ಓಂ
ಸರಳ ಸುಂದರಕಾಂಡ
ವಾಯುಸುತನ ಪರಾಕ್ರಮವನ್ನು ವಾಲ್ಮೀಕಿ ರಾಮಾಯಣದ
ಸುಂದರಕಾಂಡದಲ್ಲಿ ನಾವು ಪಠಿಸಿ, ಆತನ ಕೃಪಾಕಟಾಕ್ಷವನ್ನು ಪಡೆದು ಧನ್ಯರಾಗೋಣ.
ಶ್ರೀಮತ್ಸುಂದರ ಕಾಂಡವು ರಾಮಾಯಣದ ಬಹು ರಮ್ಯವಾದ
ಭಾಗವಾಗಿದೆ. ಇಲ್ಲಿ ಹನುಮಂತನ ಪರಾಕ್ರಮ, ಸೀತಾಮಾತೆಯ ಪಾತಿವ್ರತ್ಯ ಬುದ್ಧಿ, ಆಂಜನೇಯನ
ಅರ್ಥಗರ್ಭಿತ ಮಾತುಗಳನ್ನು ನಾವು ಕೇಳಿ, ಓದಿ ಆನಂದಿಸಬಹುದಾಗಿದೆ.
ವಾಲ್ಮೀಕಿ ರಾಮಾಯಣದ ಅತಿ ರಮ್ಯ ಭಾಗವಾದ ಸುಂದರ
ಕಾಂಡದಲ್ಲಿ ಮಹಾಕಾವ್ಯದ ಪ್ರಕೃತಿ ವರ್ಣನೆ, ಸಮಯೋಚಿತ ಮಧುರ ಹಿತವಾಣಿ, ರಾವಣನ ಲಂಕಾನಗರಿಯ
ವರ್ಣೆನೆಗಳಿವೆ. ಇದು ನವರಾತ್ರಿ ರಾಮನವಮಿ, ಶ್ರಾವಣ ಮಾಸಗಳಲ್ಲಿ ಪಾರಾಯಣ ಮಾಡಿ ಅದ್ಭುತ ಫಲ
ಪಡೆಯಬಹುದಾದ ಪವಿತ್ರ ಭಾಗವೂ ಆಗಿದೆ.
ಸರಳ ಸುಂದರಕಾಂಡ
ಆಕಾಶ ಮಾರ್ಗದಲ್ಲಿ ಆಂಜನೆಯನು ಶ್ರೀರಾಮನ ಪತ್ನಿ
ಸೀತಾಮಾತೆಯನ್ನು ಹುಡುಕಲೆಂದು ಸಾಗರವನ್ನು ದಾಟಲು ನಿರ್ಧರಿಸಿದನು. ಮಹಾ ಬಲಶಾಲಿಯಾದ ಧೀರ
ವಾಯುಪುತ್ರನು ಇಂದ್ರಾದಿ ದಿಕ್ಪಾಲರಿಗೆ ನಮಿಸಿ, ದಕ್ಷಿಣ ಸಾಗರದ ಕಡೆ ಪ್ರಯಾಣಿಸಿದನು.
ಸಾಗರ ಲಂಘನ
ಕಪಿವೀರರು ನೋಡುತ್ತದ್ದಂತೆ ವಜ್ರಕಾಯನಾದ ಮಾರುತಿಯು ತನ್ನ
ದೇಹವನ್ನು ಬೆಳೆಸಿದನು. ಮಹೇಂದ್ರ ಪರ್ವತವನ್ನು ಒಂದು ಬಾರಿ ಗುದ್ದಿದಾಗ ಅದು ಅಲುಗಾಡಿತು. ಪರ್ವತ
ಜಜ್ಜಿಹೋಗಿ ಕಲ್ಲುಬಂಡೆಗಳು ಚೊರಾದವು. ಅಲ್ಲಿದ್ದ ಪಕ್ಷಿಗಳು ವಿದ್ಯಾಧರರು ಮೃಗಗಳು ದೂರ ಓಡಿದರು.
ಶ್ರೀರಾಮನ ಸೇವೆಯನ್ನು ಮಾಡಲು ಹೊರಡ ಹನುಮಂತನು ತನ್ನ
ರೋಮಗಳನ್ನು ವದರಿ, ಮೇಘದಂತೆ ಗುಡುಗಿದನು. ಪರ್ವತದ ಮೇಲೆ ಕೈಗಳನ್ನು ದೃಢವಾಗಿ ಊರಿ, ಸೊಂಟವನ್ನು
ಕುಗ್ಗಿಸಿ, ಕಾಲುಗಳನ್ನು ಸ್ವಲ್ಪ ಬಾಗಿಸಿದನು. ದೃಷ್ಟಿಯನ್ನು ದೂರದವರೆಗೆ ಬೀರಿ ಕಿವಿಗಳನ್ನು
ಮುದುರಿದನು.
ಆಂಜನೆಯನ ಬಾಲವು ಘಟಸರ್ಪದಂತೆ ಗೋಚರಿಸಿತು. ಜನಕಸುತೆಯು
ಎಲ್ಲೇ ಇರಲಿ, ಹುಡುಕುವೆನೆಂದು ದೃಢಲಂಕಲ್ಪತಾಳಿದ ವಾಯುಸುತನು ಮೇಲೆ ನೆಗೆದನು.
ಪವನತನಯನ ವೇಗಕ್ಕೆ ಮರ, ಗಿಡ, ಪಕ್ಷಿಗಳು ಮುಚ್ಚಿಹೋದವು,
ಹೂವುಗಳಿಂದ ಮುಚ್ಚಿಹೋದ ಹನುಮಂತನು ಶೋಭಿಸಿದನು. ತನ್ನ ಎರಡೂ ಕೈಗಳನ್ನು ನೀಳವಾಗಿ ಚಾಚಿದ ಆತನ
ಕಂಗಳು ಉರಿವ ಅಗ್ನಿಯಂತೆ ಬೆಳಗಿದವು, ಮೇಲೆತ್ತಿದ ಬಾಲವು ಸರ್ಪದಂತೆ ಕಾಣಿಸಿತು.
ಆಂಜನೇಯನ ವೇಗದ ಹೊಡೆತಕ್ಕೆ ಸಿಲುಕಿದ ಸಾಗರವು
ಕಳಾಹೀನವಾಗಿ ಕಾಣಿಸಿತು, ಒಳಗಿನ ಜಲಚರ ಪ್ರಾಣಿಗಳು ಸ್ಪಷ್ಟವಾಗಿ ಗೋಚರಿಸಿದವು, ಆಕಾಶದಲ್ಲಿ
ಹಾರುವ ಪರ್ವತದಂತೆ ಹನುಮಂತನು ಕಾಣಿಸಿದನು. ಸಾಗರವು ದೋಣಿಯಂತೆ ಕಾಣಿಸಿತು.
ಆಗ ಸಮುದ್ರರಾಜನು ‘ನಾನು ಈ ಕಪಿಶ್ರೇಷ್ಠನಿಗೆ ರಾಮಕಾರ್ಯದಲ್ಲಿ ಸಹಾಯ
ಮಾಡದಿದ್ದರೆ ಲೋಕಾಪವಾದ ಬರುತ್ತದೆ. ಹಿಂದೆ ಶ್ರೀರಾಮನ ಪೂರ್ವಜನಾದ ಸಗರನು ನನಗೆ ಸಹಾಯ
ಮಾಡಿದ್ದನು’ ಎಂದು ಯೋಚಿಸಿದ್ದನು.
ವೈನಾಕಗಿರಿಯನ್ನು ಕುರಿತು “ನೀನು ಶುಭಕಾರ್ಯಕ್ಕೆ ಪ್ರೋತ್ಸಾಹ ಮಾಡಬೇಕಾಗಿದೆ,
ಹನುಮಂತನು ಈಗ ರಾಮಕಾರ್ಯಾರ್ಥವಾಗಿ ಲಂಕಾ ನಗರಿಗೆ ಹೊರಟಿದ್ದಾನೆ, ಆತನು ಕ್ಷಣಕಾಲ
ವಿಶ್ರಮಿಸಿಕೊಳ್ಳಲು ನೀನು ಮೇಲೆದ್ದು ಬಾ” ಎಂದು ಆಜ್ಞಾಪಿಸಿದನು. ಮೈನಾಕನು ಆಗ ಸಾಗರ ಜಲವನ್ನು ಭೇದಿಸಿಕೊಂಡು
ಮೇಲೆ ಬಂದನು, ಮೈನಾಕಗಿರಿಯ ಶಿಖರಗಳು ಹೊಳೆದವು.
ಹನುಮಂತನು ಇದ್ದಕ್ಕಿದ್ದಂತೆ ತನ್ನ ಮಾರ್ಗಕ್ಕೆ
ಅಡ್ಡವಾಗಿ ಬಂದ ಬೆಟ್ಟವನ್ನು ನೋಡಿ, ತನ್ನ ಎದೆಯಿಂದ ಅಪ್ಪಳಿಸಿದನು. ಮೈನಾಕನು “ಕಪಿ ವೀರನೇ ನೀನು, ಹೊರಟಿರುವ ಕಾರ್ಯದ ಬಗ್ಗೆ ನನಗೆ
ಗೊತ್ತಿದೆ. ಸ್ವಲ್ಪ ಕಾಲ ನನ್ನಲ್ಲಿ ವಿಶ್ರಮಿಸಿ ಹೋಗಬಾರದೇ? ಸಮುದ್ರರಾಜನೂ ಇದನ್ನೇ ಹೇಳಿದ್ದಾನೆ, ಕ್ಷಣಕಾಲ
ವಿಶ್ರಮಿಸಿ ಫಲಕಂದಗಳನ್ನು ಆಸ್ವಾದಿಸಿ, ನಾಳೆ ಮುಂದುವರೆಯಬಹುದು, ನೀನು ನನ್ನ ಅತಿಥಿಯಾಗಿರುವೆ,
ನೀನು ವಾಯುಸುತನು, ಪೂಜಾರ್ಹನೂ ಹೌದು, ಹಿಂದೆ ನಿನ್ನ ತಂದೆ ದೇವೇಂದ್ರನಿಂದ ನನ್ನನ್ನು ರಕ್ಷಿಸಿ
ರೆಕ್ಕೆಗಳನ್ನುಳಿಸಿದ್ದಾನೆ, ಈ ಅಲ್ಪ ಕೃತಜ್ಞತೆ ಬೇಡವೇ?” ಎಂದು ಪ್ರಾರ್ಥಿಸಿದನು.
ಆಂಜನೆಯನು “ಮೈನಾಕನೇ, ನನಗೆ ತಡವಾಗಿದೆ. ನಿನ್ನ ಮಾತಿನಿಂದ
ತುಷ್ಟನಾಗಿರುವೆ, ನಾನು ಎಲ್ಲೂ ನಿಲ್ಲದೆ ಹಾರುವೆನೆಂದು ಕಪಿಗಳಿಗೆ ವಚನ ನೀಡಿರುವೆ” ಎಂದನು. ಮೈನಾಕ, ಸಮುದ್ರರಿಂದ ಬಿಳ್ಕೊಂಡು ಆಂಜನೆಯನು
ಮುಂದುವರೆದನು. ಈ ದೃಶ್ಯವನ್ನು ನೋಡಿದ ಸಕಲ ದೇವತೆಗಳೂ ಪ್ರಶಂಸೆ ಮಾಡಿದರು, ಇಂದ್ರನಿಗೂ
ಪ್ರೀತಿಯಾಯಿತು.
ಆಗ ದೇವತೆಗಳು ನಾಗಮಾತೆಯಾದ ಸರಸೆಯನ್ನು ಕರೆದು ಹನುಮಂತನ
ಪರಾಕ್ರಮವನ್ನು ಪರೀಕ್ಷಿಸಲು ಹೇಳಿದರು, ಅವಳು ಭೀಕರ ರೂಪತಾಳಿ, ಹನುಮಂತನನ್ನು ಅಡ್ಡಗಟ್ಟಿ, “ನನ್ನ ಬಾಯನ್ನು ಪ್ರವೇಶಿಸು ಎಂದಳು. ಅಂಜನೇಯನು ಹೆದರದೆ,
ನಾನು ಶ್ರೀರಾಮನ ಕಾರ್ಯಾರ್ಥವಾಗಿ ರಾವಣನ ಸ್ಥಾನಕ್ಕೆ ಹೊರಟಿರುವೆ. ಸೀತೆಯ ವೃತ್ತಾಂತವನ್ನು
ರಾಮನಿಗೆ ತಿಳಿಸಿದ ಬಳಿಕ ನಿನಗೆ ಆರಾರವಾಗುವೆ” ಎನ್ನುವ.
“ಸಾಧ್ಯವಿಲ್ಲ, ಈಗಲೇ ಪ್ರವೇಶಿಸು, ನನಗೆ ಬ್ರಹ್ಮದೇವನ ವರವಿದೆ” ಎಂದು ಹೇಳಿದಳು.
ಹನುಮಂತನು ಸಿಟ್ಟಾಗಿ ಬಾಯ್ದೆರೆ ಎಂದನು. ಸುರಸೆಯು ತನ್ನ
ಬಾಯನ್ನು ಅಗಲವಾಗಿ ಹಿಗ್ಗಿಸಿದಳು, ಆಗ ಆಂಜನೆಯನು ತನ್ನ ಬೃಗತ್ ದೇಹವನ್ನು ಹೆಬ್ಬೆರಳಿನ ಗಾತ್ರ
ಮಾಡಿಕೊಂಡು ಬಾಯೊಳಕ್ಕೆ ಹೋಗಿ, ಹೋರಗೆ ಬಂದನು.
“ಬ್ರಹ್ಮದೇವನ ವರಕ್ಕೆ ಬೆಲೆ ನೀಡಿರುವೆ” ಎಂದು ಹೇಳಿದನು. ಸುರಸೆಯು ವೀರ ಹನುಮಂತನ ಪರಾಕ್ರಮದಿಂದ
ತುಷ್ಟಳಾಗಿ, “ನೀನ್ನ ಕಾರ್ಯ ಸಿದ್ಧಿಯಾಗಲಿ” ಎಂದು ಹರಸಿದಳು.
ದೇವತೆಗಳು ಆಂಜನೇಯನ ಸಾಹಸವನ್ನು ಪ್ರಶಂಸೆ ಮಾಡಿದರು.
ಆಕಾಶದಲ್ಲಿ ವಾಯುಸುತನು ಮುಂದೆ ಹಾರಿದನು. ಸಿಂಹಿಕೆ ಎಂಬ ರಾಕ್ಷಸಿ ಇದನ್ನು ನೋಡಿ ಒಳ್ಳೆಯ ಆಹಾರ
ದಕ್ಕಿತೆಂದುಕೊಂಡಳು. ಬ್ರಹ್ಮ ವರದಿಂದ ಅವಳು ತನ್ನ ನೆರಳನ್ನು ಚಾಚಿ ಆತನನ್ನು ಹಿಡಿದೆಳೆದಳು.
ಸುಗ್ರೀವನಿಂದ ಹನುಮಂತನಿಗೆ ಈ ವಿಚಾರ ತಿಳಿದಿತ್ತು. ತಕ್ಷಣ ತನ್ನ ದೇಹವನ್ನು ಹಿಗ್ಗಿಸಿ, ಚೂಪಾದ
ಉಗುರುಗಳಿಂದ ಅವಳನ್ನು ಸೀಳಿ, ಮುಂದೆ ಹಾರಿದನು, ಮತ್ತೆ ಮೊದಲ ಗಾತ್ರದ ರೂಪವನ್ನೇ ತಾಳಿದನು.
ಹನುಮಂತನು ಹೀಗೆ ನೂರು ಯೋಜನೆಗಳಷ್ಟು ದೂರ ಹಾರಿದ್ದನು.
ಆಗ ಆತನಿಗೆ ಮಲಯ ಪರ್ವತ ಗೋಚರಿಸಿತು, ಮತ್ತೆ ತನ್ನ ರೂಪವನ್ನು ಕಿರಿದುಗೊಳಿಸಿ, ಸಮುದ್ರದ
ಇನ್ನೊಂದು ತೀರವನ್ನು ಆಂಜನೇಯನು ತಲುಪಿದನು.
ಮಹಾಬಲಿಯು ಆಗ ತ್ರಿಕೂಟ ಪರ್ವತದ ಮೇಲಿದ್ದ ಲಂಕಾ
ನಗರವನ್ನು ನೋಡಿದನು. ಆ ಪರ್ವತವನ್ನು ಮುಟ್ಟಿದಾಗ, ಅಲ್ಲಿನ ಹೂಗಳು ಅವನ ಮೇಲೆ ಉದುರಿ,
ಸುಂದರವಾಗಿ ಕಂಗೊಳಿಸಿದನು, ಆತನಿಗೆ ಸ್ವಲ್ಪವೂ ದಣಿವಾಗಿರಲಿಲ್ಲ.
ಲಂಕಾ ಪ್ರವೇಶ
ಲಂಕಾನಗರಿಯ ಬಳಿಯ ಅರಣ್ಯ ಹಸಿರು ಹುಲ್ಲುಗಾವಲು,
ಸುಗಂಧಿತ ವೃಕ್ಷಗಳನ್ನು ಆಂಜನೇಯನು ನೋಡಿದನು. ಲಂಕೆಯನ್ನು ಸಮೀಪಿಸಿದಾಗ, ಸುತ್ತಲೂ ಕಂದಕಗಳನ್ನು
ನೋಡಿದನು, ಕಾವಲಿಗಾಗಿ ಅನೇಕ ರಾಕ್ಷಸರು ಸುತ್ತಲೂ ಲಂಚರಿಸುತ್ತಿದ್ದರು. ಕೋಟೆ, ರಾಜಬೀದಿ,
ಗೋಪುರ, ಧ್ವಜಸ್ತಂಭಗಳು ಅವನಿಗೆ ಕಾಣಿಸಿದವು.
ಲಂಕಾನಗರಿಯು ಅಮರಾವತಿಯಂತೆ ಶೋಭಿಸುತ್ತಿತ್ತು. ಬಂಗಾರದ
ದೊಡ್ಡ ಮಹಾದ್ವಾರಗಳು ಆ ನಗರಿಗಿದ್ದವು, ಪರ್ವತದ ಮೇಲಿದ್ದ ಆ ನಗರ ಹಿಂದೆ ಕುಬೇರನಿಗೆ ಸೇರಿತ್ತು.
ನಂತರ ಆತನ ಸೋದರ ರಾವಣನು ಬಲಾತ್ಕಾರದಿಂದ ಕಸಿದುಕೊಂಡಿದ್ದನು. “ಈ ಲಂಕೆ ದುರ್ಗಮವಾಗಿದೆ ಇದನ್ನು ಗೆಲ್ಲಲು ಸಾಧ್ಯವೆ?” ಎಂದು ಕ್ಷಣಕಾಲ ಆತನು ಚಿಂತಿಸಿದನು. ಮೊದಲು ಸೀತೆಯನ್ನು ಹುಡುಕಿ, ನಂತರ ಯೋಚನೆ ಮಾಡೋಣ
ಎಂದುಕೊಂಡನು.
ರಾಕ್ಷಸರಿಗೆ ಕಾಣದಂತೆ ಮೊದಲು ಸೀತೆಯನ್ನು
ಹುಡುಕಬೇಕೆಂದು ಸೂಕ್ಷ್ಮ ರೂಪ ಧರಿಸಿದನು.
“ನಾನು ದೂತ, ಆದ್ದರಿಂದ ಬಂದ ಕೆಲಸವನ್ನು
ಅಚ್ಚುಕಟ್ಟಾಗಿ ನಿರ್ವಹಿಸಬೇಕು” ಎಂದುಕೊಂಡು ಸಣ್ಣ ರೂಪದಿಂದ
ಸೂರ್ಯಾಸ್ತವಾಗುತ್ತಿದ್ದಂತೆ ಲಂಕೆಯನ್ನು ಪ್ರವೇಶಿಸಿದನು. ಆಗ ಚಂದ್ರೋದಯವಾಗಿ, ಹನುಮಂತನಿಗೆ
ತುಂಬಾ ಆನಂದವಾಯಿತು.
ಲಂಕಾನಗರಿಯತ್ತ ಹನುಮಂತನು ಹೊರಟನು. ಅಲ್ಲಿ ರಾವಣನ
ದೂತರು ಎಲ್ಲಾ ಕಡೆ ಶಸ್ತ್ರಪಾಣಿಗಳಾಗುದಾಗಿ ಸಂಚಾರ ಮಾಡುತ್ತದ್ದರು. ಹನುಮಂತನ ಆಗಮನ ಯಾರಿಗೂ
ತಿಳಿಯಲಿಲ್ಲ. ಅಲ್ಲಿನ ಸುಂದರ ಸುವರ್ಣ ಸೌಧಗಳು, ಉಪ್ಪರಿಗೆಗಳು, ಪ್ರಾಸಾದಗಳು ಹನುಮಂತನಿಗೆ
ಗೋಚರಿಸಿದವು.
ಚಿನ್ನದ ಬಾಗಿಲುಗಳು, ವೈಢೂರ್ಯದ ಮೆಟ್ಟಿಲುಗಳು, ರತ್ನದ
ಜಗುಲಿಗಳು ಅಲ್ಲಿ ಪ್ರಕಾಶಿಸಿದವು. ಹನುಮಂತನಿಗೆ ಲಂಕಾನಗರಿಯನ್ನು ನೋಡಿ ಕ್ಷಣಕಾಲ
ಆಶ್ಚರ್ಯವಾಯಿತು.
