆ ಉಂಟಾಗಿದೆ.
ಅದೇನೆಂದರೆ ಮಾಘಮಾಸದಲ್ಲಿ ಯಾವ ಯಾವ ತೀರ್ಥಗಳ ಸಂದರ್ಶನ ಮಾಡಬೇಕು ಅಪ್ಪಣೆ ಕೊಡಿ” ಎಂದು ವಿನಮ್ರನಾಗಿ ಕೋರಿದಾಗ ವಸಿಷ್ಠ ಮಹರ್ಷಿಗಳು
ಮತ್ತೆ ಹೀಗೆ ಹೇಳುತ್ತಾರೆ.
“ದಿಲೀಪ ಮಹಾರಾಜ! ಮಾಘನ್ನಾನ ಮಾಡುವುದರ್ರಿ ಅಸಕ್ತಿ ಇರುವವರಿಗೆ
ಮುಖ್ಯವಾಗಿ ತೀರ್ಥಮಹಿಮೆಯನ್ನು ಕುರಿತು ವಿವರವಾಗಿ ಹೇಳುತ್ತೇನೆ. ಅಸಕ್ತಿ-ಶ್ರದ್ಧೆಯಿಂದ
ಕೇಳುವಂತವನಾಗು”.
“ಮಾಘಮಾಸದಲ್ಲಿ ನದೀಸ್ನಾನ ಬಹಳ
ಮುಖ್ಯವಾದುದು. ಮಾಘನ್ನಾನ ಮಾಡದೆ ತೀರ್ಥಗಳನ್ನು ಸೇವಿಸಿದರೆ ಸಾಕೆಂದುಕೊಂಡರೆ ಅದು
ಅವಿವೇಕವಾಗುತ್ತದೆ.” ಅದು ಹೇಗೆಂದರೆ,
ಮಾಘಮಾಸದಲ್ಲಿಯಾವ ನದಿಯ ನೀರಾದರೂ ಗಂಗೆಯ ನೀರಿಗೆ ಸಮಾನವೇ, ಆದ್ದರಿಂದ ಮಾಘಮಾಸ ನದೀಸ್ನಾನ
ಸರ್ವಪಾಪಹರವಾದುದು. ಅವಶ್ಯವಾದುದು ಕೂಡ. ಹಾಗೆಯೇ ಪ್ರಯಾಗ ಅತಿ ಮುಖ್ಯವಾದ ಕ್ಷೇತ್ರ ಈ ಭರತ
ಖಂಡದಲ್ಲಿ ಅತಿ ಪ್ರಧಾನವಾಗ ಗಂಗಾನದಿ, ಸಮುದ್ರವನ್ನು ಕೂಡವಲ್ಲಿ ಮಾಘಮಾಸದ ಸ್ನಾನವನ್ನು
ಅಚರಿಸಿದರೆ ಏಳು ಜನ್ಮಗಳ ಪಾಪಗಳೂ ಸಹ ಪರಿಹಾರವಾಗುತ್ತವೆ.
ಮಾಘಮಾಸದಲ್ಲಿ
ನದೀಸ್ನಾನದ ಜೊತೆಗೆ ವಿಷ್ಣು ದೇವಾಲಯಗಳು, ಮಹೇಶ್ನರನ ಆಲಯಗಳು ಇತ್ಯಾದಿ ಮುನ್ನೂರರವತ್ತು
ಕ್ಷೇತ್ರಗಳನ್ನು ದರ್ಶನ ಮಾಡಿದಲ್ಲಿ ಉನ್ನತಫಲ ಉಂಟಾಗುವುದು. ಮರುಜನ್ಮವು ಉಂಟಾಗುವುದಿಲ್ಲ.
ಅದರಲ್ಲೂ ತ್ರಯಂಬಕವೆಂಬ ಮುಖ್ಯ ಕ್ಷೇತ್ರವಿರುವುದು. ಇದು ಪಶ್ಚಿಮ ಘಟ್ಟದ ಬಳಿಯಿದೆ. ಅಲ್ಲಿಯೇ
ಪವಿತ್ರ ಗೋದಾವರಿ ನದಿ ಹುಟ್ಟಿದ್ದು. ಗೌತಮನು ತನ್ನ ಗೋಹತ್ಯಾ ದೋಷವನ್ನು
ಹೋಗಲಾಡಿಸಿಕೊಳ್ಳುವುದಕ್ಕೆ ಇಲ್ಲಿಯೇ ಈಶ್ವರನನ್ನುಕುರಿತು ಘೋರವಾದ ತಪಸ್ಸನ್ನು ಮಾಡಿದನು.
ಗೋಹತ್ಯೆ ನಡೆದ ಪ್ರದೇಶದ ಮೇಲಿನಿಂದಾಗಿ ಗೋದಾವರಿ ಪ್ರವಹಿಸುವಂತೆ ಮಾಡಿದನು. ಅದ್ದರಿಂದ
ಮಾಘಮಾಸದಲ್ಲಿ ಗೋದಾವರಿ ನದಿಸ್ನಾನ ಮಾಡಿದರೆ ತಕ್ಷಣವೇ ಸಕಲ ಪಾಪಗಳು ನಿವಾರಣೆಯಾಗುವುದಲ್ಲದೇ
ಇಹದಲ್ಲಿ, ಪರದಲ್ಲಿ ಕೂಡ ಸುಖ ಪಡುವರು.
ಗೌತಮೀ ನದಿಯಲ್ಲಿ
ಇನ್ನಷ್ಟು ಕೆಲವು ಪ್ರಸಿದ್ಧವಿರುವ ಉಪನದಿಗಳೂ ಕೂಡಾ ಬೆರೆತು, ತಮ್ಮ ತಮ್ಮ ಸ್ನೇಹದ
ಸೌಹಾರ್ದತೆಯನ್ನು ಸಾರುತ್ತವೆ. ಹಾಗೆಯೇ ಪರಂತಪ ಎಂಬ ಉಪನದಿ ಪ್ರವಹಿಸುವ ಕಡೆ ಶಿವನು
ಲಿಂಕಾಕಾರದಿಂದ ನೆಲೆಸಿದ್ದಾನೆ. ಅದರಾಜೆ ಪ್ರಭಾಸ ಎಂಬ ಕ್ಷೇತ್ರವಿರುವುದು. ಆ ಕ್ಷೇತ್ರ
ಬ್ರಹ್ಮಹತ್ಯಾ ದೋಷಗಳನ್ನೂ ಸಹ ಪರಿಹರಿಸುತ್ತದೆ. ಆ ಕ್ಷೇತ್ರ ಬ್ರಹ್ಮಹತ್ಯಾ ದೋಷಗಳನ್ನೂ ಸಹ
ಪರಿಹರಿಸುತ್ತದೆ. ಇದಕ್ಕೊಂದು ಇತಿಹಾಸವಿರುವುದು. ಸಾವಧಾನದಿಂದ ಕೇಳುವಂತಹವನಾಗು.
“ವಿಷ್ಣು ನಾಭಿಕಮಲದಿಂದ ಜನಿಸಿದ ಬ್ರಹ್ಮನಿಗೂ, ಈಶ್ವರನಿಗೂ ತಲಾ ಐದೈದು
ತಲೆಗಳಿದ್ದವು. ಈಶ್ವರನಿಗೆ ಪಂಚವಕ್ತ್ರ, ತ್ರನೇತ್ರ ಎಂಬ ಹೆಸರುಗಳು ಕೂಡ ಇವೆಯಲ್ಲ”. ಬ್ರಹ್ಮದೇವನು “ನನಗೂ ಐದು ತಲೆಗಳಿವೆ ನಾನೇ ದೊಡ್ಡವನೆಂದು” ಶಿವನಲ್ಲಿ ವಾದಿಸಿದನು. ಇಬ್ಬರೂ ಆಹಂಕಾರದಿಂದ
ನಡೆದುಕೊಂಡಿದ್ದರಿಂದ ಸಣ್ಣ ಸಣ್ಣ ಹನಿ, ಗಾಳಿ, ಮಳೆಯಂತೆ ಪ್ರಾರಂಭವಾದ ಅವರಿಬ್ಬರ ಕದನ
ದೊಡ್ಡದಾಯಿತು. ಕಡೆಗೆ ಇಬ್ಬರೂ ಯುದ್ಧ ಮಾಡಿದಾಗ ಶಿವನು ಬ್ರಹ್ಮನ ಐದೂ ತಲೆಗಳನ್ನು ಕಡಿದು
ಹಾಕಿದನು. ತಕ್ಷಣ ಶಿವನಿಗೆ ಬ್ರಹ್ಮಹತ್ಯಾ ದೋಷವು ಸುತ್ತಿಕೊಂಡಿತು. ಶಿವನು ಹೆದರಿ ತಾನು
ಕತ್ತರಿಸಿದ ಬ್ರಹ್ಮನ ತಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಮೂರು ಲೋಕಗಳನ್ನೂ ತಿರುಗುತ್ತಿದ್ದಾಗ
ಕ್ರಮೇಣ ಕೈಯಲ್ಲಿದ್ದ ಬ್ರಹ್ಮನ ತಲೆಗಳು ಒಣಗಿ ಹೋಗಿ ಕಪಾಲಗಳಾದವು ಈಶ್ವರನು ಸಹಜ ಅಂದಗಾರ. ಆತನ
ಭಿಕ್ಷಾಟನೆಗೆ ಬಂದು. “ಭಿಕ್ಷಾಂದೇಹಿ” ಎಂದಾಗ ಗೃಹಣಿಯರು ಭಿಕ್ಷೆಯನ್ನು ಹಿಡಿದು ಹೊಸ್ತಿಲ ಬಳಿ ಬಂದಾಗ ಶಿವನ
ಜಗನ್ಮೋಹನಾಕಾರವನ್ನು ಕಂಡು ಮೋಹಿತರಾಗಿ, ಭಿಕ್ಷೆಗಾಗಿ ಶಿವನ ಹಿಂದೆ ಹೋಗುತ್ತಿದ್ದರು. ಈ
ವಿಚಿತ್ರವನ್ನು ಮುನಿಶ್ರೇಷ್ಠರೆಲ್ಲರೂ ನೋಡಿ, ಕುಪಿತರಾಗಿ ತಮ್ಮ ಮಡದಿಯರು ಶಿವನ ಹಿಂದೆ
ಹೋಗುವುದನ್ನು ಕಂಡು ಸಹಿಸಲಾಗದೆ ಆತನ – “ಪುರುಷತ್ವ ನಶಿಸಿಹೋಗಲಿ” ಎಂದು ಶಪಿಸಿದರು.
ಈಶ್ವರನು ಏನೂ
ಮಾಡಲಾಗದೆ ಕೆಳಗೆ ಬಿದ್ದು ಆ ಲಿಂಗದಲ್ಲಿಯೇ ಐಕ್ಯವಾಗಿಹೋದನು.ಈಶ್ವರನು ಏನೂ ಮಾಡಲಾಗದೆ ಹಾಗೆ
ಲಿಂಗಾಕಾರವಾಗಿ ಹೊಳೆಯುತ್ತಿತ್ತು. ಕೋಟಿಸೂರ್ಯ ತೇಜದಿಂದ ಕೂಡಿ ಪ್ರಳಯ ಸಂಭವಿಸುವುದೇ ಎಂಬಂತೆ
ಮಹಾ ಭಯಂಕರವಾಗಿ ಉರಿಯುತಿತ್ತು.
ಆಗ ಬ್ರಹ್ಮ ಮತ್ತು
ವಿಷ್ಣು ಇಬ್ಬರೂ ಶಿವನ ಬಳಿ ಬಂದು ಆತನನ್ನು ಸಮಾಧನ ಪಡಿಸಿ, ಪ್ರಯಾಗ ಕ್ಷೇತ್ರಕ್ಕೆ ಕರೆದೊಯ್ದು,
ಅಲ್ಲಿ ಶಿವನಿಗಿರುವ ಬ್ರಹ್ಮಹತ್ಯಾ ಪಾಪವನ್ನು ಪರಿಹರಿಸಿದರು. ಆ ರೀತಿಯಾಗಿ ಭೂಲೋಕಕ್ಕೆ ಬಂದ
ಶಿವನು ಆಗಿನಿಂದಲೂ ಲಿಂಗಾಕಾರವಾಗಿ ಬದಲಾದುದರಿಂದ ಭಕ್ತರು ಆ ಲಿಂಗಾಕಾರವನ್ನೇ ಪೂಜಿಸುತ್ತ ಶಿವನ
ಸಾನ್ನಿಧ್ಯವನ್ನು ಹೊಂದುತ್ತಿದ್ದಾರೆ.
ಇತಿ ಪದ್ಮಪುರಾಣೇ
ಮಾಘಮಾಸ ಮಹಾತ್ಮೇ
ದ್ವಾದಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ
ಮಾಘಮಾಸ ಮಹಾತ್ಮೇ
ತ್ರಯೋದಶೋಧ್ಯಾಯಃ
ಹದಿಮೂರನೇ ದಿನದ
ಪಾರಾಯಣ
ಶಿವನು ಪಾರ್ವತಿಗೆ
ಮಾಘಮಾಸ ಮಹಿಮೆಯನ್ನು ವಿವರಿಸುವುದು
ವಸಿಷ್ಠ ಮಹರ್ಷಿಗಳು
ದಿಲೀಪನಿಗೆ ಮಾರ್ಕಂಡೇಯ ವೃತ್ತಾಂತವನ್ನು ಶಿವಲಿಂಗಾಕಾರ ವೃತ್ತಾಂತವನ್ನು ವಿವರಿಸಿದ ಬಳಿಕ,
ಇನ್ನಷ್ಟು ಕೇಳಬೇಕೆಂಬ ಕುತೂಹಲ ವ್ಯಕ್ತಪಡಿಸಿದ ದಿಲೀಪ ಮಹಾರಾಜನು ಮತ್ತೆ ಹೀಗೆ ಪ್ರಶ್ನಿಸಿದನು. –
“ಪೂಜ್ಯರೇ! ಈ ಮಾಘಮಾಸದ
ಮಹಿಮೆಯನ್ನು ಇನ್ನಷ್ಟು ಕೇಳಬೇಕೆಂಬ ಕೋರಿಗೆ ಉಂಟಾಗಿದೆ” ಎಂದು
ಪ್ರಾರ್ಥಿಸಿದಾಗ ವಸಿಷ್ಠರು ಹೇಳತೊಡಗಿದರು. –
“ಮೊದಲು ಪಾರ್ವತೀದೇವಿಗೆ
ಶಿವನು, ನಾರದರಿಗೆ ಬ್ರಹ್ಮನು ಮಾಘಮಾಸದ ಮಹಿಮೆಯನ್ನು ಕುರಿತು ಹೇಳಿದ್ದಾರೆ. ಆದ್ದರಿಂದ ಶಿವನು
ಪಾರ್ವತಿಗೆ ಹೇಳಿದ ವಿಧಾನವನ್ನು ವಿವರಿಸುವೆ ಕೇಳು”.
ಒಂದು ದಿನ ಪರಶಿವನು
ಗಣಾದಿಗಳಿಂದ ಸೇವಿತವಾಗಿ ನಾನಾರತ್ನ ವಿಭೂಷಿತವಾದ ಕೈಲಾಸದಲ್ಲಿನ ಮಂದಾರ ವೃಕ್ಷದ ಸಮೀಪ
ಏಕಾಂತವಾಗಿ ಕುಳಿತಿರುವ ಸಮಯದಲ್ಲಿ ಜಗಜ್ಜನನಿ ಪಾರ್ವತೀದೇವಿಯು ಪತಿಯ ಪಾದಗಳಿಗೆ ನಮಸ್ಕರಿಸಿ, “ಸ್ವಾಮಿ! ನಿಮ್ಮಿಂದ ಅನೇಕ
ಪುಣ್ಯ ವಿಷಯಗಳನ್ನು ಅರಿತಿದ್ದೇನೆ. ಅದರೆ ಪ್ರಯಾಗ ಕ್ಷೇತ್ರದ ಮಹಿಮೆಯನ್ನು ಮಾಘಮಾಸದ
ಮಹಿಮೆಯನ್ನು ಕೇಳಬೇಕೆಂಬ ಅಪೇಕ್ಷೆಯುಂಟಾಗಿದೆ ಆದ್ದರಿಂದ ಈ ಏಕಾಂತಸಮಯದಲ್ಲಿ ಕ್ಷೇತ್ರ
ಮಹಿಮೆಯನ್ನು ವಿವರಿಸಬೇಕೆಂದು ಪ್ರಾರ್ಥಿಸುತ್ತಿರುವೆ” ಎಂದು ಕೇಳಿದಾಗ
ಪಾರ್ವತೀ ಪತಿಯಾದ ಶಂಕರನು ಮಂದಹಾದಿಂದ ಹೀಗೆ ವಿವರಿಸಿದನು.
“ದೇವಿ! ನಿನ್ನ ಇಷ್ಟವನ್ನು ಖಂಡಿತ ಈಡೇರಿಸುತ್ತೇನೆ
ಶ್ರದ್ಧೆಯಿಂದ ಕೇಳು.” ಎಂದು – ಸೂರ್ಯನು ಮಕರ
ರಾಶಿಯಲ್ಲಿ ಇರುವಾಗ ಮಾಘಮಾಸದ ಪ್ರಾತಃಕಾಲದಲ್ಲಿ ಯಾವ ಮನುಷ್ಯನು ನದಿಯಲ್ಲಿ ಸ್ನಾನ ಮಾಡುತ್ತಾನೋ
ಅತನು ಸಕಲ ಪಾಪಗಳಿಂದಲೂ ವಿಮುಕ್ತನಾಗುವನು ಜನ್ಮಾಂತರದಲ್ಲಿ ಮೋಕ್ಷವನ್ನು ಹೊಂದುತ್ತಾನೆ. ಹಾಗೆಯೇ
ಮಾಘಮಾಸದಲ್ಲಿ ಸೂರ್ಯನು ಮಕರ ರಾಶಿಯಲ್ಲಿದ್ದಾಗ ಪ್ರಯಾಗ ಕ್ಷೇತ್ರದಲ್ಲಿ ಮಾನವನು ಸ್ನಾನ ಮಾಡಿದರೆ
ಆತನಿಗೆ ವೈಕುಂಠ ಪ್ರಾಪ್ತಿಯಾಗುತ್ತದೆ.
ಅಷ್ಟೇ ಅಲ್ಲ,
ಜೀವನದಿ ಇಲ್ಲದಿದ್ದರೂ ಕಡೆಗೆ ಗೋದಾವರಿಯಲ್ಲಿ ಪಾದಗಳು ಮುಳುಗುವಷ್ಟು ನೀರಿರುವ ಕಡೆಯಾಗಲಿ,
ಸರೋವರದಲ್ಲಿ ಆಗಲಿ, ಮಾಘಮಾಸದ ಪ್ರಾತಃಕಾಲದ ಸ್ನಾನ ಉನ್ನತ ಫಲವನ್ನು ಕೊಡುವುದಲ್ಲದೇ, ಸಮಸ್ತ
ಪಾಪಗಳು ಬಿಟ್ಟು ಹೋಗುತ್ತವೆ.
ಎರಡನೇ ದಿನ ಸ್ನಾನ
ಮಾಡಿದರೆ ವಿಷ್ಣುಲೋಕಕ್ಕೆ ಹೋಗುತ್ತಾರೆ. ಮೂರನೆಯ
ದಿನದ ಸ್ನಾನದಿಂದ ವಿಷ್ಣು ದರ್ಶನ
ಉಂಟಾಗುತ್ತದೆ. ಮಾಘಮಾಸದಲ್ಲಿ ಪ್ರಯಾಗ ಕ್ಷೇತ್ರದಲ್ಲಿರುವ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ
ಆ ಮನುಷ್ಯನಿಗೆ ಮರುಜನ್ಮ ಇರುವುದೇ ಇಲ್ಲ.
ದೇವಿ! ಮಾಘ ಮಾಸದ ಸ್ನಾನ ಫಲ ಇಂತಿಷ್ಟೆಂದು ಹೇಳಲು
ಆಗುವುದಿಲ್ಲ. ಮಾಘಮಾಸದಲ್ಲಿ ಭಾಸ್ಕರನು ಮಕರ ರಾಶಿಯಲ್ಲಿರುವಾಗ ಯಾವುದು ಅನುಕೂಲಕರವೋ, ಅಂದರೆ
ನದಿಯಾಗಲಿ, ಕೆರೆಯಾಗಲಿ, ಬಾವಿಯಾಗಲಿ, ಕಾಲುವೆಯಾಗಲಿ, ಗೋಪಾದ ಮುಳುಗುವಷ್ಟು ನೀರಿರುವ ಕಡೆಯಾಗಲಿ
ಪ್ರಾತಃಕಾಲದಲ್ಲಿ ಸ್ನಾನ ಮಾಡಿ, ಸೂರ್ಯ ಪರಮಾತ್ಮನಿಗೆ ನಮಸ್ಕಾರ ಮಾಡಿ, ದಾನ-ಧರ್ಮ ಮಾಡಿ, ಶಿವನ
ಆಲಯದಲ್ಲಾಗಲಿ, ವಿಷ್ಣು ಆಲಯದಲ್ಲಾಗಲಿ ದೀಪ ಹಚ್ಚಿ, ಭಕ್ತಿ-ಶ್ರದ್ಧೆಗಳಿಂದ ಪೂಜೆ ಮಾಡಿದ
ಮನುಷ್ಯನಿಗೆ ಬರುವ ಪುಣ್ಯಫಲ ಅಷ್ಟಿಷ್ಟಲ್ಲ.
ಯಾವ ಮನುಷ್ಯನಾದರೂ
ತನ್ನ ಶರೀರದಲ್ಲಿ ಶಕ್ತಿ ಇಲ್ಲದೆ ನಡೆಯಲಾಗದಂಥವನು ಗೋಪಾದ ಮುಳುಗುವಷ್ಟು ನೀರಿರುವ
ನದಿಯಲ್ಲಾಗಲಿ, ಕಡೆಗೆ ಬಾವಿಯಲ್ಲಾಗಲಿ ಸ್ನಾನ ಮಡಿ ಶ್ರೀಹರಿ ದರ್ಶನ ಮಾಡಿದರೆ ಆತ ಎಂಥದ್ದೇ
ಕಷ್ಟವನ್ನು ಅನುಭವಿಸುತ್ತಿದ್ದರೂ, ಆ ಕಷ್ಟಗಳೆಲ್ಲಾ ಮೋಡದಂತೆ ಚದುರಿಹೋಗಿ ವಿಮುಕ್ತನಾಗುತ್ತಾನೆ.
ಯಾರಾದರೂ ತಿಳಿದೋ, ತಿಳಿಯದೆಯೋ ಮಾಘಮಾಸದಲ್ಲಿ ಸೂರ್ಯನು ಮಕರರಾಶಿಯಲ್ಲಿರುವಾಗ ನದೀಸ್ನಾನ
ಮಾಡಿದರೆ ಆತನಿಗೆ ಅಶ್ವಮೇಧ ಯಾಗ ಮಾಡಿದ ಫಲ ದೊರೆಯುತ್ತದೆ. ಅಷ್ಟೇ ಅಲ್ಲದೆ, ಮಾಘಮಾಸವಿಡೀ
ಪ್ರಾತಃ ಕಾಲದಲ್ಲಿ ನದೀ ಸ್ನಾನ ಮಾಡಿ ಶ್ರೀಮನ್ನಾರಾಯಣನನ್ನು ಪೂಜಿಸಿ ಸಾಯಂಕಾಲದ ಸಮಯದಲ್ಲಿ ಮಾಘ
ಪುರಾಣ ಓದಿ, ಶಿವನ ಅಲಯದಲ್ಲಾಗಲಿ, ವಿಷ್ಣು ಅಲಯದಲ್ಲಾಗಲಿ ದೀಪ ಹಚ್ಚಿ, ಪ್ರಸಾದ ಸೇವಿಸಿದರೆ
ಆತನಿಗೆ ಖಂಡಿತವಾಗಿ ವಿಷ್ಣುಲೋಕ ಪ್ರಾಪ್ತವಾಗುವುದಲ್ಲದೇ, ಪುನರ್ಜನ್ಮ ಎಂದಿಗೂ ಬರುವುದಿಲ್ಲ.
ಹೀಗೆ ಪುರುಷರಷ್ಟೇ ಅಲ್ಲದೇ, ಸ್ತ್ರೀಯರು ಕೂಡ ಆಚರಿಸಬಹುದು. ಮಾನವ ಜನ್ಮವೆತ್ತಿದ ನಂತರ ಮತ್ತೆ
ಘೋರ ಪಾಪಗಳನ್ನು ಮಾಡಿ, ಮರಣಾ ನಂತರದಲ್ಲಿ ಕ್ರೂರವಾದ ನರಕ ಯಾತನೆಯನ್ನು ಅನುಭವಿಸುವುದಕ್ಕಿಂತಾ,
ತಾನು ಬದುಕಿರುವಷ್ಟು ಕಾಲ ಮಾಘಮಾಸದಲ್ಲಿ ನದೀಸ್ನಾನ ಮಾಡಿ ದಾನ-ಧರ್ಮ ಪುಣ್ಯಗಳನ್ನಾಚರಿಸಿ
ವೈಕುಂಠ ಹೊಂದುವುದು ಶ್ರೇಯಸ್ಕರವಲ್ಲವೇ, ಇದೇ ಮನುಷ್ಯನಿಗೆ ಮೋಕ್ಷವನ್ನು ಪಡೆಯಲು ಶ್ರೇಷ್ಠವಾದ
ಮಾರ್ಗ ಓ ಪಾರ್ವತಿಯೇ! ಅವನು ಅನುಭವಿಸುವ ನರಕ
ಯಾತನೆಗನ್ನು ಕುರಿತು ವಿವರಿಸುತ್ತೇನೆ ಸಾಮಧಾನವಾಗಿ ಕೇಳಿ.
ನಾನು ತಿಳಿಯಪಡಿಸಿದ
ರೀತಿಯಲ್ಲಿ ಯಾವ ಮನುಷ್ಯನು ಮಾಘಮಾಸದ ಪ್ರಾತಃಕಾಲದಲ್ಲಿ ನದೀಸ್ನಾನ ಮಾಡಿ, ಜಪವನ್ನಾಗಲಿ, ವಿಷ್ಣು
ಪೂಜೆಯನ್ನಾಗಲಿ ಯಥಾಶಕ್ತಿ ದಾನಾದಿ ಪುಣ್ಯಗಳನ್ನು ಮಾಡುವುದಿಲ್ಲವೋ ಅಂಥವನು ಮರಣಾನಂತರದಲ್ಲಿ
ಸಮಸ್ತ ನರಕಬಾಧೆಗಳನ್ನು ಅನುಭವಿಸುತ್ತಾ ಕುಂಭೀವಸವೆಂಬ ನರಕದಲ್ಲಿ ತಳ್ಳಲ್ಪಡುತ್ತಾನೆ.
ಅಗ್ನಿಯಲ್ಲಿ ಸುಡಲ್ಪಡುತ್ತಾನೆ ಗರಗಸದಿಂದ, ಖಡ್ಗದಿಂದ ಕತ್ತರಿಸಲ್ಪಡುತ್ತಾನೆ. ಕುತಕುತ ಕುದಿಯುವ
ಎಣ್ಣೆಯಲ್ಲಿ ಹಾಕಲ್ಪಡುತ್ತಾನೆ. ಭಯಂಕರವಾದ ಯಮಕಿಂಕರದಿಂದ ಪೀಡಿಸಲ್ಪಡುತ್ತಾನೆ.
ಯಾವ ಸ್ತೀ ಬೆಳಗಿನ
ಜಾವವೇ ಎದ್ದು ಕಾಲಕೃತ್ಯಗಳನ್ನು ಪೂರೈಸಿಕೊಂಡು ನದಿಗೆ ಹೋಗಿ ಸ್ನಾನ ಮಾಡಿ, ಸೂರ್ಯ
ನಮಸ್ಕಾರ-ವಿಷ್ಣುಪೂಜೆ ಮಾಡಿ ತನ್ನ ಪತಿ ಪಾದಳಿಗೆ ನಮಸ್ಕರಿಸಿ, ಅತ್ತೆ-ಮಾವಂದಿರ ಸೇವೆ ಮಾಡುವಳೋ
ಅಂಥ ಉತ್ತಮ ಸ್ತ್ರೀ ಮತ್ತೈದೆತನದಿಂದ ಬಾಳಿ, ಇಹಪರದಲ್ಲಿ ಸಕಲ ಸೌಖ್ಯಗಳನ್ನು ಅನುಭವಿಸುವಳು. ಇದು
ಸತ್ಯಾತಿಸತ್ಯ ಮಾಘಮಾಸದಲ್ಲಿ ಯಾವ ಸ್ತ್ರೀ ಹಾಗೆ ಮಾಡುವುದಿಲ್ಲವೋ, ಅಂತಹ ಸ್ತ್ರೀಯ ಮುಖವನ್ನು
ನೋಡಿದ ಕೂಡಲೇ ಸಕಲ ದೋಷಗಳು ಉಂಟಾಗುವುದಲ್ಲದೇ, ಆಕೆಯು ಹಂದಿ, ನಾಯಿ ಜನ್ಮ ತಾಳಿ ದೀನ
ಸ್ಥಿತಿಯನ್ನು ತಲುಪುತ್ತಾಳೆ.
ಮಾಘಮಾಸ ಸ್ನಾನಕ್ಕೆ
ವಯೋಮಿತಿ ಇಲ್ಲ. ಬಾಲಕನಾದರೂ, ಯುವಕನಾದರೂ, ವೃದ್ಧರಾದರೂ, ಸ್ತ್ರೀಯಾದರೂ, ಬಾಲಕಿಯಾದರೂ,
ಯಾನವವತಿಯಾದರೂ, ಯಾವ ಆಶ್ರಮದವರಾದರೂ, ಯಾವ ಕುಲದವರಾದರೂ ಕೂಡ ಮಾಘಮಾಸ ಸ್ನಾನವನ್ನು ಮಾಡಬಹುದು.
ಈ ಮಾಸದಲ್ಲಿ ತುಂಬ ನೇಮ-ನಿಷ್ಠೆಗಳಿಂದ ಇದ್ದಲ್ಲಿ ಕೋಟಿ ಯಜ್ಞ ಮಾಡಿದಷ್ಟು ಪುಣ್ಯ ಉಂಟಾಗುತ್ತದೆ.
ಇದು ಎಲ್ಲರಿಗೂ ಶುಭಕರ ಮತ್ತು ಶ್ರೇಯೋದಾಯಕವಾದದ್ದು.
ಪಾರ್ವತಿ! ಕೆಟ್ಟವರ ಸಹವಾಸ ಮಾಡಿದವರೂ, ಬ್ರಹ್ಮಹತ್ಯಾದಿ
ಮಹಾಪಾಪಗಳನ್ನು ಮಾಡಿದವರೂ, ಬಂಗಾರವನ್ನು ಕದ್ದವರೂ, ಗುರುಪತ್ನಿಯೊಂದಿಗೆ ದೈಹಿಕ
ಸಂಬಂಧವುಳ್ಲವರೂ, ಮಧ್ಯ ಸೇವಿಸಿ ಪರಸ್ತ್ರೀಯೊಂದಿಗೆ ಸಂಪರ್ಕ ಹೊಂದುವವರೂ, ಪ್ರಾಣಿಹಿಂಸೆ
ಮಾಡುವವರೂ ಮಾಘಮಾಸದಲ್ಲಿ ನದೀಸ್ನಾನ ಮಾಡಿ ವಿಷ್ಣುವನ್ನು ಪೂಜಿಸಿದರೆ ಅವರ ಸಮಸ್ತ ಪಾಪಗಳು ನಶಿಸಿ
ಹೋಗುವುದಲ್ಲದೆ, ಜನ್ಮಾಂತರದಲ್ಲಿ ವೈಕುಂಠ ಪ್ರಾಪ್ತಿಯಾಗುವುದು ಹಾಗೂ ಕುಲಭ್ರಷ್ಟನಾದವನು,
ಕಿಂಚಿತ್ ಮಾತ್ರವಾದರೂ ದಾನ-ಧರ್ಮಗಳನ್ನು ಮಾಡದವನು. ಪರರನ್ನು ವಂಚಿಸಿ ಅವರ ಬಳಿ ಇದ್ದ ಧನವನ್ನು
ಅಪಹರಿಸಿದವನು, ಸುಳ್ಳು ಹೇಳಿ ಕಾಲ ಕಳೆಯುವವನು, ಮಿತ್ರದ್ರೋಹಿ, ಹತ್ಯೆ ಮಾಡುವವನು, ಭಕ್ತರನ್ನು
ಹಿಂಸಿಸುವವನು, ಸದಾ ವ್ಯಭಿಚಾರ ಗೃಹಗಳಲ್ಲಿ ಓಡಾಡಿ, ತಾಳಿ ಕಟ್ಟಿದ ಮಡದಿ-ಮಕ್ಕಳಿಗೆ ಕಷ್ಟ
ಕೊಡುವವನು. ರಾಜದ್ರೋಹಿ, ಗುರುದ್ರೋಹಿ, ದೈವಭಕ್ತಿ ಇಲ್ಲದವನು, ದೈವಭಕ್ತರನ್ನು ಹೀಯಾಳಿಸುವವನು.
ದುರಹಂಕಾರ ಉಳ್ಳವನಾಗಿ ತಾನೇ ದೊಡ್ಡವನೆಂಬ ಅಹಂಭಾವನೆಯಿಂದ ದೈವಕಾರ್ಯಗಳನ್ನು ಹಾಳು ಮಾಡುತ್ತಾ,
ದಂಪತಿಗಳ ನಡುವೆ ವಿಭೇದಗಳನ್ನು ಉಂಟುಮಾಡಿ, ಸಂಸಾರವನ್ನು ಬೇರ್ಪಡಿಸುವವನು, ಮನೆಗಳನ್ನು
ಹಾಳುಮಾಡುವವನು, ಕೆಟ್ಟ ಕೆಲಸಗಳಿಗೆ ಪ್ರೋತ್ಸಾಹಿಸುತ್ತಿರುವವನು – ಈ ರೀತಿಯಾದ ಪಾಪಕರ್ಮಗಳನ್ನು
ಮಾಡುವವನೂ ಸಹಿತ ಯಾವುದೇ ಪ್ರಾಯಶ್ಚಿತ್ತ ಕಾರ್ಯಗಳನ್ನು ಮಾಡದೆಯೇ ಮಾಘಮಾಸದಲ್ಲಿ ಸ್ನಾನ ಮಾಡಿದ
ಮಾತ್ರಕ್ಕೆ ಪವಿತ್ರನಾಗುವನು.
ದೇವಿ! ಇನ್ನು ಅದರ
ಮಹಿಮೆಯನ್ನು ವಿವರಿಸುತ್ತೇನೆ ಕೇಳು, ತಿಳಿದೂ ತಿಳಿದೂ ಪಾಪ ಮಾಡವವನೂ,ಕ್ರೂರಕರ್ಮಗಳನ್ನು
ಅಚರಿಸುವವನು, ಲಜ್ಜೆ ಬಿಟ್ಟು ತಿರುಗಾಡುವವನು, ಯಾವ ಮನುಷ್ಯ ಭಕ್ತಿ-ಶ್ರದ್ಧೆಗಳಿಂದ ಮಾಘಮಾಸದ
ಮೊದಲಿನಿಂದ ಕೊನೆಯವರೆಗೂ ಸ್ನಾನವನ್ನು ಮಾಡುವ ಸಂಕಲ್ಪ ಮಾಡುತ್ತಾನೋ, ಅಂತಹ ಮನುಷ್ಯನಿಗೆ ಪಾಪಗಳು
ತೊಲಗಿ, ಯಾವುದೇ ದೋಷವು ಉಂಟಾಗದೇ ಪರಿಶುದ್ಧನಾಗುತ್ತಾನೆ ಮತ್ತು ಆತನು ಮೋಕ್ಷವನ್ನು
ಪಡೆಯುತ್ತಾನೆ.
ಶಾಂಭವಿ! ಹನ್ನೆರಡು ಮಾಸಗಳಲ್ಲಿ ಮಾಘಮಾಸ ಅತ್ಯಂತ
ಪವಿತ್ರವಾದುದು. ಸಕಲ ದೇವತೆಗಳಿಗೆ ಶ್ರೀಮನ್ನಾರಾಯಣನು ಪ್ರಮುಖನು ಎಲ್ಲ ಶಾಸ್ತ್ರಗಳಲ್ಲಿಯೂ ವೇದ
ಪ್ರಧಾನವಾದುದದು. ಎಲ್ಲ ಪರ್ವತಗಳಲ್ಲಿಯೂ ಮೇರು ಪರ್ವತ ಉನ್ನತವಾದುದು. ಹಾಗೆಯೇ ಎಲ್ಲ ಮಾಸಗಳಲ್ಲಿ
ಮಾಘಮಾಸ ಶ್ರೇಷಠವಾದುದರಿಂದ ಆ ಮಾಸದಲ್ಲಿ ಆಚರಿಸುವ ಯಾವ ಅಲ್ಪಕಾರ್ಯವೇ ಅದರೂ ಉನ್ನತ ಫಲಗಳನ್ನು
ಉಂಟಾಗಿಸುತ್ತದೆ. ಚಳಿಯೆಂದು ಸ್ನಾನ ಮಾಡದ ಮನುಷ್ಯನು ತನಗೆ ಲಭ್ಯವಾಗಿರುವ ಪುಣ್ಯಫಲವನ್ನು
ಕಾಲಿನಿಂದ ಒದ್ದಂತೆಯೇ ಆಗುತ್ತದೆ. ವಯೋವೃದ್ಧರೂ, ರೋಗಿಗಳೂ ಚಳಿಯಲ್ಲಿ ತಣ್ಣೀರ ಸ್ನಾನ
ಮಾಡಲಾರರು. ಆದ್ದರಿಂದ ಅಂಥವರಿಗೆ ಒಣಗಿದ ಕಟ್ಟಿಗೆಗಳನ್ನು ತಂದು ಬೆಂಕಿ ಮಾಡಿ, ಅವರಿಗೆ ಚಳಿ
ಕಾಯಿಸಿ ನಂತರ ಸ್ನಾನ ಮಾಡಿಸಿದರೆ ಆ ಸ್ನಾನದ ಫಲವನ್ನು ಪಡೆಯಬಲ್ಲರು. ಇದ್ಯಾವುದೂ ಅಲ್ಲದೇ, ಚಳಿ
ಕಾಸಿದವರು ಸ್ನಾನ ಮಾಡಿ ಶ್ರೀಹರಿಯ ದರ್ಶನ ಮಾಡಿದ ನಂತರ ಅಗ್ನಿದೇವನಿಗೆ. ಸೂರ್ಯ ಪರಮಾತ್ಮನಿಗೆ
ನಮಸ್ಕಾರ ಮಾಡಿ, ನೈವೇದ್ಯವಿಡಬೇಕು. ಮಘಮಾಸದಲ್ಲಿ ಪರಿಶುದ್ಧನಾದ ಒಬ್ಬ ಬಡ ವ್ಯಕ್ತಿಗೆ ವಸ್ತ್ರದಾನ
ಮಾಡಿದರೆ ಉತ್ತಮ ಫಲ ಉಂಟಾಗುತ್ತದೆ.
ಈ ರೀತಿಯಾಗಿ
ಆಚರಿಸುವವರುನ್ನು ನೋಡಿ, ಯಾವ ಮನುಷ್ಯನಾದರೂ ಅಸಹ್ಯಿಸಿಕೊಂಡಲ್ಲಿ, ಇಲ್ಲವೆ ಅಡಚಣೆ
ಉಂಟುಮಾಡಿದಲ್ಲಿ ಮಹಾಪಾಪಗಳು ಪ್ರಾಪ್ತವಾಗುತ್ತವೆ, ಮಾಘಮಾಸ ಪ್ರಾರಂಭವಾದೊಡನೆ ವೃದ್ಧರಾದ
ತಂದೆ-ತಾಯಿಯರನ್ನು ತನ್ನ ಮಡದಿಯನ್ನು, ಇಲ್ಲವೇ ಕುಟುಂಬ ಸದಸ್ಯರೆಲ್ಲರೂ ಮಾಘಮಾಸ ಸ್ನಾನ
ಮಾಡುವಂತೆ ಯಾವ ಮನುಷ್ಯ ಮಾಡುತ್ತಾನೋ ಆತನಿಗೆ ಮಾಘಮಾಸ ಫಲ ಖಂಡಿತ ಉಂಟಾಗುತ್ತದೆ, ಆ ರೀತಿಯಾಗಿಯೇ
ಬ್ರಾಹ್ಮಣನಿಗಾಗಲಿ, ವೈಶ್ಯನಿಗಾಗಲಿ, ಕ್ಷತ್ರಿಯನಿಗಾಗಲಿ, ಶೂದ್ರನಿಗಾಗಲಿ ಮಾಘಮಾಸ ಸ್ನಾನ
ಮಾಡುವಂತೆ ಹೇಳಿದರೆ ಅವರು ಪುಣ್ಯಲೋಕಕ್ಕೆ ಹೋಗುವುದಕ್ಕೆ ಯಾವುದೇ ಅಡಚಣೆ ಇರುವುದಿಲ್ಲ.
