ಹರಿ ಓಂ
ಆಧುನಿಕ ಮನುಷ್ಯ
ಮನಶ್ಯಾಂತಿ ಬೇಕು ಎನ್ನುತ್ತಾನೆ. ಇಂದು ಅವನ ಮನಶ್ಯಾಂತಿ ತುಂಬಾ ಕದಡಿರುವುದಕ್ಕೆ ಅವನೇ ಕಾರಣ.
ಶಾಂತಿ ಕೆಡುವುದಕ್ಕೆ ಅನುವಾದಂತಹ ವಾತಾವರಣವನ್ನು ತಾನೇ ನಿರ್ಮಾಣ ಮಾಡಿ ತನ್ನೊಳಗೂ ಶಾಂತಿ
ಇರಬೇಕು, ಹೊರಗೂ ಶಾಂತಿಯಿರಬೇಕು ಎಂದು ನಿರೀಕ್ಷಿಸಿದರೆ ಹೇಗೆ? ಕೈಯನ್ನು ಬೆಂಕಿಯಲ್ಲಿಟ್ಟು ಸುಡಬಾರದು ಎಂದು
ಅಪೇಕ್ಷಿಸಿದರೆ ಹೇಗೊ ಹಾಗೆ.
ಶಾಂತಿ ಕದಡುವುದಕ್ಕೆ ಹಲವಾರು ಕಾರಣಗಳಿರಬಹುದು. ಇಂತಹ ಸಮಯದಲ್ಲೆ ಗೀತೆ ನಮ್ಮ ನೆರವಿಗೆ
ಬರುತ್ತದೆ. ಸಾವೊ, ಕಾಯಿಲೆಯೋ ಕಾರಣವಾಗಿ ಮನಶ್ಯಾಂತಿ ಕೆಟ್ಟಿದ್ದರೆ ಆತ್ಮದ ಅಮರತೆಯನ್ನು ಸಾರುವ
ಗೀತೆ ಮನಸ್ಸಿಗೆ ಧೈರ್ಯ ಸಮಾಧಾನಗಳನ್ನು ನೀಡುತ್ತದೆ, ಸಹಿಸುವ ಶಕ್ತಿಯನ್ನು ಕೊಡುತ್ತದೆ. -ಸ್ವಾಮಿ ಹರ್ಷಾನಂದ
ಹದಿನೆಂಟು
ಅಧ್ಯಾಯಗಳಷ್ಟು ವಿಸ್ತಾರವಾಗಿರುವ ಭಗವದ್ಗೀತೆ ಅದಕ್ಕೂ ದೊಡ್ಡದಾದ ಮಹಾಭಾರತ ಕಾವ್ಯದ ಕಥೆಯಲ್ಲಿ
ಅವಿಭಾಜ್ಯವಾಗಿ ಸೇರಿರುವ ಭಾಗವಾಗಿದೆ. ಕುರುಕ್ಷೇತ್ರ ರಣರಂಗದ ಮಧ್ಯೆ, ಯುದ್ಧ ಆರಂಭವಾಗುವ
ಮುಂಚೆ, ಶ್ರೀಕೃಷ್ಣ-ಅರ್ಜುನರ ಸಂವಾದವಾಗಿ ಈ ಕಾವ್ಯಮಯವಾದ ಗೀತೆ ಹೊಮ್ಮಿದೆ.
ಸಂಕಟ ಪರಿಸ್ಥಿತಿಯಲ್ಲಿ
ವಿಚಲಿತರಾಗುವುದು, ಏನುಮಾಡಬೇಕೆಂದು ತೋಚದೆ ಗೊಂದಲಕ್ಕೊಳಗಾಗುವುದು ಮಾನವರ ಸಹಜಸ್ವಭಾವ. ಅರ್ಜುನ
ಒಳಗಾದ ವಿಷಾದಭಾವ ನಮಗೂ ನಮ್ಮ ಬದುಕಿನಲ್ಲಿ ಒಂದಲ್ಲ ಒಂದು ಸಲ ಉಂಟಾಗುವಂತಹದೇ. ಅರ್ಜುನ ಎತ್ತುವ
ಪ್ರಶ್ನೆಗಳು, ಪಡುವ ಆತಂಕ ಸಂದೇಹಗಳು ಮತ್ತು ಅವುಗಳಿಗೆ ಶ್ರೀಕೃಷ್ಣನು ಕೊಡುವ ಉತ್ತರಗಳು,
ಪರಿಹಾರಗಳು ನಮ್ಮ ಬದುಕಿಗೂ ಬಹು ಸುಸಂಗತವಾಗಿರುವುದು ಮಾತ್ರವಲ್ಲ, ಇಂದಿನ ಕಾಲಕ್ಕೂ ಸಹ ಅತ್ಯಂತ
ಪ್ರಸ್ತುತವಾಗಿದೆ.
ಸಾಂಪ್ರದಾಯಿಕ
ಭಾಷ್ಯಕಾರರಲ್ಲಿ ಮೊಟ್ಟ ಮೊದಲಿಗರಾದ ಶಂಕರಾಚಾರ್ಯರು ಆಯ್ದಿರುವ ಭಗವದ್ಗೀತಾ ಪಾಠದ ಆಧಾರದ ಮೇಲೆ,
ವ್ಯಾಪಕವಾಗಿ ಒಪ್ಪಿತವಾಗಿರುವ ಈ ಪಾಠ ಸಿದ್ದವಾಗಿದೆ. ಇದರಲ್ಲಿ 700 ಶ್ಳೋಕಗಳನ್ನೊಳಗೊಂಡ 18
ಅಧ್ಯಾಯಗಳಿವೆ.
ಅಧ್ಯಾಯ 1
ಅರ್ಜುನ ವಿಷಾದ ಯೋಗ – 47 ಶ್ಲೋಕಗಳು
ಅರಮನೆಯೊಳಗೇ ಕುಳಿತು
ಕುರುಕ್ಷೇತ್ರ ರಣರಂಗದಲ್ಲಿ ನಡೆಯುವುದೆಲ್ಲವನ್ನೂ ನೋಡಬಲ್ಲ ದಿವ್ಯದೃಷ್ಟಿಯನ್ನು ಪಡೆದಿದ್ದ
ಮಿತ್ರ ಸಂಜಯನನ್ನು, ರಣರಂಗದಲ್ಲಿ ಏನಾಗುತ್ತಿದೆಯೆಂಬುದೆಲ್ಲವನ್ನೂ ತನಗೆ ಹೇಳಬೇಕೆಂದು, ಕೌರವರ
ತಂದೆ ಕುರುಡ ಧೃತರಾಷ್ಟ್ರಾ ಮಹಾರಾಜನು ಕೇಳುತ್ತಾನೆ. ದುರ್ಯೋಧನನು ಗುರು ದ್ರೋಣಾಚಾರ್ಯರ ಬಳಿಗೆ
ಹೋಗಿ ಉಭಯ ಪಕ್ಷಗಳ ವೀರಾಧಿವೀರರನ್ನು ತೋರಿಸಿ ವರ್ಣಿಸುತ್ತಿರುವನು ಎಂದು ಹೇಳುತ್ತ ಸಂಜಯನು
ಆರಂಭಿಸುತ್ತಾನೆ. ಮುಂದುವರಿಸುತ್ತ ಸಂಜಯ ಹೀಗೆ ಹೇಳುತ್ತಾನೆ: ಆಷ್ಟರಲ್ಲಿ ಕೌರವ ಸೇನಾಧಿಪತಿಯಾದ ಪಿತಾಮಹ ಭೀಷ್ಮರು
ಯುದ್ಧಾರಂಭದ ಸೂಚನೆಯಾಗಿ ತಮ್ಮ ಶಂಖವನ್ನು ಊದುತ್ತಾರೆ. ಇದನ್ನು ಅನುಸರಿಸಿ ಪಾಂಡವರೂ ಮತ್ತು
ಮಿಕ್ಕೆಲ್ಲ ವೀರರೂ ತಮ್ಮ ತಮ್ಮ ಶಂಖಗಳನ್ನು ಊದುತ್ತಾರೆ. ಪಾಂಡವವೀರನಾದ ಅರ್ಜುನನ ಕೋರಿಕೆಯಂತೆ
ಅವನ ಸಾರಥಿ ಶ್ರೀಕೃಷ್ಣನು ರಥವನ್ನು ಉಭಯಸೇನೆಗಳ
ಮಧ್ಯೆ, ಭೀಷ್ಮ-ದ್ರೋಣರ ಎದುರಿನಲ್ಲಿ ತಂದು ನಿಲ್ಲಿಸುತ್ತಾನೆ. ಪಿತಾಮಹ ಭೀಷ್ಮರನ್ನೂ
ಗುರು ದ್ರೋಣಾಚಾರ್ಯರನ್ನೂ ಹಾಗೆಯೇ ಯುದ್ಧ ಸನ್ನದ್ಧರಾಗಿ ನಿಂತಿದ್ದ ಇತರ ವೀರರನ್ನೂ ನೋಡಿದ
ಅರ್ಜುನನು ಭಯಶೋಕಗಳಿಂದ ಕುಸಿಯುತ್ತಾನೆ. ತನ್ನ ಕರುಣಾಜನಕವಾದ ಸ್ಥಿತಿಯನ್ನು ಶ್ರೀಕೃಷ್ಣನಿಗೆ
ವಿವರಿಸುತ್ತಾನೆ. ಬಂಧು ಬಾಂಧವರನ್ನೆಲ್ಲ ಕೊಲ್ಲುವ ಈ ಯುದ್ಧದಿಂದ ಸಾಮಾಜಿಕ ವ್ಯವಸ್ಥೆ
ರಾಜ್ಯಾಡಳಿತಗಳೆಲ್ಲ ಸಂಪೂರ್ಣವಾಗಿ ನಾಶವಾಗುವುದಲ್ಲದೆ ಆಗಬಹುದಾದ ಇನ್ನೂ ಬೇರೆ ಬೇರೆ
ದುಷ್ಟರಿಣಾಮಗಳನ್ನು ಬಣ್ಣಿಸುತ್ತ ಇಂಥ ಯುದ್ಧ ಬೇಡವೆಂದು ವಾದಿಸುತ್ತಾನೆ. ತನ್ನ
ಶಸ್ತ್ರಾಸ್ತ್ರಗಳನ್ನೆಲ್ಲ ಕೆಳಗಿಟ್ಟು ರಥದಲ್ಲಿ ಸುಮ್ಮನೆ ಕುಳಿತುಬಿಡುತ್ತಾನೆ.
ಅಧ್ಯಾಯ 2
ಸಾಂಖ್ಯಯೋಗ - 72 ಶ್ಲೋಕಗಳು
ಶ್ರೀಕೃಷ್ಣನು ಮೊದಲು
ಅರ್ಜುನನ ಮಂಪರವನ್ನು ಹೋಗಲಾಡಿಸಲೆಂದು, ಅಂತಹ ವಿಷಮ ಸನ್ನಿವೇಶದಲ್ಲಿ ಮಾನಸಿಕ
ದೌರ್ಬಲ್ಯಕ್ಕೊಳಗಾಗುವುದು ಮತ್ತು ಆನಾರ್ಯವರ್ತನೆ ಎಂದೂ, ಅರ್ಜುನನಂತಹ ಲೋಕೈಕ ವೀರನಿಗೆ
ತಕ್ಕದಲ್ಲವೆಂದೂ ಬೈದು ಬುದ್ಧಿ ಹೇಳುತ್ತಾನೆ. ಮನಸ್ಸಿಗೆ ಕವಿದ ಮಂಕನ್ನು ಕೊಡವಿ ಹಾಕಿ
ಕಾರ್ಯೋನುಮಖನಾಗುವಂತೆ ಒತ್ತಾಯಿಸುತ್ತಾನೆ. ಅಂತಹ ನಿಷ್ಠುರವಾದ ಮಾತುಗಳಿಂದಲೂ ಅರ್ಜುನ
ಎಚ್ಚರಗೊಳ್ಳುವುದಿಲ್ಲ. ಸಮಸ್ತ ಕುಲನಾಶಕವಾದ ಯುದ್ಧವನ್ನು ಮಾಡಲಾರೆನೆಂದೂ ಪೂಜನೀಯರಾದ
ಗುರುಹಿರಿಯರನ್ನೂ ಕೊಲ್ಲಬೇಕಾದ ಯುದ್ಧದಿಂದ ದೂರವಿರುವುದಾಗಿಯೂ ತನ್ನ ಮನೋನಿರ್ಧಾರವನ್ನು
ವ್ಯಕ್ತಪಡಿಸುತ್ತಾನೆ. ಯಾವುದು ಸರಿ, ಯಾವುದು ಧರ್ಮ ಎಂದು ತಿಳಿಯಲಾರದೆ ಗೊಂದಲದಲ್ಲಿ ಬಿದ್ದಿರುವ
ತನ್ನನ್ನು ಶ್ರೇಯಸ್ಕರವಾದ ಮಾರ್ಗದಲ್ಲಿ ನಡೆಸಬೇಕೆಂದು ಅತ್ಯಂತ ದೈನ್ಯದಿಂದ ಬೇಡಿಕೊಳ್ಳುತ್ತಾನೆ.
ಅರ್ಜುನನಿಗುಂಟಾಗಿರುವ ಭ್ರಮೆ, ಗೊಂದಲ, ಕೇವಲ ಕೆಲವು ಸ್ಥೂಲವಾದ ಬುದ್ಧಿ ಮಾತುಗಳಿಂದ ಸುಲಭವಾಗಿ
ಹೋಗುವಷ್ಟು ಲಘುವಾಗಿಲ್ಲ, ತುಂಬಾ ಆಳಕ್ಕಿಳಿದಿರುವ ಅವುಗಳ ಮೂಲವನ್ನೇ ಕಿತ್ತುಹಾಕಬೇಕಾಗಿದೆ ಎಂದು
ಅರಿತ ಶ್ರೀಕೃಷ್ಣ ತನ್ನ ಅಮರವಾದ ಹಿತೋಪದೇಶವನ್ನು ಆರಂಭಿಸುತ್ತಾನೆ, ರೋಗವನ್ನು ಸಮೂಲವಾಗಿ
ತೆಗೆದು ಹಾಕುವುದಕ್ಕೆ ನೀಡಬೇಕಾದ ಸೂಕ್ತ ಚಿಕಿತ್ಸೆಯೆಂದರೆ ಸಮಗ್ರ ಬದುಕಿನ ಪೂರ್ಣ ಚಿತ್ರವನ್ನು
ತೋರಿಸಿ ದೃಷ್ಟಿಯನ್ನು ಸರಿಪಡಿಸುವುದು, ಅಂದರೆ ಸಮಸ್ತ ಜೀವನ ಧರ್ಮವನ್ನು ಅರ್ಥಮಾಡಿಸುವುದು.
ಯಾರಿಗಾಗಿ
ಶೋಕಿಸಬೇಕಾಗಿಲ್ಲವೊ ಅಂಥವರಿಗಾಗಿ ಅರ್ಜುನ ಶೋಕಿಸುತ್ತಿದ್ದಾನೆ. ಆ ರಣರಂಗದಲ್ಲಿ ನೆರೆದವರೂ
ಸೇರಿದಂತೆ ಸಕಲ ಮಾನವರೂ ದಿಟವಾಗಿ ಅಮೃತಾತ್ಮರು. ಸಾವು, ನೋವು, ಸೊರಗುವಿಕೆ ಶರೀರಕ್ಕೆ
ಸಂಬಂಧಿಸಿದವುಗಳು, ಅತ್ಮಕ್ಕಾಗಲಿ ಚೈತನ್ಯಕ್ಕಾಗಲಿ ಸಂಬಂಧಿಸಿದವುಗಳಲ್ಲ. ದೇಹವೊಂದೇ ಸತ್ಯ,
ದೇಹದೊಂದಿಗೆ ಹುಟ್ಟುತ್ತೇವೆ, ಸಾವಿನಲ್ಲಿ ದೇಹವಳಿದು ಹೋಗುತ್ತದೆ, ಏನೂ ಉಳಿಯುವುದಿಲ್ಲ, ಎಂಬ ಮಾತನ್ನೇ ಒಪ್ಪಿಕೊಂಡರೂ ಈ ಅನಿವಾರ್ಯವೂ
ಅಪರಿಹಾರ್ಯವೂ ಆದ ವಿಷಯಕ್ಕಾಗಿ ಶೋಕಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಹೀಗಿರುವಾಗ ಧರ್ಮ
ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವವರು ಧರ್ಮಕ್ಕಾಗಿ ಯುದ್ಧ ಮಾಡಿ ಗೆಲ್ಲಬೇಕು, ಇಲ್ಲಾ
ಧರ್ಮಕ್ಕಾಗಿ ರಣರಂಗದಲ್ಲಿ ಹೋರಾಡುತ್ತ ಮಡಿಯಬೇಕು. ಇದೇ ಅಂತಹ ವೀರರ ಪರಮ ಪವಿತ್ರವಾದ ಕರ್ತವ್ಯ,
ಮೂರು ಲೋಗದ ಗಂಡ, ಅದ್ವಿತೀಯಶೂರ, ಪರಾಕ್ರಮಿ ಎಂಬ ಪ್ರಶಸ್ತಿ ಪಡೆದ ಅರ್ಜುನನಂತಹ ವೀರನಿಗೆ,
ಹೇಡಿಯಂತೆ ರಣರಂಗದಿಂದ ಪಲಾಯನ ಮಾಡಿದ, ಎಂಬ ಅಪಖ್ಯಾತಿಗಿಂತ ಮರಣವೇ ಲೇಸು, ಈಗ ಏನಾದರೂ ಅವನು
ಯುದ್ಧದಿಂದ ಹಿಂದಕ್ಕೆ ಸರಿದರೆ ಖಂಡಿತ ಅಂತಹ ಅಪಕೀರ್ತಿ ಬಂದೇ ಬರುತ್ತದೆ.
ಸ್ವಾರ್ಥಪ್ರೇರಿತವಾದ
ಕರ್ಮ ಬಂಧನಕ್ಕೆ ಕಾರಣವಾಗುತ್ತದೆ. ಫಲಾಪೇಕ್ಷೆಯಿಲ್ಲದೆ ಸಮಚಿತ್ತದಿಂದ ಮಾಡುವ ನಿಷ್ಕಾಮಕರ್ಮ
ಮುಕ್ತಿಗೆ ಕಾರಣವಾಗುತ್ತದೆ. ಕರ್ಮಯೋಗ ಎಂದರೇ ಇದೇ. ಕರ್ಮಕ್ಕಿಂತ ಬುದ್ಧಿ ಶ್ರೇಷ್ಠವಾದುದು.
ಬುದ್ಧಿ ವಿವೇಚನೆಗಳಿಂದ ಕರ್ಮಯೋಗದಲ್ಲಿ ತೊಡಗುವವನನ್ನು ಸ್ಥಿತಪ್ರಜ್ಞನೆಂದು ಕರೆಯಬಹುದು.
ಸರ್ವಶ್ರೇಷ್ಠ ಮಾನವನಾದ ಸ್ಥಿತಪ್ರಜ್ಞನ ಕರ್ಮಯೋಗವನ್ನು ಬುದ್ಧಿ ಯೋಗವೆಂದೂ ಕರೆಯಬಹುದು.
