ಹರಿ ಓಂ
ಬಕದಾಲ್ಭ್ಯ
ಈ ವಸ್ತು ಮಹಾಭಾರತದ ಅಶ್ವಮೇಧಿಕ ಪರ್ವದ ಕಥೆಯಾಗಿರುವುದು, ಧರ್ಮರಾಜನು ಬಂಧು ಹತ್ಯಾದೋಷ ನಿವಾರಣೆಗಾಗಿ ಅಶ್ವಮೇಧಯಾಗ ಮಾಡಿದ ಪುಣ್ಯಕಥಾನಕ ಇದಾಗಿರುವದು ಇದರಲ್ಲಿ ಹತ್ತು ಮುಖ್ಯ ಕಥೆಗಳು, 13 ಉಪಕಥೆಗಳಿವೆ, 34 ಸಂಧಿಗಳಿವೆ.
ಅದರಲ್ಲೊಂದಾದ ಬಕದಾಲ್ಭ್ಯ ಮುನಿಯ ಕಥೆ ಇದು.
ಶ್ರೀ ಕೃಷ್ಣನು, ಬಭ್ರುವಾಹನ, ಅರ್ಜುನ, ಮಯೂರಧ್ವಜ, ಪ್ರದ್ಯುಮ್ನ, ಹಂಸಧ್ವಜ ಇವರನ್ನು ತನ್ನೊಂದಿಗೆ ಕರೆದುಕೊಂಡು ಆಕಾಶಮಾರ್ಗದಿಂದ ಹೊರಟನು. ಸಾಗರದ ಮಧ್ಯದಲ್ಲಿರುವ ಒಂದು ದ್ವೀಪಕ್ಕೆ ತಲುಪಿದ, ಶ್ರೀಕೃಷ್ಣನು ಆ ದ್ವೀಪದಲ್ಲಿ ಒಬ್ಬ ಋಷಿಯು ತಪಸ್ಸನ್ನಾಚರಿಸುತ್ತಿದ್ದನು, ಬಿಸಿಲಿನ ಬಾಧೆ ತನಗುಂಟಾಗದಂತೆ ಒಂದು ಅಲದೆಲೆಯನ್ನು ಇಟ್ಟುಕೊಂಡಿದ್ದನು. ಕಣ್ಮುಚ್ಚಿ ಧ್ಯಾನದಲ್ಲಿರುವ ಆ ಋಷಿಯ ಹೆಸರು ಬಕದಾಲ್ಭ್ಯ ಎಂದಿತ್ತು. ಆ ಋಷಿಯನ್ನು ಕಂಡ ಕೂಡಲೇ ಐವರನ್ನು ಇಳಿಸಿದ ಶ್ರೀಕೃಷ್ಣನು ಋಷಿಗೆ ವಂದನೆ ಸಲ್ಲಿಸಿದನು. ಅರ್ಜುನ ಮುಂತಾದವರು ಸಹ ಸಾಷ್ಟಾಂಗ ವಂದನೆ ಸಲ್ಲಿಸಿದರು.