ಕಪಿಗಳಿಗೆ ಈ ನಗರಿಯನ್ನು ಮುತ್ತಿಗೆ ಹಾಕಲು ಸಾಧ್ಯವೆ? ಎಂದೆನಿಸಿತು. ರಾಮಲಕ್ಷ್ಮಣರ ಶೌರ್ಯಕ್ಕೆ ಇದೇನೂ ಆಸಾಧ್ಯದ ಕೆಲಸವಲ್ಲ
ಎಂದೂ ಆಂಜನೇಯನು ಯೋಚಿಸಿದನು.
ಲಂಕಿಣಿಯು ಆಂಜನೆಯನನ್ನು ತಡೆಗಟ್ಟಿದಳು. ಅವಳು ತನ್ನ
ವಿಕಾರ ರೂಪದಿಂದ ಆಗ ಕಾಣಿಸಿಕೊಂಡು. “ಕಪಿ, ನೀನಾರು? ನಿನಗಿಲ್ಲೇನು ಕೆಲಸವಿದೆ? ನೀನು ನಗರದೊಳಗೆ ಹೋಗಲು
ಸಾಧ್ಯವಿಲ್ಲ” ಎಂದು ಗರ್ಜಿಸಿದಳು.
ಆಂಜನೇಯನು ಸ್ವಲ್ಪವೂ ಹೆದರದೆ, “ನೀನು ಯಾರೆಂದು ತಿಳಿಸು. ನನ್ನನ್ನೇಕೆ ತಡೆಯುವೆ?” ಎಂದು ಕೇಳಿದಾಗ, ತಾನು ರಾವಣನ ಆಜ್ಞೆಯಂತೆ ಲಂಕೆಯನ್ನು ರಕ್ಷಿಸುತ್ತಿರುವೆನು ಎಂದಳು.
ಲಂಕಾನಗರಿಯನ್ನು ನೋಡಲು ತನಗೆ ಆಸೆಯಾಗಿರುವ ಹನುಮಂತನು ಉತ್ತರಿಸಿದನು.
ಹನುಮಂತನು, ಲಂಕೆಯನ್ನು ತಾನು ಒಂದು ಬಾರಿ ನೋಡಿ
ವಾಪಸಾಗುವುದಾಗಿ ತಿಳಿಸಿದನು. ಲಂಕಿಣಿಯು ಇದರಿಂದ ಕೊಪಿತಳಾಗಿ ಹನುಮಂತನನ್ನು ಬಲವಾಗಿ
ಘಾತಿಸಿದಳು.
ಆಂಜನೇಯನೂ ಅವಳನ್ನು ತನ್ನ ಎಡಕೈ ಮುಷ್ಠಿಯಿಂದ
ಗುದ್ದಿದನು. ಆ ರಾಕ್ಷಸಿಯು ನೆಲದ ಮೇಲೆ ಕುಸಿದುಬಿದ್ದಳು. ತನ್ನನ್ನು ಕಾಪಾಡಬೇಕೆಂದು ಅವಳು
ಆಂಜನೆಯನನ್ನು ಬೇಡಿಕೊಂಡಳು. ಬ್ರಹ್ಮದೇವನ ವರದಂತೆ ಯಾವಾಗ ಕಪಿಯೊಂದು ತನ್ನನ್ನು ಸೋಲಿಸುವುದೋ
ಅದೇ ರಾಕ್ಷಸರ ಕೊನೆಯೆಂದು ಹೇಳಿದ ಲಂಕಿಣಿ ಲಂಕೆಯೊಳಗೆ ಸಂಚರಿಸಿ ಸೀತೆಯನ್ನು ಹುಡುಕುವಂತೆ
ತಿಳಿಸಿ, ಹಾರೈಸಿದಳು.
ಲಂಕಾ ದೇವತೆಯನ್ನು ಜಯಿಸಿದ ಹನುಂತನು, ತನ್ನ ಎಡಗಾಲನ್ನು
ಮೊದಲು ಲಂಕಾನಗರಿಯೊಳಗಿಟ್ಟನು. ರಾಜಬೀದಿಯನ್ನು ತಲುಪಿದ ಅಂಜನಾ ಪುತ್ರನು ನಗರದ ಸೌಂದರ್ಯವನ್ನು
ನೋಡಿ ಆನಂದಿಸಿದನು. ಇಂಪಾದ ಸಂಗೀತ ಒಂದು ಕಡೆ ಕೇಳಿಸಿದರೆ, ವೇದಘೋಷ, ಹಾಡುವುದು, ರಾವಣನ
ಪ್ರಶಂಸಾ ಗೀತೆ ಮತ್ತೊಂದು ಕಡೆ ಕೇಳಬರುತ್ತಿತ್ತು.
ರಾಕ್ಷಸರಲ್ಲಿ ಯಜ್ಞ ಯಾಗಶೀಲರೂ, ದೀಕ್ಷಾಬದ್ದರೂ ಸೇರಿದ್ದರು.
ಕೆಲವರು ಆಯುಧಪಾಣಿಗಳಾಗಿ ಪಹರೆಯಲ್ಲಿದ್ದರು. ಕುರೂಪಿಗಳಾದ ಒಕ್ಕಣ್ಣಿನ, ಒಂದೇ ಕಿವಿಯ, ಕುಳ್ಳರೂ,
ಡೊಳ್ಳು ಹೊಟ್ಟೆಯ ರಾಕ್ಷಸರೂ ಅಲ್ಲಿ ಕಾಣಿಸಿದರು.
ಆಂಜನೇಯನು ರಾವಣನ ಅಂತಃಪುರದ ಬಳಿಗೆ ಬಂದನು. ಅಲ್ಲಿ
ಸುತ್ತಲೂ ಹಲವಾರು ಶಸ್ತ್ರಧಾರಿ ಕಾವಲುಗಾರರಿದ್ದರು. ಮಹಾದ್ವಾರ ಸ್ವರ್ಗಮಯವಾಗಿತ್ತು. ಬಿಳಿ
ಆನೆಗಳು ಅಲ್ಲಿದ್ದವು ಚಿನ್ನದ ಪ್ರಾಕಾರ, ಸುಗಂಧಪೂರಿತವಾದ ಅಂತಃಪುರದೊಳಗೆ ಹನುಮಂತನು
ಪ್ರವೇಶಿಸಿದನು.
ಸೀತಾನ್ವೇಷಣೆ
ಅಷ್ಟು ಹೊತ್ತಿಗೆ ನಡುರಾತ್ರಿಯಾಗಿತ್ತು. ಚಂದ್ರನು
ಸುಂದರವಾಗಿ ಶೋಭಿಸುತ್ತಿದ್ದನು. ರಾಕ್ಷಸರು ತಮ್ಮ ಸ್ತ್ರೀಯರೊಡನೆ ಭೋಗವಿಲಾಸದಲ್ಲಿದ್ದರು.
ಕೆಲವರು ಜಗಳ ವಾಡುತ್ತಿದ್ದರು, ಕೆಲವರು ಗಾಢನಿದ್ರೆಯಲ್ಲಿದ್ದರು, ಕೆಲವು ಸುಂದರ ಸ್ತ್ರೀಯರೂ
ಅಲ್ಲಿದ್ದರು.
ಸೀತೆಯನ್ನು ಅವರ ಮಧ್ಯೆ ಗುರುತಿಸಲು ಯತ್ತಿಸಿ, ಸೀತೆ
ಇಲ್ಲಿ ಸುಖದಿಂದ ಹೇಗೆ ತಾನೆ ಇರಲು ಸಾಧ್ಯ? ಆಕೆ ಕ್ಷೀಣಿಸಿದ ಚಂದ್ರನಂತೆ
ಅಸಹಾಯಕಳಾಗಿರುವಳು. ಎಲ್ಲೂ ಆಕೆಯ ದರ್ಶನವಾಗದೆ ಹನುಮಂತನು ಚಿಂತಾಮಗ್ನನಾದನು.
ಖನ್ನವಾದ ವಾಯುಸುತನು ಲಂಕೆಯ ಉಳಿದ ಭಾಗವನ್ನು ಹುಡುಕಲು
ಹೊರಟನು. ರಾಕ್ಷಸರ ಅರಮನೆಗಳನ್ನು ಸೂಕ್ಷ್ಮವಾಗಿ ಗಮನಿಸಿದನು. ಎಲ್ಲಿ ನೋಡಿದರೂ ಪರಿಮಳಭರಿತ
ಸುಗಂಥವಿತ್ತು. ಅರಮನೆಗಳು ಉಜ್ವಲವಾಗಿ ತೋರಿದವು.
ರಾವಣನ ವಿಶಾಲ ಭವನದಲ್ಲಿ ಸೀತೆ ಕಾಣದಿರಲು ವಿಭೀಷಣ,
ಕುಂಭಕರ್ಣ, ಮಹೋದರ, ವಿರೂಪಾಕ್ಷ, ವಿದ್ಯುಜ್ಜಹ್ವ, ವಿದ್ಯುನ್ಮಾಲಿಗಳ ಮನೆಗಳನ್ನು ಹನುಮಂತನು
ಶೋಧಿಸಿದನು. ಅಲ್ಲಿ ರಾಕ್ಷಸರ ಐಶ್ವರ್ಯ, ವೈಭವಗಳನ್ನು ನೋಡಿದನು. ರಾಕ್ಷಸರ ಬಳಿ ಸಕಲ ಸಂಪತ್ತೂ
ಇದ್ದವು. ಆನೆ, ಕುದರೆ ಸೈನ್ಯವಿತ್ತು. ರಾವಣನ ಅಂತಃಪುರದೊಳಗೆ ಹನುಮಂತನು ಪ್ರವೇಶಿಸಿದನು.
ಆವರಣದಲ್ಲಿ ಪುಷ್ಪಕ ವಿಮಾನ ನಿಂತಿತ್ತು. ಸ್ತ್ರೀಯರಿಂದ
ಸುತ್ತಲೂ ರಮಣೀಯವಾಗಿದ್ದ ಆ ಸ್ಥಳದಲ್ಲಿ ಹಲವು ಲತಾಮಂಟಪ, ಉದ್ಯಾನಗಳನ್ನು ಹನುಮಂತನು ನೋಡಿದನು.
ಕೃತಕ ಶೈಲಗಳು, ಗಿರಿ-ಶಿಖರಗಳು, ಬಳ್ಳಿಗಳು ಅಲ್ಲಿದ್ದವು. ರತ್ನಖಚಿತವಾದ ಹಕ್ಕಿ, ಜಿಂಕೆ,
ಹಾವುಗಳ ಪ್ರಕೃತಿಗಳು ಅಲ್ಲಿದ್ದವು, ಎಲ್ಲಿಯೂ ಸೀತೆಯ ಸುಳಿವೇ ಕಾಣದೆ ಹನುಮಂತನು ಚಿಂತಿತನಾದನು.
ಅಂಜನೇಯನು ಪುಷ್ಪಕ ವಿಮಾನವನ್ನು ಸಮೀಪದಿಂದ ನೋಡಿದನು.
ರಾವಣನು ತಪಸ್ಸಿನ ಬಲದಿಂದ ಗಳಿಸಿದ ಆ ವಿಮಾನವು ಚಂದ್ರನಂತೆ ಪ್ರಕಾಶಮಾನವಾಗಿ ಶೋಭಿಸುತ್ತಿತ್ತು.
ಹೀಗೆ ನೋಡಿ ಆನಂದಿಸಿದ ಆಂಜನೇಯನು ಅರಮನೆಯೊಳಕ್ಕೆ ಹೊಕ್ಕನು.
ಆ ಭವನದ ಸುತ್ತಲೂ ರಾಕ್ಷಸರ ಕಾವಲಿತ್ತು. ರಾವಣನು ತನ್ನ
ಶಯನ ಮಂದಿರವನ್ನು ವಿಶೇಷವಾಗಿ ನಿರ್ಮಾಣ ಮಾಡಿಸಿದ್ದನು. ಅದೇ ಪುಷ್ಪಕ ವಿಮಾನವಾಗಿತ್ತು. ಕುಬೇರನು
ಬ್ರಹ್ಮದೇವನನ್ನು ತಪ್ಪಸ್ಸಿನಿಂದ ಮೆಚ್ಚಿಸಿ ಪಡೆದ ಈ ವಿಮಾನವನ್ನು ರಾವಣನು ವಶಪಡಿಸಿಕೊಂಡಿದ್ದನು.
ಹನುಮಂತನು ಆ ವಿಮಾನವನ್ನೇರಿದನು. ಚಿನ್ನದ ಕಿರೀಟಗಳಿಂದ
ಅದು ಶೋಭಿತವಾಗಿತ್ತು. ಸ್ಫಟಿಕದ ನೆಲಗಟ್ಟು, ಆನೆಯ ದಂತ ಗೋಡೆಗಳು, ಮಣಿರತ್ನಗಳ ಕಂಬಗಳು, ದೊಡ್ಡ
ರತ್ನಗಂಬಳಿ ಅಲ್ಲಿದ್ದವು. ಇಡೀ ಶಯನಮಂದಿರವೇ ಸುಗಂಧಮಯವಾಗಿ ಶೋಭಿಸುತ್ತಿತ್ತು.
ರಾವಣನು ತನ್ನ ಅಂತಃಪುರದ ಒಳಗೆ ಮಲಗಿದ್ದನು. ಅಲ್ಲಿ ನೂರಾರು
ಸ್ತ್ರೀಯರು ಅಸ್ತವ್ಯಸ್ತವಾಗಿ ಮಲಗಿದ್ದರು. ರತ್ನಖಚಿತವಾದ ಶಯನ ಮಂಟಪದಲ್ಲಿ ಮೇಘದಂತೆ ಕಪ್ಪು
ವರ್ಣ ದೇಹಕಾಂತಿಯ ರಾವಣನು ವಿಚಿತ್ರವಾದ, ಪ್ರಕಾಶಮಾನವಾದ ಆಭರಣಗಳನ್ನು ತೊಟ್ಟು, ರಕ್ತಚಂದನ
ಬಳಿದುಕೊಂಡು ಮಲಗಿದ್ದನು. ಮಹಾ ಸರ್ಪದಂತೆ ಅವನು ಬುಸುಗುಡುತ್ತ ಉಸಿರಾಡುತ್ತಿದ್ದನು.
ಹಾಸಿಗೆಯ ಮೇಲೆ ಮದ್ದಾನೆಯಂತೆ ಮಲಗಿದ್ದ ರಾವಣನನ್ನು
ಹನುಮಂತನು ನೋಡಿದನು. ಅವನ ತೋಳುಗಳು ಇಂದ್ರಧ್ವಜಗಳಂತೆ ಶೋಭಿಸುತ್ತಿದ್ದವು. ಆ ತೋಳುಗಳಲ್ಲಿ
ಐರಾವತದ ದಂತಗಳಿದಾದ ಗಾಯ, ವಿಷ್ಟು ಚಕ್ರದಿಂದಾದ ಕಲೆಗಳು ಕಂಡವು.
ರಾವಣನ ಬಳಿಯಲ್ಲಿ ಅವನ ಪತ್ನಿಯರು ಮಲಗಿದ್ದರು.
ಮಂಡೋದರಿಯನ್ನೇ ಕ್ಷಣಕಾಲ ಸೀತೆಯೆಂದು ಭ್ರಮಿಸಿದ ಆಂಜನೇಯನು ಆಕೆ ಎಂದು ತನ್ನ ಆತುರಕ್ಕೆ ಮರುಗಿದನು.
ಮುತ್ತಿನ ಆಭರಣಗಳನ್ನು ಧರಿಸಿದ ಪರಮ ಸುಂದರಿಯಾದ ಮಂಡೋದರಿಯೂ ಚಿನ್ನದ ವರ್ಣದ ದೇಹಕಾಂತಿಯವಳಾಗಿ
ಶೋಭಿಸಿದ್ದಳು.
ಪಾನ ಭೂಮಿಯಲ್ಲಿ ಹನುಮಂತನು ಒಮ್ಮೆ ತಿರುಗಾಡಿದನು. ಎಲ್ಲ
ಸ್ತ್ರೀಯರನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಕುತೂಹಲದಿಂದ ನೋಡಿದನು. ಇವರಲ್ಲಿ ಸೀತೆ ಯಾರೂ ಅಲ್ಲ
ಎಂದು ತಿಳಿದು ಮತ್ತೆ ಮಂಕಾದನು. “ಸೀತೆಯನ್ನು ಸ್ತ್ರೀಯರ ಮಧ್ಯದಲ್ಲೇ
ಹುಡುಕಬೇಕು, ಇನ್ನೆಲ್ಲಿಯೂ ಸಾಧ್ಯವಿಲ್ಲ, ನನ್ನ ಮನಸ್ಸಿನಲ್ಲಿ ಯಾವ ವಿಕಾರವೂ ಆಗಲಿಲ್ಲ. ಆದರೆ
ಸೀತೆ ಕಾಣಲಿಲ್ಲ” ಎಂದು ಆಂಜನೆಯನು ಚಿಂತಿಸಿದನು.
ವಾಯುಪುತ್ರನು ಭೂಸ್ಪರ್ಶವೇ ಇಲ್ಲದಂತೆ ನಿಂತ ಪುಷ್ಪಕ
ವಿಮಾನವನ್ನು ನೋಡಿ ಮತ್ತೆ ಅಚ್ಚರಿಗೊಂಡನು. ಸೀತೆಯೊಬ್ಬಳನ್ನು ಬಿಟ್ಟು ಹಲವಾರ ಸುಂದರಿಯರು
ಅಲ್ಲಿದ್ದರು. ರಾಮನ ಬಳಿ ಸೀತೆ ಇದ್ದಿದ್ದರೆ, ಆಕೆಗೆ ಇಂತಹ ತೊಂದರೆ ಬರುತ್ತಿರಲ್ಲಿಲ್ಲ ಎಂದು
ಆಂಜನೇಯನು ವಿಷಾದಗೊಂಡನು.
ಹನುಂತನ ಆತಂಕ
ರಾಕ್ಷಸರಾಜನಾದ ರಾವಣನನ್ನು ನೋಡಿ ಪರ್ವತದ ನೆನಪಾಗಿ,
ಸುತ್ತೆಲ್ಲಾಹುಡುಕಿ, ಎಲ್ಲೂ ಸೀತೆಯನ್ನು ಕಾಣದೆ, ಮತ್ತೆ ರಾಕ್ಷಸರ ಪಾನಭೂಮಿಯ ಒಳಹೊಕ್ಕು
ಹೊರಬಂದನು, ಅಂತಃಪುರದಲ್ಲಿ ದೇವ, ಗಂಧರ್ವ , ನಾಗಕನ್ನೆಯರನ್ನೂ ನೋಡಿದನು. ಎಷ್ಟು ಸುತ್ತಿದರೂ,
ಸೀತೆಯನ್ನು ಕಾಣದೆ ಆಕೆ ಮರಣಿಸಿರಬಹುದೆ? ಎಂದು ಹನುಮಂತನಿಗೆ ಆತಂಕವಾಯಿತು. ಈ
ರಾಕ್ಷಸರ ಘೋರ ರೂಪ, ಕೃತ್ಯಗಳನ್ನು ನೋಡಿ, ಹೆದರಿ ಆಕೆ ಜೀವ ತೊರೆದಿರಬಹುದೆ ಸೀತೆಯ
ವಾರ್ತೆಯಿಲ್ಲದೆ ಮತ್ತೆ ನಾನು ಸುಗ್ರೀವನ ಬಳಿಗೆ ಹೇಗೆ ಹೋಗಲಿ? ಅವನ
ದಂಡನೆ, ಶಿಕ್ಷೆ, ಕಪಿಗಳೆದುರಿಗೆ ಅಪಮಾನಗಳನ್ನು ಹೇಗೆ ಸಹಿಸಲಿ?.
ಇಲ್ಲಿಗೆ ಬಂದುದು ವ್ಯರ್ಥವಾಯಿತಲ್ಲ? ಹೀಗೆ ನಾನಾ ಬಗೆಯಾದ ಆಲೋಚನೆಗಳು ಆಂಜನೇಯನಿಗೆ ಬಂದವು, ಕೊಳ, ಮಂಟಪ,
ಮನೆ, ಜಗುಲಿ, ವೇದಿಕೆ ಎಲ್ಲಿ ನೋಡಿದರೂ ಸೀತೆ ಕಾಣಲಿಲ್ಲ.
ಹನುಮಂತನು ವೇಗವಾಗಿ ಪ್ರಾಕಾರದ ಮೇಲೆ ಹತ್ತಿನಿಂತನು.
ಸೀತೆ ರಾವಣನನ್ನು ವರಿಸಲೂ ಸಾಧ್ಯವಿಲ್ಲ, ಆಕೆ ಇಲ್ಲಿಯೇ ಇರಬೇಕು, ಸಂಪಾತಿಯ ಮಾತು ಸುಳ್ಳಾಗಲು
ಸಾಧ್ಯವಿಲ್ಲ, ದಾರಿಯಲ್ಲಿ ಸೀತೆ ರಾವಣನಿಂದ ಜಾರಿ ಬಿದ್ದಿರಬಹುದೆ ಸತ್ತೂ ಹೋಗಿರಬಹುದೆ ರಾಮ ಲಕ್ಷ್ಮಣರನ್ನು ಸ್ಮರಿಸುತ್ತ ಜೀವ
ತೊರೆದಿರಬಹುದೆ
ಸೀತೆ ಆಕಸ್ಮಾತಾಗಿ ಮೃತಳಾದರೆ, ಶ್ರೀರಾಮ ಉಳಿವನೆ? ಸುಗ್ರೀವನು ಸಾಯದಿರುವನೆ? ಕಪಿಗಳು ಉಳಿವರೆ? ಸೀತೆಯ ಭೇಟಿ ಆಗದಿದ್ದರೆ ಇಲ್ಲೇ ಇರುವುದು ಲೇಸು, ಇಲ್ಲದಿದ್ದರೆ
ಅನಾಹುತಗಳನ್ನೆದುರಿಸಬೇಕಾಗುತ್ತದೆ. ಅಗ್ನಿ ಪ್ರವೇಶವನ್ನಾದರೂ ಮಾಡಿಬಿಡುವೆ.