ಮಾಘಮಾಸಸ್ನಾನ ಮಾಡಿದವರನ್ನಾಗಲಿ, ಮಾಡಲಾಗದೇ ಇರುವವರನ್ನಾಗಲಿ, ಪ್ರೋತ್ಸಾಹಿಸುವವರನ್ನಾಗಲಿ ನೋಡಿ
ಆಕ್ಷೇಪಿಸುವ, ಪರಿಹಾಸ ಮಾಡಬಾರದು. ಶಕ್ತಿಯಿಲ್ಲದವರು ಮಾಘಮಾಸದಲ್ಲಿ ಕೈ-ಕಾಲು-ಮುಖ ತೊಳೆದುಕೊಂಡು
ತಲೆಯ ಮೇಲೆ ನೀರು ಪ್ರೋಕ್ಷಿಸಿಕೊಂಡು ಸೂರ್ಯನಮಸ್ಕಾರ ಮಾಡಿ, ಮಾಘಪುರಾಣವನ್ನು ಓದುವುದಾಗಲಿ,
ಕೇಳುವುದಾಗಲಿ ಮಾಡಿದರೆ ಜನ್ಮಾಂತರದಲ್ಲಿ ವಿಷ್ಣು ಸಾನ್ನಿಧ್ಯವನ್ನು ಹೊಂದುವರು, ಪಾಪ, ದರಿದ್ರ
ಕಳೆದುಹೋಗಬೇಕೆಂದರೆ ಮಾಘಮಾಸ ಸ್ನಾನಕ್ಕಿಂತಲೂ ಮತ್ತೊಂದು ಪುಣ್ಯಕಾರ್ಯ ಯಾವುದೂ ಇಲ್ಲ.
ಮಾಘಮಾಸದಿಂದ ಉಂಟಾಗುವ ಫಲ ಎಂಥದ್ದೆಂದರೆ, ನೂರು ಅಶ್ವಮೇಧಯಾಗ ಮಾಡಿ, ಮಹಾಪಾತಕಗಳು ಮಾಡಿದ
ಮನುಷ್ಯನಾದರೂ ಮಾಘಮಾಸದಲ್ಲಿ ಕಡು ನಿಷ್ಠೆಯಿಂದ ಇದ್ದರೆ ರೌರವಾದಿ ನರಕಗಳಿಂದ ವಿಮುಕ್ತನಾಗುತ್ತಾನೆ.
“ಅದ್ದರಿಂದ ಓ ಪಾರ್ವತಿ ಮಾಘಮಾಸ ಸ್ನಾನದಿಂದ ಎಂತಹ ಫಲ ಉಂಟಾಗುವುದೆಂದು ವಿವರಿಸಿ ಹೇಳಿದೆ. ನೀನೂ
ಕೂಡ ನಾನು ಹೇಳಿದ ರೀತಿ ಅಚರಿಸು” ಎಂದು ಹೇಳಿದನು.
ಇತಿ ಪದ್ಮಪುರಾಣೇ
ಮಾಘಮಾಸ ಮಹಾತ್ಮೇ
ತ್ರಯೋದಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಚತಂರ್ದಶೋಧ್ಯಾಯಃ
ಹದಿನಾಲ್ಕನೇ ದಿನದ ಪಾರಾಯಣ
ಬ್ರಾಹ್ಮಣ ಸ್ತ್ರಿ ಪತಿಯೊಂದಿಗೆ ಸ್ವರ್ಗಕ್ಕೆ ತೆರಳಿದ್ದು
“ಓ ದಿಲೀಪ ಮಹಾರಾಜನೇ! ಮಾಘಮಾಸದಲ್ಲಿ ಸ್ನಾನ ಮಾಡುವುದರಿಂದ ಉಂಟಾಗುವ
ಫಲವನ್ನು ಪಾರ್ವತಿಗೆ ಈಶ್ವರನು ಹೇಳಿದ್ದನ್ನು ಕೇಳಿದೆಯಲ್ಲ, ಹಾಗೆಯೇ ಒಬ್ಬ ವಿಪ್ರಕನ್ಯೆಯು ತನ್ನ
ಪತಿಯೊಂದಿಗೆ ಹೇಗೆ ವಿಷ್ಣು ಸಾಯುಜ್ಯವನ್ನು ಹೊಂದಿದರೋ ವಿವರಿಸುತ್ತೇನೆ” ಎಂದ ವಸಿಷ್ಠರು ಹೀಗೆ ಹೇಳುತ್ತಾರೆ.
ಹಿಂದೆ ಕಾಶ್ಮೀರದಲ್ಲಿರುವ ಒಂದು ಗ್ರಾಮದಲ್ಲಿ ಸುಬುದ್ಧಿ ಎಂಬ ಬ್ರಾಹ್ಮಣನಿದ್ದನು. ಆತನು
ಚುತುರ್ವೇದಗಳನ್ನು ವ್ಯಾಸಂಗ ಮಾಡಿ. ಅರ್ಥತಾತ್ಪರ್ಯಗಳನ್ನು ಸಹಿತ ವರ್ಣಿಸಬಲ್ಲ
ಪಂಡಿತನಾಗಿದ್ದಾನು. ಸುಬುದ್ಧ ಎಂಬ ಹೆಸರಿಗೆ ತಕ್ಕಂತೆ, ವಿದ್ಯೆಯಲ್ಲಿ ಉನ್ನತ ಪಾಂಡಿತ್ಯ
ಪಡೆದಿದ್ದನು. ಹಿರಿಯರುನ್ನು ಗೌರವಿಸುತ್ತ, ಭೂತದಯೆಯುಳ್ಳವನಾಗಿ ಎಲ್ಲರ ಮೆಚ್ಚುಗೆಗೂ
ಪಾತ್ರನಾಗಿದ್ದನು. ಆತ ದೊಡ್ಡ ಪಂಡಿತನಾದುದರಿಂದ ಅನೇಕ ಮಂದಿ ಇತರ ಪಂಡಿತರು ಆತನ ಬಳಿ
ಶಿಷ್ಯರಾಗಿದ್ದರು. ಆ ಬ್ರಾಹ್ಮಣನಿಗೆ ಹದಿನಾರು ವರ್ಷದ ಮಗಳಿದ್ದಳು. ಆಕೆಯ ಹೆಸರು ಸುಶೀಲ. ಆಕೆಯು
ಬಹು ರೂಪವತಿಯಾಗಿದ್ದಳು. ಸುಗುಣರಾಶಿಯೂ ಆಗಿದ್ದ ತನ್ನ ಮಗಳನ್ನು ಯಾರಿಗೆ ಕೊಟ್ಟು ಮದುವೆ
ಮಾಡುವುದೆಂದು ತಂದೆಯಾದ ಸುಬುದ್ಧ ಯೋಚಿಸುತ್ತಿದ್ದನು.
ಒಂದು ದಿನ ಸುಮಿತ್ರನೆಂಬ ಶಿಷ್ಯನೊಬ್ಬ ಗುರುಗಳ ಮನೆಯಲ್ಲಿ ನಡೆಯುವ ದೈವಕಾರ್ಯಕ್ಕೆ ಪೂಜಾ
ದ್ರವ್ಯವನ್ನು ತರುವುದಕ್ಕಾಗಿ ಕಾಡಿಗೆ ಹೊರಟುನಿಂತಾಗ ದಾರಿಯಲ್ಲಿರುವ ಉದ್ಯಾನವನದಲ್ಲಿ ಸುಶೀಲ
ತನ್ನ ಸ್ನೇಹಿತೆಯರೊಂದಿಗೆ ಚೆಂಡಾಟ ಆಡುತ್ತಿದ್ದಳು ಆ ಚಂಡು ಹೊರೆಗೆ ಬಿದ್ದುದರಿಂದ
ಉದ್ಯಾನವನದಿಂದ ಹೊರಬಂದ ಸುಶೀಲ ಸುಮಿತ್ರನನ್ನು ನೋಡಿದಳು.
ಸುಮಿತ್ರನೂ ಕೂಡ ಯುಕ್ತ ವಯಸ್ಸಿನವನಾಗಿದ್ದು ಸೊಗಸಾದ ಅಂಗಸೌಷ್ಠವ ಉಳ್ಳವನು. ವಿಶಾಲವಾದ
ಪಕ್ಷಸ್ಥಳ ಉಳ್ಳವನಾಗಿ, ಬಂಗಾರದ ಕಾಂತಿಯುಳ್ಳ ರೂಪವಂತನು. ಆತನ ಅಂದವನ್ನು ನೋಡಿದ ಕೂಡಲೇ ಸುಶೀಲ
ಬೆರಗಾಗಿ ಹೋದಳು. ಆತನನ್ನೇ ತದೇಕ ದೃಷ್ಟಿಯಿಂದ ನೋಡಿ ಆತನ ಹಿಂದೆ ಬಿದ್ದಳು. ಸುಮಿತ್ರನು ತನ್ನ
ಕಾರ್ಯಾರ್ಥವಾಗಿ ಬಹಳ ದೂರ ಹೊರಟು ಹೋದನು. ಹಾಗೆ ಸ್ವಲ್ಪ ದೂರ ಹೋಗುವ ಹೊತ್ತಿಗೆ ಒಂದು ಸರೋವರದ
ತುಂಬ ಕಮಲದ ಹೂಗಳು ಅರಳಿದ್ದವು. ದುಂಬಿಗಳು ಗುಂಪಾಗಿ ಹಾರಿ ಕಮಲದ ಹೂವಿನಲ್ಲಿರುವ ಮಧುವನ್ನು
ಹೀರುತ್ತ ಮತ್ತೇರಿ ಹಾರುತ್ತಿದ್ದವು. ಅಲ್ಲಿರುವ ವಿವಿಧ ಫಲವೃಕ್ಷಗಳು ಹೂವುಗಳಿಂದ, ಹಣ್ಣುಗಳಿಂದ
ತುಂಬಿ ತುಳುಕಾಡುತ್ತಿದ್ದವು. ಕೋಗಿಲೆಗಳು ತಮ್ಮ ಮಧುರಕಂಠ ತರೆದು ಹಾಡುತ್ತಿದ್ದವು. ಗಂಡು
ನವಿಲುಗಳು ಹೆಣ್ಣು ನವಿಲುಗಳಿಗೆ ತಮ್ಮ ಅಂದವನ್ನು ತೋರಿಸುವುದಕ್ಕಾಗಿ ತಮ್ಮ ತಮ್ಮ ಗರಿಗಳನ್ನು
ಬಿಚ್ಚಿ ನರ್ತಿಸುತ್ತಿದ್ದವು. ಸುಮಿತ್ರನು ದೂರ ಪ್ರಯಾಣದಿಂದ ದಣಿದಿದ್ದುದರಿಂದ ಆ ಹಿತವಾದ
ನೀರನ್ನು ಕುಡಿದು ಮರದ ನೆರಳಿನಲ್ಲಿ ವಿಶ್ರಮಿಸಿದನು. ಹಿಂಬಾಲಿಸಿ ಬಂದ ಸುಶೀಲ ಅಲ್ಲಿ ಪ್ರಕೃತಿಯ
ರಮಣೀಯತೆಯನ್ನು ನೋಡಿ ಮಲ್ಲಿಗೆ, ಜಾಜಿ, ಸಂಪಿಗೆ ಹೂಗಳ ಪರಿಮಳಕ್ಕೆ ಮನ್ಮಥ ವಾಂಛೆಯಿಂದ
ಅಮಲುಗೊಂಡವಳಾಗಿ ಮರದ ಕೆಳಗೆ ವಿಶ್ರಮಿಸುತ್ತಿದ್ದ ಸುಮಿತ್ರನ ಸಮೀಪಕ್ಕೆ ಬಂದು ನಿಂತಳು.
ಸುಮಿತ್ರನ ಸೌಂದರ್ಯವನ್ನು ಕಣ್ಣಾರೆ ನೋಡಿ ಸ್ಪಂದಿಸಿದಳು. ಅಲ್ಲದೆ ತಾನೇ ಸುಮಿತ್ರನನ್ನು
ಮಾತನಾಡಿಸಿದಳು.
“ಓಂ ಅಂದಗಾರ! ಸುಮಿತ್ರ ನಿನ್ನನ್ನು ನೋಡಿದಾಗಿನಿಂದಲೂ ನನ್ನ ಮನಸ್ಸು
ನನ್ನ ಹಿಡಿತದಲ್ಲಿಲ್ಲ. ಅದಕ್ಕೆ ನಿನ್ನ ಹಿಂದೆ ಇಷ್ಟು ದೂರ ಬಂದೆ. ಈ ಏಕಾಂತ ಪ್ರದೇಶದಲ್ಲಿ
ನನ್ನನ್ನು ಅಪ್ಪಿಕೊಂಡು, ನನ್ನೊಂದಿಗೆ ಕೂಡು. ನಿನ್ನ ವಯಸ್ಸು, ನನ್ನ ವಯಸ್ಸು ಸರಿಸಮಾನ, ಇಬ್ಬರೂ
ಆಯ್ದು ಕುದುರಿಸಿದ ಜೋಡಿಯಂತಿದ್ದೇವೆ. ರತಿ-ಮನ್ಮಥರಂತೆ ಒಂದಾಗಿ ಬಿಡೋಣ, ಆ ಮರದ ಮೇಲಿರಿದ ಆ
ದುಂಬಿಗಳ ಜೋಡಿಯನ್ನು ನೋಡು ಹೇಗಿವೆಯೋ, ಆದ್ದರಿಂದ ಬಾ ನನ್ನ ಯೌವನ ಬಿಂಕವನ್ನು ಆಘ್ರಾಣಿಸು.
ಸಮಯವನ್ನು ವೃಥಾವ್ಯರ್ಥ ಮಾಡಬೇಡ. ನನ್ನ ಸುಕೋಮಲವಾದ ಶರೀರ, ಸೂಕ್ಷ್ಮವಾದ ಅಂಗಾಗಗಳನ್ನು ನಿನಗೆ
ಅರ್ಪಿಸುತ್ತೇನೆ. ನೀನು ಮನ್ಮಥನಂತೆ ಬಂದು ನನ್ನನ್ನು ಅಪ್ಪಿಕೋ...” ಎಂದು ಪರಿಪರಿ ವಿಧಗಳಿಂದ ಆ ವಿಪ್ರಕುಮಾರಿಯು
ಪ್ರಚೋದಿಸಿದಳು.
ಆಗ ಸುಮಿತ್ರನು ಅಚೇತನನಾಗಿ ಬಾಯಿಯಿಂದ ಮಾತು ಬಾರದೆ ಶಿಲಾವಿಗ್ರಹದಂತೆ ನಿಂತನು. ಸ್ವಲ್ಪ
ಹೊತ್ತಿನ ಬಳಿಕ – “ಬಾಲೆ! ನಿನ್ನ ಮಾತು ಕೇಳುತ್ತಿದ್ದರೆ ಹುಚ್ಚಿಯಂತಿದ್ದೀಯೆ,
ನಿನಗ್ಯಾವುದಾದರೂ ಗ್ರಹ ಆವರಿಸಿದೆಯೇ ಎಂಬ ಅನುಮಾನ ಉಂಟಾಗುತ್ತಿದೆ. ಅದೂ ಅಲ್ಲದೆ, ನೀನು ನನ್ನ
ಗುರುಪುತ್ರಿ ನಾನು ನಿನಗೆ ಅಣ್ಣನಾಗುತ್ತೇನೆ, ನೀನು ನನಗೆ ತಂಗಿಯ ಸಮಾನಳು. ನೀನು ಎಷ್ಟು
ಅಂದಗಾತಿಯಾದರೂ ಎಲ್ಲೆ ಮೀರಿ ವರ್ತಿಸುವುದು ಸರಿಯಲ್ಲ. ಅದೂ ಅಲ್ಲದೆ ನೀನು ವಿದ್ಯಾವಂತೆ,
ಪುಣ್ಯವತಿ ಆದ್ದರಿಂದ ನಿನ್ನ ಪ್ರಯತ್ನವನ್ನು ಬಿಟ್ಟುಬಿಡು. ಇಲ್ಲದಿದ್ದರೆ ಕಷ್ಟಗಳು
ಎದುರಾಗುತ್ತವೆ. ವಾವೆ ವರಸೆಗಳಿಲ್ಲದೆ ಮನ್ಮಾಥಾಗ್ನಿಗೆ ಬಲಿಯಾಗಿ ನಾವಿಬ್ಬರೂ ಮಿಲನ ಹೊಂದಿದರೆ ಆ
ಮಹಾಪಾತಕ ಸೂರ್ಯ ಚಂದ್ರರಿರುವವರಗೂ, ನಾವೆಷ್ಟು ಜನ್ಮವೆತ್ತಿದರೂ, ಯಾವ ಯಾವ ಜನ್ಮಗಳನ್ನು
ಎತ್ತಿದರೂ ನಮ್ಮನ್ನು ಬೆನ್ನಟ್ಟುತ್ತಲೇ ಇರುತ್ತದೆ. ಆ ನರಕಯಾತನೆಯಿಂದ ನಾವು ವಿಮುಕ್ತಿ
ಹೊಂದಲಾರೆವು. ಆದ್ದರಿಂದ ನಿನ್ನ ಕೋರಿಕೆಯನ್ನು ಒಪ್ಪಲಾರೆನು. ಈಗಲೆ ಬಹಳ ತಡವಾಗಿದೆ. ಮನೆ
ಬಿಟ್ಟು ನನ್ನ ಹಿಂದೆ ಬಂದಂತೆ ಗುರುಗಳಿಗೆ ತಿಳಿದರೆ ನಿನ್ನನ್ನು ದಂಡಿಸುತ್ತಾರೆ. ಆದ್ದರಿಂದ
ಬಾ... ಸಮಿಧೆಗಳನ್ನು, ದರ್ಭೆಗಳನ್ನು, ಪುಷ್ಪ... ಇತ್ಯಾದಿ ಆಶ್ರಮ ದ್ರವ್ಯಗಳನ್ನು ತೆಗೆದುಕೊಂಡು
ಹೋಗೋಣ ಎಂದು ಸುಮಿತ್ರನು ಅನೇಕ ರೀತಿಯಲ್ಲಿ ಬೋಧಿಸಿದನು.
ಆಗ ಆ ಯುವತಿ – “ಬಂಗಾರ, ರತ್ನ, ವಿದ್ಯೆ,
ಅಮೃತ, ಸ್ತ್ರೀ ತನಗೆ ತಾನಾಗಿಯೇ ಬಂದಾಗ ನಿರಾಕರಿಸುವವನು ಮೂರ್ಖನೇ ಹೊರತು, ವಿವೇಕವಂತನಲ್ಲ.
ನನ್ನ ಪರಿಪೂರ್ಣ ಯೌವನವನ್ನು ನನ್ನ ಶರೀರ ಸಮಸ್ತವನ್ನು ನಿನಗೆ ಅರ್ಪಿಸುತ್ತಿದ್ದರೂ ನಿರಾಕರಿಸುತ್ತಿರುವೆಯಲ್ಲ!. ಸರಿ, ನಾನಿನ್ನು ಒಂಟಿಯಾಗಿ ಆಶ್ರಮಕ್ಕೆ ಹೋಗಲಾರೆ,
ನಾನೀಗಲೇ ಪ್ರಾಣತ್ಯಾಗ ಮಾಡುತ್ತೇನೆ. ನಿನ್ನಿಂದಲೇ ಒಬ್ಬ ಕನ್ಯೆ ಸತ್ತು ಹೋದಳೆಂದು ಹಲವಾರು ಜನ
ನಿನ್ನನ್ನು ಆಡಿಕೊಳ್ಳುತ್ತಾರೆ, ನನ್ನನ್ನು ಒಂಟಿಯಾಗಿ ಈ ಕಾನನದಲ್ಲಿ ಬಿಟ್ಟು ಆಶ್ರಮ ಸೇರಿದರೆ
ನನ್ನ ತಂದೆ ನಿನ್ನನ್ನು ಬಿಡುತ್ತಾರೆಯೇ? ನನ್ನ ಮಗಳೆಲ್ಲಿ
ಎಂದು ದಂಡಿಸದಿರುವರೇ? ಈಗಾಗಲೇ ನನ್ನ ಗೆಳತಿಯರು
ನಾನು ನಿನ್ನೊಂದಿಗೆ ಕಾಡಿಗೆ ಹೋದೆನೆಂದು ಹೇಳೇ ಇರುತ್ತಾರಲ್ಲವೇ? ಕಾಮಬಾಧೆಯನ್ನು ಭರಿಸಲಾಗುತ್ತಿಲ್ಲ. ನನ್ನೊಂದಿಗೆ
ಕೂಡು. ನನ್ನನ್ನು ನಿನ್ನವಳನ್ನಾಗಿ ಮಾಡಿಕೋ” ಎಂದು ನುಡಿದಳು.
ಸುಮಿತ್ರನು ಆಕೆಯ ದೀನಾಲಾಪನೆಯನ್ನು ಆಲಿಸಿ, ಇಕ್ಕಟ್ಟಿನ ಸ್ಥಿತಿಗೆ ಸಿಲುಕಿ ತೊಳಲಾಡಿದನು.
ಸ್ವಲ್ಪ ಹೊತ್ತು ಯೋಚಿಸಿ ಆ ಬ್ರಾಹ್ಮಣ ಯುವತಿಯೊಂದಿಗೆ ರತಿಕ್ರೀಡೆಯಾಡಲು ನಿಶ್ಚಯಿಸಿಕೊಂಡನು.
ಶಂಕರೀ! ಈ ರೀತಿಯಾಗಿ ಅವರಿಬ್ಬರೂ ಆ ಸರೋವರ ಸಮೀಪದಲ್ಲೊಂದು
ಪ್ರದೇಶವನ್ನು ಶುಭ್ರಮಾಡಿ ಅಲ್ಲಿ ಮೃದುವಾದ ಪತ್ರಗಳನ್ನು, ನಾನಾವಿಧ ಸುವಾಸನೆಗಳನ್ನು ಚೆಲ್ಲಿ,
ಪುಷ್ಪಗಳನ್ನು ಅಲಂಕರಿಸಿ, ಪ್ರಕೃತಿ ಸೌಂದರ್ಯವನ್ನು ನೋಡಿ ಮುದಗೊಂಡು ಕಾಮತೃಷೆಯನ್ನು
ತೀರಿಸಿಕೊಂಡು ಮತ್ತೆ ಸ್ವಲ್ಪ ಹೊತ್ತು ಚೆಂಡಾಟ ಆಡಿ, ಕುಣಿದು ಕುಪ್ಪಳಿಸಿ ಕೇಕೆ ಹಾಕುತ್ತ,
ಓಡುತ್ತ, ಆಟವಾಡಿದರು, ಅವರ ಕಾಮವಿಚಾರವನ್ನು ನೋಡಿ ಪಕ್ಷಿಗಳು ನಾಚಿ ಆ ಸ್ಥಳದಿಂದ ಹಾರಿಹೋದವು.
ಸರೋವರದಲ್ಲಿನ ಕಮಲಗಳು ತಲೆಗಳು ಬಾಗುವಂತೆ ಆ ನೀರಿನಲ್ಲಿ ಬಾಗಿದವು. ಸೂರ್ಯನು ಮೋಡಗಳ
ಮರೆಯಲ್ಲಡಗಿದನು, ಪದೇ ಪದೇ ಅನ್ಯೋನ್ಯ ಚುಂಬನವನ್ನು ನೋಡಲಾದೆ, ಮಧು ಸೇವಿಸಿ ಮತ್ತೇರಿದ
ದುಂಬಿಗಳು ಕೂಡ ನಾಚಿದವು. ಈ ರೀತಿಯಾಗಿ ಅವರು ಉಲ್ಲಾಸದಿಂದ ಸ್ವಲ್ಪ ಹೊತ್ತಿದ್ದು ಸಮಿತ್ತು,
ಕುಶ, ಪುಷ್ಪಗಳನ್ನು ನಾನಾವಿಧ ಫಲಗಳನ್ನು ಸಂಗ್ರಹಿಸಿ ಆಶ್ರಮದ ದಾರಿ ಹಿಡಿದು ಆಶ್ರಮ ಸೇರಿದರು.
ಸುಮಿತ್ರನು ಗುರುಗಳಿಗೆ ನಮಸ್ಕರಿಸಿ ತಂದ ಪೂಜಾದ್ರವ್ಯಗಳನ್ನು ಸಮರ್ಪಿಸಿದನು. ಕಾಡಿಗೆ ಹೋಗಿ
ಕಷ್ಟಪಟ್ಟು ತಂದ ವಸ್ತುಗಳನ್ನು ಸಂತೋಷದಿಂದ ಗುರುಗಳು ಸ್ವೀಕರಿಸಿ, ಮಗಳನ್ನು ನೋಡಿ “ಸುಶೀಲ! ನೀನು
ಉದ್ಯಾನವನದಲ್ಲಿ ಗೆಳತಿಯರೊಂದಿಗೆ ಚೆಂಡಾಟವಾಡಿ ದಣಿದಿದ್ದೀಯೆ, ಪಾಪ ನಿನ್ನ ಸುಕುಮಾರ ಮುಖಾರವಿಂದ
ಅದೆಷ್ಟು ಬಾಡಿದೆ ಬಾ... ಈ ಮಧುರ ಪದಾರ್ಥಗಳನ್ನು ಭುಜಿಸಿ, ಸ್ವಲ್ಪ ಹೊತ್ತು ವಿಶ್ರಾಂತಿ ಪಡಿ.
ಆಟವಾಡಿದ್ದರಿಂದ ಉಡುಪುಗಳು ಸಹ ನಲುಗಿಹೋಗಿವೆ”. ಎಂದು ಮಗಳನ್ನು
ಮುದ್ದುಗರೆದು ತಿನಿಸುಗಳನ್ನು ನೀಡಿದನು.
ಆಕೆ ಒಳಗೊಳಗೆ ಹೆದರುತ್ತಲೇ ಮೇಲೇನೂ ಅರಿಯದಂತೆ ನಟಿಸಿದಳು, ಮತ್ತೆ ಸ್ವಲ್ಪ ಕಾಲಕ್ಕೆ
ಸುಶೀಲೆಯನ್ನು ಹಿಮಾಲಯ ಪ್ರದೇಶ ವಾಸಿಯಾದ ಬ್ರಾಹ್ಮಣನೊಬ್ಬನು ಮದವೆಯಾದುದರಿಂದ ಆಕೆ ಅತ್ತೆ ಮನೆಗೆ
ಹೋಗಿ ಅಲ್ಲಿಯೇ ಕಾಲ ಕಳೆದಳು.
ಕೆಲಕಾಲಾನಂತರ ಸುಶೀಲಳನ್ನು ವಿವಾಹವಾದ ಬ್ರಾಹ್ಮಣನು ಪರಲೋಕಗತನಾದನು. ಪತಿಯ ಶವದ ಮುಂದೆ
ಎರಗಿ ಸುಶೀಲ ಗೊಳೋ ಎಂದು ಅತ್ತಳು. ತುಂಬ ದುಃಖಿಸಿದಳು. ಯೌವನವತಿ ಸೌಂದರ್ಯವತಿಯಾದ ತನ್ನ ಮಗಳಿಗೆ
ಅಕಾಲವೈಧವ್ಯ ಉಂಟಾಯಿತಲ್ಲಾ ಎಂದು ತಂದೆ ಗಳಗಳ ಅತ್ತನು.
“ಅಯ್ಯೋ ಭಗವಂತನೇ! ಚಿಕ್ಕ ವಯಸ್ಸಿನಲ್ಲಿಯೇ ಇನ್ನೂ ಸಂಸಾರ ಸುಖವನ್ನೂ
ಅನುಭವಿಸದೆಯೇ ವಿಧವೆಯನ್ನಾಗಿ ಮಾಡಿದೆಯಾ ತಂದೆ, ಇವಳ ಗತಿಯೇನು? ಜನ ಇವಳನ್ನು ನೋಡಿದರೆ ಅಮಂಗಲಕರವೆಂದು ಭಾವಿಸುವರಲ್ಲ! ಯಾವುದೇ ಶುಭಕಾರ್ಯಗಳಲ್ಲೂ ಭಾಗವಹಿಸಲು
ಬಿಡುವುದಿಲ್ಲವಲ್ಲ. ಇವಳಿಗೆ ಇಂಥ ಕರ್ಮ ಏಕೆ ಉಂಟಾಯಿತು?” ಎಂದು ಪರಿಪರಿಯಾಗಿ
ದುಃಖಿಸಿದನು.
ಅಷ್ಟರಲ್ಲಿ ಅಲ್ಲಿಗೊಬ್ಬ ಸಿದ್ಧ ಪರುಷನು ಭಿಕ್ಷಾಟನೆಗಾಗಿ ಬಂದನು. ಆ ಸಮೀಪದಲ್ಲಿಯೇ ಒಂದು
ಮೂಲೆಯಲ್ಲಿ ರೋಧನೆಯನ್ನು ಕೇಳಿ, ಶವವಿರುವ ಕಡೆ ಹೋಗಿ ಸುಬುದ್ಧಿಯನ್ನು ಉದ್ದೇಶಿಸಿ – ಪೂಜ್ಯರೇ! ನೀವು ದುಃಖಿಸುವುದಕ್ಕೆ ಕಾರಣವೇನು? ತಿಳಿಸಿ ಎಂದು ಕೇಳಿದನು. ಆಗ ಸುಬುದ್ಧಿಯು – “ಸ್ವಾಮಿ! ನಮ್ಮ ದುಃಖ
ಕುರಿತು ಏನೆಂದು ಹೇಳಿಕೊಳ್ಳಲಿ ನಿಮ್ಮ ದಿವ್ಯ ತೇಜೋಮೂರ್ತಿಯನ್ನು ನೋಡಿದ್ದರಿಂದ ಸ್ವಲ್ಪ ಉಪಶಮನ
ಉಂಟಾಯಿತು. ಈ ಯುವತಿ ನನ್ನ ಮಗಳು, ಸತ್ತವನು ಆಕೆಯ ಪತಿ. ವಿವಾಹವಾದ ಕೆಲವೇ ಕಾಲಕ್ಕೆ ಈತ ಸತ್ತು
ಹೋದ. ನಮಗೆ ಇವಳ ಹೊರತು ಮತ್ತೊಂದು ಸಂತಾನವಿಲ್ಲ. ಚಿಕ್ಕಂದಿನಲ್ಲಿಯೇ ಈಕೆಗೆ ಉಂಟಾದ ವೈಧವ್ಯ
ನೋಡಲಾಗದೆ ನಮ್ಮ ಹೃದಯ ಛಿದ್ರಗೊಳ್ಳುತ್ತಿದೆ. ಈಕೆಗೆ ಈ ದುಃಸ್ಥಿತಿ ಏಕೆ ಉಂಟಾಯಿತು? ಈಕೆಯ ಪೂರ್ವಜನ್ಮ ಎಂಥದ್ದು ನಿಮಗೆ ತಿಳಿದಿದ್ದಲ್ಲಿ
ಹೇಳಿರಿ” ಎಂದು ಬೇಡಿಕೊಂಡನು.
ಸಿದ್ಧರು ಸ್ವಲ್ಪಹೊತ್ತು ತಮ್ಮ ದಿವ್ಯದೃಷ್ಟಿಯಿಂದ ನಡೆದುದ್ದೆಲ್ಲವನ್ನೂ ಗ್ರಹಿಸಿದರು. “ವಿಪ್ರೋತ್ತಮರೇ! ನಿಮ್ಮ ಮಗಳು
ಹಿಂದಿನ ಜನ್ಮದಲ್ಲಿ ಕ್ಷತ್ರಿಯ ಯುವತಿಯಾಗಿದ್ದಳು, ಈಕೆಯು ಕಾಮಾತುರಳಾಗಿ ಪರಪುರಷ ಸಂಪರ್ಕ
ಉಳ್ಳವಳಾಗಿ, ಅರ್ಧರಾತ್ರಿ ತನ್ನ ಪತಿ ನಿದ್ರಾಪರವಶನಾಗಿರುವಾಗ ಕತ್ತಿಯಿಂದ ತಿವಿದುದರಿಂದ ಆತ
ವಿಲವಿಲನೆ ನರಳಾಡಿ ಪ್ರಾಣ ಬಿಟ್ಟನು. ಆ ಭಯಾನಕ ದೃಶ್ಯವನ್ನು ನೋಡಿ ಆಕೆ ಹೆದರಿ, ತಾನೂ ಕೂಡ
ಪ್ರಾಣಬಿಟ್ಟಳು. ಅಂತಹ ಘೋರಹತ್ಯೆ ಮಾಡಿ, ಈ ಜನ್ಮದಲ್ಲಿ ನಿನ್ನ ಮಗಳಾಗಿ ಹುಟ್ಟಿದ್ದಾಳೆ. ಈಕೆ
ಮಾಡಿರುವ ಪಾತಕದಿಂದಲೇ ವಿಧವೆಯಾದಳು. ಅಂತಹ ಪಾಪಾತ್ಮಳಾಗಿದ್ದೂ ಪುಣ್ಯಾತ್ಮರಾದ ನಿಮಗೆ ಹೇಗೆ
ಜನ್ಮಿಸಿದಳೋ ಆ ವೃತ್ತಾಂತವನ್ನು ವಿವರಿಸುತ್ತೇನೆ ಕೇಳು -
ಬಹಳ ವರ್ಷಗಳ ಹಿಂದೆ, ಅಂದರೆ ನಿನ್ನ ಮಗಳ ಹದಿನಾಲ್ಕು ಜನ್ಮಗಳ ಹಿಂದೆ ಮಾಘಮಾಸದಲ್ಲಿ
ಸೂರ್ಯಪರಮಾತ್ಮನು ಮಕರ ರಾಶಿಯಲ್ಲಿದ್ದಾಗ ಕೆಲವರು ಬ್ರಾಹ್ಮಣ ಸ್ತ್ರೀಯರು ಯಮುನಾ ನಹಿ ತೀರಕ್ಕೆ
ಹೋಗಿ ಸ್ನಾನ ಮಾಡಿ. ಮರಳಿನಲ್ಲಿ ಗೌರಿಯನ್ನು ಪ್ರತಿಷ್ಠಾಪನೆ ಮಾಡಿ ಭಕ್ತಿ-ಶ್ರದ್ಧೆಗಳಿಂದ ಪೂಜೆ
ಮಾಡುತ್ತಿದ್ದರು. ಆ ಪೂಜೆಯಲ್ಲಿ ಇವಳೂ ಸಹ ಭಾಗವಹಿಸಿದ್ದಳು. ಆ ಪುಣ್ಯಫಲದಿಂದಲೇ ನಿನ್ನ
ವಂಶದಲ್ಲಿ ನಿನ್ನ ಮಗಳಾಗಿ ಹುಟ್ಟಿದಳು. ಅದರೇನು? ನಿನ್ನ ಶಿಷ್ಯನ
ಜೊತೆ ಗುಟ್ಟಾಗಿ ಕಾಡಿಗೆ ಹೋಗಿ ತನ್ನ ಕಾಮವಾಛೆಗಾಗಿ ಆತನೊಂದಿಗೆ ರಮಿಸಿದಳು. ಅದರಿಂದಲೂ ಸಹ ಈ
ವೈಧವ್ಯ ಉಂಟಾಗಿದೆ. ಪೂರ್ವಜನ್ಮದಿಂದ ಪವಿತ್ರವಾದ ಮನೆಯಲ್ಲಿ ಹುಟ್ಟಿದರೂ ಘೋರಪಾಪ ಮಾಡಿದುದರಿಂದ
ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು. ಆದ್ದರಿಂದ ಪೂರ್ವಜನ್ಮದಲ್ಲಿ ಮಾಡಿದ ಪಾಪಕರ್ಮ
ಮತ್ತು ಈ ಜನ್ಮದಲ್ಲಿ ಮಾಡಿದ ಪಾಪಕರ್ಮಗಳಿಂದಲೇ ಈಕೆಗೆ ಆಕಾಲ ವೈಧವ್ಯ ಉಂಟಾಯಿತು. ಈಗ ದುಃಖಿಸಿ
ಪ್ರಯೋಜನವೇನು? ಆಗಬೇಕಾದದ್ದು ಆಗೇ ಆಗುತ್ತದೆ ಮನುಷ್ಯನು ತಾನು ಮಾಡುವ
ಪಾಪ-ಪುಣ್ಯಗಳ ಫಲ ಎಂದಿಗಾದರೋ ಅನುಭವಿಸಬೇಕಾದುದ್ದೆ? ಅಲ್ಲವೇ? ದೇವತೆಗಳಿಗೂ ಕಷ್ಟ ತಪ್ಪಿದಲ್ಲ” ಎಂದು ನುಡಿದ ಸಿದ್ಧನ ಮಾತನ್ನು ಕೇಳಿ ಸುಬುದ್ಧಿ – “ಹರಿ! ಹರಿ! ನಾನೆಂತಹ ಪಾಪದ ಮಾತುಗಳನ್ನು ಕೇಳಬೇಕಾಗಿ ಬಂದಿತು.
ಪೂರ್ವಜನ್ಮದಲ್ಲಿ ನನ್ನ ಮಗಳು ತನ್ನ ಗಂಡನ ಹತ್ಯೆ ಮಾಡಿ, ತಾನೂ ಅತ್ಮಹತ್ಯೆ ಮಾಡಿಕೊಂಡಳೇ ಈ
ಜನ್ಮದಲ್ಲೂ ಕೂಡ ಕನ್ಯೆಯಾಗಿದ್ದು, ನನ್ನ ಮಗನ ಸಮಾನನಾದ, ನನ್ನ ಶಿಷ್ಯನೊಂದಿಗೆ ಕೂಡಿದಳೇ ಎಂಥಾ
ಘೋರ!” ಎಂದು ಹಲುಬಿ, ತೊಳಲಾಡಿ, ಸಿದ್ಧನ ಕಡೆ ನೋಡಿ, “ಸ್ವಾಮಿ! ನಿಮ್ಮ ಮಾತು
ಕೇಳಿದಾಗಿನಿಂದಲೂ ಒಂದು ಕಡೆ ಮಗಳ ಮೇಲೆ ಕೋಪ, ಮತ್ತೊಂದು ಕಡೆ ಪ್ರೀತಿಯೂ ಉಂಟಾಗುತ್ತಿದೆ.
ಆದ್ದರಿಂದ ನನ್ನ ಮಗಳು ಪಾಪದಿಂದ ಹೇಗೆ ವಿಮುಕ್ತಳಾಗುತ್ತಾಳೋ, ಮತ್ತೆ ನನ್ನ ಅಳಿಯ ಹೇಗೆ
ಪುನರ್ಜೀವಿ ಆಗುತ್ತಾನೋ ನೀವು ಹೇಳಬೇಕು” ಎಂದು
ಪ್ರಾರ್ಥಿಸಿದನು.
“ಓ ಸುಬುದ್ಧಿ! ಮಗಳನ್ನು ಕುರಿತು ನೀನು ಕೇಳದೇ ಹೋದರೂ
ಪರಿಹಾರೋಪಾಯವನ್ನು ವಿವರಿಸಬೇಕೆಂದು ಬಂದಿದ್ದೇನೆ. ಈ ಮಾಘಮಾಸದಲ್ಲಿ ನಿನ್ನ ಮಗಳ ಕೈಯಲ್ಲಿ
ನದಿಯಲ್ಲಾಗಲಿ, ಕೆರೆಯಲ್ಲಾಗಲಿ ಪ್ರಾತಃಕಾಲದಲ್ಲಿ ಸ್ನಾನ ಮಾಡಿಸು. ಈ ರೀತಿಯಾಗಿ ಮಾಘಮಾಸವೆಲ್ಲಾ
ಆಕೆಯು ಸ್ನಾನ ಮಾಡಿದರೆ ಆಕೆಗಿರುವ ಪಂಚಮಹಾಪಾತಕಗಳು ತೊಲಗಿ ಹೋಗಿ ಆಕೆಯ ಪತಿಯು ಕೂಡ
ಬದುಕುತ್ತಾನೆ”.