ಹೀಗೆಂದು ಶ್ರೀಕೃಷ್ಣ ತಿಳಿಸಿದಾಗ ಅರ್ಜುನನು ಸ್ಥಿತಪ್ರಜ್ಞನೆಂದರೆ ಯಾರು? ಅವನ ಲಕ್ಷಣಗಳೇನು? ಎಂಬುದನ್ನು ದಯವಿಟ್ಟು ಸ್ವಲ್ಪ ವಿವರವಾಗಿ ತಿಳಿಸಬೇಕು
ಎಂದು ಕೇಳಿಕೊಳ್ಳುತ್ತಾನೆ. ಆಗ ಶ್ರೀಕೃಷ್ಣನು ಜ್ಞಾನಿಯಾದವನ ಮಾದರಿ ವ್ಯಕ್ತಿತ್ವವನ್ನು
ವರ್ಣಿಸುತ್ತಾನೆ. ಸ್ಥಿತಪ್ರಜ್ಞನಾದವನು ಎಲ್ಲಾ ಆಸೆಗಳನ್ನೂ ತೊರೆದು ಸರ್ವದಾ
ಆತ್ಮಸಂತೃಪ್ತನಾಗಿರುತ್ತಾನೆ. ನೋವು, ನಲಿವು, ಸುಖ, ದುಃಖ ಅವನ ಮನಸ್ಸನ್ನು ಕದಡುವುದಿಲ್ಲ. ಅವನ
ರಾಗ, ಭಯ, ಕೋಪರಹಿತನಾಗಿ ಸರ್ವದಾ ಸಮಚಿತ್ತದಲ್ಲಿ ಇರುತ್ತಾನೆ. ಪರಮ ಸತ್ಯದ
ಅರಿವಿನಿಂದ ಸದಾ ಜಾಗ್ರತನಾಗಿರುತ್ತಾನೆ. ಪ್ರಾಪಂಚಿಕ ಜೀವನದ ಬಗ್ಗೆ ಉದಾಸೀನನಾಗಿರುತ್ತಾನೆ. ತನ್ನ
ಜೀವಿತದ ಕೊನೆಯವರೆಗೂ ಆತ ಸುಸ್ಥಿರವಾಗಿ ಬ್ರಾಹ್ಮೀಸ್ಥಿತಿಯಲ್ಲಿರುತ್ತಾನೆ.
ಅಧ್ಯಾಯ 3
ಕರ್ಮಯೋಗ - 43 ಶ್ಲೋಕಗಳು
ಜ್ಞಾನ ಮುಖ್ಯವೊ? ಕರ್ಮ ಮುಖ್ಯವೊ? – ಎಂಬ ಗೊಂದಲ ಕ್ಕೊಳಗಾದ ಅರ್ಜುನ ಈ ಎರಡರಲ್ಲಿ ಯಾವುದು ತನಗೆ ಹೆಚ್ಚು
ಶ್ರೇಯಸ್ಕರ ಎಂದು ಕೇಳುತ್ತಾನೆ. ಶ್ರೀಕೃಷ್ಣನು, ಜ್ಞಾನಯೋಗ ಮತ್ತು ಕರ್ಮಯೋಗ ಎರಡೂ ಬಹು
ಪೂರ್ವಕಾಲದಿಂದಲೂ ಇರುವ ರಾಜ ಮಾರ್ಗಗಳೇ ಎಂದು ಅವುಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆಯನ್ನು
ಕೊಡುತ್ತಾನೆ. ಮೊದಲನೆಯದರಲ್ಲಿ ಎಲ್ಲ ಕರ್ಮಗಳ ಪರಿತ್ಯಾಗ ಆವಶ್ಯಕ, ಅದರೆ ಅದು ನಿಜಕ್ಕೂ ಕೆಲವೇ
ಜನರಿಗೆ ಮಾತ್ರ ಸಾಧ್ಯ. ಲೋಕಹಿತಕ್ಕಾಗಿ ಮನೋನಿಗ್ರಹದಿಂದ ತಮ್ಮ ಕರ್ತವ್ಯಗಳನ್ನು ಮಾಡುವುದೇ ಬಹಳ
ಜನರಿಗೆ ಹೆಚ್ಚು ಸುಲಭವಾದ ಮತ್ತು ಉತ್ತಮವಾದ ದಾರಿ. ಸೃಷ್ಟಿಕರ್ತನು ಪ್ರವರ್ತಿಸಿರುವ ಈ ಜಗತ್
ಚಕ್ರದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಪಾಲಿನ ಕರ್ತವ್ಯಗಳನ್ನು ಮಾಡಿದರೇನೇ ಲೋಕಜೀವನ ಸುಗಮವಾಗಿ
ನಡೆಯುವುದು. ಕರ್ಮ ಮಾಡುವುದು ಯಾವ ದೃಷ್ಟಿಯಿಂದಲೂ ಕೀಲಾದುದಲ್ಲ. ಪೂರ್ವದಲ್ಲಿ ಜನಕ
ಮಹಾರಾಜನಂತಹ ರಾಜರ್ಷಿಗಳೇ ಕರ್ಮನಿರತರಾಗಿದ್ದುಕೊಂಡು ಪರಿಪೂರ್ಣಾವಸ್ಥೆಯನ್ನು ಮುಟ್ಟಿದರು.
ಅರ್ಜುನನಂತಹ ಸಮಾಜದ ಮುಂದಾಳುಗಳು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ಮಾಡುತ್ತ, ಕಡಿಮೆ
ತಿಳಿವಳಿಕೆಯುಳ್ಳವರಿಗೆ ದಾರಿ ತೋರಿಸಬೇಕು. ಕರ್ಮದ ಬಗ್ಗೆ ಸರಿಯಾದ ಮನೋಧರ್ಮವನ್ನು ಬೆಳೆಸಿಕೊಂಡು
ಎಲ್ಲ ಕರ್ಮಗಳನ್ನೂ ಈಶ್ವರಾರ್ಪಣ (ಅಂದರೆ ಸಾಕ್ಷಾತ್ ಭಗವಂತನಾದ ಶ್ರೀಕೃಷ್ಣನಿಗೆ ಅರ್ಪಣ ಮಾಡುವ) ಭಾವದಿಂದ
ಮಾಡಿದುದಾದರೆ ಕರ್ಮದಲ್ಲಿ ತೊಡಗಿಯೂ ಅದರಿಂದ ಕಲುಷಿತರಾಗದೆ ಇರಬಹುದು. ತನ್ನ ಪಾಲಿಗೆ ಬಂದ
ಕರ್ತವ್ಯವನ್ನು ಮಾಡುವುದು ಎಷ್ಟೇ ಅಸಮರ್ಪಕವಾಗಿದೆ ಎಂದು ತೋರಿದರೂ ಅದು, ತಾನು ಮಾಡಬೇಕಾದ
ಕರ್ತವ್ಯವನ್ನು ಬಿಟ್ಟು ಪರರ ಕರ್ತವ್ಯಗಳನ್ನು ಮಾಡಲು ಹೋಗುವುದಕ್ಕಿಂತ ಲೇಸು. ಸ್ವಾರ್ಥಪರವಾದ
ಕಾಮಕ್ರೋದಗಳೇ ಸಾಮನ್ಯವಾಗಿ ಮಾಡಬೇಕಾದ ಕೆಲಸವನ್ನು ಕೆಡಿಸಿ ದುರ್ಮಾರ್ಗಕ್ಕೆ ಹೋಗುವಂತೆಯೂ
ಪ್ರೇರಿಸುತ್ತವೆ. ಇಂದ್ರಿಯನಿಗ್ರಹ ಹಾಗೂ ಮನಸ್ಸನ್ನು ಆತ್ಮಸ್ತರಕ್ಕೇರಿಸುವುದರ ಮೂಲಕ
ಕಾಮ-ಕ್ರೋಧಗಳನ್ನು ಗೆಲ್ಲಬೇಕು.
ಅಧ್ಯಾಯ 4
ಜ್ಞಾನಯೋಗ - 42 ಶ್ಲೋಕಗಳು
ಶ್ರೀಕೃಷ್ಣನು ಬಹುಕಾಲದ ಹಿಂದೆ ಎಂದರೆ ಆದಿಯಲ್ಲಿ, ತಾನು ಈ ಕರ್ಮಯೋಗ
ವಿಚಾರವನ್ನು ವಿವಸ್ವಂತನಿಗೆ ಉಪದೇಶಿಸಿದುದನ್ನೂ ಅದನ್ನು ವಿವಸ್ವಂತನು ಮನುವಿಗೂ, ಮನು
ಇಕ್ಷ್ವಾಕುವಿಗೂ ಭೋಧಿಸಿದ್ದನ್ನೂ ಸ್ಮರಿಸಿಕೊಳ್ಳುತ್ತ ಅರ್ಜುನನಿಗೆ ತಿಳಿಸುತ್ತಾನೆ. ಆದರೆ
ಮಧ್ಯೆ ಅನೇಕ ವರ್ಷಗಳ ಕಾಲ ಈ ಯೋಗಸಂಪ್ರದಾಯ ಆಚರಣೆ ತಪ್ಪಿನಷ್ಟವಾಗಿತ್ತೆಂದೂ ಹೇಳುತ್ತಾನೆ. ಈಗಿನ
ಕಾಲದವನಾದ ಶ್ರೀಕೃಷ್ಣನು ಅತ್ಯಂತ ಪ್ರಾಚೀನಕಾಲದ ವಿವಸ್ವಂತ, ಮನು ಮುಂತಾದವರಿಗೆ ಬೋಧಿಸಿದ್ದು
ಹೇಗೆ ಎಂಬ ತನ್ನ ಶಂಕೆಯನ್ನು ಅರ್ಜುನ ಎತ್ತುತ್ತಾನೆ.
ಅದಕ್ಕೆ ಶ್ರೀಕೃಷ್ಣನು, ತಾನು ಅರ್ಜುನನೂ ಹಿಂದೆ ಬೇಕಾದಷ್ಟು ಸಲ
ಜನ್ಮವೆತ್ತಿರುವುದಾಗಿಯೂ ತನಗೆ ಅವುಗಳ ನೆನಪೆಲ್ಲ ಚೆನ್ನಾಗಿ ಇದೆ, ಆದರೆ ಅರ್ಜುನನಿಗೆ ಇಲ್ಲ,
ಅಷ್ಟೇ ವ್ಯತ್ಯಾಸ ಎಂದೂ ಹೇಳುತ್ತಾನೆ. ಈ ಸಂದರ್ಭದಲ್ಲಿಯೇ ಶ್ರೀಕೃಷ್ಣನು ತಾನೇ ಸಾಕ್ಷಾತ್
ಭಗವಂತ, ಯಾವ ಯಾವಾಗ ಧರ್ಮ ಖಿಲವಾಗಿ ಅಧರ್ಮದ ಕೈ ಮೇಲಾಗುತ್ತದೆಯೊ ಆವಾಗಲೆಲ್ಲ, ಧರ್ಮವನ್ನು
ರಕ್ಷಿಸಲು, ಸಮತೋಲನವನ್ನು ಪುನಃ ನೆಲೆಗೊಳಿಸಲು ತಾನು ಅವತರಿಸುವುದಾಗಿ ರಹಸ್ಯವನ್ನು
ಹೊರಗೆಡಹುತ್ತಾನೆ. ತನ್ನ ಈ ಆವತಾರ ರಹಸ್ಯವನ್ನು ಯಾರೊಬ್ಬರು ತಿಳಿದರೂ ಅಂತಹವರು ಮುಕ್ತಿಯನ್ನು
ಪಡೆಯುತ್ತಾರೆ. ಭಕ್ತಿ-ಜ್ಞಾನ ಮುಖೇನ ಯಾರು ತನ್ನಲ್ಲಿಗೆ ಶರಣುಬರುವೊ ಅಂತಹವರ ಪ್ರಾರ್ಥನೆಗೆ
ಹಾಗೂ ಮನೋಧರ್ಮಕ್ಕೆ ಅನುಗುಣವಾಗಿ ಭಗವಂತನಾದ ತಾನು ತಕ್ಕ ರೀತಿಯಲ್ಲಿ ಓಗೊಡುವುದಾಗಿ
ಶ್ರೀಕೃಷ್ಣನು ತಿಳಿಸುತ್ತಾನೆ. ಹಾಗೆಯೇ ತಾನು ಜನರ ಗುಣಗಳಿಗೆ ಮತ್ತು ವೃತ್ತಿಗಳಿಗೆ ಅನುಸಾರವಾಗಿ
ಸಮಾಜವನ್ನು ನಾಲ್ಕು ವರ್ಣಗಳಾಗಿ ವಿಭಾಗಮಾಡಿರುವುದಾಗಿಯೂ ಪ್ರಾಸಂಗಿಕವಾಗಿ ಹೇಳುತ್ತಾನೆ.
ಅನಂತರ ಕರ್ಮಯೋಗವನ್ನು ವಿವರಿಸುತ್ತಾನೆ. ಅದರ ಭಾಗವಾದ ‘ಯಜ್ಞ’ ಎಂಬ ಪದದ ಅರ್ಥವ್ಯಾಪ್ತಿಯನ್ನು ನಾನಾ ಬಗೆಯ
ಯಜ್ಞಗಳನ್ನು ವರ್ಣಿಸುವುದರ ಮೂಲಕ, ಮಾಡಿ ಕೊಡುತ್ತಾನೆ. ಭೌತಿಕ ವಸ್ತು-ದ್ರವ್ಯಗಳಿಂದ ಮಾಡುವ
ಯಜ್ಞಕ್ಕಿಂತ ಜ್ಞಾನಯಜ್ಞವೇ ಶ್ರೇಷ್ಠವೆಂದು ಹೇಳುತ್ತಾನೆ. ಜ್ಞಾನಕ್ಕೆ ಸದೃಶವಾದುದು ಬೇರೆ
ಯಾವುದೂ ಇಲ್ಲ. ಜ್ಞಾನ ತುಂಬಾ ಮುಖ್ಯವಾದುದು – ಹೀಗೆಂದು ಹೇಳುತ್ತ ಶ್ರೀಕೃಷ್ಣನು ಅರ್ಜುನನಿಗೆ
ಮಹಾ ಆಚಾರ್ಯರ ಬಳಿಗೆ, ಗುರುಗಳ ಬಳಿಗೆ ಹೋಗಿ ಜ್ಞಾನವನ್ನು ಪಡೆಯಲು ಬೋಧಿಸುತ್ತಾನೆ.
ಅದ್ಯಾಯ 5
ಕರ್ಮಸಂನ್ಯಾಸಯೋಗ - 29 ಶ್ಲೋಕಗಳು
ಮತ್ತೆ ಗೊಂದಲಕ್ಕೆ ಬಿದ್ದ ಅರ್ಜುನ, ಕರ್ಮಸಂನ್ಯಾಸ,
ಕರ್ಮಯೋಗ-ಇವೆರಡರಲ್ಲಿ ತನಗೆ ಶ್ರೇಯಸ್ಕರವಾದ ಮಾರ್ಗ ಯಾವುದೆಂದು ತಿಳಿಸಬೇಕೆಂದು
ಶ್ರೀಕೃಷ್ಣನನ್ನು ಕೇಳುತ್ತಾನೆ. ಎರಡೂ ಕಟ್ಟಕಡೆಗೆ ನಿಶ್ಯ್ರೇಯಸ ಅಥವಾ ಆನಂದಸ್ಥಿತಿಗೆ ದಾರಿ
ಮಾಡುತ್ತವೆಯಾದರೂ ಅರ್ಜುನನು ಕರ್ಮಯೋಗವನ್ನೇ ಆರಿಸಿಕೊಳ್ಳುವುದು ಒಳ್ಳೆಯದು ಎಂದು ಶ್ರೀಕೃಷ್ಣನು
ಹೇಳುತ್ತಾನೆ. ಇವೆರಡೂ ಬೇರೆ ಬೇರೆ ಮಾರ್ಗಗಳೆಂದು ತಿಳಿಯುವವರು ಕೇವಲ ಅಜ್ಞಾನಿಗಳು,
ಕರ್ಮಸಂನ್ಯಾಸದ ಮಾರ್ಗವನ್ನು ಕರ್ಮಯೋಗದ ಸಹಾಯವಿಲ್ಲದೆ ಅನುಸರಿಸುವುದು ಕಷ್ಟ, ಕರ್ಮಯೋಗದ ನಿಜವಾದ
ಅರ್ಥವನ್ನು ತಿಳಿದು ಕರ್ಮದಲ್ಲಿ ತೊಡಗುವವರಿಗೆ ಅದರ ಫಲವಾಗಲಿ ದೋಷವಾಗಲಿ ಅಂಟುವುದಿಲ್ಲ.
ಭಗವಂತನಲ್ಲೇ ಸ್ಥಿರವಾದ ಮನಸ್ಸುಳ್ಳವರಾಗಿರುವುದರಿಂದ ಲಭ್ಯವಾಗುವ ಸಮಚಿತ್ತವೇ ಇದರ ರಹಸ್ಯ.
ಇಂದ್ರಿಯನಿಗ್ರಹ ಇದಕ್ಕೆ ಸಹಕಾರಿ.
ಆಧ್ಯಾಯ 6
ಧ್ಯಾನಯೋಗ - 47 ಶ್ಲೋಕಗಳು
ಹಿಂದಿನ ಆಧ್ಯಾಯದಲ್ಲಿ ಪ್ರಸ್ತಾಪಿಸಿದ ಸಂನ್ಯಾಸ ಮತ್ತು ಯೋಗ
ಸಿದ್ಧಾಂತಗಳನ್ನು ಇನ್ನಷ್ಟು ವಿವರಿಸುವುದಕ್ಕಾಗಿ ಶ್ರೀಕೃಷ್ಣನು ಮಾತನ್ನು ಮುಂದುವರಿಸುವನು. ಯಾವೊಂದು ಫಲಾಪೇಕ್ಷೆಯೂ ಇಲ್ಲದೆ
ಯಾರು ತನಗೆ ವಿಧಿಸಿದ ಕರ್ತವ್ಯಗಳನ್ನು ಮಾಡುತ್ತಾನೊ ಅವನೇ ಸಂನ್ಯಾಸಿ ಮತ್ತು ಅನನೇ ಯೋಗಿ,
ವಾಸ್ತವವಾಗಿ ಸಂನ್ಯಾಸ ಮತ್ತು ಯೋಗ ಎರಡಕ್ಕೂ ಕರ್ಮಫಲತ್ಯಾಗ ಸಾಮಾನ್ಯ ಲಕ್ಷಣವಾದುದರಿಂದ ಎರಡೂ
ಒಂದೇ ಆಗಿವೆ. ಸರಿಯಾದ ಭಾವನೆಯಿಂದ ಮಾಡಿದ ಕರ್ಮ ಯೋಗಕ್ಕೆ ಅಥವಾ ಏಕಾಗ್ರತೆಗೆ ದಾರಿಯಾಗುತ್ತದೆ.
ಕರ್ಮಫಲತ್ಯಾಗದಿಂದ ಯೋಗ ಅಥವಾ ಏಕಾಗ್ರತೆ ಇನ್ನೂ ಉತ್ತಮಗೊಳ್ಳುತ್ತದೆ. ತನ್ನು ಉದ್ಧಾರ ತನ್ನ ಕೈಯಲ್ಲೇ
ಇದೆ ಎಂಬ ತತ್ತ್ವವನ್ನು ಶ್ರೀಕೃಷ್ಣನು ಇಲ್ಲಿ ಪ್ರತಿಪಾದಿಸುವನು. ನಮ್ಮ ಮನಸ್ಸು ಶುದ್ಧವಾಗಿದೆಯೊ
ಅಶುದ್ಧವಾಗಿದೆಯೊ ಎಂಬುದನ್ನವಲಂಬಿಸಿ ಅದು ನಮಗೆ ಮಿತ್ರನಾದರೂ ಆಗಬಹುದು ಶತ್ರುವಾದರೂ ಆಗಬಹುದು.