ಹೇ ದೇವತೆಗಳಿರಾ! ನನಗೆ ಸಹಾಯ
ಮಾಡಿ, ಋಷಿಗಳೇ, ನಿಮ್ಮ ತಪೋಬಲದಿಂದ ಸೀತೆಯ ದರ್ಶನ ನನಗೆ ಬೇಗನೆ ಆಗಲಿ. ಇಂದ್ರಾದಿ ದಿಕ್ಪಾಲರೆ,
ಕಾರ್ಯಸಿದ್ಧಿಯನ್ನು ಅನುಗ್ರಹಿಸಿರಿ.
ಹೀಗೆ ಹನುಮಂತನು ದೇವತೆಗಳನ್ನು ಪ್ರಾರ್ಥನೆ ಮಾಡಿದನು.
ತನ್ನ ಧೈರ್ಯವನ್ನು ಒಗ್ಗೂಡಿಸಿ, ರಾವಣನ ಅಶೋಕವನದೆಡೆಗೆ ಸಾಗಿದನು.
ಅಶೋಕವನ ದರ್ಶನ
ಅಶೋಕವನದ ಪ್ರಾಕಾರಕ್ಕೆ ನೆಗೆದ ಆಂಜನೆಯನಿಗೆ ವಸಂತ
ಋತುವಿನ ಸೊಬಗು ಗೋಚರಿಸಿತು. ಸಂಪಿಗೆ, ಮಾವು, ನಾಗಕೇಸರ, ಅಶೋಕ ವೃಕ್ಷಗಳು ಹೂ ಬಿಟ್ಟಿದ್ದವು.
ಅವನ್ನು ನೋಡುತ್ತ ಆತನು ಮಾವಿನ ತೋಪನ್ನು ಹೊಕ್ಕನು. ವನದಲ್ಲಿ ಧುಮಿಕಿದ ಹನುಮಂತನಿಗೆ ಹೂಮಳೆಯಾಗಿ
ವಸಂತನಂತೆ ಶೋಭಿಸಿನು.
ಅವನ ನಡುವೆ ಶಿಂಶಪಾ ವೃಕ್ಷದ ಸುತ್ತಲೂ ಸುವರ್ಣ ವೇದಿಕೆ
ಇದ್ದಿತು. ಗಾಳಿ ಬೀಸಲು ಇಂಪಾದ ನಾದ ಬರುತ್ತಿತ್ತು. ಆ ಮನೋಹರ ವೃಕ್ಷವನ್ನೇರಿ ಹನುಮಂತನು
ಕುಳಿತನು. ಇಲ್ಲಿ ಮನಸ್ಸಿಗೆ ನೆಮ್ಮದಿ ಇರುವಂತಿದೆ, ಆದ್ದರಿಂದ ಸೀತಾಮಾತೆ ಇಲ್ಲಿ ಇದ್ದರೆ
ಇರಬಹುದು ಎಂದು ಮರವನ್ನು ಹತ್ತಿ ಕುಳಿತು ಸುತ್ತಲೂ ಗಮನಿಸಿದನು. ಅಲ್ಲಿ ವರ್ತುಲಾಕಾರದ ಭವನವೊಂದು
ಕಂಡನು.
ಸೀತಾ ದರ್ಶನ
ಸಾವಿರಾರು ಕಂಬಗಳ ಆ ಭವನದ ನಡುವೆ ಮಲಿನ ವಸ್ತ್ರಭರಿಸಿದ
ಸ್ತ್ರೀಯೊಬ್ಬಳು ರಾಕ್ಷಸಿಯರಿಂದ ಸುತ್ತವರೆದು ಕುಳಿತಿದ್ದುದನ್ನು ಆಂಜನೆಯನು ನೋಡಿದನು. ಆಕೆ
ಅಗ್ನಿಜ್ವಾಲೆಯಂತೆ, ದೇಹಕಾತಿಯಿಂದ ಕಂಗೊಳಿಸುತ್ತಿದ್ದಳು. ನಿರಾಭರಣ ಸುಂದರಿಯಾದ ಆಕೆ
ಕೆಸರಿನಲ್ಲಿ ಕಮಲದ ಬಳ್ಳಿಯಂತೆ, ಅಂಗಾರಕ ಗ್ರಹದಿಂದ ಪೀಡಿತವಾದ ರೋಹಿಣಿನಕ್ಷತ್ರದಂತೆ
ಮಂಕಾಗಿದ್ದಳು, ದುಃಖದಿಂದ ಕಣ್ಣೀರ್ಗರೆಯುತ್ತ ಕೃತಳಾಗಿ, ಆಲೋಚನಾ ಮಗ್ನಳಂತೆ ಆಕೆ
ಕಾಣಿಸುತ್ತಿದ್ದಳು. ಅವಳ ಸುತ್ತಲೂ ಘೋರಾಕೃತಿಯ ರಾಕ್ಷಸ ಸ್ತ್ರೀಯರೇ ತುಂಬಿದ್ದರು. ಬೇಟೆನಾಯಿಗಳ
ನಡುವೆ ಸಿಕ್ಕಿಬಿದ್ದಜಿಂಕೆಯಂತೆ ಆಕೆ ತೋರುತ್ತಿದ್ದಳು.
ಆಕೆಯ ದೇಹಕಾಂತಿ, ಕಪ್ಪಾದ ನೀಳಜಡೆ ರೂಪವನ್ನು ನೋಡಿ
ಆಕೆಯು ಸೀತೆಯೇ ಇರಬೇಕೆಂದು ಹನುಮಂತನು ತರ್ಕಿಸಿದನು. ದೂರದಿಂದ ರಾವಣನಿಂದ ಅಪಹರಿಸಲ್ಪಟ್ಟ
ಈಕೆಯನ್ನು ನಾನು ನೋಡಿರುವಂತಿದೆ ಎಂದಕೊಂಡನು.
ಮರದ ಮರೆಯಿಂದ ಆಕೆಯನ್ನು ಗಮನಿಸಿದ ಹನುಮಂತನಿಗೆ ಆಕೆಯ
ಸುಂದರವಾದ ರೂಪ ಗೋಚರಿಸಿತು. ಸೀತೆ ಯಾವ ಆಭರಣಗಳನ್ನು ಧರಿಸಿದ್ದಳೆಂದು ರಾಮನು ಹೇಳಿದ್ದನೋ,
ಅದನ್ನು ಹನುಮಂತನು ಲಕ್ಷಿಸಿ ನೋಡಿದನು.
ಕರ್ಣಕುಂಡಲಗಳು, ಹೂವಿನ ಆಕಾರದ ಕರ್ಣಾಭರಣಗಳು, ಮಾಸಿದ
ರತ್ನ, ಹವಳದ ಕೈಬಳೆಗಳು, ದೂಸಿದ ಸೀರೆ ಕಾಣಿಸಿದವು, ಋಷ್ಯಲೋಕ ಪರ್ವತದಲ್ಲಿ ಬಿದ್ದ ವಸ್ತ್ರದ
ಗಂಟನ್ನು ಹೋಲುವ ವಸ್ತ್ರವನ್ನು ಈಕೆ ಧರಿಸಿದ್ದಳು. ಈಕೆಯನ್ನು ಸೀತೆಯೆಂದು ಹನುಮಂತನಿಗನಿಸಿತು.
ಸೀತೆಯ ದರ್ಶನದಿಂದಲೇ ಹನುಮಂತನಿಗೆ ಅಮಿತಾನಂದವಾಯಿತು.
ಶ್ರೀರಾಮನನ್ನು ಧ್ಯಾನಿಸಿ, ಕೊಂಡಾಡಿದನು. ಲೋಕಾಭಿರಾಮನೂ, ಶೂರನೂ ಆದ ರಾಮನ ಪತ್ನಿ ಇಂತಹ ದುರ್ದೆರೆಗೆ
ಈಡಾಗಿರುವಳಲ್ಲಾ ಎಂದು ದುಃಖಿಸಿದನು.
ಸೀತೆಗೆ ರಾಮನೇ ತಕ್ಕ ಪತಿ, ರಾಮನಿಗೆ ಸೀತೆಯೇ ತಕ್ಕ
ಪತ್ನಿ, ಎಂತಹ ಪರಿಸ್ಥತಿಯಲ್ಲೂ ಕ್ಷೋಭೆಗೊಳ್ಳದ ಆಕೆ ಗಂಗಾ ನದಿಯಂತೆ ಪವಿತ್ರಳಾಗಿದ್ದಾಳೆ,
ಸ್ವಭಾವ, ಕುಲ, ಗುಣ, ಶೀಲಗಳಲ್ಲಿ ಈಕೆ ಶ್ರೀರಾಮನಿಗೆ ತಕ್ಕ ಪತ್ನಿ ಎಂದು ಮತ್ತೆ ಯೋಚಿಸಿದನು.
ಈಕೆಗಾಗಿ ರಾಮನು ಕಬಂಧ, ವೀರಾಧರನ್ನು ಕೊಂದನು. ಜನಸ್ಥಾನದಲ್ಲಿ ಹದಿನಾಲ್ಕು ಸಾವಿರ ಮಂದಿ
ರಾಕ್ಷಸರನ್ನು, ಖರ, ದೂಷಣ, ತ್ರಿಶಿರರನ್ನೂ ರಾಮನು ಸಂಹರಿಸಿದನು. ತಾನು ಈಕೆಯನ್ನು ಹುಡುಕಲೆಂದೇ
ಲಂಕಾನಗರಿಗೆ ಬರಬೇಕಾಯಿತು. ಈಕೆ ಮಹಾನ್ ಪತಿವ್ರತೆ, ರಾಜಭೋಗಗಳನ್ನು ತ್ಯಜಿಸಿ, ಪತಿಯೊಡನೆ
ವನವಾಸಕ್ಕೆ ಬಂದಳು.
ಸೀತೆಯ ಮನಸ್ಸಿನಲ್ಲಿ ರಾಮನ ಹೊರತಾಗಿ ಬೇರೆಯ ಆಲೋಚನೆಗಳೇ
ಇರಲಾರವು. ಎದುರಿನ ರಾಕ್ಷಸಿಯರು, ಮರಗಿಡಗಳು, ಯಾವುದೂ ಈಕೆಗೆ ಕಾಣಿಸುತ್ತಿಲ್ಲ. ರಾಮನನ್ನೇ ಸದಾ
ಸೀತೆ ಧ್ಯಾನಿಸುತ್ತಿದ್ದಾಳೆ ಎಂದು ಯೋಚಿಸುತ್ತ ವಾನರೋತ್ತಮನು ಶಿಂಶಪಾ ಮರದಲ್ಲಿ ಕುಳಿತಿದ್ದನು.
ಹನುಮಂತನು ಶ್ರೀರಾಮಚಂದ್ರನ ಸ್ತೋತ್ರಗೈರು, ಸೀತೆಯನ್ನು
ನೋಡಿ ಪರಿತಪಿಸುವಾಗ ಚಂದ್ರೋದಯವಾಗಿತ್ತು. ಆಗ ಸೀತೆಯ ಸ್ಪಷ್ಟವಾದ ರೂಪವೂ ಆತನಿಗೆ ಗೋಚರಿಸಿತ್ತು.
ಘೋರಾಕಾರದ ರಾಕ್ಷಸಿಯರೂ ಕಂಡರು. ಅವರಲ್ಲಿ ಕೆಲವರು ಒಕ್ಕಣ್ಣರು, ಒಕ್ಕಿವಿಯರು, ಕುಂಟರು, ಹಣೆಯ
ಬಳಿ ಮೂಗುಳ್ಳ ಹಂದಿ ಮೋರೆಯವರಿದ್ದರು.
ಸೀತಾದೇವಿಯು ಅವರಿಂದ ಸುತ್ತುವರೆದಿದ್ದರೂ, ಅವರತ್ತ
ನೋಡುತ್ತಿರಲು ಮುಖವು ಬಾಡಿದ್ದರೂ, ಪತಿಯ ಪರಾಕ್ರಮದಲ್ಲಿ ವಿಶ್ವಾಸ ತಗ್ಗಿರಲಿಲ್ಲ. ಶೋಕದ
ರಾಶಿಯಂತೆ, ದುಃಖದ ಅಲೆಯಂತೆ ಆಕೆ ಕಾಣಿಸಿದಳು. ಶ್ರೀರಾಮನ ಅನುಗ್ರಹದಿಂದಲೇ ಸೀತೆಯನ್ನು
ನೋಡುವಂತಾಯಿತೆಂದು ಅಂಜನಾಸುತನಿಗೆ ಆನಂದಭಾಷ್ಪ ಉಕ್ಕಿತು. ರಾಮಲಕ್ಷ್ಮಣರಿಗೆ ಮನಸ್ಸಿನಲ್ಲಿ
ವಂದಿಸಿ, ಮರದ ಮರೆಯಲ್ಲಿ ವಾಯುಪುತ್ರನು ಅಡಗಿ ಕುಳಿತನು.
ಅಷ್ಟುಹೊತ್ತಿಗೆ ಬೆಳಗಿನ ಜಾವವಾಯಿತು. ರಾವಣನಿಗೆ
ರಾಕ್ಷಸರ ವಾದ್ಯಧ್ವನಿಗಳಿಂದ ಎಚ್ಚರವಾಯಿತು. ಬ್ರಹ್ಮರಾಕ್ಷಸರು ವೇದಘೋಷಗೈದರು. ರಾವಣನಿಗೆ
ಎದ್ದಕೂಡಲೇ ಸೀತೆಯ ಸ್ಮರಣೆಯಾಯಿತು. ವಸ್ತ್ರಾಲಂಕೃತನಾಗಿ ಅಶೋಕವನದತ್ತ ನಡೆದನು, ಅವನ ಹಿಂದೆ
ನೂರಾರು ಸ್ತ್ರೀಯರು ಬಂದರು, ದೀಪಸ್ತಂಭಧಾರಿಗಳು. ಚಾಮರ ಬೀಸುವ ಸ್ತ್ರೀರು ಸುಗಂಧ ಪರಿಮಳ
ದ್ರವ್ಯ, ಹೂಗಳನ್ನು ಎರಚುತ್ತ ಅವರು ರಾವಣನನ್ನು ಓಲೈಸುತ್ತ ನಡೆದರು. ಮದ್ಯ ಹಿಡಿದವರು,
ಛತ್ರವನ್ನು ಹಿಡಿದ ಸ್ತ್ರೀಯರು ನಿದ್ದೆಗಣ್ಣಿನಲ್ಲೇ ಅವನನ್ನು ಹಿಂಬಾಲಿಸುತ್ತಿದ್ದರು. ಅವರ
ಕೇಶಗಳು ಕೆದರಿದ್ದವು. ರಾವಣನ ಮೇಲಿನ ಭಯ, ಮೋಹ, ಗೌರವಗಳಿಂದ ಅವರು ಹಿಂಬಾಲಿಸಿ ಹೊರಟಿದ್ದರು.
ಸೀತೆ ರಾವಣನ ಭೇಟಿ
ಹನುಮಂತನು ರಾವಣ ಪರಿವಾರದ ನಡಿಗೆಯ ಸದ್ದನ್ನಾಲಿಸಿ
ಗಮನವಿಟ್ಟು ನೋಡಿದಾಗ ರಾವಣನು ಕಂಡನು. ಸಾಜ್ಞಾತ್ ಮನ್ಮಥನಂತೆ ರಾವಣನು ಶುಭ್ರವಾದ
ವಸ್ತ್ರಧಾರಿಯಾಗಿ ಬಂದನು. ಒಂದು ಕೊಂಬೆಯಿಂದ ಕೆಳಗಿಳಿದು ಮತ್ತೊಂದು ಕೊಂಬೆಯಲ್ಲಿ ಹನುಮಂತನು
ಅಡಿಗಿ ಕುಳಿತನು.
ರಾವಣನು ಬರುತ್ತಿರುವುದನ್ನು ನೋಡಿದ ಸೀತೆಯು ನಡುಗಿದಳು.
ಅಕೆ ಕಣ್ಣೀರು ಸುರಿಸಿದಳು. ಅವಳ ಮನಸ್ಸು ರಾಮನಲ್ಲೇ ನೆಟ್ಟಿತ್ತು.
ಸತ್ಕುಲ ಪ್ರಸೂತೆಯಾಗಿ, ವೀರಾಗ್ರಣಿ, ಪುರುಷೋತ್ತಮನ
ಮಡದಿಯಾದರೂ ಒಣಗುತ್ತಿರುವ ನದಿಯಂತೆ ಆಕೆ ಶೋಚನೀಯಳಾಗಿ ಕಾಣಿಸಿದಳು.
ಶೋಕ, ಚಿಂತೆ, ಉಪವಾಸಗಳಿಂದ ಕೃಶಳಾದ ಸೀತೆ, ಶ್ರೀರಾಮನು
ರಾವಣನನ್ನು ಬೇಗ ಸೋಲಿಸಿ, ಜಯಶೀಲನಾಗಲಿ ಎಂದು ಪ್ರಾರ್ಥನೆ ಮಾಡುವವಳಂತೆ ಕೈಜೋಡಿಸಿದ್ದಳು.
ರಾವಣನು, ದೀನಳಾಗಿ ಕುಳಿತಿದ್ದ ಆ ಪತಿವ್ರತೆಯನ್ನು
ಕುರಿತು, ಸುಂದರಿ, ನನ್ನನ್ನು ನೋಡಿ ಬೆದರುವೆಯೇಕೆ ನಿನ್ನಲ್ಲಿ ನಾನು ಮೋಹಪರವಶನಾಗಿರುವೆ. ನೀನು
ಅಂಜದಿರು, ಪರಸ್ತ್ರೀ ಅಪಹಾರ ರಾಕ್ಷಸರ ಧರ್ಮವಾಗಿದೆ. ಆದರೆ ನಾನು ನಿನ್ನನ್ನು ಬಲಾತ್ಕಾರ
ಮಾಡೆನು. ಶೋಕದಿಂದ ಮರುಗದೆ ನನ್ನನ್ನು ವರಿಸು. ಲಂಕೆಯೇ ನಿನ್ನದು, ಸ್ವರ್ಗವನ್ನು ಮೀರಿದ ಸುಖ
ನಿನ್ನದಾಗುತ್ತದೆ, ನನ್ನ ಮನಸ್ಸು ನಿನ್ನಿಂದ ಹಿಂದೆ ಹೋಗುವುದಿಲ್ಲ, ನನ್ನ ಹೆಂಡತಿಯಾಗು ಎಂದನು.
ರಾಮನಿಂದ ನಿನಗೇನು ಸುಖವಿದೆ ಇಂದು ಅವನು ನಿರ್ಗತಿಕನಾಗಿರುವನು,
ನನ್ನೊಡನೆ ವಿರಹಿಸು. ಎಂದು ನಯವಾಗಿ ನುಡಿದನು.
ಸೀತೆಯು ಅವನ ಮಾತು ಕೇಳಿ, ಮುಖ ನೋಡದೆ
ಹುಲ್ಲುಕಡ್ಡಿಯನ್ನುದ್ದೇಶಿಸಿ, ರಾಮನನ್ನು ನ್ಮರಿಸುತ್ತ, ರಾವಣ, ನಿನ್ನ ಈ ಕೆಟ್ಟ ಬುದ್ಧಿಯನ್ನು
ಬಿಡು, ನೀನು ನನ್ನನ್ನು ಬಯಸಬೇಡ, ನಿನ್ನ ಪತ್ನಿಯರ ಮರ್ಯಾದೆಯಂತೆ ನನ್ನ ಗೌರವ ರಕ್ಷಿಸು.
ಪರಸ್ತ್ರೀ ವ್ಯಾಮೋಹ ಕೇಡಿಗೆ ದಾರಿ ಎಂಬುದು ನಿನಗೆ ತಿಳಿಯದೆ ಇದರಿಂದ ನಿಮ್ಮ ರಾಕ್ಷಸ ಕುಲವೇ
ನಾಶವಾಗುತ್ತದೆ. ದುರ್ಮಾರ್ಗಿಯಾಗದೆ ರಾಕ್ಷಸರ ಹಿತರಕ್ಷಣೆ ಮಾಡು. ನಿನ್ನ ಸಂಪದ ನನಗೆ ಬೇಡ, ನಾನು
ಶ್ರೀರಾಮನ ಧರ್ಮಪತ್ನಿ, ನನ್ನನ್ನು ಆತನ ಬಳಿ ಸೇರಿಸು.
ರಾಮನೊಡನೆ ಸ್ನೇಹ ಬೆಳೆಸಿದರೆ ನಿನಗೂ ಒಳಿತು. ಬದುಕುವ
ಆಸೆಯಿದ್ದರೆ ಹೀಗೆ ಮಾಡು, ಇಲ್ಲದಿದ್ದರೆ ನಿನ್ನ ವಧೆ ಖಚಿತ, ಶ್ರೀರಾಮನಿಂದ ನೀನು ಹತನಾಗುವೆ.
ಶ್ರೀರಾಮನು ನಿನ್ನಿಂದ ನನ್ನನ್ನು ಬಿಡಿಸಿಕೊಂಡು ಹೋಗುವುದು ನಿಶ್ಚಯ.
ಶ್ರೀರಾಮನು ಆಶ್ರಮದಲ್ಲಿದ್ದರೆ ನೀನು ಉಳಿಯುತ್ತಿದ್ದೆಯ? ನೀನು ಎಲ್ಲಿ ಹೋದರೂ ರಾಮಬಾಣದ ಘಾತ ತಪ್ಪದು, ನಿನ್ನ ಆಯುಷ್ಯ
ಮುಗಿದಂತಿದೆ. ಹೀಗೆ ಮಾಡದಿರು ಎಂದು ಹಿತವಚನ ನುಡಿದಳು.