ಮಾಘಶುದ್ಧ ಬಿದಿಗೆಯ ದಿನ ಮುತ್ತೈದೆಯರ ಪಾದಗಳಿಗೆ ಅರಿಶಿನ ಹಜ್ಜೆ, ಹಣೆಗೆ ಬೊಟ್ಟಿಟ್ಟು
ಪೂಜಿಸಬೇಕು. ಎರಡು ಹೊಸ ಮೊರಗಳನ್ನು ತಂದು ಅದರಲ್ಲೊಂದು ಮೊರದಲ್ಲಿ ಸೀರೆ, ರವಿಕೆಬಟ್ಟೆ,
ಅರಿಶಿನ, ಕುಂಕುಮ, ಹಣ್ಣು, ವಿಳೇದೆಲೆ, ಅಡಿಕೆ, ದಕ್ಷಿಣೆ ಇಟ್ಟು, ಅದರ ಮೇಲೆ ಎರಡನೇ ಮೊರವನ್ನು
ಮುಚ್ಚಿ ಒಬ್ಬ ಮುತ್ತೈದೆಗೆ ಬಾಗಿನ ಕೊಟ್ಟು ತೃಪ್ತಿಯಿಂದ ಊಟ ಹಾಕಿ ಸಂತೋಷ ಪಡಿಸಬೇಕು.ಆ
ರೀತಿಯಾಗಿ ಮಾಡಿದರೆ ಪರಪುರಷ ಸಂಗದಿಂದ ಉಂಟಾದ ದೋಷ ನಿವಾರಣೆ ಆಗುತ್ತದೆ.
ಕೆಲವು ಜನ ಪುರುಷರು ಉದಯ
ಕಾಲದಲ್ಲೇ ಹೋಗಿ ಸ್ನಾನ ಮಾಡಬೇಕೆಂದರೆ ಹಿಂಜರಿಯುತ್ತಾರೆ. ಆದ್ದರಿಂದ ಪತ್ನಿಯರಾದರೂ ಅವರನ್ನು
ಪ್ರೋತ್ಸಾಹಿಸಿ, ಅವರೂ ಸಹ ನಿಷ್ಠೆಯಿಂದ ಮಾಘಮಾಸ ಸ್ನಾನ ಮಾಡಬೇಕು. ವಂಶಾಭಿವೃದ್ಧಿಗಾಗಲಿ,
ಕುಟುಂಬ ಗೌರವಕ್ಕಾಗಲಿ ಸ್ತೀಯರೇ ಮುಖ್ಯ ಕಾರಕರಾಗಿರುವುದರಿಂದ ಈ ಮಾಘಮಾಸವಿಡೀ ಪುರಾಣ ಓದಿ,
ಹರಿಕಥೆಗಳಾಗಲಿ, ಹರಿನಾಮ ಸಂಕೀರ್ತನೆಗಳನ್ನಾಗಲಿ ಪಠಿಸುತ್ತ ದಾನ-ಧರ್ಮಗಳನ್ನು ಮಾಡಿದರೆ ಆಗುವ
ಫಲವು ಮತ್ತ್ಯಾವ ವ್ರತದಿಂದಲೂ ಉಂಟಾಗುವುದಿಲ್ಲ, ಮುನಿಶ್ರೇಷ್ಠರು ಮಾಘಸ್ನಾನ ಮಾಡಿ, ತಪಸ್ಸು
ಮಾಡಿದರೆ ಅರು ಸಿದ್ಧಪುರುಷರಾಗುತ್ತಾರೆ, ಬುದ್ಧಿ ಇಲ್ಲದವರಿಂದ ಮಾಘಸ್ನಾನ ಬಿಡದೆ ಮಾಡಿಸಿದ್ದೇ
ಆದಲ್ಲಿ ಅವರ ಹುಚ್ಚು ವಾಸಿ ಆಗುತ್ತದೆ. ಕುಷ್ಠರೋಗದಿಂದ ಬಾಧೆಪಡುವವರು ಮಾಘಮಾಸ ಸ್ನಾನ ಮಾಡಿದರೆ
ಅವರ ರೋಗ ನಿವಾರಣೆಯಾಗುವುದೇ ಅಲ್ಲದೆ, ಉತ್ತಮ ಪುಣ್ಯಾತ್ಮರಾಗುತ್ತಾರೆ. ಸ್ತ್ರೀಯಾಗಲಿ,
ಪುರುಷರಾಗಲಿ ಮಾಘಮಾಸ ಸ್ನಾನವನ್ನು ಢಾಂಬಿಕತನದಿಂದ ನಾಲ್ಕುಜನ ನೋಡಿ ಹೊಗಳುವುದಕ್ಕೆ ಮಾಡಬಾರದು.
ಚಿತ್ತಶುದ್ಧಿಯಿಂದ ಸ್ನಾನಾದಿಗಳನ್ನು ಮಾಡಿ, ವಿಷ್ಣು ದರ್ಶನ, ಸೂರ್ಯನಮಸ್ಕಾರ, ಪುರಾಣ ಪಠಣೆ,
ಹರಿನಾಮ ಸ್ಮರಣೆ ಮುಂತಾದವುಗಳನ್ನು ನಿರಾಡಂಬರವಾಗಿ ಮಾಡಬೇಕು. ಮಾಘಮಾಸ ಸ್ನಾನ
ಮಾಡುತ್ತಿರುವೆನೆಂದು ತನ್ನನ್ನು ತಾನು ಹೊಗಳಿಕೊಳ್ಳಬಾರದು, ಹಾಗೆ ಮಾಡಿದರೆ ಚಿತ್ತಶುದ್ಧಿಯಿಲ್ಲದ
“ಶಿವಪೂಜೆ ಏಕಯ್ಯಾ” ಎಂಬಂತೆ ನಿಷ್ಟ್ರಯೋಜಕವಾಗುತ್ತದೆ. ಎಂದು ಸುಬುದ್ಧಿಗೆ
ಭಿಕ್ಷಾಟನೆಗಾಗಿ ಬಂದ ಸಿದ್ಧನು ಉಪದೇಶಿಸಿದನು.
“ಓ ಶಂಕರೀ!” ಆ ರೀತಿಯಾಗಿ ಸಿದ್ಧನ ಉಪದೇಶವನ್ನು ಪಡೆದ ಸುಬುದ್ಧಿ ತನ್ನ ಮಗಳಿಂದ
ಮಾಘಸ್ನಾನಗಳನ್ನು ಮಾಡಿಸಿ, ದಾನಾದಿ ಪುಣ್ಯಗಳನ್ನು ಮಾಡಿಸಿದಾಗ ಸತ್ತುಹೋಗಿದ್ದ ಅಳಿಯ
ನಿದ್ರೆಯಿಂದ ಎಚ್ಚೆತ್ತವನಂತೆ ಎದ್ದು ನಡೆದ ವೃತ್ತಾಂತವನ್ನು ಕೇಳಿ, ತಾನೂ ಸಹ ತನ್ನ
ಪತ್ನಿಯೊಂದಿಗೆ ಪುಣ್ಯಕಾರ್ಯಗಳನ್ನು ಮಾಡಿ ಪಾಪರಹಿತನಾದನು.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಚತುರ್ದಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಪಂಚದಶೋಧ್ಯಾಯಃ
ಹದಿನೈದನೇ ದಿನದ ಪಾರಾಯಣ
ಶಿಷ್ಯನು ಪಶ್ಚಾತ್ತಾಪ ಪಡುವುದು
ಸುಬುದ್ಧಿಯು, ಆತನ
ಮಗಳು, ಆಕೆಯ ಪತಿ ಮುಂತಾದವರು ಮಾಘಸ್ನಾನದಿಂದ ಉಂಟಾದ ಫಲದಿಂದ ಸಮಸ್ತ ದೋಷಗಳನ್ನು ಕಳೆದುಕೊಂಡು,
ಸುಖಬಾಳ್ವ ನಡೆಸಿದರೆಂದು ಸದಾಶಿವನು ಪಾರ್ವತಿಗೆ ತಿಳಿಸಿದಾಗ ಪುನಃ ನೀಲಕಂಠನನ್ನು
ಪಾರ್ವತಿದೇವಿಯು ಹೀಗೆ ಪ್ರಶ್ನಿಸಿದಳು –
ನಾಥ! ಸುಬುದ್ಧಿಯ ಮಗಳ ವೃತ್ತಾಂತವನ್ನು ಸಮಗ್ರವಾಗಿ
ತಿಳಿಸಿದಿರಿ, ಮತ್ತೆ ಸುಬುದ್ಧಿಯ ಶಿಷ್ಯನಾದ ಸುಮಿತ್ರನು ಏನಾದನು? ಆತ ಯಾವ ಸ್ಥಿತಿಯಲ್ಲಿದ್ದನು? ವಿವರವಾಗಿ ತಿಳಿಸಿರಿ ಕೇಳಲು ಕುತೂಹಲವಾಗಿದೆ ಎಂದು
ಈಶ್ವರನನ್ನು ಕೋರಿದಳು. ಅದಕ್ಕೆ ಪಾರ್ವತೀಪತಿಯು ಹೀಗೆ ಹೇಳತೊಡಗುತ್ತಾನೆ –
ಸುಮಿತ್ರನು ಗುರುಗಳ
ಮಗಳೊಂದಿಗೆ ಓಡಾಡಿಕೊಂಡಿದ್ದು, ಮೊದಲು ಆತನಿಗೆ ಫೋರಪಾಪ ಸುತ್ತಿಕೊಂಡಿತು. ತಾನು ಮಾಡಿದ ಪಾಪಕ್ಕೆ
ಪಶ್ಚಾತ್ತಾಪ ಮನಸ್ಕನಾಗಿ ಗುರುಗಳ ಬಳಿಗೆ ಹೋಗಿ, ಅವರ ಪಾದಗಳ ಮೇಲೆ ಬಿದ್ದು, ಗುರುಗಳೇ! ನಾನು ಮಹಾಪಾಪಿ! ಕ್ಷಣಿಕವಾದ ತುಚ್ಛ ಕಾಮವಾಂಛೆಗೆ ಒಳಗಾಗಿ ನಿಮ್ಮ ಮಗಳಾದ
ಸುಶೀಲೆಯೊಡನೆ ಸಂಗಮಿಸಿದೆ. ಆದರೂ ಅದು ನನ್ನ ದೋಷವಲ್ಲ. ನಾನು ಪೂಜಾದ್ರವ್ಯಗಳನ್ನು ತರಲು ಕಾಡಿಗೆ
ಹೋಗುತ್ತಿದ್ದೆ. ದಾರಿಯಲ್ಲಿ ಉದ್ಯಾನವನದಲ್ಲಿ ನಿಮ್ಮ ಮಗಳು ಗೆಳತಿಯರೊಂದಿಗೆ
ಚೆಂಡಾಟವಾಡುತ್ತಿದ್ದಳು. ನಾನು ಕಾಡಿನ ಮಧ್ಯೆ ಹೋಗಿ ಒಂದು ಗಿಡದ ಕೆಳಗೆ ವಿಶ್ರಮಿಸುತ್ತಿದ್ದಾಗ,
ನಿಮ್ಮ ಮಗಳು ಮೆಲ್ಲಮೆಲ್ಲನೆ ನನ್ನ ಬಳಿಸೇರಿ, ನನ್ನನ್ನು ಒಳ್ಳೆಯ ಮಾತುಗಳಿಂದ ವಂಚಿಸಿ, ತನ್ನ
ಕಾಮ ವಾಂಛೆಯನ್ನು ತಿಳಿಸಿದಳು. ನಾನು ಅದಕ್ಕೊಪ್ಪಲಿಲ್ಲ. ನನ್ನನ್ನು ಬಲವಂತ ಪಡಿಸಿದಳು.
ನನ್ನನ್ನು ಕ್ಷಮಿಸುವಂತೆ ಕಿವಿಗಳನ್ನು ಮುಚ್ಚಿಕೊಂಡೆನು. “ನನ್ನೊಡನೆ ಕೂಡದೆ ಹೋದರೆ ನಿನ್ನೆದುರಿಗೆ ಪ್ರಾಣತ್ಯಾಗ
ಮಾಡುವೆ” ಎಂದು ಹೇಳಲು, ನನಗೆ ಭಯವುಂಟಾಗಿ, ನಿಜವಾಗಿಯೂ ಆಕೆ ಪ್ರಾಣತ್ಯಾಗ
ಮಾಡಿದಲ್ಲಿ ನೀವು ನನ್ನನ್ನು ಖಂಡಿತವಾಗಿ ಶಿಕ್ಷಿಸುವಿರೆಂದು ಹೆದರಿ, ಆಕೆಯೊಡನೆ ಕ್ರೀಡಿಸಿ,
ಆಕೆಯ ವಾಂಛೆಯನ್ನು ಈಡೇರಿಸಿದೆ. ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಆದರೂ ನಾನು ಮಹಾಪಾಪನ್ನು
ಅನುಭವಿಸುತ್ತಿದ್ದೇನೆ. ನಾನೂ ಸಹಿತ ಪಾಪರಹಿತನಾಗಿ ಹೇಗೆ ಆಗಬಲ್ಲೆನು ಅಪ್ಪಣೆ ಕೊಡಿ ಎಂದು
ಬೇಡಿದನು.
ಶಿಷ್ಯನು ಹೇಳಿದ
ಮಾತುಗಳನ್ನು ನಂಬಿದ ಸುಬುದ್ಧಿಯು, ತನ್ನ ಮಗಳ ಹಾಗೆಯೇ ಶಿಷ್ಯನನ್ನೂ ಕೂಡ ಪಾಪರಹಿತನನ್ನಾಗಿ
ಮಾಡಲೆಣಿಸಿ, ಸುಮಿತ್ರಾ! ನಿನ್ನ ಪಾಪಕರ್ಮಕ್ಕೆ ಪ್ರಾಯಶ್ಚಿತ್ತವಿದೆ. ನೀನೂ ಕೂಡ ನಮ್ಮಂತೆಯೇ
ಪಾಪರಹಿತನಾಗಬಲ್ಲೆ. ಅದು ಹೇಗೆಂದರೆ ನೀನು ಗಂಗಾನದೀ ತೀರಕ್ಕೆ ಹೋಗಿ ಅಲ್ಲಿ ಹನ್ನೆರಡು ವರ್ಷಗಳ
ಕಾಲ ತಪಸ್ಸನ್ನು ಮಾಡು. ಆ ತಪಸ್ಸಿನಿಂದ ಉಂಟಾಗುವ ಫಲದಿಂದ ನಿನ್ನ ಪಾಪವೂ ನಶಿಸಿಹೋಗುವುದು. ಆಗ
ನೀನು ವಿಮುಕ್ತನಾಗುವೆ ಎಂದು ಶಿಷ್ಯನಿಗೆ ಹೇಳಿದನು.
“ಧನ್ಯೋಸ್ಮಿ..... ನಿಮ್ಮ ಅಜ್ಞೆಯಂತೆಯೇ ನಾನೀಗಲೇ
ಪ್ರಯಾಣಕ್ಕೆ ಸನ್ನದ್ಧನಾಗುತ್ತೇನೆ ಎಂದು ಗುರುಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಸುಮಿತ್ರನು ಗಂಗಾ
ತೀರಕ್ಕೆ ಹೋದನು.
ಹಾಗೆ
ಪ್ರಯಾಣಿಸುತ್ತಿರುವಾಗ ಮಾರ್ಗ ಮಧ್ಯದಲ್ಲಿ ಬೆಟ್ಟ-ಗುಡ್ಡಗಳು, ನದಿ-ತೊರೆಗಳನ್ನು ದಾಟಿ ಅರಣ್ಯ
ಮಧ್ಯಕ್ಕೆ ಹೋದನು. ಅಲ್ಲಿ ಮನೋಹರವಾದ ಮತ್ತು ಮನಸ್ಸಿಗೆ ಆಹ್ಲಾದವನ್ನುಂಟುಮಾಡುವ ದೃಶ್ಯಗಳು
ಕಂಡುಬಂದವು. ಕ್ರೂರಮೃಗಗಳು, ಸಾಧುಪ್ರಾಣಿಗಳು ಒಡಗೂಡಿ ಅನ್ಯೋನ್ಯತೆಯಿಂದ ಓಡಾಡುತ್ತಿದ್ದವು.
ಅಲ್ಲಿನ ಪ್ರಕೃತಿಯ ರಮಣೀಯತೆ ಮನಸ್ಸಿಗೆ ಅನಂದವನ್ನುಂಟುಮಾಡಿತು. ಅಂತಹ ಪ್ರದೇಶದಲ್ಲಿ ಪ್ರಯಾಣದ
ಬಳಲಿಗೆಯನ್ನು ನಿವಾರಿಸಿಕೊಳ್ಳಲು ಒಂದು ವಟವೃಕ್ಷದ ಅಡಿಯಲ್ಲಿ ವಿಶ್ರಮಿಸಿ. ನಾಲ್ಕು
ದಿಕ್ಕುಗಳಲ್ಲಿ ಪರೀಕ್ಷಿಸಿ ನೋಡಿದಾಗ ಒಂದು ಆಶ್ರಮವು ಕಾಣಿಸಿತು.
ತಕ್ಷಣವೇ ಎದ್ದು, ಆ ಆಶ್ರಮದ
ಬಳಿಗೆ ಸಾಗಿಬಂದು ಇಣುಕಿ ನೋಡಿದಾಗ ಆ ಆಶ್ರಮದಲ್ಲಿ ಕೆಲವು ಮಂದಿ ಪುರಷರು, ಸ್ತ್ರೀಯರು,
ಬಾಲಕಿಯರು ಕಾಪಾಯವಸ್ತ್ರ ಧರಿಸಿ, ರುದ್ರಾಕ್ಷಿ ಮಾಲೆಗಳನ್ನು ತಿರುವುತ್ತ ಶ್ರೀಮನ್ನಾರಾಯಣನನ್ನು
ಫಲ-ಪುಷ್ಪ-ದೀಪ-ನೈವೇದ್ಯಗಳಿಂದ ಪೂಜಿಸುತ್ತ. ಮಾಘಪುರಾಣವನ್ನು ಪಾರಾಯಣ ಮಾಡುತ್ತಿದ್ದರು. ಮಧ್ಯೆ
ಮಧ್ಯೆ ಶ್ರೀಹರಿ ವಿಗ್ರಹದ ಮೇಲೆ ಅಕ್ಷತೆಗಳನ್ನು ಹಾಕಿ, ಹರಿಹರಿ ಎಂದು ಜೋರಾಗಿ ಉದ್ಗರಿಸುತ್ತ,
ಭಕ್ತಿ-ಶ್ರದ್ಧೆಗಳಿಂದ ಆನಂದಭಾಷ್ಪಗಳಿಂದ ಪೂಜೆಯನ್ನು ಮಾಡುತ್ತಿದ್ದರು. ಆ ದೃಶ್ಯವನ್ನು
ಸುಮಿತ್ರನು ಕಣ್ಣಾರೆ ನೋಡಿದನು. ಪೂಜೆ ಮುಗಿದ ಬಳಿಕ, ಪ್ರಸಾದವನ್ನು ಎಲ್ಲರೂ ಸೇವಿಸಿದರು. ಹೊರಗೆ
ಕುಳಿತಿದ್ದ ಸುಮಿತ್ರನಿಗೂ ಕೂಡ ಪ್ರಸಾದವನ್ನು ನೀಡಿದಾಗ, ಸ್ವಾಮಿ! ನೀವು ಆಚರಿಸಿದ ವ್ರತವೆಂಥದ್ದು? ಇದರಿಂದ ಉಂಟಾಗುವ ಫಲಗಳೇನು? ಮನುಷ್ಯನು ಪಾಪರಹಿತನಾಗುವನೇ ನನ್ನ ಈ ಸಂದೇಹಗಳನ್ನು
ನಿವಾರಿಸಿರಿ ಎಂದು ವಿನಯದಿಂದ ಈ ಮುನಿಶ್ರೇಷ್ಠರನ್ನು ಕೇಳಿಕೊಂಡನು.
ಪಾಪಗಳಿಂದ
ಪೀಡಿಸಲ್ಪಡುತ್ತಿದ್ದ ಸುಮಿತ್ರನ ಪ್ರಾರ್ಥನೆಯನ್ನು ಕೇಳಿ, ಅಲ್ಲಿದ್ದ ಋಷಿ-ಮುನಿಗಳೆಲ್ಲರೂ,
ಮಾಘಮಾಸದಲ್ಲಿ ಆಚರಿಸಬೇಕಾದ ವಿಧಿ-ವಿಧಾನಗಳನ್ನು ವಿವರಿಸುವುದಕ್ಕಾಗಿ ಅವರಲ್ಲೊಬ್ಬ ಮುನಿ
ಕುಮಾರನನ್ನು ನೇಮಿಸಿದರು. ಆಗ ಮುನಿಕುಮಾರನು ಸುಮಿತ್ರನೊಂದಿಗೆ ಮಾಘಮಾಸ ಮಹಿಮೆಯನ್ನು ಹೀಗೆ
ಹೇಳತೊಡಗಿದನು-
“ವಿದ್ಯಾರ್ಥಿಯೇ! ನಾವು ಮಾಡಿದ್ದು ಮಾಘಮಾಸದಲ್ಲಿ ಅಚರಿಸಬೇಕಾದ ಮಾಘಮಾಸ
ವ್ರತ. ಈ ವ್ರತ ಮಾಡುವುದರಿಂದ ಎಂಥದ್ದೇ ಪಾಪಗಳನ್ನು ಮಾಡಿದ್ದರೂ ಅವೆಲ್ಲವೂ ನಶಿಸಿಹೋಗುತ್ತವೆ.
ಅಂದರೆ, ರೌರವಾದಿ ನರಕಯಾತನೆಗಳು ಬೆನ್ನಟ್ಟುತ್ತಿದ್ದಾಗ್ಯೂ, ಈ ವ್ರತವನ್ನು ಮಾಡಿದ ಮಾತ್ರಕ್ಕೆ ಆ
ಪಾಪಗಳೆಲ್ಲವೂ ಸುಂಟರಗಾಳಿಗೆ ಒಣಗಿದೆಲೆಗಳು ಹಾರುವಂತೆ ನಶಿಸಿ ಹೋಗುವುವು. ಮಾಘಮಾಸದಲ್ಲಿ
ಸೂರ್ಯನು ಮಕರರಾಶಿಯಲ್ಲಿದ್ದಾಗ ಸೂರ್ಯೋದಯದ ಸಮಯದಲ್ಲಿ ನದಿಯಲ್ಲಿ ಸ್ನಾನ ಮಾಡಿದವರು ಶ್ರೀಹರಿಗೆ
ಪ್ರಿಯರಾಗುತ್ತಾರೆ. ಯಾವುದೇ ದೋಷಗಳಿಲ್ಲದೆ ಶ್ರೀಹರಿಯನ್ನು ಪೂಜಿಸುತ್ತ, ಮಾಘಪುರಾಣವನ್ನು
ಕೇಳುತ್ತ ಆ ಮಾಸ ಪೂರ್ತಿ ನದೀಸ್ನಾನ ಮಾಡುವವರು ವೈಕುಂಠಕ್ಕೆ ಗುರುಹಿರಿಯರನ್ನು ಗೌರವಿಸದವರಿಗೆ,
ಬ್ರಹ್ಮಹತ್ಯೆ ಮಾಡಿದವರಿಗೆ ಸಮಾನರು.
ಆದ್ದರಿಂದ ನಾವು
ಆಚರಿಸಿದ ಮಾಘಮಾಸ ವ್ರತವನ್ನು ಮಾಡುವುದರಿಂದ ನಿನಗೆ ಮೇಲೆ ತಿಳಿಸಲಾದ ಮಹಾಪಾತಕಗಳಲ್ಲಿ ಕಿಂಚಿತ್
ಮಾತ್ರವೂ – ಯಾವುದೇ ಒಂದಿದ್ದರೂ ನಶಿಸಿಹೋಗುತ್ತದೆ. ಇದು ಸತ್ಯ ಆದ್ದರಿಂದ ನಾವೆಲ್ಲರೂ ಮಾಘಮಾಸ
ವ್ರತವನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸುತ್ತಿದ್ದೇವೆ.
ಮಾಘಮಾಸವು
ಪ್ರಾರಂಭವಾದೊಡನೆ ಸೂರ್ಯನು ಉದಯಿಸಿದ ಸ್ವಲ್ಪ ಹೊತ್ತಿಗೆ ನದಿಗೆ ತೆರಳಿ ಸ್ನಾನ ಮಾಡಿ ಸೂರ್ಯನಿಗೆ
ನಮಸ್ಕಾರ ಮಾಡಿ, ಅರ್ಘ್ಯವನ್ನು ಕೊಡಬೇಕು. ನಂತರ ವಿಷ್ಣು ದೇವಾಲಯಕ್ಕೆ ಹೋಗಿ ಶ್ರೀಹರಿಯ ಪೂಜೆ
ಮಾಡಿ. ತೀರ್ಥ ಪ್ರಸಾದಗಳನ್ನು ತೆಗೆದುಕೊಳ್ಳಬೇಕು. ಆ ರೀತಿಯಲ್ಲಿ ಮಾಸದ ಕೊನೆಯವರೆಗೂ ಯಾವ
ಮನುಷ್ಯ ಆಚರಣೆ ಮಾಡುತ್ತಾನೋ ಅವನಿಗೆ ಅಶ್ವಮೇಧ ಯಾಗ ಮಾಡಿದಷ್ಟು ಫಲ ಲಭಿಸುತ್ತದೆ.
ಮಾಘಮಾಸಕ್ಕೆ ಶ್ರೀಹರಿಯೇ
ಅಧಿದೇವತೆ ಅದ್ದರಿಂದ ಈ ಮಾಸದಲ್ಲಿ ಮಾಡಿದ ನದೀಸ್ನಾನದಿಂದ ಉಂಟಾಗುವ ಫಲವನ್ನು ಕೊಡುವವನು ಆತನೇ,
ಆದ್ದರಿಂದ ವೈಕುಂಠ ವಾಸಾದ ಶ್ರೀಹರಿಯನ್ನು ಪೂಜಿಸಬೇಕು. ಒಂದು ವೇಳೆ ನದೀತೀರದಲ್ಲಾಗಲಿ, ಕೆರೆಯ
ಬಳಿಯಲ್ಲಾಗಲಿ, ವಿಷ್ಣು ದೇವಾಯಗಳ ಇಲ್ಲದೇ
ಇದ್ದಲ್ಲಿ, ವಿಷ್ಣುವಿನ ವಿಗ್ರಹವನ್ನಾಗಲಿ, ಭಾವಚಿತ್ರವನ್ನಾಗಲಿ ತೆಗೆದುಕೊಂಡು ಹೋಗಿ,
ನದೀತೀರದಲ್ಲಿ ತುಳಸೀ ದಳದಿಂದ, ಕಸ್ತೂರಿ, ಗಂಧ, ಧೂಪ, ದೀಪ ನೈವೇದ್ಯ, ಫಲಪುಷ್ಪ ತಾಂಬೂಲಗಳಿಂದ
ಪೂಜಿಸಿ, ಪುರಾಣ ಶ್ರವಣ ಮಾಡಬೇಕು.
ಈ ರೀತಿಯಾಗಿ ಮಾಘಮಾಸ
ಪೂರ್ತಿಮಾಡಿ, ಮಾಸದ ಕೊನೆಗೆ ಒಬ್ಬ ಬ್ರಾಹ್ಮಣನಿಗೆ ವಸ್ತ್ರ, ಬಂಗಾರ, ದಕ್ಷಿಣೆಗಳನ್ನು ಕೊಟ್ಟು
ಸಂತೃಪ್ತಿಯಾಗಿ ಊಟಕ್ಕೆ ಹಾಕಬೇಕು. ಧನವಿರುವವರು ಬ್ರಾಹ್ಮಣ ಸಮಾರಧನೆ ಮಾಡಿದಲ್ಲಿ ಮುಕ್ಕೋಟಿ
ದೇವತೆಗಳು ಸಂತೋಷಗೊಳ್ಳುವರು ಅಲ್ಲದೆ ಯಮನು ತನ್ನ ಕಿಂಕರರನ್ನು ಕಳುಹಿಸುವುದಿಲ್ಲ. ಪುನರ್ಜನ್ಮ
ಉಂಟಾಗುವುದಿಲ್ಲ. ಈ ನನ್ನ ವಚನ ಅಸತ್ಯವಲ್ಲ.
ಇದುವರೆಗೂ ಮಾಘಸ್ನಾನ
ಫಲವನ್ನು ಕೇಳಿದೆಯಲ್ಲ! ಇನ್ನು ಮಾಘಮಾಸ ಕೇವಲ ಮೂರುದಿನ ಮಾತ್ರ ಉಳಿದಿದೆ.
ಅದ್ದರಿಂದ ಈ ಮೂರುದಿನ ಈ ನದಿಯಲ್ಲಿ ಸ್ನಾನ ಮಾಡಿ ಪೂಜಾಕಾರ್ಯಕ್ಕೆ ಸಿದ್ಧನಾಗು ಎಂದು
ಮುನಿಕುಮಾರನು ಹೇಳಿದನು.
ಆಗ ಸುಮಿತ್ರನು – ತನ್ನ
ಗುರುಗಳಾದ ಸುಬುದ್ಧಿ, ತನ್ನ ಪಾಪ ಪರಿಹಾರಾರ್ಥವಾಗಿ ಗಂಗಾತೀರಕ್ಕೆ ಹೋಗಿ ತಪಸ್ಸು ಮಾಡುವಂತೆ
ಹೇಳಿರುವರೆಂದು ಆ ಋಷಿ-ಮುನಿಗಳಿಗೆ ಹೇಳಿದಾಗ ಮತ್ತೆ ಆ ಮುನಿಕುಮಾರನು –
ನಿನ್ನ ಗುರುಗಳು ಹೇಳಿದ
ವಿಚಾರ ನಿಜ, ನೀನು ಗುರವಿನ ಪುತ್ರಿಯೊಡನೆ ಕ್ರೀಡಿಸಿರುವೆ. ಅದರಲ್ಲಿ ನಿನ್ನ ದೋಷವಿಲ್ಲದಿದ್ದರೂ
ಪಾಪ ಮಾತ್ರ ಸಂಕ್ರಮಿಸಿದೆ. ಅದು ನಿನ್ನನ್ನು ಬೆನ್ನಟ್ಟುತ್ತಲೇ ಇದೆ. ಪ್ರಾಯಶ್ಚಿತ್ತ ಮಾಡದೆ
ಇದ್ದಲ್ಲಿ, ಈ ಜನ್ಮದಲ್ಲಿಯೂ, ಮರುಜನ್ಮದಲ್ಲಿಯೂ ನರಕ ಯಾತನೆ ತಪ್ಪಿದ್ದಲ್ಲ.
ಅದ್ದರಿಂದ ಮಾಘಮಾಸದಲ್ಲಿ
ಮೂರು ದಿನಗಳಾದರೂ ನದೀ ಸ್ನಾನವನ್ನು ಮಾಡಿ ಶ್ರೀಹರಿಯನ್ನು ಪೂಜಿಸು. ನಂತರ ನೀನು ಗಂಗಾ ತೀರಕ್ಕೆ
ಹೋಗಿ ನಿನ್ನ ಗುರುಗಳು ಹೇಳಿದಂತೆ ತಪಸ್ಸು ಮಾಡು. ಇಂದ್ರಿಯಗಳು – ಸ್ವಾರ್ಥ, ಚಂಚಲಭಾವ
ಉಳ್ಳಂಥದ್ದು, ನಿನ್ನ ಇಂದ್ರಿಯಗಳನ್ನು ಬಂಧಿಸಿ, ಏಕಾಗ್ರಚಿತ್ತದಿಂದ ಲಕ್ಷ್ಮೀನಾರಾಯಣನನ್ನು
ಧ್ಯಾನ ಮಾಡು ಎಂದು ಉಪದೇಶಿಸಿದಾಗ ಸುಮಿತ್ರನು ಅಲ್ಲಿ ಮೂರು ದಿನಗಳಿದ್ದು, ಮಾಘಮಾಸ
ವ್ರತವನ್ನಾಚರಿಸಿ ತದನಂತರ ತಪಸ್ಸನ್ನು ಮಾಡುವುದಕ್ಕೆ ಗಂಗಾತೀರಕ್ಕೆ ಹೊರಟನು.
ಇತಿ ಪದ್ಮಪುರಾಣೇ
ಮಾಘಮಾಸ ಮಹಾತ್ಮೇ
ಪಂಚದಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಷೋಡಶೋಧ್ಯಾಯಃ
ಹದಿನಾರನೇ ದಿನದ ಪಾರಾಯಣ
ಹೆಣ್ಣು ನಾಯಿಗೆ ವಿಮುಕ್ತಿ ದೊರೆತ ವೃತ್ತಾಂತ
ದಿಲೀಪ ಮಹಾರಾಜ! ಸುಮಿತ್ರನ ಕಥೆಯನು
ಮಹಾದೇವನು ಪಾರ್ವತೀದೇವಿಗೆ ಹೇಳಿದ ರೀತಿಯನ್ನು ಕೇಳಿದೆಯಲ್ಲ. ಇನ್ನೊಂದು ಕಥೆಯನ್ನು ಪಾರ್ವತಿಗೆ
ಈಶ್ವರನು ಈ ರೀತಿಯಾಗಿ ಹೇಳಿದನು-
ಮಾಘಮಾಸದಲ್ಲಿ ನದೀಸ್ನಾನವನ್ನು ಮಾಡುವವರು ಅಮಿತ
ಧನವಂತರಾಗುತ್ತಾರೆ. ವರ್ತಮಾನ ಕಾಲದಲ್ಲಿ ಎಷ್ಟೇ ಕಷ್ಟಗಳನ್ನು ಅನುಭವಿಸುತ್ತಿದ್ದಾಗ್ಯೂ, ಮಾಘಮಾಸ
ನದೀಸ್ನಾನ ಆರಂಭಿಸಿದ ನಂತರ ಅವರ ಕಷ್ಟಗಳು ಕ್ರಮೇಣ ನಶಿಸಿಹೋಗುತ್ತವೆ. ಮಾಘ ಶುದ್ಧ ದಶಮಿಯ
ದಿನದಂದು ನಿರ್ಮಲವಾದ ಮನಸ್ಸಿನಿಂದ ಶ್ರೀಮನ್ನಾರಾಯಣನ ಪೂಜೆ ಮಾಡಿದರೆ ಶ್ರೀಹರಿಯ
ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ. ಅದರಲ್ಲಿ ಅಣುಮಾತ್ರವಾದರೂ ಸಂಶಯವಿಲ್ಲ ಎಂದು
ಪಾರ್ವತೀದೇವಿಯೊಂದಿಗೆ ಶಂಕರನು ವಿವರಿಸುತ್ತಿದ್ದಾಗ, ಪಾರ್ವತೀದೇವಿಯು-
ನಾಥ! ಶ್ರೀಲಕ್ಷ್ಮೀನಾರಾಯಣ ವ್ರತ ಮಾಡಿದರೆ ಮನೋವಾಂಭೆ
ಫಲಸಿದ್ಧಿ ಉಂಟಾಗುವುದನ್ನು ಹೇಳಿರುವಿರಲ್ಲ. ಆ ವ್ರತ ವಿಧಾನವೆಂಥಾದ್ದು, ಹೇಗೆ ಆಚರಿಸಬೇಕು? ಆ ವಿಧಾನವನ್ನು
ತಿಳಿಯಪಡಿಸಬೇಕು ಎಂದು ವಿನಂತಿಸಿಕೊಳ್ಳಲು ಪರಮೇಶ್ವರನು ಪಾರ್ವತೀದೇವಿಯನ್ನು ಉದ್ದೇಶಿಸಿ ಹೀಗೆ
ಹೇಳುತ್ತಾನೆ – ಮಾಘಶುದ್ಧ ದಶಮಿಯ ದಿನ ಪ್ರಾತಃಕಾಲದಲ್ಲಿ ಕಾಲಕೃತ್ಯಗಳನ್ನು ಪೂರೈಸಿಕೊಂಡು.
ಸ್ನಾನಮಾಡಿ, ಮಂದಾಸನವನ್ನು ಇರಿಸಿ, ಅದನ್ನು ಹಸುವಿನ ಸಗಣಿಯಿಂದ ಸಾರಿಸಿ, ಪಂಚವರ್ಣಗಳಿಂದ
ರಂಗವಲ್ಲಿ ಹಾಕಿ, ಮಂದಾಸನದ ಮಧ್ಯೆ ಎಂಟು ಎಸಳುಗಳ ಪದ್ಮವನ್ನು ರಚಿಸಿ. ಎಲ್ಲ ವಿಧವಾದ
ಫಲಪುಷ್ಪಗಳನ್ನು ತಂದು ಲಕ್ಷ್ಮೀನಾರಾಯಣನನ್ನು ಮಂಟಪಮಧ್ಯೆ ಇರಿಸಿ, ಆ ವಿಗ್ರಹಗಳಿಗೆ ಗಂಧ,
ಕರ್ಪೂರ ಮುಂತಾದ ಸುಗಂಧ ಪ್ರವ್ಯಗಳನ್ನು ಲೇಪಿಸಿ ಪೂಜಿಸಬೇಕು.
ತಾಮ್ರದ ತಂಬಿಗೆಯಿಂದ
ನೀರೆರೆದು. ಮಾವಿನ ಚಿಗುರುಗಳನ್ನು ಅದರಲ್ಲಿಟ್ಟು, ಅದರ ಮೇಲೆ ತೆಂಗಿನ ಕಾಯಿ ಇಟ್ಟು, ಹೊಸ
ವಸ್ತ್ರವನ್ನು ಅದಕ್ಕೆ ಹೊದಿಸಿ, ಲಕ್ಷ್ಮೀನಾರಾಯಣರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜಿಸಬೇಕು.
ಆ ಮಂದಾಸನದ ಮಧ್ಯದಲ್ಲಿ ಸಾಲಗ್ರಾಮವನ್ನು ಇರಿಸಿ, ಒಬ್ಬರನ್ನು ಆಹ್ವಾನಿಸಿ, ಪೂಜಿಸಿ, ಆತನ
ಕೈಯಿಂದ ಧೂಪ ದೀಪ, ಚಂದನ ಅಗರು ಪರಿಮಳ, ವಸ್ತ್ರಗಳನ್ನು ಇರಿಸಿ ನೈವೇದ್ಯವನ್ನು ಅರ್ಪಿಸಬೇಕು.
ನಂತರ ತಾಮ್ರದಪಾತ್ರೆಯಲ್ಲಿನ ನೀರನ್ನು ಸುರಿದು ಅರ್ಘ್ಯಪ್ರಧಾನ ಮಾಡಬೇಕು. ಅನಂತರ ಸೂರ್ಯನಾರಾಯಣ
ಸ್ವರೂಪನಾದ ಶ್ರೀರಾಮಚಂದ್ರ ಪ್ರಭುವನ್ನು ಮನಸ್ಸಿನಲ್ಲಿ ಧ್ಯಾನಿಸಬೇಕು.
ಮಾಘಮಾಸ ಸ್ನಾನ
ಮಾಡಿದವರು ಅವರ ತಂದೆ-ತಾಯಿ-ಬಂಧು-ಮಿತ್ರರ ಸಮಕ್ಷಮದಲ್ಲಿ ಮಾಘಮಾಸ ವ್ರತವನ್ನು ಮಾಡಬೇಕು.