ಮನಸ್ಸೇ ಉತ್ತಮ ಸಾಧನ ಎಂದು ಸೂಚಿಸಿದ ಮೇಲೆ ಶ್ರೀಕೃಷ್ಣನು ಧ್ಯಾನದ ವಿಧಾನವನ್ನು
ವಿವರಿಸುತ್ತಾನೆ. ಯೋಗಿಯು ಸ್ವಚ್ಛವಾದ ಸ್ಥಳದಲ್ಲಿ ಬೆನ್ನನ್ನು ನೇರವಾಗಿರಿಸಿ ಕೊಂಡು
ಸ್ಥಿರಾಸನದಲ್ಲಿ ಕುಳಿತುಕೊಳ್ಳಬೇಕು. ಅತ್ತಿತ್ತ ಚಲಿಸುವ ಮನಸ್ಸನ್ನು ಹಿಡಿದು ನಿಲ್ಲಿಸಿ ಅದರ
ಶಕ್ತಿಗಳನ್ನೆಲ್ಲ ಕ್ರೋಡೀಕರಿಸಿ ಶ್ರೀಕೃಷ್ಣನ (ಪರಮಾತ್ಮನ) ಕಡೆ ತಿರುಗಿಸಬೇಕು. ಆಗ ಶಾಂತಿಯು
ಲಭಿಸುತ್ತದೆ. ಅತಿರೇಕಗಳನ್ನೆಲ್ಲ ವರ್ಜಿಸಿ ಸಮತೋಲನದ ಜೀವನವನ್ನು ನಡೆಸುವವರಿಗೆ ಮಾತ್ರ ಅಂತಹ
ಯೋಗ ಸಾಧ್ಯವಾಗುತ್ತದೆ. ಅಂತಹ ಯೋಗಿ ಎಲ್ಲ ಜೀವಿಗಳಲ್ಲೂ ದೇವರನ್ನೂ, ದೇವರಲ್ಲಿ ಎಲ್ಲ
ಜೀವಿಗಳನ್ನು ಕಾಣಲು ಸಮರ್ಥನಾಗುತ್ತಾನೆ. ಸಮಚಿತ್ತವುಳ್ಳ ವ್ಯಕ್ತಿಯೇ ಅತ್ಯಂತ ಶ್ರೇಷ್ಠನಾದ
ಯೋಗಿ. ಇದನ್ನು ಕೇಳಿದ ಅರ್ಜುನನು ಎರಡು ಪ್ರಶ್ರೆಗಳನ್ನು ಹಾಕುತ್ತಾನೆ. ಚಂಚಲವಾಗಿರುವ
ಮನಸ್ಸನ್ನು ಹಿಡಿತಕ್ಕೆ ತರುವುದ ಹೇಗೆ? ಸಾಧನೆಯಲ್ಲಿ ವಿಫಲನಾಗಿ ಯೋಗ ಭ್ರಷ್ಟನಾದವನ ಗತಿ ಏನಾಗುತ್ತದೆ? ಈ ಪ್ರಶ್ನೆಗಳಿಗೆ ಶ್ರೀ ಕೃಷ್ಣನು ಉತ್ತರ ಹೇಳುತ್ತ, “ಚಂಚಲವಾಗಿರುವುದೇ ಮನಸ್ಸಿನ ಸಹಜಸ್ವಭಾವವಾದುದರಿಂದ
ಅದನ್ನು ಅಂಕೆಯಲ್ಲಿಡುವುದು ಕಠಿಣವೇನೊ ಹೌದು, ಆದರೆ ಅಸಾಧ್ಯವಾದುದೇನೂ ಅಲ್ಲ ವೈರಾಗ್ಯದಿಂದ ಮತ್ತ
ಅಭ್ಯಾಸದಿಂದ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು. ಇನ್ನು ಎರಡನೆಯ ಪ್ರಶ್ನೆಗೆ ಉತ್ತರ-ಗುರಿಯನ್ನು
ಸಾಧಾಸಲಾಗದೆ ಮಧ್ಯದಲ್ಲೇ ಪಥ ಭ್ರಷ್ಟನಾದ ಯೋಗಿ ಹಾಳಾಗಿಹೋಗುವುದಿಲ್ಲ. ಯೋಗಿಗಳ ಮನೆಯಲ್ಲಿ,
ಯೋಗಸಾಧನೆಗೆ ಸಹಕಾರಿಯಾದ ಪರಿಸರದಲ್ಲಿ ಮತ್ತೆ ಜನ್ಮವೆತ್ತಿ ತನ್ನ ಸಾಧನೆಯನ್ನು ಇನ್ನೂ
ತೀವ್ರವಾಗಿ ಮುಂದುವರಿಸುತ್ತಾನೆ. ಕೊನೆಗೆ ಸಿದ್ಧಿಯನ್ನು ಪಡೆಯುತ್ತಾನೆ. ಜ್ಞಾನಿ, ಕರ್ಮಶೀಲ,
ವಿರಾಗಿ ಇವರೆಲ್ಲರಿಗಿಂತಲೂ ಯೋಗಿಯೇ ಶ್ರೇಷ್ಠ. ಆದುದರಿಂದ ಅರ್ಜುನ, ನೀನು ಯೋಗಿಯಾಗಲು
ಪ್ರಯತ್ನಿಸು” ಎಂದು ಬೋಧಿಸಿ ಮಾತು ಮುಗಿಸುತ್ತಾನೆ.
ಅಧ್ಯಾಯ 7
ಜ್ಞಾನ-ವಿಜ್ಞಾನ-ಯೋಗ - 30 ಶ್ಲೋಕಗಳು
ಪರಮಾತ್ಮನಲ್ಲಿ (ಅಂದರೆ ಶ್ರೀಕೃಷ್ಣನಲ್ಲಿ) ಭಕ್ತಿಯನ್ನಿಟ್ಟು ಯೋಗ
ಸಾಧನೆ ಮಾಡುತ್ತ ಆತನನ್ನು ಅರಿಯುವುದು ಹೇಗೆ ಎಂಬೀ ವಿಚಾರವನ್ನು ಶ್ರೀಕೃಷ್ಣನು ಈಗ
ವಿವರಿಸುತ್ತಾನೆ. ಪರಿಪೂರ್ಣತೆಯನ್ನು ಪಡೆಯಲು ಪ್ರಯತ್ನಿಸುವವರೆಲ್ಲರೂ ಸಫಲರಾಗುವುದಿಲ್ಲ.
ಲಕ್ಷಾಂತರ ಜನರಲ್ಲಿ ಒಬ್ಬ ನಿಜವಾಗಿಯೂ ಆತನನ್ನು ಆರಿಯಬಲ್ಲ. ಈ ಜಗತ್ತು ಭಗವಂತನಿಂದ ಅವನ ಪರಾ
ಮತ್ತು ಅಪರಾ ಎಂಬ ಎರಡು ಬಗೆಯ ಪ್ರಕೃತಿಗಳ ಸಂಯೋಗದ ಮೂಲಕ ಸೃಷ್ಟಿಸಲ್ಪಟ್ಟಿದೆ. ಅಪರಾಪ್ರಕೃತಿ
ಅಷ್ಟವಿಧವಾದುದು. ಪರಾಪ್ರಕೃತಿ ಎಂದರೆ ಜೀವಾತ್ಮ. ಮಣಿಗಳನ್ನೆಲ್ಲ ದಾರ ಹಿಡಿದಿಡುವಂತೆ
ಪರಮಾತ್ಮನು ಸಕಲ ಜೀವಿಗಳನ್ನೂ ವಸ್ತುಗಳನ್ನೂ ವ್ಯವಸ್ಥಿತವಾಗಿ ಇಟ್ಟಿದ್ದಾನೆ. ವಾಸ್ತವವಾಗಿ ಎಲ್ಲ
ಜೀವಿಗಳ ಮ್ತತು ವಸ್ತುಗಳ ಆಂತರ್ಯದ ಶ್ರೇಷ್ಠತೆ ಮತ್ತು ಸತ್ತ್ವ ಅವನೇ ಆಗಿದ್ದಾನೆ. ಸತ್ತ್ವ,
ರಜಸ್ಸು, ತಮಸ್ಸು ಎಂಬೀ ತ್ರಿಗುಣಗಳಿಂದ ಕೂಡಿದ ಆತನ ಮಾಯೆ (ಇದೇ ಅವನ ಅಪರಾಪ್ರಕೃತಿಯೂ ಆಗಿದೆ)
ಎಲ್ಲರನ್ನೂ ಭ್ರಮೆಗೊಳಿಸಬಲ್ಲುದು. ಈ ಮಾಯೆಯನ್ನು ಗೆಲ್ಲುವುದು ಕಷ್ಟ. ಭಗವಂತನಲ್ಲಿ
ಸಂಪೂರ್ಣವಾಗಿ ಶರಣಾಗತರಾದವರು ಮಾತ್ರ ಮಾಯೆಯನ್ನು ದಾಟಬಲ್ಲರು. ಮೂಢರಾದವರು, ದುರಾಚಾರಿಗಳಾದ
ದುಷ್ಟರು ಅವನಲ್ಲಿ ಶರಣಾಗುವುದಿಲ್ಲವಾದ್ದರಿಂದ ಅವನನ್ನು ಪಡೆಯಲಾರರು. ಅವನಲ್ಲಿ ಶರಣಾದ ಭಕ್ತರ
ಬಗ್ಗೆ ಹೇಳುವುದಾದರೆ, ಅವರು ನಾಲ್ಕು ಬಗೆ. ಆರ್ತ (ದುಃಖ-ನೋವುಗಳಿಗೆ ಸಿಲುಕಿದವರು), ಅರ್ಥಾರ್ಥಿ
(ಪ್ರಾಪಂಚಿಕ ಆಸೆಗಳುಳ್ಳವರು), ಜಿಜ್ಞಾಸು (ಪರಮಾತ್ಮ ನನ್ನರಿಯಬೇಕೆಂಬ ಹಂಬಲವಿರುವವರು), ಮತ್ತು
ಜ್ಞಾನಿ (ಪರತತ್ತ್ವವನ್ನರಿತವರು). ಇವರಲ್ಲಿ ಜ್ಞಾನಿಗಳೇ ಶ್ರೇಷ್ಞರು. ಸಾಮಾನ್ಯವಾಗಿ ತಮ್ಮ
ಅಸಂಖ್ಯಾತ ಇಷ್ಟಾರ್ಥಗಳ ಈಡೇರಿಕೆಗಾಗಿ ಜನರು ನಾನಾ ದೇವತೆಗಳನ್ನು ಆಶ್ರಯಿಸಿ ಉಪಾಸನೆ
ಮಾಡುತ್ತಾರೆ. ಆ ನಾನಾ ದೈವರೂಪಗಳಲ್ಲಿದ್ದು ಅವರ ಇಷ್ಟಾರ್ಥಗಳನ್ನು ಈಡೇರಿಸುವವನು ಪರಮಾತ್ಮನೇ
(ಅಂದರೆ ಪರಮೇಶ್ವರನಾದ ಶ್ರೀಕೃಷ್ಣನೇ). ತಾನೆ ಸ್ವ-ಇಚ್ಛೆಯಿಂದ ತನ್ನ ಯೋಗಮಾಯೆಯಿಂದ
ಅವೃತನಾಗಿರುವುದರಿಂದ ಅವನ ದೈವತ್ವ ಎಲ್ಲರಿಗೂ ಪ್ರಕಟವಾಗುವುದಿಲ್ಲ. ಪಾಪಾರಹಿತರೂ ಸದಾ
ಸತ್ಯರ್ಮನಿರತರೂ ಆದವರು ಮಾತ್ರ ಮೋಕ್ಷ ಪಡೆಯುವುದಕ್ಕಾಗಿ ಅವನ ಭಕ್ತರಾಗಿರುತ್ತಾರೆ.
ಅಧ್ಯಾಯ 8
ಅಕ್ಷರಬ್ರಹ್ಮಯೋಗ - 28
ಶ್ಲೋಕಗಳು
ಅರ್ಜುನನ ಕೋರಿಕೆಯಂತೆ ಬ್ರಹ್ಮ, ಅಧ್ಯಾತ್ಮ ಮತ್ತು ಕರ್ಮ ಮುಂತಾದ
ಕೆಲವು ಪಾರಿಭಾಷಿಕ ಪದಗಳ ಅರ್ಥವನ್ನು ವಿವರಿಸಿದ ಬಳಿಕ ಶ್ರೀಕೃಷ್ಣನು ಹೇಗೆ ಮರಣಸಮಯದಲ್ಲಿ
ಭಗವಂತನ ಸ್ಮರಣೆ ಮಾಡುವವರು ಅವನನ್ನೇ ಸೇರುತ್ತಾರೆ ಎಂಬುದನ್ನು ವರ್ಣಿಸುತ್ತಾನೆ. ವಾಸ್ತವವಾಗಿ
ಸಾಯುತ್ತಿರುವ ಮನುಷ್ಯನು ಯಾವ ದೇವರನ್ನು (ದೇವರ ಯಾವ ನಾಮ-ರೂಪಗಳನ್ನು) ಸ್ಮರಣೆ ಮಾಡುತ್ತಾನೊ ಅ ದೇವರನ್ನೇ
ಸೇರುತ್ತಾನೆ. ಆದುದರಿಂದ ಸರ್ವದಾ ಭಗವನ್ನಾಮಸ್ಮರಣೆ ಮಾಡುತ್ತ ತನ್ನ ಬದುಕಿನ ಹೋರಾಟಗಳಲ್ಲಿ
ತೊಡಗಬೇಕೆಂದು ಶ್ರೀಕೃಷ್ಣನು ಅರ್ಜುನನಿಗೆ ಬುದ್ಧಿ ಹೇಳುತ್ತಾನೆ. ತದನಂತರ ಸದಾ ಭಗವನ್ನಾಮಸ್ಮರಣೆ
ಮಾಡುವ ಅಭ್ಯಾಸಯೋಗವನ್ನು ವಿವರಿಸುತ್ತಾನೆ. ಹೀಗೆ ಸದಾ ದೇವರನ್ನು ನೆನೆಯುವ ಯೋಗಿಯು ಬದುಕಿನ
ಕೊನೆಯ ಗಳಿಗೆಯಲ್ಲೂ ಅದೇ ದೇವರ ನಾಮಸ್ಮರಣೆ ಮಾಡುತ್ತ ಆ ಪರಮೇಶ್ವರನಲ್ಲೇ ಐಕ್ಯನಾಗುತ್ತಾನೆ.
ಓಂಕಾರದ ಜಪ ಈ ಸಂದರ್ಭದಲ್ಲಿ ತುಂಬಾ ಸಹಾಯಕವಾಗುತ್ತದೆ. ಈ ರೀತಿಯಲ್ಲಿ ದೇಹವನ್ನು ಬಿಟ್ಟ
ವ್ಯಕ್ತಿ ಮತ್ತೆ ಜನ್ಮವೆತ್ತಿ ಈ ಐಹಿಕ ಜೀವನಕ್ಕೆ ಬರುವುದಿಲ್ಲ. ಪುಣ್ಯದ ಫಲವಾಗಿ ಸ್ವರ್ಗ
ಮೊದಲಾದ ಬೇರೆ ಲೋಕಗಳನ್ನು ಹೊಂದುವುದರಿಂದ ಯಾವ
ಪ್ರಯೋಜನವೂ ಇಲ್ಲ. ಏಕೆಂದರೆ ಪುಣ್ಯ ತೀರಿದ ಬಳಿಕ ಮತ್ತೆ ಈ ಜಗತ್ತಿನಲ್ಲೇ
ಜನ್ಮವೆತ್ತಬೇಕಾಗುತ್ತದೆ. ಇಲ್ಲಿ ಶ್ರೀಕೃಷ್ಣನು ಉಪನಿಷತ್ ಮುಂತಾದ ಪ್ರಾಚೀನ ಗ್ರಂಥಗಳಲ್ಲಿ
ಹೇಳಿರುವ ಅರ್ಚಿರಾದಿ ಮಾರ್ಗ (ಬೆಳಕಿನ ದಾರಿ) ಮತ್ತು ಧೂಮಾದಿ ಮಾರ್ಗ (ಹೊಗೆಯ ದಾರಿ) ಎಂಬೆರಡು
ಸುಪ್ರಸಿದ್ಧ ಮಾರ್ಗಗಳನ್ನು
ಪ್ರಸ್ತಾಪಿಸುತ್ತಾನೆ. ಮೊದಲನೆಯ ಮಾರ್ಗ ಬ್ರಹ್ಮಲೋಕಕ್ಕೆ ಒಯ್ಯುತ್ತದೆ. ಅಲ್ಲಿಗೆ ಹೋದ
ಮೇಲೆ ಪುನರ್ಜನ್ಮವಿಲ್ಲ. ಎರಡನೆಯದು ಪಿತೃಲೋಕಕ್ಕೊಯ್ಯುತ್ತದೆ. ಅಲ್ಲಿಗೆ ಹೋದವರು ಕಾಲಾನಂತರ ಈ
ಲೋಕಕ್ಕೇ ಪುನರ್ಜನ್ಮ ತಾಳಿ ಬರಬೇಕಾಗುತ್ತದೆ. ಈ ಮಾರ್ಗಗಳನ್ನು ಚೆನ್ನಾಗಿ ಅರಿತ ಯೋಗಿ ಯಾವಾಗಲೂ
ಭ್ರಮೆಗೊಳಗಾಗುವುದಿಲ್ಲ.
ಅಧ್ಯಾಯ 9
ರಾಜವಿದ್ಯಾ – ರಾಜಗುಹ್ಯ – ಯೋಗ - 34 ಶ್ಲೋಕಗಳು
ಸುಲಭವಾಗಿ ಅನುಷ್ಠಾನಕ್ಕೆ ತರಬಹುದಾದ ಮತ್ತು ಹಾಗೆ ಆಚರಿಸುತ್ತ
ಅರ್ಜುನನು ಮುಕ್ತನಾಗಬಹುದಾದ, ಶ್ರೇಷ್ಠವೂ ಅತ್ಯಂತ ರಹಸ್ಯವೂ ಆದ, ಜ್ಞಾನವನ್ನು
ಕಲಿಸಿಕೊಡುವುದಾಗಿ ಮಾತುಕೊಡುತ್ತ ಶ್ರೀಕೃಷ್ಣನು ಬೋಧೆಯನ್ನು ಮುಂದುವರಿಸುತ್ತಾನೆ. ಆತನು
(ಪರಮಾತ್ಮನು) ಅವ್ಯಕ್ತನಾಗಿ ಸಮಸ್ತ ಜಗತ್ತನ್ನೂ ವ್ಯಾಪಿಸಿರುವನು. ಸೃಷ್ಟಿಚಕ್ರ ಒಂದು ಸುತ್ತು
ಸುತ್ತಿ ಮುಗಿದಾಗ (ಕಲ್ಪಾಂತದಲ್ಲಿ) ಸಮಸ್ತ ಜೀವ-ಕೋಟಿ ಅವನ ಪ್ರಕೃತಿಯೊಳಗೆ ಪ್ರವೇಶಿಸಿ
ಲಯವಾಗುತ್ತದೆ. ಮತ್ತೊಂದು ಸುತ್ತುಸುತ್ತಲು ಆರಂಭವಾದಾಗ (ಮತ್ತೊಂದು ಕಲ್ಪಾರಂಭದಲ್ಲಿ) ಮತ್ತೆ
ಪ್ರಕಟವಾಗುತ್ತದೆ. ಅವನ ಉಸ್ತುವಾರಿಯಲ್ಲಿ ಅವನದೇ ಆದ ಪ್ರಕೃತಿಯಿಂದಲೇ ಈ ಜಗತ್ತು ಸೃಷ್ಟಿಯಾಗಿದೆ.