ಸೀತೆಯ ಮಾತಿನಿಂದ ಕ್ರುದ್ಧನಾದ ರಾವಣನು, “ಸೀತೆ, ಪ್ರಿಯವಾದ ಮಾತಿನಿಂದ ಮಾತ್ರ ಸ್ತ್ರೀಯರು ತೃಪ್ತಿ ಹೊಂದುವರು,
ಆದರೆ ನೀನು ಹೀಗಿಲ್ಲ, ಕಾಮದಿಂದ ನಾನು ಪರಿತಪಿಸುತ್ತಿರುವೆ, ನೀನು ವಧೆಗೆ ಅರ್ಹಳು, ಆದರೂ
ನಿನ್ನನ್ನು ಮಾನಭಂಗ ಮಾಡದೆ ಬಿಟ್ಟಿದ್ದೇನೆ, ನೀನು ರಾಮನನ್ನು ಮರೆತುಬಿಡು. ನಿನಗೆ ಕೊಟ್ಟ ಒಂದು
ವರ್ಷದ ಅವಧಿಯಲ್ಲಿ ಎರಡು ತಿಂಗಳು ಮಾತ್ರ ಉಳಿದಿದೆ, ಅಷ್ಟರೊಳಗೆ ನೀನು ನನ್ನನ್ನು ವರಿಸು,
ಇಲ್ಲವಾದರೆ ನಿನ್ನ ವಧೆ ಖಚಿತ” ಎಂದನು.
ರಾವಣನ ಮಾತಿನಿಂದ ಅವನ ಜೊತೆಯಲ್ಲಿ ಬಂದಿದ್ದ ರಾಕ್ಷಸ
ಸ್ತ್ರೀಯರಿಗೆ ಬೇಸರವಾಯಿತು. ಮತ್ತೆ ಸೀತೆ ನುಡಿದಳು, “ರಾವಣ, ನಿನಗೆ
ಹಿತವಚನ ಹೇಳುವವರಿಲ್ಲ ಎನಿಸುತ್ತದೆ. ಧರ್ಮಸ್ವರೂಪಿಯಾದ ರಾಮನ ಪತ್ನಿಯಾದ ನನ್ನನ್ನು ಹೀಗೆ ಯಾರೂ
ಮಾತನಾಡಿಸಿಲ್ಲ. ಶ್ರೀರಾಮನೆದರು ನೀನು ಕ್ಷುಲ್ಲಕ ವ್ಯಕ್ತಿ, ಸಿಂಹದೆದುರು ಮೊಲವಿದ್ದಂತೆ, ನನ್ನ
ಪತಿ ರಾಜ್ಯಹೀನನಾದರೂ, ನಾನು ಇತರರಿಗೆ ಒಲಿಯಲಾರೆ, ನನಗೆ ಆತನಲ್ಲಿಯ ಅನುರಾಗ ಎಂದೂ
ಕಡಿಮೆಯಾಗಲಾರದು. ನೀನು ಇಲ್ಲಿಂದ ಹೊರಟುಹೋಗು” ಎಂದಳು.
ರಾವಣನು ಸೀತೆಯನ್ನು ಅನುನಯದಿಂದ ಮತ್ತೆ ಕೇಳಿದನು,
ಕೋಪದಿಂದ ರಾಕ್ಷಸಿಯರಿಗೆ ಆಕೆಯನ್ನು ಶಿಕ್ಷಿಸುವಂತೆ ಹೇಳಿ ಹೊರಟುಹೋದನು.
ರಾಕ್ಷಸಿಯರ ಬೆದರಿಕೆ
ರಾಕ್ಷಸಿಯರು, “ಹೇ ಸೀತೆ,
ರಾಕ್ಷಸ ಕುಲೋತ್ಪನ್ನನಾದರೂ ರಾವಣನು ಬ್ರಹ್ಮ್ಞಜಾನಿ, ಪುಲಸ್ತ್ಯರ ವಂಶಜನು, ಇಂತಹ ಮಹಾತ್ಮನನ್ನು
ನೀನು ಏಕೆ ಒಪ್ಪುವುದಿಲ್ಲ?” ಎಂದು ಬೆದರಿಸಿ ಕೇಳಿದರು, ಏಕಜಟೆ,
ಹರಿಜಟೆ, ದುರ್ಮುಖಿ ಮೊದಲಾದ ರಾಕ್ಷಸಿಯರು ಅವಳನ್ನು ಮತ್ತೆ ಹೆದರಿಸಿದರು.
ರಾಕ್ಷಸಿಯರಿಂದ ಸೀತೆಗೆ ಹೆದರಿಕೆ ಆಗಲಿಲ್ಲ. ವಿನತೆ ಎಂಬ
ರಾಕ್ಷಸಿ ದೇವೇಂದ್ರನಿಗಿಂತ ಪರಾಕ್ರಮಿ, ಉದಾರಿ, ರೂಪವಂತನಾದ ರಾವಣನನ್ನು ಸೇವಿಸು ಎಂದು
ಶಾಂತರೀತಿಯಲ್ಲಿ ಹೇಳಿದಳು,ಅಲ್ಪ ಜೀವಿಯೂ ಅನಾಥನೂ ಆಗಿರುವ ರಾಮನನ್ನು ತೊರೆಯುವಂತೆಯೂ ಸೂಚಿಸಿದಳು. ಪ್ರಘಸೆ ಎಂಬ ರಾಕ್ಷಸಿ, “ಇವಳು ನಮ್ಮ ಮಾತನ್ನು ಆಲಿಸುವವಳಲ್ಳ, ಇವಳನ್ನು ತಿಂದು ಹಾಕೋಣ” ಎಂದು ಹೇಳಿದಳು. ಸೀತೆಯು ಆ ರಾಕ್ಷಸಿಯರ ಕಾಟ ತಾಳಲಾರದೆ ಕ್ಷಣಕಾಲ
ಧೈರ್ಯಗೆಟ್ಟುರೋದಿಸಿದಳು.
ರಾಕ್ಷಸರ ಕಠೋರ ಮಾತುಗಳಿಗೆ ಸೀತೆ ಗದ್ಗದ ಸ್ವರದಿಂದ. “ನನ್ನನ್ನು ಬೇಕಾದರೆ ತಿಂದುಹಾಕಿರಿ, ಆದರೆ ನಾನು
ಎಂದಿಗೂ ರಾವಣನ ಪತ್ನಿಯಾಗಲಾರೆ” ಎಂದು ದೃಢವಾಗಿ ಉತ್ತರಿಸಿದಳು. ಅಶೋಕ
ವೃಕ್ಷದ ಕೊಂಬೆಗೆ ಒರಗಿ ನಿರಾಶೆಯಿಂದ ಶೋಕಿಸಿ, ಶ್ರೀರಾಮನನ್ನೇ ಧ್ಯಾನಿಸಿದಳು. ಬಿರುಗಾಳಿಗೆ
ಸಿಲುಕಿದ ಬಾಳೆಗಿಡದಂತೆ ಭಯದಿಂದ ನಡುಗಿದಳು. “ಹಾ ರಾಮ, ಹಾ ಲಕ್ಷ್ಮಣ,
ಅಮ್ಮ ಕೌಸಲ್ಯೆ, ಸುಮಿತ್ರೇ! ನಾನಿನ್ನು ಬದುಕಲಾರೆ” ಎಂದು ದೀಳಾಗಿರೋದಿಸಿದಳು. ತಾನು ಆತ್ಮಹ್ತಯೆ ಮಾಡಿಕೊಳ್ಳಲೂ ಬಿಡದಂತೆ ರಾಕ್ಷಸಿಯರು
ಕಾವಲು ಇದ್ದಾರಲ್ಲ ಎಂದು ಗೋಳಾಡಿದಳು.
ಸೀತೆಯ ದುಃಖ
ಜಾನಕಿಯು ದುಃಖದಿಂದ ಆಯಾಸಗೊಂಡು ನೆಲದ ಮೇಲೆ
ಹೊರಳಾಡಿದಳು. ತಾನು ರಾಮನಿಲ್ಲದೆ ಬದುಕಬಾರದು, ರಾವಣನನ್ನು ಎಡಗಾಲಿನಿಂದಲೂ ಮುಟ್ಟಲಾರೆ,
ಪ್ರಾಣದಲ್ಲಿ ಆಸೆಯೇ ಬೇಡ ದು ಹಲುಬಿದಳು.
ಶ್ರೀರಾಮನಿಗೆ ಇಲ್ಲಿ ತಾನಿರುವ ವಿಚಾರ ತಿಳಿದರೆ
ಲೋಕಲ್ಲೇ ರಾಕ್ಷಸರು ಇರದಂತೆ ನಿರ್ಮೂಲಗೊಳಿಸುವುದು ನಿಶ್ಚಯ. ನನ್ನ ಅಪಹರಣವನ್ನು ಜಟಾಯು
ತಿಳಿಸಬಹುದಿತ್ತು, ಆದರೆ ರಾವಣನು ಅವನನ್ನು ಕೊಂದಿದ್ದಾನೆಂದು ಸೀತೆ ಚಿಂತಿಸಿದಳು.
ಶ್ರೀರಾಮನು ಲಂಕೆಯನ್ನು ಹುಡುಕದೆ ಬಿಡಲಾರ, ರಾವಣನು
ನೀಡಿದ ಅವಧಿ ಮುಗಿಯುತ್ತ ಬಂದಿದೆ, ನಂತರ ನನಗೆ ಮರಣವೆಂದು ಇವನು ಹೇಳುತ್ತಿದ್ದಾನೆ. ಈಗ ಕಾಲ
ವಿಳಂಬದ ಮಾತಿಲ್ಲ, ನಾನೇನು ಮಾಡಲಿ? ಸತ್ಯಸಂಧನೂ, ಧರ್ಮ ಪಾರಾಯಣನೂ ಆದ ರಾಮನಿಗೆ ತನ್ನಿಂದ ಪ್ರಯೋಜನವಿಲ್ಲ, ಅದರೆ ತಾನು ಅವನಿಂದ
ದೂರವಿರಲಾರೆ, ಆದ್ದರಿಂದ ಮರಣವೇ ತನಗೆ ಲೇಸು ಎಂದು ಆಕೆಗನಿಸಿತು.
ಸರ್ಗ – 27
ತ್ರಿಜಟಾ ಸ್ವಪ್ನ (ಪಾರಾಯಣ ಸರ್ಗ)
ಸೀತೆಯ ಮಾತುಗಳನ್ನು ಕೇಳಿದ ರಾಕ್ಷಸಿಯರು ಕುಪಿತರಾದರು.
ಆಕೆ ಆತ್ಮಹತ್ಯೆಗೆ ಯತ್ತನಸುತ್ತಿದ್ದಾಳೆಂಬ ವಿಷಯ ತಿಳಿಸಲುಅವರು ರಾವಣನ ಬಳಿಗೆ ಹೋದರು. ಉಳಿದ
ಕೆಲವರು ಅವಳ ಹತ್ತಿರ ಬಂದು, “ಅಯೋಗ್ಯಳೆ!
ನಿನ್ನನ್ನು ತಿಂದು ಬಿಡುತ್ತೇವೆ” ಎಂದು ಹೆದರಿಸಿದರು.
ಆಗ ತ್ರಿಜಟೆ ಎಂಬ ವೃದ್ಧ ರಾಕ್ಷಸಿ ನಿದ್ರೆಯಿಂದ
ಎಚ್ಚರಗೊಂಡಳ. ಅವಳು ಸೀತೆಯನ್ನು ಹೆದರಿಸುವ ಆ ರಾಕ್ಷಸಿಯನ್ನು ನೋಡಿ, “ದುಷ್ಟೆಯರೆ, ಜನಕರಾಜನ ಪುತ್ರಿಯೂ, ದಶರಥನ ಸೊಸೆಯೂ ಆದ ಸೀತೆಯನ್ನು ನೀವು
ತಿನ್ನಲು ಸಾಧ್ಯವಿಲ್ಲ. ಲಂಕಾನಗರಿ ನಾಶವಾಗುತ್ತದೆ. ಈಕೆಯ ಪತಿ ರಮನಿಗೆ ವಿಜಯ ನಿಶ್ಚಯ, ನಾನೊಂದು
ಸ್ವಸ್ನವನ್ನು ಕಂಡೆನು.” ಎಂದಳು.
ರಾಕ್ಷಸಿಯರು ತ್ರಿಜಟೆಯನ್ನು ಸ್ವಪ್ನದ ವೃತ್ತಾಂತವನ್ನು
ಹೇಳೆಂದಾಗ ಅವಳು ವಿವರಿಸತೊಡಗಿದಳು.
ದಿವ್ಯವಾದ ಪಲ್ಲಕ್ಕಿಯೊಂದು ಅಂತರಿಕ್ಷದಲ್ಲಿ
ಬರುತ್ತಿತ್ತು. ಆನೆಯ ದಂತದಿಂದ ರಚಿತವಾದ ಆ ಪಲ್ಲಕ್ಕಿಯನ್ನು ಹಂಸಗಳು ಎಳೆಯುತ್ತಿದ್ದವು. ರಾಮನು
ಶುಭ್ರವಸ್ತ್ರ, ಮಾಲಾಧಾರಿಯಾಗಿ, ಲಕ್ಷ್ಮಣನೊಂದಿಗೆ ಅದರಲ್ಲಿ ಕುಳಿತು ಬರುತ್ತಿದ್ದನು. ಸೀತೆಯು
ಬಿಳಿ ರೇಶಿಮೆ ಸೀರೆಯನ್ನುಟ್ಟು ರಾಮನೊಡನೆ ಸೇರಿಕೊಂಡಳು. ರಾಮನು ಮಹಾನ್ ಗಜವೊಂದನ್ನು ಏರಿ
ಕುಳಿತನು. ಸೀತೆಯೂ ಗಜವನ್ನು ಹತ್ತಿದಳು, ತನ್ನ ಪತಿಯ ತೊಡೆಯಲ್ಲಿ ಕುಳಿತು ಆಕೆ ತನ್ನ ಕೈ ನೀಡಿ
ಸೂರ್ಯ ಚಂದ್ರರನ್ನು ಸವರಿದಂತೆ ನನಗೆ ಕಾಣಿಸಿತು.
ತ್ರಿಜಟೆಯು ತನ್ನ ಸ್ವಪ್ನವನ್ನು ವಿವರಿಸಿದಳು. ಸೀತೆಯು
ರಾಮ-ಲಕ್ಷ್ಮಣರೊಡನೆ ಅಯೋಧ್ಯೆಗೆ ಪಯಣಿಸಿದ ನಂತರ ಮತ್ತೆ ರಾಮನು ವಿಷ್ಣುವಿನಂತೆ ಆಕೆಗೆ
ಗೋಚರಿಸಿದನು.
ರಾವಣನು ತ್ರಿಜಟೆಯ ಕನಸಿನಲ್ಲಿ ಎಣ್ಣೆಯನ್ನು
ಲೇಪಿಸಿಕೊಂಡು, ಕೆಂಪುವಸ್ತ್ರ, ಕೆಂಪು ಮಾಲೆ ಧರಿಸಿ ತಲೆ ಬೋಳಿಸಿಕೊಂಡವನಾಗಿ ಕತ್ತೆಯ ಗಾಡಿಯಲ್ಲಿ
ಕುಳಿತಿದ್ದುದನ್ನು ಕಂಡಳು. ಅವನು ದಕ್ಷಿಣ ದಿಕ್ಕಿನೆಡೆಗೆ ಹೊರಟಂತೆ ತಲೆ ಕೆಳಗಾಗಿ ಬಿದ್ದಂತೆಯೂ
ಅವಳು ಕನಸಿನಲ್ಲಿ ನೋಡಿದಳು.
ಕೆಲವು ಸೀರೆಯುಟ್ಟ, ಕಪ್ಪು ವರ್ಣದ ಹೆಂಗಸರು ರಾವಣನನ್ನು
ದಕ್ಷಿಣದೆಡೆಗೆ ಎಳೆದೊಯ್ದಂತೆ ಸ್ವಪ್ನ ದೃಶ್ಯ ಅವಳಿಗೆ ಕಾಣಿಸಿತು. ಕುಂಭಕರ್ಣ, ರಾವಣನ ಮಕ್ಕಳೂ
ಇದೇ ರೀತಿ ಇದ್ದುದನ್ನು ಅವಳು ನೋಡಿದಳು. ವಿಭೀಷಣನು ಮಾತ್ರ ಶ್ವೇತಛತ್ರ ಹಿಡಿದು, ಚಂದನವನ್ನು
ಲೇಪಿಸಿಕೊಂಡವನಾಗಿ, ಗಜವನ್ನೇರಿ ಮಂಗಳ ವಾದ್ಯ ಸಮೇತನಾಗಿ ಹೊರಟ ದೃಶ್ಯ ಅವಳಿಗೆ ಕಾಣಿಸಿತು.
ತ್ರಿಜಟೆಯು ಸ್ವಪ್ನದಲ್ಲಿ ರಾಮನ ದೂತನಾದ ವಾನರನೊಬ್ಬನು
ರಾವಣನ ನಗರಿಯನ್ನು ದಹಿಸಿದಂತೆ ದೃಶ್ಯ ಗೋಚರವಾಯಿತು.
ಈ ರೀತಿ ತನ್ನ ಕನಸನ್ನು ತಿಳಿಸಿದ ತ್ರಿಜಟೆಯು,
ರಾಕ್ಷಸಿಯರಿಗೆ ಮತ್ತೆ ಹೇಳಿದಳು, “ಸೀತೆಯನ್ನು ನಿಂದಿಸಬಾರದು, ಅವಳ
ಕ್ಷಮೆ ಬೇಡಿದರೆ ನಿಮಗೇ ಹಿತವಾಗುವುದು, ನನ್ನ ಸ್ವಪ್ನ ಸುಳ್ಳಾಗದು. ಆದ್ದರಿಂದ ಸೀತೆಗೆ
ಶುಭವಾಗುವುದು ನಿಶ್ಚಯ. ರಾವಣನ ನಾಶ, ರಾಮ ವಿಜಯವೂ ನಿಶ್ಚಯ. ನೋಡಿ, ಸೀತೆಯ
ಎಡಗಣ್ಣುಹಾರುತ್ತಿದೆ. ಎಡತೊಡೆ ಅದುರುತ್ತಿದೆ. ಕೃಶವಾಗಿ ಕಂಡರೂ ಪತಿವ್ರತೆಯಾದ ಸೀತೆಯ ಕಾಂತಿ
ಕುಂದಿಲ್ಲ. ಮರದ ಕೊಂಬೆಯ ಮೇಲೆ ಕುಳಿತ ಹಕ್ಕಿ ‘ಪುನಾ-ಪುನ’ ಎಂದು ಇಂಪಾಗಿ ಹಾಡುತ್ತಿದೆ. ಇವೆಲ್ಲಾ ಸೀತೆಗೆ ಶುಭ ಸೂಚಕಗಳೇ ಸರಿ”.
ಸೀತೆಯು ತ್ರಿಜಟೆಯ ಮಾತುಗಳನ್ನು ಆಲಿಸಿ. “ನಿನ್ನ ಮಾತು ನಿಜವಾದರೆ ನಿಮ್ಮನ್ನು ನಾಸು ರಕ್ಷಿಸುವೆ” ಎಂದು ಹರ್ಷಚಿತ್ತಳಾಗಿ ನುಡಿದಳು. ಪತಿಯ ವಿಜಯ ಸೂಚನೆಯ ವಾರ್ತೆಯನ್ನು
ಆಲಿಸಿಯೇ ಅವಳಿಗೆ ಪರಮಾನಂದವಾಗಿತ್ತು.
ಈ ಸರ್ಗ ಪಾರಾಯಣಿದಂದ ಆಪತ್ತು, ಸಂಕಟಗಳೂ
ನಿವಾರಣೆಯಾಗುತ್ತವೆ.
ಸೀತೆಗೆ ಶುಭಸಕುನ
ರಾವಣನ ಮಾತುಗಳನ್ನಾಲಿಸಿದ ಸೀತೆ ಭಯದಿಂದ ಕಂಗೆಟ್ಟಳು.
ಅನಾಥೆಯಾದ ಬಾಲಕಿಯಂತೆ ರೋದಿಸಿದ ಆಕೆ ತನಗೆ ಸಾವು ಬಾರದೆ? ಎಂದು
ದುಃಖಿಸಿದಳು. ರಾವಣನು ಕೈಲಿ ಸಾವಿಗಿಂತ ಆತ್ಮಹತ್ಯೆ ಲೇಸು ಎಂಬ ತೀರ್ಮಾನಕ್ಕೆ ಬಂದಳು. ಕೆಲವೇ
ದಿನಗಳಲ್ಲಿ ರಾವಣನಿತ್ತ ಅವಧಿಮುಗಿಯುತ್ತದೆ, ನನ್ನನ್ನು ಅವರು ಕೊಲ್ಲುವರು, ಅದರ ಬದಲಿಗೆ ನಾನೇ
ಸಾಯುವುದು ಪಾಪವಲ್ಲ, ಆಪತ್ಕಾಲದಲ್ಲಿ ಆತ್ಮಹತ್ಯೆ ಪಾಪವಲ್ಲ. ರಾಮನಾದರೆ ನನ್ನ ಸಾವಿನ ನಂತರ ಬೇರೆ
ಸ್ತ್ರೀಯೊಡನೆ ವಿಹರಿಸಬಹುದು, ಆದರೆ ತಾನು ಬದುಕಿ ಸುಖವಿಲ್ಲ. ಹೀಗಿರುವುದರಿಂದ ಆತ್ಮಹತ್ಯೆ ಸರಿ
ಎಂದು ನಿರ್ಧರಿಸಿ, ಜಡೆಯಿಂದ ನೇಣು ಹಾಕಿಕೊಳ್ಳಲು ಯತ್ನಿಸಿದಳು.