ಒಬ್ಬರಿಗೆ ಅಥವಾ ಸದ್ಬ್ರಾಹ್ಮಣನಿಗೆ ಅಕ್ಕಿ, ಬೆಲ್ಲ, ಉಪ್ಪು, ಬೇಳೆ, ತರಕಾರಿ, ಹಣ್ಣುಗಳು
ಇತ್ಯಾದಿಗಳನ್ನು ನೀಡಬೇಕು. ಮಾಘಪುರಾಣವನ್ನು ಖುದ್ದಾಗಿ ಪಾರಾಯಣ ಮಾಡುವಾಗ ಆಗಲಿ, ಇಲ್ಲವೇ
ಕೇಳುವಾಗ ಆಗಲೀ, ಕೈಯಲ್ಲಿ ಮಂತ್ರಾಕ್ಷತೆಯನ್ನು ಇಟ್ಟುಕೊಂಡು ಕೊನೆಯಲ್ಲಿ ನಾರಾಯಣ ಧ್ಯಾನ
ಮಾಡುತ್ತ ಕೆಲವು ಅಕ್ಷತೆಗಳನ್ನು ಭಗವಂತನ ಮೇಲಿರಿಸಿ ಮತ್ತೆ ಕೆಲವು ಅಕ್ಷತೆಗಳನ್ನು ತಮ್ಮ ತಲೆಯ
ಮೇಲೆ ಹಾಕಿಕೊಳ್ಳಬೇಕು. ಓ ಶಾಂಭವಿ! ಮಾಘಸ್ನಾನ ಮಾಡಿ. ಮಾಘಶುದ್ಧ ದಶಮಿಯ ದಿನ ಲಕ್ಷ್ಮೀ ನಾರಾಯಣರನ್ನು
ನಿಷ್ಠೆಯಿಂದ ಪೂಜೆ ಮಾಡಿದಲ್ಲಿ ಎಂಥದ್ದೇ ಮಹಾಪಾಪಗಳಾದರೂ ನಶಿಸಿ ಹೋಗುತ್ತವೆ. ಇದಕ್ಕೊಂದು ಉತ್ತಮ
ಉದಾಹರಣೆ ಕೂಡ ಹೇಳುತ್ತೇನೆ, ಕೇಳು-
ಗೌತಮ ಮಹರ್ಷಿಗಳು ಒಂದು
ದಿನ ತಮ್ಮ ಶಿಷ್ಯರೊಂದಿಗೆ ಕೂಡಿ ತೀರ್ಥಯಾತ್ರೆ ಮಾಡುವುದಕ್ಕಾಗಿ ಉತ್ತರ ದಿಕ್ಕಿಗೆ ಹೊರಟರು.
ಅವರು ಅನೇಕ ಪುಣ್ಯನದಿಗಳಲ್ಲಿ ಸ್ನಾನ ಮಾಡುತ್ತ, ಪ್ರಸಿದ್ಧ ಕ್ಷೇತ್ರಗಳನ್ನು ದರ್ಶನ ಮಾಡುತ್ತ,
ಮಾರ್ಗದಲ್ಲಿ ಎದುರಾದ ಮುನಿಶ್ರೇಷ್ಠರೊಂದಿಗೆ ಇಷ್ಟಾಗೋಷ್ಠಿಗಳನ್ನು ನಡೆಸುತ್ತ. ಅಲ್ಲಿಗೆ ಮಾಘಮಾಸ
ಪ್ರವೇಶವಾದ್ದರಿಂದ ಕೃಷ್ಣಾನದಿಯಲ್ಲಿ ಸ್ನಾನ ಮಾಡಬೇಕೆಂದು ಆ ಪ್ರದೇಶಕ್ಕೆ ಬಂದು ಬೀಡುಬಿಟ್ಟರು.
ಗೌತಮರು ತಮ್ಮ ಶಿಷ್ಯರೊಡಗೂಡಿ, ಕೃಷ್ಣಾನದಿಯಲ್ಲಿ ಸೂರ್ಯೋದಯ ಸಮಯದಲ್ಲಿ ಸ್ನಾನ ಮಾಡಿ,
ತೀರದಲ್ಲಿದ್ದ ಒಂದು ಅರಳೀಮರದ ಬಳಿಗೆ ಬಂದು –
ಮೂಲತೋ ಬ್ರಹ್ಮರೂಪಾಯ, ಮಧ್ಯತೋ ವಿಷ್ಣು ರೂಪಿಣೇI
ಅಗ್ರತಃ ತಿವರೂಪಾಯ ವೃಕ್ಷರಾಚಾಯ ತೇ ನಮಃII
ಎಂದು ಅರಳೀಮರದ ಸುತ್ತ
ಪ್ರದಕ್ಷಿಣೆ ಮಾಡಿ, ಆ ಮರದ ಬುಡದಲ್ಲಿಯೇ ಅಸೀನರಾಗಿ ಶ್ರೀಹರಿಯನ್ನು ವಿಧಿವತ್ತಾಗಿ ಪೂಜಿಸಿದರು.
ನಂತರ ಶಿಷ್ಯರಿಗೆಲ್ಲ ಮಾಘಮಾಸ ಮಹಿಮೆಯನ್ನು ತಿಳಿಸಿದರು. ಈ ರೀತಿಯಾಗಿ ಪ್ರತಿದಿನ ಅಚರಿಸುತ್ತ,
ಮಾಘ ಶುದ್ಧ ದಶಮಿಯ ದಿನ ಆ ಮರದಡಿಯಲ್ಲಿ ಮಂಟಪವನ್ನು ಮಾಡಿ, ರಂಗವಲ್ಲಿ ಹಾಕಿ,
ಕುಂಕುಮವನ್ನಿಟ್ಟು, ಮಾವಿನೆಲೆಯ ತೋರಣ ಕಟ್ಟಿ ಅಲಂಕರಿಸಿದರು.ಆ ಮಂಟಪದ ಮಧ್ಯದಲ್ಲಿ ಶ್ರೀಹರಿಯ
ಭಾವಚಿತ್ರವನ್ನಿಟ್ಟು ಪೂಜಿಸಿದರು. ಆ ರೀತಿಯಾಗಿ ಪೂಜಿಸುತ್ತಿದ್ದ ಸಮಯದಲ್ಲಿ ಹೆಣ್ಣು ನಾಯಿಯೊಂದು
ಬಂದು ಭಗವಂತನಿಗೆ ಮಾಡುತ್ತಿದ್ದ ಪೂಜಾ ವಿಧಾನಗಳನ್ನೆಲ್ಲವನ್ನೂ ದೀಕ್ಷೆಯಿಂದ ನೋಡುತ್ತ. ಆ
ಅರಳೀಮರಕ್ಕೆ ಎದುರಾಗಿ ಕುಳಿತುಕೊಂಡಿತು.
ಶಿಷ್ಯರು ಅವರ ಬಳಿ ಇದ್ದ
ದಂಡದಿಂದ ಅದನ್ನು ಹೆದರಿಸಿದರು. ಆ ನಾಯಿ ಅಲ್ಲಿಂದೆದ್ದು. ಉತ್ತರದ ಕಡೆ ಹೊರಟು ಮತ್ತೆ
ಪೂರ್ವಕ್ಕೆ ತಿರುಗಿ, ಅತ್ತಕಡೆಯಿಂದ ದಕ್ಷಿಣದ ಕಡೆಗೆ ಕದಲಿ ಮತ್ತೆ ಯಥಾಪ್ರಕಾರ ಬಂದು
ಕುಳಿತುಕೊಂಡಿತು. ಶಿಷ್ಯರು ಮತ್ತೆ ಹೆದರಿಸಿದಾಗ, ಮೊದಲು ಎದ್ದಂತೆಯೇ ಎರಡನೇ ಬಾರಿಯೂ ಆ ಮಂಟಪದ
ಸುತ್ತ ತಿರುಗಿ ಬಂದಿತು. ಶಿಷ್ಯರು ಮೂರನೇ ಬಾರಿಕೂಡ ಅವರ ದಂಡದಿಂದ ಹೆದರಿಸಿದಾಗ ಮತ್ತೆ ಆ ನಾಯಿ
ಅರಳೀ ಮರದ ಸುತ್ತಲೂ ತಿರುಗಿ ಬಂದಿತು. ಈಗಾಗಲೇ ಮೂರುಬಾರಿ ಆ ಮಂಟಪದ ಸುತ್ತಲೂ ಪ್ರದಕ್ಷಿಣೆ
ಮಾಡಿದುದರಿಂದ ಮತ್ತು ಅದು ಮಾಘಮಾಸವಾದುದರಿಂದ ನಾಯಿಯ ತಕ್ಷಣ ರೂಪವನ್ನು ಬಿಟ್ಟು ಸಕಲಾಭರಣಗಳಿಂದ
ಕೂಡಿದ ರಾಜನಾಗಿ ನಿಂತಿತು. ಆ ರಾಜನು ಅಲಿಲದ್ದವರೆಲ್ಲರಿಗೂ ನಮಸ್ಕಾರ ಮಾಡಿದನು. ಅಲ್ಲಿದ್ದ
ಹೆಣ್ಣು ನಾಯಿಯು ರಾಜನಾಗಿ ಬದಲಾದುದನ್ನು ನೋಡಿ, ಋಷಿಗಳು-ಗೌತಮ ಮಹರ್ಷಿಗಳು ಕೂಡ
ಅಮಿತಾಶ್ಚರ್ಯಗೊಂಡರು.
“ಎಲೈ! ರಾಜನೇ ನೀನ್ಯಾರು? ನೀನು ಹೀಗೆ ಬದಲಾಗುವುದಕ್ಕೆ ಕಾರಣವೇನು?” ಎಂದು ಗೌತಮರು ಪ್ರಶ್ನಿಸಿದರು.
ಪೂಜ್ಯರೇ! ನಾನು ಕಳಿಂಗ ರಾಜ. ನಮ್ಮದು ಚಂದ್ರವಂಶ. ನನ್ನ ಹೆಸರು
ಜಯಚಂದ್ರ ನನಗೆಲ್ಲ ವಿದ್ಯೆಗಳಲ್ಲಿ ಪರಿಣಿತಿಯಿದೆ. ನಮ್ಮ ದೇಶದ ಪ್ರಜೆಗಳನ್ನು ಧರ್ಮಮಾರ್ಗದಲ್ಲಿ
ಪರಿಪಾಲಿಸುತ್ತಿದ್ದೆ. ದಾನ ಧರ್ಮಗಳೆಂದರೆ ಅತಿ ಪ್ರೇಮ, ನಾನು ಅನೇಕಾನೇಕ ಗೋವು – ಭೂಮಿ –
ಹಿರಣ್ಯ – ಸಾಲಗ್ರಾಮ ದಾನಗಳನ್ನು ಕೂಡ ಮಾಡಿದೆ ಹೆಚ್ಚಾಗಿ ಅನ್ನದಾನ, ತಿಲದಾನವನ್ನು ಮಾಡಿದೆ.
ಅನೇಕ ಪ್ರದೇಶಗಳಲ್ಲಿ ಕೆರೆ – ಬಾವಿಗಳನ್ನು ತೋಡಿಸಿದೆ. ದಾರಿಹೋಕರಿಗೆ ನೆರಳು ಕೊಡುವ ನಿಮಿತ್ತ
ಮರಗಳನ್ನು ನೆಡಿಸಿದೆ. ಧರ್ಮಶಾಲೆಗಳನ್ನು ಕಟ್ಟಿಸಿದೆ. ಹಸುಗಳು ಕುಡಿಯುವುದಕ್ಕೆ ನೀರಿನ ತೊಟ್ಟಿಗಳನ್ನು
ಮಾಡಿಸಿದೆ. ಅನೇಕ ದೇವಾಲಯಗಳನ್ನು ನಿರ್ಮಿಸಿ, ದೈವ ವಿಗ್ರಹಗಳನ್ನು ಪ್ರತಿಷ್ಠಾಪಿಸಿ,
ಬ್ರಾಹ್ಮಣರಿಂದಲೂ, ವೇದ ಪಠಣೆ ಮಾಡುವ ಪಂಡಿತರಿಂದಲೂ ಎಷ್ಟೋ ಯಾಗಾದಿಗಳನ್ನು ಮಾಡಿಸಿದೆ.
ಪುರಾಣದಲ್ಲಿ ಹೇಳಿದ ಎಲ್ಲ ಧರ್ಮಗಳನ್ನು ಆಚರಿಸಿದೆ. ಅದರೂ ನಾನು ನಾಯಿಯಾಗಿ ಹುಟ್ಟಿದ ಕಾರಣವನ್ನು
ನಿಗೆ ವಿವರವಾಗಿ ಹೇಳುತ್ತೇನೆ ಕೇಳಿ-
ಒಂದು ದಿನ ಒಬ್ಬ
ಮುನಿಪುಂಗವರು ಉನ್ನತ ಯಾಗವನ್ನು ಮಾಡಲು ಉದ್ದೇಶಿಸಿದರು. ಯಾಗ ಮಾಡುವುದೆಂದರೆ ಸಾಮಾನ್ಯ
ವಿಷಯವಲ್ಲ! ಅದಕ್ಕೆ ಧನ, ವಸ್ತು ಸಮುದಾಯಗಳು ಬಹಳ ಬೇಕು. ಅದ್ದರಿಂದ ಆ
ಮುನಿಪುಂಗವರು ನನ್ನ ಬಳಿ ಬಂದು ಕೇಳಿಕೊಂಡರು. ಮಹರ್ಷಿಗಳು ಬಂದಕೂಡಲೆ ಎದುರುಗೊಂಡು ಅವರ
ಪಾದಗಳನ್ನು ತೊಳೆದು. ಆ ನೀರನ್ನು ನನ್ನ ತಲೆಯ ಮೇಲೆ ಪ್ರೋಕ್ಷಿಸಿಕೊಂಡು ಕುಶಲ ಪ್ರಶ್ನೆಗಳನ್ನು ಕೇಳಿದೆ.
ಆ ಋಷಿಗಳು ನನ್ನ ಸತ್ಕಾರಕ್ಕೆ ತುಂಬ ಸಂತೋಷಗೊಂಡರು. ರಾಜಾ ನಿನಗೆ ಗುಟ್ಟಾದ ವಿಷಯವನ್ನು
ತಿಳಿಸುತ್ತೇನೆ. ಈ ಮಾಸದಲ್ಲಿ ಮಕರರಾಶಿಯಲ್ಲಿ ಸೂರ್ಯನು ಪ್ರವೇಶಿಸುತ್ತಾನೆ. ಆ ದಿನ
ಸೂರ್ಯೋದಯವಾದ ನಂತರ ಸ್ನಾನವನ್ನು ಮಾಡಿ ಭಕ್ತಿ-ಶ್ರದ್ಧೆಗಳಿಂದ ಮಾಘಮಾಸ ಮಹಿಮೆಯನ್ನು
ಓದುವುದಾಗಲಿ ಇಲ್ಲವೇ ಕೇಳುವುದಾಗಲಿ ಮಾಡು. ಅದರಿಂದ ನಿನಗೆ ವೈಕುಂಠ ಪ್ರಾಪ್ತಿಯಾಗುತ್ತದೆ.
ಅಷ್ಟೇ ಅಲ್ಲದೆ ಅಶ್ವಮೇಧಯಾಗ ಮಾಡಿದಷ್ಟು ಫಲವಾಗಲಿ, ತಿರ್ಥಸ್ನಾನಗಳು ಮಾಡಿದಾಗ ಬರುವ ಫಲವಾಗಲಿ,
ಇಲ್ಲವೇ ದಾನ ಪುಣ್ಯಗಳು ಅಂದರೆ ಪಂಚಯಾಗಗಳು ಮಾಡಿದಷ್ಟು ಫಲವನ್ನಾಗಲೀ ಪಡೆಯುತ್ತೀಯೆ, ಮಾಘಶುದ್ಧ
ಸಪ್ತಮಿ ಭಾನುವಾರ ಬಂದಲ್ಲಿ, ದಶಮಿ ಭಾನುವಾರ ಬಂದರೂ, ಮುಂಜಾನೆಯೇ ಸ್ನಾನ ಮಾಡಿದರೂ ಹಾಗೂ ಮಾಘ
ಪೌರ್ಣಿಮೆಯ ದಿನ ಉದಯಕಾಲದಲ್ಲೇ ಸ್ನಾನ ಮಾಡಿದರೂ ಮನುಷ್ಯ ಎಂಥದ್ದೇ ಪಾಪಗಳಿಂದಾದರೂ
ವಿಮುಕ್ತನಾಗುತ್ತಾನೆ. ಎಂದು ಆ ಮಹರ್ಷಿಗಳು ನನ್ನಲ್ಲಿ ಹೇಳಿದಾಗ, ನಾನು ಆತನನ್ನು
ಅವಮಾನಿಸುವಂತೆ ಮಾತನಾಡಿ ಹೀಗೆಂದೆ – “ಅಯ್ಯಾ ಋಷಿಶ್ರೇಷ್ಠರೇ! ನೀವು ಹೇಳಿದ ವಿಷಯಗಳೆಲ್ಲ ನನಗೆ ತಿಳಿದಿದೆ. ಎಲ್ಲ ಕಪಟ
– ಅವುಗಳನ್ನು ನಾನು ಸತ್ಯವೆಂದು ಒಪ್ಪಿಕೊಳ್ಳಲಾರೆ. ಎಂಥದ್ದೋ ಅತಿಶಯೋಕ್ತಿಗಳ ಹೊರತು ಬೇರೇನೂ
ಅಲ್ಲ. ಆದ್ದರಿಂದ ನಾನು ಮಾಘಮಾಸ ವ್ರತವನ್ನು ಆಚರಿಸುವುದಾಗಲಿ, ದಾನ-ಪುಣ್ಯಾದಿಗಳನ್ನು
ಮಾಡುವುದಾಗಲಿ, ಪೂಜೆ-ನಮಸ್ಕಾರಗಳನ್ನು ಮಾಡುವುದಾಗಲಿ ಮಾಡುವುದಿಲ್ಲಿ. ಚಳಿಗಾಲದಲ್ಲಿ ತಣ್ಣೀರಿನ
ಸ್ನಾನ ಮಾಡುವುದು ಎಂತಹ ಕಷ್ಟ? ಇನ್ನು ನನಗೆ ಈ ಬೋಧನೆಗಳನ್ನು ಮಾಡಬೇಡಿ. ನನಗಿರುವ ಫಲ ಸಾಕು”. ಎಂದು ಹೇಳಿದೆ.
ಆಗ ನನ್ನ ಮಾತಿನಿಂದ
ಕೋಪಗೊಂಡ ಋಷಿಗಳು ಮುಖ ಕಿವುಚಿಕೊಂಡು ಸರಿ ನಾನು ಹೇಳಬೇಕಾದ್ದನ್ನು ಹೇಳಿದ್ದೇನೆ. ಅದು ನನ್ನ
ಧರ್ಮ ಎಂದು ಯಾಗಕ್ಕೆ ಬೇಕಾದ ಧನವನ್ನು ತೆಗೆದುಕೊಳ್ಳದೆಯೇ ಹೊರಟು ಹೋದರು. ಆಗ ನಾನು ಆ ಋಷಿಗಳ
ಕೈಹಿಡಿದು. ಅಂಗಲಾಚಿ ಬೇಡಿಕೊಂಡಾಗ, ಕಡೆಗೆ ಒಪ್ಪಿಕೊಂಡು ಧನವನ್ನು ತೆಗೆದುಕೊಂಡು ಹೋದರು. ಆ
ರೀತಿಯಾಗಿ ನಾನು ಕೆಲವು ವರ್ಷ ರಾಜ್ಯವಾಳುತ್ತ ಪ್ರಾಣ ಬಿಟ್ಟೆ. ನಂತರ ನನಗೆ ಸಾಲಾಗಿ ಏಳೂ
ಜನ್ಮಗಳೂ ನಾಯಿ ಜನ್ಮವೇ ಬರಲು, ನಾಯಿಯಾಗಿ ಏಳೂ ಜನ್ಮಗಳೂ ಯಾತನೆಯನ್ನು ಅನುಭವಿಸಿದೆ. ಈಗ ನೀವು
ಮಾಡುತ್ತಿರುವ ಪೂಜಾ ಸ್ಥಳದ ಸುತ್ತಲೂ ಮೂರು ಪರ್ಯಾಯಗಳು ಪ್ರದಕ್ಷಿಣೆ ಮಾಡಿದ್ದರಿಂದ ನನ್ನ
ಪೂರ್ವಜನ್ಮ ನನಗೆ ಉಂಟಾಗಿದೆ. ದೈವಯೋಗವನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲವಲ್ಲ! ಹೀಗೆ ನಾಯಿ ಜನ್ಮದಲ್ಲಿರುವಾಗ ಪುನಃ ನನಗೆ ಪೂರ್ವಜನ್ಮ
ಹೇಗೆ ಉಂಟಾಯಿತೋ ವಿವರಿಸಬೇಕು ಎಂದು ಋಷಿಗಳಲ್ಲಿ ಕೇಳಿಕೊಂಡನು.
ಆ ರಾಜನು ಹೇಳಿದ
ವೃತ್ತಾಂತವನ್ನು ಕೇಳಿ ಗೌತಮ ಋಷಿಗಳು ಅಶ್ಚರ್ಯಪಟ್ಟು ಮಾಘಮಾಸವನ್ನು ನೀನು ಕೀಳಾಗಿ ನೋಡಿದ್ದರಿಂದ
ಎಂತಹ ವಿಪತ್ತು ಉಂಟಾಯಿತೋ ಅನುಭವವೇ ಹೇಳುತ್ತದೆ. ನಿನ್ನ ಬಳಿಗೆ ಬಂದ ಋಷಿಯು ಉತ್ತಮನು. ಆತ
ಹೇಳಿದ ವಿಷಯಗಳೆಲ್ಲವೂ ಯತಾರ್ಥಗಳೇ. ನೀನು ನಾಯಿಯಿಂದ – ರಾಜನಾಗಿ ಹೇಗೆ ಪರಿವರ್ತನೆ
ಹೊಂದಿದ್ದೀಯೋ ನಾನು ಆ ವೃತ್ತಾಂತವನ್ನು ವಿವರಿಸುತ್ತೇನೆ ಕೇಳು ಎಂದು-
ನಾನು ನನ್ನ
ಶಿಷ್ಯರೊಂದಿಗೆ ಕೃಷ್ಣವೇಣಿ ನದೀ ತೀರದಲ್ಲಿದ್ದು ಈ ಮಾಘಮಾಸ ಪೂರ್ತಿ ಕೃಷ್ಣಾನದಿಯಲ್ಲಿ ಸ್ನಾನ,
ಜಪಗಳನ್ನು ಮಾಡಿ ಮತ್ತೆ ಮತ್ತೊಂದು ಪುಣ್ಯನದಿಗೆ ಹೋಗಬೇಕೆಂದು ಬಂದಿದ್ದೆವು. ನಾವೆಲ್ಲರೂ ಈ ಮರದ
ಅಡಿಯಲ್ಲಿ ವಿಷ್ಣು ವಿಗ್ರಹವನ್ನಿಟ್ಟು, ಪೂಜೆ ಮಾಡುತ್ತಿದ್ದವು. ನಾಯಿಯ ರೂಪದಲ್ಲಿದ್ದ ನೀನು
ದಾರಿಯಲ್ಲಿ ಹೋಗುತ್ತ ಇಲ್ಲಿನ ನೈವೇದ್ಯವನ್ನು ನೋಡಿ, ತಿನ್ನಬೇಕೆಂಬ ಆಸೆಯಿಂದ ಪೂಜಾಸ್ಥಳಕ್ಕೆ
ಬಂದು ಕುಳಿತುಕೊಂಡೆ. ನೀನು ಅಸಹ್ಯವಾಗಿದ್ದುದರಿಂದ ನನ್ನ ಶಿಷ್ಯರು ನಿನ್ನನ್ನು ತಮ್ಮ
ತಪೋದಂಡದಿಂದ ಓಡಿಸಿದರು. ನೈವೇದ್ಯವನ್ನು ತಿನ್ನಬೇಕೆಂಬ ಅಸೆಯಿಂದಲೇ ಈ ಮಂಟಪದ ಸುತ್ತಲೂ ತಿರುಗಿ
ಯಥಾಸ್ಥಾನಕ್ಕೆ ಬಂದು ಕುಳಿತೆ. ಹೀಗೆ ಮೂರುಬಾರಿ ಸುತ್ತಿದ್ದರಿಂದ ಭಗವಂತನು ನಿನ್ನ ರೂಪವನ್ನು
ಮಾರ್ಪಡಿಸಿ, ನಿಜರೂಪವನ್ನು ಅನುಗ್ರಹಿಸಿದನು. ಅಂದರೆ ಭಗವಂತನ ಮಂಟಪದ ಸುತ್ತಲೂ ಪ್ರದಕ್ಷಿಣೆ
ಹಾಕಿದ್ದರಿಂದ ಮಾಘಮಾಸದ ಫಲವುಂಟಾಗಿ, ಪೂರ್ವಜನ್ಮವೂ ಉಂಟಾಯಿತೆಂದೇ ಹೇಳಬೇಕು. ಇನ್ನು
ಮಾಘಮಾಸವಿಡೀ ನದೀಸ್ನಾನ ಮಾಡಿ, ಭಗವಂತನ ಧ್ಯಾನ ಮಾಡಿ, ಪುರಾಣ ಪಠಣ ಮಾಡಿದರೆ ಎಂತಹ ಫಲ ಬರುವುದೋ
ಊಹಿಸಿಕೋ ಎಂದು ಹೇಳುವುದನ್ನು ರಾಜನು ಆಲಿಸುತ್ತಿದ್ದಾಗ, ಗೌತಮ ಮಹರ್ಷಿಗಳ ಪಾದದ ಮೇಲೆ ಬಿದ್ದು, “ಬೆಕಬೆಕ” ಎಂದು ಆರಚಿ, ಅತ್ತ-ಇತ್ತ ಕುಪ್ಪಳಿಸುತ್ತಿತ್ತು.
ಹಾಗೆಯೇ ಸ್ವಲ್ಪ ಕಾಲದಲ್ಲಿಯೇ ಹಠಾತ್ತನೆ ಕಪ್ಪೆ ರೂಪವನ್ನು ಬಿಟ್ಟು ಮುನಿವನಿತೆಯಾಗಿ ಬದಲಾಯಿತು.
ಆಕೆ ನವಯೌವನವತಿ, ತುಂಬಾ
ಸುಂದರಾಂಗಿ, ಗೌತಮ ಮಹರ್ಷಿಗಳನ್ನು ನೋಡಿದ ಕೂಡಲೇ ಆಕೆಗೆ ಜ್ಞಾನೋದಯವಾಗಿ, ತನ್ನ ಪೂರ್ವಜನ್ಮದ
ವೃತ್ತಾಂತವೆಲ್ಲವೂ ನೆನೆಪಿಗೆ ಬಂದಿತು.
ಆಗ ಗೌತಮರು, ಮಗಳೇ! ನೀನ್ಯಾರು? ನಿನ್ನ ಹೆಸರೇನು? ನಿನ್ನ ವೃತ್ತಾಂತವೇನು? ಎಂದು ಪ್ರಶ್ನಿಸಿದಾಗ ಆಕೆ ಹೀಗೆ ಹೇಳತೊಡಗಿದಳು.
ಇತಿ ಪದ್ಮಪೂರಾಣೇ ಮಾಘಮಾಸ
ಮಹಾತ್ಮೇ
ಷೋಡಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಸಪ್ತದಶೋಧ್ಯಾಯಃ
ಹದಿನೇಳನೇ ದಿನದ ಪಾರಾಯಣ
ಕಪ್ಪೆ ರೂಪವನ್ನು ಪರಿತ್ಯಜಿಸಿದ ಸ್ತ್ರೀ
ತನ್ನ ವೃತ್ತಾಂತವನ್ನು ತಿಳಿಸಿದ್ದು
ಮಹರ್ಷಿಗಳೇ! ನನ್ನ ವೃತ್ತಾಂತವನ್ನು
ತಿಳಿಸುತ್ತೇನೆ ಕೇಳುವಂತಹವರಾಗಿ. ನನ್ನ ಜನ್ಮ ಸ್ಥಳ ಗೋದಾವರಿ ನದೀ ತೀರದ ಸಮೀಪದಲ್ಲಿನ ಕುಗ್ರಾಮ.
ನನ್ನ ತಂದೆಯ ಹೆಸರು ಹರಿಶರ್ಮ, ನನ್ನ ಹೆಸರು ಮಂಜುಳ, ನನ್ನನ್ನು ನನ್ನ ತಂದೆ ಕಾವೇರಿ ತೀರದಲ್ಲಿ
ವಾಸವಾಗಿದ್ದ ಜ್ಞಾನಾನಂದ ಎಂಬುವವನಿಗೆ ಕೊಟ್ಟು ವಿವಾಹ ಮಾಡಿದರು. ಆತ ದೈವಭಕ್ತನು. ಜ್ಞಾನಿ, ನಿಗರ್ವಿ,
ನನಗೆ ವಿವಾಹವಾದ ಕೂಡಲೇ ಆತನ ಜೊತೆಯಲ್ಲಿ ಸಂಸಾರಕ್ಕೆ ಹೊರಟೆ, ಮತ್ತೆ ಕೆಲವು ಕಾಲಗಳ ನಂತರ
ಮಾಘಮಾಸವು ಬಂದಿತು.
ಒಂದು ದಿನ ನನ್ನ ಪತಿಯು, “ಸಖೀ! ಮಾಘಮಾಸದ ಪ್ರವೇಶವಾಗಿದೆ, ಈ ತಿಂಗಳು
ತುಂಬಾ ಪವಿತ್ರವಾದುದು. ಇದರ ಮಹತ್ವ ಬಹಳ ಮೌಲ್ಯಯುತವಾದುದು. ನಾನು ನನ್ನ ಚಿಕ್ಕಂದಿನಿಂದಲೂ
ಪ್ರತಿವರ್ಷವೂ ಮಾಘಸ್ನಾನವನ್ನು ಅಚರಿಸುತ್ತ ಬಂದಿದ್ದೇನೆ. ನೀನು ನನ್ನ ಮಡದಿ ಅದ್ದರಿಂದ ನೀನು ಈ
ಮಾಘಮಾಸವಿಡೀ ಕಾವೇರಿ ನದಿಯಲ್ಲಿ ಸ್ನಾನವನ್ನು ಮಾಡು. ಪ್ರತಿ ದಿನ ಪ್ರಾತಃ ಕಾಲದಲ್ಲಿಯೇ ಎದ್ದು
ಕಾಲ ಕೃತ್ಯಗಳನ್ನು ತೀರಿಸಿಕೊಳ್ಳುವ ಸಮಯದಲ್ಲಿ ಬೆಳಗಾಗಿ ಸೂರ್ಯೋದಯ ಆಗುತ್ತದೆ. ಸೂರ್ಯನು
ಉದಯಿಸಿದ ಕೊಡಲೇ ನದಿಗೆ ಹೋಗಿ ನದಿಯಲ್ಲಿ ಸ್ನಾನ ಮಾಡಬೇಕು. ಸೂರ್ಯನಮಸ್ಕಾರ ಮಾಡಿದನಂತರ ನದೀ
ತೀರದಲ್ಲಿ ವಿಷ್ಣುವಿನ ವಿಗ್ರಹವನ್ನಿಟ್ಟು ಹೂಗಳಿಂದಲೂ, ಸುಗಂಧ ಪರಿಮಳ ಧೂಪ-ದೀಪಗಳಿಂದಲೂ ಪೂಜಿಸಿ
ಸ್ವಾಮಿಗೆ ಕಲ್ಲುಸಕ್ಕರೆಯನ್ನು ನೈವೇದ್ಯವೆನ್ನಿತ್ತು. ನಮಸ್ಕರಿಸೋಣ, ನಂತರ ನಮ್ಮ ಕುಟೀರಕ್ಕೆ
ಬಂದು ಮಾಘಪುರಾಣವನ್ನು ಪಠಿಸೋಣ, ಇದರಿಂದ ನಮಗೆ ಅಧಿಕ ಫಲ ಉಂಟಾಗುತ್ತದೆ”. ಎಂದು ಹಿತಬೋಧನೆ ಮಾಡಿದನು.
ನಾನು ಆತನ ಮಾತುಗಳನ್ನು ಕೇಳಿಸಿಕೊಳ್ಳದೆ, ರೇಗಾಡಿ ಅತನನ್ನು ಕೀಳಾಗಿ ನೋಡಿದೆ. ನನ್ನ ಪತಿ
ತುಂಬಾ ಶಾಂತ ಸ್ವರೂಪನು. ಆದರೂ ನಾನು ಎಲ್ಲೇ ಮೀರಿ ಮಾತಾಡಿದ್ದರಿಂದ ಆತನು ಕೋಪಗೊಂಡು, “ಛೇ! ಮೂರ್ಖಳೇ! ನನ್ನ ಮನೆಗೆ ಬಂದು ವಂಶೋದ್ದಾರ
ಮಾಡುತ್ತೀಯ ಎಂದುಕೊಂಡೆ, ನೀನಿಷ್ಟು ದೈವ ದ್ವೇಷಿಯೆಂದು ನನಗೆ ತಿಳಿದಿರಲಿಲ್ಲ. ನೀನು ನನ್ನ ಜೋತೆ
ಇರಲು ತಕ್ಕವಳಲ್ಲ, ಮಾಘಮಾಸ ವೃತವು ನಿನಗಿಷ್ಟು ಕೀಳಾಗಿ ಕಂಡಿತೇ! ಅದೇ ನಿನಗೆ ಪಾಪವಾಗಿ, ನಿನ್ನನ್ನು
ಶಿಕ್ಷಿಸುತ್ತದೆ” ಎಂದಾಗ ನಾನು ನನ್ನ ಪತಿಯ
ಮಾತಿಗೆ ಎದುರಾಡಿದ ಫಲವಾಗಿ, “ಕೃಷ್ಣಾನದಿ ತೀರದ ಅರಳೀಮರದ
ಪೊಟರೆಯಲ್ಲಿ ಕಪ್ಪೆಯಾಗಿ ಬಿದ್ದಿರು ಎಂದು ನನ್ನನ್ನು ಶಪಿಸಿದನು”.
ಆತನ ಘರ್ಜನೆಗೆ ನಡುಗಿಹೋಗಿ, ಹರಿಯ ಶಾಪಕ್ಕೆ ಹೆದರಿಹೋದೆ. ನನಗೆ ಜ್ಞಾನೋದಯವಾಯಿತು. ನನ್ನ
ತಪ್ಪನ್ನು ನಾನು ತಿಳಿದುಕೊಂಡು ನನಗೆ ಜ್ಞಾನೋದಯವಾಯಿತು. ನನ್ನ ತಪ್ಪನ್ನು ನಾನು ತಿಳಿದುಕೊಂಡೆ “ಅಯ್ಯೋ! ಎಂತಹ ಮೂರ್ಖಳಾಗಿ ವರ್ತಿಸಿದೆ! ಎಂದು ಪಶ್ಚಾತಾಪ ಉಂಟಾಯಿತು. ತಕ್ಷಣ
ನನ್ನ ಪತಿಯ ಪಾದಗಳನ್ನು ಹಿಡಿದುಕೊಂಡು, “ನಾನು ಈ ಶಾಪದಿಂದ ಹೇಗೆ
ವಿಮುಕ್ತಳಾಗುತ್ತೇನೆ? ಮತ್ತೆ ನಿಮ್ಮನ್ನು ಹೇಗೆ
ಭೇಟಿಯಾಗುತ್ತೇನೆ? ನನಗೆ
ಪ್ರಾಯಶ್ಚಿತ್ತವಿಲ್ಲವೆ?” ಎಂದು ಪರಿ ಪರಿಯಾಗಿ
ಪ್ರಾರ್ಥಿಸಿದಾಗ, ನನ್ನ ಗಂಡ ಕ್ಷಣ ತಡೆದು ಯೋಚಿಸಿ, ಒಂದು ಅವಧಿಯನ್ನು ಸೂಚಿಸಿದರು. ಅದೇನೆಂದರೆ,
“ಗೌತಮ ಮಹರ್ಷಿಗಳು ಗೋದಾವರೀ ತೀರದಲ್ಲಿ
ತಮ್ಮ ಆಶ್ರಮದಿಂದ ಉತ್ತರ ದೇಶಯಾತ್ರೆ ಮಾಡುವುದಕ್ಕಾಗಿ ಹೊರಟು, ಮತ್ತೆ ಮಾಘಶುದ್ದ ದಶಮಿ ದಿನಕ್ಕೆ
ಕೃಷ್ಣಾನದಿಯಲ್ಲಿ ಸ್ನಾನ ಮಾಡುವುದಕ್ಕೆ ಬರುತ್ತಾರೆ. ಅಂತಹ ಸಮಯದಲ್ಲಿ ನೀನು ಅವರ ದರ್ಶನ
ಮಾಡಿದರೆ ಆ ಮಹರ್ಷಿಗಳ ಪ್ರಭಾವದಿಂದ ನಿನಗೆ ನಿಜರೂಪ ಉಂಟಾಗುತ್ತಾದೆ” ಎಂದು ಹೇಳುತ್ತಿದ್ದಂತೆಯೇ, “ನಾನು ಕಪ್ಪೆಯ ರೂಪವನ್ನು ತಾಳಿದೆ. ನನ್ನ
ಗಂಡ ಕೂಡ ನನ್ನ ಮೂರ್ಖತನಕ್ಕೆ ವಿಧಾಷಿದಸಿದರು. ನಾನು ಕಪ್ಪೆಯ ರೂಪದಲ್ಲಿ ಕುಪ್ಪಳಿಸಿಕೊಂಡು
ಕೆಲವು ದಿನಗಳಿಗೆ ಕೃಷ್ಣಾನದೀ ತೀರದಲ್ಲಿರುವ ಈ ಅರಳೀಮರದ ಪೊಟರೆಯಲ್ಲಿ ಜೀವಿಸುತ್ತಾ, ನಿಮ್ಮ
ಬರುವಿಕೆಗಾಗಿ ಎದುರು ನೋಡುತ್ತಿದ್ದೆ. ಇದು ಆಗಿ ಎಷ್ಟು ವರ್ಷ ಕಳೆದವೋನನಗೆ ತಿಳಿಯದು!” ಎಂದು ತನ್ನ ವೃತ್ತಾಂತವನ್ನು ಗೌತಮ
ಋಷಿಗೆ ತಿಳಿಸಿದಳು.
“ಮಗಳೇ! ಹೆದರಬೇಡ. ನಿನಗೆ ಈ ಶಾಪ ಉಂಟಾಗಿ,
ಅನೇಕ ವರ್ಷಗಳಾಗಿವೆ. ಇಷ್ಟು ಕಾಲವೂ ನೀನು ಅನೇಕ ಕಷ್ಟಗಳನ್ನು ಅನುಭವಿಸಿ ಬದುಕಿದೆ. ನಿನ್ನ
ಗಂಡನೂ ಏಕಾಂತವಾಗಿ ಬಹಳ ಕಾಲ ಬದುಕಿ, ಹರಿನಾಮ ಸಂಕೀರ್ತನೆ ಮಾಡುತ್ತಾ ಮೃತನಾದನು. ಆತನೀಗ
ವೈಕುಂಠದಲ್ಲಿದ್ದಾನೆ. ನೀನು ನಿನ್ನ ಪತಿಯ ಮಾತು ಕೇಳದೇ ಇದ್ದುದಕ್ಕೆ ಏನೆಲ್ಲ ಕಷ್ಟ ಪಟ್ಟಿರುವಿ
ಗೊತ್ತಾಯಿತಲ್ಲ! ಮಾಘಮಾಸದ ಪ್ರಭಾವ
ಅಸಾಮಾನ್ಯವಾದುದು. ಸಕಲ ಸೌಭಾಗ್ಯಗಳೂ, ಪುತ್ರಸಂತಾನ, ಆರೋಗ್ಯ ಐಶ್ವರ್ಯಾದಿಗಳು
ಪ್ರಾಪ್ತವಾಗುವುವೇ ಅಲ್ಲದೇ, ಮೋಕ್ಷಸಾಧನೆಗೆ ಈ ಮಾಘಮಾಸದ ವ್ರತಕ್ಕಿಂತ ಮಿಗಿಲಾದ ಬೇರಾವ ವ್ರತವೂ
ಇಲ್ಲ. ನಿನ್ನ ಪತಿ ದೂರದೃಷ್ಟಿ ಇರುವ ಜ್ಞಾನಿ, ಆತನ ಗುಣಾಗುಣಗಳಿಗೆ ಎಲ್ಲರೂ
ಸಂತೃಪ್ತರಾಗಿದ್ದಾರೆ. ನಿನ್ನನ್ನು ಮದುವೆಯಾದ ನಂತರ ತನ್ನ ವಂಶಾಭಿವೃದ್ಧಿ ಮಾಡಿಕೊಳ್ಳಬೇಕೆಂಬ
ಆಸೆಯಿಂದ ಇದ್ದನಾತ. ಆದರೆ ನಿನ್ನಿಂದ ಆತನ ಆಸೆಗಳೆಲ್ಲವೂ ನಿರಾಶೆಯಾಗಿ ಹೋಗಿವೆ. ನಿನ್ನ
ಮೂರ್ಖತನದಿಂದ ನಿನ್ನ ಪತಿಗೆ ಕೋಪವುಂಟಾಗಿ, ನಿನ್ನನ್ನು ಶಪಿಸಬೇಕಾಯಿತು. ನೀನು ತಣ್ಣೀರಸ್ನಾನ
ಮಾಡುವುದಿಲ್ಲವೆಂದರೆ, ಆದ್ದರಿಂದ ನಿನಗೆ ನೀರು ದೊರಕದಂತೆ ಮರದ ಪೊಟರೆಯಲ್ಲಿ ಜೀವಿಸುವಂತೆ
ಶಪಿಸಿದನು”.