ಮನುಷ್ಯ ರೂಪವನ್ನು ಧಾರಣಮಾಡಿ ಬಂದಿರುವ ಆ ಪರಮಾತ್ಮನ ದಿವ್ಯ ಸ್ವರೂಪವನ್ನರಿಯದೆ ಮೂಢರೂ,
ದುಷ್ಟರೂ ಅವನನ್ನು ತಿರಸ್ಕಾರದಿಂದ ಕಾಣುತ್ತಾರೆ. ಸಜ್ಜನರೂ, ಉದಾತ್ತಚರಿತರೂ ಅನನ್ಯ ಭಕ್ತಿಯಿಂದ
ಏಕಮನಸ್ಕರಾಗಿ ಅವನನ್ನು ಆರಾಧಿಸುತ್ತಾರೆ. ಯಜ್ಞ, ಕ್ರತು, ಯಜ್ಞಕ್ಕೆ ಬಳಸುವ ಎಲ್ಲ
ವಸ್ತುಸಾಮಗ್ರಿಗಳು, ಸಮಸ್ತ ವಿಶ್ವದ ತಂದೆ, ತಾಯಿ, ಪಾಲಕ, ಜೀವಿತದ ಗುರಿ, ಪ್ರಭು, ಪರಮೇಶ್ವರ,
ಸೃಷ್ಟಿ-ಲಯಗಳ ಮೂಲ ನೆಲೆ-ಎಲ್ಲವೂ ಅವನೇ. ಬೆಳಗುವ ಸೂರ್ಯನೂ ಅವನೇ. ಸುರಿವ ಮಳೆಯೂ ಅವನೇ. ಮರಣವೂ
ಅವನೇ, ಅಮೃತತ್ವವೂ ಅವನೇ, ಯಜ್ಞಗಳಿಂದ ತುಷ್ಟಿಗೊಳಿಸುವುದು ಅವನನ್ನೇ, ಸರ್ವದಾ ಅವನನ್ನೇ
ಸ್ಮರಿಸುತ್ತ ಭಕ್ತಿಯಿಂದ ಉಪಾಸನೆ ಮಾಡುವವರ ಯೋಗಕ್ಷೇಮದ ಪೂರ್ಣ ಜವಾಬ್ದಾರಿಯನ್ನು ಅವನೇ
ವಹಿಸಿಕೊಳ್ಳಿತ್ತಾನೆ. ಅನ್ಯದೇವತೆಗಳನ್ನು ಶ್ರದ್ಧೆಯಿಂದ ಪೂಜೆ ಮಾಡುವವರು ಆಯಾ ದೇವತೆಗಳನ್ನು
ಆರಾಧಿಸುವವರು ಪರಮಾತ್ಮನನ್ನೇ ಸೇರುತ್ತಾರೆ. ಹಾಗೆ ನೋಡಿದರೆ ಆ ವಿವಿಧ ದೇವತಾ ರೂಪಗಳಲ್ಲಿರುವ
ಚೈತನ್ಯನು ಅವನೊಬ್ಬನೇ, ಅವನನ್ನು ಪೂಜಿಸಲು ಮುಖ್ಯವಾಗಿ ಬೇಕಾದುದು ಭಕ್ತಿ, ವಿವಿಧ
ವಿಧಿ-ವಿಧಾನಗಳಲ್ಲ, ವಸ್ತು ಸಾಮಗ್ರಿಗಳಲ್ಲ. ಭಕ್ತಿ ಶ್ರದ್ಧೆಗಳಿಂದ ಅರ್ಪಿಸುವ ಒಂದು ಹೂವು,
ಒಂದು ಎಲೆ, ಒಂದು ಹನಿ ನೀರು – ಇಷ್ಟಾದರೂ ಸರಿ, ಅದನ್ನೇ ಪ್ರೀತಿಯಿಂದ ಆತ ಸ್ವೀಕರಿಸುತ್ತಾನೆ.
ಅವನಿಗೆ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ. ಕಡುಪಾಪಿಯಾದರೂ ಸರಿ, ಯಾರು ತಮ್ಮ ತಪ್ಪುಗಳಿಗಾಗಿ
ಪಶ್ಚಾತ್ತಾಪ ಪಟ್ಟು ಶ್ರೀಕೃಷ್ಣನನ್ನು ಭಕ್ತಿಯಿಂದ ಪೂಜಿಸುವರೊ ಅವರು ಸಜ್ಜನರಾಗಿ ಧರ್ಮಾತ್ಮರಾಗಿ
ಪರಿವರ್ತಿತರಾಗುತ್ತಾರೆ. ತನ್ನ ಭಕ್ತರಿಗೆ ಎಂದೂ ನಾಶವಿಲ್ಲ ಎಂದು ಶ್ರೀಕೃಷ್ಣನು ಗಂಭೀರವಾಗಿ
ಫೋಷಿಸಿದ ಬಳಿಕ ಶ್ರೀಕೃಷ್ಣನು ತನ್ನಲ್ಲೇ ಗಾಢವಾದ ಭಕ್ತಿಯನ್ನಿಡಬೇಕೆಂದು ಅರ್ಜುನನಿಗೆ
ತಿಳಿಯಹೇಳುತ್ತಾನೆ.
ಅಧ್ಯಯ 10
ವಿಭೂತಿಯೋಗ - 42 ಶ್ಲೋಕಗಳು
ಈ ಅಧ್ಯಾಯದಲ್ಲಿ ಶ್ರೀಕೃಷ್ಣನು ಸಂಪೂರ್ಣವಾಗಿ, ಎಲ್ಲೆಲ್ಲಿ ತನ್ನ
ದಿವ್ಯತೆ ವ್ಯಕ್ತವಾಗಿರುವುದು ಎಂಬ ವಿಚಾರವನ್ನು ವಿವರಿಸುತ್ತಾನೆ. ಪರಮಾತ್ಮನ ಮೂಲವನ್ನಾಗಲಿ,
ಮಹತ್ತ್ವವನ್ನಾಗಲಿ ತಿಳಿಯಲು ಇಂದ್ರಾದಿದೇವತೆಗಳಿಗೂ ಸಾಧ್ಯವಿಲ್ಲ. ಮಹರ್ಷಿಗಳಿಗೂ ಸಾಧ್ಯವಿಲ್ಲ.
ಸಕಲ ಸದ್ಗುಣಗಳು ಮಾತ್ರವಲ್ಲ, ಶ್ರೇಷ್ಠ ಎಂದೆನ್ನಬಹುದಾದುದೆಲ್ಲವೂ ಅವನಿಂದಲೇ ಬಂದಂತಹವು. ಸಪ್ತರ್ಷಿಗಳೂ,
ನಾಲ್ವರು ಮನುಗಳೂ (ಮನುಕುಲದ ಮೂಲ ಪುರುಷರು) ಅವನ ಮಾನಸಜನ್ಯರೇ, ಸಮಸ್ತ ವಿಶ್ವಕ್ಕೂ ಅವನೇ ಮೂಲ,
ಅವನೇ ಚೈತನ್ಯ ಕೂಡುವವನು, ಎಂದರಿತು ಜ್ಞಾನಿಗಳು ಅವನನ್ನು ಪೂಜಿಸುತ್ತಾರೆ. ತಮ್ಮತಮ್ಮೊಳಗೆ ಅವನ
ಬಗ್ಗೆಯೇ ಮಾತಾಡುವುದರಲ್ಲಿ ಅತೀವ ಆನಂದವನ್ನು ಪಡೆಯುತ್ತಾರೆ. ಅಂಥವರಿಗೆ ಆತನು ತನ್ನನ್ನು
ಪಡೆಯುವಂತಹ ಬುದ್ಧಿಯೋಗವನ್ನು ಅಥವಾ ಆತ್ಮಜ್ಞಾನವನ್ನು ನೀಡುತ್ತಾನೆ.
ಇಷ್ಟನ್ನು ಕೇಳಿದ ಅರ್ಜುನನು ಶ್ರೀಕೃಣ್ಣನನ್ನು ಪರಬ್ರಹ್ಮ,
ಪರಂಜ್ಯೋತಿ, ಪರಮಪವಿತ್ರ ಎಂದು ಸ್ತುತಿಸುತ್ತಾನೆ. ಅವನ ದೈವತ್ವವನ್ನು ಗುರುತಿಸಿದ ಅರ್ಜುನನು, “ಪರಮಾತ್ಮನೆ, ನೀನು ಯಾದ ಯಾವ ರೂಪದಲ್ಲಿ ವ್ಯಕ್ತವಾಗುವೆ
ಎಂಬುದನ್ನು ವಿವರವಾಗಿ ತಿಳಿಸು” ಎಂದು ಪ್ರಾರ್ಥಿಸುತ್ತಾನೆ. ಉತ್ತರವಾಗಿ ಶ್ರೀಕೃಷ್ಣನು ಎಲ್ಲ
ಜೀವಿಗಳೊಳಗಿರುವ ಆತ್ಮನು ತಾನೇ ಎಂದು ಹೇಳುತ್ತಾನೆ. ತಾನೇ ವಿಷ್ಣು, ತಾನೇ ಸೂರ್ಯ, ಮರೀಚಿ,
ಚಂದ್ರ, ವೇದಗಳಲ್ಲಿ ಸಾಮವೇದ, ದೇವತೆಗಳಲ್ಲಿ ಇಂದ್ರ ಮತ್ತು ಎಲ್ಲ ಪ್ರಾಣಿಗಳಲ್ಲೂ ಇರುವ ಪ್ರಜ್ಞೆ
ತಾನು. ತಾನೇ ರುದ್ರ, ಕುಬೇರ ಮತ್ತು ಅಗ್ನಿ. ತಾನೇ ಬೃಹ್ವತಿ, ಭೃಗು, ಓಂಕಾರ ಮತ್ತು ಜಪಯಜ್ಞ, ತಾನೇ
ಮೇರು ಹಾಗೂ ಹಿಮಾಲಯ ಪರ್ವತ. ತಾನೇ ನಾರದ, ಅನಂತ, ಮರುಣ, ಯಮ, ಹಾಗೆಯೇ ಪ್ರಹ್ಲಾದ ಮತ್ತು ರಾಮ
ಎಂದೂ, ತಾನೇ ಆತ್ಮವಿಜ್ಞಾನ, ತಾನೇ ಸರ್ವಭಕ್ಷಕನಾದ ಮೃತ್ಯು, ಪಾಂಡವರಲ್ಲಿ ತಾನೇ ಅರ್ಜುನ ಎಂದೂ,
ಹಾಗೆ ನೋಡಿದರೆ ಎಲ್ಲವಸ್ತುಗಳಲ್ಲೂ ಯಾವ ಯಾವುದ ಆತ್ಯಂತ ಒಳ್ಳೆಯದೋ ಅಥವಾ ಶ್ರೇಷ್ಠವಾದುದೋ
ಅದೆಲ್ಲ ತಾನೇ ಎಂದೂ ಸಮಸ್ತ ವಿಶ್ವವೂ ತನ್ನೊಂದು ತೇಜಾಂಶದಿಂದಲೇ ನಿಂತಿರುವುದೆಂದೂ ಶ್ರೀಕೃಷ್ಣನು
ಅರ್ಜುನನಿಗೆ ತಿಳಿಯಪಡಿಸುತ್ತಾನೆ.
ಅಧ್ಯಾಯ 11
ವಿಶ್ವರೂಪದರ್ಶನ ಯೋಗ - 55 ಶ್ಲೋಕಗಳು
ಇಷ್ಟೆಲ್ಲವನ್ನೂ ಕೇಳಿದ ಮೇಲೆ ಅರ್ಜುನನ ಕುತೂಹಲ ಹೆಚ್ಚಾಗುತ್ತದೆ. ಆಗ
ಆತ ಭಗವಾನ್ ಶ್ರೀಕೃಷ್ಣನನ್ನು ಅವನ ದಿವ್ಯವಾದ ವಿಶ್ವರೂಪವನ್ನು ತೋರಿಸಬೇಕೆಂದು
ಪ್ರಾರ್ಥಿಸುತ್ತಾನೆ. ಸ್ವಾಮಿಯೂ ಅವನಿಗೆ ದಿವ್ಯದೃಷ್ಟಿಯನ್ನು ಅನುಗ್ರಹಿಸಿ ತನ್ನ ದಿವ್ಯವೂ
ಅಮೋಘವೂ ಆದ ವಿಶ್ವರೂಪವನ್ನು ಪ್ರಕಟಮಾಡಿ ತೋರಿಸುತ್ತಾನೆ. ಅದೊಂದು ಅದ್ಭುತವಾದ, ಅಸಾಧಾರಣವಾದ
ರೂಪ! ಅಸಂಖ್ಯಾತ ಮುಖಗಳು, ಶಸ್ತ್ರಾಸ್ತ್ರಗಳನ್ನು ಹಿಡಿದ ಕೈಗಳು,
ಆಭರಣಗಳಿಂದ ಅಲಂಕೃತವಾದ ಶರೀರ ಮತ್ತು ತಲೆಗಳು! ದಿವ್ಯವಾದ ಮಾಲೆಗಳಿಂದಲೂ ವೇಷ ಭೂಷಣಗಳಿಂದಲೂ
ಅಲಂಕೃತವಾಗಿದ್ದು ಕೋಟಿ ಸೂರ್ಯಪ್ರಕಾಶಕ್ಕಿಂತಲೂ ಹೆಚ್ಚು ಪ್ರಕಾಶಮಾನವಾಗಿತ್ತು ಅದು! ವೈವಿಧ್ಯಮಯವಾದ ನಾನಾರೂಪಗಳಿಂದ ಕೂಡಿದ ಈ ಜಗತ್ತು ಆ ವಿಶ್ವರೂಪದ
ಒಂದು ಚಿಕ್ಕ ಅಂಶ ಮಾತ್ರವಾಗಿತ್ತು, ಭಯ ವಿಶ್ಮಯ ಆನಂದಗಳಲ್ಲಿ ಉದ್ವೇಗಗೊಂಡ ಅರ್ಜುನ ಆ ಪರಮ
ವಿಶ್ವಾತ್ಮನನ್ನು ಭಕ್ತಿ ಯಿಂದ ಸ್ತುತಿಸ ತೊಡಗುತ್ತಾನೆ. ಹದಿನೇಳು ಶ್ಳೋಕಗಳ ಈ ಸುಂದರವಾದ
ಸ್ತೋತ್ರ ವಿಶ್ವರೂಪವನ್ನು ಸೊಗಸಾಗಿ ವರ್ಣಿಸುತ್ತದೆ. ದೇವ ದಾನವ ಮಾನವರೂ ಇತರ ಕ್ಷುದ್ರ ಜೀವಿಗಳೂ,
ಎಲ್ಲರೂ ಅವನಲ್ಲಿ ಕಾಣಿಸುತ್ತಾರೆ. ಅವನಿಗೆ ಅನೇಕ ಹಸ್ತಗಳು, ಅನೇಕ ಹೊಟ್ಟೆಗಳು, ಅನೇಕ ಮುಖಗಳು,
ಅಸಾಧಾರಣವಾದ ತೇಜಸ್ಸು! ಆಕಾಶವನ್ನೆಲ್ಲ ವ್ಯಾಪಿಸಿರು ಕಾಯ! ಸುರ ಮುನಿಗಣಗಳಾದಿಯಾಗಿ ಎಲ್ಲ ಜೀವಿಗಳೂ ಕೈ ಮುಗಿದು
ನಿಂತು ಭಕ್ತಿಯಿಂದ ಆತನನ್ನು ಸ್ತುತಿ ಮಾಡುತ್ತಿದ್ದಾರೆ. ಸಂಪೂರ್ಣ ಸುಸಜ್ಜಿತವಾಗಿ ರಣರಂಗದಲ್ಲಿ
ನಿಂತ ಹಲವು ವೀರಾಧಿವೀರರೆಲ್ಲ ಅವನೊಳಗೆ ಪ್ರವೇಶಿಸುತ್ತಿದ್ದಾರೆ! ಅಗ್ನಿಯನ್ನು ಹೊಕ್ಕ ಪತಂಗಗಳಂತೆ ನಾಶವಾಗುತ್ತಿದ್ದಾರೆ.
ಭಯಾಶ್ಚರ್ಯಗ್ರಸ್ತನಾಗಿ ಅರ್ಜುನನು ಆ ಫೋರ ರೂಪ ಯಾರುದು, ಅವನು ಯಾರು ಎಂದು ತಿಳಿಸಿಕೊಡಬೇಕೆಂದು
ಶ್ರೀಕೃಷ್ಣನನ್ನು ಪ್ರಾರ್ಥಿಸುತ್ತಾನೆ. ಭಗವಂತನು, ತಾನು ಕಾಲನೆಂದೂ, ಅನಂತ ಲಯಕರ್ತನೆಂದೂ,
ಶತ್ರುಸೇನೆಯಲ್ಲಿರುವ ಯೋಧರನ್ನೆಲ್ಲ ನಿರ್ನಾಮ ಮಾಡಲು ಬಂದಿರುವದಾಗಿಯೂ ಹೇಳುತ್ತಾನೆ. ಅರ್ಜುನ ಈ
ಕಾರ್ಯದಲ್ಲಿ ತೊಡಗದೆ ಹೋದರೂ ತನ್ನ ಸಂಕಲ್ಪ ಇದನ್ನು ಸಾಧಿಸುವುದೆಂದೂ, ಅದರೆ ಅರ್ಜುನನು
ತನ್ನಷ್ಟಕ್ಕೆ ತಾನು ಯುದ್ಧಭಾಗಿಯಾಗಿ ಜಯ ಕೀರ್ತಿಗಳನ್ನು ಪಡೆದು ಸಾಮ್ರಾಜ್ಯ ಸುಖವನ್ನನುಭವಿಸಬೇಕೆಂದೂ
ತಿಳಿಯಹೇಳುತ್ತಾನೆ, ಆತ್ಮೀಯ ಬಂಧುವೆಂದು, ಸಖನೆಂದು, ಬಹು ಸಲುಗೆಯಿಂದ ಹಗುರವಾಗಿ
ನಡೆದಕೊಂಡುದಕ್ಕೆ ತನ್ನನ್ನು ಕ್ಷಮಿಸಬೇಕೆಂದು ಅರ್ಜುನನು ದೀನನಾಗಿ ಪುನಃ ಪ್ರಾರ್ಥಿಸುತ್ತಾನೆ.
ವಿಶ್ವರೂಪವನ್ನು ಬಿಟ್ಟು ಮತ್ತೆ ಮೊದಲಿನ ಮಾನವರೂಪವನ್ನು ತಾಳಬೇಕೆಂದೂ ಬೇಡಿ ಕೊಳ್ಳುತ್ತಾನೆ.