ಆಗ ಸೀತೆಗೆ ಶುಭಶಕುನಗಳಾದವು, ಅವಳ ಬಲಗಣ್ಣು ಅದುರಿತು,
ಎಡತೋಳು ಹಾರಿತು, ಹಿಂದೆ ಇಂತಹ ಶಕುನಗಳು ತೋರಿದಾಗ ಆಕೆಗೆ ಶುಭಫಲಗಳೇ ಆಗಿದ್ದವು. ಇದರಿಂದ ಆಕೆಯ
ಕಿಂದ ಉತ್ಸಾಹ ಮತ್ತೆ ಚಿಗುರಿತು. ರಾಹುವಿನಿಂದ ಬಿಡುಗಡೆಯಾದಾಗ ಪೂರ್ಣಚಂದ್ರನಂತೆ ಸೀತೆ
ಶೋಭಿಸಿದಳು. ಆಕೆಯ ಕಣ್ಣುಗಳು ಕಾಂತಿಯಿಂದ ಮತ್ತೆ ಶೋಭಿಸಿದವು. ಶೋಕವು ತಗ್ಗಿ ಮನದ ಬೇಸರ
ಕಡಿಮೆಯಾಯಿತು. ಆಕೆಯ ಮುಖ ಶುಕ್ಲಪಕ್ಷದ ಚಂದ್ರನಂತೆ ಶೋಭಿಸಿತು.
ಹನುಮಂತನು ಮರದ ಕೊಂಬೆಯ ಮೇಲೆ ಕುಳಿತು ತ್ರಿಜಟೆಯ
ಸ್ವಪ್ನ ವೃತ್ತಾಂತ, ಸೀತೆಯ ದುಃಖ, ರಾಕ್ಷಸಿಯರ ಬೆದರಿಕೆ – ಎಲ್ಲವನ್ನೂ ನೋಡಿದನು, ಆಗ
ಜ್ಞಾನಿಯಾದ ಆತನು ಹೀಗೆ ಯೋಚಿಸಿದನು. ಹಲವಾರು ಕಪಿಗಳು ಸೀತೆಯನ್ನು ಹುಡುಕಿದರೂ ನನಗೇ ಆಕೆ
ಗೋಚರಿಸಿದಳು. ಇಲ್ಲಿ ಬಂದ ನಂತರ ಎಲ್ಲ ವಿಚಾರ ನನಗೆ ತಿಳಿಯಿತು. ರಾಕ್ಷಸರ ಬಲ, ಲಂಕೆಯ ಸ್ಥಿತಿಯ
ಅರಿವು ನನಗಾಗಿದೆ. ಈಗ ನಾನು ಕೂಡಲೇ ರಾಮಪತ್ನಿಯ ದುಃಖವನ್ನು ನಿವಾರಿಸಬೇಕು. ಆಕೆಯನ್ನು
ಸಮಾಧಾನಗೊಳಿಸಬೇಕು. ಸೀತಾಮಾತೆ ದುಃಖವನ್ನು ಕಂಡಂತಿಲ್ಲ. ಆದ್ದರಿಂದ ಮೊದಲು ಆಕೆಯೊಡನೆ
ಮಾತನಾಡಬೇಕು. ಮಾತನಾಡದೆ ಹಿಂದಿರುಗಿದರೆ, ಈಕೆ ದುಃಖದಿಂದಲೇ ಪ್ರಾಣವನ್ನು ತೊರೆಯಬಹುದು ಎಂದು
ಯೋಚಿಸಿದನು. ಆದುದರಿಂದ ನಾನು ಈಕೆಯನ್ನು ಸಮಾಧಾನಗೊಳಿಸಿ, ರಾಮ-ಸುಗ್ರೀವರೊಡನೆ ಕಪಿಸೇನಾ
ಸಮೇತನಾಗಿ ಇಲ್ಲಿಗೆ ಬರುವುದೇ ಒಳ್ಳೆಯದು ಎಂದು ಅಂಜನಾ ಪುತ್ರನು ನಿರ್ಧರಿಸಿದನು.
ತಾನು ಸಂಸ್ಕೃತದಲ್ಲಿ ಮಾತನಾಡಿದರೆ ರಾಕ್ಷಸನ ಮಾಯೆ
ಎಂದೆನಿಸಬಹುದು, ಯುದ್ಧ ಮಾಡಿದರೆ ರಾಕ್ಷಸಿಯರು ಪರಿಸ್ಥತಿ ಕೆಡಿಸಬಹುದು. ನನ್ನನ್ನು ತಡೆಯಬಹುದು.
ಹೀಗೆ ಚಿಂತಿಸಿದ ಆಂಜನೇಯನು ಶ್ರೀರಾಮನ ಯೋಗಕ್ಷೇಮದ ಬಗ್ಗೆ ಸೀತೆಗೆ ನಾನು ದೃಢಪಡಿಸಿ, ಧೈರ್ಯ
ನೀಡಬೇಕು. ಆಕೆಯಲ್ಲಿ ನಂಬಿಕೆ ಹುಟ್ಟಿಸಿ,
ರಾಮಕಥಾ ಕೀರ್ತನೆ ಮಾಡಬೇಕು ಎಂದು ನಿರ್ಧರಿಸಿದನು. ಆ ಹೊತ್ತಿಗೆ ಕಾವಲು ರಾಕ್ಷಸಿಯರಿಗೆ ಗಾಢ ನಿದ್ರೆ
ಬಂದಿತು.
ಶ್ರೀರಾಮಕಥಾ ಕೀರ್ತನೆ
ವಾಯುಸುತನು ಸೀತೆಗೆ ಕೇಳಿಸುವಂತೆ ಇಂಪಾಗಿ
ಶ್ರೀರಾನಕಥೆಯನ್ನು ಹಾಡಿದನು. ಇಕ್ಷ್ವಾಕು ವಂಶದಲ್ಲಿ ದಶರಥನೆಂಬ ರಾಜ ಪರಾಕ್ರಮಿ, ಉದಾರಶೀಲ,
ಸತ್ಯಪರ ಹಾಗೂ ಪ್ರಜಾಪಾಲಕನಾಗಿದ್ದನು.
ದಶರಥನಿಗೆ ಶ್ರೀರಾಮನೆಂಬ ಶ್ರೇಷ್ಠ ಧನರ್ಧರ, ಮಹಾವೀರನಾದ
ಜ್ಯೇಷ್ಠ ಪುತ್ರನಿದ್ದಾನೆ, ಸಕಲವಿದ್ಯಾ ಪಾರಂಗತನಾದ ರಾಮನು ಧರ್ಮದ ಪ್ರತಿರೂಪವಾಗಿದ್ದಾನೆ,
ಸರ್ವಪ್ರಜಾ ರಕ್ಷಕನೂ ಆಗಿದ್ದಾನೆ.
ಪಿತೃವಾಕ್ಯ ಪರಿಪಾಲಕನಾದ ರಾಮನು ಲಕ್ಷ್ಮಣ, ಸೀತೆಯರೊಡನೆ
ವನವಾಸ್ಕಕೆ ಬರಬೇಕಾಯಿತು. ದಂಡಕಾರಣ್ಯದಲ್ಲಿ ಆತನು ಪೀಡಕರಾದ ಅನೇಕ ರಾಕ್ಷಸರನ್ನು ಕೊಂದನು.
ಇದರಿಂದ ರಾವಣನಿಗೆ ಕೋಪ ಬಂದು, ಮಾಯಾಮೃಗದ ನೆಪದಲ್ಲಿ ರಾಮನನ್ನು ವಂಚಿಸಿ, ಆತನ ಪ್ರಿಯ ಪತ್ನಿ
ಸೀತೆಯನ್ನನು ಆಪಹರಿಸಿದನು.
ರಾಮನು ಆಕೆಯನ್ನು ಅರಣ್ಯದಲ್ಲಿ ಹುಡುಕುತ್ತಿದ್ದಾಗ,
ಸುಗ್ರೀವನ ಸಖ್ಯವಾಯಿತು, ವಾಲಿಯಿಂದ ರಾಮನು ಆತನಿಗೆ ರಾಜ್ಯ ಕೊಡಿಸಿದನು. ವಾಲಿಯನ್ನು ಕೊಂದನು.
ಸುಗ್ರೀವನ ಬಂಟರಾದ ಕಪಿಗಳು ಸೀತೆಯನ್ನು ಎಲ್ಲ ಕಡೆ
ಹುಡುಕುತ್ತಿದ್ದಾರೆ. ನಾನು ರಾಘವನು ಹೇಳಿದ ಸೀತೆಯ ಸಕಲ ಲಕ್ಷಣಗಳನ್ನು ಈಕೆಯಲ್ಲಿ
ಕಾಣುತ್ತಿದ್ದೇನೆ, ನಿಜವಾಗಿ ಸೀತಾಮಾತೆಯ ದರ್ಶನವಾಯಿತು. ಕಪಿಯನ್ನು ನೋಡಿದ ಸೀತೆ ಕ್ಷಣಕಾಲ
ನಡುಗಿದಳು. ಶುಭ್ರ ಸ್ವೇತವಸ್ತ್ರ ಧರಿಸಿ, ನಸುಗೆಂಪಾದ ದೇಹ, ಕೆಂಗಣ್ಣುಗಳ ಈ ಕಪಿ ಮಧುರವಾಗಿ
ಮಾತನಾಡುತ್ತಿದೆ. ಸೀತೆ ಕ್ಷಣಕಾಲ ಕಂಪಿಸಿ ಹಾ ರಾಮ! ಹಾ ಲಕ್ಷ್ಮಣ! ಎಂದು
ಅತ್ತಳು. ವಿನೀತನಾಗಿ ಕುಳಿತ ಕಪಿಯನ್ನು ನೋಡಿದಳು. ತನಗೆ ಇದರಿಂದ ಏನು ಆಗದಿರಲಿ ಎಂದು ರಾಮನ
ಧ್ಯಾನ ಮಾಡಿದಳು. ಅಷ್ಟದಿಕಾಲರ ನೆರವು ಕೋರಿದಳು.
ಸೀತಾ ಸಂದರ್ಶನ
ಆಗ ಹನುಮಂತನು ಕೊಂಬೆಯಿಂದ ಕೆಳಗಿಳಿದು ವಿನೀತನಾಗಿ
ನಮಸ್ಕರಿಸಿದನು. “ತಾಯಿ, ನೀನು ಯಾರು?
ಅಳುವುದೇಕೆ? ನಿನ್ನ ತೊಂದರೆ ಏನು? ಶ್ರೀರಾಮನ
ಹೆಸರನ್ನು ಹೇಳುತ್ತಿರುವುದರಿಂದ, ಈ ತಾಪಸ ರೂಪ ನೋಡಿದರೆ ನೀನೇ ಶ್ರೀರಾಮನ ಪತ್ನಿ ಸೀತೆ ಎಂಬುದು
ನಿಶ್ಚಯ” ಎಂದು ಹೇಳಿದನು.
“ದೇವಿ, ನಿನಗೆ ಶುಭವಾಗಲಿ”
ಎಂದ ಆಂಜನೇಯನಿಗೆ ಸೀತೆ ತಾನು ದಶರಥ ಮಹಾರಾಜನ ಸೊಸೆ, ಶ್ರೀರಾಮನ ಪತ್ನಿ, ಜನಕ ಮಹಾರಾಜನ ಮಗಳಾದ
ಸೀತೆ ಎಂದು ಹೇಳಿ, ಅರಣ್ಯಕ್ಕೆ ಬರಬೇಕಾದ ಸಂದರ್ಭವನ್ನು ವಿವರಿಸಿದಳು.
ರಾಮನನ್ನು ತೊರೆದು ತನಗೆ ಸ್ವರ್ಗಸುಖವೂ ಬೇಡವೆಂದಳು.
ರಾವಣನಿಂದ ಆಪಹೃತಳಾದ ತನಗೆ ಕೇವಲ ಎರಡು ತಿಂಗಳು ಕಾಲಾವಧಿ ಇದೆ ಎಂದೂ, ನಂತರ ಪ್ರಾಣ
ಬಿಡಬೇಕಾಗುವುದು ಎಂದು ಸೀತೆ ಆಂಜನೇಯನಿಗೆ ತಿಳಿಸಿದಳು.
ಹನುಮಂತನು ಸೀತೆಯ ಮಾತನ್ನು ಕೇಳಿ, “ದೇವಿ, ನಾನು ಶ್ರೀರಾಮನ ದೂತನಾಗಿ ಸಂದೇಶ
ತಂದಿರುವೆ. ಆತನು ಕುಶಲಿಯಾಗಿದ್ದಾನೆ. ನಿನಗೆ ತನ್ನ ಕುಶಲ ಸಮಾಚಾರ ಹೇಳಿ ಕಳಿಸಿದ್ದಾನೆ” ಎಂದನು. ಇದರಿಂದ ಆಕೆಗೆ ನಂಬಿಕೆ ಬಂದಿತು. ಆದರೆ ಮಾಯಾ ರಾವಣನೆಂದು ಸಂಶಯವೂ ಬಂದಿತು.
ಆಗ ಆಕೆ, “ಶ್ರೀರಾಮದೂತನೇ ನೀನಾಗಿದ್ದಾರೆ ರಾಮಕಥೆಯನ್ನು
ಇನ್ನೂ ತಿಳಿಸುವವನಾಗು, ರಾಮನ ಕಡೆ ನನ್ನ ಮನಸ್ಸನ್ನು
ನೀನು ಸೆಳೆದಿರುವೆ, ಬೇಗನೇ ರಾಮನು ದರ್ಶನ ನೀಡಬಾರದೆ?” ಎಂದು
ನುಡಿದು ಮೌನ ತಾಳಿದಳು.
ಆಂಜನೇಯನು ಆಗ ಶ್ರೀರಾಮನ ದಿವ್ಯರೂಪ, ಅಂಗಾಂಗಗಳ,
ಮೂವತ್ತೆರಡು ಶುಭಲಕ್ಷಣಗಳನ್ನೂ ವಿವರಿಸಿದನು. ಲಕ್ಷ್ಮಣನ ಬಗ್ಗೆಯೂ ತಿಳಿಸಿದನು.
ಶ್ರೀರಾಮನ ಸೂಕ್ಷ್ಮ ದೇಹಲಕ್ಷಣ ರಹಸ್ಯವಾದ ಸೀತಾ-ರಾಮರ
ಸಂಭಾಷಣೆ, ಸೀತೆಯ ಆಭರಣಗಳನ್ನು ಋಷ್ಯಮುಕದಲ್ಲಿ ತಾನು ಗುರುತಿಸಿದ ಬಗ್ಗೆ ವಿವರವಾಗಿ ವಾಯುಸುತನು
ತಿಳಿಸಿದನು. ತನ್ನ ಹೆಸರು ಹನುಮಂತ, ಸುಗ್ರೀವನ ಮಂತ್ರಿ ಎಂದೂ ದಢಪಡಿಸಿದನು.
ಶ್ರೀರಾಮ ಮುದ್ರಿಕಾ ಪ್ರದಾನ
“ದೇವಿ, ಇದೋ ಶ್ರೀರಾಮನ ಹೆಸರನ್ನು ಕೆತ್ತಿದ
ಉಂಗುರವಿದು. ನಿನಗೆ ವಿಶ್ವಾಸ ಹುಟ್ಟಲೆಂದು ಶ್ರೀರಾಮನು ಇದನ್ನು ಕಳುಹಿಸಿರುವನು” ಎಂದು ಹೇಳಿ ವಿನಯದಿಂದ ಆಕೆಗೆ ನೀಡಿದನು.
ಜಾನಕಿಯು ಪತುಯ ಕೈಯುಂಗುರ ನೋಡಿ, ರಾಮನನ್ನೇ ನೋಡಿದಷ್ಟು
ಸಂತೋಷಚಿತ್ತಳಾದಳು, ಮತ್ತೆ ಅದನ್ನು ಕಣ್ಣಿಗುತ್ತಿಕೊಂಡು, ರಾಮನ ಕುಶಲದ ಬಗ್ಗೆ ವಿಚಾರಿಸಿದಳು.
ಶ್ರೀರಾಮನು ಸೇನೆಯೊಡನೆ ಇಲ್ಲಿಗೆ ಬರುವನೆ? ಎಂದು ದೃಢಪಡಿಸಿಕೊಂಡಳು. ರಾಮನು ಸದಾ
ತನ್ನ ಬಗ್ಗೆ ಯೋಚಿಸುತ್ತಿರುವುದನ್ನು ಕೇಳಿ ತಿಳಿದು ದುಃಖಿತಳಾಗಿ ಮೋಡ ಮುಸುಕಿದ ಚಂದ್ರನಂತೆ
ಕಾಣಿಸಿದಳು.
ಸೀತೆಯು ಹನುಮಂತನಿಗೆ “ಹೇ ಹನುಮಂತನೆ, ಶ್ರೀರಾಮನು ನನ್ನ ನೆನಪಿನಲ್ಲಿ ಇರುವನೆಂದು ತಿಳಿದು
ಸಂತೋಷವಾದರೂ, ಇಲ್ಲಿ ನಾನು ವಿಷವನ್ನೇ ಉಣ್ಣುತ್ತಿದ್ದೇನೆ, ರಾಮ-ಲಕ್ಷ್ಮಣ-ನಾನು ವ್ಯಸನದ
ಸುಳಿಯಲ್ಲಿ ಸಿಕ್ಕಿ ದಿಕ್ಕುಗಾಣದೆ ಇದ್ದೇವೆ.
ವಿಭೀಷಣನು ನನ್ನನ್ನು ರಾಮನಿಗೆ ಒಪ್ಪಿಸೆಂದು ಎಷ್ಟೇ
ಬುದ್ಧಿ ಹೇಳಿದರೂ ರಾವಣ ಒಪ್ಪಲಿಲ್ಲ. ಅವನಿಗೆ ಮೃತ್ಯು ಕಾದಿದೆ ಎಂಬುದು ಖಚಿತ, ವಿಭೀಷಣನ ಮಗಳು
ಅನಲೆ ಈ ವಿಚಾರವನ್ನು ನನಗೆ ತಿಳಿಸಿದಳು. ರಾಮನು ಈ ರಾಕ್ಷಸರನ್ನು ಧ್ವಂಸ ಮಾಡುವನೆಂಬುದರಲ್ಲಿ
ಸಂಶಯವಿಲ್ಲ. ಅದು ಎಲ್ಲರಿಗೂ ತಿಳಿದಿದೆ” ಎಂದು ಸೀತೆ ಹೇಳಿದಳು.
ಆಂಜನೇಯನು, “ತಾಯಿ, ನಾನು
ನಿನ್ನ ವಿಷಯ ತಿಳಿಸಿದಾಕ್ಷಣ ರಾಮನು ಇಲ್ಲಿಗೆ ಬರುವುದು ಖಚಿತ. ಈಗಲೇ ಬೇಕಾದರೆ ನನ್ನ ಬೆನ್ನ
ಮೇಲೆ ಕೂರಿಸಿಕೊಂಡು ನಿನ್ನನ್ನು ಕರೆದೊಯ್ಯುವೆ” ಎಂದು ನುಡಿದನು.
ಇದನ್ನು ಕೇಳಿದ ಸೀತೆ, “ಹನುಮ, ನನ್ನನ್ನು ಹೊತ್ತು ಒಯ್ಯುವೆಯಾ?” ಎಂದು
ಸಂದೇಹದಿಂದ ಕೇಳಿದಳು. ಆಗ ವಾಯುಪುತ್ರನು ತನ್ನ ದೇಹವನ್ನು ಸರ್ವತಾಕಾರದಾಗಿ ಬೆಳೆಸಿದನು. ಸೀತೆಗೆ
ಅವನ ಪರಾಕ್ರಮ ತಿಳಿದಿದೆ, ಅದರೆ ಇದು ಅಷ್ಟು ಸರಿಯಾಗಿ ಕಾಣುವುದಿಲ್ಲ. ರಾಕ್ಷಸರು ನಿನ್ನನ್ನು
ಬಾಧಿಸಲೂಬಹುದು. ನೀನು ಸಮರ್ಥನಾದರೂ ರಾಮನೇ ನನ್ನನ್ನು ಕರೆದೊಯ್ಯುವುದು ಧರ್ಮಮಾರ್ಗವಾಗಿದೆ.
ಶ್ರೀರಾಮನೇ ಬಂದು, ರಾವಣನ ಸಂಹಾರ ಮಾಡಿ ನನ್ನನ್ನು ಬಿಡಿಸಿಕೊಂಡೊಯ್ದರೆ ಅದು ಸೂಕ್ತವಾಗುತ್ತದೆ,
ನನ್ನ ಪತಿ ಇಲ್ಲಿಗೆ ಲಕ್ಷ್ಮಣ, ಸುಗ್ರೀವ, ಸೇನಾಸಮೇತನಾಗಿ ಬೇಗನೇ ಬರುವಂತೆ ಮಾಡು, ಇದರಿಂದ ನನಗೆ
ಅಪಾರ ಸಂತೋಷವಾಗುತ್ತದೆ” ಎಂದಳು.
ಹನುಮಂತನು ಸೀತೆಯ ಮಾತಿನಿಂದ ಹರ್ಷಿತನಾಗಿ ಇದು
ಪತಿವ್ರತೆಗೆ ಯೋಗ್ಯವಾದ ಮಾತುಗಳು, ಶ್ರೀರಾಮನನ್ನು ಬಿಟ್ಟು ಪರಪುರಷನನ್ನು ಸ್ಪರ್ಶಿಸಲಾರೆ ಎಂದು
ನಿನ್ನ ಮಾತೂ ಯುಕ್ತವೇ ಆಗಿದೆ. ನಿನ್ನ ಸಂಗತಿಯನ್ನು ವಿವರವಾಗಿ ಶ್ರೀರಾಮನಿಗೆ ತಿಳಿಸುತ್ತೇನೆ,
ನಿನ್ನ ಸಮಾಧಾನಕ್ಕಾಗಿ ಕರೆದೊಯ್ಯುವೆ ಎಂದು ಹೇಳಿದೆ. ನೀನು ನನ್ನ ಜೊತೆ ಬರಲು
ಸಾಧ್ಯವಿಲ್ಲವಾದರೆ, ನಿನ್ನನ್ನು ನೋಡಿದ ಕುರುಹಾಗಿ ಒಂದು ವಸ್ತುವನ್ನು ಕೊಡು, ಎದು ನುಡಿದನು.