“ಈ ದಿನ ದೈವ ನಿರ್ಣಯದಿಂದ ನೀನು
ನನ್ನನ್ನು ದರ್ಶಿಸಿದ್ದರಿಂದ ನಿನ್ನ ಗಂಡನ ಮಾತಿನ ಪ್ರಕಾರ ಮತ್ತೆ ನಿನ್ನ ನಿಜರೂಪವನ್ನು
ಪಡೆಯುವಂತಾಗಿದೆ. ಅದರಲ್ಲೂ, ಇದು ಮಾಘಮಾಸ, ಕೃಷ್ಣಾನದಿಯ ತೀರ. ಅದುದರಿಂದ ಮಾಘಮಾಸವ್ರತ ಸಮಯ
ನಿನಗೆಲ್ಲಾ ವಿಧಗಳಲ್ಳೂ ಅನುಕೂಲಕರವಾದ ದಿನ. ಅದ್ದರಿಂದ ನೀನು ತಕ್ಷಣ ಪರಿಶುದ್ಧಳಾಗು,
ಸ್ತ್ರೀಯರಾಗಲಿ, ಪರುಷರಾಗಲಿ ಈ ಸಮಯದಲ್ಲಿ ಪ್ರಾತಃ ಕಾಲದಲ್ಲಿ ಸ್ನಾನಮಾಡಿದರೇ
ವಿಷ್ಣುಸಾನ್ನಿಧ್ಯವನ್ನು ಹೊಂದುತ್ತಾರೆ. ಯಾರಾದರೂ ತಿಳಿದಾಗಲೀ, ತಿಳಿಯದೇ ಆಗಲಿ ಮಾಘ ಶುದ್ಧ
ಸಪ್ತಮಿ, ದಶಮಿ, ಹುಣ್ಣಿಮೆಯಲ್ಲಾಗಲಿ ಪಾಡ್ಯದಿನಗಳಲ್ಲಾಗಲಿ ನದೀಸ್ನಾನವನ್ನು ಮಾಡಿದರೆ ಅವರ
ಪಾಪಗಳೆಲ್ಲವೂ ನಶಿಸುತ್ತವೆ. ಮಾಘಶುದ್ಧ ಪಾಡ್ಯದಿನದಂದು ಹಾಗೆಯೇ ದಶಮಿ, ಏಕಾದಶಿ, ದ್ವಾದಶಿ
ದಿನಗಳಲ್ಲೂ ಸ್ನಾನ ಮಾಡಿ, ನಾರಾಯಣನನ್ನು ಪೂಜಿಸಿ, ಪುರಾಣ ಪಠಣೆ ಮಾಡಿದರೆ ಮನೋವಾಂಛೆಗಳು
ಕೈಗೊಳ್ಳುತ್ತವೆ” ಎಂದು ಗೌತಮರು
ಮುನಿವನಿತೆಗೆ ಹೇಳಿದಂತೆ ಮಹೇಶ್ವರನು ಪಾರ್ವತಿಗೆ ಈ ಕಥೆಯನ್ನು ಹೇಳಿದನು.
ಇತಿ ಪದ್ಮಪೂರಾಣೇ
ಮಾಘಮಾಸ ಮಹಾತ್ಮೇ
ಸಪ್ತದಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಅಷ್ಟಾದಶೋಧ್ಯಾಯಃ
ಹದಿನೆಂಟನೇ ದಿನದ ಪಾರಾಯಣ
ಜಿಪುಣ ವ್ಯಾಪಾರಿಗೆ - ಮಾಘಮಾಸದಫಲ
ವಸಿಷ್ಠ ಮಹರ್ಷಿಗಳು ಪಾರ್ವತಿಗೆ ಪರಮೇಶ್ವರನು ಹೇಳಿದ ಜಿಪುಣಾಗ್ರೇಸರನ ವೃತ್ತಾಂತವನ್ನು
ದಿಲೀಪ ಮಹಾರಜನಿಗೆ ಹೀಗೆ ಹೇಳಿದರು –
ಪಾರ್ವತಿ! ಬಹಳ ವರ್ಷಗಳ ಹಿಂದೆ ದಕ್ಷಿಣ
ಪ್ರದೇಶದಲ್ಲಿ ವಸಂತ ಪಟ್ಟಣವೆಂಬ ದೊಡ್ಡ ಪಟ್ಟಣದಲ್ಲಿ ಬಂಗಾರುಶೆಟ್ಟಿ ಎಂಬ ವೈಶ್ಯನೊಬ್ಬನಿದ್ದನು.
ಆತನ ಹೆಂಡತಿಯ ಹೆಸರು ತುಳಸಮ್ಮ, ಬಂಗಾರುಶೆಟ್ಟಿ ಮಹಾಜಿಪುಣ. ಆತನಿಗೆ ಪಿತ್ರಾರ್ಜಿತ ಆಸ್ತಿಯೇ
ಲೆಕ್ಕವಿಲ್ಲದಷ್ಟಿತ್ತು, ಆದರೂ ಆತ ಇನ್ನೂ ಆಸೆ ಉಳ್ಳವನಾಗಿ ತನ್ನ ಹತ್ತಿರವಿರುವ ಧನವನ್ನು ಬಡ್ಡಿಗಳಿಗೆ
ಕೊಟ್ಟು ಇನ್ನಷ್ಟು ಸಂಪನ್ನನಾದನು. ಆದರೆ ಒಂದು ದಿನವಾದರೂ ಶ್ರೀಹರಿಯನ್ನು ಧ್ಯಾನ ಮಾಡುವುದಾಗಲಿ,
ದಾನ-ಧರ್ಮಗಳನ್ನಾಗಲೀ ಮಾಡಲಿಲ್ಲ. ಅಷ್ಟೇ ಅಲ್ಲ ಬಡಜನರಿಗೆ ಅವರ ಅಸ್ತಿಗಳ ಮೇಲೆ ಬಡ್ಡಿಗೆ
ಸಾಲಕೊಟ್ಟು, ನಿಗದಿತ ಗಡುವಿನಲ್ಲಿ ಸಾಲ ತೀರಿಸದೇ ಇದ್ದಾಗ ಸಾಕ್ಷಿಗಳೊಂದಿಗೆ ಜಗಳವಾಡಿ ಅವರ
ಆಸ್ತಿಗಳನ್ನು ಸಹಿತ ತನ್ನ ವಶಪಡಿಸಿಕೊಳ್ಳುತ್ತಿದ್ದನು. ಒಂದು ದಿನ ಬಂಗಾರುಶೆಟ್ಟಿ ಗ್ರಾಮಾಂತರ
ಪ್ರದೇಶಕ್ಕೆ ಹೊರಟನು. ಆದಿನ ಸಾಯಂಕಾಲ ಒಬ್ಬ ಮುದುಕ ಬ್ರಾಹ್ಮಣನು ಬಂಗಾರುಶೆಟ್ಟಿಯ ಪತ್ನಿಯನ್ನು
ಕಂಡು, ತಾಯಿ! ನಾನು ವಯಸ್ಸಾದವನು. ನನ್ನ
ಗ್ರಾಮ ಸೇರಬೇಕೆಂದರೆ ಹತ್ತು ಮೈಲಿಗಳು ಹೋಗಬೇಕಾಗಿದೆ. ಈಗ ಕತ್ತಲಾಗಿದೆ. ಆಕಾಶದಲ್ಲಿ ಮೋಡಗಳು ಮುಸುಕಿವೆ.
ಚಳಿಗಾಳಿಗೆ ನಡುಗುತ್ತಿದ್ದೇನೆ. ನಿಮ್ಮ ಮನೆಯ ಬಳಿ ರಾತ್ರಿಯನ್ನು ಕಳೆಯಲು ಅವಕಾಶ ಕೊಡಿ. ನಿಮಗೆ
ಪುಣ್ಯವಿರುತ್ತದೆ. ನಾನು ಸದ್ಬ್ರಾಹ್ಮಣನು, ಸದಾಚಾರವಂತನು ಪ್ರಾತಃಕಾಲದಲ್ಲಿ ಮಾಘಸ್ನಾನ ಮಾಡಿ
ಹೊರಟುಹೋಗುತ್ತೇನೆ. ಎಂದು ಅಂಗಲಾಚಿ ಬೇಡಿಕೊಂಡನು. ತುಳಸಮ್ಮನಿಗೆ ದಯೆಯುಂಟಾಯಿತು. ತಕ್ಷಣ ತಮ್ಮ
ಮನೆಯ ಮುಂದಿನ ಜಗುಲಿಯನ್ನು ಶುಭ್ರಮಾಡಿ, ಅಲ್ಲೊಂದು ಚಾಪೆ ಹಾಸಿ, ಹೊದ್ದುಕೊಳ್ಳಲು ಹೊದಿಕೆಯನ್ನು
ನೀಡಿ, ಮಲಗಲು ಹೇಳಿದಳು. ಆಕೆಯ ದಯಾರ್ದ್ರಹೃದಯಕ್ಕೆ ಆ ವೃದ್ಧ ಬ್ರಾಹ್ಮಣನು ಸಂತಸಗೊಂಡು,
ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ, ತುಳಸಮ್ಮನು ಒಂದು ಫಲವನ್ನು ಕೊಟ್ಟು, ಅದನ್ನು ತಿನ್ನಲು
ಹೇಳಿ, ಪೂಜ್ಯರೇ! ಮಾಘಸ್ನಾನ ಮಾಡಿ ಹೋಗುತ್ತೇನೆಂದಿರಲ್ಲ! ಆ ಮಾಘಸ್ನಾನ ಎಂದರೇನು? ಅದರಿಂದ ಉಂಟಾಗುವ ಫಲವೇನು? ಆ ವೃತ್ತಾಂತ
ಕೇಳಲು ಕುತೂಹಲಕರವಾಗಿದೆ ದಯವಿಟ್ಟು ಹೇಳಿ ಎಂದು ಕೇಳಿದಾಗ, ಆ ವೃದ್ಧ ಬ್ರಾಹ್ಮಣನು ಹೊದಿಕೆ
ಹೊದ್ದುಕೊಂಡು-
ಅಮ್ಮ! ಮಾಘಮಾಸದಲ್ಲಿ ನದಿಯಲ್ಲಾಗಲಿ,
ಸರೋವರದಲ್ಲಾಗಲಿ ಇಲ್ಲವೇ ಕೆರೆ-ಬಾವಿಗಳಲ್ಲಾಗಲಿ ಸೂರ್ಯೋದಯದ ನಂತರ ತಣ್ಣೀರಿನ ಸ್ನಾನ ಮಾಡಿ,
ವಿಷ್ಟು ಆಲಯಕ್ಕೆ ಹೋಗಿ, ತುಳಸೀದಳಗಳಿಂದಲೂ, ಹೂವುಗಳಿಂದಲೂ ಪೂಜೆ ಮಾಡಿ, ಸ್ವಾಮಿಯ ಪ್ರಸಾದವನ್ನು
ಸ್ವೀಕರಿಸಬೇಕು. ನಂತರ ಮಾಘಪುರಾಣ ಪಾರಾಯಣ ಮಾಡಬೇಕು.
ಹೇ ಪ್ರತಿದಿನ ಬಿಡದಂತೆ ಒಂದು ತಿಂಗಳಕಾಲ
ಮಾಡಿ, ಕಡೆಯದಿನ ಸಮಾರಾಧನೆ, ದಾನ-ಧರ್ಮಗಳನ್ನು ಮಾಡಬೇಕು. ಹೀಗೆ ಮಾಡಿದರೆ ಮನುಷ್ಯನಿಗಿರುವ
ರೌರವಾದಿ ನರಕ ವಿಶೇಷಗಳಲ್ಲಿ ಬೀಳಿಸುವ ಅಪಾರ ಮಹಾಪಾಪಗಳು ಕೂಡಲೇ ನಶಿಸಿ ಹೋಗುತ್ತವೆ. ಒಂದು ವೇಳೆ
ಈ ಒಂದು ತಿಂಗಳ ಕಾಲ ಮಾಡಲಾಗದವರು, ವೃದ್ಧರು, ರೋಗಿಗಳು ಒಂದು ದಿನವಾದರೂ – ಅಂದರೆ ಏಕಾದಶಿಯ
ದಿನವಾಗಲಿ, ದ್ವಾದಶಿಯಂದಾಗಲಿ ಅಥವಾ ಹುಣ್ಣಿಮೆಯ ದಿನದಲ್ಲಾಗಲಿ ಮೇಲೆ ಹೇಳಿದ ಪ್ರಕಾರ ಮಾಡಿದರೆ
ಸಕಲ ಪಾಪಗಳು ತೊಲಗಿ, ಸಿರಿಸಂಪತ್ತುಗಳು, ಪುತ್ರಸಂತಾನ ಉಂಟಾಗುತ್ತದೆ. ಇದು ನನ್ನ ಅನುಭವದಿಂದ
ತಿಳಿಸುತ್ತಿದ್ದೇನೆ ಎಂದು ಹೇಳಿದನು.
ಆ ಬ್ರಾಹ್ಮಣನ ಮಾತಿಗೆ ತುಳಸಮ್ಮ
ಬಹಳವಾಗಿ ನಂತಸಪಟ್ಟು ತಾನೂ ಕೂಡ ಪ್ರಾತಃಕಾಲದಲ್ಲಿ ಬ್ರಾಹ್ಮಣನ ಜೊತೆಗೆ ನದಿಗೆ ಹೋಗಿ ಸ್ನಾನ
ಮಾಡಲು ನಿಶ್ಚಯಿಸಿದಳು. ಅಷ್ಟರಲ್ಲಿ ಪಕ್ಕದ ಊರಿಗೆ ಹೊಗಿದ್ದ ತನ್ನ ಗಂಡನ ಮನೆಗೆ ಬಂದ ಕೂಡಲೇ ಆಕೆ
ಅತನಿಗೆ ಮಾಘಮಾಸದ ಕುರಿತು ಹೇಳಿ, ತಾನು ಬೆಳಗಿನ ಜಾವ ನದೀಸ್ನಾನ ಮಾಡಲು ಹೋಗುವುದಾಗಿ
ತಿಳಿಸಿದಳು.
ಹೆಂಡತಿಯ ಮಾತಿನಿಂದ ಬಂಗಾರುಶೆಟ್ಟಿ
ಕೋಪಗೊಂಡನು. ಮೈಯಿಡೀ ಉರಿದಂತೆ, ಹಲ್ಲುಗಳನ್ನು ಪಟಪಟನೆ ಕಡಿದು, ಅಯ್ಯೋ ಹುಚ್ಚಿ ನಿನಗೆ ಈ
ವಿಷಯವನ್ನು ಯಾರು ಹೇಳಿದರು? ಮಾಘಮಾಸ ಎಂದರೇನು? ಸ್ನಾವವೆಂಥಾದ್ದು? ವ್ರತ-ದಾನಗಳೇನು? ನಿನಗೇನಾದರೂ ಹುಚ್ಚು
ಹಿಡಿದಿದೆಯೇ? ಸಾಕು... ಸಾಕು.... ಅಧಿಕ
ಪ್ರಸಂಗ ಮಾಡಿದರೆ, ಕುತ್ತಿಗೆ ಹಿಸುಕಿಬಿಡುತ್ತೇನೆ. ಹಣ ಸಂಪಾದನೆ ಮಾಡುವುದರಲ್ಲಿ ಪಂಚಪ್ರಾಣಗಳು
ಹೋಗುತ್ತಿವೆ. ಯಾರೊಬ್ಬರಿಗೂ ಒಂದು ಪೈಸಾ ಕೊಡ ಬಿಡದೆ ಬಡ್ಡಿಗಳನ್ನು ವಸೂಲು ಮಾಡುತ್ತ ಕೂಡಿಟ್ಟ
ಹಣವನ್ನು ದಾನ ಮಾಡುವೆಯಾ? ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ. ಪೂಜೆ ಮಾಡಿ, ದಾನಗಳನ್ನು ಮಾಡಿದರೆ – ಮನೆ
ಹಾಳಾಗಿಹೋಗಿ, ತಲೆಯ ಮೇಲೆ ಬಟ್ಟೆ ಹಾಕಿಕೊಂಡು. “ಭಿಕ್ಷಾಂದೇಹಿ” ಅಂತ ಹೇಳಬೇಕಾದದ್ದೇ.... ಹುಷಾರು! ಹೋಗಿ ಮಲಗು ಎಂದು ಕೆರಳಿ ಗದರಿದನು.
ಅಂದು ರಾತ್ರಿ ತುಳಸಮ್ಮನಿಗೆ ನಿದ್ರೆ
ಬರಲಿಲ್ಲ. ಯಾವಾಗ ಬೆಳಗಾದೀತೋ, ಯಾವಾಗ ನದಿಗೆ ಹೋಗಿ ಸ್ನಾನ ಮಾಡುವೆನೋ ಎಂದು
ಕಾತರಿಸುತ್ತಿದ್ದಳು. ಕೆಲವು ಘಳಿಗೆಗಳ ನಂತರ ಬೆಳಗಾಯಿತು. ತಾನು ಕಾಲಕೃತ್ಯಗಳನ್ನು ಪೂರೈಸಿಕೊಂಡು
ಗಂಡನಿಗೆ ಹೇಳದೆ, ಮನೆಗೆ ಬಂದಿದ್ದ ವೃದ್ಧ ಬ್ರಾಹ್ಮಣನೊಂದಿಗೆ ನದಿಗೆ ಹೋಗಿ ಸ್ನಾನ ಮಾಡುತ್ತಿದ್ದಳು.
ಇಷ್ಟರೊಳಗೆ ಬಂಗಾರುಶೆಟ್ಟಿಯು ಸುಳಿವರಿತು. ಒಂದು ದೊಣ್ಣೆಯನ್ನು ತೆಗೆದುಕೊಂಡು, ನದಿಯ ಬಳಿಗೆ ತೆರಳಿ,
ನೀರಿನಲ್ಲಿ ಇಳಿದು ಹೆಂಡತಿಯನ್ನು ಹೊಡೆಯಲು ಹೋದಾಗ, ಆ ಇಬ್ಬರೂ ಸ್ವಲ್ಪ ಹೊತ್ತು ನೀರಿನಲ್ಲಿ
ಸೆಣಸಾಡಿ, ಹಾಗೆ ಮುಳುಗುತ್ತಲೇ ಆ ಇಬ್ಬರಿಗೂ ಮಾಘಸ್ನಾನದ ಫಲ ದಕ್ಕಿತು. ಒಟ್ಟಿನಲ್ಲಿ
ಬಂಗಾರುಶೆಟ್ಟಿ ಹೆಂಡತಿಯನ್ನು ಹೊಡೆದು, ಮನೆಗೆ ಕರೆದುಕೊಂಡು ಹೋದನು. ಕೆಲವು ವರ್ಷಗಳು ಕಳೆದು
ನಂತರ ಒಂದು ದಿನ ಇಬ್ಬರಿಗೂ ಎಂಥದ್ದೋ ಕಾಯಿಲೆ ಸೋಕಿತು, ಮತ್ತೆ ಕೆಲವು ದಿನಗಳ ನಂತರ ಇಬ್ಬರೂ
ಮರಣಿಸಿದ್ದರಿಂದ ಬಂಗಾರುಶೆಟ್ಟಿಯನ್ನು ಕರೆದೊಯ್ಯಲು ಯಮಭಟರು ಬಂದು, ಕಾಲಪಾಶವನ್ನು ಹಾಕಿ
ಕರೆದುಕೊಂಡು ಹೋಗುತ್ತಿದ್ದರು. ತುಳಸಮ್ಮಳನ್ನು ವಿಷ್ಣುದೂತರು ಕರೆದುಕೊಂಡು ವೈಕುಂಠ ಲೋಕಕ್ಕೆ
ಹೋಗುತ್ತಿದ್ದರು. ಆಗ ತುಳಸಮ್ಮ ಯಮಭಟರನ್ನು ಉದ್ದೇಶಿಸಿ ಹೀಗೆಂದಳು –
ಎಲೈ ಯಮಭಟರೆ! ಏನಿದು ಅನ್ಯಾಯ? ವಿಷ್ಣುದೂತರು ನನ್ನನ್ನು ವೈಕುಂಠಕ್ಕೆ
ಕರೆದುಕೊಂಡು ಹೋಗುವುದೆಂದರೇನು? ನನ್ನ ಗಂಡನನ್ನು ಯಮಲೋಕಕ್ಕೆ ಕರೆದುಕೊಂಡು ಹೋಗುತ್ತಿರುವುದೇಕೆ? ಇಬ್ಬರೂ ಸಮಾನವಲ್ಲವೇ? ಎಂದು ಕೇಳಿದಾಗ – ಯಮಭಟರು ಅಮ್ಮ! ನೀನು ಮಾಘಮಾಸದಲ್ಲಿ ಒಂದುದಿನ ನದೀ
ಸ್ನಾನ ಮಾಡಿದ್ದರಿಂದ ನಿನಗೆ ಈ ಫಲ ದಕ್ಕಿದೆ, ಅದರೆ ನಿನ್ನ ಗಂಡ ಅನೇಕ ಜನರನ್ನು ಹಿಂಸಿಸಿ,
ಅನ್ಯಾಯವಾಗಿ ಧನಾರ್ಜನೆ ಮಾಡಿ, ಅನೇಕರಿಂದ ಸುಳ್ಳನ್ನಾಡಿಸಿ, ನರಕವೆಂದರೂ ಭಯವಿಲ್ಲದೆ, ಭಗವಂತನ
ಮೇಲೆ ಭಕ್ತಿ ಇಲ್ಲದೆ, ನಡೆದುಕೊಂಡದ್ದಕ್ಕೆ ಯಮಲೋಕಕ್ಕೆ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದರು.
ಮತ್ತೆ ಅವರನ್ನು ಕುರಿತು ತುಳಸಮ್ಮಳು
ಹೀಗೆ ಪ್ರಶ್ನಿಸಿದಳು –
“ನಾನು ಒಂದೇ ಒಂದು ದಿನ ನದೀಸ್ನಾನ
ಮಾಡಿದ್ದಕ್ಕೆ ಪುಣ್ಯಫಲ ಉಂಟದಾಗ, ನನ್ನನು ಹೊಡೆಯುತ್ತ ನನ್ನ ಜೊತೆಯಲ್ಲೇ ನನ್ನ ಪತಿಯೂ ಸಹ
ನೀರಿನಲ್ಲಿ ಮುಳುಗಿದರಲ್ಲವೇ! ಶಿಕ್ಷಿಸುವುದರಲ್ಲಿ ಇಷ್ಟು ತಾರತಮ್ಮ ಹೇಗಾಯಿತು?” ಎನ್ನಲು, ಆ ಯಮಭಟರಿಗೆ ಸಂಶಯವುಂಟಾಗಿ
ಏನೂ ತೋಚದೆ ಚಿತ್ರಗುಪ್ತನ ಬಳಿಗೆ ಹೋಗಿ ನಡೆದ ಸಂಗತಿಯನ್ನು, ಆಕೆ ಹಾಕಿದ ಪ್ರಶ್ನೆಯನ್ನು
ತಿಳಿಸಿದರು. ಚಿತ್ರಗುಪ್ತನು ಅವರ ಪಾಪ-ಪುಣ್ಯಗಳ ಪಟ್ಟಿಯನ್ನು ನೋಡಿದಾಗ ಇಬ್ಬರಿಗೂ ಸಮಾನವಾದ
ಪುಣ್ಯಫಲ ಬರೆದಿದೆ. ನಡೆದ ಅಚತುರ್ಯಕ್ಕೆ ಚಿತ್ರಗುಪ್ತನು ಪೇಚಾಡಿ, ಬಂಗಾರುಶೆಟ್ಟಿಯನ್ನೂ ಸಹ
ವೈಕುಂಠಕ್ಕೆ ಕರೆದೊಯ್ಯಲು ವಿಷ್ಣುದೂತರಿಗೆ ಹೇಳಿದನು. ವಿಷ್ಣುಲೋಕಕ್ಕೆ ಮೊದಲೆ ಹೋಗಿದ್ದ
ತುಳಸಮ್ಮ ತನ್ನ ಗಂಡನ ಗತಿ ಏನಾಯಿತೋ ಎಂದು ಕಾತುರದಲ್ಲಿದ್ದಾಗ, ಬಂಗಾರುಶಟ್ಟಿಯನ್ನು
ಪುಷ್ಪಕವಿಮಾನದಲ್ಲ ಕರೆತಂದು ವೈಕಂಠದಲ್ಲಿ ಬಿಟ್ಟರು. ಪತಿ-ಪತ್ನಿಯರಿಬ್ಬರೂ ಬಹಳವಾಗಿ
ಸಂತೋಷಗೊಂಡರು.
“ರಾಜ! ಕೇಳಿದೆಯಾ ಹೆಂಡತಿಯಿಂದ ಗಂಡನಿಗೂ ಕೂಡ
ಹೇಗೆ ಮೋಕ್ಷ ಉಂಟಾಯಿತೋ. ಗಂಡ ಕೆಟ್ಟವನಾಗಿ, ಜಿಪುಣನಾಗಿ ನಡೆದುಕೊಂಡರೂ ಹೆಂಡತಿ ಸಹಜವಾಗಿಯೇ
ಒಂದು ದಿನ ಮಾಘಮಾಸದಲ್ಲಿ ಸ್ನಾನ ಮಾಡಿದ್ದರಿಂದ ಇಬ್ಬರಿಗೂ ವೈಕುಂಠ ಪ್ರಾಪ್ತಿಯಾಯಿತಲ್ಲ.
ಅದ್ದರಿಂದ ಮಾಘಸ್ನಾನವನ್ನು ಒಂದು ತಿಂಗಳಕಾಲ ಮಾಡಿದಲ್ಲಿ ಮತ್ತಷ್ಟು ಮೋಕ್ಷದಾಯಕವೆಂಬುವುದರಲ್ಲಿ
ಅನುಮಾನವಿಲ್ಲ” ಎಂದರು.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಅಷ್ಟಾದಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಅಷ್ಟಾದಶೋಧ್ಯಾಯಃ
ಹತ್ತೊಂಭತ್ತನೆ ದಿನದ ಪಾರಾಯಣ
ಏಕಾದಶಿ ಮಹಿಮೆ
ಸಂವತ್ಸರದಲ್ಲಿ ಬರುವ
ಹನ್ನೆರಡು ಮಾಸಗಳಲ್ಲಿ ಮಾಘಮಾಸವು ಅತ್ಯಂತ ಪ್ರಶಸ್ತವಾದುದು. ಅಂತಹ ಮಾಘಮಾಸದಲ್ಲಿ ನದಿಯಲ್ಲಾಗಲಿ,
ನದಿಯಿಲ್ಲದ ಕಡೆ ಸರೋವರದಲ್ಲಾಗಲಿ, ಸರೋವರದ ಅನುಕೂಲ ಕೂಡ ಇಲ್ಲದ ಪಕ್ಷದಲ್ಲಿ ಬಾವಿಯ
ಬಳಿಯಲ್ಲಾಗಲಿ ಸ್ನಾನ ಮಾಡಿದರೆಪಾಪಗಳೆಲ್ಲವೂ ಬಿಟ್ಟು ಹೋಗುತ್ತವೆ.
ಹಿಂದೆ ಅನಂತನೆಂಬ
ವಿಪ್ರೋತ್ತಮನು ಯಮುನಾ ನದೀ ತೀರದಲ್ಲಿನ ಅಗ್ರಹಾರದಲ್ಲಿ ವಾಸಮಾಡುತ್ತಿದ್ದನು. ಆತನ
ಪೂರ್ವಿಕರೆಲ್ಲರೂ ಶ್ರೇಷ್ಠ ಜ್ಞಾನಿಗಳು, ತಪಶ್ಯಾಲಿಗಳು, ದಾನ-ಧರ್ಮಗಳನ್ನು ಮಾಡಿ ಕೀರ್ತಿಯನ್ನು
ಪಡೆದವರಾಗಿದ್ದರು. ಅನಂತನು ಚಿಕ್ಕಂದಿನಿಂದಲೂ ಮಹಾತುಂಟ, ಹಠವಾದಿ, ಅತನು ತಂದೆ-ತಾಯಿಯರ
ಭಯ-ಭಕ್ತಿಯಿಂದ ಸ್ವಲ್ಪಮಟ್ಟಿಗೆ ಮಾತ್ರ ವಿದ್ಯೆಯನ್ನು ಕಲಿತನು. ಕೆಟ್ಟವರ ಸಹವಾಸ ಮಾಡಿ ಅನೇಕ
ದುರ್ಗುಣಗಳನ್ನು ಕಲಿತನು. ಮದ್ಯ-ಮಾಂಸಗಳನ್ನು ಸೇವಿಸಿ ಹೆತ್ತ ಮಕ್ಕಳನ್ನೂ ಸಹ
ಮಾರಿಕೊಳ್ಳುತ್ತಿದ್ದನು. ಹಾಗೆ ಸಂಪಾದನೆ ಮಾಡಿ ಧನವಂತನಾದನು, ಕೆಲವು ಕಾಲಾನಂತರ ವೃದ್ಧನಾದನು.
ತನಗಿರುವ ಧನದಿಂದ ತಾನೂ ತಿನ್ನುತ್ತಿರಲಿಲ್ಲ. ಪರರಿಗೂ ಕೊಡುತ್ತಿರಲಿಲ್ಲ.
ಒಂದು ದಿನ ರಾತ್ರಿ
ಮಲಗುವಾಗ ಹೀಗೆ ಯೋಚಿಸಿದನು –
“ಅಯ್ಯೋ! ನಾನೆಂತಹ ಪಾಪಾತ್ಮನಾದೆ.
ಧನಬಲ, ಅಂಗಬಲ ಇದೆ ಎಂಬಮನೋಗರ್ವದಿದ ಜಿವನಪರ್ಯಂತ ಮುಕ್ತಿಯನ್ನು ಕೊಡುವ ಪುಣ್ಯಕಾರ್ಯವೊಂದನ್ನೂ
ಮಾಡಲಾರದೆ ಹೋದೆನಲ್ಲ” ಎಂದು ಪಶ್ಚಾತ್ತಾಪ ಪಡುತ್ತ ನಿದ್ರೆಹೋದನು.
ಎಲ್ಲ ದಿನಗಳೂ ಒಂದೇ
ರೀತಿಯಾಗಿರುದಿಲ್ಲ. ಆ ದಿನ ಕೆಲವರು ಕಳ್ಳರು ಅನಂತನ ಮನೆಯೊಳಗೆ ನುಗ್ಗಿ ಧನ, ಬಂಗಾರಗಳನ್ನು
ದೋಚಿಕೊಂಡು ಹೋದರು. ಅನಂತನು ನಿದ್ರೆಯಿಂದೆದ್ದು ನೋಡಿದಾಗ ಸಂಪತ್ತೆಲ್ಲ ಅಪಹರಿಸಲ್ಪಟ್ಟಿತ್ತು.
ಅನ್ಯಾಯವಾಗಿ ಗಳಿಸಿದ ಧನ ಪರರ ಪಾಲಾಯಿತೆಂದು ರೋಧಿಸಿದನು. ಆ ಸಮಯದಲ್ಲಿ ಹಿರಿಯರು ಹೇಳಿದ ನೀತಿ
ನೆನಪಿಗೆ ಬಂದು, ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಕೋರತೊಡಗಿದನು. ಆ ಸಮಯದಲ್ಲಿಯೇ
ಮಾಘಮಾಸ ನಡೆಯುತ್ತಿದ್ದುದರಿಂದ ಯಮುನಾ ನದಿ ಹೋಗಿ ಸ್ನಾನ ಮಾಡಲು, ಆತನಿಗೆ ಮಾಘಮಾಸ ನದೀಸ್ನಾನ ಫಲ
ದಕ್ಕಿತು. ನದಿಯಲ್ಲಿ ಮುಳುಗಿ ಒದ್ದೆ ಬಟ್ಟೆಯೊಂದಿಗೆ ದಡಕ್ಕೆ ಬಂದನು. ಚಳಿಯಲ್ಲಿ ಗಡಗಡನೆ ನಡುಗಿ
ಮರಗಟ್ಟಿ ಹೋಗುತ್ತ “ನಾರಾಯಣ” ಎಂದು ಪ್ರಾಣ ಬಿಟ್ಟನು. ಆ ಒಂದು ದಿನವಾದರೂ ನದಿಯಲ್ಲಿ ಸ್ನಾನ
ಮಾಡಿದ್ದರಿಂದ ಆತನು ಮಾಡಿದ ಪಾಪಗಳೆಲ್ಲವೂ ನಶಿಸಿ ವೈಕುಂಠ ವಾಸನಾದನು – ಎಂದು ವಸಿಷ್ಠ
ಮಹರ್ಷಿಗಳು ತಿಳಿಸಿದರು.
ಇತಿ ಪದ್ಮಪುರಣೇ ಮಾಘಮಾಸ
ಮಾಹತ್ಮೇ
ಏಕೋನವಿಂಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ವಿಂಶೋಧ್ಯಾಯಃ
ಇಪ್ಪತ್ತನೇ ದಿನದ ಪಾರಾಯಣ
ಭೀಮನಿಂದ ಏಕಾದಶೀ
ವ್ರತಾಚರಣೆ
ಪಾಂಡವರಲ್ಲಿ ದ್ವಿತೀಯನು
ಭೀಮ. ಆತನು ಮಹಾಬಲಶಾಲಿ, ಭೋಜನ ಪ್ರಿಯನು, ಹಸಿವೆಯನ್ನು ಸ್ವಲ್ಪವೂ ತಡೆದುಕೊಳ್ಳಲಾರ. ಬಂಡಿ
ಅನ್ನವಿದ್ದರೂ ಸಾಕಾಗುವುದಿಲ್ಲ. ಅಂತಹ ಭೀಮನಿಗೆ ಏಕಾದಶಿ ವ್ರತ ಮಾಡಬೇಕೆಂಬ ಕುತೂಹಲ ಹುಟ್ಟಿತು.
ಅದರೆ, ಒಂದು ವಿಷಯದಲ್ಲಿ ಚಿಂತ್ರಾಕ್ರಾಂತನಾದನು. ಅದೇನೆನ್ನುವೆಯಾ! “ಏಕಾದಶಿಯ ದಿನ ಊಟ
ಮಾಡಬಾರದಲ್ಲ! ಊಟ ಮಾಡಿದಲ್ಲಿ ಫಲ
ದಕ್ಕುವುದಿಲ್ಲವಲ್ಲ?” ಎಂದು ಚಿಂತಿಸಿ, ತನ್ನ
ಪುರೋಹಿತನಲ್ಲಿಗೆ ಹೋಗಿ. “ಪೂಜ್ಯ ಪುರೋಹಿತರೇ! ಎಲ್ಲ ದಿನಗಳಿಗಿಂತಲೂ ಏಕಾದಶಿ ಪರಮ ಪುಣ್ಯದಿವೆಂದು
ಹೇಳುತ್ತಾರಲ್ಲ. ಅದರ ವಿಶಿಷ್ಠತೆ ಏನು?” ಎಂದು ಭೀಮನು ಕೇಳಿದನು.
ಅದಕ್ಕೆ ಪುರೋಹಿತರಾದ
ಧೌಮ್ಯರು, ಹೌದು ಭೀಮಸೇನ! ಆ ದಿನ ಎಲ್ಲ
ದಿನಗಳಿಗಿಂತಲೂ ಪ್ರಶಸ್ತವಾದುದು. ಶ್ರೀಮಹಾವಿಷ್ಣುನಿಗೆ ಪ್ರಿಯಕರವಾದುದು ಅದ್ದರಿಂದಲೇ ಎಲ್ಲ
ಮತಸ್ಥರೂ ಏಕಾದಶಿ ವ್ರತವನ್ನು ಮಾಡಬಹುದೆಂದು ಹೇಳಿದರು.
ಆಗ ಭೀಮಸೇನನು – ಸರಿ ನಾನು
ಹಾಗೇ ಮಾಡುವೆನು. ಆದರೆ ವಿಪ್ರೋತ್ತಮರೇ! ನಾನು ಭೋಜನ ಪ್ರಿಯನೆಂಬ
ಸಂಗತಿ ಜನರಿಗೆ ತಿಳಿದಿದೆಯಲ್ಲ, ಒಂದು ಘಳಿಗೆ ತಡವಾದರೂ ನಾನು ಹಸಿವೆಯನ್ನು ತಡೆದುಕೊಳ್ಳಲಾರೆ.
ಅದ್ದರಿಂದ ಏಕಾದಶಿಯ ದಿನ ಉಪವಾಸ ಇರುವುದು ಹೇಗೆ ಎಂದು ಯೋಚಿಸುತ್ತಿದ್ದೇನೆ. ಉಪವಾಸ ಇದ್ದ ದಿನವೇ
ಹಸಿವು ಹೆಚ್ಚಾಗಿರುತ್ತಾದೆ. ಅದರಿಂದ ಹಸಿವೆಯ ದಾಹ ತೀರುವಂತೆಯೂ ಏಕಾದಶಿ ವ್ರತಫಲ ದಕ್ಕುವಂತೆಯೂ
ನನಗೆ ಸಲಹೆಯನ್ನು ನೀಡಿ ಎಂದು ಧೌಮ್ಯರ ಬಳಿ ಪ್ರಾರ್ಥಿಸಿದನು. ಭೀಮನ ಮಾತಿಗೆ ಧೌಮ್ಯರು
ಕಿರುನಕ್ಕು, ಭೀಮಸೇನಾ! ಏಕಾದಶೀ ವ್ರತಕ್ಕೆ ಕಂಡು
ಬರುವುದಿಲ್ಲ. ಅದ್ದರಿಂದ ನೀನು ದೀಕ್ಷೆ ತೊಟ್ಟಲ್ಲಿ ಹಸಿವೆಯಾಗುವುದಿಲ್ಲ.
ಬರಲಿರುವ ಏಕಾದಶೀ ಅಂದರೆ
ಮಾಘಶುದ್ಧ ಏಕಾದಶಿ ಮಹಾಶ್ರೇಷ್ಠವಾದುದು. ಅದಕ್ಕೂ ಮಿಗಿಲಾದ ಪರ್ವದಿನ ಮತ್ತೊಂದಿಲ್ಲ, ಕೆಲವೊಂದು
ಸಮಯದಲ್ಲಿ ಮಾಘ ಏಕಾದಶೀ ದಿನ ಪುಷ್ಯ ನಕ್ಷತ್ರದಿಂದ ಕೂಡಿದ್ದಾಗಿರುತ್ತದೆ. ಅಂತಹ ಏಕಾದಶಿಗೆ
ಸಮಾನವಾದುದು ಮತ್ತ್ಯಾವುದೂ ಇಲ್ಲ. ಸಂವತ್ಸರದಲ್ಲಿ ಬರುವ ಇಪ್ಪತ್ನಾಲ್ಕು ಏಕಾದಶಿಗಳಲ್ಲಿ
ಮಾಘಶುದ್ಧ ಏಕಾದಶಿಯು ಮಹಾಪರ್ವ ದಿನವಾದ್ದರಿಂದ. ಆ ದಿನದಂದು ಏಕಾದಶೀ ವ್ರತವನ್ನು ಆಚರಿಸಿದರೆ
ಶ್ರೇಷ್ಠಫಲ ಉಂಟಾಗುತ್ತದೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಆದ್ದರಿಂದ ಓ ಭೀಮಸೇನಾ! ನೀನು ಖಂಡಿತವಾಗಿಯೂ ಮಾಘಶುದ್ಧ ಏಕಾದಶೀ ವ್ರತವನ್ನು ಆಚರಿಸು.
ಹಸಿವೆಯ ಕುರಿತು ಚಿಂತೆ ಮಾಡಬೇಡ, ದೀಕ್ಷೆಯಿಂದ ಇದ್ದಲ್ಲಿ ಹಸಿವು ಕಿಂಚಿತ್ ಮಾತ್ರವೂ ಆಗುವುದಿಲ್ಲ. ನಿಯಮ ತಪ್ಪಬಾರದು ಎಂದು ವಿವರಿಸಿದರು.