ವೇದಾಧ್ಯಯನದಿಂದಾಗಲಿ, ಯಜ್ಞಯಾಗಾದಿಗಳನ್ನು ಮಾಡುವುದರಿಂದಾಗಲಿ, ಜಪತಪಾದಿ ಕಠೋರ ಸಾಧನೆಯಿಂದಾಗಲಿ
ತನ್ನ ವಿಶ್ವರೂಪದ ದರ್ಶನವು ಲಭ್ಯವಾಗುವುದಿಲ್ಲವೆಂದೂ ಅನನ್ಯ ಭಕ್ತಿಯಿಂದ ಮಾತ್ರ ಆ ಭಾಗ್ಯ
ಲಭಿಸವುದೆಂದೂ ಶ್ರೀಕೃಷ್ಣನು ಹೇಳುತ್ತಾನೆ.
ಅಧ್ಯಾಯ 12
ಭಕ್ತಿಯೋಗ - 20 ಶ್ಲೋಕಗಳು
ಈಗ, ಭಕ್ತಿ ಮತ್ತು ಕರ್ಮ ಮುಖೇನ ನಿನ್ನನ್ನು ಪೂಜಿಸುವವರು ಉತ್ತಮರೊ,
ಇಲ್ಲಾ ಅವ್ಯಕ್ತವಾದ ಸತ್ಯವನ್ನೇ ಧ್ಯಾನಿಸುತ್ತ ತಪಸ್ಸು ಮಾಡುವವರು ಉತ್ತಮರೊ ಎಂದು ಅರ್ಜುನನು
ಶ್ರೀಕೃಷ್ಣನಿಗೆ ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಶ್ರೀಕೃಷ್ಣನು ಮನಸ್ಸನ್ನು ತನ್ನಲ್ಲೇ ಸಂಪೂರ್ಣವಾಗಿ
ಕೇಂದ್ರೀಕರಿಸಿ ಅನನ್ಯವಾದ ಶ್ರದ್ಧಾ-ಭಕ್ತಿಗಳಿಂದ ತನ್ನನ್ನು ಪೂಜಿಸುವವರೇ ಶ್ರೇಷ್ಠರೆಂದು
ಉತ್ತರಿಸುತ್ತಾನೆ. ಇಂದ್ರಿಯನಿಗ್ರಹ ಮಾಡಿ ಅವ್ಯಕ್ತವಾದ ಪರಮಸತ್ಯವನ್ನೇ ಕುರಿತು ಧ್ಯಾನ
ಮಾಡುವವರೂ ಸಹ ಕಡೆಗೆ ತನ್ನನ್ನು ಸೇರುವುದೇನೋ ನಿಶ್ಚಯ. ಆದರೆ ಅವರ ಮಾರ್ಗ ಅನೇಕ ತೊಂದರೆಗಳಿಂದ
ಕೂಡಿ ಕಷ್ಟಕರವಾಗಿರುತ್ತದೆ ಎಂದು ಶ್ರೀಕೃಷ್ಣನು ತಿಳಿಸುತ್ತಾನೆ. ತಮ್ಮೆಲ್ಲ ಕರ್ಮಗಳನ್ನೂ
ಭಗವದರ್ಪಣೆ ಮಾಡಿ ಭಗವಂತನನ್ನೇ ಸ್ಥಿರಮನಸ್ಸಿನಿಂದ ಚಿಂತಿಸುತ್ತ ಕರ್ಮನಿರತರಾಗಿರುವವರು ಸಾವು
ನೋವುಗಳಿಂದ ಕೂಡಿದ ಸಂಸಾರವೆಂಬ ಈ ಭವಸಾಗರವನ್ನು ಸುಲಭವಾಗಿ ಸುಗಮವಾಗಿ ದಾಟುವರು. ಅದುದರಿಂದ
ತನ್ನಲ್ಲೇ ಬುದ್ಧಿ ಮನಸ್ಸುಗಳನ್ನು ಸ್ಥಿರವಾಗಿರಿಸಬೇಕೆಂದು ಅರ್ಜುನನಿಗೆ ಬೋಧಿಸುತ್ತಾನೆ. ಹಾಗೆ
ಮಾಡುವುದು ಕಷ್ಟವೆನಿಸಿದರೂ ಸತತಾಭ್ಯಾಸ ಪ್ರಯತ್ನದಿಂದ ಅದನ್ನು ಸಾಧಿಸಬೇಕು. ಅದೂ ಆಗದಿದ್ದರೆ
ಎಲ್ಲವನ್ನೂ ಪರಮಾತ್ಮನಿಗಾಗಿ ಮಾಡುವುದನ್ನಾದರೂ ಅಭ್ಯಾಸಮಾಡಿಕೊಳ್ಳಬೇಕು. ಇದೂ ಸಹ ಭಗವಂತನೆಡೆಗೆ
ಕರೆದೊಯ್ಯುತ್ತದೆ. ಇದೂ ಸಾಧ್ಯವಾಗದೆ ಹೋದರೆ ಸಂಯಮದ ಜೀವನವನ್ನು ನಡೆಸುತ್ತ, ಮಾಡುವ ಎಲ್ಲ
ಕರ್ಮಗಳ ಫಲವನ್ನೂ ಭಗವಂತನಿಗೆ ಅರ್ಪಿಸಬೇಕು. ಭಗವಾನಿ ಶ್ರೀಕೃಣ್ಣನು ಈ ಸಂದರ್ಭದಲ್ಲಿ
ಆದರ್ಶಭಕ್ತನ ಲಕ್ಷಣಗಳನ್ನು ವಿವರಿಸುತ್ತಾನೆ. ಅಂತಹ ಭಕ್ತನಿಗೆ ಯಾರು ಬಗ್ಗೆಯೂ
ದ್ವೇಷವಿರುವುದಿಲ್ಲ. ಎಲ್ಲರೊಂದಿಗೂ ಅವನಿಗೆ ಸ್ನೇಹವಿರುತ್ತದೆ. ಎಲ್ಲರ ಬಗ್ಗೆಯೂ
ಅನುಕಂಪವಿರುತ್ತದೆ. ಅಹಂಕಾರ-ಮಮಕಾರಗಳಿಂದ ಆತ ಮುಕ್ತನಾಗಿರುತ್ತಾನೆ. ಸುಖ-ದುಃಖಗಳನ್ನು
ಸಮಾನವಾಗಿ ಸ್ವೀಕರಿಸುತ್ತಾನೆ. ಸದಾ ತೃಪ್ತನಾಗಿಯೂ ಕ್ಷಮಾಶೀಲನಾಗಿಯೂ ಇರುತ್ತಾನೆ. ತನ್ನ
ಭಾವಾವೇಗಗಳನ್ನು ಅಂಕೆಯಲ್ಲಿಟ್ಟು ಕೊಂಡಿರುವುದಲ್ಲದೆ ತನ್ನ ಮನಸ್ಸನ್ನು ಸಂಪೂರ್ಣವಾಗಿ
ಭಗವಂತನಿಗೆ ಸಮರ್ಪಿಸಿಬಿಟ್ಟಿರುತ್ತಾನೆ. ಲೋಕದ ಕ್ಷೋಭೆಗೆ ತಾನು ಎಂದೂ ಕಾರಣನಾಗುವುದಿಲ್ಲ : ಹಾಗೆಯೇ ಲೋಕ ತನ್ನ ಮನಸ್ಸನ್ನು ಪ್ರಕ್ಷುಬ್ಧಗೊಳಿಸಲೂ
ಅವಕಾಶ ನೀಡುವುದಿಲ್ಲ. ಹಿಗ್ಗು ಭಯ ಕೋಪ ಕಳವಳಗಳಿಂದ ಮುಕ್ತನಾಗಿರುತ್ತಾನೆ. ಸುಖ-ದುಃಖ,
ರಾಗ-ದ್ವೇಷ ಇವುಗಳಿಗತೀತನಾಗಿ, ಒಳ್ಳೆಯವೊ-ಕೆಟ್ಟವೊ, ಅಂತೂ ಎಲ್ಲಾ ಬಗೆಯ ಕರ್ಮಗಳನ್ನೂ
ಪರಿತ್ಯಜಿಸಿರುತ್ತಾನೆ. ಭಕ್ತಿಯುಳ್ಳವನಾಗಿ ಶತ್ರುಗಳನ್ನೂ ಮಿತ್ರರನ್ನೂ ಸಮಾನದೃಷ್ಟಿಯಿಂದ
ಕಾಣುತ್ತಾನೆ. ಹಾಗೆಯೇ ಮಾನಾಪ ಮಾನಗಳನ್ನೂ ಸಮಚಿತ್ತಿದಿಂದ ಸ್ವೀಕರಿಸುತ್ತಾನೆ.
ಸದಾಸಂತುಷ್ಟನಾಗಿದ್ದು, ನೆಮ್ಮದಿಯಿಂದ ಮಲಗಲು ಎಲ್ಲಿಯೂ ನೆಲೆಯಿಲ್ಲದಿರುವಾಗ ಸಹ
ಸ್ಥಿರಚಿತ್ತನಾಗಿರುತ್ತಾನೆ. ಅಂತಹ ಭಕ್ತನೇ ಪರಮಾತ್ಮನಿಗೆ ಸರ್ವದಾ ಪ್ರಿಯನಾದವನು. ಭಗವಂತನನ್ನೇ
ಜೀವಿತದ ಪರಮಗುರಿಯೆಂದು ದೃಢವಾಗಿ ಅರಿತು ಈ ಚಿರಕಲ್ಯಾಣಮಾರ್ಗವನ್ ಅನುಸರಿಸಿ ನಡೆಯುವಂಥ ಭಕ್ತರೇ
ಪರಮಾತ್ಮನಿಗೆ ಅತ್ಯಂತ ಪ್ರಿಯರಾದವರು.
ಅಧ್ಯಾಯ 13
ಕ್ಷೇತ್ರ-ಕ್ಷತ್ರಜ್ಞ-ಯೋಗ - 34 ಶ್ಲೋಕಗಳು
ಆತ್ಮತತ್ತ್ವ ಬೋಧನೆಯನ್ನು ಮುಂದುವರಿಸುತ್ತ ಶ್ರೀಕೃಷ್ಣನು ಕ್ಷೇತ್ರ
ಮತ್ತು ಕ್ಷೇತ್ರಜ್ಞ ಎಂಬ ಆಧ್ಯಾತ್ಮಿಕ ಪಾರಿಭಾಷಿಕ ಶಬ್ದಗಳನ್ನು ವಿವರಿಸುತ್ತಾನೆ. ದೇಹವೇ
ಕ್ಷೇತ್ರ. ಅದರೊಳಗಿರುವ ಆತ್ಮನೇ ಕ್ಷೇತ್ರಜ್ಞ. ಈ ಎರಡನ್ನೂ ಹಿಂದಿನ ಋಷಿಗಳು ತಮ್ಮ ಹಲವಾರು
ಗ್ರಂಥಗಳಲ್ಲಿ ವಿಸ್ತಾರವಾಗಿ ವಿವರಿಸಿದ್ದಾರೆ. ಅಂತಿಮ ವಿಶ್ಲೇಷಣೆಯಲ್ಲಿ ಶ್ರೀಕೃಷ್ಣನೇ ಪರಮ
ಈಶ್ವರನಾಗಿರುವುದರಿಂದ ಎಲ್ಲ ಕ್ಷೇತ್ರಗಳ ಕ್ಷೇತ್ರಜ್ಞನೆಂದು ತಿಳಿಯಬೇಕು. ಪಂಚಭೂತಗಳು, ಬುದ್ಧಿ,
ಆಹಂಕಾರ, ಪಂಚೀಂದ್ರಿಯಗಳು, ಮನಸ್ಸು, ಭೋಗವಸ್ತುಗಳು, ಸುಖ-ದುಃಖ – ಎವೆಲ್ಲವೂ ಕ್ಷೇತ್ರಕ್ಕೆ
ಸೇರಿದವುಗಳು. ವಿನಯ, ನಮ್ಮತೆ, ಸರಳತೆ, ಅಹಿಂಸೆ, ಪರಾಮಾಣಿಕತೆ, ಗುರುಸೇವೆ, ಮನಶ್ಯುದ್ಧಿ,
ಅತ್ಮಸಂಯಮ, ನಿರ್ಮೋಹ, ನಿರಹಂಕಾರ, ಸಮಚಿತ್ತ, ಭಗವದ್ಭಕ್ತಿ (ಅಂದರೆ ಪರಮೇಶ್ವರನಾದ ಶ್ರೀಕೃಷ್ಣನಲ್ಲಿ
ಭಕ್ತಿ) ಮುಂತಾದ ಸದ್ಗುಣಗಳನ್ನು ಬೆಳೆಸಿಕೊಳ್ಳುವುದು ಜ್ಞಾನದೊಳಗೆ ಸೇರಿದೆ. ಜನವಿದೂರವಾದ ಎಕಾಂತ
ಸ್ಥಳಗಳಲ್ಲಿ ಇರುವುದು, ಆತ್ಮಜ್ಞಾನದಲ್ಲಿ ಸ್ಥಿರವಾದ ಪ್ರೀತಿಯನ್ನು ಇಡುವುದು ಇವೂ ಸಹ
ಜ್ಞಾನವನ್ನು ಪಡೆಯಲು ಸಹಾಯಕವಾಗುತ್ತವೆ.
ಅನಂತರ ಜ್ಞೇಯದ (ತಿಳಿಯಬೇಕಾದುದರ), ಅಂದರೆ ಯಾವುದನ್ನು ತಿಳಿದರೆ
ಜರಾಮರಣಗಳನ್ನು ದಾಟಿ ಅಮೃತತ್ವನ್ನು ಪಡೆಯಬಹುದೊ ಆ ಬ್ರಹ್ಮದ, ವರ್ಣನೆ ಬರುತ್ತದೆ. ಬ್ರಹ್ಮಕ್ಕೆ
ಆದಿಯಿಲ್ಲ. ಅಂತ್ಯವಿಲ್ಲ. ಇರುವಿಕೆ ಎಂದಾಗಲೀ ಇಲ್ಲದಿರುವಕೆಎಂದಾಗಲೀ ಅದನ್ನು
ಅರ್ಥೈಸುವುದಕ್ಕಾಗುವುದಿಲ್ಲ. ಎಲ್ಲೆಡೆಯೂ ಅದರ ಬಾಹುಗಳಿವೆ, ಕಾಲುಗಳಿವೆ, ಕಣ್ಣುಗಳಿವೆ.
ಕಿವಿಗಳಿವೆ, ಮುಖಗಳಿವೆ. ಅದು ಎಲ್ಲವನ್ನೂ ವ್ಯಾಪಿಸಿದೆ. ಇಂದ್ರಿಯಪ್ರವೃತ್ತಿಗಳ ಮೂಲಕವೇ ಅದು
ವ್ಯಕ್ತವಾದರೂ ಇಂದ್ರಿಯರಹಿತವಾಗಿದೆ. ಎಲ್ಲ ಜೀವಿಗಳ ಒಳಗೂ ಹೊರಗೂ ಅದೇ ಇದೆ. ಅದು ಬೆಳಕಿನ
ಬೆಳಕು. ಅದು ಜ್ಞಾನ ಮತ್ತು ಜ್ಞೇಯ ಎರಡೂ ಆಗಿದೆ. ಎಲ್ಲದರ ಹೃದಯದಲ್ಲೂ ನೆಲೆಗೊಂಡಿದೆ.
ಪ್ರಕೃತಿ (ಕ್ಷೇತ್ರ) ಮತ್ತು ಪುರುಷ (ಕ್ಷೇತ್ರಜ್ಞ) ಎರಡೂ ಅನಾದಿ.
ಪ್ರಕೃತಿಯಲ್ಲಿ ನೆಲೆಗೊಂಡ ಪ್ರರುಷ, ಗುಣಗಳಿಂದ ಉಂಟಾಗುವ ಸುಖ ದುಃಖಗಳನ್ನು ಅನುಭವಿಸುತ್ತಾನೆ.
ಗುಣಗಳಿಗೆ ಅಂಟಿಕೊಳ್ಳುವುದರಿಂದ ಉತ್ತಮ ಇಲ್ಲವೆ ಹೀನ ಜನ್ಮಗಳುಂಟಾಗುತ್ತವೆ.
ಪ್ರಕೃತಿ-ಪುರುಷರಿಗೆ ಸಂಬಂಧಿಸಿದ ಈ ಜ್ಞಾನವನ್ನು ಪಡೆದವರಿಗೆ ಪುನರ್ಜನ್ಮವಿರುವುದಿಲ್ಲ.
ಪರಿಶುದ್ಧವಾದ ಮನಸ್ಸಿನಿಂದಾಗಲಿ, ಜ್ಞಾನಯೋಗದ ಅಥವಾ ಕರ್ಮಯೋಗದ ಮೂಲಕವಾಗಲಿ ಆತ್ಮನನ್ನು
(ಪುರುಷನನ್ನು) ಸಾಕ್ಷಾತ್ಕಾರ ಮಾಡಿಕೊಂಡವರು ಮೃತ್ಯುವಿಗೆ ಅತೀತರಾಗುತ್ತಾರೆ. ಕ್ಷೇತ್ರ ಮತ್ತು
ಕ್ಷೇತ್ರಜ್ಞರ ಸಂಯೋಗದಿಂದಲೇ ಈ ಜಗತ್ತಿನ ಪ್ರತಿಯೊಂದೂ ಸೃಷ್ಟಿಸಲ್ಪಟ್ಟಿದೆ. ಈ ಸೃಷ್ಟಿಯ ಎಲ್ಲ
ರೂಪಗಳಲ್ಲೂ, ಬೇಧವಿಲ್ಲದೆ, ಪರಮೇಶ್ವರನೇ ಅಂತರ್ಗತನಾಗಿರುತ್ತಾನೆ. ಈ ಸತ್ಯವನ್ನರಿತವರು ಜೀವನದ
ಪರಮಗುರಿಯನ್ನು ಸಾಧಿಸುತ್ತಾರೆ. ಪ್ರಕೃತಿಯೇ ಕರ್ಮನಿರತವಾಗುತ್ತದೆಯಲ್ಲದೆ ದೇಹದಲ್ಲಿ
ನೆಲೆಗೊಂಡಿರು ಆತ್ಮ ಕರ್ಮವನ್ನು ಮಾಡುವುದೂ ಇಲ್ಲ, ಕರ್ಮದೂಷಿತವೂ ಆಗಿರುವುದಿಲ್ಲ. ಅದು
ಆಕಾಶದಂತೆ ಪರಿಶುಭ್ರವಾಗಿರುತ್ತದೆ. ಸಮಸ್ತ ಜಗತ್ತನ್ನೂ ಪ್ರಕಾಶಗೊಳಿಸುವ ಸೂರ್ಯನಂತೆ
ಕ್ಷೇತ್ರಜ್ಞನೇ ಕ್ಷೇತ್ರವನ್ನು ಪ್ರಜ್ಞೆಯ ಬೆಳಕಿನಿಂದ ಪ್ರಕಾಶಗೊಳಿಸುತ್ತಾನೆ.
ಅಂತಃಪ್ರಜ್ಞೆಯಿಂದ ಯಾರು ಕ್ಷೇತ್ರ ಮತ್ತು ಕ್ಷೇತ್ರಜ್ಞ ಈ ಎರಡರ ವ್ಯತ್ಯಾಸವನ್ನು
ತಿಳಿದುಕೊಳ್ಳುತ್ತಾರೊ ಅವರು ಬ್ರಹ್ಮತ್ವವನ್ನು ಪಡೆಯುತ್ತಾರೆ.