ಬಕದಾಲ್ಭ್ಯನು ಬಂದವರು ಯಾರೆಂದು ಒಂದು ಕ್ಷಣ ನೋಡಿ ಪುರುಷೋತ್ತಮನೇ ನನ್ನೆದುರಿಗೆ ಪ್ರತ್ಯಕ್ಷನಾಗಿರುವನು. ಇನ್ನು ನಾನು ಈ ದೇಹವನ್ನು ಹೊಂದಿರುವದು ಸರಿಯಲ್ಲ ಎಂದು ನಿರ್ಧರಿಸಿದನು. ಇನ್ನು ಸ್ವಲ್ಪವೇ ಆಯುಷ್ಯವು ಉಳಿದಿರುವದು. ಆ ಸಮಯದಲ್ಲಿ ನಾನೇನು ಮಾಡಲು ಸಾಧ್ಯ ? ಎಂದು ಋಷಿಯು ಆಲೋಚಿಸಿ ಹೇಳಿದನು. ಆಗ, ಅರ್ಜುನನು ಮಹರ್ಷಿಗಳೇ ಧರ್ಮರಾಜನು ಅಶ್ವಮೇಧಯಾಗವನ್ನು ಆರಂಭಿಸಿದ್ದಾನೆ. ತಾವು ಹಸ್ತಿನಾವತಿಗೆ ಬಂದು ಯಾಗದ ಸಮಾಪ್ತಿಯನ್ನು ನಡೆಸಿಕೊಡಬೇಕೆಂದು ಕೇಳಿಕೊಂಡನು. ಅರ್ಜುನನು ಮಹರ್ಷಿಯೆ ನಿನ್ನ ಸುತ್ತಲೂ ಹುತ್ತವು ಬೆಳೆದಿರುವದು, ನಿನ್ನ ಮೊಳಕಾಲ ಮೇಲೆ ಮುತ್ತುಗದ ಮರವೇ ಬೆಳೆದಿರುವದು, ಆ ಮರದಲ್ಲಿ ಹಕ್ಕಿಗಳು ಗೂಡುಕಟ್ಟಿರುವವು, ನಿನ್ನ ಸುತ್ತಮುತ್ತ ಹಾವುಗಳು ಹರಿದಾಡುತ್ತಿರುವವು. ಮುನಿ ಶ್ರೇಷ್ಠನೇ ನೀನು ಆಲದೆಲೆಯನ್ನು ಆಧಾರವಾಗಿಟ್ಟುಕೊಂಡೇ ಜಿವಿಸಿರುವೆ, ಮನೆಯನ್ನೇಕೆ ಕಟ್ಟಿಕೊಳ್ಳಲಿಲ್ಲವೆಂದು ಅರ್ಜುನನು ಕೇಳಿದನು. ಆಗ ಬಕದಾಲ್ಭ್ಯ ಮುನಿಯು ತಾನು ಮನೆಯನ್ನೇಕೆ ಮಾಡಿಕೊಳ್ಳಲಿಲ್ಲ ಎಂಬುದಕ್ಕೆ ಕಾರಣವೇನು ಎಂದು ವಿವರಿಸತೊಡಗಿದನು.
ಬಕದಾಲ್ಭ್ಯ ಮುನಿಯು ಅರ್ಜುನನಿಗೆ ಸಂಸಾರದಲ್ಲಿನ ದುಃಖದ ಕಾರಣವೇನೆಂದು ತಿಳಿಸಿದನು. ಅರ್ಜುನ, ಮದುವೆ ಮಾಡಿಕೊಳ್ಳುವದು ದುಃಖದ ಬೀಜವಾಗಿರುವದು. ಪ್ರಪಂಚದಲ್ಲಿನ ಇತರ ಆಶ್ರಮದವರನ್ನು ಪೋಷಿಸುವ ಗೃಹಸ್ಥಾಶ್ರಮಿಗಳು ಪಾಪ ಪುಣ್ಯಗಳ ಬಗ್ಗೆ ವಿಚಾರಮಾಡುವುದಿಲ್ಲ. ಆದುದರಿಂದ ಅವರಿಗೆ ಮೋಕ್ಷ ಪ್ರಾಪ್ತಿ ಆಗಲಾರದು. ಸುಖಸಿಗುವದೆಂದು ಕನಸಿನಲ್ಲಿಯೇ ಅವರು ಜೀವನ ಕಳೆಯುವರು. ಜನನ-ಜೀವನ-ಮರಣ ಚಕ್ರದಲ್ಲಿ ಸಿಲುಕಿ ಅನೇಕ ಜನ್ಮಗಳನ್ನು ಪಡೆದು ದುಃಖವನ್ನು ಅನುಭವಿಸುವರು ಮೂಢಜನರು ವನಿತೆಯರ ಬಂಧನದಲ್ಲಿ ಸಿಲುಕುವರು. ತನ್ನ ಹೆಂಡತಿ ಮಕ್ಕಳು ಮೊಮ್ಮಕ್ಕಳು ಪರಿವಾರದವರನ್ನು ಹೇಗೆ ರಕ್ಷಿಸಲಿ, ಪೋಷಿಸಲಿ ಎಂದು ಸದಾ ಚಿಂತೆಯಲ್ಲಿರುವ ವ್ಯಕ್ತಿಯು ವೇದ ಶಾಸ್ತ್ರಗಳನ್ನು ಕಲಿತಿದ್ದರೂ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವುದಿಲ್ಲ. ಭೂಮಿ, ಸಂಪತ್ತು, ವಸ್ತ್ರ, ಅಲಂಕಾರ, ಮನೆ ಮುಂತಾದ ವಿಷಯಗಳಲ್ಲಿ ಯಾವಾಗಲೂ ಮನಸ್ಸು ಹಾಕುವ ವ್ಯಕ್ತಿಗೆ ಬಿಡುವೇ ಸಿಗುವುದಿಲ್ಲ. ಆಸೆಯು ಹೆಚ್ಚಾದಂತೆ ಅದು ಪಾಶವಾಗುವದು, ಭವಸಾಗರದಿಂದ ಬಿಡುಗಡೆಯನ್ನು ಪಡೆಯುವದು ಸಹ ತೊಂದರೆ ಎನಿಸುವದು.