ಧೌಮ್ಯರಿಂದ ತನ್ನ ಸಂಶಯ ನಿವಾರಣೆಯಾದ್ದರಿಂದ ಭೀಮನು, ಮಾಘಶುದ್ಧ
ಏಕಾದಶಿಯ ದಿನ ಅತಿ ನಿಷ್ಠೆಯಿಂದ ವ್ರತವನ್ನು ಮಾಡಿ ಉಪವಾಸವಿದ್ದನು. ಅದಕ್ಕೇ ಮಾಘಶುದ್ಧ
ಏಕಾದಶಿಯನ್ನು “ಭೀಮ ಏಕಾದಶಿ” ಎಂದು ಕರೆಯುತ್ತಾರೆ.
ಅಷ್ಟೇ ಅಲ್ಲದೇ, ಓ ದಿಲೀಪ ಮಹಾರಾಜ! ಪರಮೇಶ್ವರನಿಗೆ ಅತ್ಯಂತ ಪ್ರಿಯವಾದ ಶಿವರಾತ್ರಿ ಕೂಡ ಮಾಘಮಾಸದಲ್ಲಿಯೇ
ಬರುತ್ತದೆ. ಅದ್ದರಿಂದ ಮಹಾಶಿವರಾತ್ರಿ ಮಹಿಮೆಯನ್ನು ಕುರಿತು ಕೂಡ ವಿವರಿಸುತ್ತೇನೆ.
ಶ್ರದ್ಧೆಯಿಂದ ಕೇಳುವಂತವನಾಗು ಎಂದು ವಸಿಷ್ಠರು ದಿಲೀಪ ಮಹಾರಾಜನಿಗೆ ಹೀಗೆ ಹೇಳುತ್ತಾರೆ.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ವಿಂಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಏಕಏಂಶೋಧ್ಯಾಯಃ
ಇಪ್ಪತ್ತೊಂದನೇ ದಿನದ ಪಾರಾಯಣ
ಶಿವರಾತ್ರಿ ಮಹಿಮೆ
ಏಕಾದಶಿ ಮಹಾವಿಷ್ಣುವಿಗೆ
ಹೇಗೆ ಪ್ರೀತಿಕರವಾದುದೋ, ಅದೇ ರೀತಿಯಾಗಿ ಮಾಘಶುದ್ಧ ಚತುರ್ದಶಿ ಶಿವನಿಗೆ ಪ್ರಿಯವಾದುದು ಇದನ್ನು
ಶಿವರಾತ್ರಿ ಎನ್ನುತ್ತಾರೆ. ಮಾಘಮಾಸದಲ್ಲಿ ಅಮಾವಾಸ್ಯೆಯ ಹಿಂದಿನ ಬರುವ ದಿನವನ್ನೇ “ಮಹಾಶಿವರಾತ್ರಿ” ಎನ್ನುತ್ತಾರೆ.
ಇದು ಮಾಘಮಾಸದ
ಕೃಷ್ಣಪಕ್ಷದಲ್ಲಿ ಚತುರ್ದಶಿ ದಿನ ಬರುತ್ತದೆ. ಪ್ರತಿ ತಿಂಗಳ ಮಾಸ ಶಿವರಾತ್ರಿಗಿಂತಲೂ, ಮಾಘಮಾಸದ
ಕೃಷ್ಣಪಕ್ಷದಲ್ಲಿ ಬರುವ ಮಾಹಾಶಿವರಾತ್ರಿ ಪರಮೇಶ್ವರನಿಗೆ ಅತ್ಯಂತ ಪ್ರಿಯಕರವಾದುದು. ಆ ದಿನ
ನದಿಯಲ್ಲಾಗಲಿ ಕೊಳದಲ್ಲಾಗಲಿ, ಇಲ್ಲವೆ ಬಾವಿಯ ಬಳಿಯಲ್ಲಾಗಲಿ ಸ್ನಾನಮಾಡಿ ಶಂಕರನನ್ನು
ಪೂಜಿಸಬೇಕು. ಪರಮೇಶ್ವರನ ಅಷ್ಟೋತ್ತರ ಶತನಾಮಾವಳಿ ಸಹಿತವಾಗಿ ಬಿಲ್ಪಪತ್ರೆಯಿಂದ ಪೂಜಿಸಬೇಕು. ಕೂಡ
ಮಾಡದಿದ್ದರೂ. ಏನೆಲ್ಲ ಪಾಪ ಹೊಂದಿದ್ದರೂ ಅವೆಲ್ಲವೂ ತಕ್ಷಣ ಬಿಟ್ಟುಹೋಗುವುವು. ಅಲ್ಲದೆ ಕೈಲಾಸ
ಪ್ರಾಪ್ತಿಯಾಗುತ್ತದೆ. ಶಿವ ಪೂಜಾ ವಿಧಾನದಲ್ಲಿ ಶಿವರಾತ್ರಿಗಿಂತಲೂ ಮಿಗಿಲಾದುದು ಮತ್ತೊಂದಿಲ್ಲ
ಅದ್ದರಿಂದ ಮಾಘಮಾಸದ ಕೃಷ್ಣಪಕ್ಷದಲ್ಲಿ ಬರುವ ಚತುರ್ದಶಿಯು ಉಮಾಪತಿಗೆ ಅತ್ಯಂತ
ಪ್ರೀತಿಪಾತ್ರವಾದುದು. ಆದ್ದರಿಂದ ಶಿವರಾತ್ರಿ ದಿನ ಪ್ರತಿಯೊಬ್ಬರೂ ಅಂದರೆ ಜಾತಿ-ಭೇದಗಳ
ನಿಮಿತ್ತಗಳಿಲ್ಲದೆ. ಎಲ್ಲರೂ ಶಿವರಾತ್ರಿ ವ್ರತವನ್ನಾಚರಿಸಿ ಜಾಗರಣೆ ಮಾಡಬೇಕು.
ಹಿಂದೆ ಶಬರೀ ನದಿ
ತೀರದಲ್ಲಿನ ಅರಣ್ಯದಲ್ಲಿ ಕುಲೀನನೆಂಬ ವ್ಯಾಧನು ತನ್ನ ಹೆಂಡತಿ, ಮಕ್ಕಳೊಂದಿಗೆ ವಾಸ ಮಾಡುತ್ತಿದ್ದನು.
ಆತನು ಬೇಟೆಯ ಹೊರತು ಬೇರೇನೂ ಅಲೋಚಿಸದ ಶತಮೂರ್ಖನು. ಬೇಟೆಗೆ ಹೋಗುವುದು, ಪ್ರಾಣಿಗಳನ್ನು
ಬೇಟೆಯಾಡುವುದರಲ್ಲಿ ಸಿದ್ಧಹಸ್ತನು. ಕ್ರೂರಮೃಗಗಳೂ ಸಹಿತ ಕುಲೀನನ್ನು ನೋಡಿ ಹೆದರಿ
ಓಡಿಹೋಗುತ್ತಿದ್ದವು. ಅದ್ದರಿಂದ ಅತ ಕಾಡಿನಲ್ಲೆಲ್ಲ ನಿರ್ಭಯದಿಂದ ತಿರುಗಾಡುತ್ತಿದ್ದನು.
ಪ್ರತಿದಿನದಂತೆ ಒಂದು ದಿನ
ಬೇಟೆಗೆ ಹೋದಾಗ,ಆ ದಿನ ಯಾವ ಪ್ರಾಣಿಯೂ ಕಣ್ಣಿಗೆ ಬೀಳಲಿಲ್ಲ, ಬರಿಗೈಯಲ್ಲಿ ಮನೆಗೆ ಹೋಗಲು ಮನಸ್ಸು
ಒಪ್ಪದಿದ್ದರಿಂದ, ಹೊತ್ತು ಮುಳುಗುತ್ತಿದ್ದಂತೆ ಬಿಲ್ವವೃಕ್ಷದ ಮೇಲೆ ಹತ್ತಿ ಬೇಟೆಗಾಗಿ
ಪ್ರಾಣಿಗಳನ್ನು ಎದುರು ನೋಡುತ್ತ ಕುಳಿತನು. ಇರುಳು ಸರಿದು ಹಗಲಾಗತೊಡಗಿತು.
ಬೆಳಗಾಗುತ್ತಿದ್ದಂತೆಲ್ಲ ಚಳಿಯು ಹೆಚ್ಚಾಗಿ ಮಂಜು ಬೀಳುತ್ತಿದ್ದರಿಂದ ಕೊಂಬೆಗಳನ್ನು ಸಮೀಪಕ್ಕೆ
ಎಳೆದುಕೊಂಡು ಎಲೆಗಳು ಉದುರಿ, ಮರದ ಅಡಿಯಲ್ಲಿದ್ದ ಶಿವಲಿಂಗದ ಮೇಲೆ ಬೀಳುತ್ತಿದ್ದವು, ಆ ದಿನ
ಮಹಾಶಿವರಾತ್ರಿ. ಅದರಲ್ಲೂ ವ್ಯಾಧನು ಹಗಲೆಲ್ಲ ಏನೂ ತಿನ್ನದೆ. ರಾತ್ರಿಯೆಲ್ಲ ಜಾಗರಣೆ
ಮಾಡಿದ್ದನು. ತನಗೆ ಆರಿವಿಲ್ಲದೆಯೇ ಬಿಲ್ವಪತ್ರೆಗಳು ಶಿವಲಿಂಗದ ಮೇಲೆ ಬಿದ್ದಿದ್ದವು.
ಇನ್ನೇನಿದೆ! ಶಿವರಾತ್ರಿಯ ಫಲ ಕುಲೀನನಿಗೆ ಪ್ರಾಪ್ತಿಯಾಯಿತು.
ಮಾಘಮಾಸದಲ್ಲಿ ಕೃಷ್ಣಪಕ್ಷದ ಚತುರ್ದಶಿ ರಾತ್ರಿಯಿಡೀ ಜಾಗರಣೆ, ಮೇಲಾಗಿ ಶಿವಲಿಂಗದ ಮೇಲೆ
ಬಿಲ್ವಪತ್ರೆಗಳು ಬಿದ್ದಿದ್ದು ಏನೂ ತಿನ್ನದೆ ಉಪವಾಸವಿದ್ದದ್ದು ಈ ಎಲ್ಲವೂ ವ್ಯಾಧನಿಗೆ
ಒಳ್ಳೆಯದನ್ನೇ ಮಾಡಿತು.
ಜರಾಮರಣಗಳಿಗೆ
ಮೇಲುಕೀಳುಗಳಾಗಲಿ, ಶಿಶು-ವೃದ್ಧ ಭೇದಗಳಿಲ್ಲ. ಪೂರ್ವದಲ್ಲಿ ಮಾಡಿದ ಪಾಪ-ಪುಣ್ಯಗಳವನ್ನು ಹಿಡಿದು
ಮನಷ್ಯನು ತನ್ನ ಜೀವನವನ್ನು ಕಳೆಯಬೇಕಾದದ್ದೇ, ಮತ್ತೆ ಕೆಲವು ವರ್ಷಗಳಿಗೆ ಆ ಕುಲೀನನಿಗೆ
ವೃದ್ಧಾಪ್ಯವುಂಟಾಗಿ, ಮರಣ ಸನ್ನಿಹಿತವಾಗಿ ಪ್ರಾಣ ಬಿಟ್ಟನು. ತಕ್ಷಣ ಕೈಲಾಸದಿಂದ ತಿವದೂತರು
ಬಂದು, ಯಮದೂತರ ಕೈಯಲ್ಲಿದ್ದ ವ್ಯಾಧನ ಜೀವಾತ್ಮವನ್ನು ತೆಗೆದುಕೊಂಡು ಶಿವನ ಬಳಿಗೆ ಹೋದರು.
ಯಮದೂತರು ಏನೂ ಮಾಡಲಾಗದೆ, ಬರಿಗೈಯಲ್ಲಿ ಹಿಂದಿರುಗಿ ಯಮನಲ್ಲಿ ನಡೆದ ವೃತ್ತಾಂತವನ್ನು
ತಿಳಿಸಿದರು. ಯಮನು ಸ್ವಲ್ಪಕಾಲ ಆಲೋಚಿಸಿ ಶಿವನ ಬಳಿ ಹೋದನು. ಶಿವ, ಪಾರ್ವತಿ, ಗಣಪತಿ,
ಕುಮಾರಸ್ವಾಮಿ, ತುಂಬರ, ನಾರದಾದಿ ಗಣಗಳಿಂದ ಕೂಡಿದ್ದು ಒಡ್ಡೋಲಗದ ಸಮಯದಲ್ಲಿ ಯಮನು ಬಂದು
ಶಿವನಿಗೆ ನಮಸ್ಕರಿಸಿದ.
ಉಮಾಪತಿಯು ಯಮನನ್ನು ಹರಸಿ,
ಉಚಿತಾಸನವನ್ನು ನೀಡಿ, ಕುಶಲಪ್ರಶ್ನೆಗಳನ್ನು ಕೇಳಿ, ಬಂದ ಕಾರಣವೇನೆಂದು ಪ್ರಶ್ನಿಸಿದನು. ಅದಕ್ಕೆ
ಯಮನು, ಮಹೇಶ್ವರ! ಬಹಳ ದಿನಗಳ ನಂತರ ನಿನ್ನ
ದರ್ಶನ ಭಾಗ್ಯವು ಒದಗಿ ಬಂದದ್ದಕ್ಕೆ ಬಹಳ ಸಂತಸವಾಗಿದೆ. ನಿನ್ನ ದರ್ಶನ ಪಡೆಯಲು ಕಾರಣವೇನೆಂದರೆ,
ಇಷ್ಟಕ್ಕೆ ಮುಂಚೆ ಶಿವದೂತರು ಕರೆದುಕೊಂಡು ಬಂದ ವ್ಯಾಧನು ಮಹಾಪಾಪಿ, ಕ್ರೂರಿ,
ದಯಾದಾಕ್ಷಿಣ್ಯಗಳಿಲ್ಲದೆ ಪ್ರಾಣಿಹಿಂಸೆ ಮಾಡಿದ್ದಾನೆ. ಒಂದು ದಿನ ಎಂದರೆ ಮಹಾಶಿವರಾತ್ರಿಯ ದಿನ
ತಾನು ಅನಿರೀಕ್ಷಿತವಾಗಿ ಪ್ರಾಣಿಗಳು ಸಿಗದಿದ್ದರಿಂದ ಆಹಾರ ಸೇವಿಸಲಿಲ್ಲ. ಪ್ರಾಣಿಗಳನ್ನು
ಬೇಟೆಯಾಡುವುದಕ್ಕೆ ಆ ರಾತ್ರಿಯೆಲ್ಲ ಎಚ್ಚರವಾಗೇ ಇದ್ದನೇ ಹೊರತು, ಚಿತ್ತಶುದ್ಧಿಯಿಂದ ಆತನು ಶಿವ
ಲಿಂಗವನ್ನು ಪೂಜಿಸಲಿಲ್ಲ. ಅದ್ದರಿಂದ ಆತನನ್ನು ಕೈಲಾಸಕ್ಕೆ ಕರೆದುಕೊಂಡು ಬಂದದ್ದು ಸರಿಯೇ ಅಷ್ಟು
ಮಾತ್ರಕ್ಕೆ ಆತನಿಗೆ ಕೈಲಾಸ ಪ್ರಾಪ್ತಿಯಾಯಿತೇ? ಎಂದು ಯಮನು ಮನವಿ
ಮಾಡಿಕೊಂಡನು.
ಮುಗುಳ್ನಕ್ಕ ಶಿವನು. “ಯಮಧರ್ಮರಾಜ! ನನಗೆ ಅತ್ಯಂತ
ಪ್ರೀತಿಕರವಾದ ಮಹಾಶಿವರಾತ್ರಿ ಪರ್ವದಿನದಲ್ಲ ಬಿಲ್ವಪತ್ರೆಗಳನ್ನು ನನ್ನ ಮೇಲೆ ಹಾಕಿ,
ಆಹಾರವಿಲ್ಲದೆ ಜಾಗರಣೆಯಲ್ಲಿದ್ದ ಈ ವ್ಯಾಧನೂ ಸಹ ಪಾಪವಿಮುಕ್ತನಾಗಬಲ್ಲ, ಈ ಕುಲೀನನಿಗೂ ಕೂಡಾ ಆ
ವ್ರತಫಲ ದಕ್ಕಬೇಕಾದದ್ದೆ. ಆದ್ದರಿಂದ ಈ ವ್ಯಾಧನು ಪಾಪಾತ್ಮನಾದರೂ ಆ ದಿನ ಶಿವರಾತ್ರಿ ಮಹಿಮೆಯಿಂದ
ನನ್ನ ಸಾಯುಜ್ಯ ಪ್ರಾಪ್ತಿಯಾಗಿದೆ” ಎಂದು ಪರಮೇಶ್ವರನು
ಯಮನಿಗೆ ವಿವರಿಸಿದನು.
ಇತಿ ಪದ್ಮಪುರಾಣೇ ಮಾಘಮಾಸ
ಮಹಾತ್ಮೇ
ಏಕವಿಂಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ದ್ವಾವಿಂಶೋಧ್ಯಾಯಃ
ಇಪ್ಪತ್ತೆರಡನೇ ದಿನದ ಪಾರಾಯಣ
ದತ್ತಾತೇಯನು ಬ್ರಹ್ಮ, ವಿಷ್ಣು,
ಮಹೇಶ್ವರದ ಅಂಶದಿಂದ ಜನಿಸಿದನು. ಆತ ಕೂಡ ಲೋಕ ಕಲ್ಯಾಣಕ್ಕಾಗಿ ಘನ ಕಾರ್ಯಗಳನ್ನು ಮಾಡಿರುವನು.
ತ್ರಿಮೂರ್ತಿಗಳು ದತ್ತಾತ್ರೇಯ ರೂಪದಲ್ಲಿ ಜನಿಸಿದ್ದಾರೆ. ದತ್ತಾತ್ರೇಯನ ಕಾಲದಲ್ಲಿ ಕಾರ್ತವೀರ್ಯಾರ್ಜುನನೆಂಬ
ಕ್ಷತ್ರಿಯ ವೀರನು “ಮಹಿಷ್ಮತಿ” ಎಂಬ ನಗರವನ್ನು ರಾಜಧಾನಿಯನ್ನಾಗಿ
ಮಾಡಿಕೊಂಡು ರಾಜ್ಯವನ್ನು ಆಳುತ್ತಿದ್ದನು. ಆತನಿಗೆ ಗುರುವರ್ಯರು ದತ್ತಾತ್ರೇಯರು.
ಒಂದು ದಿನ ಕಾರ್ತವೀರ್ಯಾರ್ಜುನನು
ದತ್ತಾತ್ರೇಯರ ಆಶ್ರಮಕ್ಕೆ ಹೋಗಿ, ಭಕ್ತಿ-ಭಾವಗಳಿಂದ ನಮಸ್ಕಾರ ಮಾಡಿ. “ಗುರುಗಳೇ! ನಿಮ್ಮ ಅನುಗ್ರಹದಿಂದ ಅನೇಕ
ವಿಷಯಗಳನ್ನು ತಿಳಿದುಕೊಂಡೆನು, ಆದರೆ ಮಾಘಮಾಸದ ವಿಶಿಷ್ಠತೆಯನ್ನು ಕುರಿತು ಹಾಗೂ ಮಾಘಮಾಸದ
ಫಲವನ್ನು ಕುರಿತು ನನಗೆ ವಿವರಿಸಬೇಕಾಗಿ ಕೋರುತ್ತಿದ್ದೇನೆ” ಎಂದು ದತ್ತಾತ್ರೇಯನನ್ನು ಕೋರಿದನು.
ದತ್ತಾತ್ರೇಯನು ಕಾರ್ತವೀರ್ಯಾರ್ಜುನನ ಕೋರಿಕೆಯನ್ನು ಮನ್ನಿಸಿ, ಈ ವಿಧವಾಗಿ ವಿವರಿಸತೊಡಗಿದನು.-
ಎಲೈ ಭೂಪಾಲನೇ! ಭರತಖಂಡದಲ್ಲಿರುವ ಪುಣ್ಯನದಿಗಳಿಗೆ
ಸಮಾನವಾದ ನದಿಗಳು ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲ. ಈ ನದಿಗಳಲ್ಲಿ ಮುಖ್ಯವಾದವು ಹನ್ನೆರಡು.
ಆದ್ದರಿಂದಲೇ ಇವುಗಳಿಗೆ “ಪುಷ್ಕರ” ಪ್ರವೇಶ ಉಂಟಾಗಿದೆ. ಬೃಹಸ್ಪತಿಯ
ಒಂದೊಂದು ಸಂವತ್ಸರವೂ ಒಂದೊಂದು ರಾಶಿಯಲ್ಲಿರುವಾಗ ಆಯಾ ನದಿಗಳಿಗೆ ಪುಷ್ಕರ ಪ್ರಾರಂಭವಾಗುತ್ತದೆ.
ಅದ್ದರಿಂದ, ಅಂತಹ ನದಿಗಳಲ್ಲಿ ಸ್ನಾನ ಮಾಡಿ, ದಾನ-ಧರ್ಮಗಳನ್ನು ಆಚರಿಸಿದರೆ, ಅದರಿಂದ ಉಂಟಾಗುವ
ಫಲ ವರ್ಣಿಸುವುದಕ್ಕೆ ನನ್ನಿಂದಲೂ ಕೂಡ ಸಾಧ್ಯವಿಲ್ಲ. ಅದರಲ್ಲೂ ಮಾಘಮಾಸದಲ್ಲಿ ನದೀಸ್ನಾನ
ಮಾಡಿದರೆ ಉನ್ನತ ಫಲಗಳು ಉಂಟಾಗುವುವು. ಅಲ್ಲದೇ ಜನ್ಮರಾಹಿತ್ಯ ಉಂಟಾಗುತ್ತದೆ. ಆದ್ದರಿಂದ ಯಾವ
ಮಾನವನಾದರೂ ಮಾಘಮಾಸದಲ್ಲಿ ನದೀ ಸ್ನಾನವನ್ನು ಖಂಡಿತವಾಗಿಯೂ ಮಾಡಲೇಬೇಕು, ಹಾಗೆ ಮಾಡದಿದ್ದರೆ ಆ
ಮನುಷ್ಯನು ಜನ್ಮ ಜನ್ಮಗಳಲ್ಲೂ ತಾನು ಗಳಿಸಿಕೊಂಡ ಪಾಪಫಲವನ್ನು ಅನುಭವಿಸದೇ ತಪ್ಪಿದ್ದಲ್ಲ.
ಮಾಘಮಾಸದಲ್ಲಿ ಸೂರ್ಯನು ಮಕರರಾಶಿಯಲ್ಲಿರುವಾಗ ಮಾಘಸ್ನಾನ ಮಾಡಿ. ಒಬ್ಬ ಸದ್ಬ್ರಾಹ್ಮಣನಿಗೆ
ದಾನ-ಧರ್ಮಗಳನ್ನು ಮಾಡಿದರೆ ಪಂಚಮಹಾಪಾತಕಗಳನ್ನು ಮಾಡಿದವನಾದರೂ, ಮುಕ್ತಿಯನ್ನು ಹೊಂದಬಲ್ಲ ಎಂದು
ದತ್ತಾತ್ರೇಯನು ಕಾರ್ತವೀರ್ಯಾರ್ಜುನನಿಗೆ ಹೇಳಿ ಮತ್ತೆ ಮುಂದುವರೆದು ಈ ರೀತಿಯಾಗಿ ಹೇಳತೊಡಗಿದನು.
ಪೂರ್ವಕಾಲದಲ್ಲಿ ಗಂಗಾ ನದೀತಿರದ ಉತ್ತರ
ಭಾಗದಲ್ಲಿ ಭಾಗ್ಯಪುರವೆಂಬ ಪಟ್ಟಣವಿತ್ತು. ಅಲ್ಲಿ ವಾಸಮಾಡುವ ಜನರು ಕುಬೇರರಂತಿದ್ದರು. ಆ
ನಗರದಲ್ಲಿ ಹೇಮಾಂಬರನೆಂಬ ವೈಶ್ಯನೊಬ್ಬನಿದ್ದನು. ಆತ ಬಹು ದೊಡ್ಡ ಶ್ರೀಮಂತ. ಬಂಗಾರದ ಒಡವೆಗಳು,
ನಾಣ್ಯಗಳು ರಾಶಿಗಟ್ಟಲೆ ಉಳ್ಳವನು. ಕೆಲಕಾಲಾನಂತರ ಹೇಮಾಂಬರ ಸತ್ತುಹೋದನು.
ತಂದೆ ಮರಣಿಸಿದ ನಂತರ ಆತನ ಮಕ್ಕಳಿಬ್ಬರೂ
ತಂದೆಯ ಆಸ್ತಿಯನ್ನು ಭಾಗಮಾಡಿ ಹೆಂಚಿಕೊಂಡು ಇಷ್ಟಬಂದಂತೆ ಹಾಳು ಮಾಡುತ್ತಿದ್ದರು. ಇಬ್ಬರೂ
ವೇಶ್ಯೆಯರನ್ನು ಕೂಡ ಸೇರಿ ಕುಲಭ್ರಷ್ಟರಾದರು. ಒಂದು ದಿನ ಹಿರಿಯ ಮಗ ದೈವವಶದಿಂದ ಕಾಡಿನಲ್ಲಿ
ದೊಡ್ಡ ಹುಲಿಯ ಬಾಯಿಗೆ ಸಿಕ್ಕಿ ಮರಣಿಸಿದನು.
ಕಿರಿಯ ಮಗ ವೇಶ್ಯೆಯ ಜೊತೆ
ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗ ಕರ್ಮವಶಾತ್ ಹಾವು ಕಡಿತದಿಂದ, ಬಾಯಿಯಿಂದ ನೊರೆಕಕ್ಕುತ್ತ
ಮರಣಿಸಿದನು. ಈ ರೀತಿಯಾಗಿ ಹೇಮಾಂಬರನ ಮಕ್ಕಳಿಬ್ಬರೂ ಮರಣಿಸಿದರು.
ಯಮದೂತರು ಬಂದು, ಅವರಿಬ್ಬರನ್ನೂ
ಯಮಲೋಕಕ್ಕೆ ಕರೆದುಕೊಂಡು ಹೋದರು. ಚಿತ್ರಗುಪ್ತನು ಅವರ ಪಟ್ಟಿಯನ್ನು ನೋಡಿ, ಹಿರಿಯನನ್ನು
ನರಕದಲ್ಲಿ ಹಾಕಲು ಹೇಳಿದನು. ಕಿರಿಯನನ್ನು ಸ್ವರ್ಗಕ್ಕೆ ಕಳುಹಿಸಲು ಹೇಳಿದನು. ಆಗ ಕಿರಿಯನು
ಚಿತ್ರಗುಪ್ತನೊಂದಿಗೆ ಹೀಗೆಂದನು.
ಅಯ್ಯಾ! ನಾವಿಬ್ಬರೂ ಒಂದೇ ತಂದೆಯ ಮಕ್ಕಳು.
ಇಬ್ಬರೂ ಒಂದೇ ರೀತಿಯ ಪಾಪಗಳನ್ನು ಮಾಡಿದ್ದೇವೆ. ಆದರೂ ಆತನಿಗೆ ನರಕ, ನನಗೆ ಸ್ವರ್ಗ ಹೇಗೆ
ಪ್ರಾಪ್ತವಾಯಿತೆಂದು ಕೇಳಿದನು.
ಆ ಮಾತಿಗೆ ಚಿತ್ರಗುಪ್ತನು, ಎಲೈ
ವೈಶ್ಯಪುತ್ರ! ನೀನು ನಿನ್ನ
ವೇಶ್ಯೆಯನ್ನು ಭೇಟಿಮಾಡಲು ಪ್ರತಿದಿನವೂ ಆಕೆಯ ಜೊತೆಗೂಡಿ ಗಂಗಾನದಿಯನ್ನು ದಾಟಿ ಆಚೆಯ ದಡದಲ್ಲಿ
ನಿನ್ನ ಗೆಳೆಯನ ಮನೆಗೆ ಹೋಗಿ ಬರುತ್ತಿದ್ದೆ. ಹಾಗೆಯೇ ಮಾಘಮಾಸದಲ್ಲಿಯೂ ಕೂಡ ನದಿಯನ್ನು
ದಾಟುತ್ತಿದ್ದಾಗ ಅಲೆಯ ಹನಿಗಳು ನಿನ್ನ ತಲೆಯ ಮೇಲೆ ಬಿದ್ದವು. ನೀನು ಪವಿತ್ರನಾದೆ, ಮತ್ತೊಂದು
ವಿಷಯವೇನೆಂದರೇ – ನಿನ್ನ ಸ್ನೇಹಿತ ಬ್ರಾಹ್ಮಣ. ಪ್ರತಿನಿತ್ಯ ಬ್ರಾಹ್ಮಣ ದರ್ಶನ ಮಾಡಿದರೆ
ಗೋಹತ್ಯಾದಿ ಮಹಾಪಾತಕಗಳೂ ಕೂಡ ನಶಿಸುತ್ತವೆ. ಆದ್ದರಿಂದ ವಿಪ್ರನನ್ನು ನೋಡಿದ್ದರಿಂದ ನಿನಗೆ
ಉತ್ತಮ ಫಲವೇ ಉಂಟಾಗಿದೆ. ಅದೂ ಅಲ್ಲದೇ, ಆ ಬ್ರಾಹ್ಮಣನು ಜಪಿಸುವ ಗಾಯತ್ರೀ ಮಂತ್ರವನ್ನೂ ಕೂಡ
ನೀನು ಕೇಳಿರುವೆ. ಗಂಗಾನದಿಯ ನೀರು ನಿನ್ನ ಶಿರದ ಮೇಲೆ ಬಿದ್ದಿದೆ. ಆದ್ದರಿಂದ ನಿನ್ನ ಪಾಪಗಳು
ನಶಿಸಿ ನೀನು ಸ್ವರ್ಗಕ್ಕೆ ಹೋಗುತ್ತಿರುವೆ ಎಂದು ಚಿತ್ರಗುಪ್ತನು ವಿವರಿಸಿದನು.
ಆಹಾ! ಏನು ಭಾಗ್ಯ ನನ್ನದು! ಗಂಗಾ ಜಲವು ನನ್ನ ಮೇಲೆ
ಬಿದ್ದಮಾತ್ರಕ್ಕೆ ನನಗಿಂಥ ಮೋಕ್ಷ ಉಂಟಾಯಿತೇ?! ಎಂದು ವೈಶ್ಯಪುತ್ರನು
ಸಂತೋಷಗೊಂಡು ದೇವದೂತರೊಂದಿಗೆ ಸ್ವರ್ಗಲೋಕಕ್ಕೆ ಹೇದನು.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ದ್ವಾವಿಂಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ತ್ರೈವಿಂಶೋಧ್ಯಾಯಃ
ಇಪ್ಪತ್ತಮೂರನೇ ದಿನದ ಪಾರಾಯಣ
ಗಂಗಾಜಲ ಮಹಿಮೆ
ಓ ಕಾರ್ತವೀರ್ಯಾರ್ಜುನ! ಶಿವಪೂಜೆಯ ಕುರಿತು ಶಿವ ಮಹಿಮೆಯನ್ನು
ಕುರಿತು ವಿವರಿಸುತ್ತೇನೆ ಕೇಳು…
ಹಿಂದೆ ಶ್ರೀರಾಮಚಂದ್ರನು ರಾವಣನನ್ನು
ಸಂಹರಿಸುವುದಕ್ಕಾಗಿ ಸಮುದ್ರದ ಮೇಲೆ ಸೇತುವೆ ಕಟ್ಟಿದ ಸ್ಥಳದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ
ಮಾಡಿ ಶಿವನನ್ನು ಧ್ಯಾನಿಸಿ, ವಾರಿಧಿಯನ್ನು ದಾಟಿ ರಾವಣನನ್ನು ಸಂಹರಿಸಿದನು. ಹಾಗೆಯೇ ಹನುಮಂತನು
ಸಮುದ್ರೋಲ್ಲಂಘನ ಮಾಡುವಾಗ ಶಿವನನ್ನು ಧ್ಯಾನಿಸಿ, ಶ್ರೀರಾಮನಿಗೆ ನಮಸ್ಕಾರ ಮಾಡಿ, ಮಹಾಬಲವನ್ನು
ಸಂಪಾದಿಸಿ ಸಮುದ್ರವನ್ನು ದಾಟಿದನು. ಅರ್ಜುನನು ಯುದ್ಧಕ್ಕೆ ಹೊರಡುವ ಮುನ್ನ, ಶಿವಪೂಜೆಯನ್ನು
ಮಾಡಿಯೇ ರಣರಂಗವನ್ನು ಪ್ರವೇಶಿಸಿದನು. ಇನ್ನೆಷ್ಟೋ ಮಹಾನುಭಾವರು ಶಿವನನ್ನು ಧ್ಯಾನಿಸಿ, ತಮಗೆ
ಜಯವನ್ನು ತಂದುಕೊಂಡಿದ್ದಾರೆ. ಸ್ತ್ರೀಯರು ತಮ್ಮ ಮನೋರಥಗಳನ್ನು ನೆರವೇರಿಸಿಕೊಂಡರು. ಆದ್ದರಿಂದ
ಪೂಜೆಗಳಲ್ಲೆಲ್ಲ ಶಿವಪೂಜೆ ಪವಿತ್ರವಾದುದು. ಹಾಗೆಯೇ ನದಿಗಳಲ್ಲಿ ಗಂಗಾನದಿ ಪರಮ ಪವಿತ್ರವಾದುದು.
ಹೇಗೆಂದರೆ, ಗಂಗಾಜಲ ವಿಷ್ಣುಪಾದದಿಂದ ಜನಿಸಿ, ಶಿವನ ಶಿರಸ್ತಿನಲ್ಲಿ ಪ್ರವಹಿಸುವಂಥದ್ದು.
ಅದ್ದರಿಂದಲೇ ಸರ್ವಪಾಪ ಹರವಾದುದು. ಗಂಗಾಜಲವೊಂದರಲ್ಲಿ ಸ್ನಾನಕ್ಕೆ ಅಷ್ಟೊಂದು ಪ್ರಾಶಸ್ತ್ಯವಿದೆ.
ಅಲ್ಲದೆ ಇನ್ನೂ ಗಂಗಾಜಲವನ್ನು ಕುರಿತು ಹೇಳಲಿರುವುದು ಏನೆಂದರೆ – ಯಾವ ನೀರನ್ನಾಗಲಿ, “ಗಂಗಾ ಗಂಗಾ ಗಂಗಾ” ಎಂದು ಮೂರುಬಾರಿ ಸ್ಮರಿಸಿ. ಶಿರಸ್ತಿನ
ಮೇಲೆ ನೀರನ್ನು ಪ್ರೋಕ್ಷಿಸಿಕೊಂಡರೆ ಆ ನೀರು ಗಂಗಾಜಲಕ್ಕೆ ಸಮ್ನಾನವಾದಂತಾಗುವುದು.
ಗಂಗಾಜಲವು ವಿಷ್ಣುಮೂರ್ತಿಯ ಪ್ರತಿರೂಪ.
ಆದ್ದರಿಂದ ಮಾಘ ಮಾಸದಲ್ಲಿ ಗಂಗಾಸ್ನಾನವು ಅತ್ಯಂತ ಪುಣ್ಯಪ್ರದವೆಂದು ತಿಳಿಯುತ್ತದೆ ಎಂದು ಗಂಗಾಜಲ
ಮಹಿಮೆಯನ್ನು ಕುರಿತು ಕಾರ್ತವೀರ್ಯಾರ್ಜುನನಿಗೆ ದತ್ತಾತ್ರೇಯನು ವಿವರಿಸಿದನು.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ತ್ರೈವಿಂಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಚತುರ್ಮಿಂಶೋಧ್ಯಾಯಃ
ಇಪ್ಪತ್ತ್ನಾಲ್ಕನೇ ದಿನದ ಪಾರಾಯಣ
ಬ್ರಾಹ್ಮಣ ಕನ್ಯೆಯರ ವಿಮೋಚನೆ
ಕೆಲಕಾಲದ ಹಿಂದೆ ಮಗಧ ರಾಜ್ಯದಲ್ಲಿ
ಪುರೋಹಿತ ವೃತ್ತಿಯಿಂದ ಬದುಕುತ್ತಿದ್ದ ನಾಲ್ವರು ಬ್ರಾಹ್ಮಣರಿದ್ದರು. ನಾಲ್ವರಿಗೂ ನಾಲ್ವರು
ಪುತ್ರಿಯರಿದ್ದರು. ಅವರು ಪರಿಪೂರ್ಣ ಯೌವನವತಿಯರಾಗಿದ್ದರು. ಸ್ವಲ್ಪ ದಿನಗಳ ನಂತರ ಆ ಗ್ರಾಮದ
ಕೊಳದಲ್ಲಿ ಸ್ನಾನ ಮಾಡುವುದಕ್ಕೆ ಒಬ್ಬ ಗುರುಕುಲ ವಿದ್ಯಾರ್ಥಿ ಬಂದನು. ಬ್ರಾಹ್ಮಣ ಕನ್ಯೆಯರು ಆ
ಯುವಕನ ಅಂದವನ್ನು ನೋಡಿ. ಮೋಹಿಸಿ, ಆತನನ್ನು ಸಮೀಪಿಸಿ, ಅಡ್ಡಗಟ್ಟಿ ತಮ್ಮನ್ನು
ವಿವಾಹಮಾಡಿಕೊಳ್ಳುವಂತೆ ಬಲವಂತ ಮಾಡಿದಾಗ, ಆ ಬ್ರಾಹ್ಮಣ ವಿದ್ಯಾರ್ಥಿಗೆ ವಿದ್ಯಾಭ್ಯಾಸ
ಪೂರ್ಣವಾಗದೇ ಇದ್ದುದರಿಂದ ಅವರ ಕೋರಿಕೆಯನ್ನು ನಿರಾಕರಿಸಿದನು. ಆಗ ಆ ಕನ್ಯೆಯರು ಕೋಪದಿಂದ ನೀನು
ಪಿಶಾಚಿಯಾಗು ಎಂದು ಶಪಿಸಿದಾಗ, ಆ ವಿದ್ಯಾರ್ಥಿಯು, ನೀವು ಕೂಡ ಪಿಶಾಚಿಗಳಾಗಿರಿ ಎಂದು ಪ್ರತಿಶಾಪ
ನೀಡಿದ್ದರಿಂದ ಅವರೆಲ್ಲರೂ ಪಿಶಾಚ ರೂಪದಿಂದ ಆ ಕೊಳದ ಹತ್ತಿರವೇ ಇದ್ದು, ಎಲ್ಲರನ್ನೂ ಬಾಧಿಸುತ್ತ
ಆಹಾರ ದೊರೆತರೆ ಅವುಗಳಿಗಾಗಿ ಜಗಳವಾಡುತ್ತಿದ್ದರು.
ಕೆಲಕಾಲದ ನಂತರ ಒಬ್ಬ ಸಿದ್ಧನು ಕೊಳದ
ಬಳಿ ಬಂದಾಗ, ಆ ಪಿಶಾಚಿಗಳ ತಾಯಿ-ತಂದೆಯರು, ತಮ್ಮ ಮಕ್ಕಳು ಪಿಶಾಚ ಶಾಪದಿಂದ ಹೇಗೆ ಮುಕ್ತಿ
ಹೊಂದುವರು ಎಂದು ಕೇಳಿದರು, ಆ ಸಿದ್ಧಪುರುಷನು ಇವರೆಲ್ಲರ ಕೈಯಲ್ಲಿ ಮಾಘಮಾಸದಲ್ಲಿ
ಗಯಾಕ್ಷೇತ್ರದಲ್ಲಿರುವ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿಸಿದರೆ ಅವರಿಗೆ ಪಿಶಾಚ ರೂಪಗಳು ತೊಲಗಿ
ಹೋಗುವುವು ಎಂದು ಹೇಳಿದಾಗ, ಅವರು ಹಾಗೆಯೇ ಮಾಡಿದ್ದರಿಂದ ಆ ನಾಲ್ವರಿಗೂ ಯಥಾರೂಪವು ಉಂಟಾಯಿತು.