ಅಧ್ಯಾಯ 14
ಗುಣತ್ರಯ-ವಿಭಾಗ-ಯೋಗ - 27 ಶ್ಲೋಕಗಳು
ಈಗ ಶ್ರೀಕೃಷ್ಣನು ಯಾವ ಜ್ಞಾನವನ್ನು ಪಡೆದುದರಿಂದ ಋಷಿಗಳು
ಪರಿಪೂರ್ಣಾವಸ್ಥೆಯನ್ನು ಪಡೆದರೊ ಆ ಪರಮಶ್ರೇಷ್ಠವಾದ ಪರಜ್ಞಾನವನ್ನು ವಿವರಿಸಿ ತಿಳಿಸುವುದಾಗಿ
ಆಶ್ವಾಸನೆ ನೀಡುತ್ತಾನೆ. ವಿಶ್ವದ ಪ್ರಭುವಾದ ಆತ ಮಹತ್ ಪ್ರಕೃತಿಯಲ್ಲಿ ಬೀಜವನ್ನಿಟ್ಟ
ಪರಿಣಾಮವಾಗಿ ವಿಶ್ವವು ಸೃಷ್ಟಿಯಾಯಿತು, ಮತ್ತು ಅದೇ ರೀತಿಯಲ್ಲಿ ಸೃಷ್ಟಿ ಮುಂದುವರಿಯುತ್ತಿದೆ.
ಸಮಸ್ತ ಜೀವಕೋಟಿಗೆ ಅವನೇ ತಂದೆ. ಮಹತ್ ಪ್ರಕೃತಿಯೇ ತಾಯಿ. ಈ ಪ್ರಕೃತಿಯಿಂದ ಸತ್ತ್ವ, ರಜಸ್ಸು,
ತಮಸ್ಸು ಎಂಬ ಮೂರು ಗುಣಗಳು ಹುಟ್ಟುತ್ತವೆ. ಸತ್ತ್ವಗುಣ ಶುದ್ಧವಾದುದು, ಪ್ರಕಾಶಮಾನವಾದುದು
ಜ್ಞಾನವನ್ನೂ ಸಂತೋಷವನ್ನೂ ಉಂಟುಮಾಡುವಂಥದ್ದು. ಆ ಮೂಲಕ ಅದು ಆತ್ಮನನ್ನು ಬಂಧಿಸುತ್ತದೆ. ರಜಸ್ಸು
ರಾಗ ಗುಣವುಳ್ಳದ್ದು. ಕಾಮ ಮೋಹಗಳನ್ನುಂಟುಮಾಡಿ ದೇಹವಾಸಿಯಾದ ಆತ್ಮನನ್ನು ಕರ್ಮದ ಮೂಲಕ
ಬಂಧಿಸುತ್ತದೆ. ತಮಸ್ಸು ಅಜ್ಞಾನಜನ್ಯವಾದದು. ಅವಿಚಾರ ನಿದ್ರೆ ನಿಷ್ಕ್ರಿಯೆಗಳಿಂದ ಜೀವಿಗಳಿಗೆ
ಭ್ರಮೆ ಕವಿಯುವಂತೆ ಮಾಡುತ್ತದೆ. ತಮಸ್ಸು ಜ್ಞಾನವನ್ನು ಮುಚ್ಚಿ ಅವಿಚಾರಕ್ಕೆ ಕಟ್ಟು
ಬೀಳಿಸುತ್ತದೆ. ಈ ಮೂರೂ ಗುಣಗಳು ಸದಾ ಪರಸ್ಪರ
ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ತೊಡಗಿರುತ್ತವೆ. ಜ್ಞಾನವೃದ್ಧಿಯಾಗುತ್ತಿದ್ದರೆ ಸತ್ತ್ವಗುಣ
ಹೆಚ್ಚಾಗುತ್ತಿದೆ ಎಂದು ತಿಳಿಯಬೇಕು. ಲೋಭ ಮತ್ತ ಕಾರ್ಯ ಚಟುವಟಿಕೆ ಹೆಚ್ಚಾಗುತ್ತಿದ್ದರೆ ರಜೋಗುಣ
ಪ್ರಧಾನವಾಗುತ್ತಿದೆ ಎಂದು ತಿಳಿಯಬೇಕು. ಮೌಢ್ಯ ವಿಚಾರಹೀನತೆ ಭ್ರಮೆಗಳು ತುಂಬಿದ್ದರೆ ತಮಸ್ಸು
ಹೆಚ್ಚಾಗುತ್ತಿದೆ ಎಂದು ತಿಳಿಯಬೇಕು. ಸತ್ತ್ವಗುಣ ಪ್ರಧಾನವಾಗಿರುವಾಗ ಸಾವು ಬಂದರೆ ಜೀವ ಪುಣ್ಯ
ಲೋಕಗಳಿಗೆ ಹೋಗುತ್ತದೆ. ಮರಣಸಮಯದಲ್ಲಿ ರಜೋಗುಣ ಉಚ್ಚವಾಗಿದ್ದರೆ ಆ ಜೀವ ಕರ್ಮದಲ್ಲೇ ಸದಾ
ಸಂತೋಷಿಸುವ ಕುಟುಂಬಗಳಲ್ಲಿ ಹುಟ್ಟುತ್ತದೆ. ತಮೋಗುಣ ಉಚ್ಚವಾಗಿದ್ದರೆ ಆ ಜೀವ ಪಶುಜನ್ಮವನ್ನು
ಪಡೆಯುತ್ತದೆ. ಈ ತ್ರಿಗುಣಗಳೇ ಎಲ್ಲವನ್ನೂ ಮಾಡುವುದು, ಆತ್ಮನು ಅವುಗಳಿಂದ ನಿರ್ಲಿಪ್ತನಾಗಿರುತ್ತಾನೆ
ಎಂದು ಅರಿತವರು ನನ್ನನ್ನು ಹೊಂದುತ್ತಾರೆ.
ಈ ಸಂದರ್ಭದಲ್ಲಿ ಅರ್ಜುನನು ಗುಣಾತೀತನಾದವನ ಲಕ್ಷಣಗಳನ್ನು
ತಿಳಿಯಬಯಸುತ್ತಾನೆ. ಅವನ ಕೋರಿಕೆಗೆ ಉತ್ತರಿಸುತ್ತ ಶ್ರೀಕೃಷ್ಣನು, ತ್ರಿಗುಣಗಳ ಪರಿಣಾಮಕ್ಕೆ
ಒಳಗಾಗದಿರುವವನೇ ಗುಣಾತೀತ ಎನ್ನುತ್ತಾನೆ. ಗುಣಾತೀತ ಗುಣಗಳ ಚಟುವಟಿಕೆಗಳ ಬಗ್ಗೆ
ಉದಾಸೀನನಾಗಿರುತ್ತಾನೆ. ಸುಖ-ದುಃಖಗಳಲ್ಲಿ ಸಮಚಿತ್ತನಾಗಿರುತ್ತಾನೆ. ಮಣ್ಣಿನ ಹೆಂಟೆಯಾಗಲಿ,
ಕಲ್ಲಾಗಲಿ, ಚಿನ್ನವಾಗಲಿ ಅವನ ದೃಷ್ಟಿಯಲ್ಲಿ ಅವುಗಳಿಗೆ ಸಮಾನ ಬೆಲೆ. ಪ್ರಿಯ-ಅಪ್ರಿಯ,
ಸ್ತುತಿ-ನಿಂದೆ ಇವುಗಳನ್ನು ಆತ ಸಮಾನವಾಗಿ ಕಾಣುತ್ತಾನೆ. ತಾನಾಗಿ ಯಾವ ಕರ್ಮವನ್ನೂ ಕೈಕೊಳ್ಳುವುದಿಲ್ಲ.
ಅನನ್ಯ ಮನಸ್ಸಿನಿಂದ ಮತ್ತು ಪ್ರೇಮದಿಂದ ನನ್ನ (ಅಂದರೆ ಪರಮಾತ್ಮನ) ಸೇವೆಯನ್ನು ಮಾಡುತ್ತಾನೆ.
ಹೀಗಿರುವವನೇ ಗುಣಾತೀತ, ಬ್ರಹ್ಮತ್ವವನ್ನೈದುವುದಕ್ಕೆ ಆತ ಯೋಗ್ಯನಾಗಿರುತ್ತಾನೆ.
ಅಧ್ಯಾಯ 15
ಪುರುಷೋತ್ತಮ-ಯೋಗ - 20 ಶ್ಲೋಗಳು
ಸೃಷ್ಟಿಸಲ್ಪಟ್ಟ ಈ ಜಗತ್ತನ್ನು ಅಥವಾ ಸಂಸಾರವನ್ನು ಶ್ರೀಕೃಷ್ಣನು
ತಲೆಕೆಳಗಾದ ವೃಕ್ಷಕ್ಕೆ ಹೋಸಿಲಿ ಬಣ್ಣಿಸುತ್ತಾನೆ. ಮೇಲಕ್ಕೆ ಚಾಚಿರುವ ಅದರ ಬೇರು ಪರಬ್ರಹ್ಮ-ಪರಮಸತ್ಯ.
ತ್ರಿಗುಣಗಳು ಕೆಳಗೆ ಹರಡಿರುವ ಶಾಖೆಗಳು. ವೇದಗಳೇ ಅದರ ಎಲೆಗಳು. ವೈದಿಕ ಧರ್ಮದ ಅಚರಣೆಗಳೇ ಕವಲು
ಬೇರುಗಳು. ಇವೆಲ್ಲ ಕೆಳಗೆ ಹರಡಿಕೊಂಡಿವೆ. ಅದರೆ ಕಣ್ಣಿಗೆ ಹಾಗೆ ಕಾಣುವುದಿಲ್ಲ. ಈ ವೃಕ್ಷದ
ಮೂಲವನ್ನಾಗಲಿ, ತುದಿಯನ್ನಾಗಲಿ, ಮಧ್ಯಭಗವನ್ನಾಗಲಿ, ಬುದ್ಧಿಯು ಗ್ರಹಿಸಿ ಅರ್ಥಮಾಡಿಕೊಳ್ಳಲಾರದು.
ನಿರ್ಮೋಹದ ಕೊಡಲಿಯಿಂದ ಈ ಮರವನ್ನು ಕಡಿದುಹಾಕಿ ಅದರಾಚೆಗಿರುವ ಅವ್ಯಯ ಜ್ಞಾನವನ್ನು ಎಂದರೆ,
ಮತ್ತೆ ಈ ಐಹಿಕ ಬದುಕಿಗೆ ಹಿಂತಿರುಗದಂತೆ ಮಾಡುವ ಜ್ಞಾನವನ್ನು, ಹುಡುಕಬೇಕು. ಸಂಸಾರವೃಕ್ಷ ಯಾರಿಂದ ಹೊಮ್ಮಿತೊ ಆ ಆದಿಪುರಷನಲ್ಲಿ ಆಶ್ರಯ
ಪಡೆಯಬೇಕು. ಅಹಂಕಾರ ಮಮಕಾರ ಭ್ರಮೆ ಇಲ್ಲದವರೂ ಅಸೆಗಳಿಂದ ಮತ್ತು ನೋವು-ನಲಿವು ಮುಂತಾದ
ದ್ವಂದ್ವಗಳಿಂದ ಮುಕ್ತರೂ, ಈಶ್ವರನಲ್ಲಿ ಭಕ್ತಿಯುಳ್ಳವರೂ ಆದ ಜ್ಞಾನಿಗಳು ಮಾತ್ರ ಆ ಅಮರಧಾಮವನ್ನು
ಸೇರಬಲ್ಲರು. ಸೂರ್ಯನಾಗಲಿ ಚಂದ್ರನಾಗಲಿ ಅಗ್ನಿಯಾಗಲಿ ಆ ಧಾಮವನ್ನು ಬೆಳಗಿಸಲಾರರು. ಒಮ್ಮೆ
ಅಲ್ಲಿಗೆ ಹೋಗಿ ಸೇರಿದವರು ಮತ್ತೆ ಹುಟ್ಟಿ ಬರುವುದಿಲ್ಲ. ಜೀವಾತ್ಮನ ವಿಚಾರಕ್ಕೆ ಬಂದರೆ, ಅವನು ಪರಬ್ರಹ್ಮನ
ಒಂದು ಸಣ್ಣ ಅಂಶ. ಈ ಜಗತ್ತಿನಲ್ಲಿ ಜನಿಸುವಾಗ ಅವನು ಪಂಚಜ್ಞಾನೇಂದ್ರಿಯಗಳನ್ನೂ ಮನಸ್ಸನ್ನೂ
ತನ್ನೆಡೆಗೆ ಸೆಳೆದುಕೊಳ್ಳುತ್ತಾನೆ. ದೇಹವನ್ನು ಬಿಡುವಾಗ, ಗಾಳಿಯು ಪುಷ್ಪದಿಂದ ಸೌರಭವನ್ನು
ಕೊಂಡೊಯ್ಯುವ ಹಾಗೆ, ತನ್ನೊಂದಿಗೆ ಅವುಗಳನ್ನು ಕೊಂಡೊಯ್ಯುತ್ತಾನೆ. ಈ ಮನಸ್ಸು ಹಾಗೂ
ಪಂಚೇಂದ್ರಿಯಗಳ ಮೂಲಕವೇ ಜೀವನು ಭೌತಿಕ ವಸ್ತುಗಳನ್ನು ಉಪಭೋಗಿಸುತ್ತಾನೆ. ಈ ಸೂಕ್ಷ್ಮಾತ್
ಸೂಕ್ಷ್ಮವಾದ ಜೀವಾತ್ಮನನ್ನು ಅಜ್ಞಾನಿಗಳಾದವರು ನೋಡಲಾರರು. ಜ್ಞಾನಿಗಳಾದವರು ಮಾತ್ರ ನೋಡಬಲ್ಲರು.
ಪರಿಪೂರ್ಣತೆಯನ್ನು ಪಡೆಯಲೆತ್ನಿಸುವ ಯೋಗಿಗಳು ಜೀವಾತ್ಮನನ್ನು ದರ್ಶಿಸುವುದರಲ್ಲಿ
ಸಫಲರಾಗುತ್ತಾರೆ.
ಬೋಧನೆಯನ್ನು ಮುಂದುವರಿಸುತ್ತ ಶ್ರೀಕೃಷ್ಣನು ತಾನೇ ಈಶ್ವರನೆಂದೂ
ಬೆಳಕಿನ ಬೆಳಕೆಂದೂ ತಿಳಿಸುತ್ತಾನೆ. “ನಾನೇ ಈ ಬುವಿಗೆ ಆಧಾರ. ಚಂದ್ರನ ಮೂಲಕ ಈ ಎಲ್ಲ ಸಸ್ಯಸಂಪದವನ್ನೂ ನಾನೇ
ಪೋಷಿಸುತ್ತೇನೆ. ನಾನೇ ಜಠರದಲ್ಲಿ ನೆಡೆಯುವ ಜೀರ್ಣಕ್ರಿಯೆಗೆ ಕಾರಣನಾದ ವೈಶ್ವಾನರಾಗ್ನಿ.
ಎಲ್ಲರೊಳಗೂ ಅಂತರ್ಗತವಾಗಿರುವ ಚೈತನ್ಯ ನಾನು. ವೇದಗಳಲ್ಲಿರುವ ಪ್ರಾರ್ಥನೆ ನನ್ನನ್ನು ಕುರಿತೇ
ಇದೆ. ನಾನೇ ವೇದಾಂತವನ್ನು ಸೃಷ್ಟಿಸಿದ್ದೇನೆ.
“ಈ ಜಗತ್ತಿನಲ್ಲಿ ಇಬ್ಬರು ಫುರಷರಿದ್ದಾರೆ. ಕ್ಷರ ಮತ್ತು
ಅಕ್ಷರ ಎಂದು. ಕ್ಷರ ಎಂದರೆ ನಾಶವುಳ್ಳ, ಅಕ್ಷರ ಎಂದರೆ ನಾಶವಿಲ್ಲದ – ಪುರುಷ. ನಾನು ಪರಮಾತ್ಮ,
ಪುರುಷೋತ್ತಮ, ಎರಡು ಬಗೆಯ ಪುರುಷರಿಂದಲೂ ಭಿನ್ನನಾದವನು, ವಿಶಿಷ್ಟನಾದವನು ಮೂರು ಲೋಕಗಳನ್ನೂ
ವ್ಯಾಪಿಸಿರುವವನು. ನನ್ನ ಈ ರಹಸ್ಯವನ್ನು ಅರಿತವನೇ ಜ್ಞಾನಿ, ಸರ್ವಜ್ಞ, ಎಲ್ಲ ರೂಪಗಳಲ್ಲೂ ಎಲ್ಲ
ಬಗೆಯಲ್ಲೂ ಅವನು ನನ್ನನ್ನೇ ಪೂಜಿಸುತ್ತಾನೆ.”
ಅಧ್ಯಾಯ 16
ದೈವಾಸುರ-ಸಂಪದಿ-ವಿಭಾಗ-ಯೋಗ - 24 ಶ್ಲೋಕಗಳು
ಈಗ ಶ್ರೀಕೃಷ್ಣನು ಯಾವ ಗುಣಗಳು ಮನುಷ್ಯನನ್ನು ದೇವನನ್ನಾಗಿ
ಮಾಡುತ್ತವೆ, ಯಾವ ಗುಣಗಳು ಅವನನ್ನು ದಾನವನನ್ನಾಗಿ ಮಾಡುತ್ತವೆ ಎಂಬುದನ್ನು ತಿಳಿಸಿ ಈ
ಭಿನ್ನಸ್ವಭಾವ ಲಕ್ಷಣಗಳನ್ನು ವಿವರಿಸುತ್ತಾನೆ. ದೇವನನ್ನಾಗಿ ಮಾಡುವ ಗುಣಗಳು ದೈವೀಗುಣ
ಸಂಪದವೆಂದೂ, ದಾನವನನ್ನಾಗಿ ಮಾಡುವ ಗುಣಗಳು ಅಸುರೀ ಗುಣಸಂಪದವೆಂದೂ ಹೇಳುತ್ತಾನೆ. ದೈವೀಗುಣ
ಮೋಕ್ಷಕ್ಕೂ ಅಸುರೀಗುಣ ಬಂಧನಕ್ಕೂ ಕಾರಣವಾಗುವುದರಿಂದ ಅರ್ಜುನನು ದೈವೀಗುಣ ಸಂಪದವನ್ನು
ಬೆಳೆಸಿಕೊಳ್ಳಬೇಕೆಂದು ಉಪದೇಶಿಸುತ್ತಾನೆ. ದೈವೀಗುಣ ಸಂಪತ್ತಿನಲ್ಲಿ 26 ಗುಣಗಳಿವೆ. ಅವುಗಳಲ್ಲಿ
ಮುಖ್ಯವಾದವುಗಳು ನಿರ್ಭಯತೆ, ಚಿತ್ತಶುದ್ಧಿ, ಆತ್ಮಸಂಯಮ, ವೈದಾಧ್ಯಯನ, ತಪಸ್ಸು, ಅಹಿಂಸೆ, ಸತ್ಯ,
ತ್ಯಾಗಮನೋಭಾವ, ಭೂತದಯೆ, ಕ್ಷಮೆ, ನಿರಹಂಕಾರ, ಅಸುರೀಗುಣ ಸಂಪತ್ತಿನಲ್ಲಿ ಆರು ದುರ್ಗುಣಗಳಿವೆ
ಆಷಾಢಭೂತಿತನ, ಸ್ವಪ್ರತಿಷ್ಠೆ, ಸ್ವಾರ್ಥ, ಕೋಪ, ಒರಟುಮಾತು, ಉನ್ನತ ಮೌಲ್ಯಗಳ ಬಗ್ಗೆ ಆಜ್ಞಾನ.