ಸೀತೆಯ ಸಂದೇಶ
ಸೀತೆಯು ಗದ್ಗದ ಸ್ವರದಲ್ಲಿ “ನಿನಗೆ ಒಂದು ರಹಸ್ಯದ ವಿಷಯ ತಿಳಿಸುವೆ”, ಅದನ್ನು ರಾಮನಿಗೆ ಹೇಳು, ಹಿಂದೆ ನಾವು ಚಿತ್ರಕೂಟ ಪರ್ವತದ ಬಳಿ
ಮಂದಾಕಿನಿ ತೀರದ ಸಿದ್ಧಾಶ್ರಮದಲ್ಲಿದ್ದೆವು. ಆಗ ನಾನು ಏಕಾಂತದಲ್ಲಿ ರಾಮನ ತೊಡೆಯ ಮೇಲೆ
ಕುಳಿತಿದ್ದೆ. ಕಾಗೆಯೊಂದು ಬಂದು ನನ್ನನ್ನು ಕುಕ್ಕಿತು. ನಾನು ಅದನ್ನು ಓಡಿಸಲೆತ್ನಿಸಿದೆ. ರಾಮನನ್ನು
ಎಬ್ಬಿಸದೆ ನನ್ನ ನೋವನ್ನು ತಡೆದುಕೊಂಡೆ. ನಂತರ ಆ ಕಾಗೆ ನನ್ನ ಎದೆಯನ್ನು ಚುಚ್ಚಿ ಗಾಯಗೊಳಿಸಿತು.
ಅದರಿಂದ ತೊಟ್ಟಿಕ್ಕಿದ ಬಿಸಿ ರಕ್ತದ ಹನಿಗಳು ರಾಮನ ಮೇಲೆ ಸುರಿದವು. ಬೇರೆ ಉಪಾಯ ಕಾಣದೆ
ರಾಮನನ್ನು ಎಚ್ಚರಿಸಿದೆ. ನನ್ನ ಎದೆಯ ಗಾಯ ನೋಡಿ, ಕುಪಿತನಾದ ರಾಮನು ಆ ಕಾಗೆಯ ಮೇಲೆ ದರ್ಭೆಯನ್ನು
ಮಂತ್ರಿಸಿ ಬಿಟ್ಟನು. ಕಾಗೆ ಓಡಿತು, ದರ್ಭೆ ಬೆನ್ನಟ್ಟಿತು.
ಇಂದ್ರನ ಮಗ ಜಯಂತನನನು ಕಾಗೆಯ ರೂಪದಿಂದ ಬಂದಿದ್ದನು. ಅವನನ್ನು
ಬ್ರಹ್ಮಾಸ್ತ್ರವಾದ ದರ್ಭೆಯಿಂದ ಯಾರೂ ರಕ್ಷಿಸಲಾಗಲಿಲ್ಲ. ನಂತರ ಕಾಗೆ ರಾಮನಿಗೆ ಶರಣಾಯಿತು,
ಬ್ರಹ್ಮಾಸ್ತ್ರವ್ಯರ್ಥವಾಗದು ಆದ್ದರಿಂದ ನಿನ್ನ ಬಲಗಣ್ಣನು ನಾಶಪಡಿಸುತ್ತದೆ ಎಂದನು. ಇದು
ಶ್ರೀರಾಮನ ಪರಾಕ್ರಮದ ರಹಸ್ಯ ಘಟನೆ. ಇದನ್ನು ನನ್ನ ಪ್ರಿಯನಿಗೆ ನೆನಪಿಸು, ರಾಕ್ಷಸರ ಮೇಲೆ
ಅಸ್ತ್ರವನ್ನು ಬಳಸು ಎಂದು ರಾಮನಿಗೆ ಹೇಳು, ಹೀಗೆ ಸೀತೆ ಹನುಮಂತನಿಗೆ ಕಣ್ಣೀರು ಸುರಿಸುತ್ತ
ಹೇಳಿದಳು.
ಚೂಡಾಮಣಿ ಸ್ವೀಕಾರ
ಸೀತೆ ತನಗೆ ಈಗ ಒಂದು ತಿಂಗಳು ಮಾತ್ರ ಕಾಲಾವಕಾಶ
ಇದೆಯೆಂದೂ, ಅಷ್ಟರೊಳಗೆ ಪಾರುಮಾಡಬೇಕೆಂದೂ ಶ್ರೀರಾಮನಿಗೆ ತಿಳಿಸು ಎಂದು ಬಿನ್ನವಿಸಿದಳು. ನಂತರ
ತನ್ನ ಸೆರಗಿನಲ್ಲಿ ಕಟ್ಟಿಟ್ಟುಕೊಂಡಿದ್ದ ದಿವ್ಯ ಚೂಡಾಮಣಿಯನ್ನು ತೆಗೆದು. “ಇದನ್ನು ನನ್ನ ಕುರುಹಾಗಿ ನನ್ನ ಪತಿಗೆ ಕೊಡು”
ಎಂದು ಹನುಮಂತನ ಕೈಯಲ್ಲಿಟ್ಟಳು. ಹನುಮನು ಅದನ್ನು ತನ್ನ ಬೆರಳಿನಲ್ಲಿ ಹಾಕಿಕೊಂಡನು.
ಸೂಕ್ಷ್ಮರೂಪ ತೊರೆದು ಬೃಹದಾಕಾರವಾಗಿ ಬೆಳೆದನು, ಸೀತೆಗೆ
ಪ್ರದಕ್ಷಿಣೆ ನಮಸ್ಕಾರ ಮಾಡಿ, ಕಿಷ್ಕಿಂಧೆಗೆ ವಾಪಸಾಗಲು ಸಿದ್ಧನಾಗಿ ಹೊರಟುನಿಂತನು.
ಸೀತೆಯು ಚೂಡಾಮಣಿಯನ್ನು ನೀಡಿದ ನಂತರ ಮತ್ತೆ ಹೇಳಿದಳು, “ಈ ಮಣಿ ನೋಡಿದೊಡನೆ ನನ್ನ ಪತಿಗೆ ನನ್ನ ಮಾತಾ-ಪಿತರು, ದಶರಥ ಮಹಾರಾಜರ
ನೆನಪಾಗುತ್ತದೆ. ನಂತರ ಆತನು ಮುಂದಿನ ಕಾರ್ಯಕ್ಕಾಗಿ ನಿನ್ನನ್ನೇ ಪ್ರೇರಿಸಬಹುದು, ನೀನೇ ನನ್ನ
ದುಃಖ ನೀಗುವ ಉಪಾಯ ಮಾಡಬೇಕು” ಎಂದಳು.
ಹನುಮಂತನು ಸೀತಾಮಾತೆಗೆ ಮತ್ತೆ ನಮಸ್ಕರಿಸಿ, ಹೊರಟಾಗ
ಜಾನಕಿಯು ಎಲ್ಲರಿಗೂ ತನ್ನ ಕ್ಷೇಮವನ್ನು ತಿಳಿಸಿ, ಬಿಡುಗಡೆಯ ಉಪಾಯ ಮಾಡುವಂತೆ
ಪ್ರೋತ್ಸಾಹಿಸಬೇಕೆಂದಳು. ಆಗ ರಾಮದೂತನು “ಅಮ್ಮಾ, ಶ್ರೀರಾಮನು ಅಪ್ರತಿಮ ವೀರನು,
ಆತನು ಯಾರನ್ನಾದರೂ ಎದುರಿಸಬಲ್ಲನು, ನಿನಗಾಗಿ ಇಡೀ ಜಗತ್ತನ್ನೇ ವಶಪಡಿಸುವ ಶಕ್ತಿ ಆತನಿಗಿದೆ” ಎಂದು ನುಡಿದನು.
“ಹೇ ವೀರ, ನೀನು ಇಂದು ವಿಶ್ರಾಂತಿ ಪಡೆದು ನಾಳೆ
ಹೊರಡು, ನಿನ್ನಿಂದ ನನಗೆ ಎಷ್ಟೋ ನೆಮ್ಮದಿ ಸಿಕ್ಕಿದೆ. ಆದರೆ ಕಪಿ ಕಡರಿಗಳ ಸೇನೆಯ ಬಲದ ಬಗ್ಗೆ
ನನಗೆ ಸಂಶಯವಿದೆ. ಈ ಸಾಗರವನ್ನು ದಾಟಲು ವಾಯು, ನೀನು, ಗರುಡ ನಿಮ್ಮ ಮೂವರಿಗೆ ಮಾತ್ರ ಸಾಧ್ಯ.
ನೀನೊಬ್ಬನೇ ನನ್ನನ್ನು ಬಿಡಿಸಬಲ್ಲೆ. ಆದರೆ ನನ್ನ ವಿಮೋಚನೆಯ ಕೀರ್ತಿ ರಾಮನಿಗೆ ಬರಲಿ. ಆತನು
ಇಲ್ಲಿ ತನ್ನ ಪರಾಕ್ರಮವನ್ನು ತೋರಿಸುವಂತೆ ಪ್ರೇರಿಸು” ಎಂದಳು.
ಸೀತೆಗೆ ಸಾಂತ್ವನ
ಆಂಜನೇಯನು. “ತಾಯಿ,
ನಿನ್ನನ್ನು ಇಲ್ಲಿಂದ ಬಿಡುಗಡೆ ಮಾಡಿಸುವುದರಲ್ಲಿ ಸುಗ್ರೀವನು ದೃಢನಿಶ್ಚಯ ಮಾಡಿದ್ದಾನೆ. ಕಪಿಗಳು
ಬಲಶಾಲಿಗಳು, ಕೆಲವರಿಗೆ ನನಗಿಂತ ಬಲವಿದೆ. ನಾನೊಬ್ಬಸಾಮಾನ್ಯ ದೂತನಾಗಿ ಬಂದಿರುವೆ. ನೀನು
ಸ್ವಲ್ಪಸಮಾಧಾನದಿಂದ ಇದ್ದರೆ ರಾಮ ಲಕ್ಷ್ಮಣರು ಇಲ್ಲಿಗೆ ಬಂದು, ರಾವಣನು ಅವನ ಸೇನೆಯೊಡನೆ
ನಿರ್ಮೂಲಗೊಳಿಸಿ ನಿನ್ನನ್ನು ಅಯೋಧ್ಯೆಗೆ ಕರೆದೊಯ್ಯುತ್ತಾರೆ. ನೀನೇ ರಾವಣನ ಸಂಹಾರವನ್ನು
ನೋಡುವೆ. ಸಧ್ಯದಲ್ಲಿಯೇ ನಿನಗೆ ಪ್ರಿಯ ಸಮಾಗಮವಾಗಲಿದೆ. ಅಲ್ಲಿಯವರೆಗೆ ಸಹಿಸಿಕೊಂಡಿರು ಎಂದು
ಧೈರ್ಯ ನೀಡಿದನು.
ಸೀತೆಯು ಹನುಮಂತನ ಧೈರ್ಯದ ಮಾತುಗಳನ್ನು ಕೇಳಿ
ಉಲ್ಲಸಿತಳಾದಳು. ಬಂಜರು ಭೂಮಿಯ ಮೇಲೆ ಮಳೆ ಹನಿದಂತೆ ಅವಳಿಗೆ ಉತ್ಸಾಹ ಮೂಡಿತು. ಹಿಂದೆ ತನ್ನ
ಅಳಿಸಿಹೋದ ತಿಲಕವನ್ನು ರಾಮನು ಮತ್ತೆ ಇಟ್ಟಿದ್ದನು ನೆನಪಿಸಿದಳು. ಇದು ನನ್ನ ಚೂಡಾಮಣೀ, ಇದನ್ನು
ನೋಡಿ ರಾಮನಿಗೆ ನನ್ನ ನೆನಪಾಗಿ, ನಿನ್ನ ಮಾತಿನಲ್ಲಿ ವಿಶ್ವಾಸ ಮೂಡುತ್ತದೆ” ಎಂದು ಹೇಳಿದನು. “ನಿನ್ನ ಪ್ರಯಾಣ ಸುಖಕರವಾಗಲಿ” ಎಂದು ಸೀತೆ ಹೇಳಿದಳು. ಹನುಮಂತನು ಅಲ್ಲಿಂದ ಹೊರಟನು.
ಅಶೋಕವನ ಧ್ವಂಸ
ಆಂಜನೇಯನು ರಾಕ್ಷಸರನ್ನು ತಾನೇ ದಂಡಿಸಿದರೊಳಿತು ಎಂದು
ಬಗೆದು ಆಶೋಕವನ ಧ್ವಂಸ ಮಾಡಿದನು. ಇದರಿಂದ ರಾವಣನು ಸಿಟ್ಟಿಗೆದ್ದು ಯುದ್ಧಕ್ಕೆ ಬರುವಾಗ ಆಗ
ರಾಕ್ಷಸರ ಸಂಹಾರ ಸಾಧ್ಯವಾಗುತ್ತದೆ. ವಾಯುಸುತನು ಸೀತೆಯಿದ್ದ ಸ್ಥಾನದ ಹೊರತಾಗಿ ಆಶೋಕವನವನ್ನು
ಹಾಳುಗೆಡವಿದನು. ಅಲ್ಲಿನ ಲತಾಮಂಟಪ, ಉದ್ಯಾನದ ಬಾಗಿಲಲ್ಲಿ ನಿಂತು ಅವನು ರಾಕ್ಷಸರಿಗಾಗಿ ಕಾದು
ನಿಂತನು.
ಅಶೋಕವನದಲ್ಲಿ ಕೋಲಾಹಲವಾಯಿತು. ಮರಗಳು ಮುರಿದು,
ಪಕ್ಷಿಗಳು ಕೆಲಕಾಲ ಶಬ್ದದೊಡನೆ ಚದುರಿಸವು. ಲಂಕಾನಿವಾಸಿಗಳಿಗೆ ಭಯವಾಯಿತು. ಎಚ್ಚರವಾದ
ರಾಕ್ಷಸಿಯರು ಮಹಾಕಪಿಯನ್ನು ಕಂಡರು. ಹನುಮಂತನು ತನ್ನ ದೇಹವನ್ನು ದೊಡ್ಡದಾಗಿ ಬೆಳೆಸಿದನು.
ರಾಕ್ಷಸಿಯರು ಸೀತೆಯನ್ನು “ಯಾರಿ ಕಪಿ”
ಎಂದು ಕೇಳಲು, “ನೀವೇ ತಿಳಿಯಿರಿ” ಎಂದಳು.
ಅವರೆಲ್ಲಾ ಹೆದರಿ ದಿಕ್ಕಾಪಾಲಾಗಿ ಓಡಿಹೋದರು.
ರಾವಣನ ಬಳಿ ಹೋದ ಕೆಲವರು ಅಶೋಕವನದಲ್ಲಿ
ಕೋಲಾಹಲವೆಬ್ಬಿಸುತ್ತಿರುವ ಕಪಿಯ ಬಗ್ಗೆ ತಿಳಿಸಿ, ಅದನ್ನು ರಾಮನ ಅಥವಾ ಕುಬೇರನ ದೂತನೇ ಇರಬೇಕು
ಎಂದರು. ಸೀತೆಯಿದ್ದ ಸ್ಥಳ ಹೊರತಾಗಿ ಅಶೋಕವನದ ಉಳಿದ ಎಲ್ಲಾ ಜಾಗ ಹಾಳಾಗಿತ್ತು.
ಎಂಬತ್ತು ಸಾವಿರ ರಾಕ್ಷಸಯೋಧರು ಆಗ ಅಲ್ಲಿಗೆ ಬಂದು
ಆಯುಧಪಾಣಿಗಳಾಗಿ ಹನುಮಂತನ ಮೇಲೆರಗಿದರು. ಹನುಮಂತನು ತನ್ನ ಬಾಲವನ್ನು ನೆಲಕ್ಕಪ್ಪಳಿಸಿ ನಿಂತನು.
ಲಂಕೆ ನಡುಗಿತು. ಲಂಕಾನಗರದ ಮಹಾದ್ವಾರದ ಅಗುಳಿಯಿಂದಲೇ ಅವನು ರಾಕ್ಷಸರನ್ನು ಬಡಿದು ಕೊಂದನು.
ರಾವಣನಿಗೆ ಕಿಂಕರರು ಈ ವಿಚಾರವನ್ನು ತಿಳಿಸಿದರು.
ಅಷ್ಟರಲ್ಲಿ ಆಂಜನೇಯನು ರಾಕ್ಷಸರ ಕುಲದೇವತೆಯ ಸ್ಥಾನವಾದ ಚೈತ್ಯವನ್ನೇರಿ ಕುಳಿತನು. ಶ್ರೀರಾಮಿಗೆ
ಜಯವಾಗಲಿ ಸುಗ್ರೀವನಿಗೆ ಜಯವಾಗಲಿ, ನಾನು ಕೋಸಲೇಂದ್ರನಾದ ರಾಮನ ದಾಸ. ಎಂದು ಘೋಷಿಸಿದನು.
ರಾಕ್ಷಸರು ಭೀಕರ ಧ್ವನಿಯಿಂದ ಕೂಗುತ್ತ. ನಾನಾ ಬಗೆಯ
ಆಯುಧ ಹಿಡಿದು ಆತನ ಕಡೆಗೆ ನುಗ್ಗಿದರು, ಸಿಟ್ಟಿಗೆದ್ದ ಮಾರುತಿಯು ಚೈತ್ಯ ಚಿನ್ನದ ಕಂಬವನ್ನು
ಕಿತ್ತು ಅದರಿಂದಲೇ ಅವರನ್ನೆಲ್ಲಾಕೊಂದು, ಚೈತ್ಯವನ್ನು ಸುಟ್ಟುಹಾಕಿದನು. ಆತನು ಕಂಬವನ್ನು
ತಿರುಗಿಸಿದ ರಭಸಕ್ಕೆ ಬೆಂಕಿ ಹುಟ್ಟಿತು.
ರಾಕ್ಷಸರ ವಧೆ
ರಾವಣನು ಪ್ರಹಸ್ತನ ಮಗ ಜಂಬುಮಾಲಿಯನ್ನು, ಹನುಮಂತನನ್ನು
ಕೊಲ್ಲಲ್ಲು ಕಳುಹಿಸಿದನು. ಅವನು ಮಹಾದ್ವಾರದ ಮೇಲೆ ಕುಳಿತ ಮಹಾಕಪಿಯ ಕಡೆ ತೀಕ್ಷ್ಣ ಬಾಣಗಳನ್ನು
ಪ್ರಯೋಗಿಸಿದನು, ಹನುಮಂತನ ಮುಖದಿಂದ ರಕ್ತ ಸುರಿದು, ಅವನ ಕೆಂಪಾದ ಮುಖವು ಅರಳಿದ ತಾವರೆಯಂತೆ
ಕಂಡಿತು. ತನ್ನ ಪಕ್ಕದ ಬಂಡೆಯನ್ನೇ ಕಿತ್ತು ಜಂಬುಮಾಲಿಯತ್ತ ಎಸೆದನು, ಮರಗಳನ್ನು ಬೀಸಿದನು.
ಕೊನೆಗೆ ಅಗುಳಿಯಿಂದಲೇ ಜಂಬುಮಾಲಿಯ ಎದೆಗೆ ಅಪ್ಪಳಿಸಿ ಕೊಂದು ಹಾಕಿದನು. ಅವನು ಸತ್ತು ನೆಲದಲ್ಲಿ
ಉರುಳಿದನು. ಹನುಮಂತನು ನಂತರ ಬಂದ ಏಳು ಮಂದಿ ಮಂತ್ರಿಕುಮಾರನ್ನು ಸಂಹರಿಸಿ ಮತ್ತಷ್ಟು ಸಂಖ್ಯೆಯ
ರಾಕ್ಷಸರನ್ನು ನಿರೀಕ್ಷಿಸುತ್ತ ನಿಂತನು. ಹನುಮಂತನಿಂದ ಮಂತ್ರಿಪುತ್ರರ ವಧೆ ವಿಚಾರ ತಿಳಿದ
ರಾವಣನಿಗೆ ಕೋಪ, ಚಿಂತೆ ಹೆಚ್ಚಾಯಿತು, ಅದರೆ ತೋರ್ಪಡಿಸದೆ ವಿರೂಪಾಕ್ಷ, ಯೂಪಾಕ್ಷ, ದುರ್ಧರ, ಪ್ರಘನ,
ಭಾಸಕರ್ಣರೆಂಬ ಪಂಚಸೇನಾಪತಿಗಳನ್ನು ಕರೆದು ಕಪಿಯನ್ನು ದಂಡಿಸಲು ಕಳುಹಿಸಿದನು.
ರಾವಣನು ಈ ಕಪಿಯನ್ನು ನೋಡಿದರೆ ವಾಲಿ, ಸುಗ್ರೀವ,
ಜಾಂಬವಂತರ ಮವು ನೆನಪಿಗೆ ಬರುವುದೆಂದನು. ಆದ್ದರಿಂದ ಅದನ್ನು ಸೆರೆಹಿಡಿದು ತರುವುದೇ ಲೇಸೆಂದು
ಸೇನಾಪತಿಗಳಿಗೆ ಸೂಚಿಸಿದನು. ಅವರು ಸೇನೆ, ಆಯುಧ ಸನ್ನದ್ಧರಾಗಿ ಕಪಿಯ ಬಳಿಗೆ ಹೋಗಿ ಮುತ್ತಿಗೆ
ಹಾಕಿದರು.