ಹೀಗೆ ಆಗುವುದಕ್ಕೆ ಮಾಘಮಾಸ ಸ್ನಾನದ ಮಹಿಮೆಯೇ ಕಾರಣ.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಚತುರ್ವಿಂಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಪಂಚವಿಂತೋಧ್ಯಾಯಃ
ಇಪ್ಪತ್ತೈದನೇ ದಿನದ ಪಾರಾಯಣ
ಪಾಷಾಣವಾದ ಗಂಧರ್ವ ಹೆಣ್ಣಿನ ವೃತ್ತಾಂತ
ಮಾಘಮಾಸದಲ್ಲಿ ನದೀಸ್ನಾನವು ಮನುಷ್ಯರಿಗೇ
ಅಲ್ಲದೆ, ದೇವತೆಗಳಿಗೆ ಮತ್ತು ಗಂಧರ್ವರಿಗೂ ಸಹ ಪವಿತ್ರವಾದುದು. ಒಂದು ಮಾಘಮಾಸದಲ್ಲಿ ಓರ್ವ
ಗಂಧರ್ವನು ತನ್ನ ಪತ್ನಿಯೊಂದಿಗೆ ಭೂಲೋಕಕ್ಕೆ ಬಂದು, ಗಂಗಾ ನದಿಯಲ್ಲಿ ಸ್ನಾನ ಮಾಡಿದನು. ಆತನ
ಪತ್ನಿ ಮಾತ್ರ ಸ್ನಾನ ಮಾಡುವುದಿಲ್ಲವೆಂದು ಹೇಳಿದ್ದರಿಂದ ಅಕೆಗೆ ದೈವತ್ವವು ನಶಿಸಿ
ಗಂಧರ್ವಲೋಕಕ್ಕೆ ಮರಳಲಾರದೆ ಹೋದಳು. ಅಕೆಯನ್ನು ಬಿಟ್ಟು ಆ ಗಂಧರ್ವನೊಬ್ಬನೇ ಹೊರಟುಹೋದನು. ಅಕೆಯು
ಕಾಡಿನಲ್ಲಿ ತಿರುಗಾಡುತ್ತಿದ್ದಾಗ ವಿಶ್ವಾಮಿತ್ರನಿದ್ದ ಸ್ಥಳವನ್ನು ಸೇರಿ, ವಯ್ಯಾರದಿಂದ
ವಿಶ್ವಾಮಿತ್ರನನ್ನು ನೋಡಲು, ಆತನು ಪರವಶನಾಗಿ ಅಕೆಯನ್ನು ಪ್ರೀತಿಸಲು, ಇಬ್ಬರೂ ಕಾಮಕ್ರೀಡೆಗಳಿಂದ
ಓಲಾಡುತ್ತಿದ್ದಾಗ ಮತ್ತೆ ಗಂಥರ್ವನು ಪತ್ನಿಯನ್ನು ಹುಡುಕುತ್ತ ಬಂದು ನೋಡಿದಾಗ ವಿಶ್ವಾಮಿತ್ರರು
ಗಂಧರ್ವ ಸ್ತ್ರೀಯೊಡನೆ ವಿಹರಿಸುತ್ತಿದ್ದರು.
ಆ ದೃಶ್ಯವನ್ನು ಕಂಡು ಕುಪಿತನಾದ
ಗಂಧರ್ವನು – ಜಿತೇಂದ್ರಿಯನಾಗಿದ್ದೂ ಸಹ ಕಾಮಾತುರುನಾದುದರಿಂದ ನಿನಗೆ ಕೋತಿ ಮುಖ ಉಂಟಾಗಲೆಂದು
ವಿಶ್ವಾಮಿತ್ರರನ್ನು ಶಪಿಸಿ, ಹಾಗೆಯೇ ಪತ್ನಿಯತ್ತ
ತಿರುಗಿ ಪಾಷಾಣವಾಗಿ ಹೋಗು ಎಂದು ಶಪಿಸಿ ಹೋರಟುಹೋದನು.
ವಿಶ್ವಾಮಿತ್ರರು ಏನೂ ಮಾಡಲಾಗದೆ, ವಾನರ
ಮುಖವನ್ನು ಹೊತ್ತುಕೊಂಡಿರುವಾಗ ನಾರದರು ಆ ವಿಷಯವನ್ನು ತಿಳಿದುಕೊಂಡು ವಿಶ್ವಾಮಿತ್ರರ ಬಳಿಗೆ
ಬಂದು, ವಿಶ್ವಾಮಿತ್ರರೇ ಕ್ಷಣಿಕವಾದ ತುಚ್ಛ ಕಾಮನೆಗಳಿಗೆ ಒಳಗಾಗಿ ನಿಮ್ಮ ತಪಶ್ಯಕ್ತಿಯೆಲ್ಲವನ್ನೂ
ವ್ಯರ್ಥ ಮಾಡಿಕೊಂಡಿರಿ. ನೀವು ಗಂಗಾನದಿಯಲ್ಲಿ ಸ್ನಾನಮಾಡಿ, ನಿಮ್ಮ ಕಮಂಡಲದಲ್ಲಿ ಗಂಗಾಜಲವನ್ನು
ತಂದು ಈ ಪಾಷಾಣದ ಮೇಲೆ ಪ್ರೋಕ್ಷಿಸಿರಿ ಎಂದು ವಿವರಿಸಿದಾಗ, ವಿಶ್ವಾಮಿತ್ರರು ಗಂಗಾ ಸ್ನಾನ ಮಾಡಿ
ವಿಷ್ಣುವನ್ನು ಧ್ಯಾನಿಸಿದಾಗ ಅವರ ಕೋತಿಮುಖವು ಹೊರಟುಹೋಯಿತು. ನಂತರ ವಿಶ್ವಾಮಿತ್ರರು
ಕಮಂಡಲದಲ್ಲಿ ನೀರು ತಂದ ಪಾಷಾಣದ ಮೇಲೆ ಪ್ರೋಕ್ಷಿಸಿದಾಗ ಆ ಪಾಷಾಣವು ಹಿಂದಿನಂತೆ ಗಂಧರ್ವ ಸ್ತ್ರೀ
ರೂಪವನ್ನು ಪಡೆದು ಗಂಧರ್ವಲೋಕಕ್ಕೆ ಹೊರಟುಹೋದಳು. ವಿಶ್ವಾಮಿತ್ರರು ಪುನಃ ತಪಸ್ಸಿಗೆ ಮರಳಿದರು.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಪಂಚವಿಂಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಷಡ್ವಂಶೋಧ್ಯಾಯಃ
ಇಪ್ಪತ್ತಾರನೇ ದಿನದ ಪಾರಾಯಣ
ಸುಲಕ್ಷಣ ಮಹಾರಾಜನ ವೃತ್ತಾಂತ
ವಂಗದೇಶದ ಸೂರ್ಯವಂಶದ ರಾಜನಾದ ಸುಲಕ್ಷಣ
ಮಹಾರಾಜನಿಗೆ ನೂರು ಜನ ಹೆಂಡತಿಯರಿದ್ದರು. ಆತ ಮಹಾಧೈರ್ಯವಂತ, ಶಕ್ತಿವಂತ, ಧರ್ಮಪಾಲಕ, ತನ್ನ
ಪ್ರಜೆಗಳಿಗೆ ಯಾವುದೇ ರೀತಿಯ ಅಪತ್ತುಳು ಎದುರದರೂ ತನ್ನದಾಗಿ ಭಾವಿಸಿ, ಅದಕ್ಕೆ ತಕ್ಕ
ನಿವಾರಣೋಪಾಯಗಳನ್ನು ಮಾಡುತ್ತಿದ್ದ.
ಸುಲಕ್ಷಣ ಮಹಾರಾಜ ಎಂತಹ
ರಾಜಾಧಿರಾಜನಾದರೂ ಎಷ್ಟೇ ಕರಗದ ಸಂಪತ್ತು ಉಳ್ಳವನಾದರೂ ಏನು ಪ್ರಯೋಜನ! “ನ ಪುತ್ರಸ್ಯ ಸದ್ಗತಿರ್ನಾಸ್ತಿ” ಎಂಬಂತೆ ಪುತ್ರಸಂತಾನವಿಲ್ಲದೇ
ಇದ್ದುದರಿಂದ ತನಗೆ ಸದ್ಗತಿ ಇಲ್ಲವಲ್ಲ, ಅಲ್ಲದೇ ತನ್ನ ವಂಶವು ಹೇಗೆ ಅಭಿವೃದ್ಧಿ ಹೊಂದುವುದು? ತನ್ನೊಂದಿಗೇ ವಂಶವು
ನಿರ್ವಂಶವಾಗಿಬಿಡುವುದೇ? ಎಂದು ಕೊರಗುತ್ತಿದ್ದನು.
ಒಂದು ದಿನ ಆತ ತನ್ನ ರಥವನ್ನೇರಿ
ನೈಮಿಷಾರಣ್ಯದಲ್ಲಿ ಮಹಾ ತಪಸ್ವಿಗಳಿರುವ ಪ್ರದೇಶಕ್ಕೆ ಹೋದನು. ಅಲ್ಲಿ ತಪೋಧನರೆಲ್ಲರೂ ತಪಸ್ಸನ್ನು
ಮಾಡುತ್ತಿದ್ದರು.
ಸುಲಕ್ಷಣ ಮಹಾರಾಜನು ಅವರಿಗೆ ನಮಸ್ಕರಿಸಿ
ಮುನಿಶ್ರೇಷ್ಠರೇ! ನಾನು ವಂಗದೇಶಾಧಿಪತಿ. ನನ್ನನ್ನು
ಸುಲಕ್ಷಣ ಎನ್ನುತ್ತಾರೆ. ನನಗೆ ನೂರುಜನ ಮಡದಿಯರು. ಅದರೇನು? ಒಂದು ಸಂತಾನವಾದರೂ ಆಗಲಿಲ್ಲ,
ಆದ್ದರಿಂದ ನನಗೆ ಪುತ್ರಸಂತಾನವಾಗುವಂತೆ ಆಶೀರ್ವದಿಸಿ ಎಂದು ಅಂಜಲೀಬದ್ಧನಾಗಿ ಪ್ರಾರ್ಥಿಸಿದನು.
ಮಹಾರಾಜನ ಮಾತಿಗೆ ಋಷಿಶ್ರೇಷ್ಠರೆಲ್ಲ
ಅನುಕಂಪಗೊಂಡು, ರಾಜಾ! ನೀನು
ಸಂತಾನಹೀನನಾಗುವುದಕ್ಕೆ ಕಾರಣವೇನೆಂದರೆ, ಪೂರ್ವಜನ್ಮದಲ್ಲಿ ನೀನು ಸೌರಾಷ್ಟ್ರವನ್ನು
ಅಳುತ್ತಿದ್ದೆ. ಆ ಜನ್ಮದಲ್ಲಿ ಒಂದು ಮಘಮಾಸ ಸ್ನಾನವನ್ನೂ ಮಾಡಲಿಲ್ಲ. ಒಂದು ದಾನವನ್ನಾದರೂ
ಕೊಡಲಿಲ್ಲ. ಕೇವಲ ಒಬ್ಬ ಬ್ರಾಹ್ಮಣನಿಗೆ ಕುಂಬಳಕಾಯಿ ದಾನ ಮಾಡಿದ್ದರೂ ಸಹ, ಈ ಜನ್ಮದಲ್ಲಿ
ಪುತ್ರಸಂತತಿ ಆಗುತ್ತಿತ್ತು. ಯಾರು ಮಾಘಮಾಸದಲ್ಲಿ ಶುದ್ಧ ಸಪ್ತಮಿ ದಿನ ಕೂಷ್ಮಾಂಡ ದಾನವನ್ನು
ಮಾಡುವರೋ ಅವರಿಗೆ, ಖಂಡಿತವಾಗಿಯೂ ಪುತ್ರಸಂತಾನವಾಗುತ್ತದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ ಎಂದು
ಹೇಳಿ ಒಂದು ಫಲವನ್ನು ಮಂತ್ರಿಸಿ ರಾಜನಿಗೆ ಕೊಟ್ಟು, ಇದನ್ನು ನಿನ್ನ ಹೆಂಡತಿಗೆ ಸೇವಿಸುವಂತೆ
ಹೇಳು ಎಂದು ಹೇಳಿದರು.
ರಾಜನು ಫಲವನು ಮಹಾಭಾಗ್ಯವೆಂದು
ಕಣ್ಣಿಗೊತ್ತಿಕೊಂಡು ಅರಮನೆಗೆ ಹೋದನು. ಪತಿಯ ಬರುವಿಕೆಯನ್ನು ಕಂಡ ಪಟ್ಟ ಮಹಿಷಿಯರೆಲ್ಲರೂ
ಎದುರುಗೊಂಡು, ಅರತಿ ಮಾಡಿ, ಆಯಾಸ ಪರಿಹರಿಸಿದರು. ರಾಜ ತಾನು ತಂದಿರುವ ಮಂತ್ರಫಲದ ವಿಷಯವನ್ನು
ತಿಳಿಸಿ ಭೋಜನಾನಂತರ ಸೇವಿಸುವಂತೆ ಹೇಳಿ, ತನ್ನ ಕೊಠಡಿಯಲ್ಲಿ ಜೋಪಾನ ಮಾಡಿ ತಾನೂ ಭೋಜನಕ್ಕೆ
ಪತ್ನಿಯರೊಡನೆ ಹೊರಟು ಹೋದನು. ನೂರು ಮಡದಿಯಲ್ಲಿ ಕಡೆಯ ಪತ್ನಿಗೆ ಅತಿಯಾಸೆ ಉಂಟಾಗಿ
ಫಲವೆಲ್ಲವನ್ನೂ ತಾನೊಬ್ಬಳೇ ತಿನ್ನಬೇಕೆಂದು ಉದ್ದೇಶಿಸಿ, ರಹಸ್ಯ ಮಾರ್ಗದ ಮೂಲಕ ರಾಜನು ಮಲಗುವ
ಕೋಣೆಗೆ ಹೋಗಿ ಆ ಫಲವನ್ನು ಸೇವಿಸಿ ಏನೂ ಅರಿಯದವಳಂತೆ ಎಲ್ಲರೊಡನೆ ಸೇರಿ ಅಡ್ಡಾಡುತ್ತಿದ್ದಳು.
ಸುಲಕ್ಷಣ ಮಹಾರಾಜ ಮತ್ತು ಆತನ ಮಡದಿಯರು ಭೋಜನ ಮಾಡಿ ಮಂತ್ರಿಸಿದ ಫಲದ ಬಳಿಗೆ ಬಂದರು. ಬಂಗಾರದ
ತಟ್ಟೆಯಲ್ಲಿಟ್ಟಿದ್ದ ಫಲ ಕಾಣಿಸಲಿಲ್ಲ. ರಾಜನಿಗೆ ಎಲ್ಲಿಲ್ಲದ ಕೋಪ ಬಂದು, ಸಿಂಹಘರ್ಜನೆ ಮಾಡಲು
ಎಲ್ಲರೂ ತಮಗೇನೂ ತಿಳಿದಿಲ್ಲವೆಂದು ಪ್ರಮಾಣ ಮಾಡಿ ಹೇಳಿದರು.
ತುಂಬ ಕಷ್ಟಪಟ್ಟು ಮಹಾಮುನಿಗಳ
ಅನುಗ್ರಹದಿಂದ ಗಳಿಸಿದ ಮಂತ್ರಫಲವು
ಕೈಯಾರೆ ಕಳೆದುಕೊಂಡೆನಲ್ಲ ಎಂದು ಕೊರಗುತ್ತ ರಾಜ ಮಂಚ
ಹಿಡಿದನು ಮಂತ್ರಫಲವನ್ನು ತಿಂದಿದ್ದ ಕಿರಿಯ ಹೆಂಡತಿಯು ಗಂಡನ ಬಳಿಗೆ ಬಂದು, ನಾಥ! ಆಸೆಯಿಂದಾಗಿ ನಾನೇ ಆ ಫಲವನ್ನು
ತಿಂದುಬಿಟ್ಟೆ ಕ್ಷಮಿಸಿ ಎಂದು ಬೇಡಿಕೊಂಡಳು. ಆಗ ರಾಜನು ಸ್ವಲ್ಪ ತೃಪ್ತಿಗೊಂಡ, ವಂಶೋದ್ಧಾರಕ
ಎಲ್ಲಾದರೂ ಹುಟ್ಟಬಲ್ಲ ಎಂದು ಸಮಾಧನ ಮಾಡಿಕೊಂಡ, ಆಕೆಯನ್ನು ಅಕ್ಕರೆಯಿಂದ ನೋಡಿದ.
ಕನಿಷ್ಠಪತ್ನಿ ಗರ್ಭವತಿಯಾದುದ್ದರಿಂದ
ನವಮಾಸವೂ ತುಂಬುತ್ತಿರಲು ಉಳಿದ ಪತ್ನಿಯರು ಅಸೂಯೆಯಿಂದ ಸಹಿಸಲಾರದೇ ಹೋದರು. ಆಕೆ
ಪುತ್ರವತಿಯಾದಲ್ಲಿ ರಾಜನು ತಮ್ಮನ್ನು ನೋಡುವುದಿಲ್ಲವೆಂದು ಯೋಚಿಸಿ, ಆಕೆಯ ಗರ್ಭ ಕೆಡುವಂತೆ
ಆಕೆಯು ಸೇವಿಸುವ ಆಹಾರದಲ್ಲಿ ಔಷಧವನ್ನು ಬೆರೆಸಿಟ್ಟರು ವರಪುತ್ರನು ಹುಟ್ಟುತ್ತಿದ್ದಾನೆ,
ಆದ್ದರಿಂದ ಗರ್ಭದಲ್ಲಿನ ಶಿಶುವಿಗೆ ಯಾವ ಅಪಾಯವೂ ಉಂಟಾಗಲಿಲ್ಲ, ಅದರೆ, ಔಷಧದ ತೀವ್ರತೆಯಿಂದ
ಆಕೆಗೆ ಹುಚ್ಚು ಹಿಡಿಯಿತು. ಆ ಹುಚ್ಚಿನಿಂದಾಗಿ, ಒಂದು ದಿನ ರಾತ್ರಿ ಆಕೆ ಕಾಡಿಗೆ ಹೋಗಿಬಿಟ್ಟಳು.
ಆಕೆ ತುಂಬು ಗರ್ಭವತಿಯಾಗಿದ್ದರಿಂದ ಆ ಕಾಡಿನಲ್ಲೇ ಒಂದು ಬಂಡೆಗಲ್ಲಿನ ಮೇಲೆ ಗಂಡುಮಗುವಿಗೆ
ಜನ್ಮವಿತ್ತಳು. ಆಕೆ ಹೆತ್ತ ಕಡೆ ಒಂದು ಹುಲಿಯು ಕಾಯುತ್ತಿದ್ದುದರಿಂದ ಅದು ತಕ್ಷಣ ಹೆರಿಗೆ
ವಾಸನೆಯ ಸುಳಿವರಿತು ಬಂದು ಆಕೆಯನ್ನು ಕೊಂದು ತಿಂದುಹಾಕಿಬಿಟ್ಟಿತು. ಎಳೇ ಮಗು ರಕ್ತದ ಕಲೆಗಳಿಂದ
ಅನಾಥವಾಗಿ ಅಳುತ್ತಿತ್ತು. ರಾಜಹಂಸಗಳು ಆಹಾರಕ್ಕಾಗಿ ತಿರುಗಾಡುತ್ತ, ಆ ರಾಜ ಶಿಶುವನ್ನು ನೋಡಿ
ಬಳಿ ಬಂದು, ರೆಕ್ಕೆಗಳಿಂದ ಆ ಕಂದನ ತೇವವನ್ನಾರಿಸಿ, ಅವುಗಳ ಕೊಕ್ಕಿನಿಂದ ಮೃದುವಾದ ಹುಲ್ಲು ತಂದು
ಹಾಸಿ, ಅದರ ಮೇಲೆ ಮಲಗಿಸಿದವು, ಆ ಕಂದನಿಗೆ ಹಣ್ಣುಗಳನ್ನು ತಿನ್ನಿಸುತ್ತ – ಒಂದು ವರ್ಷದವರೆಗೂ
ಬೆಳಿಸಿದವು.
ಬೇಸಿಗೆಯ ಕಾಲ ಬರುತ್ತಿದ್ದುದರಿಂದ
ಅಲ್ಲಿ ಅವುಗಳಿಗೆ ನೀರು ಸಿಗದಿರಲು ಬಾಲಕನನ್ನು ತೆಗೆದುಕೊಂಡು ಸ್ವಲ್ಪ ದೂರದಲ್ಲಿದ್ದ ತಮ್ಮ
ಜಾತಿಯ ಹಂಸಗಳಿಗೆ ಒಪ್ಪಿಸಿ ಹೊರಟುಹೋದವು, ಆ ಹಂಸಗಳು ಆ ಬಾಲಕನಿಗೆ ಬೇಕಾದ ಹಣ್ಣು, ಜೇನು, ರಸ
ಮುಂತಾದವುಗಳನ್ನು ಕೊಟ್ಟು ಬೆಳೆಸುತ್ತಿದ್ದಾಗ-
ಒಮ್ಮೆ ಓರ್ವ ತಪಸ್ವಿ ತನ್ನ ಇಬ್ಬರು
ಮಡದಿಯರೊಡನೆ ಬಂದು ಅಲ್ಲಿಯೇ ಹತ್ತಿರದಲ್ಲಿದ್ದ ಕೊಳದಲ್ಲಿ ಸ್ನಾನಮಾಡಿ ಉಡುಪುಗಳನ್ನು
ಬದಲಾಯಿಸುತ್ತಿದ್ದಾಗ ಹಂಸಗಳೊಂದಿಗೆ ತಪ್ಪು ಹೆಚ್ಚೆಗಳನ್ನು ಹಾಕುತ್ತ ಕೊಳದ ಬಳಿಗೆ ಬರುತ್ತಿದ್ದ
ಬಾಲಕನನ್ನು ನೋಡಿ, ಅಕ್ಕರೆಯುಂಟಾಗಿ ತಮ್ಮ ಜೊತೆಗೆ ಕರೆದೊಯ್ದರು.
ರಾಜಕುಮಾರನು ಅವರ ಆಶ್ರಮದಲ್ಲಿ ಮೂರು
ವರ್ಷಗಳನ್ನು ಕಳೆದನು ಅಲ್ಪಸ್ವಲ್ಪ ಮಾತುಗಳು ಬಂದವು. ಅವನನ್ನು ನೋಡಿ, ನನ್ನ ಸವತಿ ಮಗ ಎಂದು
ಹಿರಿಯ ಮಡದಿಗೆ ಅಸೂಯೆ ತಲೆದೋರಿತು. ಮಗು ಸಾಯಂಕಾಲ ಸಮಯದಲ್ಲಿ ಆಟವಾಡುತ್ತಿದ್ದಾಗ ಅವನನ್ನು ಎತ್ತಿಕೊಂಡು
ಹೋಗಿ ಕಾಡಿನಲ್ಲಿ ಬಿಟ್ಟು ಬಂದಳು. ಗಂಡ ಬಂದು ಮಗುವೆಲ್ಲಿ ಎಂದು ಕೇಳಿದರೂ, ಆ ದುಷ್ಟ ಹೆಂಗಸು
ನಿಜ ಹೇಳಲಿಲ್ಲ.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಷಡ್ವಿಂಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಸಪ್ತವಿಂಶೋಧ್ಯಾಯಃ
ಇಪ್ಪತ್ತೇಳನೇ ದಿನದ ಪಾರಾಯಣ
ಸುಧರ್ಮನು ತಂದೆಯ ಬಳಿ ಹೋದುದು
ಪಾಪ! ಆ ಬಾಲಕನ ಜಾತಕ ಎಂಥದ್ದೋ! ಹೆತ್ತ ತಾಯಿ ಕಾಡಿನಲ್ಲಿ ಹುಲಿಯಿಂದ
ಕೊಲ್ಲಲ್ಪಟ್ಟಳು. ಈಗ ಸಾಕುತಾಯಿ ಕಾಡಿನಲ್ಲಿ ಬಿಟ್ಟು ಹೊರಟುಹೋದಳು. ಇನ್ನು ಈ ಬಾಲಕನು ಅತ್ತು
ಅತ್ತು ಸುಸ್ತಾಗಿ ನಿದ್ರಿಸಿದನು. ಅಲ್ಲೊಂದು ತುಳಸೀ ಗಿಡವಿತ್ತು, ನಿದ್ರೆಯಲ್ಲಿ ಬಾಲಕನ ಕೈ ಆ
ಗಿಡದ ಮೇಲೆ ಬಿದ್ದುದರಿಂದ ಅಂದು ರಾತ್ರಿ ಅವನಿಗೆ ಯಾವ ಅಪಾಯವೂ ಉಂಟಾಗಲಿಲ್ಲ. ಮೇಲಾಗಿ
ದೈವಭಕ್ತಿಯೂ ಸಹ ಉಂಟಾಯಿತು. ಬೆಳಿಗ್ಗೆ ಏಳುವ ಹೊತ್ತಿಗೆ. ಕಾಡಿನಲ್ಲಿ ಒಂಟಿಯಾಗಿ ಇದ್ದುದರಿಂದ
ಹೆದರಿ ಜೋರಾಗಿ ಅತ್ತನು. ಆ ದಿನ ಪಕ್ಷಿಗಳು, ಪ್ರಾಣಿಗಳು, ಮೃಗಗಳು ಕೂಡಾ ರೋದನೆ ಮಾಡಿ, ಆ
ಬಾಲಕನಿಗೆ ರಕ್ಷಣೆಯಾಗಿದ್ದು ಆಹಾರವನ್ನು ತಂದುಕೊಟ್ಟವು. ಹಾಗೆ ಬೆಳೆಯುತ್ತ ಹನ್ನೆರಡು ವರ್ಷ
ಪ್ರಾಯದವನಾದ. ಪ್ರತಿದಿನವೂ ತುಳಸೀಪೂಜೆ, ಭಗವನ್ನಾಮ ಸ್ಮರಣೆ ಮಾಡುತ್ತ. “ನನ್ನನ್ನು ಕಾಪಾಡು ತಂದೆ! ಅನಾಥರಕ್ಷಕ!” ಎಂದು ಪ್ರಾರ್ಥಿಸುತ್ತ ಕೆಲವೊಮ್ಮೆ
ವಿರಕ್ತನಾಗಿ, ಛೇ! ಜೀವನ ಇಷ್ಟೇನಾ? ಎಂದು ದುಃಖಿಸುತ್ತಿದ್ದಾಗ-
ಅಶರೀರವಾಣಿಯು ಕೇಳಿಸಿ “ನೀನು ಹೀಗೆ ಚಿಂತಸಬೇಡ ಈ ಸಮೀಪದಲ್ಲಿಯೇ
ಒಂದು ಸರೋವರವಿದೆ. ಮಾಘಮಾಸ ಪ್ರವೇಶಿಸಿದೆ. ಆದ್ದರಿಂದ ನೀನು ಆ ಸರೋವರದಲ್ಲಿ ಸ್ನಾನ ಮಾಡಿದರೆ
ಶ್ರೀಮಹಾವಿಷ್ಣು ಪ್ರತ್ಯಕ್ಷನಾಗುವನು” ಎಂದು ನುಡಿಯಿತು. ಆ
ಕೂಡಲೇ ರಾಜಕುಮಾರನು ಸರೋವರದ ಬಳಿಗೆ ಹೋಗಿ, ಮಾಘಸ್ನಾನವನ್ನು ಮಾಡಿ ಶ್ರೀಹರಿಯನ್ನು
ಸ್ತುತಿಸಿದನು. ಆ ಬಾಲಕನ ನಿಷ್ಕಳಂಕ ಭಕ್ತಿಗೆ, ನಿರ್ಮಲ ಹೃದಯಕ್ಕೆ ಲಕ್ಷ್ಮೀನಾರಾಯಣರು
ಪ್ರತ್ಯಕ್ಷವಾಗಿ ಅತನನ್ನು ಹರಸಿ. “ಬಾಲಕ! ನಿನಗೇನು ಬೇಕೋ ಕೇಳಿಕೋ” ಎಂದಾಗ, ಬಾಲಕನು “ಪ್ರಭೂ! ನನಗೆ ತಂದೆಯಾರೋ, ತಾಯಿ ಯಾರೋ
ತಿಳಿಯದು. ನನ್ನ ಲಾಲನೆ ಪಾಲನೆ ಮಾಡಿದವರು ಯಾರೋ ಹುಟ್ಟಿದಂದಿನಿಂದಲೂ ಕಷ್ಟಗಳೇ ಹೊರತು ಸುಖವನ್ನು
ಅರಿಯೆ. ವನಚರಗಳೇ ನನ್ನನ್ನು ರಕ್ಷಿಸಿ ಪೋಷಿಸುತ್ತಿವೆ. ಆದ್ದರಿಂದ ನಿಮ್ಮ ಸನ್ನಿಧಾನಕ್ಕೆ
ನನ್ನನ್ನು ಕರೆದುಕೊಂಡು ಹೋಗಿ, ಬೇರೇನೂ ಬೇಕಿಲ್ಲ” ಎಂದು ಪ್ರಾರ್ಥಿಸಿದನು.
ಆಗ ಶ್ರೀಹರಿಯು “ಎಲೈ ರಾಜನಂದನಾ! ನೀನು ಇನ್ನೂ ಭೂಲೋಕದಲ್ಲಿ ಶ್ರಮದಿಂದ
ಪರಿಪಾಲನೆ ಮಾಡಬೇಕಾದ ಅಗತ್ಯವಿದೆ. ನಿನ್ನ ತಂದೆಯಾದ ಸುಲಕ್ಷಣ ವೃದ್ಧನಾಗಿ, ನಿನ್ನನ್ನು ಕುರಿತು,
ನಿನ್ನ ತಾಯಿಯನ್ನು ಕುರಿತು ಕೊರಗಿ ಕನಲಿದಿದ್ದಾನೆ. ಆದ್ದರಿಂದ ತಂದೆಯ ಬಳಿಗೆ ಹೋಗಿ ಬಾ” ಎಂದು ಹೇಳಿ, ಆ ಸರೋವರದ ಸಮೀಪದಲ್ಲಿ
ತಪಸ್ಸನ್ನು ಮಾಡುತ್ತಿದ್ದ ಮುನೀಶ್ವರನನ್ನು ಜೊತೆಯಲ್ಲಿ ಕಳುಹಿಸಿ ಸುಲಕ್ಷಣನ ಬಳಿಗೆ
ಕಳುಹಿಸಿದರು.
ಈಗಾಗಲೇ ಸುಲಕ್ಷಣನು ಅಂತಿಮವಾಗಿ ಹೆಂಡತಿ
ಗರ್ಭವತಿಯಾಗಿದ್ದು ಎಲ್ಲಿಗೆ ಹೋದಳೋ? ಹುಟ್ಟಿದ ಮಗು ಏನಾಯಿತೋ? ಎಂದು ತನ್ನ ರಾಜ್ಯವನ್ನೆಲ್ಲ
ಹುಡುಕಿಸಿ, ತಾನೂ ಸಹ ಹುಡುಕಿ ಅವರ ಸುಳಿವು ತಿಳಿಯದೆ ಅವರ ಕೊರಗಿನಲ್ಲೇ ರಾಜಕಾರ್ಯದತ್ತ ಗಮನ
ಹರಿಸಲಾರದೆ ಹೋಗಿದ್ದನು. ಅಂತಹ ಸಮಯದಲ್ಲಿಯೇ ಮುನಿಯ ಜೊತೆ ಕುಮಾರನು ಹೊರಟನು. ರಾಜನೊಂದಿಗೆ
ಮುನಿಯು ಆ ಬಾಲಕನ ಜನ್ಮವೃತ್ತಾಂತವನ್ನು ತಿಳಿಸಲು, ಸುಲಕ್ಷಣ ಮಹಾರಾಜನು ಅನಂತಭರಿತನಾಗಿ ಬಾಲಕನನ್ನು
ಅಪ್ಪಿಕೊಂಡು ಮುನೀಶ್ವರನಿಗೆ ಮರ್ಯಾದೆಗಳನ್ನು ಮಾಡಿ, ಮಗನಿಗೆ ಸುಧರ್ಮನೆಂದು ಹೆಸರಿಟ್ಟು
ಪಟ್ಟಾಭಿಷೇಕ ಮಾಡಿದನು.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಸಪ್ತವಿಂಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಅಷ್ಟವಿಂಶೋಧ್ಯಾಯಃ
ಇಪ್ಪತ್ತೆಂಟನೇ ದಿನದ ಪಾರಾಯಣ
ವೃಕ್ಷಕ ಎಂಬ ಬ್ರಾಹ್ಮಣ ಕನ್ಯೆಯ ವೃತ್ತಾಂತ
ಹಿಂದೆ ಭೃಗು ಮಹರ್ಷಿ ವಂಶದಲ್ಲಿ ವೃಕ್ಷಕ
ಎಂಬ ಕನ್ಯೆ ಜನಿಸಿ, ದಿನೇದಿನೇ ಅಭಿವೃದ್ಧಿ ಹೊಂದಿದಳು. ಆಕೆ ದುರಾದೃಷ್ಟವಂತಳಿರಬೇಕು. ವಿವಾಹವಾದ
ಕೂಡಲೇ ಮದುಮಗನು ಮರಣಹೊಂದಿದನು. ವೃಕ್ಷಕಳು ತನ್ನ ದುರಾದೃಷ್ಟಕ್ಕೆ ದುಃಖಿಸಿ, ವಿರಕ್ತ ಭಾವದಿಂದ
ಆಶ್ರಮವನ್ನು ತೊರೆದು, ಗಂಗಾ ನದೀತೀರಕ್ಕೆ ಹೋಗಿ, ಆಶ್ರಮವೊಂದನ್ನು ನಿರ್ಮಿಸಿಕೊಂಡು
ಶ್ರೀಮನ್ನಾರಾಯಣನನ್ನು ಕುರಿತು ತಪಸ್ಸು ಮಾಡಲಾರಂಭಿಸಿದಳು.
ಆ ರೀತಿಯಾಗಿ ಬಹಳ ವರ್ಷಗಳ ಕಾಲ
ಆಚರಿಸಿದ್ದರಿಂದ, ಅನೇಕ ಮಾಘಮಾಸ ಸ್ನಾನದ ಫಲಗಳು ದಕ್ಕಿದವು. ಆಕೆಯ ಮನೋರಥ ಈಡೇರುವ ಸಮಯ
ಸನ್ನಿಹಿತವಾಯಿತು. ಒಂದು ದಿನ ಆಕೆ ತಪಸ್ಸು ಮಾಡುತ್ತ ಪ್ರಾಣಬಿಟ್ಟಳು. ಆ ದಿನ ವೈಕುಂಠ ಏಕಾದಶಿ,
ಆದ್ದರಿಂದ ವೈಕುಂಠಕ್ಕೆ ಹೋದಳು. ಆಕೆ ಬಹಳ ವರ್ಷಗಳ ಕಾಲ ವೈಕುಂಠದಲ್ಲೇ ಇದ್ದು, ನಂತರ
ಬ್ರಹ್ಮಲೋಕಕ್ಕೆ ಹೋದಳು. ಆಕೆ ಮಾಘಮಾಸ ಫಲವನ್ನು ಪಡೆದು ಪವಿತ್ರಳಾದ್ದರಿಂದ ಬ್ರಹ್ಮದೇವನು
ಅಕೆಯನ್ನು ಸತ್ಯಲೋಕದಲ್ಲಿ ದೇವಕಾರ್ಯಗಳನ್ನು ಮಾಡಲು ಅಪ್ಸರಸ್ತ್ರೀಯನ್ನಾಗಿ ಮಾಡಿ, “ತಿಲೋತ್ತಮ” ಎಂಬ ಹೆಸರಿನಿಂದ ಸತ್ಯಲೋಕಕ್ಕೆ
ಕಳುಹಿಸಿದನು.
ಕಾಲದಲ್ಲಿ ಸುಂದೋಪ-ಸುಂದರರು ಎಂಬ
ಇಬ್ಬರು ರಾಕ್ಷಸ ಸಹೋದರರು ಬ್ರಹ್ಮನನ್ನು ಕುರಿತು ಘೋರ ತಪಸ್ಸನ್ನು ಮಾಡಿದರು. ಅವರ ತಪಸ್ಸಿನ
ಪ್ರಭಾವಕ್ಕೆ ಬ್ರಹ್ಮದೇವನು ಪ್ರತ್ಯಕ್ಷನಾಗಿ, ಎಲೈ ರಾಕ್ಷಸ ಸಹೋದರರೇ ನಿಮಗೇನು ಬೇಕೋ
ಕೋರಿಕೊಳ್ಳಿ ಎಂದಾಗ ಸಹೋದರರು ಸ್ವಾಮಿ ನಮಗೆ ಬೇರೆಯವರಿಂದ ಮರಣವಾಗದಂತೆ ವರಕೋಡಿ ಎಂದು
ಬೇಡಿಕೊಂಡಾಗ ಬ್ರಹ್ಮನು ಹಾಗೆಯೇ ಅಗಲಿ ಎಂದು ವರವಿತ್ತು ಅಂತರ್ಧಾನನಾದನು. ಬ್ರಹ್ಮದೇವನಿಂದ
ವರವನ್ನು ಪಡೆದು ಆ ಇಬ್ಬರು ರಾಕ್ಷಸರು ಮಹಾ ದುರಹಂಕಾರಿಗಳಾಗಿ, ದೇವರುಗಳನ್ನು ಹಿಂಸಿಸಿದರು.
ಮಹರ್ಷಿಗಳ ತಪಸ್ಸಿಗೆ ಅಡಚಣೆ ಉಂಟುಮಾಡುತ್ತಿದ್ದರು. ಯಜ್ಞ-ಯಾಗಾದಿಗಳಲ್ಲಿ, ಪೂಜೆಗಳಲ್ಲಿ
ಮಲಮಾಂಸಾದಿಗಳನ್ನು ಹಾಕಿ, ಪ್ರಜೆಗಳಿಗೆ ನಾನಾ ರೀತಿಯ ತೊಂದರೆಗಳನ್ನು ಕೊಡುತ್ತಿದ್ದರು.
ದೇವಲೋಕಕ್ಕೆ ದಂಡೆತ್ತಿ ಹೋಗಿ, ದೇವತೆಗಳೆಲ್ಲರೂ ಓಡಿಸಿಬಿಟ್ಟರು, ಇಂದ್ರನು ಮುಂತಾದ
ದೇವತೆಗಳೆಲ್ಲರೂ ಸತ್ಯಲೋಕಕ್ಕೆ ಹೋಗಿ ಬ್ರಹ್ಮನನ್ನು ಬೇಡಿಕೊಂಡರು. “ಮಹಾನುಭವ! ಸಂದೋಪಸುಂದರೆಂಬ ರಾಕ್ಷಸರು ನೀವು
ಕೊಟ್ಟ ವರದಿಂದ ಮದೋನ್ಮತ್ತರಾಗಿ ತಪಸ್ವಿಗಳನ್ನು ಬಾಧಿಸುತ್ತ, ದೇವಲೋಕಕ್ಕೆ ಬಂದು ನಮ್ಮೆಲ್ಲರನ್ನೂ
ಓಡಿಸಿ, ಸೆರೆಮನೆಗಳಲ್ಲಿಟ್ಟು. ನಾನಾ ಬೀಭತ್ಸವನ್ನು ಮಾಡುತ್ತಿದ್ದಾರೆ. ಆದ್ದರಿಂದ ಅವರ ಸಾವಿಗೆ
ಯಾವುದಾದರೂ ಉಪಾಯವನ್ನು ಆಲೋಚಿಸು”. ಎಂದು ಪ್ರಾರ್ಥಿಸಿದರು.
ಬ್ರಹ್ಮನು ದೀರ್ಘವಾಗಿ ಆಲೋಚನೆ ಮಾಡಿ,
ತಿಲೋತ್ತಮೆಯನ್ನು ಕರೆದು. “ತಿಲೋತ್ತಮಾ! ಸುಂದೋಪಸುಂದರೆಂಬ ರಾಕ್ಷಸರಿಗೆ
ಬೇರೆಯವರಿಂದ ಮರಣವಾಗುವುದಿಲ್ಲವೆಂದು ವರ ನೀಡಿದ್ದೇನೆ. ಅವರುವರದ ಗರ್ವದಿಂದ ಬಹಳಷ್ಟು
ಅಲ್ಲೋಲಕಲ್ಲೋಲಗಳನ್ನು ಉಂಟು ಮಾಡುತ್ತಿದ್ದಾರೆ. ಆದ್ದರಿಂದ ನೀನು ಹೋಗಿ, ನಿನ್ನ ಚಾಕಚಕ್ಯತೆಯಿಂದ
ಅವರಿಗೆ ಮರಣ ಉಂಟಾಗುವಂತೆ ಪ್ರಯತ್ನ ಮಾಡು” ಎಂದು ಹೇಳಿದ.
ತಿಲೋತ್ತಮೆ ಬ್ರಹ್ಮದೇವರಿಗೆ
ನಮಸ್ಕರಿಸಿ, ಸುಂದೋಪಸುಂದರಿದ್ದ ಅರಣ್ಯವನ್ನು ಪ್ರವೇಶಿಸಿದಳು. ಆಕೆಯ ಕೈಯಲ್ಲಿ ವೀಣೆ ಹಿಡಿದು,
ಮಧುರವಾದ ಹಾಡುಗಳನ್ನು ಹಾಡುತ್ತ, ಆ ರಾಕ್ಷಸ ಸಹೋದರರ ನಿವಾಸಕ್ಕೆ ಸಮೀಪದಲ್ಲಿ ಓಡಾಡುತ್ತಿದ್ದಳು.
ವೀಣಾವಾದನವನ್ನು, ಆಕೆಯ ಗಾಯನವನ್ನು ಕೇಳಿದ ಆ ದಾನವ ಸಹೋದರರು. ಆ ಕಡೆ-ಈ ಕಡೆ ಓಡಾಡುತ್ತ
ಆಕೆಯನ್ನು ಅನುಸರಿಸುತ್ತ ಬೆನ್ನುಬಿದ್ದು, ನನ್ನನ್ನು ವರಿಸು.... ನನ್ನನ್ನು ವರಿಸು ಎಂದು
ತಿಲೋತ್ತಮೆಯನ್ನು ಅವರಿಗವರು ಅಂಗಲಾಚತೊಡಗಿದರು. ಆಗ ಆ ತಿಲೋತ್ತಮೆಯು, “ಓ ದಾನವೇಂದ್ರರೇ ನಿಮ್ಮನ್ನು
ಮದುವೆಯಾಗುವುದು ನನಗೂ ಇಷ್ಟವೇ. ನೀವಿಬ್ಬರೂ ನನಗೆ ಸಮಾನರೆ. ನಾನು ನಿಮ್ಮಿಬ್ಬರ ಮಧ್ಯೆ ಸಮಾನವಾದ
ಪ್ರೇಮದಿಂದಲೇ ಇದ್ದೀನಿ. ಆದರೆ ಇಬ್ಬರನ್ನೂ ವಿವಾಹವಾಗುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ
ನನ್ನದೊಂದು ಕೋರಿಕೆಯಿದೆ. ಅದೇನೆಂದರೆ ನಿಮ್ಮಿಬ್ಬರಲ್ಲಿ ಯಾರು ಬಲಶಾಲಿಗಳೋ ಅವರನ್ನೇ ನಾನು
ವರಿಸಬಲ್ಲೆ” ಎಂದು ಹೇಳಿದಳು.
ಆಕೆಯ ಮಾತಿಗೆ ಸುಂದೋಪ-ಸುಂದರಿಗೆ ಪೌರುಷ
ಬಂದಿತು. ಮೀಸೆ ತಿರುವಿ, ನಾನು ಬಲಶಾಲಿ, ನಾನು ಬಲಶಾಲಿ ಎಂದು ತೊಡೆತಟ್ಟಿಕೊಂಡು ಮಲ್ಲಯುದ್ಧ
ಮಾಡಿದರು. ನಂತರ ಆಯುಧವನ್ನು ಹಿಡಿಯಲು ಮುಂದಾದರು. ಗದೆ ಹಿಡಿದರು, ಮುದ್ಗರಗಳೆನ್ನಿತ್ತಿದರು.
ಏಟಿಗೆ ಪ್ರತಿ ಏಟು ಕೊಡತೊಡಗಿದರು. ಅವರಿಬ್ಬರ ಹೋರಾಟ ಎರಡು ಪರ್ವತಗಳು ಸಂಘರ್ಷಿಸಿದಂತಿದೆ.
ಮೋಡಗಳು ಘರ್ಜಿಸಿದಂತೆ ಅರಚುತ್ತ ಭಯಂಕರವಾಗಿ ಯುದ್ಧ ಮಾಡಿದರು. ಗದಾಯುದ್ಧದ ನಂತರ ಕತ್ತಿಗಳನ್ನು
ಝಳಪಿಸಿದರು. ಆ ಕತ್ತಿಯುದ್ಧದಲ್ಲಿ ಒಬ್ಬರ ಖಡ್ಗ ಮತ್ತೊಬ್ಬರಿಗೆ ತಾಕಿದ್ದರಿಂದ ಇಬ್ಬರ ತಲೆಗಳೂ
ಕಡಿದು ಕೆಳಗೆ ಬಿದ್ದವು. ಇಬ್ಬರೂ ಮರಣ ಹೊಂದಿದರು.
ತಿಲೋತ್ತಮೆಯನ್ನು ದೇವತೆಗಳು ಹರಸಿದರು.
ಆಕೆಯು ಬ್ರಹ್ಮನಲ್ಲಿಗೆ ಹೋಗಿ ನಡೆದುದನ್ನು ತಿಳಿಸಿದಾಗ, ಬ್ರಹ್ಮನು ಸಂತೋಷಗೊಂಡು “ತಿಲೋತ್ತಮ! ನೀನು ಒಳ್ಳೆಯ ಕಾರ್ಯವನ್ನೇ ಮಾಡಿದೆ.
ನಿನ್ನಿಂದ ಸುಂದೋಪಸುಂದರು ಮರಣಿಸಿದರು. ನಿನಗೆ ಈ ಶಕ್ತಿ ಬರಲು ಕಾರಣ ನೀನು ಮಾಡಿರುವ ಮಾಘಮಾಸದ
ವ್ರತಫಲವೇ, ಆದ್ದರಿಂದ ನೀನು ದೇವಲೋಕಕ್ಕೆ ಹೋಗು. ದೇವತೆಗಳು ನಿನ್ನನ್ನು ಗೌರವಿಸುತ್ತಾರೆ.
ಅಲ್ಲಿ ಅಪ್ಸರೆಯರೆಲ್ಲರಿಗಿಂತ ಅಧಿಕಳಾಗುವೆ” ಎಂದು ಹೇಳಿ ಕಳುಹಿಸಿದರು.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಅಷ್ಟಾವಿಂಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ಏಕೋನತ್ರಿಂಶೋಧ್ಯಾಯಃ
ಇಪ್ಪತ್ತೊಂಭತ್ತನೇ ದಿನದ ಪಾರಾಯಣ
ಮಹಾವಿಷ್ಣುವಿಗೆ ಬ್ರಹ್ಮ-ರುದ್ರರಿಂದ ಪೂಜೆ
ವಸಿಷ್ಠ ಮಹರ್ಷಿಗಳು ದಿಲೀಪ ಮಹಾರಾಜನನ್ನು ಉದ್ದೇಶಿಸಿ ಮತ್ತೆ
ಹೀಗೆಂದರು. ರಾಜಾ! ಒಂದು ಕಾಲದಲ್ಲಿ, ಬ್ರಹ್ಮ-ಈಶ್ವರರ ನಡುವೆ ವಾಗ್ವಾದ
ನಡೆಯಿತು. ಆ ವಾದ ಎಂಥದ್ದೆಂದರೆ – ಒಂದು ದಿನ ಬ್ರಹ್ಮದೇವನು ಮತ್ತು ಪರಮೇಶ್ವರನು ಇವರಿಬ್ಬರಲ್ಲಿ
ಯಾರು ಹೆಚ್ಚು ಎಂದು ಅವರಿಬ್ಬರೂ ಜಗಳವಾಡಿದರು. ಹದಿನಾಲ್ಕು ಲೋಕಗಳಿಗೆ ಅಧಿಪತಿ ಎಂದು ಶಿವನೆಂದರೆ
– ಆ ಹದಿನಾಲ್ಕು ಲೋಕಗಳನ್ನು ಸೃಷ್ಟಿಸಿದವನು ತಾನೆಂದು ಬ್ರಹ್ಮನು ಕಡೆ ವಾದಿಸಿದನು. ವಾದ-ಪ್ರತಿವಾದಗಳು ತೀವ್ರತೆಯನ್ನು
ಪಡೆದುಕೊಂಡವು. ಹಾಗೆ ಏಳು ವರ್ಷಗಳ ಕಾಲ ವಾದವು ಮುಂದುವರೆದ ಕಾರಣ ಸೃಷ್ಟಿ ಕಾರ್ಯಕ್ರಮಗಳು
ಸ್ಥಗಿತಗೊಳ್ಳುತ್ತಿರುವುದನ್ನು ಕಂಡು ಮಹಾವಿಷ್ಣುವು ವಿಶ್ವರೂಪದಿಂದ ಪ್ರತ್ಯಕ್ಷನಾದನು.
ಬ್ರಹ್ಮ-ರುದ್ರರು ಆ ವಿರಾಟ್ರರೂಪವನ್ನು ನೋಡಿದರು. ಅದರಲ್ಲಿ ಸಮಸ್ತ ಲೋಕಗಳೂ ಅಡಗಿವೆ.
ಸಪ್ತಸಮುದ್ರಗಳು ಘರ್ಜಿಸುತ್ತಿದೆ. ಆ ವಿಶ್ವರೂಪನ ಕಿವಿಯಲ್ಲಿ ಒಂದು ಬ್ರಹ್ಮ, ಮತ್ತೊಂದು ಕಡೆ
ಈಶ್ವರ ಕಾಣಿಸಿದರು. ಇದನ್ನೆಲ್ಲವನ್ನೂ ಬ್ರಹ್ಮ-ಮಹೇಶ್ವರರು ನೋಡಿ, ವಿಶ್ವರೂಪವನ್ನು
ಗಂಧಪುಷ್ಪಾಕ್ಷತೆಗಳಿಂದ ಪೂಜಿಸಿದರು. ಆ ವಿಶ್ವವ್ಯಾಪ್ತನನ್ನು, ಆ ವಿರಾಟ್ ರೂಪವನ್ನು ಯಾರು
ತಿಳಿದುಕೊಂಡು ಬರವರೋ ಅವರೇ ಅಧಿಕರೆಂದು ನಿಶ್ಚಯಿಸಿ ಹೋರಟರು.
ಹಾಗೆ ಅವರು ಸಾವಿರ ವರ್ಷ ಅಲೆದಾಡಿದರೆ ಹೊರತು. ಆ ವಿರಟ್
ಸ್ವರೂಪನ ಆದಿ-ಅಂತ್ಯಗಳು ಅರಿತುಕೊಳ್ಳಲಾರದೆ ಬೇಸತ್ತು ಮತ್ತೆ ಯಥಾಸ್ಥಾನಕ್ಕೆ ಬಂದು, ಹೀಗೆ
ಪೇಚಾಡಿದರು.-
ಸಾವಿರ ವರ್ಷ ಹಗಲು-ರಾತ್ರಿ
ತಿರುಗಿ ಸಾಕಾಯಿತೇ ಹೊರತು, ಈ ವೀರಾಟ್ ರೂಪದ ಆದಿ-ಅಂತ್ಯಗಳನ್ನು ಅರಿತುಕೊಳ್ಳಲಾರದೆ ಹೋದೆದವು.
ಆದರೆ ನಾವಿಬ್ಬರೂ ಅಧಿಕರಲ್ಲ. ಈ ಸೃಷ್ಟಿಗೆಲ್ಲ ಮೂಲಕಾರಕನು ಮಹಾವಿಷ್ಣುವೇ, ಈತನೇ ಸೃಷ್ಟಿಕರ್ತ,
ಈತನೇ ಲಯಕಾರಕ, ಈತನೇ ಸರ್ವಾಂತರ್ಯಾಮಿ, ಜಗತ್ತನ್ನು ಉದರದಲ್ಲಿಟ್ಟುಕೊಂಡು ಕಾಪಾಡುವ ಕಲ್ಯಾಣಧಾಮ.
ಈತನೇ ಸೂರ್ಯ, ಚಂದ್ರ, ಅಗ್ನಿ, ವಾಯು, ಯಮ, ಸರ್ವಲೋಕಗಳಿಗೂ ಏಕೈಕನಾಥನು. ಅಂತಹ ಮಹಾನುಭಾವನಾದ
ನಾರಾಯಣನೇ ಅಧಿಕನು. ನಾವಿಬ್ಬರೂ ಅಧಿಕರಾಗಿರುವುದಿಲ್ಲ ಎಂದು ನಿಶ್ಚಯಿಸಿಕೊಂಡು
ವಿಷ್ಣುಮೂರ್ತಿಯನ್ನು ಸ್ತೋತ್ರ ಮಾಡಿದಾಗ ಆತ ತನ್ನ ವಿರಾಟ್ ಸ್ವರೂಪದಿಂದ ಯಥಾರೂಪವನ್ನು ತಳೆದ,
ನೀವಿಬ್ಬರೂ ಬಹಳಕಾಲದಿಂದ ಜಗಳವಾಡಿದ ವಿಷಯದ ಕುರಿತು ನಿಮಗೆ ಜ್ಞಾನೋದಯವಾಗುವುದಕ್ಕಾಗಿಯೇ ನಾನು ಈ
ವಿಶ್ವರೂಪವನ್ನು ನಿಮಗೆ ತೋರಿಸಿದೆ. ನನ್ನ ರೂಪಕ್ಕೆ ಅದಿ-ಅಂತ್ಯಗಳನ್ನು ಕಂಡುಕೊಳ್ಳಲಾರದೆ
ಅಚೇತನರಾಗಿ ನಿಮ್ಮ ಕಲಹವನ್ನು ನಿಲ್ಲಿಸಿದಿರಿ. ಸಮಸ್ತ ಭೂಮಂಡಲಕ್ಕೆ ಸಮಸ್ತ ಪ್ರಾಣಿಕೋಟಿಗೆ,
ಸಮಸ್ತ ದೇವತೆಗಳಿಗೆ ಸೃಷ್ಟಿಕರ್ತನು ನಾನೇ ಎಂದು ಗ್ರಹಿಸಿ ಸ್ತೋತ್ರ ಮಾಡಿದಿರಿ. ನೀವು ಯಾಕೆ
ಜಗಳವಾಡಿದಿರೋ ಹೇಳುತ್ತೇನೆ ಕೇಳಿ.
ನೀವಿಬ್ಬರೂ ರಜೋ-ತಮೋ
ಗುಣಗಳಿಗೆ ಬದ್ಧರಾಗಿದ್ದೀರಿ. ಸತ್ವರಜಸ್ತಮೋ ಗುಣಗಳೆಂಬ ಮೂರು ಗುಣಗಳು ಇರುವವನೇ ಶ್ರೇಷ್ಠನು,
ಅತನೇ ತೇಜೋವಂತನು, ಸೃಷ್ಟಿಗೆ ಪೂರ್ವದಲ್ಲಿ ಈ ವಿಶ್ವವೆಲ್ಲ ಕತ್ತಲಾಯಿತು. ಪಂಚಭೂತಗಳು
ಸೃಷ್ಟಿಸಲ್ಪಡಲಿಲ್ಲ. ಆಗ ನಾನೇ ಸೃಷ್ಟಿಸಲು ಉಪಕ್ರಮಿಸಿದೆ. ಒಂದು ಬಂಗಾರದ ಗೋಳವನ್ನು ಮಾಡಿ,
ಅದಕ್ಕೆ ಅವಯವ ಸ್ಫುಟ ಉಂಟಾಗಿಸಿ, ಮೂರು ರೂಪಗಳನ್ನಾಗಿ ಮಾಡಿದೆ. ಆ ಮೂರು ರೂಪಗಳೇ ನಾವು ಮೂವರು.
ನಾವು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಕರಾದೆವು. ಸೃಷ್ಟಿಯನ್ನು ಮಾಡುವವನಾಗಿ ಬ್ರಹ್ಮ,
ಪೋಷಿಸುವವನಾಗಿ ನಾನು, ನಾಶಮಾಡುವವನಾಗಿ ಶಿವ. ಈ ಪ್ರಕಾರ ಏರ್ಪಟ್ಟೆವು. ಆದ್ದರಿಂದ ನಾವು ತ್ರಿಮೂರ್ತಿಗಳು.
ನಾನೇ ನೀವು, ನೀವೇ ನಾನು. ನನಗೆ ಮಾಡಿದ ಪೂಜೆಗಳು ನಿಮಗೂ, ನಿಮಗೆ ಮಾಡಿದ ಪೂಜೆಗಳು ನನಗೂ
ಸಲ್ಲುತ್ತದೆ. ಆದ್ದರಿಂದ ನಿಮ್ಮಿಬ್ಬರಲ್ಲಿ ಭೇದವಿಲ್ಲ. ಮೊದಲಿಲ್ಲದ ಭೇದ ಈಗ ಏಕೆ ಉಂಟಾಯಿತು? ನಿಮಗಿರುವ ರಜಸ್ತಮೋಗುಣಗಳ
ಪ್ರಭಾವದಿಂದಲೇ ಅಹಂಕಾರಪೂರಿತರಾಗಿ ಈ ರೀತಿ ವರ್ತಿಸಿದಿರಿ. ಆದ್ದರಿಂದ ಶಾಂತರಾಗಿರಿ.
ಬ್ರಹ್ಮದೇವ! ನೀನು ಸಮಸ್ತ
ಪ್ರಾಣಿಗಳನ್ನು ಸೃಷ್ಟಿಸುವ ಸೃಷ್ಟಿಕರ್ತ, ವೇದಗಳಿಗೆ ಸ್ಥಾನಭೂತನು. ಸ್ವಶಕ್ತಿಯಿಂದ ಯೋಗವನ್ನು
ಹೊಂದಿ, ನನ್ನ ನಾಭಿ ಕಮಲದಲ್ಲಿ ಜನಿಸಿದೆ. ಆದ್ದರಿಂದ ನಿನಗೂ-ನನಗೂ ಭೇದವಿಲ್ಲವೆಂದು ಶ್ರೀ
ಮಹಾವಿಷ್ಣುವು ಬ್ರಹ್ಮನನ್ನು ಸಮಾಧಾನ ಪಡಿಸಿದನು.
ನಂತರ ಶಿವನ ಕಡೆಗೆ
ತಿರುಗಿ, ಓ ಮಹಾದೇವಾ! ನೀನು ಸಮಸ್ತ ಲೋಕಗಳಿಗೆ ಆಧಾರಕರ್ತನು, ದೇವತೆಗಳಿಂದ ಸದಾ
ಪೂಜಿಸಲ್ಪಡುವ ಪರಮಾನಂತ ಸ್ವರೂಪನು. ಶರಣಾಗತ ರಕ್ಷಕನು, ಬ್ರಹ್ಮಜ್ಞಾನಿಯು, ಪ್ರಳಯಕಾಲದ
ರುದ್ರನು, ಓಂಕಾರಸ್ವರೂಪನು. ಪರಮೇಶ್ವರನೇ! ನಿನ್ನ ಘನತೆಯನ್ನು ಅರಿಯಲು ಬಯಸಿ ನಾರದರು ಒಂದು ದಿನ ನನ್ನ
ಬಳಿಗೆ ಬಂದು ಶಂಕರನ ಮಹಿಮೆಯನ್ನು ವಿವರಿಸುವಂತೆ ಕೋರಿದಾಗ ಆತನಿಗೆ ನಿನ್ನ ಚರಿತ್ರೆಯನ್ನು
ತಿಳಿಸಿದೆ. ಅಂದಿನಿಂದ ನಾರದರು ನಿನ್ನನ್ನು ಅನೇಕ ರೀತಿಯಲ್ಲಿ ಸ್ತೋತ್ರ ಮಾಡುತ್ತಿದ್ದಾರೆ.
ನಾರದನಿಂದ ಸಮಸ್ತ ಲೋಕಗಳಿಗೂ ನಿನ್ನ ಮಹಿಮೆ
ತಿಳಿಯಿತು.
ನೀನು ಪರಬ್ರಹ್ಮ, ಈ
ಪ್ರಪಂಚವೆಲ್ಲವೂ ನಿನ್ನ ರೂಪವೂ ಸಹ ನನ್ನಂತೆಯೇ ಎಲ್ಲಕಡೆ ವ್ಯಾಪಿಸಿದೆ. ನಿನಗೂ ನನಗೂ ಭೇದವಿಲ್ಲ.
ಆದ್ದರಿಂದಲೇ ಶಿವ-ಕೇಶವರೆಂದು ನಮ್ಮನ್ನು ಭಕ್ತರು ಪೂಜಿಸುತ್ತಾರೆ. ಆದ್ದರಿಂದ ನೀನೂ ನನ್ನೊಂದಿಗೆ
ಸಮಾನನೇ ಎಂದು ಹಿತಬೋಧನೆ ಮಾಡಿದರು.
ಇತಿ ಪದ್ಮಪುರಾಣೇ ಮಾಘಮಾಸ
ಮಹಾತ್ಮೇ
ಏಕೋನತ್ರಿಂಶೋಧ್ಯಾಯಃ
*****************************************************************************************
ಅಥ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ತ್ರಿಂಶೋಧ್ಯಾಯಃ
ಮುವ್ವತ್ತನೇ ದಿನದ ಪಾರಾಯಣ
ಮಾಘ ಏಕಾದಶಿ ಮಹಿಮೆ ಅಥವಾ ಕ್ಷೀರಸಾಗರ ಮಥನ
ಎಲೈ ದಿಲೀಪ ಮಹಾರಾಜನೇ ! ಅಶ್ವಮೇಧಯಾಗ ಮಾಡಿದವನು, ಮಾಘಮಾಸದಲ್ಲಿ ನದೀ ಸ್ನಾನ
ಮಾಡುವವನು, ಹಾಗೆಯೇ ಏಕಾದಶಿವ್ರತಉಪವಾಸವಿರುವವನು ವೈಕುಂಠವನ್ನು ಪಡೆಯುತ್ತಾನೆ. ಇದರಲ್ಲಿ
ಯಾವುದೇ ಸಂಶಯವಿಲ್ಲ. ಏಕಾದಶಿ ವ್ರತ ಮಹಿಮೆಯಿಂದ ಅಂಬರೀಷನು ದೂರ್ವಾಸರಿಂದ ಯಾವುದೇ ತೊಂದರೆಯನ್ನು
ಅನುಭವಿಸದೆ ಮತ್ತೆ ಆ ಶಕ್ತಿಯು ದೂರ್ವಾಸರನ್ನೇ ಹಿಂಬಾಲಿಸಿ ಆತನ ಗರ್ವವನ್ನು ಅಡಗಿಸಿತು. ಈ ವಿಷಯ
ನಿನಗೆ ಗೊತ್ತೇ ಇದೆ. ಅದರೂ ನೀನು ಕೇಳಿದ್ದಾಕ್ಕಾಗಿ ಮತ್ತೊಂದು ಉದಾಹರಣೆಯನ್ನು ವಿವರಿಸುತ್ತೇನೆ
ಕೇಳು ಎಂದು-
ಒಮ್ಮೆ ದೇವತೆಗಳು ಮತ್ತು
ರಾಕ್ಷಸರು ಅಮೃತಕ್ಕಾಗಿ ಕ್ಷೀರಸಾಗರವನ್ನು ಕಡೆದರು. ಮಂದರ ಪರ್ವತವನ್ನು ಕಡಗೋಲನ್ನಾಗಿಸಿ ವಾಸುಕಿ
ಎಂಬ ಸರ್ಪವನ್ನು ಹಗ್ಗವಾಗಿ ಮಾಡಿಕೊಂಡರು. ಆ ಸರ್ಪವನ್ನು ಮಂದರ ಪರ್ವತಕ್ಕೆ ಸುತ್ತಿ ಸರ್ಪದ ತಲೆಯ
ಕಡೆ ರಾಕ್ಷಸರು ಮತ್ತು ಬಾಲದ ಕಡೆ ದೇವತೆಗಳು ಹಿಡಿದು ಹಾಲ್ಗಡಲನ್ನು ಕಡೆಯುತ್ತಿದ್ದಾಗ ಮೊದಲು
ಲಕ್ಷ್ಮಿಯು ಜನಿಸಿದಳು. ವಿಷ್ಣು ಆಕೆಯನ್ನು ಪತ್ನಿಯಾಗಿಸಿಕೊಂಡನು. ನಂತರ ಉಚ್ಛೈಶ್ರವಸ್ಸೆಂಬ
ಕುದುರೆ, ಕಾಮಧೇನು, ಕಲ್ಪವೃಕ್ಷ, ಇತ್ಯಾದಿಗಳು ಬಂದಾಗ ಅವನ್ನು ದೇವೇಂದ್ರನಿಗೆ ಕೊಡಲಾಯಿತು.
ನಂತರ ಅಗ್ನಿಗೆ ಸಮಾನವಾದ ಉನ್ನತ ತೇಜಸ್ಸಿನ ಹಾಲಾಹಲವು ಹೊರಬಂದಿತು. ಅದು ಮಹಾವಿಷವಾಗಿ ಎಲ್ಲ ಲೋಕಗಳಿಗೆ
ಹರಡಲು ಪ್ರಾರಂಭಿಸಿತು. ದೇವತೆಗಳು ರಾಕ್ಷಸರು ಹೆದರತೊಡಗಿದರು. ಅನ್ಯಮಾರ್ಗವಿಲ್ಲದೆ ಮಹಾದೇವನಿಗೆ
ಶರಣುಹೋದರು. ಆತನನ್ನು ಸ್ತುತಿಸಿದರು. ಶಂಕರನು ದೇವತೆಗಳ-ರಾಕ್ಷಸರ ಆರ್ತನಾದವನ್ನು ಕೇಳಿ
ತಡಮಾಡದೆ ತನ್ನ ಬಾಯ್ತೆರೆದು ಆ ಕಾಲಕೂಟ ವಿಷವನ್ನು ನುಂಗಿ ಕಂಠದಲ್ಲಿಟ್ಟುಕೊಂಡನು. ಆ ವಿಷದಿಂದ
ಶಂಕರನ ಕಂಠವು ನೀಲಿ ಬಣ್ಣಕ್ಕೆ ತಿರುಗಿತು. ಆಗ ಶಂಕರನಿಗೆ ನೀಲಕಂಠ ಎಂಬ ಹೆಸರು ಬಂದಿತು. ಅನಂತರ
ಕ್ಷೀರಸಾಗರವನ್ನು ಮತ್ತೆ ಕಡೆದಾಗ ಅಮೃತ ಹುಟ್ಟಿದ್ದರಿಂದ ಹಾಲ್ಗಡಲನ್ನು ಕಡೆಯುವುದನ್ನು
ನಿಲ್ಲಿಸಿದರು. ಆ ಅಮೃತ ತಮಗೆ ಬೇಕೆಂದು ದೇವತೆಗಳು, ತಮಗೇ ಬೇಕೆಂದು ರಾಕ್ಷಸರು ವಾದ ಮಾಡಿದರು.
ಮಾಯಾವೇಷಧಾರಿಯಾದ
ಶ್ರೀಹರಿಯು ಈ ವಾದವನ್ನು ಗ್ರಹಿಸಿ ನಂತರ ಸ್ತ್ರೀರೂಪನ್ನು ಧರಿಸಿದನು. ಆಕೆಯೇ ಮೋಹಿನಿ. ಆಕೆಯ
ಅಂದ-ಚಂದಗಳ ಮುಂದೆ ಯಾವ ಸ್ತ್ರೀಯೂ ಸರಿದೂಗಲಾರಳು. ಆ ಜಗನ್ಮೋಹಿನಿ ಅಮೃತಕ್ಕಾಗಿ
ಜಗಳವಾಡುತ್ತಿದ್ದ ದೇವ-ದಾನವರು ಮಧ್ಯೆ ಬಂದು ಏ ಅಮಾಯಕರೇ ಯಾಕೆ ಈ ರಾದ್ಧಾಂತ ನಿಮ್ಮೆಲ್ಲರಿಗೂ
ನಾನು ಸರಿಸಮಾನವಾಗಿ ಅಮೃತವನ್ನು ಹಂಚುವೆನು. ಆದ್ದರಿಂದ ದೇವತೆಗಳೆಲ್ಲ ಒಂದು ಸಾಲಿನಲ್ಲಿ ಮತ್ತು
ದಾನವರೆಲ್ಲ ಒಂದು ಸಾಲಿನಲ್ಲಿ ಕುಳಿತುಕೊಳ್ಳಿರಿ ಎಂದನು.
ದೇವ-ದಾನವರು ಮೋಹಿನಿಯ
ರೂಪವನ್ನು ನೋಡಿದವರೇ ಮರುಮಾತನಾಡದೆ ಎರಡು ಪಂಕ್ತಿಗಳಾಗಿ ಕಳಿತುಕೊಂಡರು. ಜಗನ್ಮೋಹಿನಿಯು
ಅಮೃತವನ್ನು ಎರಡು ಭಾಗಗಳಾಗಿ ಮಾಡುವಂತೆ ನಟಿಸಿ ಒಂದು ಪಾತ್ರೆಯಲ್ಲಿ ಅಮೃತವನ್ನು, ಇನ್ನೊಂದರಲ್ಲಿ
ಸುರೆಯನ್ನು ಹಾಕಿ ನರ್ತನ ಮಾಡುತ್ತಾ ವಯ್ಯಾರ ನಡಿಗೆಯಿಂದ ಕಿರುನಗುತ್ತಾ ಅವರನ್ನು ಮುಗ್ಧರನ್ನಾಗಿ
ಮಾಡಿ ಅಮೃತವನ್ನು ದೇವತೆಗಳಿಗೂ, ಸುರೆಯನ್ನು ದಾನವರಿಗೂ ಹಂಚುತ್ತಿದ್ದಾಗ, ಈ ಮಾಯೆಯನ್ನು ಅರಿತ
ರಾಹು-ಕೇತು ಎಂಬ ರಾಕ್ಷಸರು ಯುಕ್ತಿಯಿಂದ ಮಾರುವೇಷ ಧರಿಸಿ ದೇವತೆಗಳ ಪಂಕ್ತಿಯಲ್ಲಿ ಕುಳಿತು
ಅಮೃತವನ್ನು ಕುಡಿದರು.
ಜಗನ್ಮೋಹಿನಿಯು ಇದನ್ನರಿತು
ಚಕ್ರಾಯುಧದಿಂದ ಅವರ ಶಿರಸ್ತನ್ನು ಕಡಿದಳು. ಅವರು ಕುಡಿದ ಅಮೃತಬಿಂದು ಕಂಠದಿಂದ ಹೊರೆಗೆ
ಇಳಿಯದಿದ್ದುದರಿಂದ ಅವರು ಮರಣ ಹೊಂದಿದರು. ಆ ಅಮೃತವನ್ನು ದೇವತೆಗಳು ಹೀರಿಕೊಂಡರು. ಈ ಮೋಸಕ್ಕೆ
ರಾಕ್ಷಸರು ಹಾಹಾಕಾರ ಮಾಡಿದರು. ಇಬ್ಬರೂ ರಾಕ್ಷಸರು ಮಾಯೆಮಾಡಿ ಪಂಕ್ತಿಯೊಳಗೆ ಬಂದು ಅಮೃತವನ್ನು
ಸೇವಿಸಿದರೆಂದು ದೇವತೆಗಳು ಕೂಗಾಡಿದರು. ಕಡೆಗೆ ರಾಕ್ಷಸರೆಲ್ಲ ಒಂದಾಗಿ, ಈ ಅಮೃತ ನಮಗೆ
ಬೇಕಾಗಿಲ್ಲ. ನಾವು ಯಾರಿಗೂ ಹೆದರುವುದಿಲ್ಲ. ನಮಗೆ ಸಾವು ಬರುವುದಿಲ್ಲ ಎಂದು ಅವರವರ ಪಾಡಿಗೆ
ಹೊರಟುಹೋದರು. ಉಳಿದ ಅಮೃತವನ್ನು ವಿಷ್ಣು, ಬ್ರಹ್ಮ, ಶಿವ ಮೂವರೂ ಸೇರಿ ದೇವೇಂದ್ರನಿಗೆ ಕೊಟ್ಟು
ತಮ್ಮ ತಮ್ಮ ಲೋಕಗಳಿಗೆ ತೆರಳಿದರು.
ಕ್ಷೀರಸಾಗರವನ್ನು
ಮಥಿಸಿದಾಗ ಬಂದ ಅಮೃತ ಕಲಶವನ್ನು ಒಂದು ಕಡೆ ಇಟ್ಟ ಸಮಯದಲ್ಲಿ ವಿಧಿವಶದಿಂದ ಎರಡು ಹನಿಗಳು ಭೂಮಿಯ ಮೇಲೆ
ಬಿದ್ದವು. ಆ ಎರಡು ಹನಿಗಳು ಬಿದ್ದಕಡೆ ಎರಡು ಅಂದವಾದ ಸಸ್ಯಗಳು ಹುಟ್ಟಿದವು. ಈ ಎರಡು
ಸಸ್ಯಗಳಲ್ಲಿ ಒಂದು ಪಾರಿಜಾತ, ಇನ್ನೊಂದು ತುಳಸಿ ಸಸಿಗಳಾದವು. ಭೂಮಿಯಲ್ಲೇ ಬೆಳೆದವು, ಹಾಗೆ
ಬೆಳೆಯುತ್ತಿದ್ದ ಸಸಿಗಳನ್ನು ಸತ್ರಾಜಿತನೆಂಬುವವನು ಪ್ರತಿದಿನ ನೀರೆರೆದು ಪೋಷಿಸುತ್ತಿದ್ದನು.
ಕೆಲವು ಕಾಲಾನಂತರ ಪಾರಿಜಾತ
ವೃಕ್ಷಕ್ಕೆ ಹೂ ಬಿಟ್ಟವು, ದೇವೇಂದ್ರನು ಗಗನ ಮಾರ್ಗವಾಗಿ ಸಂಚರಿಸುತ್ತ ಪಾರಿಜಾತ ಪುಷ್ಪದ ಪರಿಮಳದ
ಕಡೆಗೆ ಇಳಿದುಬಂದು, ಒಂದು ಹೂವನ್ನು ಕಿತ್ತು ತನ್ನ ಪತ್ನಿಯಾದ ಶಚೀದೇವಿಗೆ ಕೊಟ್ಟನು. ಉಳಿದ
ದೇವತಾಸ್ತ್ರೀಯರೂ ಕೂಡಾ ಕೇಳಿದಾಗ ಮತ್ತೆ ಇಂದ್ರನು ರಹಸ್ಯವಾಗಿ ಆ ತೋಟದಲ್ಲಿ ಪ್ರವೇಶಿಸಿದನು.
ಪಾರಿಜಾತ ಹೂಗಳನ್ನು ಯಾರೋ ಕೀಳುತ್ತಿರುವರೆಂದು ತಿಳಿದು ಸುತ್ರಾಜಿತನು ವಿಷ್ಣುಪಾದಗಳ ಬಳಿಯಿದ್ದ
ಅಕ್ಷತೆಯನ್ನು ಆ ಹೂಗಳ ಮೇಲೆ ಚೆಲ್ಲಿದನು. ಅದರಿಂದ ದೇವೇಂದ್ರನ ದೈವತ್ವವು ನಶಿಸಿ ಮೂರ್ಛೆ
ಹೋದನು. ದೇವತೆಗಳು ಈ ಸುದ್ದಿ ಕೇಳಿ ನಾರದರನ್ನು ಪ್ರಾರ್ಥಿಸಿದಾಗ, ಎಲ್ಲರೂ ಕೃಷ್ಣನ ಕಡೆಗೆ
ಕಳುಹಿಸಿದರು. – ಕೃಷ್ಣನು ಸತ್ರಾಜಿತನ ಬಳಿಗೆ ಹೊರಟನು. ಸತ್ರಾಜಿತನು ಆಷಾಢ ಶುದ್ಧ ಏಕಾದಶಿಯ ದಿನ
ಉಪವಾಸವಿದ್ದು ಜಾಗರಣೆ ಮಾಡಿ, ದ್ವಾದಶಿಯಂದು ಸದ್ಬ್ರಾಹ್ಮಣನಿಗೆ ದಾನ ಕೊಡುತ್ತಿದ್ದರಿಂದ ಆತನು
ಅಮೋಘವಾದ ಶಕ್ತಿಯನ್ನು ಉಳ್ಳವನಾಗಿದ್ದರಿಂದ ಶ್ರೀಕೃಷ್ಣ ಪರಮಾತ್ಮನು ಆತನಿಗೆ ವರಪ್ರಸಾದವನ್ನು
ಅನುಗ್ರಹಿಸಿ, ಆತನ ತೋಟದಲ್ಲಿದ್ದ ಪಾರಿಜಾತ ವೃಕ್ಷವನ್ನು ದೇವೇಂದ್ರನಿಗೆ ಕೊಡಿಸಿದನು.
ಈ ರೀತಿಯಾಗಿಯೇ ತುಳಸೀ
ವನವನ್ನು ತನ್ನ ಸನ್ನಿಧಿಯಲ್ಲಿರುವಂತೆ ಕೇಳಿದಾಗ, ತುಳಸೀದೇವಿಯು ಆಗಲೆಂದು ಹೇಳಿ, ಅಂದಿನಿಂದ
ವಿಷ್ಣು ದೇವನೊಂದಿಗೆ ಸಮಾನವಾಗಿ ಪೂಜಿಸಲ್ಪಡುತ್ತಾಳೆ.
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾ I
ಯದಗ್ರೇ ಸರ್ವವೇದಾಶ್ಚ ತುಲಸೀ ತ್ವಾಂ ನಮಾಮ್ಯಹಂ II
ಎಂದು ತುಳಸಿದೇವಿಯನ್ನು ಶುಚಿರ್ಭೂತರಾಗಿ ಪೂಜಿಸಿದರೆ
ಸಕಲ ಸೌಭಾಗ್ಯಗಳೂ ಉಂಟಾಗುವುವು.
ಇತಿ ಪದ್ಮಪುರಾಣೇ ಮಾಘಮಾಸ ಮಹಾತ್ಮೇ
ತ್ರಿಂಶೋಧ್ಯಾಯಃ
*****************************************************************************************
ಫಲಶೃತಿ
ಸೂತ ಮಹರ್ಹಿಗಳು ಶೌನಕಾದಿ ಮುನಿಗಳೊಂದಿಗೆ ಹೀಗೆ
ಹೇಳಿದರು –
ಮುನಿವರ್ಯರೇ ! ಇದುವರೆಗೂ ಮಾಘಮಾಸದ ಮಹಿಮೆಯನ್ನು ಮಾಘಸ್ನಾನದಿಂದ ಉಂಟಾಗುವ ಫಲವನ್ನು
ವಸಿಷ್ಠ ಮಹರ್ಷಿಯು ದಿಲೀಪ ಮಹಾರಾಜನಿಗೆ ತಿಳಿಸಿದ ರೀತಿಯಲ್ಲಿ ನಿಮಗೆ ವಿವರಿಸಿದೆನು. ನೀವು
ಉದ್ದೇಶಿಸಿರುವ ಈ ಹನ್ನೆರಡು ವರ್ಷಗಳ ಮಹಾಯಜ್ಞವೂ ಸಹ ಪೂರ್ಣವಾಗುತ್ತಾ ಬಂದಿದೆ. ನಾಳೆ ಮಾಘಮಾಸದ
ಕೊನೆಯ ದಿನ. ಆದ್ದರಿಂದ ನಾವೆಲ್ಲರೂ ಗಂಗಾ ನದಿಗೆ ಹೋಗಿ ಸ್ನಾನ ಮಾಡಿ ವಿಷ್ಣುವನ್ನು ಪೂಜಿಸೋಣ
ಬನ್ನಿ.
ಈ ಪ್ರಕಾರ ಮಹರ್ಷಿಗಳು ಮಾಘಪುರಾಣ ಪ್ರವಚನವನ್ನು
ಪೂರ್ಣಗೊಳಿಸಿದರು.
ಮಾಘಮಾಸದಲ್ಲಿ ಸೂರ್ಯನು ಮಕರ ರಾಶಿಯಲ್ಲಿದ್ದಾಗ
ಸೂರ್ಯೋದಯವಾದ ನಂತರ ನದಿಯಲ್ಲಿ ಸ್ನಾನ ಮಾಡಿ, ಸೂರ್ಯ ನಮಸ್ಕಾರ ಮಾಡಿ, ವಿಷ್ಣು ಆಲಯಕ್ಕೆ ಹೋಗಿ
ಶ್ರೀಮನ್ನಾರಾಯಣನನ್ನು ಪೂಜಿಸಬೇಕು. ಮಾಘಮಾಸದ ಒಂದು ತಿಂಗಳಕಾಲ ಈ ರೀತಿ ಅಚರಣೆ ಮಾಡಿದರೆ
ಸಕಲೈಶ್ವರ್ಯಗಳು, ಪುತ್ರಪೌತ್ರಾದಿಗಳ ಅಭಿವೃದ್ಧಿಯಾಗಿ ಜನ್ಮಾಂತರದಲ್ಲಿ ವೈಕುಂಠ ಪ್ರಾಪ್ತಿಯಾಗುತ್ತದೆ.
II ಸಂಪೂರ್ಣಮ್ II
No comments:
Post a Comment