ಬಳಿಕ ಶ್ರೀಕೃಷ್ಣನು, ದುಷ್ಟರು, ರಾಕ್ಷಸ ಸ್ವಭಾವದವರು
ಹೇಗಿರುತ್ತಾರೆ, ಹೇಗೆ ನಡೆದುಕೊಳ್ಳುತ್ತಾರೆ, ಅವರ ಜೀವನ ರೀತಿ ಹೇಗಿರುತ್ತದೆ ಎಂಬ ಬಗ್ಗೆ
ಸುದೀರ್ಘವಾಗಿ, ಸ್ವಾರಸ್ಯವಾಗಿ ವಿವರಿಸುತ್ತಾನೆ. ಅವರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂಬುದೂ
ತಿಳಿಯುವುದಿಲ್ಲ, ಕೆಟ್ಟ ಕೆಲಸವನ್ನು ಬಿಡಬೇಕು ಎಂಬುದೂ ತಿಳಿಯುವುದಿಲ್ಲ. ಅವರಲ್ಲಿ ಸತ್ಯವಾಗಲೀ,
ಭಾವಶುದ್ಧಿಯಾಗಲೀ ಇರುವುದಿಲ್ಲ. ಕಾಮವೆ ಸೃಷ್ಟಿಗೆ ಮೂಲಕಾರಣವೆಂದೂ ಕಾಮೋಪಭೋಗವೇ ಬದುಕಿನ
ಸರ್ವಸ್ವವೆಂದು ಅವರು ಭಾವಿಸುತ್ತಾರೆ. ಹೀಗೆ ವಿಷಯ ಲಾಲಸೆ-ಇಂದ್ರಿಯ ಚಾಪಲ್ಯಗಳಿಗೆ ಒಳಗಾಗಿ
ಭ್ರಮಿಷ್ಠರಾಗಿ ಅಪವಿತ್ರ ವಸ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ತಮ್ಮ ಐಶ್ವರ್ಯದ ಬಗ್ಗೆ,
ತಮ್ಮ ಕಾರ್ಯಸಾಧನೆಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುತ್ತಾರೆ. ತಮ್ಮ ಶತ್ರುಗಳನ್ನು ಕೊಲ್ಲುವುದರಲ್ಲಿ
ಸಂತೋಷ ಪಡುತ್ತಾರೆ. ಎಲ್ಲರ ಅಂತರಂಗದಲ್ಲೂ ಇರುವ ಭಗವಂತನನ್ನು ದ್ವೇಷಿಸುತ್ತಾರೆ. ಅಂಥವರನ್ನು
ನಾನು ನಿರಂತರವಾಗಿ ಅಧಮ ಜನ್ಮಗಳಿಗೇ ನೂಕುತ್ತೇನೆ ಎನ್ನುತ್ತಾನೆ ಶ್ರೀಕೃಷ್ಣ.
ಜೀವರಿಗೆ ಅತ್ಮನಾಶವನ್ನು ತರುವ ನರಕದ ದ್ವಾರಗಳು ಮೂರು ಕಾಮ, ಕ್ರೋಧ
ಮತ್ತು ಲೋಭ. ಇವುಗಳಿಂದ ಮುಕ್ತರಾಗಿರುವವರು ಮಾತ್ರ ಉನ್ನತ ಲೋಕವನ್ನು ಸೇರುತ್ತಾರೆ. ಅದುದರಿಂದ
ಕಾಮ ಕ್ರೋಧ ಲೋಭಗಳನ್ನು ಗೆಲ್ಲಲು ಪವಿತ್ರವಾದ ವೇದ-ಶಾಸ್ತ್ರಗಳಲ್ಲಿ ಉಕ್ತವಾದ ನಿಯಮಗಳನ್ನು
ಶ್ರದ್ಧಾಪುರ್ವಕವಾಗಿ ಪಾಲಿಸಬೇಕು.
ಅಧ್ಯಾಯ 17
ಶ್ರದ್ಧಾತ್ರಯ-ವಿಭಾಗ-ಯೋಗ - 28 ಶ್ಲೋಕಗಳು
ಈಗ ಅರ್ಜುನನು ಸ್ವಾರಸ್ಯವಾದ ಪ್ರಶ್ನೆಯೊಂದನ್ನು ಹಾಕುತ್ತಾನೆ
ಪವಿತ್ರವಾದ ಶಾಸ್ತ್ರಗ್ರಂಥಗಳಲ್ಲಿ ಉಲ್ಳೇಖವಾದ ನಿಯಮಗಳಂತೆ ನಡೆಯದೆ ವಿವಿಧ ದೇವ-ದೇವತೆಗಳನ್ನು
ಪೂಜಿಸುವವರು ಶ್ರದ್ಧೆ ಸಾತ್ತ್ವಿಕವೊ, ರಾಜಸವೊ, ತಾಮಸವೊ
ಅವರವರ ಸ್ವಭಾವ ಮನೋಧರ್ಮಗಳಿಗನುಗುಣವಾಗಿ ಅದು ಈ ಮೂರು ಗುಣಗಳಲ್ಲಿ
ಯಾವುದಾದರೂ ಆಗಬಹುದು ಎಂದು ಶ್ರೀಕೃಷ್ಣನು ಉತ್ತರಿಸುತ್ತಾನೆ. ಸಾತ್ತ್ವಿಕಗುಣ ಉಳ್ಳವರು
ದೇವತೆಗಳನ್ನು ಪೂಜಿಸುತ್ತಾರೆ. ರಾಜಸಿಕರು ಯಕ್ಷ-ರಾಕ್ಷಸ ಮುಂತಾದ ಅರೆ ದೈವೀ ಶಕ್ತಿಗಳನ್ನು
ಉಪಾಸಿಸುತ್ತಾರೆ. ತಾಮಸಿಕರು ಭೂತ ಮುಂತಾದ ಕ್ಷುದ್ರ ಶಕ್ತಿಗಳನ್ನು ಪೂಜಿಸುತ್ತಾರೆ.
ಶ್ರದ್ಧೆ-ನಂಬಿಕೆಗಳಂತೆ ಆಹಾರದಲ್ಲೂ ಮೂರು ಬಗೆ. ಹಾಗೆಯೇ ಯಜ್ಞ ದಾನ
ತಪಸ್ಸುಗಳಲ್ಲೂ ಮೂರು ಬಗೆ. ಆರೋಗ್ಯ, ಶಕ್ತಿ, ಮನಶ್ಶುದ್ಧಿ ಇವುಗಳಿಗೆ ಅನುಕೂಲಕರವಾದುದು,
ಪೋಷಕವಾದುದು ಸಾತ್ತ್ವಿಕ ಆಹಾರ, ಬಹು ಕಟುವಾದುದು, ಉಪ್ಪು-ಹುಳಿ, ಖಾರ-ಮಸಾಲೆ
ಹೆಚ್ಚಾಗಿರುವಂತಹುದು, ರೋಗಕಾರಕವಾದುದು ರಾಜಸಿಕ ಆಹಾರ. ತೆಗೆದಿಟ್ಟ ಹಳೆಯ ಮತ್ತು ಹಳಸಿದ ಆಹಾರ,
ತನ್ನ ರುಚಿ-ಕಂಪುಗಳನ್ನು ಕಳೆದುಕೊಂಡಿರುವ ಆಹಾರ, ಒಣಗಿದ, ಹಾಳಾದ, ಅಶುದ್ಧವಾದ ಆಹಾರ
ತಾಮಸಿಕವೆನ್ನಿಸಿಕೊಳ್ಳುತ್ತದೆ.
ಶಾಸ್ತ್ರೋಕ್ತವಾಗಿ, ವಿಧಿವತ್ತಾಗಿ ಮತ್ತು ಪವಿತ್ರವಾದ ಕರ್ತವ್ಯ
ಎಂಬಂತೆ ಮಾಡಿದ ಯಜ್ಞ ಸಾತ್ತ್ವಿಕವಾದುದು. ಪ್ರದರ್ಶನಕ್ಕಾಗಿ ಆಡಂಬರದಿಂದ ಮಾಡಿದ ಪೂಜೆ, ಕೇವಲ
ಫಲಕ್ಕಾಗಿ ಕಾಮನೆಯಿಟ್ಟು ಮಾಡಿದ ಪೂಜೆ, ರಾಜಸಿಕವಾದುದು. ಎಲ್ಲ ನಿಯಮಗಳನ್ನೂ ತೊರೆದು,
ಶ್ರದ್ಧೆಯಿಲ್ಲದೆ, ಮಂತ್ರ, ದಕ್ಷಿಣೆ ಮುಂತಾದ ವೇದೋಕ್ತ ವಿಧಿಗಳನ್ನೂ ತಿರಸ್ಕರಿಸಿ ಮಾಡುವ ಪೂಜೆ
ತಾಮಸಿಕವಾದುದು.
ತಪಸ್ಸುಗಳಲ್ಲಿಯೂ ಶಾರೀರಕ, ವಾಙ್ಮಯ ಮತ್ತು ಮಾನಸ ಎಂದು ಮೂರು ಬಗೆ.
ದೇವತೆಗಳನ್ನೂ, ಜ್ಞಾನಿಗಳೂ-ಪ್ರಾಜ್ಞರೂ ಆದ ಗುರು-ಹಿರಿಯರನ್ನೂ ಪೂಜ್ಯ ಭಾವನೆಯಿಂದ ನೋಡುವುದು,
ಶುಚಿ, ಸಂಯಮ ಇವು ಶಾರೀರಕ ತಪಸ್ಸು. ಸತ್ಯವನ್ನೇ ಹೇಳುವುದು, ಯಾರ ಮನಸ್ಸನ್ನೂ ನೋಯಿಸದಂತೆ
ಪ್ರಿಯವಾಗಿ ಹಿತವಾಗಿ ಮಾತಾಡುವುದು, ಯಾವ ವೇದಶಾಖೆಗೆ ಸೇರಿರೂತ್ತಾರೊ ಅದರ ಅಧ್ಯಯನ-ಇವು ವಾಙ್ಮಯ
ತಪಸ್ಸಿಗೆ ಸೇರಿದವುಗಳು. ಮನಶ್ಶಾಂತಿ, ಮನಸ್ಸಿನ ಮತ್ತು ಮಾತಿನ ನಿಗ್ರಹ, ಪ್ರಸನ್ನಚಿತ್ತ ಇವು
ಮಾನಸ ತಪಸ್ಸುಗಳು. ಈ ತ್ರಿವಿಧ ತಪಸ್ಸನ್ನು ಶ್ರದ್ಧಾಯುಕ್ತವಾಗಿ ನಿಷ್ಕಾಮದಿಂದ ಮಾಡುವುದೇ
ಸಾತ್ತ್ವಿಕ ರೀತಿ. ಹೆಸರು ಕೀರ್ತಿಗಳಾಗಾಗಿ ಆಡಂಬರದಿಂದ ಮಾಡಿದಾಗ ಅದು
ರಾಜಸಿಕವೆನಿಸಿಕೊಳ್ಳುತ್ತದೆ. ತನ್ನ ಶಕ್ತಿ ಸಾಮರ್ಥ್ಯಗಳನ್ನು ಗಣಿಸದೆ ಇತರರಿಗೆ ಕೆಟ್ಟುದು
ಮಾಡಬೇಕೆಂದೇ ತಪಸ್ಸಾಧನೆ ಮಾಡಿದರೆ ಅದು ತಾಮಸಿಕವಾಗುತ್ತದೆ.
ಕರ್ತವ್ಯ ಎಂದು ಭಾವಿಸಿ ಸರಿಯಾದ ರೀತಿಯಲ್ಲಿ ಸತ್ಪಾತ್ರರಿಗೆ ಮಾಡುವ
ದಾನ ಸಾತ್ತ್ವಿಕವೆನಿಸಿಕೊಳ್ಳುತ್ತದೆ. ಕೊಡುವ ಮನಸ್ಸಿಲ್ಲದಿದ್ದರೂ ಮುಂದೆ ಏನಾದರೂ ಲಾಭ
ಬರುವುದೆಂಬ ಲೆಕ್ಕಾಚಾರಗಳಿಂದ ಕೊಡುವ ದಾನ ರಾಜಸಿಕವೆನಿಸುತ್ತದೆ. ತಿರಸ್ಕಾರಭಾವದಿಂದ
ಅಪಾತ್ರನಿಗೆ, ಕಾಲ, ದೇಶಗಳ ಔಚಿತ್ಯವನ್ನು ಮೀರಿ, ಯುಕ್ತ-ಅಯುಕ್ತ ಎಂಬ ವಿವೇಚನೆಯಿಲ್ಲದೆ ಮಾಡುವ
ದಾನ ತಾಮಸಿಕವೆನಿಸುವುದು.
ಅನಂತರ ಶ್ರೀಕೃಷ್ಣನು, “ಓಂ-ತತ್-ಸತ್” ಎಂಬೀ ಮೂರು ಪದಗಳು ಬ್ರಹ್ಮನ ಮೂರು ಬಗೆಯ ಹೆಸರುಗಳೆಂದೂ
ಯಜ್ಞ-ತಪಸ್ಸು-ದಾನಸಂದರ್ಭಗಳಲ್ಲಿ ಉಚ್ಚರಿಸಿದರೆ, ಕೊರತೆಗಳೇನಾದರೂ ಇದ್ದಲ್ಲಿ ಅವುಗಳನ್ನು
ಸರಿಪಡಿಸುವ ಮಂತ್ರವಾಗುವುದಾಗಿಯೂ ಫೋಷಿಸುತ್ತಾನೆ.
ಅಧ್ಯಾಯ 18
ಮೋಕ್ಷ-ಸಂನ್ಯಾಸ-ಯೋಗ 78 ಶ್ಲೋಕಗಳು
(ಇದುವರೆಗಿನ ಬೋಧನೆಗೆ ಸಂಬಂಧಪಟ್ಟಂತೆ ಉಳಿದ ಅನೇಕ
ವಿಚಾರಗಳನ್ನೊಳಗೊಂಡ ಭಗವದ್ಗೀತೆಯ ಉಪಸಂಹಾರದಂತಿರುವ ಈ ಅಧ್ಯಾಯವೇ ಕೊನೆಯದು ಮತ್ತು ಅತ್ಯಂತ
ದೀರ್ಘವಾದುದು.)
ಅರ್ಜುನನು ಸಂನ್ಯಾಸ ಮತ್ತು ತ್ಯಾಗ ಇವುಗಳ ಸತ್ಯಾರ್ಥವನ್ನು
ತಿಳಿಯಬಯಸುತ್ತಾನೆ. ಉತ್ತರವಾಗಿ ಶ್ರೀಕೃಷ್ಣನು ಈ ಶಬ್ದಗಳ ಅರ್ಥವನ್ನು ವಿವರಿಸುತ್ತಾನೆ. ಅದರೆ
ತ್ಯಾಗ ಮಾಡುವುದು ಎಲ್ಲ ಕರ್ಮಗಳ ಫಲವನ್ನು, ಇನ್ನು ಕೆಲವರು, ಎಲ್ಲ ಕರ್ಮಗಳೂ
ದೋಷಪೂರಿತವಾಗಿರುವುದರಿಂದ ಸಮಸ್ತ ಕರ್ಮಗಳನ್ನೂ ತ್ಯಾಗ ಮಾಡಬೇಕೆಂದು ಭಾವಿಸುತ್ತಾರೆ. ಇತರ
ಕೆಲವರು ಯಜ್ಞ, ದಾನ, ತಪಸ್ಸು – ಈ ಕರ್ಮಗಳನ್ನು ಮಾತ್ರ ಬಿಡಬಾರದೆಂದು ಭಾವಿಸುತ್ತಾರೆ. ನನ್ನ
ದೃಷ್ಟಿಯಲ್ಲಿ ತ್ಯಾಗ ಮೂರು ಬಗೆಯದು ಮತ್ತು ಯಜ್ಞ-ದಾನ-ತಪಸ್ಸುಗಳನ್ನು ಬಿಡಕೂಡದು. ಈ
ಆಚಾರಗಳೆಲ್ಲ ಶುದ್ಧಿಕಾರಕ ಕರ್ಮಗಳು. ಇವುಗಳಿಂದ ಬರುವ ಫಲಗಳ ಬಗ್ಗೆ
ಆಸೆ-ವ್ಯಾಮೋಹಗಳನ್ನಿಟ್ಟುಕೊಳ್ಳದೆ ಈ ಕರ್ಮಗಳನ್ನು ಮಾಡಬೇಕು. ಮಾಡುವುದು ಕಷ್ಟ, ವೃಥಾ ತೊಂದರೆ
ಎಂದುಕೊಂಡೋ, ಭ್ರಮವಶರಾಗಿಯೋ ಶಾಸ್ತ್ರವಿಹಿತ ಕರ್ಮಗಳನ್ನು ಬಿಟ್ಟುಬಿಡಬಾರದು. ದೇಹಧಾರಣ
ಮಾಡಿದಮೇಲೆ ಕರ್ಮಗಳನ್ನು ಸಂಪೂರ್ಣವಾಗಿ ಬಿಡುವುದು ಸಾಧ್ಯವಿಲ್ಲ. ಕರ್ಮಫಲದ ಅಪೇಕ್ಷೆಯನ್ನು
ಬಿಟ್ಟವನು ಮಾತ್ರ ತ್ಯಾಗಿ. ಕರ್ಮದ ಫಲಿತಾಂಶಗಳು ಒಳ್ಳೆಯವೇ ಆಗಲಿ ಕೆಟ್ಟವೇ ಆಗಲಿ, ಸರ್ವಸಂಗ
ಪರಿತ್ಯಾಗ ಮಾಡಿದ ಸಂನ್ಯಾಸಿಗಳಿಗೆ ಅವು ಅಂಟುವುದಿಲ್ಲ.
ಪ್ರತಿಯೊಂದು ಕರ್ಮಕ್ಕೂ ಶಾರೀರಕ, ವಾಙ್ಮಯ ಮುಂತಾದ ಐದು
ಕಾರಣಗಳಿರುತ್ತವೆ. ಆತ್ಮನು ಮಾತ್ರ ಯಾವ ಕರ್ಮದಲ್ಲೂ ಭಾಗಿಯಲ್ಲ. ಆತ್ಮನು ಕರ್ಮದಲ್ಲಿ
ತೊಡಗುವನೆಂದು ತಿಳಿಯುವುದು ಅವಿವೇಕ. ತಾನು ಮಾಡುತ್ತಿರುವೆನೆಂಬ ಭಾವನೆಯನ್ನು ಬಿಟ್ಟು
ನಿಷ್ಕಲಂಕವಾದ ಮನಸ್ಸನಿಂದ ಕರ್ಮ ಮಾಡುವವನು ಎಂದಿಗೂ ಆದರ ಬಂಧನಕ್ಕೊಳಗಾಗುವುದಿಲ್ಲ.