ಮನೆ, ಭೂಮಿ, ಅಧಿಕಾರ ಎಲ್ಲವೂ ಶಾಶ್ವತವಾದ್ದದಲ್ಲ ಅದಕ್ಕಾಗಿ ಶ್ರಮವಹಿಸಿ ಪ್ರಯೋಜನವಿಲ್ಲ, ತರಗೆಲೆಯನ್ನು ಹಿಡಿದು ನಾನು ಈ ಜೀವನವೇ ಹೀಗೆ ಎಂದು ತಿಳಿಸುತ್ತಿದ್ದೇನೆ. ಅರ್ಜುನನಿಗೆ ಬಕದಾಲ್ಭ್ಯರ ಬಗ್ಗೆ ಇನ್ನಷ್ಟು ತಿಳಿಯಬೇಕೆಂದೆನಿಸಿದಾಗ, ಮುನಿಗಳೇ, ತಮ್ಮ ಆಯುಷ್ಯವು ಎಷ್ಟು? ಯಾವ ಕಾಲದಿಂದ ಈ ಆಲದೆಲೆಯನ್ನು ಹಿಡಿದಿದ್ದೀರಿ? ಎಂದು ಕೇಳಿದನು.
ಬಕದಾಲ್ಭ್ಯ ಮುನಿಯು ಪಾರ್ಥ ಅಲ್ಪಾಯುಷ್ಯವನ್ನು ಹೊಂದಿದ ಮಾರ್ಕಂಡೇಯ ರೋಮಶ ಮುಂತಾದವರು ನನ್ನ ಮುಂದೆ ಹುಟ್ಟಿ ಮರಣ ಹೊಂದಿದರು. ನನ್ನ ಕಣ್ಣೆದುರಿಗೆ ಎಷ್ಟೋ ಜಲಪ್ರಳಯಗಳಾಗಿವೆ. ಸತ್ಯಲೋಕವನ್ನಾಳುವ ಇಪ್ಪತ್ತು ಜನ ಬ್ರಹ್ಮರು ನನ್ನೆದುರಿಗೆ ಆಗಿ ಹೋಗಿದ್ದಾರೆ. ಪ್ರತಿಯೊಂದು ಜಲಪ್ರಳಯದ ನಂತರದಲ್ಲಿ ನಾರಾಯಣನು ಚಿಕ್ಕ ಬಾಲಕನಾಗಿ ಬಂದು ಅಲದೆಲೆಯ ಮೇಲೆ ಪವಡಿಸುವನು. ಅದರೆ ಅವನು ನನ್ನನ್ನು ನೋಡಲಿಲ್ಲ, ಮಾತಾಡಿಸಲಿಲ್ಲ, ಈಗ ಶ್ರೀಹರಿಯು ಕೃಪೆತೋರಿ ನಾನಿದ್ದಲಿಗೇ ಬಂದಿದ್ದಾನೆ ಎಂದು ಅರ್ಜುನನಿಗೆ ತಿಳಿಸಿದ ಬಕದಾಲ್ಭ್ಯ ಮಹರ್ಷಿಯು ಶ್ರೀ ಕೃಷ್ಣನನ್ನು ಕುರಿತು ದೇವದೇವನೇ ನಿಗಮವೇದ್ವನೇ, ನೀನು ಬಾಲಕನಾಗಿ ವಟಪತ್ರ ಶಯನನಾಗಿ ನಾನಾ ಕಾಲದಲ್ಲಿ ಅವತರಿಸಿದಂತೆಯೆ, ಧರ್ಮದ ರಕ್ಷಣೆ ಅಧರ್ಮನಾಶನ ಧರ್ಮಸಂಸ್ಥಾಪನೆಯ ಕಾರ್ಯಗಳನ್ನು ಮಾಡಿದವನು ಇಲ್ಲಿಯವರೆಗೆ ನನಗೆ ದರ್ಶನ ಕೊಟ್ಟಿರಲಿಲ್ಲ, ಈಗ ನಾನಿದ್ದಲ್ಲಿಗೆ ಬಂದ ನಿನ್ನನ್ನು ನಾನು ಬಿಡುವುದಿಲ್ಲ ಎಂದು ಭಕ್ತಿಯ ಹಟದಿಂದ ನಿವೇದಿಸಿಕೊಂಡನು.