ಹನುಮಂತನ ಮೇಲೆ ನಡೆದ ಬಾಣಗಳ ದಾಳಿ, ಪರ್ವತದ ಮೇಲೆ
ಹುಲ್ಲುಕಡ್ಡಿ ಎಸೆದಂತೆ ವಿಫಲವಾಯಿತು. ದುರ್ಧರ, ವಿರೂಪಾಕ್ಷ, ಪ್ರಘನ ಹಾಗೂ ಇತರರು ಸತ್ತುಹೋದರು.
ಹೀಗೆ ಸೇನಾಪತಿಗಳನ್ನು ಸೈನ್ಯಸಹಿತ ಕೊಂದ ಆಂಜನೇಯನು ಕಾಲನಂತೆ ಮತ್ತೆ ಮಹಾದ್ವಾರದ ಬಳಿ ನಿಂತನು.
ಅಕ್ಷಕುಮಾರನ ಸಂಹಾರ
ಪಂಚಸೇನಾಧಿಪತಿಗಳು ಸಾಯಲು ರಾವಣನು ತನ್ನ ಮಗ ಅಕ್ಷ
ಕುಮಾರನತ್ತ ನೋಡಲು, ಅದನ್ನೇ ಸಂಜ್ಞೆಯೆಂದು ತಿಳಿದು, ಸೈನ್ಯಸಹಿತನಾಗಿ ರಥವನ್ನೇರಿ ಹನುಮಂತನಿದ್ದ
ಕಡೆಗೆ ಹೊರಟನು. ಅಕ್ಷ ಕುಮಾರನ ದಿವ್ಯ ರಥವು ಲಂಕಾವನವನ್ನು ಪ್ರವೇಶಿಸಿತು. ಆಂಜನೇಯನನ್ನು ನೋಡಿ
ಬೆರಗಾದ ಅಕ್ಷ ಕುಮಾರನು ಮೂರು ಬಾಣಗಳನ್ನು
ಪ್ರಯೋಗಿಸಿದನು.
ಅಗ್ನಿಯಂತೆ ಪ್ರಜ್ವಲಿಸುತ್ತಿದ್ದ ಅಂಜನೇಯನನ್ನು ನೋಡಿ ಅಕ್ಷ ಕುಮಾರನು ಬೆರೆಗಾದನು, ಆದರೂ ಅವನ ಬಾಣಗಳು ಹನುಮಂತನ
ತಲೆಗೆ ನಾಟಿತು. ಆಗ ಮಾರುತಿಯು ಆಕಾಶಕ್ಕೆ ನೆಗೆದನು. ಬಾಣಗಳ ಸಂದಿನಲ್ಲೇ ತೂರಿ, ಆಕಾಶದಲ್ಲಿ
ಸುಳಿದಾಡಿದನು. ಆಕ್ಷ ಕುಮಾರನ ಬಾಣ ಹನುಮಂತನ ಎದೆಯಲ್ಲಿ ನಾಟಿತು.
ಆದರೂ ಕುಮಾರನನ್ನು ಕೊಲ್ಲಬೇಕೇ ಎಂದು ಕ್ಷಣಕಾಲ ಯೋಚಿಸಿದ
ಮಾರುತಿಯು, ಕೊಲ್ಲುವುದೇ ಸರಿ ಎಂದು ನಿರ್ಧರಿಸಿ, ಅವನ ಎಂಟು ಕುದುರೆಗಳನ್ನು ಅಪ್ಪಳಿಸಿ ಕೊಂದನು.
ಅಕ್ಷ ಕುಮಾರನು ಖಡ್ಗವನ್ನು ಹಿಡಿದು
ಆಂಜನೇಯನ ಮೇಲೆ ಆಂಜನೇಯನ ಮೇಲೆ ಎರಗಿದನು. ಹನುಮಂತನು ಅವನ ಕಾಲುಗಳನ್ನು
ತಿರುಗಿಸಿ ನೆಲದ ಮೇಲೆ ಬಡಿದನು. ಅಕ್ಷನ ಸರ್ವಾಂಗವೂ ರಕ್ತಮಾಯವಾಯಿತು. ಅವನ ಕವಚ ಸಿಡಿದು ಅಕ್ಷನ
ದಾರುಣವಾಗಿ ಸಾವನ್ನಪ್ಪಿದನು. ಅಕ್ಷ ಕುಮಾರನ ಸಾವಿನಿಂದ ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿದ್ದ
ದೇವ-ಋಷಿ-ಗಂಧರ್ವಾದಿಗಳಿಗೆ ಸಂತಸವಾಯಿತು. ಅವರು ಆಶ್ಚರ್ಯದಿಂದ ವೀರ ಮಾರುತಿಯನ್ನು ನೋಡಿದರು.
ಹನುಮನು ಯಮನಂತೆ ಮತ್ತೆ ಮಹಾದ್ವಾರದ ಬಳಿ ಹೋಗಿ ಎದೆ ಸೆಟೆಸಿ ನಿಂತನು.
ಅಕ್ಷ ಕುಮಾರನ ಮರಣ ವಾರ್ತೆಯನ್ನು ಕೇಳಿದ ರಾವಣನು
ಮಹಾವೀರನಂತೆ ದುಃಖಿತನಾದರೂ, ಸಮಾಧಾನಪಡಿಸಿಕೊಂಡು. ಆಗ ತನ್ನ ಮಗ ಇಂದ್ರಜೀತನನ್ನು “ಮಗನೇ ನೀನು ಇಂದ್ರಾದಿ ದೇವತೆಗಳನ್ನು ನಿಗ್ರಹಿಸಿರುವೆ, ತಪಸ್ಸಿನಿಂದ
ಬ್ರಹ್ಮಾಸ್ತ್ರವನ್ನು ಗಳಿಸಿರುವೆ. ನಿನ್ನ ಸಮವಾಗಿ ಹೋರಾಡಬಲ್ಲವರು ಮೂರು ಲೋಕಗಳಲ್ಲೂ ಇಲ್ಲ.
ನಿನ್ನ ಪ್ರಿಯ ಸೋದರ ಅಕ್ಷ ಕುಮಾರ, ಅಮಾತ್ಯ ಪುತ್ರರೂ, ಸಂಚಸೇನಾಪತಿಗಳೂ ಹತರಾದ ವಿಚಾರ ನಿನಗೆ
ತಿಳಿದಿದೆ. ಪರಾಕ್ರಮದಲ್ಲಿ ನನಗೆ ನಿನ್ನಲ್ಲಿ ಪೂರ್ಣ ನಂಬಿಕೆ ಇದೆ. ಈ ಅನರ್ಥಕಾರಿ, ಕೊಬ್ಬಿದ
ಕಪಿಯ ಬಲವನ್ನು ತಿಳಿದು ನಿಗ್ರಹಿಸು. ನಿನ್ನನ್ನು ಈ ಅಪಾಯಕಾರಿ ಕೆಲಸಕ್ಕೆ ಕಳುಹಿಸಲು ನನಗೆ ಮನಸಾ
ಇಷ್ಟವಿಲ್ಲ. ಆದರೆ ರಾಜನೀತಿಯಂತೆ ನೀನು ಹೋಗಲೇಬೇಕಾಗಿದೆ” ಎಂದು ಹೇಳಿ ಆಶೀರ್ವಾದ ಮಾಡಿ ಕಳುಹಿಸಿದನು.
ಇಂದ್ರಜಿತನಿಗೆ ಮೇಘನಾದನೆಂಬ ಇನ್ನೊಂದು ಹೆಸರಿತ್ತು. ಅವನು ದೇವತೆಗಳಿಗಿಂತ
ಪ್ರಭಾವಶಾಲಿಯಾಗಿದ್ದನು, ತಂದೆಗೆ ನಮಸ್ಕರಿಸಿ ಯುದ್ಧಕ್ಕೆ ಹೊರಟನು.
ಮೇಘನಾದನ ಆಕ್ರಮಣ
ರಾವಣನ ಮಗ ಮೇಘನಾದನು ಹರಿತವಾದ ಅಸ್ತ್ರಗಳನ್ನು ಹಿಡಿದು
ಹನುಮಂತ ನೆಡೆಗೆ ನುಗ್ಗಿದನು. ಇಂತಹ ಭೀಕರ ಕಾಳಗವನ್ನು ನೋಡಲು ಆಕಾಶದಲ್ಲಿ ಋಷಿಗಳು, ಯಕ್ಷರು,
ನಾಗರು ನಿಂತರು.
ಹನುಮಂತನು ಮೇಘನಾದವನ್ನು ನೋಡಿ ತನ್ನ ದೇಹವನ್ನು
ವೃದ್ಧಿಗೊಳಿಸಿ ಗರ್ಜನೆ ಮಾಡಿದನು. ಅವರಿಬ್ಬರ ಯುದ್ಧ ಪ್ರಾರಂಭವಾಯಿತು. ಆಂಜನೇಯನು ಇಂದ್ರಜಿತನ
ಬಾಣಗಳನ್ನು ತಪ್ಪಿಸಿಕೊಂಡನು. ಇಂದ್ರಜಿತನು ವಜ್ರಾಯುಧದಂತೆ ಘೋರವಾದ ಅಸ್ತ್ರಗಳನ್ನು ಪ್ರಯೋಗಿಸಲು,
ನಿರಾಯುಧನಾದ ಹನುಮಂತನು ಅದರಿಂದ ತಪ್ಪಿಸಿಕೊಂಡನು. ಪರಸ್ಪರ ಇಬ್ಬರಿಗೂ ನಿಗ್ರಹಿಸಲು
ಸಾಧ್ಯವಾಗಲಿಲ್ಲ.
ಕೊನೆಗೆ ಅಸ್ತ್ರವಿದ್ಯಾ ನಿಪುಣನಾದ ಮೇಘನಾದನು
ಬ್ರಹ್ಮಾಸ್ತ್ರವನ್ನು ಹೂಡಿ, ವಾಯುಪುತ್ರನನ್ನು ಬಂಧಿಸಿದನು. ಈ ದಿವ್ಯಾಸ್ತ್ರಕ್ಕೆ ಸಿಲುಕಿದ
ಹನುಮಂತನು ಬ್ರಹ್ಮದೇವನಿಗೆ ಬೆಲೆ ನೀಡುವುದು ಸೂಕ್ತ ಎಂದೆನಿಸಿದನು. ಇದರಿಂದ ರಾವಣನನ್ನು ನೋಡಿ
ಸಂಭಾಷಣೆ ಮಾಡಬಹುದೆಂದು ಯೋಚಿಸಿದನು.
ರಾಕ್ಷಸರು ಹನುಮಂತನನ್ನು ನಾರಿನಿಂದ ಬಿಗಿದಿ
ಕಟ್ಟಿದ್ದರು. ಆಗ ಬ್ರಹ್ಮಾಸ್ತ್ರದ ಕಟ್ಟು ಸಡಿಲಿತು. ತನ್ನ ಅಸ್ತ್ರದ ಪರಿಣಾಮ ವಿಫಲವಾಗಲು
ಇಂದ್ರಜಿತನು ಚಿಂತಾಗ್ರಸ್ತನಾದನು. ಹನುಮಂತನು ಯಾವ ಪ್ರತಿಭಟನೆಯನ್ನೂ ತೋರದೆ ರಾವಣನ ರಾಜಸಭೆಗೆ
ಎಳೆದೊಯ್ಯಲ್ಪಟ್ಟನು.
ರಾವಣನು ಪರಿವಾರಸಹಿತನಾಗಿ ಸಭೆಯಲ್ಲಿ ಆಸೀನನಾಗಿದ್ದನು.
ರಾಕ್ಷಸರಿಂದ ಸೆರೆ ಹಿಡಿಯಲ್ಪಟ್ಟ ಮಾರುತಿಯನ್ನು ನೋಡಿ, “ಯಾರಿವನು? ಎಲ್ಲಿಂದ ಬಂದನು?” ಎಂದು ಅವರು ಮಾತನಾಡಿಕೊಂಡರು, ಇವನನ್ನು ಕೊಲ್ಲಬೇಕು
ಎಂದು ಕೆಲವರು ಕೂಗಾಡಿದರು.
ರಾವಣನ ಮಂತ್ರಿಗಳು, “ನೀನು ಯಾರು? ಬಂದ ಕೆಲಸವೇನು? ನಿನ್ನನ್ನು ಯಾರು ಕಳುಹಿಸಿದರು?” ಎಂದು ಕೇಳಲು, ಹನುಮಂತನು “ನಾನು ದೂತ, ಕಪೀಶ್ವರ ಸುಗ್ರೀವನು ಇಲ್ಲಿಗೆ
ಕಳುಹಿಸಿದ್ದಾನೆ” ಎಂದು ನುಡಿದನು.
ರಾವಣನ ಭೇಟಿ
ಆಂಜನೇಯನು ರಾವಣನನ್ನು ನೋಡಿದನು. ಚಿನ್ನದ ಕಿರೀಟ,
ಸುವರ್ಣಾಭರಣ, ರೇಷ್ಮೆಯ ವಸ್ತ್ರಧರಿಸಿ, ಚಂದನ ಲೇಪಿತನಾಗಿ ಅವನು ಸಿಂಹಾಸನದಲ್ಲಿ ಕುಳಿತಿದ್ದನು.
ಅವನ ದೇಹ ಕಾಡಿಗೆಯಂತೆ ಕಪ್ಪಾಗಿತ್ತು.
ಹತ್ತು ತಲೆ, ಇಪ್ಪತ್ತು ಬಾಹುಗಳ ರಾವಣನು ಮೇಘದಂತೆ
ಶೋಭಿಸುತ್ತಿದ್ದನು. ಅವನ ಇಕ್ಕೆಲಗಳಲ್ಲಿ ಪ್ರಹಸ್ತ, ದುರ್ಧರ, ಮಹಾಪಾರ್ಶ್ವ ನಿಕುಂಭನು
ಕುಳಿತಿದ್ದರು. ಹನುಮಂತನು ರಾವಣನ ತೇಜಸ್ಸಿಗೆ ಬೆರಗಾದನು. ಇವನು ಅಧರ್ಮಿಯಾಗದಿದ್ದರೆ
ಇಂದ್ರನನ್ನು ಅಳಬಲ್ಲ ಮಹಾ ತೇಜಸ್ವಿ ಎಂದು ಅವನಿಗನಿಸಿತು.
ರಾವಣನು ತನ್ನೆದುರು ನಿಂತ ಹನುಮಂತನನ್ನು ನೋಡಿ “ಇವನು ಹಿಂದೆ ನನ್ನನ್ನು ಶಪಿಸಿದ ನಂದಿಯೊ, ಬಾಣಾಸುರನೋ
ಇರಬಹುದೆ?” ಎಂದು ಶಂಕಿಸಿದನು. ಪ್ರಹಸ್ತನನ್ನು ಕುರಿತು ಅವನನ್ನು ವಿಚಾರಿಸಿ
ಎಂದನು. ಪ್ರಹಸ್ತನು ಹನುಮಂತನನ್ನು ಪ್ರಶಂಸೆ ಮಾಡಿ ಇಲ್ಲಿಗೆ ಬಂದ ಕಾರಣವೇನೆಂದು ಕೇಳಿದನು. ನೀನು
ವಾನರ ರೂಪಿಯಾದರೂ ಮಹಾಬಲಿಯಾಗಿರುವೆ, ನಿಜವಾಗಿ ನೀನು ಯಾರೆಂದು ತಿಳಿಸೆಂದನು.
ಹನುಮಂತನು ಪ್ರಹಸ್ತನ ಪ್ರಶ್ನೆಗೆ ಅವನಿಗೆ ಉತ್ತರಿಸದೆ
ರಾವಣನನ್ನು ಕುರಿತು ಹೀಗೆ ಹೇಳಿದನು, “ನಾನು ಯಾವ ದೇವತೆಯ ದೂತನು ಅಲ್ಲ. ನಾನು ವಾನರ, ನಿನ್ನ
ದರ್ಶನವಾಗಲೆಂದು ಅಶೋಕವನವನ್ನು ಹಾಳು ಮಾಡಿದೆ. ನನ್ನನ್ನು ಯಾವ ಅಸ್ತ್ರವೂ ಏನೂ ಮಾಡಲಾರದು.
ಬ್ರಹ್ಮಾಸ್ತ್ರಕ್ಕೆ ಮಾತ್ರ ಮಣಿದೆ. ನಾನು ಶ್ರೀರಾಮನ ದೂತ, ನಿನ್ನ ಬಳಿ ಮಾತನಾಡಲು ಬಂದಿರುವೆ.”
“ಹೇ ರಾಕ್ಷಸೇಶ್ವರ, ಇದು ಸುಗ್ರೀವನ ಸಂದೇಶ, ನಿನ್ನ ಯೋಗಕ್ಷೇಮವನ್ನು
ವಿಚಾರಿಸಿದ ಆತನು ಒಂದು ಕೆಲಸಕ್ಕಾಗಿ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ದಶರಥನ ಪುತ್ರನಾದ
ರಾಮನು ತಂದೆಯ ಆಜ್ಞೆಯಂತೆ ಪತ್ನಿ ವಿದೇಹ ಜನಕನ ಮಗಳಾದ ಸೀತೆಯೊಡನೆ ದಂಡಕಾರಣಕ್ಕೆ ಬಂದನು. ಮಹಾ
ಪತಿವ್ರತೆಯಾದ ಆಕೆ ಕಾಡಿನಲ್ಲಿ ಕಳೆದುಹೋದಳು. ಸೀತೆಯನ್ನು ಅರಸುತ್ತ ರಾಮನು ಋಶ್ಯಮೂಕ ಪರ್ವತದ
ಬಳಿ ಬಂದಾಗ ಅವನಿಗೆ ಕಪಿವೀರ ಸುಗ್ರೀವನ ಸ್ನೆಹವಾಯಿತು. ರಾಮನು ವಾಲಿಯನ್ನು ಕೊಂದು ಸುಗ್ರೀವನಿಗೆ
ರಾಜ್ಯಾಭಿಷೇಕವನ್ನು ಮಾಡಿದನು. ಒಂದೇ ಬಾಣದಿಂದ ಮಹಾಬಲ ವಾಲಿ ಹತನಾದನು. ವಾಲಿಯ ಬಲ ನಿನಗೂ
ತಿಳಿದಿದೆ.”
“ನಾನು ವಾಯುಪುತ್ರ ಹನುಮಂತ, ಸೀತೆಯನ್ನು ನೋಡಲು ಸಾಗರ
ದಾಟಿ ಇಲ್ಲಿಗೆ ಬಂದೆ. ನಿನ್ನ ಉದ್ಯಾನದಲ್ಲಿ ಆಕೆಯನ್ನು ಕಂಡೆ, ನೀನು ಧರ್ಮ ತಿಳಿದವನು.
ಪರಸ್ತ್ರೀಯನ್ನು ಬಂಧಿಸುವುದು ಸರಿಯಲ್ಲ. ಸೀತೆಯನ್ನು ರಾಮನಿಗೊಪ್ಪಿಸು. ನೀನು ತಪಸ್ವಿ,
ಅಧರ್ಮದಿಂದ ತಪಶ್ಮಕ್ತಿಯನ್ನು ಹಾಳುಮಾಡಿಕೊಳ್ಳಬೇಡ. ರಾಮನು ಪರಾಕ್ರಮದಲ್ಲಿ ಮಹಾವಿಷ್ಣುವಿಗೆ ಸಮ.
ಅವನಿಗೆ ಸಮ ಯಾರೂ ಇಲ್ಲ. ಶ್ರೀರಾಮನಿಗೆ ಅಪಚಾರವೆಸಗಿದ ನೀನೂ ಉಳಿಯಲಾರೆ” ಎಂದು ಹಿತವಚನವನ್ನು ನುಡಿದನು.
ರಾವಣನು ತನಗೆ ಅಪ್ರಿಯವಾದ ಈ ಮಾತುಗಳನ್ನಾಲಿಸಿ
ಕುಪಿತನಾಗಿ ಈ ಕಪಿಯನ್ನು ಕೊಲ್ಲಿರೆಂದು ತನ್ನ ಸೇವಕರಿಗೆ ಹೇಳಿದನು. ಆಗ ಅವನ ಸೋದರ ಹಾಗೂ
ಧರ್ಮಜ್ಞನಾದ ವಿಭೀಷಣನು ದೂತವಧೆ ಯೋಗ್ಯವಲ್ಲ. ಅದರೆ ದಂಡಿಸಬಹುದು ಎಂದು ಸಲಹೆ ನೀಡಿದನು. ರಾವಣನು
ಮೊದಲಿಗೆ ಒಪ್ಪಲಿಲ್ಲ. ಕಪಿಯನ್ನು ಕೊಂದರೆ ಯಾವ ಪ್ರಯೋಜನವಿಲ್ಲ. ಅವನು ದೂತ, ಸ್ವತಂತ್ರನೂ ಅಲ್ಲ,
ಇವನನ್ನು ಕೊಂದರೆ, ಇವನನ್ನು ಕಳುಹಿಸಿದವರನ್ನು ನಿಗ್ರಹಿಸುವ ಅವಕಾಶ ವಿರದು. ಆದ್ದರಿಂದ
ಯುದ್ಧಪ್ರಿಯನಾದ ನಿನಗೆ ಸದವಕಾಶ ತಪ್ಪುತ್ತದೆ ಎಂದು ಮತ್ತೆ ವಿಭೀಷಣನು ನುಡಿದನು.
ತಮ್ಮನಾದ ವಿಭೀಷಣನ ಮಾತು ರಾವಣನಿಗೆ ಸರಿ ಎನಿಸಿತು.