ಶ್ರೀಕೃಷ್ಣನು ಗುಣತ್ರಯಗಳಿಗನುಸಾರವಾಗಿ ಜ್ಞಾನ, ಕರ್ಮ ಮತ್ತು ಕರ್ತ
ಎಂಬ ವಿಚಾರಗಳನ್ನು ವಿವರಿಸುತ್ತಾನೆ. ಸಾತ್ತ್ವಿಕ ಜ್ಞಾನವುಳ್ಳವರು ಎಲ್ಲರಲ್ಲೂ ಎಲ್ಲದರಲ್ಲೂ ಅದೇ
ಆತ್ಮನನ್ನು ಕಾಣಲು ಶಕ್ತರಾಗುತ್ತಾರೆ. ಪವಿತ್ರವಾದ ಧರ್ಮಗ್ರಂಥಗಳು ವಿಧಿಸಿರುವುದು ಸಾತ್ತ್ವಿಕ
ಕರ್ಮವನ್ನು, ಯಾವ ಮೋಹವನ್ನೂ ಇಟ್ಟುಕೊಳ್ಳದೆ ಅಸಹ್ಯಪಡದೆ ಮಾಡುವ ಕರ್ಮವೇ ಸಾತ್ತ್ವಿಕ ಕರ್ಮ.
ಆಹಂಕಾರ-ಮಮಕಾರರಹಿತರಾಗಿ ಜಯಾಪಜಯಗಳಿಂದ ಹಿಗ್ಗದೆ-ಕುಗ್ಗದೆ, ವಿಚಲಿತರಾಗದೆ ಇರುವವರು, ಎಂತಹ
ಸ್ಥಿತಿಯಲ್ಲೂ ಉತ್ಸಾಹವನ್ನು ಕಳೆದುಕೊಳ್ಳದವರು, ಸಾತ್ತ್ವಿಕ ಕರ್ತರೆನಿಸಿಕೊಳ್ಳುತ್ತಾರೆ.
ರಾಜಸಿಕ ಜ್ಞಾನವುಳ್ಳವರಿಗೆ ಆತ್ಮರು ಅನೇಕವಾಗಿ ಕಾಣುತ್ತಾರೆ. ಫಲದ
ಮೇಲೆ ಕಣ್ಣಿಟ್ಟು ಅಹಂಭಾವದಿಂದ ಕರ್ಮಮಾಡುವವರು ರಾಜಸಿಕ ಕರ್ತರೆನಿಸಿಕೊಳ್ಳುತ್ತಾರೆ.
ಇಂತಹವರಲ್ಲಿ ಲೋಭ, ಮೋಹ, ಅಶುದ್ಧಿ ಮತ್ತು ಹಿಂಸಾಪ್ರವೃತ್ತಿ ತುಂಬಿರುತ್ತವೆ.
ಆಜ್ಞಾನದಿಂದ ಯಾವುದೋ ಒಂದು ಕ್ಷುದ್ರಕಾರ್ಯವನ್ನು ಕೈಕೊಂಡು ಅದಕ್ಕೇ
ಅಂಟಿಕೊಳ್ಳುವಂತೆ ತಾಮಸಿಕ ಜ್ಞಾನವು ಒತ್ತಾಯಿಸುತ್ತದೆ. ಪರಿಣಾಮವೇನಾದೀತೆಂದು ಸರಿಯಾಗಿ
ಅಲೋಚಿಸದೆ ಕೈಕೊಳ್ಳುವಂತಹದು ತಾಮಸಿಕ ಕರ್ಮ, ಬಹಳವಾದ ಹಿಂಸೆ, ವಿನಾಶ, ಶಕ್ತಿನಷ್ಟ ಹಾಗೂ ಧನನಷ್ಟ
ತಾಮಸಿಕ ಕರ್ಮದ ಪರಿಣಾಮಗಳು. ತಾಮಸಿಕ ಕರ್ತನಿಗೆ ಬದ್ಧಿ ಸಮತೋಲನದಲ್ಲಿರುವುದಿಲ್ಲ. ಅವನು
ಅಸಂಸ್ಕೃತನೂ, ದುರಹಂಕಾರಿಯೂ, ವಂಚಕನೂ, ಸೋಮಾರಿಯೂ, ಸದಾ ವಿಷಾದಪೀಡಿತನೂ ಆಗಿರುತ್ತಾನೆ.
ಬದ್ಧಿ ಮತ್ತು ಧೃತಿ – ಇವು ಸಹ ಮೂರು ಬಗೆಯಾಗಿರುತ್ತವೆ. ಯಾಮ ಕರ್ಮ
ಬಂಧನಕಾರಿ, ಯಾವುದು ಮೋಕ್ಷಕಾರಿ ಎಂದು ತಿಳಿದು ಕೊಳ್ಳುವುದೇ ಸಾತ್ತ್ವಿಕಬುದ್ಧಿ. ಯಾವುದು ಧರ್ಮ
ಯಾವುದ ಅಧರ್ಮ ಎಂದು ಸರಿಯಾಗಿ ಅರಿತುಕೊಳ್ಳಲಾರದ ಬದ್ಧಿ ರಾಜಸವಾದುದು. ಅಧರ್ಮವನ್ನೇ ಧರ್ಮವೆಂದು,
ಹೀಗೆಯೇ ಎಲ್ಲ ಮಾತುಗಳನ್ನೂ ವ್ಯತಿರಿಕ್ತವಾಗಿ, ತಪ್ಪಾಗಿ ತಿಳಿದುಕೊಳ್ಳುವ ಬದ್ಧಿ
ತಾಮಸಿಕವಾದುದು. ಆತ್ಮಸಂಯಮಕ್ಕೆ ಸಹಾಯಕವಾದುದೇ ಸಾತ್ತ್ವಿಕಧೃತಿ, ಫಲದಾಸೆ ಮತ್ತು ಸ್ವಾರ್ಥ
ಭಾವನೆಗಳಿಗೆ ಸಿಕ್ಕಿ ಕೊಳ್ಳುವಂತೆ ಮಾಡುವುದೇ ರಾಜಸಿಕಧೃತಿ, ನಿದ್ರೆ ಭಯ ಜಂಭ ವಿಷಾದಗಳಿಗೆ
ತಳ್ಳುವುದೇ ತಾಮಸಿಕಧೃತಿ.
ಹೀಗೆಯೇ ಸುಖದಲ್ಲೂ ಮೂರು ಬಗೆ. ಆರಂಭದಲ್ಲಿ ಅಹಿತವಾಗಿದ್ದಂತೆ
ತೋರಿದರೂ ಕೊನೆಯಲ್ಲಿ ಹಿತವನ್ನುಂಟುಮಾಡುವುದೇ ಸಾತ್ತ್ವಿಕ ಸುಖ ಮತ್ತು ದೀರ್ಘ ಸಾಧನೆಯಿಂದ
ಮನಸ್ಸನ್ನು ಆತ್ಮನಲ್ಲಿ ನೆಲೆಗೊಳಿಸುವುದೇ ಸಾತ್ತ್ವಿಕಸುಖ. ಪ್ರಾಪಂಚಿಕ ವಸ್ತುಗಳಿಂದ ಬರುವ
ಇಂದ್ರಿಯಸುಖ ಮೊದಲಲ್ಲಿ ಬಹು ಆಪ್ಯಾಯಮಾನವಾಗಿದ್ದು ಕೊನೆಯಲ್ಲಿ ಸಂಕಟವನ್ನು ತರುತ್ತದೆ. ಇದು
ರಾಜಸಿಕಸುಖ. ಪೂರ್ಣ ಭ್ರಮೆಯನ್ನುಂಟು ಮಾಡುವುದಲ್ಲದೆ ಸೋಮಾರಿತನವನ್ನುಂಟು ಮಾಡುವುದು ತಾಮಸಿಕ
ಸುಖ.
ಹೀಗೆ ಈ ತ್ರಿಗುಣಗಳಿಂದ ಅಭಾಧಿತವಾದುದು ಈ ಜಗತ್ತಿನಲ್ಲಿ ಯಾವುದೂ
ಇಲ್ಲ.
ಇದಾದನಂತರ ಸಮಾಜವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಮಾಡಿರುವ
ಬ್ರಾಹ್ಮಣ, ಕ್ಷತ್ತ್ರಿಯ, ವೈಶ್ಯ, ಶೂದ್ರ ಎಂಬ ಚತುರ್ವರ್ಣಗಳ ವಿವರಣೆ ಬರುತ್ತದೆ. ಆತ್ಮಸಂಯಮ, ತಪಸ್ಸು
ಮತ್ತು ಆತ್ಮ ಜ್ಞಾನಾರ್ಜನೆ ಇವುಗಳಲ್ಲಿ ನಿರತರಾದವರು ಬ್ರಾಹ್ಮಣರು. ಶೌರ್ಯ, ಸ್ಥೈರ್ಯ,
ಕಾರ್ಯದಕ್ಷತೆ ಉಳ್ಳವರು ಕ್ಷತ್ತ್ರಿಯರು. ಯುದ್ಧಕಾಲದಲ್ಲಿ ಅವರು ಶೂರರಾದ ಯೋಧರು.
ಶಾಂತಿಕಾಲದಲ್ಲಿ ದಕ್ಷ ಆಡಳಿತಗಾರರು. ಕೃಷಿಯಲ್ಲಿ ಮತ್ತು ವಾಣಿಜ್ಯೋದ್ಯಮದಲ್ಲಿ ತೊಡಗಿರುವವರು
ವೈಶ್ಯರು ಮತ್ತು ಎಲ್ಲರ ಸೇವೆ ಮಾಡುತ್ತ ಜೀವನ ನಿರ್ವಹಿಸುವವರು ಶೂದ್ರರು. ಇವರೆಲ್ಲರೂ ತಮ್ಮ
ಹುಟ್ಟುಗುಣ ಸ್ವಭಾವಗಳಿಂದ ಆಯಾ ವೃತ್ತಿಗಳನ್ನು ಅನುಸರಿಸುತ್ತಾರೆ. ಇವರು ತಮ್ಮ ತಮ್ಮ ವೃತ್ತಿಯ
ಕರ್ತವ್ಯಗಳನ್ನು ಶ್ರದ್ಧೆಯಿಟ್ಟು ಮಾಡುವುದರ ಮೂಲಕ ಭಗವಂತನನ್ನು ಪೂಜಿಸುವುದರಿಂದ
ಅಧ್ಯಾತ್ಮಸಿದ್ಧಿಯನ್ನು ಪಡೆಯುತ್ತಾರೆ. ಆದುದರಿಂದ ಯಾರೂ ತಮ್ಮ ತಮ್ಮ ಕರ್ತವ್ಯಗಳನ್ನು,
ಅವುಗಳೆಷ್ಟೇ ಅಪರಿಪೂರ್ಣ ಹಾಗೂ ದೋಷಯುಕ್ತ ಆಗಿರುವಂತೆ ತೋರಿದರೂ, ಎಂದಿಗೂ ತೊರೆಯಬಾರದು.
ತಮ್ಮ ದೇಹ, ಮಾತು, ಮನಸ್ಸುಗಳನ್ನು ಹಿಡಿತದಲ್ಲಿಟ್ಟುಕೊಂಡು ಏಕಾಂತ
ಸ್ಥಳದಲ್ಲಿ ವಾಸಿಸುತ್ತ, ಧ್ಯಾನ ತಪಸ್ಸುಗಳನ್ನು ಮಾಡುತ್ತಿರುವವರು ಬ್ರಹ್ಮತ್ವಕ್ಕೆ
ಅರ್ಹರಾಗುತ್ತಾರೆ. ಎಲ್ಲ ಕಡೆಯೂ ಅದೇ ಭಗವತಿ ಚೇತನವನ್ನೇ ಕಾಣುವ ಅವರಿಗೆ ನನ್ನಲ್ಲಿ
(ಶ್ರೀಕೃಷ್ಣನಲ್ಲಿ) ಉತ್ಕಟವಾದ ಭಕ್ತಿಯುಂಟಾಗುತ್ತದೆ. ಅಂಥ ಭಕ್ತಿಯಿಂದ ಅವರಿಗೆ ನನ್ನ
ನಿಜಸ್ವರೂಪ ಅರ್ಥವಾಗುತ್ತದೆ, ಮತ್ತು ಅವರು ನನ್ನನ್ನೇ ಸೇರುತ್ತಾರೆ.
ಈ ರೀತಿ ಹೇಳಿದ ಬಳಿಕ ಶ್ರೀಕೃಷ್ಣನು ಅರ್ಜುನನಿಗೆ ಯಾವ ಕರ್ಮಗಳನ್ನು
ಮಾಡಿದರೂ ಅವುಗಳನ್ನು ಭಗವದರ್ಪಣೆ ಮಾಡುವುದರಿಂದ ಎಲ್ಲ ಎಡರು-ತೊಡರುಗಳನ್ನೂ ದಾಟಿ ಅಮರಲೋಕವನ್ನೂ
ಸೇರುವೆ ಎಂದು ಆಶ್ವಾಸನೆ ನೀಡುತ್ತಾನೆ. ಒಂದು ವೇಳೆ ತನ್ನ ಬುದ್ಧಿವಾದ ಕೇಳದೆ ಹೋದರೆ ಆತ ನಾಶ ಹೊಂದವುದಾಗಿಯೂ
ಎಚ್ಚರಿಕೆ ಕೊಡುತ್ತಾನೆ. “ನಾನು ಯುದ್ಧ ಮಾಡುವುದಿಲ್ಲ,” ಎಂದು ಹೇಳುವಂತೆ ಅರ್ಜುನನನ್ನು
ಪ್ರೇರೇಪಿಸುತ್ತಿರುವುದು ಅವನ ಅಹಂಕಾರವಷ್ಟೆ, ಅದರೆ ಅವನ ಕ್ಷತ್ತ್ರಿಯ ಸ್ವಭಾದ ಅವನ
ನಿರ್ಧಾರವನ್ನು ಸುಳ್ಳು ಮಾಡಿ ಯುದ್ಧವನ್ನು ಮಾಡಿಸಿಯೇ ಮಾಡಿಸುತ್ತದೆ.
ಮತ್ತೆ ಹೇಳುತ್ತಾನೆ ಶ್ರೀಕೃಷ್ಣ: ಎಲ್ಲ ಜೀವಿಗಳ ಹೃದಯದಲ್ಲೂ ಜಗತ್ಪತಿಯಾದ ಈಶ್ವರನೇ
ವಾಸಿಸಿರುತ್ತನೆ. ಆದ್ದರಿಂದ ಹೇಗಾದರೂ ಮಾಡಿ ಅವನಲ್ಲೇ ಆಶ್ರಯಪಡೆ. ಆಗ ನಿನಗೆ ಅನಂತವಾದ ಶಾಂತಿ
ಮತ್ತು ಅತ್ಯುನ್ನತವಾದ ಲೋಕ ಪ್ರಾಪ್ತವಾಗುತ್ತವೆ.
ಈ ಬಗೆಯಲ್ಲಿ ಅಧ್ಯಾತ್ಮಜ್ಞಾನವನ್ನಿತ್ತ ಶ್ರೀಕೃಷ್ಣನು, “ನನ್ನಲ್ಲೇ ಪೂರ್ಣ ಭಕ್ತಿಯನ್ನಿಟ್ಟು (ಪಾಪ-ಪುಣ್ಯ,
ತಪಸ್ಸು ಇತ್ಯಾದಿ) ಎಲ್ಲ ಧರ್ಮಗಳನ್ನೂ ತ್ಯಜಿಸಿ, ಕೇವಲ ನನ್ನಲ್ಲೇ ಸಂಪೂರ್ಣ ಶರಣಾಗತನಾಗು. ಎಲ್ಲ
ದುಃಖ ಸಂಕಟಗಳಿಂದಲೂ ಪಾರು ಮಾಡಿ ನಿನ್ನ ಎಲ್ಲ ಯೋಗಕ್ಷೇಮವನ್ನೂ ಸ್ವತಃ ನಾನೇ (ಭಗವಂತನೇ) ವಹಿಸಿ
ಕೊಳ್ಳುತ್ತೇನೆ,” ಎಂದು ಒಡಂಬಡಿಸುತ್ತ ಕೊನೆಯಲ್ಲಿ. “ಇಷ್ಟರ ಮೇಲೆ ನಾನು ಹೇಳಿದುದನ್ನೆಲ್ಲ ಪರಾಮರ್ಶೆ ಮಾಡಿ
ನಿನಗೆ ಯಾವುದು ಸರಿ ಎನಿಸುತ್ತೊ ಹಾಗೆ ಮಾಡು” ಎಂದು ಹೇಳುತ್ತಾನೆ.
ಈ ಆತ್ಮೋದ್ಧಾರಕವಾದ ಮತ್ತು ಪವಿತ್ರವಾದ ಜ್ಞಾನವನ್ನು
ಭಕ್ತಿ-ವೈರಾಗ್ಯಗಳಿಲ್ಲದೆ ಅಪಾತ್ರರಿಗೆ ಕೊಡಬಾರದು. ಭಗವದ್ಭಕ್ತರಿಗೆ ಮಾತ್ರ ತಿಳಿಸಬೇಕು – ಎಂಬ
ಸಾಮಾನ್ಯ ಸೂಚನೆಯೊಂದಿಗೆ ಈ ದಿವ್ಯವಾದ ಬೋಧೆ ಮುಕ್ತಾಯವಾಗುತ್ತದೆ. ಈ ದಿವ್ಯಬೋಧೆಯನ್ನು ಅಧ್ಯಯನ
ಮಾಡಿದರೂ ಸಾಕು. ಅಂಥವರು ಪರಮಾತ್ಮನಿಗೆ ಬಹು ಪ್ರಿಯರಾಗುತ್ತಾರೆ.
ಆಗ ಅರ್ಜುನನು ತನ್ನ ಎಲ್ಲ ಸಂಶಯಗಳೂ, ಭ್ರಾಂತಿ-ಅಜ್ಞಾನಗಳೂ
ನಿವಾರಣೆಯಾದುವೆಂದೂ ಶ್ರೀಕೃಷ್ಣನ ಅಣತಿಯಂತೆ ನಾನು ನಿಶ್ಚಯವಾಗಿ ನಡೆದುಕೊಳ್ಳುವುದಾಗಿಯೂ
ಫೋಷಿಸುತ್ತಾನೆ.
ಈ ಅದ್ಭುತವಾದ ಬೋಧನೆಯನ್ನು ಕೇಳುವ ಆವಕಾಶವೂ ಭಗವಂತನ ವಿಶ್ವರೂಪದರ್ಶನ
ಮಾಡುವ ಭಾಗ್ಯವೂ ತನಗೂ ದೊರೆತದ್ದು ತನ್ನ ಅದೃಷ್ಟವೆಂದು ಸಂಜಯನು ತನ್ನ ಅತೀವಹರ್ಷವನ್ನು ಮುಕ್ತ
ಮನಸ್ಸಿನಿಂದ ಬಾಯಿಬಿಟ್ಟು ಹೇಳುತ್ತಾನೆ. ಎಲ್ಲೆಲ್ಲಿ ಯೋಗೇಶ್ವರನಾದ ಶ್ರೀಕೃಷ್ಣನೂ
ಧನುರ್ಧಾರಿಯಾದ ಅರ್ಜುನನೂ ಇರುತ್ತಾರೋ, ಅಲ್ಲಿ ಜಯ, ಸಂಪತ್ತು ಮತ್ತು ಅನಂತವಾದ ಶ್ರೇಯಸ್ಸು
ಕೂಡಿಕೊಂಡು ಬರುತ್ತವೆ ಎಂದು ಸಾರುತ್ತಾನೆ.
ಶುಭಂ
Courtesy: All about Gita, ಎಂಬ ಇಂಗ್ಲಿಷ್ ಪುಸ್ಕಕವನ್ನು,
ಕನ್ನಡಕ್ಕೆ ಅನುವಾದಿಸಿರುವರು - ಪ್ರೊ.ಕೆ.ಬಿ.ಪ್ರಭುಪ್ರಸಾದ್
No comments:
Post a Comment