ಅರ್ಜುನನಿಗೆ ಪಾರ್ಥ ಈ ಹರಿಯ ದೇಹವೇ ನನ್ನ ಮುಕ್ತಿಗೆ ಕಾರಣವು. ಇದನ್ನು ಬಿಟ್ಟು ಬೇರೆ ಗತಿಯು ಎನಗಿಲ್ಲ. ಅದ್ದರಿಂದಲೇ ಅಲ್ಪಕಾಲದಲ್ಲಿಯೇ ನಾಶಹೊಂದಲಿರುವ ಈ ದೇಹದಿಂದ ಉತ್ತಮವಾದ ಕಾರ್ಯವನ್ನು ಮಾಡಬೇಕೆಂದಿದ್ದೇನೆ ಎಂದು ಬಕದಾಲ್ಭ್ಯರು ಹೇಳಿದರು. ಆಗ ಬಕದಾಲ್ಭ್ಯರು ಹೊಗಳಿಕೆಯಿಂದ ಮಾನವನಲ್ಲಿ ಅಹಂಕಾರ ಮೂಡುವುದು. ಈ ಅಹಂಕಾರವು ಶ್ರೇಯಸ್ಸಿಗೆ ಮಾರಕವಾಗಿರುವದು. ನಾನು ಈ ಅಹಂಕಾರವನ್ನು ವಿನಾಶದ ಬೀಜವನ್ನು ದೂರವಿರಿಸಿದವನು. ಶ್ರೀಕೃಷ್ಣನು ಸರ್ವವೇದಗಳ ಮೂಲನಾಗಿದ್ದಾನೆ. ಅವನಿಗೆ ಗರ್ವ ಎಂಬುವದಿಲ್ಲ. ನಾನು ಸಪ್ತಸಾಗರಗಳ ಮಾಧ್ಯದಲ್ಲಿರುವ ಈ ದ್ವೀಪದಲ್ಲಿ ಇರುವಾಗ ಪದ್ಮನೆಂಬ ನಲ್ವತ್ತು ವರ್ಷ ವಯಸ್ಸಿನ ಚತುರ್ಮುಖ ಬ್ರಹ್ಮನು ಹಂಸವಾಹನನಾಗಿ ನನ್ನ ಮುಂದೆ ಪ್ರತ್ಯಕ್ಷನಾದನು. ಅವನು ಅಧಿಕಾರವಾಣಿಯಿಂದ ಮುನಿಯೇ, ನೀನಿಷ್ಟು ಉಗ್ರವಾದ ತಪಸ್ಸನ್ನು ಆಚರಿಸಲು ಕಾರಣವೇನು ? ನೀನು ಯಾರು ? ಏಕೆ ತಪಸ್ಸಿನಲ್ಲಿ ತೊಡಗಿರುವೆ ? ಎಂದು ಕೇಳಿದನು. ನಿನಗೇನು ಬೇಕು ಕೇಳಿಕೊ ಕೊಡುತ್ತೇನೆ ಎಂದೂ ಹೇಳಿದನು.