ಕಪಿಗೆ ಬಾಲವೇ ಭೂಷಣ, ಅದನ್ನು ಸುಟ್ಟರೆ ಕುರೂಪನಾದ ಕಪಿ ವಾಪಸಾಗಿ ಎಲ್ಲರೂ ನೋಡಲಿ ಎಂದು ತನ್ನ
ಸೇವಕರಿಗೆ ಕಪಿಯ ಬಾಲಕ್ಕೆ ಬೆಂಕಿ ಹಚ್ಚಿ ಸುಡಿರೆಂದು ಆಜ್ಞಾಪಿಸಿದನು.
ಲಂಕಾದಹನ
ರಾಕ್ಷಸರು ಹನುಮನ ಬಾಲಕ್ಕೆ ಬಟ್ಟೆಸುತ್ತಿ ಎಣ್ಣೆಸುರಿದು
ಬೆಂಕಿ ಹಚ್ಚಿದರು. ಇದರಿಂದ ಬಿಡಿಸಿಕೊಳ್ಳಬಹುದಾದರೂ ಲಂಕಾ ಜಯ ರಾಮನಿಗೆ ಕೀರ್ತಿ ತರಲೆಂದು ರಾಮ
ದೂತನು ತನಗಾದ ಹಿಂಸೆಯನ್ನು ಸಹಿಸಿಕೊಂಡನು. ಆಂಜನೇಯನನ್ನು ರಾಕ್ಷಸರು ಲಂಕಾನಗರಿಯ ಬೀದಿಯಲ್ಲಿ
ಎಳೆದೊಯ್ದರು. ಲಂಕೆಯ ಜನ “ಇವನೇ ಗೂಢಚಾರಿ!” ಎಂದು ಸಾರಿದರು. ರಾಕ್ಷಸಿಯರು ಸೀತೆಗೆ ಈ ಸುದ್ದಿ
ತಿಳಿಸಿದರು. ಸೀತೆ ಅಗ್ನಿದೇವನನ್ನು ಹನುಮಂತನಿಗೆ ಬಾಧಿಸದಂತೆ ಪ್ರಾರ್ಥಿಸಿದಳು.
ಆಗ ವಾಯುದೇವನು ಶೀತಲವಾಗಿ ಬೀಸಿದನು. ಬಾಲದ ಮೇಲೆ ಮಂಜಿನ
ಗಡ್ಡೆಯನ್ನಿಟ್ಟಂತೆ ಹನುಮಂತನಿಗಾಯಿತು.
ಇದು ಶ್ರೀರಾಮನ ಪ್ರಭಾವವೆಂದು ಅವನು ತಿಳಿದು ಮನದಲ್ಲೇ
ರಾಮನನ್ನು ವಂದಿಸಿದನು. ಶ್ರೀರಾಮನ ಮಹಿಮೆ, ತನ್ನ ತಂದೆ ವಾಯು, ಅಗ್ನಿ ತನ್ನನ್ನು
ಬಾಧಿಸುತ್ತಿಲ್ಲ ಎಂದು ಹನುಮಂತನು ನಿರ್ಧರಿಸಿದನು.
ಹನುಮಂತನು ಕಟ್ಟಿದ ಹಗ್ಗಗಳಿಂದ ಬಿಡಿಸಿಕೊಂಡು, ಮತ್ತೆ
ಬೃಹದ್ರೂಪ ತಾಳಿ, ಲಂಕಾನಗರಿಯ ಮಹಾದ್ವಾರದ ಅಗುಳಿಯಿಂದ ರಾಕ್ಷಸರನ್ನು ಬಡಿದು ಕೊಂದನು, ಆತನು
ಸೂರ್ಯನಂತೆ ಪ್ರಜ್ವಲಿಸಿದನು.
ಹನುಮಂತನು ಲಂಕೆಯಲ್ಲಿನ ಮನೆಯಿಂದ ಮನೆಗೆ ಹಾರಿ ಸುಡುತ್ತ
ಬಂದನು. ರಾಕ್ಷಸರ ಗೃಹಗಳು ಭಸ್ಮವಾದವು.
ಕುಂಭಕರ್ಣ, ಶೋಣಿತಾಕ್ಷ, ಮಕರಾಕ್ಷ, ಸೂರ್ಯಶತ್ರು
ಮುಂತಾದ ರಾಕ್ಷಸರ ಭವನಗಳು ಸುಟ್ಟು ಉರಿದವು. ವಿಭೀಷಣನ ಮನೆಯೊಂದನ್ನು ಬಿಟ್ಟು ಉಳಿದ ಮನೆಗಳೆಲ್ಲಾ
ಉರಿದು ಹೋದವು. ಗಾಳಿ ಜೋರಾಗಿ ಬೀಸಿ, ಜ್ವಾಲೆ ಎಲ್ಲೆಡೆ ಹರಡಿತು. ರಾಕ್ಷಸವೀರರು ಸಂಸಾರ
ಸಮೇತರಾಗಿ ಸುಟ್ಟುಹೋದರು. ಉಳಿದವರು ದುಃಖಪಡುತ್ತ ಓಡಿಹೋದರು
ಹೀಗೆ ಲಂಕಾದಹನ ಮಾಡಿ, ಸಾವಿರಾರು ರಾಕ್ಷಸರನ್ನು ಕೊಂದು
ಕಪಿವೀರ ನಾದ ಹನುಮಂತನು ತ್ರಿಕೂಟ ಪರ್ವತ ಶಿಖರವನ್ನೇರಿ ಕುಳಿತನು. ದೈವ-ಋಷಿ-ಗಂಧರ್ವ ಮುನಿಗಳು
ಆನಂದಿತರಾದರು.
ಕಾರ್ಯಸಾಧನೆ
ಲಂಕೆಯ ದಹನದ ನಂತರ ತನ್ನ ಬಾಲವನ್ನು ಸಮುದ್ರದಲ್ಲಿ
ಆದ್ದಿ ಹನುಮಂತನು ಅದಕ್ಕೆ ತಗುಲಿದ ಬೆಂಕಿಯನ್ನಾರಿಸಿದನು. ಆಗ ಸೀತೆಗೇನಾಯಿತೋ ಎಂಬ ಆತಂಕ
ಹನುಮಂತನಿಗಾಯಿತು. ಆದರೆ ಆಕಾಶದಲ್ಲಿ ಚಾರಣರು ಸೀತೆ ಉಳಿದಿರುವುದು ಆಕೆಯ ಪಾತಿವ್ರತ್ಯದ ಫಲವೆಂದು
ಮಾತನಾಡಿಕೊಂಡಿದ್ದು ಆಂಜನೆಯನಿಗೆ ಕೇಳಿಸಿತು. ತಾನು ಸೀತೆಯನ್ನೇ ಪ್ರತ್ಯಕ್ಷವಾಗಿ ನೋಡಿ, ನಂತರ
ಹಿಂತಿರುಗಬೇಕೆಂದು ಆತನು ನಿರ್ಧರಿಸಿದನು.
ಆಂಜನೇಯನು ಶಿಂಶಪಾವೃಕ್ಷದ ಬಳಿ ಬಂದು ಸೀತೆಗೆ
ನಮಸ್ಕರಿಸಿ. “ತಾವು ಉಳಿದದ್ದು ನನ್ನ ಭಾಗ್ಯ” ಎಂದು ಹೇಳಿದನು. ಆಗ ಸೀತೆ ಅವನಿಗೆ “ವೀರಾಗ್ರಣಿ, ನೀನು ಮಹಾಬಲಶಾಲಿಯೂ ಸರಿ, ನೀನು ರಾಮನಿಂದ
ಪರಾಕ್ರಮ ಪ್ರದರ್ಶನವಾಗಿ ನನ್ನನ್ನು ಬಿಡಿಸಬೇಕು” ಎಂದು ಹೇಳಿದಳು. ಸೀತೆಯನ್ನು ಸಮಾಧಾನಪಡಿಸಿದ ಹನುಮಂತನು
ಆಕೆಯ ಅಪ್ಪಣೆ ಪಡೆದು ಹೊರಟನು.
ಹನುಮಂತನು ಅರಿಷ್ಟ ಪರ್ವತವನ್ನೇರಿ ನಿಂತು ಸುತ್ತಲೂ
ಕಣ್ಣು ಹಾಯಿಸಿದನು. ಮನೋಹರವಾದ ಅರಣ್ಯ ಕಾಣಿಸಿತು. ಮಹಾಸಾಗರವನ್ನೊಮ್ಮೆ ನೋಡಿ, ತನ್ನ ದೇಹವನ್ನು
ಬೆಳೆಯಿಸಿದನು, ನಂತರ ಆಕಾಶಕ್ಕೆ ನೆಗೆದನು. ಅವನ ನೆಗೆತದ ವೇಗಕ್ಕೆ
ಪಕ್ಷಿ-ಮೃಗ-ವನಚರ-ವಿದ್ಯಾಧರರು ಬೆದರಿ ಚದುರಿದರು. ಅಪಾರವಾದ ಸಾಗರವನ್ನು ಅನಾಯಾಸವಾಗಿ
ಹಾರಿಹೋಗುತ್ತಿದ್ದನು.
ಬಿಳಿಯ ವಸ್ತ್ರದಾರಿ ಹನುಮಂತನು ಚಂದ್ರನಂತೆ ಮೋಡದಲ್ಲಿ
ಮರೆಯಾಗಿ, ಮತ್ತೆ ಕಾಣಿಸುತ್ತಿದ್ದನು. ಮೈನಾಕ ಪರ್ವತವನ್ನು ಮೈದಡವಿ, ಮಹೇಂದ್ರ ಪರ್ವತವನ್ನು
ದೂರದಿಂದ ನೋಡಿ ಹರ್ಷದಿಂದ ಸಿಂಹನಾದ ಮಾಡಿದನು.
ಕಪಿಗಳ ಭೇಟಿ
ಕಪಿಗಳು ದೂರದಿಂದಲೇ ತಮ್ಮ ಗೆಳೆಯ, ಆಪ್ತಬಂಧು
ಆಂಜನೇಯನನ್ನು ಕಂಡು ಹಿಗ್ಗಿಕಿರಿಚಾಡಿ, ನೆಗೆದಾಡಿದರು, ಮಹೇಂದ್ರಗಿರಿಯ ಮೇಲೆ ಪರ್ವತದಂತೆ
ಹನುಮಂತನು ಆಕಾಶದಿಂದ ಧುಮುಕಿದನು, ಕಪಿವೀರರು ಅವನನ್ನು ಸುತ್ತುವರೆದು ಹಣ್ಣು, ಹಂಪಲು,
ಗಡ್ಡೆ-ಗೆಣಸುಗಳನ್ನು ಕಾಣಿಕೆಯಾಗಿತ್ತರು.
“ಸೀತಾದೇವಿಯನ್ನು ನೋಡಿಬಂದೆ” ಎಂದು ಸಂಕ್ಷೇಪವಾಗಿ ವೃತ್ತಾಂತವನ್ನು ತಿಳಿಸಿದನು.
ಹನುಮಂತನು ನಂತರ ಅಲ್ಲಿನ ಬಂಡೆಯೊಂದರ ಮೇಲೆ ಕುಳಿತನು. ಅಂಗದಾದಿ ವಾನರರು ಅವನನ್ನು ಅಪ್ಪಿ
ಆನಂದದಿಂದ ಉಬ್ಬಿದರು. ತಮ್ಮ ಬಾಲವನ್ನು ನಿಮಿರಿಸಿ ಸಂತೋಷ ತೋರಿಸಿ ಹನುಮಂತನನ್ನು ಸ್ತುತಿಸಿದರು,
ತಮ್ಮ ಪ್ರಾಣದಾತಾ ನೀನೆಂದರು.
ಜಾಂಬವಂತನು, “ಮಗ, ಸೀತೆಯನ್ನು ಹೇಗೆ ನೋಡಿದೆ ರಾವಣನು ಅವಳನ್ನು ಹೇಗೆ
ನೋಡಿಕೊಳ್ಳುತ್ತಿದ್ದಾನೆ? ಎನ್ನಲು, ಆಂಜನೇಯನು ತಾನು ಅಲ್ಲಿಂದ ಹಾರಿದಾಗಿನಿಂದ ಸಡೆದ
ಸಂಗತಿಗಳನ್ನೆಲ್ಲಾ ತಿಳಿಸಿದನು. ಅಂಗದನು ಸೀತೆಯನ್ನು ಕರೆತರಬೇಕೆನ್ನಲು, ಜಾಂಬವಂತನು ದೂತನಿಗೆ
ಸೀತೆಯನ್ನು ಹುಡುಕಬೇಕು ಎಂಬ ಆಜ್ಞೆ ಮಾತ್ರವಿದೆ.
ಶ್ರೀರಾಮನಾಗಲಿ, ಸುಗ್ರೀವನಾಗಲಿ ಆಕೆಯನ್ನು ಕರೆತರಲು
ಹೇಳಲಿಲ್ಲ, ಪುರಷಸಿಂಹನಾದ ರಾಮನೇ ಅದನ್ನು ಮಾಡಲಿ, ಅದೇ ರಾಮನ ಪ್ರತಿಜ್ಞೆ ಅಲ್ಲವೆ?” ಎಂದನು.
ಕಪಿವೀರರ ಆನಂದ
ಕಪಿವೀರರೆಲ್ಲಾ ಆನಂದದಿಂದ ಮನೋಹರವಾದ ಸುಗ್ರೀವನ ಮಧುವನ
ತಲುಪಿದರು. ಸುಗ್ರೀವನ ಸೋದರಮಾವನಾದ ದಧಿಮುಖನು ಅದನ್ನು ರಕ್ಷಿಸುತ್ತಿದ್ದನು. ಅಂಗದನ ಅನುಮತಿ
ಪಡೆದ ಕಪಿಗಳು ಮಧುವನಕ್ಕೆ ಲಗ್ಗೆ ಹಾಕಿ ಮಧುಪಾನ ಮಾಡಿದರು.
ಮದವೇರಿದ ಕಪಿಗಳು ನೆಗೆದಾಡಿದರು. ದಧಿಮುಖನನ್ನು
ಲೆಕ್ಕಿಸದೆ, ಕಚ್ಚಿ, ಒದ್ದು, ಹೊಡೆದು ಮಧುವನವನ್ನೇ ಬರಿದಾಗಿಸಿದರು. ಹನುಮಂತನು ತನ್ನ
ಗೆಳೆಯರಿಗೆ ಮಧುಪಾನ ಮಾಡಿ, ಹಿಗ್ಗಿರೆಂದನು.
ಅಂಗದನೂ ದಧಿಮುಖನನ್ನು ಘಾತಿಸಿದನು. ಇದರಿಂದ ಕುಪಿತನಾದ
ಅವನು ಸುಗ್ರೀವನಲ್ಲಿ ದೂರಿದನು. ಸುಗ್ರೀವನು ಕಪಿಗಳ ಸೀತಾದರ್ಶನ ವಾರ್ತೆಯಿಂದ ಹಿಗ್ಗಿ ಹೀಗೆ
ಮಾಡಿರಬಹುದೆಂದು ಊಹಿಸಿ, ಕಪಿಗಳನ್ನು ತನ್ನಲ್ಲಿಗೆ ಕಳುಹಿಸುವಂತೆ ಹೇಳಿದನು.
ಸುಗ್ರೀವನು ಲಕ್ಷ್ಮಣನಿಗೆ ಈ ವಾರ್ತೆಯನ್ನು ತಿಳಿಸಿ,
ಕಾರ್ಯಸಾಧನೆಯಾಗಿದೆ, ಸೀತೆಯ ಸುದ್ದಿ ತಿಳಿದಿದೆ ಎಂದು ನುಡಿದನು. ಜಾಂಬವಂತ, ಅಂಗದ, ಹನುಮಂತ – ಈ
ವೀರತ್ರಯರಿದ್ದಾಗ ಸೋಲೆಂಬ ಮಾತೇ ಇಲ್ಲವೆಂದನು. ದಧಿಮುಖನು ಅಂಗದನಿಗೆ ಕೂಡಲೇ ಸುಗ್ರೀವನನ್ನು
ಭೇಟಿ ಮಾಡುವಂತೆ ತಿಳಿಸಿದನು. ಅಂಗದನ ಸಲಹೆಯಂತೆ ಕಪಿವೀರರು ಸುಗ್ರೀವನಿದ್ದೆಡೆಗೆ ಹಾರಿದರು.
ಸುಗ್ರೀವನು ಶ್ರೀರಾಮನಿಗೆ ಸಮಾಧಾನ ಹೇಳಿ, ಶುಭವಾರ್ತೆ
ಬಂದಿದೆ, ವಾನರರು ಹರ್ಷಿತರಾಗಿದ್ದಾರೆ. ಹನುಮಂತನು ಹಿಂದಿರುಗಿದನೆಂದರೆ ಜಯ, ಕಾರ್ಯಸಾಧನೆ
ಖಚಿತವೆಂದನು.
ಶ್ರೀರಾಮನ ದರ್ಶನ
ಹನುಮಂತನು ಶ್ರೀರಾಮನಿಗೆ ತಲೆಬಾಗಿ, “ದೇವಿಯು ಕ್ಷೇಮದಿಂದ ಇದ್ದಾಳೆ” ಎಂದು ನಿವೇದಿಸಿದನು. ರಾಮನಿಗೆ ಹನುಮತನೇ ಈ
ಕಾರ್ಯಸಾಧನೆ ಮಾಡಿರುವನೆಂದು ತಿಳಿಯಿತು.
ಶ್ರೀರಾಮನು ಸಂತುಷ್ಟನಾಗಿ ಹೆಮ್ಮೆಯಿಂದ ಹನುಮಂತನನ್ನು
ನೋಡಿದನು. ಆಗ ವಾನರರು ಪ್ರಸ್ತವಣ ಪರ್ವತವನ್ನು ತಲುಪಿ ಸೀತಾ ವೃತ್ತಾಂತವನ್ನು ವಿವರವಾಗಿ
ನಿವೇದಿಸಿದರು. ನಂತರ ಆಂಜನೇಯನೇ ಶ್ರೀರಾಮನಿಗೆ ಸೀತೆಯ ದರ್ಶನ ಮಾಡಿ ಬಂದ ವಿಚಾರವನ್ನು
ವಿವರಿಸಿದನು.
ಸೀತಾದೇವಿಯ ಸಂದೇಶವನ್ನು ತಿಳಿಸಿದ ನಂತರ, ಆಕೆ ಹೇಳಿದ
ವಾಯಸ ವೃತ್ತಾಂತವನ್ನು ನೆನಪಿಸಿ, ಶ್ರೀರಾಮನಿಗೆ ಸೀತಾದೇವಿಯಿತ್ತ ಚೂಡಾಮಣಿಯನ್ನು ಸಮರ್ಪಿಸಿದನು.
ಶ್ರೀರಾಮನು ಚೂಡಾಮಣಿಯನ್ನು ಎದೆಗೊತ್ತಿಕೊಂಡು ಗಳಗಳನೆ ಅತ್ತನು. ಲಕ್ಷ್ಮಣನು ಕಣ್ತುಂಬಿ
ಅತ್ತುಬಿಟ್ಟನು. ಈ ರತ್ನವನ್ನು ನೋಡಿ ನನ್ನ ಹೃದಯವೇ ಕರಗಿದೆ ಎಂದು ಸುಗ್ರೀವನಿಗೆ ಹೇಳಿದನು.
ಹನುಮಂತನಿಂದ ಸೀತೆ ಹೇಳಿದ ಮಾತುಗಳನ್ನು ಮತ್ತೆ ಕೇಳಿ ತಿಳಿದನು. ಹನುಮಂತನು ರಾಮನಿಗೆ
ಸೀತಾಸಂದೇಶವನ್ನು ವಿಸ್ತಾರವಾಗಿ ತಿಳಿಸಿದನು.
ಸೀತೆಯು ತನಗೆ ಶ್ರೀರಾಮನೇ ರಾವಣನ ಬಂಧನದಿಂದ ಬಿಡುಗಡೆ
ಮಾಡಲೆಂದು ತಿಳಿಸಿದಳೆಂದು ಹೇಳಿದ ಅಂಜನಾಸುತನು, “ದೇವಿ ಕುಶಲದಿಂದ ಇದ್ದಾಳೆ” ಎಂದು ಮತ್ತೆ ಹೇಳಿದನು.
ಹನುಮಂತನು ತಾನು ಸೀತಾದೇವಿಗೆ ಶ್ರೀರಾಮನ ಪರಾಕ್ರಮ,
ಕಪಿಸೇನಾಬಲ, ಲಕ್ಷ್ಮಣನ ಪರಾಕ್ರಮದ ಬಗ್ಗೆ ತಾನು ಮತ್ತೆ ನೆನಪಿಸಿದೆ, ವಿರಹ ದುಃಖದಿಂದ ಬಳಲಿದ
ಆಕೆಗೆ ಇದರಿಂದ ಮನಸ್ಸಿಗೆ ಶಾಂತಿ ಲಭಿಸಿದೆ, ಆಕೆ ಕಾತುರದಿಂದ ನಿಮ್ಮನ್ನು
ನೀರೀಕ್ಷಿಸುತ್ತಿದ್ದಾಳೆಂದು ಹೇಳಿದೆನೆಂದು ಧೈರ್ಯ ನೀಡಿದನು ಎಂಬಲ್ಲಿಗೆ ಶ್ರೀಮದ್ವಾಲ್ಮೀಕಿ
ರಾಮಾಯಣದ ಸುಂದರ ಕಾಂಡವು ಸಂಪೂರ್ಣವಾಯಿತು.
(ಸಕಲ ಜನತೆಗೂ ಒಲಿತಾಗಲಿ, ಸಜ್ಜನರಿಗೆ, ಸಕಲ ಜೀವಿಗಳಿಗೂ
ಶುಭವಾಗಲಿ)
No comments:
Post a Comment