ಆಗ ನಾನು ಚತುರ್ಮುಖ ಬ್ರಹ್ಮನೇ ನೀನು ನನಗೆ ಏನನ್ನಾದರೂ ಕೊಡಬೇಕೆಂದಿದ್ದರೆ ಅದನ್ನು ಬೇರೆ ಯಾರಿಗಾದರೂ ಕೊಡು, ನಾನು ನಿನ್ನಿಂದೇನೂ ಬಯಸುವದಿಲ್ಲ ಎಂದನು. ಬ್ರಹ್ಮನಿಗೆ ಅಹಂಕಾರ ತಲೆದೋರಿತು. ಅವನು ಅಹಂಕಾರದಿಂದ ನನ್ನಂತೆಯೆ ನಾಲ್ಕು ಮುಖವಿರುವವರ್ಯಾರಿದ್ದಾರೆ ತೋರಿಸು ಎಂದು ಹೇಳಿದನು. ಆಗ ಒಂದು ಬಿರುಗಾಳಿ ಬೀಸಿತು. ಆ ಬಿರುಗಾಳಿಯು ನಮ್ಮಿಬ್ಬರನ್ನು ಎತ್ತಿಕೊಂಡು ಸಕಲ ಬ್ರಹ್ಮಾಂಡಗಳಲ್ಲಿ ತಿರುಗಾಡಿಸಿತು. ಪರಮಾತ್ಮನ ಶರೀರದಲ್ಲಿರುವ ಔದುಂಬರ ಫಲದಂತಿರುವ ಸಕಲ ಬ್ರಹ್ಮಾಂಡಗಳಲ್ಲಿ ಸಂಚರಿಸಿ ಬಂದಾಗ ಎಂಟು ಮುಖಗಳಿರುವ ಬ್ರಹ್ಮನ ದೇಶಕ್ಕೆ ಪ್ರವೇಶ ಮಾಡಿದೆವು. ಆ ಅಷ್ಟಮುಖದ ಬ್ರಹ್ಮನು ನಮ್ಮನ್ನು ನೀವು ಯಾರು? ನಿಮ್ಮ ಹೆಸರೇನು? ಎಲ್ಲಿಂದ ಬಂದವರು? ಎಂದು ಕೇಳಿದನು.
ಆಗ ಚತುರ್ಮುಖ ಬ್ರಹ್ಮನು ನಾನು ಸತ್ಯಲೋಕದ ಒಡೆಯ ಸೃಷ್ಟಿಕರ್ತ ಬ್ರಹ್ಮನಾಗಿದ್ದೇನೆ, ಇವನು ಬಕದಾಲ್ಭ್ಯನು. ಇವನು ನಿನ್ನ ಶಿಷ್ಯನೇ ಒಳ್ಳೆಯ ಗುರುಶಿಷ್ಯರು ನೀವು ಎಂದು ಅಷ್ಟಮುಖ ಬ್ರಹ್ಮನು ಗರ್ವದಿಂದ ನುಡಿದನು. ಆಗ ನಾವು ಮೂವರು ಇನ್ನೊಂದು ಬಿರುಗಾಳಿಯಿಂದಾಗಿ ಬೇರೊಂದು ಬ್ರಹ್ಮಾಂಡವನ್ನು ಸೇರಿದೆವು. ಅಲ್ಲಿರುವವರು ನಮ್ಮನ್ನು ನೋಡಿ ಎಂತಹ ವಿಚಿತ್ರರಿವರು ಎಂದು ನಕ್ಕರು. ಅಲ್ಲಿ ಹದಿನಾರು ಮುಖದ ಬ್ರಹ್ಮನಿದ್ದನು. ಅವನಿಗೆ ನಾವು ವಂದನೆ ಸಲ್ಲಿಸಿದೆವು. ಅವನು ಯಾರು? ನೀವು ಎಲ್ಲಿಂದ ಬಂದಿರಿ? ಎಂದು ಕೇಳಿದನು. ನಾವು ಬಿರುಗಾಳಿಯಿಂದ ಸತ್ಯಲೋಕದಿಂದ ಬಂದವರೆಂದು ತಿಳಿಸಿದೆವು. ಅದನ್ನು ಕೇಳಿ ಅವನು ನಗತೊಡಗಿದನು ನಾವು ನಾಲ್ವರು ಸಹ ಇನ್ನೊಂದು ಬಿರುಗಾಳಿಯಿಂದ ಬೇರೆ ಬ್ರಹ್ಮಾಂಡವನ್ನು ತಲೆಕೆಳಗಾಗಿಯೇ ಒಳಸೇರಿದೆವು. ಅಲ್ಲಿ ಒಬ್ಬ ಅರವತ್ನಾಲ್ಕು ಮುಖದ ಬ್ರಹ್ಮನಿದ್ದನು. ನಮ್ಮ ಸಂಗಡವಿರುವರೆಲ್ಲರೂ ಗರ್ವದಿಂದಲೇ ಮಾತಾಡಿದರು. ಅರವತ್ನಾಲ್ಕು ಮುಖದ ಬಹ್ಮನೂ ಗರ್ವದಿಂದ ಮಾತಾಡಿದನು. ಹೀಗೆ ನಾವು ತಿರುಗುತ್ತ ಸಾವಿರ ಮುಖವಿರುವ ಬ್ರಹ್ಮನನ್ನು ನೋಡಿದೆವು. ಅಲ್ಲಿ ಸನಂದನಾದಿಗಳು ನಾರದ ಮುನಿ ಎಲ್ಲರೊಂದಿಗಿದ್ದ ಬಹ್ಮನನ್ನು ಕಂಡೆವು. ಅವನು ನಮ್ಮನ್ನು ಸಮಾಧಾನಪಡಿಸಿ ನಮ್ಮ ಅಂತಃಕರಣದಿಂದ ನಾವು ಕ್ಷೇಮವಾಗಿದ್ದೇವೆಂದು ತಿಳಿಸಿ ಹೇಳಿದನು.
ಸ್ವಲ್ಪ ಸಮಯದಲ್ಲಿ ಎಲ್ಲವೂ ಮಾಯವಾಗಿತ್ತು, ಕಣ್ದೆರೆದು ನೋಡಿದಾಗ ಇದ್ದಲ್ಲಿಯೇ ಇದ್ದೆನು. ಹೀಗೆ ಬಕದಾಲ್ಭ್ಯನು ನಾಲ್ಕು ಮುಖದ ಬ್ರಹ್ಮನಿಂದಾರಂಭಿಸಿ ಸಾವಿರ ಮುಖದ ಬ್ರಹ್ಮನ ದರ್ಶನ ಪಡೆದಿದ್ದನ್ನು ತಿಳಿಸಿದನು. ಪಾರ್ಥನೇ ಸಾವಿರಮುಖದ ಬ್ರಹ್ಮನು ಈ ಶ್ರೀಕೃಷ್ಣನು ಒಬ್ಬನೇ ಆಗಿದ್ದಾನೆ. ಇಷ್ಟು ವರ್ಷಗಳವರೆಗೆ ನಾನು ಮಾಡಿದ ತಪಸ್ಸು ಫಲಕೊಟ್ಟಿತು ಎಂದು ಬಕದಾಬ್ಭ್ಯನು ಬಹಳ ಸಂತಸಪಟ್ಟನು. ಅರ್ಜುನನು ಬಕದಾಲ್ಭ್ಯರೇ, ಧರ್ಮರಾಜನ ಅಶ್ವಮೇಧಯಾಗದ ಸಮಾಪ್ತಿಯ ಕಾಲದಲ್ಲಿ ತಾವು ಹಸ್ತಿನಾಪುರಕ್ಕೆ ಅವಶ್ಯವಾಗಿ ಬರಬೇಕೆಂದು ಸಾಷ್ಟಾಂಗ ವಂದಿಸಿದನು. ಎಲ್ಲರೂ ಬಕದಾಲ್ಬ್ಯ ಮುನಿಗಳಿಂದ ಬೀಳ್ಕೊಂಡು ಸಾಗರ ತೀರದಲ್ಲಿರುವ ಸೇನೆಯನ್ನು ಸೇರಿಕೊಂಡರು. ಯಾಗಾಶ್ವಗಳಿಗಿಂತಲೂ ಮುಂದೆ ಪಲ್ಲಕ್ಕಿಯಲ್ಲಿ ಬಕದಾಲ್ಭ್ಯರನ್ನು ಹೊತ್ತು ಹಸ್ತಿನಾಪುರಕ್ಕೆ ಹೊರಟರು. ಸಿಂಧು ದೇಶದ ಮಾರ್ಗವಾಗಿ ಸೇನೆ ಹಸ್ತಿನಾಪುರಕ್ಕೆ ಹೊರಟಿತು.
-------------------
No comments:
Post a Comment